Friday, 13th December 2024

ಬರಲಿದೆ ಸ್ಯಾಟಲೈಟ್‌ ಇಂಟರ್ನೆಟ್‌

ಬಡೆಕ್ಕಿಲ ಪ್ರದೀಪ

ಟೆಕ್‌ ಟಾಕ್‌

ಅಂತರ್ಜಾಲವು ಇಂದಿನ ಯುಗಮಾನದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆ ಕ್ರಾಂತಿಗೆ ಇನ್ನಷ್ಟು ಉತ್ಕರ್ಷ ತುಂಬಿಕೊಡಲು ಭಾರತಕ್ಕೂ ಬರಲಿದೆ ಸ್ಯಾಟಲೈಟ್ ಇಂಟರ್ನೆಟ್!

ವಿಶ್ವದ ಮೂಲೆ ಮೂಲೆಗೆ ಅಂತರ್ಜಾಲವನ್ನು ತಲುಪಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಹಾಗಂತ ಈಗಿರುವ ವ್ಯವಸ್ಥೆಗಳು ಅದನ್ನು ಸಾಧ್ಯವಾಗಿಸಿಲ್ಲವೆಂದೂ ಅಲ್ಲ. ಆದರೂ ಇದಕ್ಕಿಂತ ಇನ್ನಷ್ಟು ಪ್ರಭಾವಶಾಲಿಯಾಗಿ ಹಾಗೂ ಸರಳವಾಗಿ ಇಂಟರ್ನೆಟ್
ಮೂಲೆ ಮೂಲೆಗಳಿಗೂ ತಲುಪುವ ಹಾಗೂ ಈಗಿರುವ ಸ್ಯಾಟಲೈಟ್ ಇಂಟರ್‌ನೆಟ್‌ಗಿಂತ ಇನ್ನಷ್ಟು ವ್ಯಾಪಕವಾಗಿ ಅದನ್ನು ತಲುಪಿಸುವ ಪ್ರಯತ್ನಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು ಕೆಲಸ ಮಾಡುತ್ತಿದ್ದರೂ, ಭಾರತದಲ್ಲಿ ಸ್ಯಾಟಲೈಟ್ (ಉಪಗ್ರಹ) ಇಂಟರ್‌ನೆಟ್ ಕನಸಿಗೆ ಉತ್ತರವಾಗಲು ಹೊರಟಿರುವ ಇಲಾನ್ ಮಸ್ಕ್‌ ಅವರ ‘ಸ್ಟಾರ್ ಲಿಂಕ್’ ಜತೆಗೆ ಇದೀಗ ಹೊಸ ಹೆಸರು ಕೇಳಿ ಬಂದಿದೆ. ಅದುವೇ ‘ವನ್ ವೆಬ್’. ಈ ವನ್ ವೆಬ್‌ನ ಹೊಸ ಒಡೆಯ ಮತ್ತಾರೂ ಅಲ್ಲ, ನಮ್ಮದೇ ದೇಶದ ಸುನಿಲ್ ಮಿತ್ತಲ್ ಒಡೆತನದ ಏರ್ ಟೆಲ್.

ಇನ್ನು ಈ ವರ್ಷದಿಂದ ಅಮೆಜಾನ್ ಕೂಡ ತನ್ನ ಸ್ಯಾಟಲೈಟ್ ಇಂಟರ್‌ನೆಟ್ ವ್ಯವಸ್ಥೆಯನ್ನು ಆರಂಭಿಸುವ ಕುರಿತಾಗಿ ಜಬರ್ದಸ್ತ್‌ ತಯಾರಿಯನ್ನು ನಡೆಸಿದೆ. ಈಗಾಗಲೇ ಭಾರತದಲ್ಲಿ ತನ್ನ ನೆಲೆ ಗಟ್ಟಿ ಮಾಡಿಕೊಂಡಿರುವ ಹಾಗೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ಯೋಚಿಸುತ್ತಿರುವಾಗ ಅದೂ ಕೂಡ ಭಾರತಕ್ಕೆ ಬರುವ ಯೋಚನೆ ಮಾಡದೇ ಇರುವುದು ಅಸಾಧ್ಯದ ಮಾತು.

ಏನಿದು ಸ್ಯಾಟಲೈಟ್ ಇಂಟರ್ನೆಟ್?
ಸ್ಯಾಟಲೈಟ್‌ಗಳನ್ನು ಅಂದರೆ ಉಪಗ್ರಹಗಳನ್ನು ಹಾರಿಸುವ ಮೂಲಕ, ಹೇಗೆ ಟಿವಿ ಚ್ಯಾನಲ್‌ಗಳು ನೇರವಾಗಿ ನಮ್ಮ ಮನೆಗೆ
ಬರುವುದು ಸಾಧ್ಯವಾಗಿದೆಯೋ, ಅದೇ ರೀತಿ ಉಪಗ್ರಹಗಳ ಸಂಪರ್ಕದ ಮೂಲಕ ಇಂಟರ್ನೆಟ್ ಸೇವೆಗಳನ್ನು ಈಗಾಗಲೇ
ಸ್ಯಾಟಲೈಟ್ ಸಂವಹನದ ಮೂಲಕ ನೀಡಲಾಗುತ್ತಿದೆ.

ಆದರೆ ಈಗಿರುವ ಸ್ಯಾಟಲೈಟ್ ಇಂಟರ್ನೆಟ್ ಸೇವೆಯಲ್ಲಿ ಎರಡು ತೊಡಕುಗಳಿವೆ. ಮೊದಲನೆಯದು ಈ ವಿಧಾನದಲ್ಲಿ ಇಂಟರ್ನೆ
ಟ್ ವೇಗವು ಕಡಿಮೆ. ಈಗ ಲಭ್ಯವಿರುವ ಬ್ರಾಡ್‌ಬ್ಯಾಂಡ್ ವೇಗಕ್ಕೆ ಇದನ್ನು ಹೋಲಿಸುವುದು ಸಾಧ್ಯವಿಲ್ಲ. ಇದರೊಂದಿಗೆ
ಮಿಳಿತವಾಗಿರುವ ಇನ್ನೊಂದು ತೊಂದರೆ ಅಂದರೆ ಲೇಟೆನ್ಸಿಯದು, ಅಂದರೆ ಸಂದೇಶವನ್ನು ಕಳುಹಿಸಿ ಅದು ಮತ್ತೆ ನಮ್ಮನ್ನು ತಲುಪುವುದಕ್ಕೆ ತೆಗೆದುಕೊಳ್ಳುವ ಸಮಯ ಇತರೇ ಭೂಮಿಯ ಮೇಲಿನ ಇಂಟರ್ನೆಟ್ ವ್ಯವಸ್ಥೆಗೆ ಹೋಲಿಸಿದರೆ ಜಾಸ್ತಿ.

ಇದಕ್ಕೆ ಮುಖ್ಯ ಕಾರಣ, ಈಗಿರುವ ಉಪಗ್ರಹಗಳು ಸಾವಿರಾರು ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿರುವುದು. ಎರಡನೆಯ ಕಾರಣ, ಈ ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸುವವರೆಗಿನ ಹಾಗೂ ಅದರ ವ್ಯವಸ್ಥೆಯನ್ನು ನೀಡುವುದಕ್ಕೆ ಬೇಕಾಗುವ ಭಾರೀ ಬಂಡವಾಳದಿಂದಾಗಿ ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡ ಬೇಕಾಗು ತ್ತದೆ. ಈ ಕಾರಣಗಳಿಂದಾಗಿ ಈಗಿರುವ ಸ್ಯಾಟಲೈಟ್ ಇಂಟರ್ನೆಟ್ ವ್ಯವಸ್ಥೆಯನ್ನು ಭಾರೀ ಅಗತ್ಯ ಇರುವ, ಖರ್ಚು ಮಾಡಲು ಶಕ್ತಿ ಇರುವವರಷ್ಟೇ ಬೇರೆ ಇಂಟರ್ನೆಟ್ ವ್ಯವಸ್ಥೆ ಸಿಗದ ಪರಿಸ್ಥಿತಿಗಳಲ್ಲಿ ಬಳಸುತ್ತಿದ್ದಾರೆ.

ಆದರೆ ಇದೀಗ ಕೇಳಿ ಬರುತ್ತಿರುವ, ಸ್ಟಾರ್‌ಲಿಂಕ್, ಅಮೆಜಾನ್ ಹಾಗೂ ವನ್ ವೆಬ್‌ನಂತಹ ಕಂಪೆನಿಗಳು ಲಾಂಚ್ ಮಾಡುವ ಸ್ಯಾಟಲೈಟ್ ವ್ಯವಸ್ಥೆಯಲ್ಲಿ ಬಂಡವಾಳ ಅಷ್ಟೇ ಇದ್ದರೂ ಈ ಹಿಂದಿಗಿಂತ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿರುವ ಸಾಧ್ಯತೆ ಇದೆ. ಇನ್ನೂ ಇದು ಆರಂಭದ ಹಂತದಲ್ಲಿದ್ದರೂ, ಈ ಸ್ಯಾಟಲೈಟ್ ಅಂತರ್ಜಾಲ ವ್ಯವಸ್ಥೆಯ ಹಿಂದಿನ ಲೆಕ್ಕಾಚಾರಗಳು ಸ್ವಲ್ಪ ಬೇರೆ ರೀತಿಯದೇ.

ಸಾವಿರಾರು ಉಪಗ್ರಹಗಳು
ಸಾವಿರಾರು ಕಿಲೊಮೀಟರ್ ಎತ್ತರದಲ್ಲಿರುವ ಉಪಗ್ರಹಗಳ ಬದಲಾಗಿ, ಭೂಮಿಗೆ ಹತ್ತಿರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಒಂದು ಅಂದಾಜಿನ ಪ್ರಕಾರ ವನ್ ವೆಬ್ 48 ಸಾವಿರದಷ್ಟು ಉಪಗ್ರಹಗಳನ್ನು ಆಗಸಕ್ಕೆ ಹಾರಿಬಿಡುವ ಯೋಜನೆ ಹೊಂದಿದ್ದರೆ, ಸ್ಪೇಸ್ ಎಕ್ಸ್‌ ವ್ಯಾಪ್ತಿಯಲ್ಲಿ ಬರುವ ಸ್ಟಾರ್ ಲಿಂಕ್ 42 ಸಾವಿರ ಉಪಗ್ರಹಗಳನ್ನು ಕಕ್ಷೆಗೆ ತಳ್ಳಲಿದೆ. ಈ ಉಪಗ್ರಹಗಳು ಸುಮಾರು 550 ಕಿಲೋಮೀಟರ್ ಎತ್ತರದಲ್ಲಿ ಭೂಮಿಯನ್ನು ಸುತ್ತಲಿವೆ.

ಈ ರೀತಿ, ಸಾಕಷ್ಟು ಕಡಿಮೆ ಎತ್ತರದಲ್ಲಿ ಈ ಉಪಗ್ರಹಗಳು ಭೂಮಿಯನ್ನು ಸುತ್ತುವ ಕಾರಣ, ಇವುಗಳ ವ್ಯಾಪ್ತಿ ಕಡಿಮೆ ಇರುವು ದರಿಂದ ಇಷ್ಟೊಂದು ಸಂಖ್ಯೆಯಲ್ಲಿ ಉಪಗ್ರಹಗಳ ಅವಶ್ಯಕತೆ ಇರುವುದು ಒಂದು ವಿಚಾರ. ಆದರೆ ಇವು ಇಷ್ಟು ಹತ್ತಿರವಿರುವು ದರಿಂದಲೇ ಈ ಹಿಂದಿನ ಉಪಗ್ರಹಗಳಿಗೆ ಹೋಲಿಸಿದರೆ ಕಡಿಮೆ ಲೇಟೆನ್ಸಿ ಹಾಗೂ ಹೆಚ್ಚಿನ ವೇಗವನ್ನು ನೀಡಲು ಸಾಧ್ಯ. ಈಗ ಇರುವ ಉಪಗ್ರಹಗಳು ಸಾವಿರಾರು ಕಿಲೋ ಮೀಟರ್ ಎತ್ತರದಲ್ಲಿರುವುದರಿಂದ ಉದ್ಭವಿಸಿರುವ ಸಮಸ್ಯೆಗಳನ್ನು, ಈ ಹೊಸ ತಲೆಮಾರಿನ, ಕಡಿಮೆ ಎತ್ತರದಲ್ಲಿ ಹಾರಾಡುವ ಉಪಗ್ರಹಗಳು ದೂರಮಾಡಲಿವೆ.

ಇನ್ನು ಇಷ್ಟು ದೊಡ್ಡ ಮಟ್ಟದಲ್ಲಿ ವ್ಯವಸ್ಥೆಯನ್ನು ಮಾಡುವುದರ ಮೂಲಕ ಇಷ್ಟು ದಿನ ಬ್ರಾಡ್ ಬ್ಯಾಂಡ್, ಇಂಟರ್ನೆಟ್ ಅಥವಾ ಇನ್ನಿತರ ಸಂವಹನದ ಕನಸನ್ನೂ ಕಾಣದ ಮೂಲೆ ಮೂಲೆಯ ಸ್ಥಳಗಳಿಗೂ ತಲುಪುವ ಮೂಲಕ ಇಡೀ ವಿಶ್ವವನ್ನೇ ಮುಟ್ಟುವ ಪ್ರಯತ್ನ ಮಾಡಲಿವೆ.

ಇದೀಗಾಗಲೇ ಸ್ಟಾರ್‌ಲಿಂಕ್ ಈ ವರ್ಷವೇ ಸಾವಿರಕ್ಕೂ ಅಧಿಕ ಉಪಗ್ರಹಗಳನ್ನು ಲಾಂಚ್ ಮಾಡಿದ್ದು, ಉತ್ತರ ಅಮೆರಿಕಾ ಹಾಗೂ ಕೆನಡಾದ ಕೆಲ ಭಾಗಗಳಲ್ಲಿ ಪ್ರಾಯೋಗಿಕವಾಗಿ ಇಂಟರ್ನೆಟ್ ಸೇವೆಗಳನ್ನು ನೀಡಲು ಆರಂಭಿಸಿದೆ. 2020-21 ರ ಕೊನೆಯ ವೇಳೆಗೆ ಭಾರತದಲ್ಲೂ ತನ್ನ ಇಂಟರ್ನೆಟ್ ಸೇವೆಗಳನ್ನು ನೀಡುವ ಇರಾದೆಯನ್ನು ಸ್ಟಾರ್ ಲಿಂಕ್ ವ್ಯಕ್ತಪಡಿಸಿದ್ದು, ಈ ಕುರಿತಾಗಿ ಟ್ರಾಯ್ ಟೆಲೆಕಾಮ್ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ)ಗೆ ಉಪಗ್ರಹ ಇಂಟರ್ನೆಟ್ ಸೇವೆಗೆ ಅನುಮತಿ ನೀಡುವ ವ್ಯವಸ್ಥೆ ರೂಪಿಸು ವಂತೆ ಕೇಳಿಕೊಂಡು ಪತ್ರ ಬರೆದಿದೆ.

ಏರ್‌ಟೆಲ್ ಕನಸು
ವನ್ ವೆಬ್ ಅನ್ನುವ ಸಂಸ್ಥೆಯ ಹೊಸ ಒಡೆಯನಾದ ನಂತರ ಇದೀಗ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಏರ್‌ಟೆಲ್‌ನ ಹೊಸ
ಕನಸಾಗಿ ರೂಪುಗೊಂಡಿದ್ದು, ಮುಂದಿನ ವರ್ಷ ಭಾರತದಲ್ಲಿ ತನ್ನ ಸೇವೆಗಳನ್ನು ನೀಡುವ ಕುರಿತು ಚಿಂತನೆ ನಡೆಸಿದೆ. ಆ ಕುರಿತು ಸಾಕಷ್ಟು ಪ್ರಯತ್ನಗಳು ಸಹ ಆರಂಭಗೊಂಡಿವೆ.

ಭಾರತದಲ್ಲಿರುವ 130 ಕೋಟಿಯಷ್ಟು ಜನರನ್ನು ತಲುಪುವುದಕ್ಕೆ ಇನ್ನೂ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಸಾಧ್ಯವಾಗಿಲ್ಲ. ಮೊಬೈಲ್ ಬ್ರಾಡ್‌ಬ್ಯಾಂಡ್ ಒಂದೆಡೆ ಉತ್ತಮ ಸಂಖ್ಯೆಯಲ್ಲಿ ವೃದ್ಧಿಯಾಗಿದ್ದರೂ ವೇಗದ, ನಂಬಿಕೆಯ ಇಂಟರ್ನೆಟ್ ಸೇವೆಯನ್ನು ನೀಡುವ ವಯರ್ಡ್ ಬ್ರಾಡ್‌ಬ್ಯಾಂಡ್ ಇನ್ನೂ ಕೇವಲ ಎರಡು ಕೋಟಿ ಆಜುಬಾಜಿನ ಸಂಪರ್ಕ ಹೊಂದಿರುವುದರಿಂದ, ಅಲ್ಲಿನ್ನೂ ಸಾಕಷ್ಟು ಅವಕಾಶಗಳಿವೆ. ಆ ಖಾಲಿ ಜಾಗವನ್ನು ತುಂಬಿಸುವ ಸಾಧ್ಯತೆಗಳಿರುವುದರಿಂದ ಏರ್‌ಟೆಲ್ ಹಾಗೂ ಬ್ರಿಟಿಷ್ ಸರಕಾರ ತಲಾ 42.2 ಶೇಕಡಾ ಪಾಲುದಾರಿಕೆ ಹೊಂದಿರುವ ವನ್‌ವೆಬ್ ಆ ನಿಟ್ಟಿನಲ್ಲಿ ತನ್ನ ಗುರಿಯಿಟ್ಟಂತೆ ತೋರುತ್ತಿದೆ.