ಮಹಾದೇವ ಬಸರಕೋಡ
ನಮ್ಮ ಹಲವು ದೌರ್ಬಲ್ಯತೆಗಳಲ್ಲಿ ಕ್ಷಣ ಮಾತ್ರದ ತೃಪ್ತಿಗಾಗಿ ಹಪಹಪಿಸುವ ಗುಣವೂ ಒಂದು. ಬದುಕಿನ ಒಂದು ಯಾವುದೋ ಘಟ್ಟದಲ್ಲಿ ಒದಗಿ ಬಂದ ಅವಕಾಶವನ್ನು ಉನ್ನತ ಮಟ್ಟದ ಚಿಂತನೆಯಿಂದ ಬಳಸಿಕೊಳ್ಳುವ ಬದಲು ಅನಗತ್ಯವಾಗಿ ದುಡುಕಿ
ಬಿಡುತ್ತೇವೆ.
ತಕ್ಷಣಕ್ಕೆ ಯಾವುದೋ ಒಂದು ಭ್ರಮೆಗೆ ಒಳಗಾಗಿ ಸಂಯಮ ತೋರದೇ ನಿರಂತರವಾಗಿ ಸಲ್ಲದ ಪ್ರತಿಕ್ರಿಯೆ ನೀಡಲು ತೊಡಗು ತ್ತೇವೆ. ಆ ಕ್ಷಣಕ್ಕೆ ಆವರಿಸಿದ ಸಂತೋಷದ ಕ್ಷಣದಲ್ಲಿ ಮುಳುಗು ಹಾಕುತ್ತೇವೆ. ಅದರಿಂದ ಹೊರಬರದೇ, ಅಲ್ಲಿಯೇ ಸ್ಥಗಿತಗೊಂಡು ವಿಫಲರಾಗುತ್ತೇವೆ. ನಮ್ಮ ಒಂದಷ್ಟು ಒರಟುತನದ ವರ್ತನೆಗಳು, ಆಕ್ರಮಣದ ಸ್ವಭಾವ, ಆಡಂಬರದ ಮಾತುಗಳು, ಎಲ್ಲವೂ ನನಗೆ ತಿಳಿದಿದೆ ಎನ್ನುವ ಅಹಂ, ಮತ್ತೊಬ್ಬರಿಗೆ ಏನೂ ತಿಳಿದಿದಲ್ಲವೆನ್ನು ತಾತ್ಸಾರ ಕ್ಷುಲ್ಲಕವಾದ ಸಂತೋಷವನ್ನು ಅನುಭವಿ ಸಲು ನಮ್ಮನ್ನು ಪ್ರೇರೇಪಿಸುತ್ತವೆ. ದೊರೆತ ಅವಕಾಶವು ಮುಂದಿನ ದಿನಗಳಲ್ಲಿ ತಂದು ಕೊಡುವ ಚಿರಂತನ ಸಂತೋಷದ ಕುರಿತು ಯೋಚಿಸಿ ಮುನ್ನಡಿ ಇಡದೇ ದುಃಖಕ್ಕೀಡಾಗುತ್ತೇವೆ.
ಅಗಸನೊಬ್ಬನಿಗೆ ನದಿಯಲ್ಲಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಹೊಳೆಯುತ್ತಿರುವ ಕಲ್ಲೊಂದು ದೊರಕಿತು. ಅದು ಏನೆಂದು ತಿಳಿಯದೇ ಹೋದರೂ ತನ್ನ ಕತ್ತೆಯ ಕೊರಳಿಗೆ ಹಾರದಂತೆ ಕಟ್ಟಿ ಸಂತಸ ಪಟ್ಟನು. ಬಟ್ಟೆೆಗಳನ್ನು ಒಣಗಿಸಿ ಮನೆಗೆ ಕತ್ತೆಯ ಮೇಲೆ ಹೇರಿಕೊಂಡು ಹೊರಟ. ದಾರಿಯಲ್ಲಿ ಹೋಗುವಾಗ ಕತ್ತೆಯ ಕೊರಳಲ್ಲಿ ಹೊಳೆಯುವ ಕಲ್ಲಿರುವುದನ್ನು ಅಕ್ಕಸಾಲಿಗನೊಬ್ಬ ಗಮನಿಸಿದ.
‘ನೀನು ಕತ್ತೆಯ ಕೊರಳಲ್ಲಿ ಕಟ್ಟಿರುವ ಕಲ್ಲನ್ನು ನನಗೆ ಕೊಟ್ಟರೆ ಒಂದು ರೂಪಾಯಿ ಕೊಡುವೆ’ ಎಂದು ಅಗಸನಿಗೆ ಹೇಳಿದ. ಅಗಸನಿಗೆ ಅದೇಕೋ ಒಪ್ಪಿತವಾಗಲಿಲ್ಲ. ಅವನು ನಿರಾಕರಿಸಿದ. ಅಕ್ಕಸಾಲಿಗ ‘ಐದು ರೂಪಾಯಿ ಕೊಡುವೆ, ನನಗೆ ಕಲ್ಲನ್ನು ಕೊಡು’ ಎಂದು ಕೇಳಿದ. ಮತ್ತೆ ಅಗಸ ನಿರಾಕರಿಸಿದ. ಅಕ್ಕಸಾಲಿಗೆ ಒಂದೊಂದೇ ರೂಪಾಯಿ ಹೆಚ್ಚಿಸುತ್ತ ಚೌಕಾಶಿ ಮಾಡತೊಡ ಗಿದ.
ಅಲ್ಲಿಯೇ ಹಾದು ಹೋಗುತ್ತಿದ್ದ ಮತ್ತೊಬ್ಬ ಅಕ್ಕಸಾಲಿಗ ಇವರ ಸಂಭಾಷಣೆಯನ್ನು ಗಮನಿಸಿ ಹತ್ತಿರಕ್ಕೆ ಬಂದ. ಅವನು ‘ಒಂದು ಸಾವಿರ ರೂಪಾಯಿ ಕೊಡುತ್ತೇನೆ’ ಎಂದು ಕೇಳಿದ. ತಕ್ಷಣವೇ ಅಗಸ ಅವನಿಗೆ ಹೊಳೆಯುವ ಕಲ್ಲನ್ನು ಕೊಟ್ಟು ಬಿಟ್ಟ. ಮೊದಲಿನ ಅಕ್ಕಸಾಲಿಗ ‘ನೀನೊಬ್ಬ ಹುಚ್ಚ, ಅದು ನಿಜವಾದ ವಜ್ರ. ಅದು ಲಕ್ಷಾಂತರ ಬೆಲೆ ಬಾಳುತ್ತದೆ. ನೀನು ಮೋಸ ಹೋದೆ’ ಎಂದ.
ಅಗಸ ಹೇಳಿದ, ‘ನನ್ನ ಪಾಲಿಗೆ ಅದು ಈಗಲೂ ಕಲ್ಲು ಮಾತ್ರ. ಅದನ್ನು ಒಂದು ಸಾವಿರ ರೂಪಾಯಿಗಳಿಗೆ ಮಾರಿದ್ದರಿಂದ ನನಗೇನೂ ಬೇಸರವೂ ಇಲ್ಲ, ನಷ್ಟವೂ ಇಲ್ಲ. ಆದರೆ ನಿನಗೆ ಅದರ ಬೆಲೆ ಗೊತ್ತಿದ್ದೂ ತುಂಬಾ ಚೌಕಾಶಿ ಮಾಡುವುದಲ್ಲಿಯೇ ಕಾಲಹರಣ ಮಾಡಿ ವ್ಯರ್ಥವಾಗಿ ಕಳೆದುಕೊಂಡೆಯಲ್ಲ. ಅದರಿಂದ ನಿನಗೆ ನಷ್ಟವಾಯಿತು ಅಲ್ಲವೇ?’ ಎಂದು ಕೇಳಿದಾಗ ಅಕ್ಕಸಾಲಿಗನಿಗೆ ತನ್ನ ತಪ್ಪಿನ ಅರಿವಾಗಿತ್ತು.
ನಾವೂ ಹೀಗೆಯೇ ಹಲವಾರು ಬಾರಿ ಬುದ್ಧಿಹೀನರಾಗಿ ಕ್ಷಣಿಕ ತೃಪ್ತಿಗಾಗಿಯೇ ಹಾತೊರೆಯುತ್ತೇವೆ. ವಿವೇಚನೆಯನ್ನು ಕಳೆದು ಕೊಂಡು ಮೂರ್ಖರಂತೆ ವರ್ತಿಸುತ್ತೇವೆ. ನಮ್ಮ ಬುದ್ಧಿವಂತಿಕೆಯನ್ನು ನಮ್ಮ ಸೋಲಿಗಾಗಿ ಬಳಸಿಕೊಳ್ಳುತ್ತೇವೆ. ನಾವು ಇಂತಹ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬರುವ ಜಾಣತನ ತೋರಬೇಕು. ಮನಸ್ಸಿನ ಮೇಲೆ ಹಿಡಿತವನ್ನು ತಂದುಕೊಳ್ಳಬೇಕು.