ಡಾ.ಭಾರತಿ ಮರವಂತೆ
ಕೃಷ್ಣ ಹುಟ್ಟಿದ ದಿನ ಎಂದರೆ ಎಲ್ಲೆಡೆ ಸಂಭ್ರಮ, ಉಲ್ಲಾಸ. ಮನೆಯ ಮಗುವನ್ನೇ ಕೃಷ್ಣ ಎಂದು ಪೂಜಿಸುವ ಜನಪದರು, ರಂಗೋಲಿಯಲ್ಲೂ ಕೃಷ್ಣನನ್ನು ಕಾಣುವುದು ಒಂದು ಅದ್ಭುತ ಪರಿಕಲ್ಪನೆ.
ರಂಗೋಲಿಯಲ್ಲಿರುವ ‘ರಂಗ’ ಪದ ಸೂಚ್ಯವಾಗಿ ಕೃಷ್ಣನನ್ನು ಸಂಕೇತಿಸುತ್ತದೆ. ರಂಗೋಲಿ ಎನ್ನುವ ಪದಕ್ಕೆ ಪರ್ಯಾಯವಾಗಿ ರಂಗಾವ (ರಂಗ್ ಹೊಯ್ಯುವುದು)
ಎಂದೂ ಬಳಕೆಯಲ್ಲಿದೆ. ರಂಗೋಲಿಗೂ ಕೃಷ್ಣನಿಗೂ ನಂಟಿನ ಗಂಟಿರುವಂತೆ ಜನಪದರಿಗೂ ಬಾಲಕೃಷ್ಣನಿಗೂ ಭಕ್ತಿಯ ಭಾವನಾತ್ಮಕ ನಂಟಿದೆ.
ಬಹುಶಃ ಈ ಹಿನ್ನೆಲೆಯಲ್ಲಿಯೇ ಜನಪದರು ರಂಗೋಲಿಯಲ್ಲಿ ಕೃಷ್ಣನ್ನು ಚಿತ್ರದ ಮೂಲಕ ಆರಾಧಿಸಿದ್ದಾರೆ. ಬಾಲಕೃಷ್ಣನ ಪುಟ್ಟ ಹೆಜ್ಜೆಗಳು, ಆತನ ಜುಟ್ಟು, ತೂಗುವ ತೊಟ್ಟಿಲು, ಆಯುಧಗಳು, ಗೋವುಗಳನ್ನು ಮೇಯಿಸಿದ ಗೋಮಾಳ ಅಬ್ಬಾ . . .ಒಂದೇ ಎರಡೇ. . .ರಂಗೋಲಿಯಲ್ಲಿ ಕೃಷ್ಣನ ಬಾಲಲೀಲೆಗಳನ್ನು ತಂದಿದ್ದಾರೆ. ಆತನ ಚರಿತ್ರೆಯನ್ನೇ ಚಿತ್ರಕಾವ್ಯದಂತೆ ಕೆಲವೇ ರೇಖೆಗಳಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನೊಂದು ಹೆಜ್ಜೆ ಮುಂದೆ ಹೋಗಿ ಭಾವುಕರಾಗಿ ‘ರಂಗಯ್ಯ ಬರ‍್ತಾನೆಂದು ರಂಗಾವ ನಾ ಬಿಟ್ಟೆ’ಎಂದಿದ್ದಾರೆ. ರಂಗ್ ಎಂದರೆ ಬಣ್ಣ. ರಂಗನೇ ಬರುವನೆಂದು ರಂಗಾದ ರಂಗ್‌ರಂಗಿನ ಬಣ್ಣದ ರಂಗೋಲಿ ರಂಗನಿಗಾಗಿಯೇ ಬಿಡಿಸಿ ದ್ದೇನೆ ಎನ್ನುವ ಜನಪದರ ಕಲ್ಪನೆಯ ವಿಸ್ತಾರ ಭಕ್ತಿ ಊಹೆಗೂ ನಿಲುಕದು. ಗೋಪಿಕಾ ಸ್ತ್ರೀಯರು ಕೃಷ್ಣ ಮನೆಗೆ ಬರುವನೆಂದು ರಂಗೋಲಿಯಲ್ಲಿ ಅಲಂಕರಿಸುತ್ತಿದ್ದರಂತೆ.
ವಿದುರನಂತೂ ಅಕ್ಕಪಕ್ಕದಲ್ಲಿರುವ ಬಣ್ಣದ ಕಲ್ಲುಗಳನ್ನು ತಂದು ಪುಡಿ ಮಾಡಿ ಬಣ್ಣದ ರಂಗೋಲಿಯಿಂದ ಕೃಷ್ಣನನ್ನು ಸ್ವಾಗತಿಸಿಕೊಳ್ಳುತ್ತಿದ್ದನೆಂದು ಮಹಾಭಾರತ ದಲ್ಲಿ ಉಲ್ಲೇಖಿಸಲಾಗಿದೆ. ರಂಗನನ್ನು ಸ್ವಾಗತಿಸುವ ಕಲೆ ರಂಗೋಲಿ ಎಂದೂ ಮೇಲ್ನೋಟಕ್ಕೆ ವ್ಯಾಖ್ಯಾನಿಸುತ್ತೇವೆ. ರಂಗೋಲಿಯ ಶಬ್ದನಿಷ್ಪತ್ತಿಯ ಕುರಿತಾಗಿ ನಾನಿಲ್ಲಿ ವಿಶ್ಲೇಷಿಸದೆ ರಂಗನನ್ನು ರಂಗೋಲಿಯಲ್ಲಿ ಗ್ರಹಿಸಿದ ಒಂದು ಮುಖವನ್ನು ಮಾತ್ರ ತೆರೆದಿಡುತ್ತಿದ್ದೇನೆ.
ಮಗು ಎಂದರೆ ಕೃಷ್ಣ!
ಜನಪದರು ಮಕ್ಕಳ ತುಂಟಾಟ ನೋಟ ಅಂದ ಚೆಂದವನ್ನು ಬಾಲಕೃಷ್ಣ, ಮುದ್ದುಕೃಷ್ಣ ಎಂದೇ ಭಾವಿಸುತ್ತಾರೆ. ಕಿಟ್ಟ, ಕಿಟ್ಟಿ, ಕಿಷ್ಣ, ಕ್ರಿಷ್ಣ ಇತ್ಯಾದಿ ಹೆಸರುಗಳಿಂದ ಮಕ್ಕಳನ್ನು ಕರೆಯುವುದುಂಟು. ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಮುದ್ದುಕೃಷ್ಣನ ವೇಷ ಸ್ಪರ್ಧೆಯಲ್ಲಿ ಮಕ್ಕಳು ಕೃಷ್ಣನ ವೇಷ ಧರಿಸಿ ವೇದಿಕೆಯೇರಿ ತುಂಟಾಟ ಗಳಿಂದ ರಂಜಿಸುತ್ತಾರೆ. ಈ ಹಬ್ಬದ ದಿನ ಮನೆಯಂಗಳದಲ್ಲಿ ಗೋಪಾದ ಕೃಷ್ಣನ ಪಾದಗಳನ್ನು ರಂಗೋಲಿಯಲ್ಲಿ ರಚಿಸಿದರೆ ಗೋವು ಕೃಷ್ಣರನ್ನು ಪೂಜಿಸಿದಂತೆ ಎಂಬ ನಂಬಿಕೆ ಜನರಲ್ಲಿದೆ. ಈ ದಿನ ಕೃಷ್ಣನ ಹೆಜ್ಜೆಗಳು, ಕೃಷ್ಣನ ಮಂಡಿ, ಕೃಷ್ಣನ ಜುಟ್ಟು, ಕೃಷ್ಣನ ತೊಟ್ಟಿಲು ಇತ್ಯಾದಿ ಬಿಡಿಸಿ ಆರಾಧಿಸುತ್ತಾರೆ.
ಅಂಗೈಯನ್ನು ಮುಷ್ಠಿ ಹಿಡಿದು ಶೇಡಿ ನೀರಿಗೆ ಅದ್ದಿ ಅದ್ದಿ ಮುಷ್ಠಿಯ ತಳಭಾಗವನ್ನು ನೆಲಕ್ಕೆ ಅಚ್ಚು ತೆಗೆಯುತ್ತಾರೆ. ಈ ಅಚ್ಚುಗಳೇ ಕೃಷ್ಣನ ಪಾದಗಳೆನ್ನುತ್ತಾ ಅಂಗಳದಿಂದ ಮನೆ ಒಳಗಡೆತನಕ ಇವುಗಳನ್ನು ಸಾಲು ಸಾಲಾಗಿ ಮೂಡಿಸುತ್ತಾರೆ. ಬಾಲಕೃಷ್ಣ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಒಳಬಂದು ತೊಟ್ಟಿಲಲ್ಲಿ ಮಲಗು ತ್ತಾನೆ, ಅದಕ್ಕಾಗಿಯೇ ಮನೆ ಒಳಗಡೆ ತೊಟ್ಟಿಲ ರಂಗೋಲಿ ಬಿಡಿಸುತ್ತಾರೆ. ತೊಟ್ಟಿಲಿನಲ್ಲಿ ಗೆಜ್ಜೆಗಳು ಹೂವುಗಳ ಚಿತ್ರವಿರುತ್ತದೆ. ಕೃಷ್ಣ ದುಷ್ಟರನ್ನು ಸಂಹರಿಸಿದಂತೆ ನಮ್ಮ ಕಷ್ಟಗಳನ್ನು ದೂರಮಾಡುತ್ತಾನೆ ಎನ್ನುತ್ತಾ ಶಂಖ, ಚಕ್ರ, ಗದಾ, ಪದ್ಮದ ಚಿತ್ರಗಳನ್ನೂ ಅರಳಿಸಿರುತ್ತಾರೆ.
ಕೃಷ್ಣನ ತೊಟ್ಟಿಲು
ತೊಟ್ಟಿಲ ತೂಗೋ ಹಾಡುಗಳು ಜನಪದರ ಬದುಕಿನ ಸಾಂಸ್ಕೃತಿಕ ಕೊಂಡಿಗಳು. ಲ್ಯದಲ್ಲಿ ಕೃಷ್ಣ ಚುರುಕಾಗಿದ್ದಂತೆ ತಮ್ಮ ಮಕ್ಕಳೂ ಚುರುಕಾಗಿ ಆದರ್ಶನಾಗಿ
ಬೆಳೆಯಬೇಕು ಎನ್ನುವುದು ಜನಪದರ ಆಶಯ. ಮಕ್ಕಳಿಲ್ಲದಿದ್ದವರು ಕೃಷ್ಣನತೊಟ್ಟಿಲ ಗೋಲಿ ಬರೆದರೆ ಮಕ್ಕಳು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಜನಪದರು ತೂಗುವ ತೊಟ್ಟಿಲನ್ನು ವೀಕ್ಷಿಸಿ ಅನುಕರಿಸಿದ ರೀತಿಯನ್ನು ಈ ವಿನ್ಯಾಸದ ಸೂಕ್ಷ್ಮತೆಗಳಲ್ಲಿ ಕಾಣುತ್ತೇವೆ.
ಕೃಷ್ಣನ ಜುಟ್ಟು
ಜುಟ್ಟು ಬುದ್ಧಿಜ್ಞಾನದ ಸಂಕೇತ. ಬುದ್ಧಿ ಬೆಳವಣಿಗೆ ಯಾಗುತ್ತಿದೆ, ಎಚ್ಚರವಿರಲಿ ಎನ್ನುವ ಸಂದೇಶವೇ ಚೌಲದ ಶಾಸ್ತ್ರವೆನಿಸಿದೆ. ಕೃಷ್ಣನಿಗಿರುವ ಬುದ್ಧಿ ಜ್ಞಾನದ ಸಂಕೇತವಾಗಿ ಕೃಷ್ಣನ ಜುಟ್ಟು ರಂಗೋಲಿ ಚಿತ್ರದಲ್ಲಿದೆ. ಕೃಷ್ಣನ ಬುದ್ಧಿ ಶಕ್ತಿ ಎಲ್ಲರಿಗೂ ಬರಲಿ ಎನ್ನುವ ಆಶಯವೇ ಈ ರಂಗೋಲಿ.
ಗೋಮಾಳ
ಪಶುಪಾಲನಾ ಸಂಸ್ಕೃತಿಯ ದುಡಿಯುವ ಜನರ ಜೀವಾಳವೇ ಗೋವುಗಳು. ಹಸುಗಳನ್ನು ಮನೆಯಲ್ಲಿಯೇ ಇರಿಸಿಕೊಂಡು, ಬಂದ ಉತ್ಪನ್ನದಿಂದ ಬದುಕು ಕಟ್ಟಿಕೊಂಡು, ಅವುಗಳನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಿದ್ದ ದಿನಗಳೂ ಇದ್ದವು. ಕೃಷ್ಣ ದೈವತ್ತ್ವದ ನೆಲೆಗೆ ಏರಿದ್ದರೂ, ಸರಳ ಜೀವನದಲ್ಲಿ ಗೋವು ಗಳನ್ನು ಕಾಯ್ದ ಗೋಪಾಲಕನೂ ಹೌದು. ಕೃಷ್ಣನ ಆದರ್ಶಗಳು ಸಮಾಜಕ್ಕೆ ಮಾದರಿ ಎನ್ನುವುದೇ ಗೋಮಾಳದ ರಂಗೋಲಿಯ ಅರ್ಥವಾಗಿದೆ. ಪ್ರಕೃತಿಯ ವೀಕ್ಷಣೆ, ಅನುಕರಣೆ, ಜನಪದರ ಅವಿನಾಭಾವ ಸಂಬಂಧಗಳು ಗೋಮಾಳದ ಚಿತ್ರದಲ್ಲಿದೆ. ಸರಳವಾಗಿ ಸಂಕ್ಷಿಪ್ತವಾಗಿ ಹೇಳುವುದನ್ನು ಇದರಲ್ಲಿ ಕಾಣುತ್ತೇವೆ. ಗೋವು ಮೆಟ್ಟಿದ ಸ್ಥಳದಲ್ಲಿ ಕೃಷ್ಣ ಬಂದು ನೆಲೆಸಿರುತ್ತಾನೆ ಎನ್ನುವ ನಂಬಿಕೆಯಲ್ಲಿ ಗೋಪಾದದ ರಂಗೋಲಿಯನ್ನೂ ಚಿತ್ರಿಸುತ್ತಾರೆ.
ಕೃಷ್ಣನ ಮಂಡಿ
ಕಾಲಿನಪಾದ ಕೈಗಳಲ್ಲಿ ಚಕ್ರಗಳಿದ್ದು ಶಕ್ತಿಯ ಕೇಂದ್ರಬಿಂದುವಾಗಿದೆ ಎನ್ನುವುದನ್ನು ಅಕ್ಯುಪಂಚರ್ ಎಂಬ ಹೆಸರಿನಿಂದ ಗುರುತಿಸಲಾಗಿದೆ. ಅದಕ್ಕಾಗಿಯೇ ಜನ
ಪದರು ಚಪ್ಪಲಿಯಿಲ್ಲದೇ ನಡೆದು, ಕೈಗಳಲ್ಲಿಯೇ ಕೆಲಸ ಮಾಡಿ ಆರೋಗ್ಯದಿಂದಿರುತ್ತಿದ್ದರು. ಕ್ರಿಯಾಶೀಲತೆಯ ಸಂಕೇತವೇ ಕೃಷ್ಣನ ಪಾದಗಳಾಗಿದ್ದು ಕೃಷ್ಣನ ಮಂಡಿ ರಂಗೋಲಿಯಲ್ಲಿ ಮೂಡಿದೆ.
ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ರಂಗೋಲಿ ವ್ರತದ ಆಚರಣೆ ಜನಪದರಲ್ಲಿದೆ. ಶ್ರೀಕೃಷ್ಣ ಮನೆಗೆ ಬರುತ್ತಾನೆಂದು ಗೋಪಿಕಾಸ್ತ್ರೀಯರು ರಂಗೋಲಿ ವ್ರತದ ಮೂಲಕ ರಂಗೋಲಿ ಬಿಡಿಸುತ್ತಿದ್ದರು. ಕೃಷ್ಣ ಅವರ ಕಣ್ಣುಗಳನ್ನು ಮುಚ್ಚಿ ರಂಗೋಲಿ ಹಾಕದಂತೆ ವೃತವನ್ನೇ ಕೆಡಿಸುತ್ತಿದ್ದ ಎಂಬುವುದನ್ನು ಪುರಂದರದಾಸರು ವರ್ಣಸಿದ್ದು ಹೀಗೆ.
ಅಂಗಳದೊಳಗೆ ರಂಗೋಲಿ ಹಾಕುವಾಗ
ಶೃಂಗಾರದಂಗದ ಸೊಗಸ ನೋಡಿ ಕಂಗಳನು ಮುಚ್ಚಿ ತಾ ಹೆಂಗಳ ವೃತವನು
ಭಂಗ ಮಾಡಿದ ಶ್ರೀರಂಗನೆಂಬುವನು . . .
ಎಂಬಲ್ಲಿ ರಂಗನನ್ನು ಒಲಿಸಿಕೊಳ್ಳುವ ರಂಗೋಲಿಗೂ, ರಂಗನಿಗೂ ಇರುವ ಅವಿನಾಭಾವ ಸಂಬಂಧ ಕೌತುಕವಾಗಿದೆ. ಕಷ್ಟಪಟ್ಟು ಸುಂದರವಾಗಿ ರಂಗನಿಗಾ ಗಿಯೇ ರಂಗೋಲಿ ಬಿಡಿಸಿದರೆ ಬಾಲಕೃಷ್ಣ ಅದನ್ನೆಲ್ಲಾ ತುಂಟಾಟದಿಂದ ಹಾಳು ಮಾಡುತ್ತಿದ್ದ ಎನ್ನುವುದನ್ನು ಪುರಂದರದಾಸರು.
ಕುಶಲದಿ ಬಣ್ಣಿಸಿ ಬರೆದ ಚಿತ್ತಾರವ
ಮಸಿ ಮಣ್ಣು ಮಾಡಿ ನೀ ಕೆಡಿಸುವುದು . . . ಎಂಬಲ್ಲಿ ಕ್ಷಣದ ಬದುಕಿನ ರಂಗೋಲಿಯ ಜೀವಂತಿಕೆಯನ್ನು ಮಕ್ಕಳಿಂದ ರಕ್ಷಿಸಿಕೊಳ್ಳುವುದು ಕಷ್ಟ. ಇದನ್ನು ಬಾಲಕೃಷ್ಣನ ಆಟಗಳಿಗೂ ತಂದು ರಂಗನಿಗೂ ರಂಗೋಲಿಗೂ ನಂಟಿನ ಗಂಟನ್ನು ನೇಯ್ದಿರುವುದು ಈ ಕಲೆಯ ಮಹತ್ತ್ವ ಹೆಚ್ಚಿಸಿದೆ.
ಮಂಗಳ ಮೂರುತಿ ಪೊಂಗೊಳಲೂದುತ್ತ
ತಿಂಗಳಿನಂದದಿ ಕಂಗಳು ಪೊಳೆಯೆ
ಅಂಗನೆಯರೆಲ್ಲರು ಶೃಂಗಾರವಾಗಿನ್ನು
ರಂಗವಲ್ಲಿನಿಟ್ಟರಂಗಣದಿ…
ಎಂಬಲ್ಲಿ ಶ್ರೀರಂಗನಿಗಾಗಿಯೇ ಅಂಗನೆಯರು ರಂಗವಲ್ಲಿಯನಿಟ್ಟರು ಎಂದು ಗೋಪಾಲದಾಸರು ಸೂಚ್ಯವಾಗಿ ಹೇಳಿದ್ದಾರೆ.
ರಂಗನಾಥನಿಗೆ ತುಳಸಿ ಮಾಲೆ
ಕೃಷ್ಣನ ರಂಗೋಲಿ ಬರೆದು ರಂಗನನ್ನು ಒಲಿಸಿಕೊಂಡ ಶ್ರೀಜಗನ್ನಾಥದಾಸರು ‘ರಂಗೋಲಿದಾಸ’ರೆಂದೇ ಖ್ಯಾತರು. ನಿತ್ಯ ಶ್ರೀರಂಗದ ರಂಗನಾಥನನ್ನು ರಂಗೋಲಿಯಲ್ಲಿ ಚಿತ್ರಿಸಿ ಕೀರ್ತನೆಗಳನ್ನು ಹೇಳುತ್ತಿದ್ದರಂತೆ. ಒಂದು ದಿನ ಶ್ರೀರಂಗನ ಕೊರಳಿನಲ್ಲಿ ಆಭರಣವನ್ನು ಚಿತ್ರಿಸದಿರುವುದನ್ನು ನೋಡಿ ದಿವಾನ್
ಪೂರ್ಣಯ್ಯನವರು ‘ಆಭರಣವೇಕಿಲ್ಲ?’ ಎನ್ನುತ್ತಾರೆ.
ಶ್ರೀರಂಗದ ರಂಗನಾಥಸ್ವಾಮಿಗೆ ಇಂದು ತುಲಸೀಮಾಲೆ ಮಾತ್ರ ತೊಡಿಸಲಾಗಿದೆ ಅದಕ್ಕಾಗಿ ಆಭರಣ ಚಿತ್ರಿಸಿಲ್ಲ ಎಂದು ದಾಸರು ಪ್ರತಿಕ್ರಿಯಿಸುತ್ತಾರೆ. ಪೂರ್ಣಯ್ಯನವರು ಶ್ರೀರಂಗದಲ್ಲಿನ ಮೂರ್ತಿಯ ಅಲಂಕಾರವನ್ನು ತಿಳಿದುಕೊಂಡಾಗ, ಅಂದು ತುಳಸೀಮಾಲೆ ಮಾತ್ರ ತೊಡಿಸಲಾಗಿತ್ತು! ಧಾರ್ಮಿಕ, ಸಾಮಾಜಿಕ, ಪ್ರಾದೇಶಿಕ ಗೋಡೆಗಳನ್ನು ಮೀರಿದ ನಿಲುವನ್ನು ರಂಗೋಲಿ ಚಿತ್ರಗಳಲ್ಲಿ ಕಾಣುತ್ತೇವೆ.
ಕೃಷ್ಣನ ರಂಗೋಲಿಯನ್ನು ಇಂತವರೇ ಬಿಡಿಸಬೇಕೆಂಬ ನಿಯಮವೇನೂ ಇಲ್ಲ. ಕೃಷ್ಣನ ಆದರ್ಶಗಳನ್ನು, ಸಾಹಸಗಳನ್ನು, ಕಾರಣಿಕತೆಯನ್ನು ಸಂಕೇತಗಳ ಮೂಲಕ ರಂಗೋಲಿಯಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಇಲ್ಲಿ ಕಂಡುಬರುತ್ತದೆ. ಆಡಂಬರವಿಲ್ಲದ ಸೇಡಿ ಮಣ್ಣಿನ ಪರಿಕರಗಳು, ಕಲಾಕೌಶಲ್ಯಕ್ಕೆ ಕುಂಚವಾಗಿ ಕೈಬೆರಳುಗಳು, ಸಂಕೇತಗಳೇ ಇಲ್ಲಿ ಸೃಜಶೀಲತೆಯ ಪ್ರತಿನಿಧಿಗಳಾಗಿವೆ.
ರಂಗನನ್ನು ಒಲಿಸುವ ರಂಗೋಲಿ ಕಲೆ ಕೇವಲ ರಂಗನನ್ನು ಒಲಿಸಲು ಸೀಮಿತವಾಗಿಲ್ಲ. ಜಾತಿ, ಮತ, ಪಂಥ, ಗಡಿ ಪ್ರದೇಶವನ್ನು ದಾಟುವ ಸಾರ್ವಕಾಲಿಕ ಮೌಲ್ಯಗಳನ್ನು ದೈವತ್ತ್ವದ ಪರಿಕಲ್ಪನೆಯಲ್ಲಿ ಪ್ರತಿಪಾದಿಸುವ ಸಾಮಾಜಿಕ ಸಿದ್ಧಾಂತ ಜನಪದ ಸಂಸ್ಕೃತಿಂiiಲ್ಲಿದೆ. ಮೇಲ್ನೋಟಕ್ಕೆ ಇವೆಲ್ಲಾ ಸಂಪ್ರದಾಯ ವೆಂಬಂತೆ ಕಂಡುಬರುತ್ತದೆ. ಆದರೆ ಜನಪದ ಸಂಸ್ಕೃತಿಯ ಅಂತಸತ್ತ್ವ, ಬದುಕಿನ ಜೀವಂತಿಕೆ, ಮೌಲ್ಯಗಳು, ಏಕತೆ, ಸಾಮರಸ್ಯ, ಈ ನೆಲಮೂಲ ಸಂಸ್ಕೃತಿಯ ಒಡಲಲ್ಲಿ ಬಚ್ಚಿಟ್ಟುಕೊಂಡಿರುವುದಂತೂ ಸತ್ಯ. ತಂತ್ರಜ್ಞಾನದ ಹೊಸ್ತಿಲಲ್ಲಿ ನಿಂತಿರುವ ನಾವಿಂದು ಜನಪದರ ಜ್ಞಾನದ ಅನುಭವದ ಮೂಟೆಯನ್ನು ಒಮ್ಮೆ ಬಿಚ್ಚಿ ನೋಡಬೇಕಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ, ಅದನ್ನು ಮರುಚಿಂತಿಸುವ, ಅದರತ್ತ ಮುಖಮಾಡುವ ಯೋಚನೆಗೆ ನಾವು ತೊಡಗಿಕೊಳ್ಳಬಹುದಲ್ಲವೇ?