Sunday, 3rd November 2024

ರಾಜಾ ರಾಮಮೋಹನ್‌ ರಾಯ್ ಅಭಿಯಾನ

ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – 5)

ಡಾ.ಉಮೇಶ್ ಪುತ್ರನ್

ಹದಿನೆಂಟನೆಯ ಶತಮಾನದಲ್ಲಿ ಬ್ರಿಟಿಷರ ಪ್ರಭಾವದಿಂದಾಗಿ, ನಮ್ಮ ದೇಶದಲ್ಲಿ ಅನೇಕ ಸಮಾಜ ಸುಧಾರಕರು ಹುಟ್ಟಿಬಂದರು. ಅವರಲ್ಲಿ ಮೇರು ವ್ಯಕ್ತಿಯಾಗಿ ಕಾಣಿಸಿಕೊಳ್ಳುವವರೇ ರಾಜಾರಾಮ್ ಮೋಹನ್ ರಾಯ.

ಬ್ರಹ್ಮಸಮಾಜದ ಹಿಂದಿನ ಸಂಸ್ಥೆಯಾಗಿರುವ ಬ್ರಹ್ಮ ಸಭಾ ಇದರ ಸ್ಥಾಪಕ ರಾಜಾರಾಮ್ ಮೋಹನ್ ರಾಯ್ ಮೇ 22, 1772ರಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಯ ರಾಧಾ ನಗರದಲ್ಲಿ ಜನಿಸಿದರು. ಮೋಹನರಾಯರು ಪರ್ಷಿಯನ್, ಸಂಸ್ಕೃತ, ವೇದ, ಉಪನಿಷತ್ ಇವುಗಳನ್ನು ಅಧ್ಯಯನ ಮಾಡಿದ್ದಲ್ಲದೇ, ಪಾಟ್ನಾದ ಒಂದು ಮದರಸದಲ್ಲಿ ಅರೇಬಿಕ್ ಭಾಷೆಯನ್ನು ಕೂಡ ಕಲಿತರು. 1793 ರಲ್ಲಿ ಭಾರತಕ್ಕೆ ಬಂದ ಪ್ರಥಮ ಇಂಗ್ಲೀಷ್ ಮಿಷನರಿ ವಿಲಿಯಂ ಕ್ಯಾರಿ ಇವರ ಪರಿಚಯ
ದಿಂದಾಗಿ ರಾಮಮೋಹನ ರಾಯರು ಇಂಗ್ಲಿಷನ್ನು ಕಲಿತರು.

ಇವರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಗುಮಾಸ್ತರಾಗಿಯೂ ಹಾಗೂ ಮೊಘಲರ ಆಸ್ಥಾನದಲ್ಲಿ ಇಂಗ್ಲೀಷ್ ಭಾಷಾಂತರಕಾರರಾಗಿಯೂ ಕೆಲಸ ಮಾಡಿದರು. ಈಸ್ಟ್ ಇಂಡಿಯಾ ಕಂಪೆನಿಯು ಪ್ರತಿವರ್ಷ ಮೂರು ಮಿಲಿಯನ್ ಪೌಂಡ್‌ಗಳನ್ನು ಹೇಗೆ ಇಂಗ್ಲೆಂಡಿಗೆ ಸಾಗಿಸುತ್ತಿತ್ತು ಎಂದು ತಮ್ಮ ಲೆಕ್ಕಾಚಾರದಲ್ಲಿ ರಾಮ ಮೋಹನ ರಾಯ್ ತೋರಿಸಿಕೊಟ್ಟರು. ಇವರು ಪರ್ಷಿಯಾ, ಅರೇಬಿಕ್, ಇಂಗ್ಲೀಷ್, ಸಂಸ್ಕೃತ ಹಾಗೂ ಬಂಗಾಳಿ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಬ್ರಹ್ಮ ಸಭಾ ಮತ್ತು ಬ್ರಹ್ಮ ಸಮಾಜ ಇವುಗಳ ಮೂಲಕ ಸಮಾಜದಲ್ಲಿರುವ ವರ ದಕ್ಷಿಣೆ, ಸತಿಸಹಗಮನ, ಬಾಲ್ಯ ವಿವಾಹ, ಜಾತಿಪದ್ಧತಿ ಹಾಗೂ ಬಹುಪತ್ನಿತ್ವ ಮುಂತಾದ ಅನಿಷ್ಟಗಳ ವಿರುದ್ಧ ಹೋರಾಡಿದರು. ಬಂಗಾಳದಲ್ಲಿ ಅನೇಕ ಶಾಲೆ-ಕಾಲೇಜುಗಳನ್ನು ತೆರೆದರು.

ಮೊಘಲರ ರಾಯಭಾರಿ 
ಇವರು 1830 ರಲ್ಲಿ ಮೊಘಲ್ ಚಕ್ರವರ್ತಿ ಎರಡನೆಯ ಅಕ್ಬರ್ ಶಾ ಇವನ ರಾಯಭಾರಿಯಾಗಿ ಇಂಗ್ಲೆಂಡಿಗೆ ಹೋದರು. ಹೋಗುವಾಗ ಇವರಿಗೆ ರಾಜ ಎನ್ನುವ ಬಿರುದನ್ನು ನೀಡಲಾಯಿತು. ಅಲ್ಲಿ ಮೊಘಲ್ ಚಕ್ರವರ್ತಿಗಳ ಮಾಶಾಸನವನ್ನು 30000 ಪೌಂಡ್ ಹೆಚ್ಚು ಮಾಡುವಂತೆ ಬೇಡಿಕೆ ಇಟ್ಟು ಅದರಲ್ಲಿ ಯಶಸ್ವಿ ಯಾದರು. ರಾಜಾ ರಾಮಮೋಹನ ರಾಯರು ಇಂಗ್ಲೆಂಡಿನ ಬ್ರಿಸ್ಟಲ್ ಹತ್ತಿರದ ಸ್ಟೇಪಲ್ಟನ್‌ನಲ್ಲಿ 1833 ರ ಸೆಪ್ಟೆಂಬರ್ 27ರಂದು ಮೆದುಳು ಜ್ವರಕ್ಕೆ ಬಲಿಯಾಗಿ ತೀರಿಕೊಂಡರು. ಇಲ್ಲಿ ಹತ್ತಿರದ ಅರ್ನೋಸ್ ವೇಲ್ ರುದ್ರಭೂಮಿಯಲ್ಲಿ ವರ್ಷ ಕೊಮ್ಮೆ ಇವರ ಹೆಸರಲ್ಲಿ ವಿಶೇಷವಾದ ಪೂಜೆಯನ್ನು ಅಲ್ಲಿಯ ಸ್ಥಳೀಯ ಆಡಳಿತ ಸಲ್ಲಿಸುತ್ತಿದೆ. ಬ್ರಿಸ್ಟಲ್ ಮ್ಯೂಸಿಯಂ ನಲ್ಲಿ ಇವರ ವಸ್ತು ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸ್ಟೇಪಲ್ಟನ್‌ನ ಒಂದು ರಸ್ತೆಗೆ ರಾಜಾರಾಮ್ ಮೋಹನ್ ರಾವ್ ರಸ್ತೆ ಎಂದು ಹೆಸರಿಡಲಾಗಿದೆ. ಬ್ರಿಟಿಷರು ಇವರನ್ನು ಬಹಳ ಗೌರವದಿಂದ ಕಂಡಿದ್ದಾರೆ. ವ್ಯಾಪಕ ವಾಗಿದ್ದ ಸತಿಸಹಮನ ಪದ್ಧತಿ ಮದುವೆಯಾದ ಗಂಡಸು ಕಾಯಿಲೆಯಿಂದಲೋ, ಯುದ್ಧದಿಂದಲೋ ಅಥವಾ ಇನ್ನಿತರ ಅವಗಡಗಳು ಸಂಭವಿಸಿ ತೀರಿಕೊಂಡಾಗ ಆತನ ಪತ್ನಿ ಉರಿಯುತ್ತಿರುವ ಹೆಣದ ಚಿತೆಗೆ ಹಾರಿ ಪ್ರಾಣ ಬಿಡುವಂತಹ ಪದ್ಧತಿ ಭಾರತದಲ್ಲಿ ಅನಾದಿಕಾಲದಿಂದಲೂ ಇದ್ದಿತ್ತು. ಪುರಾಣದಲ್ಲಿ ದಕ್ಷನು ತನ್ನ ಅಳಿಯ ಶಿವನಿಗೆ ಯಜ್ಞಕ್ಕೆ ಆಮಂತ್ರಿಸದೇ ಅವಮಾನಿಸಿದನೆಂದು ಶಿವನ ಸತಿ ಪಾರ್ವತಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಳು. ಆದುದರಿಂದ ಈ ಪದ್ಧತಿಗೆ ಸತಿ ಪದ್ಧತಿ ಎಂದು ಹೆಸರು ಬಂತು.

ನಂತರ ಬಂದ ಮೊಘಲ್ ದೊರೆಗಳಾದ ಬಾಬರ್ ಮತ್ತು ಹುಮಾಯೂನರು ಸತಿ ಪದ್ಧತಿಯನ್ನು ವಿರೋಧಿಸಿದರು. ಇವರ ಕಾಲದಲ್ಲಿ ಸತಿ ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬಂದವು. ಮೊಘಲರ ಆಕ್ರಮಣ ದಿಂದ ರಾಜನು ಸತ್ತಾಗ ಮೊಘಲರ ಸೇನೆ ರಾಜವಂಶದ ಹೆಣ್ಣುಮಕ್ಕಳನ್ನು ಅತ್ಯಾಚಾರ ಗೈಯುವ ಪ್ರಕರಣ ಹೆಚ್ಚಾಯಿತು. ಇದನ್ನರಿತ ಹೆಣ್ಣುಮಕ್ಕಳು ಸತಿಗೆ ಮೊರೆಹೋಗುತ್ತಿದ್ದರು. ಅವುದ್ದೀನ್ ಖಿಲ್ಜಿಯು ಚಿತ್ತೂರ್ ರಾಣಿ ಪದ್ಮಾವತಿಯನ್ನು ಸೆರೆಹಿಡಿಯಲು ಬಂದಾಗ ಅವಳು ಮತ್ತು ಅವಳ ಸಂಗಾತಿಗಳು ಸಾಮೂಹಿಕವಾಗಿ ಸತಿಗೆ ಮೊರೆ ಹೋಗುತ್ತಾರೆ. ಸತಿ ಪದ್ಧತಿಗೆ ರಾಜಸ್ಥಾನ ದಲ್ಲಿ ಜೌಹಾರ್ ಎನ್ನುತ್ತಾರೆ.

ನಮ್ಮ ದೇಶಕ್ಕೆ ಬಂದ ಡಚ್ಚರು, ಪೋರ್ಚುಗೀಸರು ಈ ಪದ್ಧತಿಯನ್ನು ವಿರೋಧಿಸಿದರು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಪ್ರಾರಂಭದಲ್ಲಿ, ಬ್ರಿಟಿಷ್ ಸರಕಾರವು ಈ ಪದ್ಧತಿಗೆ ಹೆಚ್ಚು ವಿರೋಧ ವ್ಯಕ್ತಪಡಿಸಲಿಲ್ಲ. ಸತಿಸಹಗಮನ ನಡೆಯುತ್ತಿರುವಾಗ ಬ್ರಿಟಿಷ್ ಅಧಿಕಾರಿಗಳೇ ಕೆಲವೊಮ್ಮೆ ಹಾಜರಿರುತ್ತಿದ್ದರು ಎಂದು ಕೆಲವು ದಾಖಲೆಗಳು ಹೇಳುತ್ತವೆ. 1591 ರಲ್ಲಿ ಭಾರತಕ್ಕೆ ಬಂದ ಯುರೋಪ್ ಪ್ರವಾಸಿಗ ರಾಲ ಫಿಚ್ ಹೇಳುತ್ತಾನೆ: ಲಾಹೋರಿನಲ್ಲಿ ನಾನು ಸತಿಸಹಗಮನ ನಡೆಯುವುದನ್ನು ನೋಡಿದೆ. ಅತೀ ಸಣ್ಣ ವಯಸ್ಸಿನ, ಸುಮಾರು ಹನ್ನೆರಡು ವರ್ಷ ಪ್ರಾಯದ ವಿಧವೆಯನ್ನು ತಲೆಬೋಳಿಸಿ, ಅಗ್ನಿಕುಂಡಕ್ಕೆ ಕರೆದು ತರಲಾಯಿತು. ಆಕೆ ಜೋರಾಗಿ ನಡುಗುತ್ತಿದ್ದಳು ಮತ್ತು ಅಳುತ್ತಿದ್ದಳು.

ಬೆಂಕಿಗೆ ಹಾರಲು ಒಲ್ಲೆ ಎಂದಾಗ, ಮೂರ್ನಾಲ್ಕು ಜನ ಗಂಡಸರು ಹಾಗೂ ಒಬ್ಬಳು ವಯಸ್ಸಾದ ಹೆಂಗಸು ಬಂದು, ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ
ಉರಿಯುತ್ತಿರುವ ಅಗ್ನಿಗೆ ದೂಡಿದರು. ಕ್ಷಣಾರ್ಧದಲ್ಲಿ ಆ ಮುಗ್ಧ ಪ್ರಾಣಿ ಸುಟ್ಟು ಕರಕಲಾಯಿತು. ಇನ್ನು ಕೆಲವೊಂದು ಕಡೆ ಗಂಡ ತೀರಿಕೊಂಡ ವಿಧವೆಯನ್ನು
ಶೃಂಗಾರ ಮಾಡಿ, ಆಭರಣಗಳನ್ನು ತೊಡಿಸುತ್ತಿದ್ದರು. ಹತ್ತಿರದ ನಾಲ್ಕಾರು ಮನೆಗೆ ಕಳುಹಿಸಿ, ಕಟ್ಟಿಗೆಯನ್ನು ಅವಳೇ ಬೇಡಿ ತರಬೇಕಿತ್ತು. ಕಟ್ಟಿಗೆಯನ್ನು ದಾನ ಮಾಡುವುದು ಪುಣ್ಯದ ಕೆಲಸ ಎಂದು ಜನರು ಭಾವಿಸುತ್ತಿದ್ದರು. ಅದೇ ಕಟ್ಟಿಗೆಯನ್ನು ಉಪಯೋಗಿಸಿ ಅಗ್ನಿಕುಂಡ ನಿರ್ಮಿಸಿ ಅದಕ್ಕೆ ಅವಳು ಹಾರುತ್ತಿದ್ದಳು.

ಸತಿಯನ್ನು ಜನರು ಗೌರವದಿಂದ ಕಾಣುತ್ತಿದ್ದರು ಮತ್ತು ಸಂಭ್ರಮಿಸುತ್ತಿದ್ದರು. ಕುಲದ ಮರ್ಯಾದೆಯನ್ನು ಉಳಿಸಿದಳು ಎಂದು ಭಾವಿಸುತ್ತಿದ್ದರು. 1822೨ರಲ್ಲಿ ‘ದ ಕಲ್ಕತ್ತಾ ರಿವ್ಯೂ’ ಎನ್ನುವ ಪತ್ರಿಕೆಯ ಸಂಪಾದಕ, ಕಲ್ಕತ್ತಾದಿಂದ 16 ಮೈಲಿಗಳ ದೂರದಲ್ಲಿರುವ ಬಾರಿಪುರ ಎನ್ನುವ ಹಳ್ಳಿಯಲ್ಲಿ ನಡೆದ ಸತಿ ಘಟನೆಯನ್ನು ಹೀಗೆ
ವಿವರಿಸುತ್ತಾನೆ. ವಿಧವೆಯನ್ನು ಧಗಧಗ ಹೊತ್ತಿ ಉರಿಯುವ ಅಗ್ನಿ ಕುಂಡಕ್ಕೆ ಹಾಕಲಾಯಿತು. ಆಕೆ ಬಿದ್ದು, ಬೆಂಕಿಯ ಉರಿಯಿಂದ ಅರಚುತ್ತಾ, ಒಂದು ಕೈ ಊರಿ ಕೊಂಡು ಅಲ್ಲಿಂದ ಹೊರಬರಲು ಪ್ರಯತ್ನಿಸುತ್ತಾಳೆ. ಅ ಇದ್ದ ಇಬ್ಬರು ವ್ಯಕ್ತಿಗಳು (ಸಾಮಾನ್ಯವಾಗಿ ಇವರು ಸತಿ ಪದ್ಧತಿಯ ಉಸ್ತುವಾರಿ ವಹಿಸುತ್ತಾರೆ) ಒಂದು ಉದ್ದನೆಯ ಹಾಗೂ ದಪ್ಪದಾದ ಬಿದಿರಿನ ಕೋಲಿನಿಂದ ಆಕೆಯನ್ನು ಪುನಹ ಬೆಂಕಿಗೆ ನೂಕುತ್ತಾರೆ.

ಈ ಘಟನೆಯನ್ನು ಪತ್ರಿಕೆಯು ಪ್ರಕಟಿಸಿದಾಗ ಉಸ್ತುವಾರಿ ವಹಿಸಿದ್ದ ವ್ಯಕ್ತಿಯು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕಾಯಿತು. ಆದರೆ ಶಿಕ್ಷೆ ಮಾತ್ರ ಆಗಲಿಲ್ಲ.
ವಿಲಿಯಂ ಬೆಂಟಿಂಗ್ ತನ್ನ ವರದಿಯಲ್ಲಿ ಈ ರೀತಿ ಹೇಳುತ್ತಾನೆ: 1815-1824ರ ಅವಧಿಯಲ್ಲಿ ಬಂಗಾಳ ಪ್ರಾಂತ್ಯ ಒಂದರ ಸುಮಾರು 5977 ಸತಿ ಪ್ರಕರಣಗಳು ದಾಖಲಾಗಿವೆ. ಅಂದರೆ ಸುಮಾರು ವರ್ಷಕ್ಕೆ ಸರಾಸರಿ 600 ಪ್ರಕರಣಗಳು ನಡೆದಿವೆ. ಅರ್ಧಕ್ಕರ್ಧ ಪ್ರಕರಣಗಳು ಬ್ರಾಹ್ಮಣ ಸಮುದಾಯದಲ್ಲಿ ನಡೆದಿತ್ತು. ಹೆಚ್ಚಿನವರು 40 ವರ್ಷ ಮೀರಿದವರು.

ಅದರಲ್ಲಿ ಒಂದು ಮಗು ನಾಲ್ಕು ವರ್ಷ ಪ್ರಾಯ ಇದ್ದಿತ್ತು! ಬಹುಶಃ ಬಾಲ್ಯ ವಿವಾಹ – ಬಾಲ್ಯ ವಿಧವೆ – ಬಾಲ್ಯ ಸತಿ. ರಾಜಾರಾಮ್ ಮೋಹನ್ ರಾಯ್ ಸತಿ ಪದ್ಧತಿಯ ವಿರುದ್ಧ ಹೋರಾಡಿದರು. ತನ್ನ ಸ್ವಂತ ಅತ್ತಿಗೆಯೇ ಈ ಅನಿಷ್ಟ ಪದ್ಧತಿಗೆ ಬಲಿಯಾಗಿರುವುದನ್ನು ನೋಡಿದ ಅವರ ಮನಸ್ಸು ಕಲುಕಿತು.1829 ರ ಡಿಸೆಂಬರ್ 4 ರಂದು ಲಾರ್ಡ್ ವಿಲಿಯಂ ಬೆಂಟಿಂಕ್ ಸತಿ ಪದ್ಧತಿಯನ್ನು ನಿಷೇಧಿಸುವ ಕಾನೂನಿಗೆ ಸಹಿ ಹಾಕಿದ. ವಿಚಿತ್ರವೆಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಕೂಡ ಸುಮಾರು 30 ಸತಿ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊನೆಯ ಪ್ರಕರಣ ನಡೆದದ್ದು ರಾಜಸ್ಥಾನದ ಸಿರ್ಕಾ ಜಿಲ್ಲೆಯ ದಿಯೋರಾಲ ಎಂಬ ಹಳ್ಳಿಯಲ್ಲಿ. ಗಂಡ ಯಾವುದೋ ಕಾಯಿಲೆಯಿಂದ ಸತ್ತ ಎಂದು ರೂಪ ಕನ್ವರ್ ಎನ್ನುವ 19 ವರ್ಷದ ಯುವತಿಯನ್ನು ಚಿತೆ ಪ್ರವೇಶಿದಳು.

1987 ರಲ್ಲಿ ಜಾರಿಗೆ ಬಂದ ಹೊಸ ಸತಿಸಹಗಮನ ನಿಷೇಧ ಕಾನೂನಿನ ಪ್ರಕಾರ, ಸತಿಗೆ ಪ್ರಚೋದಿಸುವವರನ್ನು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.