Saturday, 14th December 2024

ಸಾವು ಗೆಲ್ಲದ ಸಾವಂತ್ರಿ

ಹೊಸ ಕಥೆ

ಕೆ.ಎನ್‌.ಮಹಾಬಲ

ಸಾವಂತ್ರಿಯು ಸಾಲ ಪಡೆದದ್ದು ಗಂಡನ ಹೆಸರಿನಲ್ಲಿ. ಆದರೆ, ದುರದೃಷ್ಟವಷಾತ್ ಗಂಡ ತೀರಿಹೋದ. ಸಾಲದ ಕಥೆ ಏನಾಯಿತು?

ಆಕೆ ಆ ದಿನ ಸಾಲ ವಿಭಾಗದ ಅಧಿಕಾರಿ ಶ್ರೀನಿವಾಸನ ಟೇಬಲ್ ಬಳಿ ಬಂದಾಗ ಅವನು ಅಲ್ಲಿರಲಿಲ್ಲ. ಸಿಡಿಮಿಡಿಗೊಂಡು ಸುತ್ತಲೂ ನೋಡಿ ಪಕ್ಕದ ಟೇಬಲ್‌ನಲ್ಲಿದ್ದ ದತ್ತನನ್ನು ‘ಎಲ್ಲಿ ಅವರು?’ ಎಂದು ಜೋರುದನಿಯ ಕೇಳಿದ್ದಳು. ಅವನು ಕೆಲಸದ
ಗಡಿಬಿಡಿಯಲ್ಲಿ ಇದ್ದುದರಿಂದ ಸುಮ್ಮನೆ ಎದುರಿಗಿದ್ದ ಕ್ಯಾಬಿನ್ ಕಡೆಕೈಸನ್ನೆ ಮಾಡಿದ್ದ.

ಬಾಯಿಬಿಟ್ಟು ಹೇಳಲು ಇವರಿಗೆ ಏನು ತೊಂದರೆ ಎಂದು ಗೊಣಗುತ್ತ ಶ್ರೀನಿವಾಸ ಇದ್ದ ಕಡೆ ಬಂದಳು. ಅವನು ಗಮನಿಸಲಿಲ್ಲ. ಅದಕ್ಕೆ ಕಾರಣವಿತ್ತು. ಮುಖ್ಯ ಕಚೇರಿಯಿಂದ ಬಂದಿದ್ದ ತಪಾಸಣಾ ಅಧಿಕಾರಿಗಳಿಗೆ ತನ್ನ ಸುಪರ್ದಿನಲ್ಲಿದ್ದ ಸಾಲ ಖಾತೆಗಳನ್ನು ತೋರಿಸುವ ಕೆಲಸದಲ್ಲಿ ಶ್ರೀನಿವಾಸ ಮುಳುಗಿಹೋಗಿದ್ದ. ಆ ತಪಾಸಣಾ ಅಧಿಕಾರಿಯೋ ಸ್ವಲ್ಪ ದೂರ್ವಾಸನ ವಂಶದವರು. ತನಗೆ ನೀಡಿದ್ದ ಒಂದು ವಾರದಷ್ಟು ಕಡಿಮೆ ಅವಧಿಯಲ್ಲಿ ಇಡೀ ಶಾಖೆಯ ವಿವಿಧ ವಿಭಾಗಗಳ ತನಿಖೆಯ ಕೆಲಸವನ್ನು  ಮುಗಿಸ ಬೇಕಾಗಿರುವುದರಿಂದ, ಬೇರೆ ಯಾವ ಕೆಲಸವನ್ನೂ, ವಿಶೇಷವಾಗಿ ಯಾವುದೇ ಗ್ರಾಹಕರನ್ನು ಗಮನಿಸಬಾರದೆಂದೂ ತನಿಖಾಧಿ ಕಾರಿಗಳು ಶ್ರೀನಿವಾಸನಿಗೆ ಖಡಕ್ಕಾಗಿಯೇ ತಾಕೀತು ಮಾಡಿ ದ್ದರು. ಹಾಗೆಂದೇ ಆಕೆ ಬಂದುದನ್ನು ನೋಡಿಯೂ ಅಲಕ್ಷಿಸಿದ್ದ.

ಆಕೆಗೆ ಸುಮ್ಮನಿರಲಾಗಲಿಲ್ಲ. ಇವರಿಗೆಲ್ಲ ನನ್ನ ಸಮಸ್ಯೆ ಏಕೆ ಅರ್ಥವಾಗುತ್ತಿಲ್ಲ? ಎಂದುಕೊಳ್ಳುತ್ತ ಬೇಸರದಿಂದಲೇ ಶಾಖಾ ವ್ಯವಸ್ಥಾಪಕರ ಹತ್ತಿರ ಧಾವಿಸಿ ದೂರು ನೀಡುವ ಧಾಟಿಯ ಮಾತನಾಡಿದಳು. ಅವರು ‘ಇಡೀ ಶಾಖೆಯೇ ತನಿಖೆಯ ವಾತಾವರಣದಲ್ಲಿ ಇರುವುದರಿಂದ ಹೀಗಾಗಿದೆ’ ಎಂದು ಸಮಾಧಾನ ನೀಡಲು ಯತ್ನಿಸಿದರು. ‘ಇದನ್ನು ದಯವಿಟ್ಟು ನೋಡಿ ಸಾರ್’ ಎಂದು ತನ್ನ ಕೈಲಿದ್ದ ಕಡತವನ್ನು ಅವರಿಗೆ ನೀಡಿದಳು.

ಶಾಖಾ ವ್ಯವಸ್ಥಾಪಕರು ಅದನ್ನು ಒಮ್ಮೆ ಅವಲೋಕಿಸಿ ಆಕೆಗೆ ವಾಪಸು ಕೊಟ್ಟು ಗಡಿಯಾರದತ್ತ ನೋಡಿದರು. ಸಮಯ ಹನ್ನೆರಡೂವರೆ. ಅವರಿಗೇನೋ ಹೊಳೆಯಿತು. ‘ಹೊರಗೆ ಸೋಫಾದಲ್ಲಿ ಕುಳಿತಿರಿ. ನಿಮ್ಮ ಸಾಲದ ಅಧಿಕಾರಿ ಅಲ್ಲಿಗೇ ಬರ್ತಾರೆ’ ಎಂದು ಆಕೆಗೆ ಹೇಳಿದರು. ಅಸಮಾಧಾನದಿಂದಲೇ ಅವಳು ಹೊರನಡೆದಳು. ವ್ಯವಸ್ಥಾಪಕರು ಒಂದು ಚೀಟಿಯಲ್ಲಿ ಏನೋ ಬರೆದು ಅಟೆಂಡರ ಚಂದ್ರಪ್ಪನನ್ನು ಕರೆದು ಅದನ್ನು ಶ್ರೀನಿವಾಸನಿಗೆ ಕೊಡಲು ಹೇಳಿದರು.

ಚಂದ್ರಪ್ಪ ತಂದುಕೊಟ್ಟ ಚೀಟಿಯನ್ನು ಶ್ರೀನಿವಾಸ ನೋಡಿದ. ಅದರಲ್ಲಿ ‘ಒಂದು ಗಂಟೆಗೆ ತನಿಖಾಧಿಕಾರಿಗಳು ನನ್ನ ಜತೆ ಊಟಕ್ಕೆ ಹೊರಡುತ್ತಾರೆ. ಆ ಸಮಯದಲ್ಲಿ ವಿಸಿಟರ್ ಸೋಫಾದಲ್ಲಿ ಕುಳಿತಿರುವ ಆಕೆಯ ಹತ್ತಿರ ಮಾತನಾಡಿ’ ಎಂದಿತ್ತು. ಒಂದು ಗಂಟೆಗೆ ತನಿಖಾಽಕಾರಿಗಳು ಊಟಕ್ಕೆ ಹೊರಡುತ್ತಾ ‘ನೀವೂ ನಮ್ಮ ಜತೆ ಬನಿ’ ಎಂದು ಕರೆದರು. ಮನೆಯಿಂದ ಊಟ ತಂದಿದ್ದೇನೆ ಎಂದು ಅವರನ್ನು ಕಳುಹಿಸಿ ವಿಸಿಟರ್ ಸೋಫಾದತ್ತ ಬಂದ.

ಆಕೆಯನ್ನು ವಿಚಾರಿಸಿದಾಗ ತಿಳಿದದ್ದು ಅಂಗವಿಕಲರಾದ ತನ್ನ ಪತಿ ಸತ್ಯನಾಥರಾವ್ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲದ
ನೆರವಿಗಾಗಿ ಅಂಗವಿಕಲ ಕಲ್ಯಾಣ ಇಲಾಖೆಯಿಂದ ಅರ್ಜಿ ಮಂಜೂರಿ ಮಾಡಿಸಿಕೊಂಡು ಬಂದಿದ್ದಳು. ಆಕೆಯ ಹೆಸರು ಸವಿತಾ. ಇಬ್ಬರು ಚಿಕ್ಕ ಹೆಣ್ಣುಮಕ್ಕಳು. ಸತ್ಯನಾಥರಾವ್ ಅವರ ತಂದೆ ದಶರಥ ರಾವ್ ನಿವೃತ್ತ ಪೋಲಿಸ್ ಅಧಿಕಾರಿ. ಅವರ ಕಾಲಾನಂತರ ಬಂದಿದ್ದ ಒಂದು ಮನೆ ಹಾಗೂ ಬಾಡಿಗೆಗೆ ಕೊಡಲಾಗಿದ್ದ ಔಟ್ ಹೌಸ್ ಅಷ್ಟೇ ಅವರಿಗಿದ್ದ ಆಧಾರ.

ಎರಡೂ ಕಡೆಯ ನೆಂಟರ ಸಹಕಾರವೂ ಅಷ್ಟಕ್ಕಷ್ಟೆ. ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಸವಿತಾ ಮನೆ ಹತ್ತಿರದ
ಡಿಟಿಪಿ ಕೇಂದ್ರದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಗಂಡನ ಹೆಸರಿನಲ್ಲಿ ಸ್ವಯಂ ಉದ್ಯೋಗಕ್ಕಾಗಿ ಅರ್ಜಿ ಮಂಜೂರು ಮಾಡಿಸಿ ಕೊಂಡಿದ್ದಳು. ಅದು ಒತ್ತಡದ ಬದುಕಿನ ಗಾಣಕ್ಕೆ ಸಿಲುಕಿ ಜರ್ಜರಿತಳಾಗಿದ್ದಳು ಸವಿತಾ. ಅದಕ್ಕೇ ಸಿಡಿಮಿಡಿ, ಧಾವಂತ. ಶ್ರೀನಿವಾಸ
ಇಲಾಖೆಯಿಂದ ಬಂದಿದ್ದ ಅರ್ಜಿಯನ್ನು ತಂದು ಪರಿಶೀಲಿಸಿದ.

ಬ್ಯಾಂಕ್‌ನವರಿಂದ ವ್ಯಾಪಾರಸ್ಥಳ ಹಾಗೂ ವಾಸಸ್ಥಳದ ಪರಿಶೀಲನೆ ಮತ್ತುಇಲಾಖೆಯ ಸಹಾಯಧನ ಬರುವುದು ಬಾಕಿ ಇತ್ತು. ಸಹಾಯಧನಕ್ಕಾಗಿ ನಿಯಮಿತ ನಮೂನೆ ಭರ್ತಿಮಾಡಿ ಸಹಿಹಾಕಿ ಕೊಟ್ಟು ಇಲಾಖೆಗೆ ತಲುಪಿಸಲು ಹೇಳಿ ‘ನಾಳೆ ನಿಮ್ಮ ಮನೆಗೆ ಪರಿಶೀಲನೆಗೆ ಬರುತ್ತೇನೆ’ ಎಂದ ಶ್ರೀನಿವಾಸ್.
***

ಬ್ಯಾಂಕ್ ಕಾರುಚಾಲಕ ಪ್ರಸಾದ್‌ನನ್ನು ಕರೆದು ನಿನಗೆ ಈ ವಿಳಾಸ ಗೊತ್ತೆ ಎಂದು ಕೇಳಿದ ಶ್ರೀನಿವಾಸ. ಅವನು ‘ಗೊತ್ತು ಸಾರ್, ಪೋಲಿಸ್ ಇನ್ ಸ್ಪೆಕ್ಟರು ದಶರಥರಾವ್ ಮನೆ. ಈಗ ಇವರು ಇಲ್ಲ. ಅವರ ಮಗ ಸತ್ಯ ಕಾಲು ಸರಿ ಇಲ್ಲ’ ಎಂಬ ವಿವರ ಒಪ್ಪಿಸಿದ. ಹತ್ತು ಗಂಟೆಯ ಹೊತ್ತಿಗೆ ಅವರ ಮನೆ ತಲುಪಿದ ಶ್ರೀನಿವಾಸ. ಎರಡು ಕೋಣೆಯ ಸಾಧಾರಣ ಮನೆ. ಹಳೆಯ ಕಾಲದಂತೆ ಒಂದು ವರಾಂಡ. ಬಾಗಿಲು ತಟ್ಟಿದಂತೆ ಇಬ್ಬರು ಮುದ್ದು ಮಕ್ಕಳು ಬಾಗಿಲು ತೆರೆದು ಸ್ಕೂಲಿಗೆ ಹೊರಟವು. ಅವರನ್ನು ಕಳಿಸಿ ಬಂದ ಸವಿತಾ ಸಾರ್,ಬನ್ನಿ ಒಳಗೆ ಎಂದು ಸ್ವಾಗತಿಸಿದಳು.

ಹಾಲ್‌ನಲ್ಲಿ ಸೋಫಾ ಮೇಲೆ ನಲವತ್ತರ ಆಸುಪಾಸಿನ ವಯಸ್ಸಿನ ಒಬ್ಬ ಆಕರ್ಷಕ ಯುವಕ ಕುಳಿತಿದ್ದ. ಕಪ್ಪು ಗುಂಗುರು
ಕೇಶವಿನ್ಯಾಸ, ಸಣ್ಣ ಗಡ್ಡ, ಅವನು ಕುಳಿತಿದ್ದ ರೀತಿಯಲ್ಲಿ ಆ ವ್ಯಕ್ತಿಯಲ್ಲಿ ಯಾವುದೇ ವೈಕಲ್ಯ ಕಾಣುವಂತಿರಲಿಲ್ಲ. ಸವಿತಾ
ಸತ್ಯನಾಥನಿಗೆ ಶ್ರೀನಿವಾಸನನ್ನು ಪರಿಚಯಿಸಿದಳು. ಅವನು ನಗುಮೊಗದಿಂದಲೇ ವಂದಿಸಿ ಎದ್ದು ನಿಂತು ಗೌರವ ಸಲ್ಲಿಸಲು
ಹೋದಾಗ ಸಾಧ್ಯವಾಗಲಿಲ್ಲ. ಶ್ರೀನಿವಾಸ ಅವನ ಹೆಗಲ ಮೇಲೆ ಕೈ ಇರಿಸಿ ಕುಳ್ಳಿರಿಸಿದ.

‘ಸಾರ್, ನಾನೂ ಐದು ವರುಷದ ಹಿಂದೆ ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ದಿನಕ್ಕೆ ಎಂಟು ಹತ್ತು ಗಂಟೆ ಓಡಾಟದ ಕೆಲಸ ಸಲೀಸಾಗಿ ಮಾಡುತ್ತಿದ್ದೆ. ಅದೇಕೋ ಇದ್ದಕ್ಕಿದ್ದಂತೆ ಎರಡು ವರುಷಗಳಿಂದ ಕಾಲುಗಳ ಶಕ್ತಿ ಕಳೆದುಕೊಳ್ಳಲು ಶುರು ಆಯ್ತು. ಎಂಟಗಾನಹಳ್ಳಿ ನಾಟಿ ಔಷಧಿ, ಲೋಕಲ್ ಡಾಕ್ಟರು, ಎಲ್ಲಾ ಕಡೆ ಅಲೆದಿದ್ದಾಯ್ತು. ಏನೂ ಪ್ರಯೋಜನ ಆಗಲಿಲ್ಲ . ಕೊನೆಗೆ ಚೆನ್ನೈನಲ್ಲಿ ಡಾ.ರಾಜ ಕುಮಾರ್ ಅವರಿಗೆ ಮಂಡಿಚಿಪ್ಪು ಆಪರೇಷನ್ ಮಾಡಿದ ಕಡೆನೂ ತೋರಿಸಿದೆ. ಅವರು ಒಂದು ದೊಡ್ಡ ಆಪರೇಷನ್ ಮಾಡಬೇಕು ಅಂದಿದ್ದಾರೆ.

ಮೂರು ಲಕ್ಷ ಖರ್ಚು ಬರುತ್ತಂತೆ. ಆದರೂ ವಾಸಿಯಾಗೋದು ಶೇಕಡ 50 ಚಾನ್ಸ್ ಎಂದಿದ್ದಾರೆ. ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಆಪರೇಷನ್ ಹೇಗೆ’ ಎಂದೆಲ್ಲ ಸತ್ಯನಾಥ ವಿವರಿಸಿದ. ‘ಸಾವಂತ್ರಿ, ಬ್ಯಾಂಕ್ ರಾಯರಿಗೆ ಕಾಫಿ ಮಾಡಿಕೊಡೋದಿಲ್ಲವೇ?’ ಎಂದ. ಸಾವಂತ್ರಿ ಯಾರು ಎಂಬಂತೆ ಒಮ್ಮೆ ತಿರುಗಿ ನೋಡಿದ ಶ್ರೀನಿವಾಸ.

‘ಸಾರ್ ಅವಳ ಹೆಸರು ಸಾವಂತ್ರಿ ಆದರೆ ದಾಖಲೆಗಳಲ್ಲಿ ಮಾತ್ರ ಅವಳು ಸವಿತಾ’ ಎಂದು ವಿವರಿಸಿದ ಸತ್ಯನಾಥ. ಸವಿತಾ ಅಲಿಯಾಸ್ ಸಾವಂತ್ರಿ ಕಾಫಿ ತಂದು ಕೊಟ್ಟಳು. ಕೆಲಸಕ್ಕೆ ಹೋಗುವ ಧಾವಂತ ಅವಳಲ್ಲಿ ಇದ್ದುದನ್ನು ಕಂಡ ಶ್ರೀನಿವಾಸ ಬಂದ ಕೆಲಸ ಬೇಗ ಮುಗಿಸಿ ಹೊರಡಲು ತೀರ್ಮಾನಿಸಿ, ‘ಏನು ವ್ಯಾಪಾರ ಮಾಡಲು ಉದ್ದೇಶ ಇಟ್ಟುಕೊಂಡಿದ್ದೀರಿ?’ಎಂದು ಕೇಳಿದ.

‘ಒಂದು ಸೆಕೆಂಡ್ ಹ್ಯಾಂಡ್ ಜೆರಾಕ್ಸ್ ಮಷಿನ್ ತೆಗೆಕೊಂಡು ಜೆರಾಕ್ಸ್ ವ್ಯಾಪಾರ ಮಾಡಬೇಕೂ ಅಂತ ಇದೀನಿ. ಹೇಗೂ ಹತ್ತಿರಾನೇ ಇಂಜನಿಯರಿಂಗ್ ಕಾಲೇಜು, ಸ್ಕೂಲು ಎಲ್ಲಾ ಇದೆ , ಜನ ಬರ್ತಾರೆ’ ಎನ್ನುತ್ತ ಸತ್ಯನಾಥ ಸಾವಂತ್ರಿಯೆಡೆ ನೋಡಿದ. ‘ಪದೇ ಪದೇ ಕೂತು ಎದ್ದು ಮಾಡಬೇಕು,ಜೆರಾಕ್ಸ್ ಕೆಲಸ ಕಷ್ಟ ಆಗೋದಿಲ್ಲವೇ ಸತ್ಯನಾಥ್’ ಎಂದು ಅನುಮಾನದಿಂದಲೇ ಪ್ರಶ್ನಿಸಿದ ಶ್ರೀನಿವಾಸ್. ಸತ್ಯನಾಥ ಪೆಚ್ಚುನಗೆ ನಕ್ಕ.

ಸವಿತಾ ‘ಸಾರ್ ಈಗ ನಿಮ್ಮ ಸಲಹೆ ಏನು?’ ಎಂದು ಕೇಳಿದಳು. ‘ನೀವೇ ತೀರ್ಮಾನಿಸಿ , ಏಕೆಂದರೆ ಸಾಲವೂ ನಿಮ್ಮದೇ, ತೀರಿಸು ವವರೂ ನೀವೇ’ ಎಂದ ಶ್ರೀನಿವಾಸ. ‘ಸಾರ್ ರೆಡಿಮೇಡ್ ಬಟ್ಟೆ ವ್ಯಾಪಾರ ಮಾಡಬಹುದಲ್ಲವೇ?  ಗೂ ಸ್ಕೂಲ್ ಹತ್ತಿರ ಇದೆ. ಮುಂದೆ ಸಮವಸ್ತ್ರ ಸರಬರಾಜಿಗೂ ಪ್ರಯತ್ನ ಮಾಡಬಹುದು’ ಎನ್ನುತ್ತಾ ಗಂಡನತ್ತ ನೋಡಿದಳು ಸವಿತಾ.

‘ಅಂಗವಿಕಲ ಕಲ್ಯಾಣ ಇಲಾಖೆಗೆ ವ್ಯಾಪಾರದ ಬದಲಾವಣೆ ಬಗ್ಗೆ ತಿಳಿಸಿ ಅವರ ಒಪ್ಪಿಗೆ ಪಡೆದು ಆ ಬಗ್ಗೆ ಪತ್ರ ಬ್ಯಾಂಕ್‌ಗೆ
ತಂದು ಕೊಡಿ. ಸಬ್ಸಿಡಿಯ ಚೆಕ್ ಬ್ಯಾಂಕಿಗೆ ಬಂದೊಡನೆ ಪೋನ್ ಮಾಡುತ್ತೇನೆ‘ ಹೊರಡುತ್ತಾ ಹೇಳಿದ ಶ್ರೀನಿವಾಸ. ಛಲಗಾರ್ತಿ ಸವಿತಾ ತಾನೇ ಓಡಾಡಿ ಇಲಾಖೆಯಿಂದ ಬದಲಾವಣೆಯ ಪತ್ರವನ್ನೂ , ಸಬ್ಸಿಡಿ ಚೆಕ್ಕನ್ನೂ ತಂದಳು.

‘ನಾಡಿದ್ದು ಮಧ್ಯಾಹ್ನ ಒಂದೂವರೆಗೆ ಪತಿರಾಯರನ್ನು ಬ್ಯಾಂಕಿಗೆ ಕರೆದುಕೊಂಡು ಬಾ. ದಾಖಲೆಗಳಿಗೆ ಸಹಿ ತೆಗೆದುಕೊಳ್ಳಬೇಕು’ ಎಂದ ಶ್ರೀನಿವಾಸ. ‘ಸಾರ್, ನಿಮ್ಮ ಬ್ಯಾಂಕ್ ಮೊದಲ ಮಹಡಿಯಲ್ಲಿದೆ. ಅವರಿಗೆ ಹತ್ತುವುದು ಸಾಧ್ಯವಿಲ್ಲ’ ಎಂದಳು ಸವಿತಾ ಬೇಡುವ ದನಿಯಲ್ಲಿ. ‘ಸತ್ಯನಾಥ ಆಟೋದ ಇರಲಿ. ನೀನು ಬಂದು ತಿಳಿಸು , ನಾನೇ ಅಲ್ಲಿಗೆ ಬರುತ್ತೇನೆ’ ಎಂದ ಶ್ರೀನಿವಾಸ.
ಸವಿತಾ ಪತಿಯನ್ನು ಕರೆದುಕೊಂಡು ಬಂದು ದಾಖಲೆಯ ಸಹಿ ಇತ್ಯಾದಿ ಕೆಲಸ ಮುಗಿಯಿತು. ಬಟ್ಟೆ ಸರಬರಾಜು ಮಾಡುವವ ರಿಂದ ದರಪಟ್ಟಿ ತರಲು ಹೇಳಿದಾಗ ಅದನ್ನೂ ಸವಿತಾಳೇ ಸರಸರ ಓಡಾಡಿ ತಂದಳು. ಸರಕು ಬಂದೊಡನೆ ಅವರ ಮನೆಗೆ ಹೋಗಿ ಪರಿಶೀಲಿಸಿ ಬಂದ. ಮೊದಲ ತಿಂಗಳ ಸಾಲದ ಕಂತನ್ನು ಮಾತಿಗೆ ತಪ್ಪದ ಹಾಗೆ ಸಾಲಖಾತೆಗೆ ಜಮಾ ಮಾಡಿದಳು ಸವಿತಾ.

ವ್ಯವಸ್ಥಾಪಕರ ಬಳಿ ಇದರ ಬಗ್ಗೆ ಹೇಳಿದಾಗ ‘ಒಳ್ಳೆಯ ಸುದ್ಧಿ, ಶ್ರೀನಿವಾಸ್ ಸರ್ಕಾರಿ ಯೋಜನೆಯಲ್ಲಿ ಕೊಟ್ಟ ಸಾಲದ ಮರು ಪಾವತಿಯೆಂದರೆ ದೊಡ್ಡ ವಿಷಯವೇ. ಯಾತಕ್ಕೂ ಆ ಕಡೆ ಸ್ವಲ್ಪ ಗಮನ ಇರಲಿ’ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಮುಂದೆಯೂ ಪ್ರತಿ ತಿಂಗಳೂ ಸಾಲದ ಖಾತೆಗೆ ಕಂತು ಜಮಾ ಆಗುತ್ತಿತ್ತು. ವ್ಯಾಪಾರ ಹೇಗಿದೆ? ಎಂದು ಶ್ರೀನಿವಾಸ ಕೇಳಿದಾಗ ಪರವಾಗಿಲ್ಲ. ಸಾರ್, ಆದರೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದಿದ್ದಳು.

ಸತ್ಯನಾಥನಿಗೆ ವ್ಯಾಪಾರ ಮಾಡಲು ಕಷ್ಟವಾಗುತ್ತಿದೆಯೇ ಎಂದು ಕೇಳಿದಾಗ ‘ಇಲ್ಲ, ಈಗ ಖುಷಿಯಾಗಿದ್ದಾರೆ. ಬೆಳಿಗ್ಗೆ ಮತ್ತೆ ಸಾಯಂಕಾಲ ನಾನೂ ಇರುತ್ತೇನಲ್ಲ ಸಹಾಯಕ್ಕೆ ಎಂದಿದ್ದಳು’ ಆತ್ಮವಿಶ್ವಾಸದ ದನಿಯಲ್ಲಿ. ಅದಾದ ಆರು ತಿಂಗಳಿಗೆ ಶ್ರೀನಿವಾಸನಿಗೆ ಆ ಶಾಖೆಯಿಂದ ವರ್ಗಾವಣೆಯಾಯಿತು.
***

ಒಂದು ವರ್ಷದ ನಂತರ ಶ್ರೀನಿವಾಸನಿಗೆ ತಿಪಟೂರಿನಲ್ಲಿ ಯಾವುದೋ ಮದುವೆಗೆ ಹೋಗಿದ್ದಾಗ ಕಲ್ಯಾಣ ಮಂಟಪದ ಹತ್ತಿರ ನಡೆದು ಹೋಗುತ್ತಿದ್ದ ಸವಿತಾ ಕಂಡಳು. ‘ನೆನಪಿದೆಯೇ ಸವಿತಾ, ಹೇಗಿದೆ ಚಟುವಟಿಕೆಗಳು?’ ಎಂದು ಕೇಳಿದ ಶ್ರೀನಿವಾಸ.
‘ಖಂಡಿತ ನೆನಪಿದೆ ಸಾರ್. ನನ್ನ ಪತಿ ಸ್ವಂತ ಕಾಲ ಮೇಲೆ ನಿಲ್ಲಲು ಎಷ್ಟು ಪ್ರಯತ್ನ ಪಟ್ಟಿದ್ದಿರಿ. ನಿಮ್ಮನ್ನು ಮರೆಯಲು
ಸಾಧ್ಯವೆ?’ಎಂದಳು.

‘ಹೇಗಿzನೆ ಸತ್ಯನಾಥ?’ ಶ್ರೀನಿವಾಸ ವಿಚಾರಿಸಿದ. ‘ಸಾರ್ ಅವರು ತೀರಿಕೊಂಡು ಮೂರು ತಿಂಗಳಾಯಿತು’ ಎಂದು ಉತ್ತರಿಸಿದಳು ಶಾಂತವಾಗಿ. ‘ಅರೇ, ಎಂಥ ಕೆಟ್ಟ ಸುದ್ದಿ ಸವಿತಾ. ಇದ್ದಕ್ಕಿದ್ದಂತೆ ಏನಾಯಿತು ?’ ‘ಸಂಸಾರದ ಸ್ಥಿತಿ ಬಗ್ಗೆ ಸದಾ ತುಂಬಾ ಚಿಂತೆ ಮಾಡುತ್ತಿದ್ದರು. ಕರೋನಾದ ಸೋಂಕು ಸಹ ತಗುಲಿತ್ತು. ಸೋಂಕು ವಾಸಿಯಾದರೂ, ರಕ್ತದೊತ್ತಡ ಏರು ಪೇರಾಗಿ ಇದ್ದಕ್ಕಿದ್ದಂತೆ
ಹಾರ್ಟ್ ಅಟ್ಯಾಕ್ ಆಯ್ತು ಸಾರ್’ ‘ಈಗ ಏನು ಮಾಡ್ತಿದ್ದೀಯಾ? ಸವಿತಾ’ ಕೇಳಿದ.

‘ಇಂದು ಹೊಸ ಆಸ್ಪತ್ರೆಯಲ್ಲಿ ರಿಸೆಪ್ಷನಿಸ್ಟ್ ಕೆಲಸ ಸಿಕ್ಕಿದೆ, ಹೋಗುತ್ತಿದ್ದೇನೆ’ ಎಂದಳು. ಅಂದರೆ ಸಾಲದ ಸ್ಥಿತಿ ಏನಾಗಿರಬಹುದು? ಈಗ ತಾನೇ ಸತ್ಯನಾಥನ ಸಾವಿನ ಸುದ್ಧಿ ಅವಳು ತಿಳಿಸಿರುವಾಗ ಅದರ ಬಗ್ಗೆ ಕೇಳಿ ಬ್ಯಾಂಕ್ ಬುದ್ಧಿ ಪ್ರದರ್ಶಿಸಬೇಡ ಎಂದು ಎಚ್ಚರಿಸಿತು ಶ್ರೀನಿವಾಸನ ಒಳಮನಸ್ಸು.

ಅವನ ಮನಸ್ಸಿನ ಪ್ರಶ್ನೆಯನ್ನು ಅರಿತವಳಂತೆ ಸವಿತಾ ‘ವ್ಯಾಪಾರ ನಿಲ್ಲಿಸಿಬಿಟ್ಟೆ . ಉಳಿದಿದ್ದ ಸರಕನ್ನು ಮಾರಾಟ ಮಾಡಿದವನಿಗೇ ವಾಪಸು ಕೊಟ್ಟೆ . ಜತೆಗೆ ಇನ್ಷೂರೆನ್ಸ್ ಹಣ ಬಂತು. ಎಲ್ಲ ಸೇರಿಸಿ ಬ್ಯಾಂಕ್ ಸಾಲವನ್ನು ತೀರಿಸಿಬಿಟ್ಟು ‘ನೋ
ಡ್ಯೂ ಸರ್ಟಿಫಿಕೇಟ್’ ತೆಗೆದುಕೊಂಡಿದ್ದೇನೆ. ಈಗ ಮನೆಗೆ ಬಂದರೆ ನಿಮಗೆ ಅದನ್ನು ತೋರಿಸುತ್ತೇನೆ’ ಎಂದಳು. ‘ಬೇಡ ಸವಿತಾ ಅದರ ಅಗತ್ಯವಿಲ್ಲ . ನಾನು ನಂಬುತ್ತೇನೆ’ ಎಂದ ಶ್ರೀನಿವಾಸ ಮತ್ತೇನೂ ತೋಚದೆ. ಕೊನೆಗೂ ಸತ್ಯನಾಥನ ಸಾವನ್ನು ಗೆಲ್ಲಲಾಗಲಿಲ್ಲ ಈ ಸಾವಂತ್ರಿಗೆ!