Saturday, 14th December 2024

ಹುಡುಕಾಟವೇ ಪ್ರಕೃತಿಧರ್ಮ

ಡಾ.ಭಾರತಿ ಮರವಂತೆ

ಬದುಕು ಎನ್ನುವ ಪದದಲ್ಲಿಯೇ ಕ್ರಿಯಾಶೀಲತೆಯಿದೆ. ನಿರಂತರ ಚಲನಶೀಲತೆಯ ಈ ಪ್ರಕ್ರಿಯೆಯ ಒಡಲನ್ನು ಹುಡುಕಿದರೆ ಕಲಾವಿದನೊಬ್ಬ ಗೋಚರಿಸುತ್ತಾನೆ. ಪ್ರಕೃತಿಯ ಬಸಿರಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗಳು ಆಹಾರಕ್ಕಾಗಿ ವಸತಿಗಾಗಿ, ನಿರಂತರ ಶ್ರಮದ ಹುಡುಕಾಡುವುದು ಸರ್ವೇ ಸಾಮಾನ್ಯ.

ಬೀಜವೊಂದು ತನ್ನ ಜೀವಿತದಲ್ಲಿ ಒಂದು ಹಂತದ ಕ್ರಿಯೆ ಮುಗಿಸಿ ಬೆಳಕು ಗಾಳಿ ನೀರು ಇತ್ಯಾದಿಗಳ ಹುಡು ಕಾಟದ ಪಯಣ ನಿತ್ಯ ಮತ್ತು ನಿರಂತರ. ನಮ್ಮಲ್ಲಿಯೂ ಮಾಹಿತಿ ಬೇಕಾದಾಗ ಸಿಗುವತನಕ ಛಲ ಬಿಡದೇ ಹುಡುಕುವುದು, ಸಿಕ್ಕರೆ ದಕ್ಕೀತು ಸಿಗದಿದದ್ದರೆ ಇಲ್ಲವಾದೀತು ಎನ್ನುವ ಪಯಣ ಇನ್ನೊಂದು ರೀತಿಯ ಬದುಕು. ಈ ನೆಲಮೂಲ ಸಂಪ್ರದಾಯ ಸಂಸ್ಕೃತಿಗಳನ್ನು ತಿಳಿಯಲು ಹಿರಿಯರನ್ನು ಅವಲಂಬಿಸಿಯೇ ಪರಂಪರೆಯ ದಾರಿಯನ್ನು ಹುಡುಕುವ ಕಾಲವೊಂದಿತ್ತು.

ಅಕ್ಷರ ಸಂಸ್ಕೃತಿಯಲ್ಲಿ ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನದ ಯುಗದ ಅತೀ ವೇಗದ ಹುಡಕಾಟವಂತೂ ದೇಶ ವಿದೇಶಕ್ಕೆ ಕ್ಷಣಾರ್ಧದಲ್ಲಿ ಕೊಂಡೊಯ್ದು ಗೂಗಲ್, ಯುಟ್ಯೂಬ್‌ಗೆ ತಂದು ನಿಲ್ಲಿಸುತ್ತದೆ. ನಿತ್ಯವೂ ನೂತನ ಬದುಕಿನ ಹೊಸ ಹುಡುಕಾಟ ಅದೇ ತಡಕಾಟ ಇಂದಿನ ಸಂಸ್ಕೃತಿಯಾಗಿದೆ. ಮನುಷ್ಯನ ಇಂದಿನ ಬದುಕು ಪ್ರಕೃತಿಧರ್ಮಕ್ಕೆ ವಿರುದ್ಧವಾಗಿದೆ ಎನ್ನುವುದನ್ನು ಕೊರೊನಾದಂತಹ ಸಮಸ್ಯೆಯಲ್ಲಿ ತಿಳಿದಿದ್ದೇವೆ. ಪ್ರಕೃತಿಯ ಜೀವಂತಿಕೆ ಚೈತನ್ಯದ ಚಿಲುಮೆಯ ಸೂಕ್ಷ್ಮತೆಗಳನ್ನು ಗ್ರಹಿಸಿದಾಗ ಮನುಕುಲವನ್ನು ಹೊರತುಪಡಿಸಿ ಎಲ್ಲಾ ಜೀವಿಗಳೂ ತಮ್ಮ ಆಹಾರ, ವಸತಿಯನ್ನು ತಾವೇ ಹುಡುಕಿಕೊಳ್ಳುತ್ತವೆ.

ಆ ಕ್ರಿಯೆಯಲ್ಲಿ ಅರಳುವ ಸಂತಸ, ಲವಲವಿಕೆ, ಉತ್ಸಾಹವೇ ಅದ್ಭುತ ಶಕ್ತಿಯ ರಹಸ್ಯವಾಗಿದೆ. ಮರಗಳ ಕೊಂಬೆಗಳನ್ನು ಕಡಿದು ಕಡಿದು ಹಾಕಿದರೂ ಮತ್ತೆ ಮತ್ತೆ ಮಣ್ಣು, ನೀರು, ಗಾಳಿ, ಬೆಳಕನ್ನು ಹುಡುಕಿಕೊಂಡು ಟಿಸಿಲೊಡೆಯುತ್ತವೆ. ಬಳ್ಳಿಗಳನ್ನು ಕತ್ತರಿಸಿದಷ್ಟೂ ಚಿಗುರೊಡೆಯುತ್ತವೆ. ಬೀಜಗಳನ್ನು ಹೊಸಕಿ ಹೊಸಕಿ ಹಾಕಿದಷ್ಟೂ ಎಲ್ಲೋ ಒಂದೆಡೆ ಚುಕ್ಕೆಯಷ್ಟು ಜಾಗ ಹುಡುಕಿ ಮೊಳಕೆಯೊಡೆಯುತ್ತವೆ. ಕತ್ತಲಲ್ಲಿ ಹುಟ್ಟಿದ ಸಸಿ ಸೂರ್ಯನ ಬೆಳಕನ್ನು ಹುಡುಕುವತ್ತ ಅದರ ಪಯಣ ವಾಗಿರುತ್ತದೆ. ಹೂವುಗಳು, ಎಲೆಗಳು, ಬಳ್ಳಿಗಳು, ಹಣ್ಣುಗಳು ಅಬ್ಬಬ್ಬಾ ಈ ಪ್ರಕೃತಿಯೊಳಗೆ ನಡೆಯುವ ಬಣ್ಣಗಳ ಹೊಂದಾಣಿಕೆಯ ಕ್ರೀಯಾಶೀಲತೆಯ ಬದುಕು ಬಿಡಿಸಲಾಗದ ಕಗ್ಗಂಟಾಗಿದೆ.

ಅಸಂಖ್ಯ ಬಣ್ಣಗಳು
ಅದೆಷ್ಟು ಬಣ್ಣಗಳು, ಅದೆಷ್ಟು ಚಿತ್ತಾರಗಳು, ಅದೆಷ್ಟು ರುಚಿಗಳು ದಿನೇ ದಿನೇ ಕ್ರಿಯಾಶೀಲತೆಯಿಂದಲೇ ಬದುಕುವ ಈ ಪ್ರಕೃತಿ ಧರ್ಮದ ಚಲನಶೀಲತೆಯ ಹಿಂದಿರುವ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ಕತ್ತಲೆ ಹಿಂದೆ ಸರಿಯುವಾಗ ಕೋಳಿ ಕೂಗಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತವೆ. ಮಳೆ, ಚಳಿ, ಗಾಳಿ ಅದ್ಭುತ ಪ್ರಕ್ರಿಯೆಯ ಬದಲಾವಣೆ ನಿತ್ಯವೂ ಹೊಸ ಸಂದೇಶವನ್ನು ಹೊತ್ತು ತರುತ್ತವೆ. ಬೆಳ್ಳಂಬೆಳಿಗ್ಗೆ ಆಹಾರ ಹುಡುಕುತ್ತಾ ಹೊರಡುವ ಪಟ ಪಟನೆ ಹಾರುವ ಕೀಟಗಳು, ದುಂಬಿಗಳು, ಪಕ್ಷಿಗಳು, ಪ್ರಾಣಿಗಳು, ಹರಿಯುವ ನದಿ, ಹಸಿಬಿಸಿಯಾದ ಮಣ್ಣು, ಅದರಲ್ಲಿರುವ ಜೀವಂತಿಕೆ, ಸೃಜನಶೀಲತೆ!

ಸ್ತಬ್ಧತೆಯೆಂಬ ಪದವೇ ಪ್ರಕೃತಿಗೆ ಹೊಸದು. ನಮ್ಮ ಮನೆಯ ಕಂಪೌಂಡ್ ಮೇಲೆ ಪುಟ್ಟ ಪುಟ್ಟ ಗುಬ್ಬಿಗಳು ನಿತ್ಯ ಅತಿಥಿಗಳು. ಒಂದು ದಿನ ನನ್ನ ಬೆಳಗು ತಡ ವಾದರೆ ಹಕ್ಕಿ ಗಳು ಚಿಲಿ ಪಿಲಿಗುಟ್ಟಿ ಒಳಧ್ವನಿಯನ್ನು ಎಚ್ಚರಿಸುತ್ತಿದ್ದವು. ಪರಿಸರದಲ್ಲಿ ತಮ್ಮ ತಮ್ಮ ಬದುಕನ್ನು ತಾವೇ ವ್ಯವಸ್ಥಿತವಾಗಿ ಹುಡುಕಾಟ ದಿಂದಲೇ ಕಟ್ಟಿ ಕೊಳ್ಳುವ, ಆಹಾರ ಸಿಕ್ಕಿದಾಗ ಹೊಟ್ಟೆ ತುಂಬಿಸಿ ಕೊಂಡು ಮತ್ತೆ ಮತ್ತೆ ಹುಡುಕುವುದು ಪ್ರಕೃತಿ ಧರ್ಮ. ಜಾತಿ- ಮತ-ಪಂಥ ದೇಶದ ಗಡಿಯನ್ನೂ ಮೀರಿ ಸಾರ್ವ ಕಾಲಿಕ ಮೌಲ್ಯ ವನ್ನು ಬಿತ್ತರಿಸುತ್ತಾ ವ್ಯವಸ್ಥಿತವಾದ ಬದುಕನ್ನು ರೂಪಿಸಿಕೊಂಡ ಈ ಪ್ರಕೃತಿಯ ಕ್ರೀಯಾಶೀಲತೆಯ ಜಾಗತಿಕ ಸಂದೇಶವನ್ನು ಅನುಕರಿಸುವ ಮಾದರಿ ಮನುಕುಲಕ್ಕಿರುವ ಸವಾಲಾಗಿದೆ.

ಎರಡು ಹಕ್ಕಿಗಳು
ಅದೊಂದು ದಿನ ಮನೆಯ ಕಂಪೌಂಡ್ ಮೇಲೆ ಪುಟ್ಟದಾದ ಎರಡು ಬಣ್ಣಬಣ್ಣದ ಹಕ್ಕಿಗಳು ಅವಸರವಸರದಿಂದ ಹುಡಕಾಟ ದಲ್ಲಿದ್ದವು. ಪಟ ಪಟನೆ ಹಾರುತ್ತಾ,
ಕುಪ್ಪಳಿಸುತ್ತಾ ಅವುಗಳಲ್ಲಿದ್ದ ಸಡಗರ ಸಂಭ್ರಮ ಹೇಳತೀರದು. ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ರಭಸದ ಬಿರುಗಾಳಿ, ಕತ್ತಲಾಗುತ್ತಿರುವ ಸಂಕಟಗಳ ನಡುವೆಯೂ ಅದೇನು ಆತ್ಮವಿಶ್ವಾಸ ಧೃಢತೆ ನಿಶ್ಚಲ ಮನೋಸ್ಥಿತಿಯ ಬದುಕು ನನ್ನನ್ನು ಎಚ್ಚರಿಸಿದವು. ಅಷ್ಟರಲ್ಲಿ ಉದ್ದನೆಯ ಹಸಿರು ಬಣ್ಣದ ಹುಲ್ಲಿನ ಬಾಲ ದಂತಿರುವ ಒಂದು ಪುಟ್ಟ ಹಕ್ಕಿ ಹಾರಿ ಬಂತು.

ಹಕ್ಕಿಗಿಂತ ಅದರ ಬಾಲ ಮಾರುದ್ದವಾಗಿದೆಯಲ್ಲಾ ಎಂದು ಕಣ್ಣರಳಿಸಿ ನೋಡಿದಾಗ ಬಾಯಲ್ಲಿ ಚಿತ್ತಾರವಿರುವ ಉದ್ದನೆಯ ಹಸಿರು ಬಣ್ಣದ ಹುಲ್ಲೊಂದಿತ್ತು. ಇನ್ನೊಂದೆರಡು ದಿನದ ಬಳಿಕ ಅದೇ ಹಕ್ಕಿ ಕಂಪೌಂಡ್ ಮೇಲೆ ಕುಳಿತು ಮನೆ ಒಳಗೆ ಇಣುಕುತ್ತಿತ್ತು. ಅಕ್ಕಿಕಾಳು ಹಾಕಿದರೆ ತಿನ್ನೋದು ಮತ್ತೆ ಮನೆ ಒಳಗೆ ಇಣುಕುವ ಹುಡುಕುವ ಕ್ರಿಯೆ ಇನ್ನಷ್ಟು ಕುತೂಹಲವುಂಟು ಮಾಡಿತು. ನನ್ನ ಮೌನ ನೋಡಿದ ಹಕ್ಕಿಗೆ ಇನ್ನಷ್ಟು ಧ್ಯೆರ್ಯದೊಂದಿಗೆ ಕೊಕ್ಕಿನಲ್ಲಿ ಉದ್ದನೆಯ ಹುಲ್ಲನ್ನು ಕಚ್ಚಿ ಕಿಟಿಕಿ ಮೇಲೆ ತಂದು ತಂದು ತನ್ನದೇ ಒಂದು ಕೌಶಲ್ಯದ ಚಿತ್ತಾರದಲ್ಲಿ ಇಡತೊಡಗಿತು.

ಪುಟ್ಟ ಹಕ್ಕಿಯ ಈ ಹೋರಾಟದ ಸಂಘರ್ಷದ ಸುಳಿಯ ಬದುಕು ಸಂದೇಶ ವೊಂದನ್ನು ಬಿತ್ತರಿಸುವಂತಿತ್ತು. ಅಂತಿಮದಲ್ಲಿ ಕಿಟಕಿಯ ಸಂಧಿಯಲ್ಲಿ ಹಕ್ಕಿಯ ಆಶ್ರಯದ ಸುಂದರ ಚಿತ್ತಾರದ ವಸತಿ ನಿರ್ಮಾಣಗೊಂಡು ಇನ್ನೊಂದೆರಡು ಹಕ್ಕಿಗಳೂ ಬರತೊಡಗಿದವು. ಈ ಗೂಡು ಕಟ್ಟುವ ಪ್ರಕ್ರಿಯೆ ಎರಡು ಗಂಟೆಗಳ ತನಕ ಸಾಗಿತ್ತು. ಪುರ್ರನೆ ಹಾರಿ ಗದ್ದೆಗೆ ಹೋಗೋದು iತ್ತೆ ಬಂದು ಸಂದಿನಲ್ಲಿ ಏನೋ ಹುಡುಕಾಟದ ಬಳಿಕ ಒಂದು ನಿರ್ಧಾರಕ್ಕೆ ಬಂದು ಮತ್ತೆ ಕೊಕ್ಕಿನಲ್ಲಿ ಉದ್ದನೆಯ ಹುಲ್ಲು ಗಳನ್ನು ಕಚ್ಚಿ ತಂದು ಸಂದಿನಲ್ಲಿ ಇಡುವ ಈ ಕೆಲಸ ಹದಿನೈದು ಬಾರಿ ನಡೆದ ಕ್ರಿಯೆಯಾಗಿತ್ತು.

ಈ ಹುಲ್ಲುಗಳು ಹಕ್ಕಿಗಳಿಗಿಂತ ಉದ್ದವಾಗಿದ್ದು ಮುಟ್ಟಿ ನೋಡಿದಾಗ ದೊರಗಾಗಿದ್ದು ಗಟ್ಟಿಯಾಗಿದ್ದವು. ನನ್ನ ಕೈ ತಾಗಿ ಹುಲ್ಲೊಂದು ಕೆಳಕ್ಕೆ ಬಿತ್ತು. ಅದನ್ನೆತ್ತಿ ಇದ್ದಲ್ಲೇ ಇಟ್ಟೆ. ಒಂದಿಷ್ಟು ಹುಲ್ಲಗಳನ್ನು ಹಾಗೆಯೇ ಬಿಟ್ಟು ನಾನಿಟ್ಟ ಹುಲ್ಲನ್ನು ಮಾತ್ರ ಕೆಳಕ್ಕೆಸೆದವು. ಅದೇ ಜಾಗದಲ್ಲಿ ಇನ್ನೊಂದು ಹುಲ್ಲನ್ನು ತಂದಿಟ್ಟವು. ಹಕ್ಕಿಗಳಲ್ಲಿರುವ ಸೂಕ್ಷ್ಮ ಗ್ರಹಿಕೆಯ ಹುಡುಕಾಟ ಪ್ರಕೃತಿಯ ವೈವಿಧ್ಯತೆ ಗಳಲ್ಲೊಂದಾಗಿತ್ತು. ಆ ಹುಲ್ಲುಗಳು ಒಂದೇ ಅಳತೆ ಒಂದೇ ಗಾತ್ರ ಎಲ್ಲವೂ ಕಡು ಹಸಿರು ಬಣ್ಣ ಅದರಲ್ಲಿ ವರ್ಣಮಯ ಚಿತ್ತಾರಗಳು. ನಾವೇ ಅಳತೆಪಟ್ಟಿ ಹಿಡಿದು ಕತ್ತರಿಸಿ ತಂದರೂ ಅಂತಹ ಹುಲ್ಲುಕಡ್ಡಿ ಗಳು ಸಿಗುತ್ತಿರಲಿಲ್ಲ.

ಸೃಜನಶೀಲ ಪಾಠ
ಹುಲ್ಲುಗಳನ್ನು ತಂದು ತಂದು ಜೋಡಿಸುವುದು, ಆ ಹುಲ್ಲು ಆಯತಪ್ಪಿ ಬಿದ್ದಾಗ ಮತ್ತೆ ಹೊಸ ಹುಲ್ಲನ್ನು ಜೋಡಿಸುವುದು ಎರಡು ಗಂಟೆಗಳ ಕಾಲ ಚಾಪೆಯಂತೆ ನೇಯ್ದಿದ್ದವು. ಹಕ್ಕಿಗಳ ಈ ಹುಡುಕಾಟದಲ್ಲೊಂದು ಸೃಜನಶೀಲತೆಯ ಕಲಾತ್ಮಕ ಪಾಠ ವೊಂದಿತ್ತು. ಮಳೆ, ಗಾಳಿ, ಮನುಷ್ಯರ ಕೆಟ್ಟ ವರ್ತನೆಯ ಸಂಘ ರ್ಷದ ನಡುವೆಯೂ ಗೂಡು ಕಟ್ಟಿಯೇ ತೀರುತ್ತೇನೆ ಎನ್ನುವ ಹಕ್ಕಿಗಳ ಛಲ ಅದ್ಭುತ ಕಲಾತಪಸ್ವಿಯನ್ನು ನೋಡಿದಂತಾಯ್ತು.

ಮತ್ತೆ ಮತ್ತೆ ಮರಳಿ ಯತ್ನಿಸು ಎನ್ನುವ ಅವುಗಳ ಉತ್ಸಾಹ ತಾಳ್ಮೆ, ಧೃಢತೆ ಆತ್ಮವಿಶ್ವಾಸ ನಮ್ಮ ಸ್ಥಬ್ಧ ಬದುಕಿಗೆ ಸಂಜೀವಿನಿಯಾಗಿತ್ತು. ಪುಟ್ಟ ಹಕ್ಕಿಗಳ ಈ ಕೆಲಸದ ಹುಡುಕಾಟವೇ ಪ್ರಕೃತಿಧರ್ಮ ಎನ್ನುವ ಜಾಗತಿಕ ಸಂದೇಶವನ್ನು ಮತ್ತೆ ಮತ್ತೆ ಹೇಳುತ್ತಿದ್ದವು. ಪ್ರಕೃತಿಯಲ್ಲಿನ ಗಾಳಿ, ಬೆಳಕು, ನೀರು, ಮಣ್ಣು, ಜೀವಿ ಗಳ ಹುಡುಕಾಟವೆಂಬ ಕ್ರಿಯೆ ನಿರಂತರವಾಗಿರುವುದರಿಂದಲೇ ಪ್ರಕೃತಿಯ ಅಂಗವಾಗಿ ಬದುಕುತ್ತಿದ್ದೇವೆ. ದಿನೇ ದಿನೇ ನಮ್ಮನ್ನು ಎಚ್ಚರಿಸುತ್ತಾ ನಮಗೂ ಅನುಕರಣೀಯ ಸಂದೇಶವನ್ನು ನೀಡಿದೆ.

ಅಂಗಳದಲ್ಲಿನ ನಿರುಪಯುಕ್ತ ಗಿಡಗಳನ್ನು ಕಡಿದು ಕಡಿದು ಹಾಕಿದರೂ ನೀರು ಬೆಳಕು ಹುಡುಕುತ್ತಾ ಬೀಜ ಮೊಳಕೆಯೊಡೆದು ಗಿಡವಾಗಿ ಮರವಾಗಿ ಫಲ
ಕೊಡುತ್ತದೆ. ಪುಟ್ಟ ಇರುವೆಗಳ ಆಹಾರದ ಹುಡುಕಾಟವಂತೂ ವಿಸ್ಮಯ ಜಗತ್ತನ್ನು ಅನಾವರಣ ಗೊಳಿಸುತ್ತವೆ. ಪ್ರಕೃತಿಯ ಈ ಜೀವಂತಿಕೆ, ಕ್ರಿಯಾಶೀಲತೆ ಇದೇ
ದೈವತ್ತ್ವದ ಪರಿಕಲ್ಪನೆಯಲ್ಲವೇ? ಇದಕ್ಕಾಗಿಯೇ ಜನಪದರು

ಆದ ಕಲ್ಲಿಗೆ ಶರಣು ಗೋಧಿ ಕಲ್ಲಿಗೆ ಶರಣು
ಓ ನಾಮ ಶಿವಗ ಶಿವ ಶರಣು | ಮಲ್ಲಯ್ಯ|
ನಿಮ್ಮ ಪಾದಕ ನನ ಶರಣು

ಎನ್ನುತ್ತಾ ಪ್ರಕೃತಿಯ ಒಡಲಿನ ಒಳಹೊಕ್ಕು ರಾಗಿ, ಗೋಽ, ಜೋಳ, ಭತ್ತ, ಬೀಸುವ ಕಲ್ಲಿಗೆ ನಮಿಸುವ, ಆರೋಗ್ಯಕರ ಸಮಾಜವನ್ನು ಶ್ರಮ ಸಂಸ್ಕೃತಿಯ
ಬದುಕಲ್ಲಿ ಕಟ್ಟಿದ ಸಾಂಸ್ಕೃತಿಕ ನಾಯಕರನ್ನು ಸ್ಮರಿಸುವಲ್ಲಿ, ಪೂಜಿಸುವಲ್ಲಿ, ದೈವತ್ವವನ್ನು ಹುಡುಕುವಲ್ಲಿ ನಮ್ಮನ್ನು ಎಚ್ಚರಿಸುವ ಮೌಲ್ಯದ ಸಾರ್ವಕಾಲಿಕ
ಸತ್ಯವಡಗಿದೆ. ಈ ಜಾಗತಿಕ ಸಂದೇಶ ನೀಡುವಿಕೆಯೇ ಸೃಷ್ಟಿಯ ಪ್ರಕೃತಿಧರ್ಮವಲ್ಲವೇ? ವಿಜ್ಞಾನ, ಸಂಶೋಧನೆ, ತಂತ್ರಜ್ಞಾನ ಇವೆಲ್ಲವನ್ನೂ ಬದಿಗಿರಿಸಿ ಅದರಿಂದಾಚೆಯ ಈ ಪ್ರಕೃತಿಧರ್ಮವನ್ನು ಮತ್ತೆ ಮತ್ತೆ ಮರುಚಿಂತಿಸುವ ಕಾರ್ಯಗತಗೊಳಿಸುವ ಉತ್ತಮ ಸಮಾಜವನ್ನು ಕಟ್ಟುವ ಅನಿವಾರ್ಯತೆ ಬುದ್ದಿಜೀವಿ ಗಳಿಗಿದೆಯಲ್ಲವೇ?