ಅಮೆಜಾನ್ ಸಂಸ್ಥೆಯನ್ನು ಈ ಮಟ್ಟಕ್ಕೆ ಬೆಳೆಸಿ, ಜಗತ್ತಿನ ದೈತ್ಯ ಆನ್‌ಲೈನ್ ಸ್ಟೋರ್ ಆಗಿ ಪರಿವರ್ತಿಸುವಲ್ಲಿ ಅದರ ಸಿ ಇ ಒ ಜೆಫ್ ಬೆಜೋಸ್ ಪಾತ್ರ ಹಿರಿದು. 5 ಜುಲೈ 1994ರಂದು ಅವರ ನೇತೃತ್ವದಲ್ಲಿ ಆರಂಭಗೊಂಡ ಅಮೆಜಾನ್, ಇಡೀ ಜಗತ್ತಿನಲ್ಲಿ ಮಾಡಿದ ಮೋಡಿ ಅಸಾಧಾರಣ. ಅದೇ ದಿನಾಂಕದಂದು, ಅಂದರೆ 5ನೇ ಜುಲೈಯಂದು ಅವರು ಸಿ ಇ ಒ ಸ್ಥಾನದಿಂದ ನಿವೃತ್ತರಾಗಿದ್ದಾರೆ.
ತನ್ನ 57 ವಯಸ್ಸಿನಲ್ಲಿ ಅವರು ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದು, ಈಗ ಅವರ ಒಟ್ಟು ಮೌಲ್ಯ ಸುಮಾರು 199 ಬಿಲಿಯ ಡಾಲರ್. ಇಂದು ಅವರು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ! ಕಳೆದ ವರ್ಷ ಕೋವಿಡ್ 19 ತಂದ ಸಂಕಟದಿಂದ ಹೆಚ್ಚಿನ ವ್ಯವಹಾರಗಳು ನಷ್ಟ ಅನುಭವಿಸಿದರೆ, ಅಮೆಜಾನ್ ಮಾತ್ರ ಆನ್‌ಲೈನ್ ವ್ಯಾಪಾರ ವೃದ್ಧಿಸಿಕೊಂಡು, ಹೆಚ್ಚಿನ ಲಾಭ ಗಳಿಸಿತು!
ಮುಂದಿನ ದಿನಗಳಲ್ಲಿ ಜೆಫ್ ಬಿಜೋಸ್ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡರೂ ಅಚ್ಚರಿ ಇಲ್ಲ. ಅವರೇ ಹುಟ್ಟುಹಾಕಿದ ಬ್ಲೂ ಒರಿಜಿನ್ ಸಂಸ್ಥೆಯು ಜುಲೈ 20 ರಂದು ಬಾಹ್ಯಾಕಾಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿದ್ದು, ಅವರ ಜತೆ ಬಿಜೋಸ್ ಸಹ ಆಗಸದಲ್ಲಿ ಹಾರಲಿದ್ದಾರೆ. ಇವರ ಬಾಹ್ಯಾಕಾಶ ಸಾಹಸವು, ಬಾಹ್ಯಾ ಕಾಶ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಹುಟ್ಟುಹಾಕಿದೆ. ಇನ್ನೋರ್ವ ಸಾಹಸೋದ್ಯಮಿ ರಿಚಾರ್ಡ್ ಬ್ರಾನ್ಸನ್ ಅವರ ಸಂಸ್ಥೆ ಸಹ ವಾಣಿಜ್ಯಕ ಬಾಹ್ಯಾಕಾಶ ಯಾನವನ್ನು ಇದೇ ಜುಲೈನಲ್ಲಿ ಹಮ್ಮಿಕೊಂಡಿದೆ.