ಟೆಕ್ ಮಾತು
ಇಂಧುದರ ಹಳೆಯಂಗಡಿ
ನೀರಿನ ಬಾಟಲಿಯನ್ನು ಪ್ರತಿದಿನ ತೊಳೆಯುವುದು ರೇಜಿಗೆಯ ಕೆಲಸ. ಅದಕ್ಕಾಗಿಯೇ ವಿನ್ಯಾಸಗೊಂಡಿವೆ ವಿಕಿರಣ ಬಳಸಿ ಸ್ವಯಂ ಸ್ವಚ್ಛಗೊಳ್ಳುವ ನೀರಿನ ಬಾಟಲಿಗಳು.
ನೀರಿನ ಬಾಟಲಿಯನ್ನು ಪ್ರತಿನಿತ್ಯ ತೊಳೆಯುವುದು ಹಲವರಿಗೆ ಕಷ್ಟದ ಕೆಲಸ. ಬಾಟಲಿಯಲ್ಲಿ ನೀರು ತುಂಬಿಸಿಡೋದು, ಅದರಲ್ಲೇನು ಕೊಳಕಾಗುತ್ತೆ ಎಂದು ಅಸಡ್ಡೆ ತೋರಿ ತಿಂಗಳಾನುಗಟ್ಟಲೆ ಅದೇ ಬಾಟಲಿಯನ್ನು ತೊಳೆಯದೇ ಬಳಸುವವರು ಹಲವರು.
ಅಂತಹವರಿಗಾಗಿಯೇ ಸಿದ್ಧಗೊಂಡಿದೆ ಪೋರ್ಟೇಬಲ, ಸ್ವಯಂ ಶುಚಿಗೊಳಿಸ ಬಲ್ಲ ನೀರಿನ ಬಾಟಲಿ! ನೀರಿನ ಮೂಲಕ ಯಾವುದೇ ರೋಗಾಣುಗಳು ಅಥವಾ ಬ್ಯಾಕ್ಟೀರಿಯಾಗಳು ಬಾಟಲಿ ಸೇರಿದರೆ ಹಾಗೂ ಆ ನೀರಿನಿಂದ ಬಾಟಲಿಯಲ್ಲಿ ಯಾವುದೇ ರೋಗಾಣುಗಳು ಜೀವ ತಾಳಿದರೆ, ಈ ಬಾಟಲಿಗಳು ಅದನ್ನು ಬೆಳೆಯಲು ಬಿಡುವುದಿಲ್ಲ.
ಲಘು ವಿಕಿರಣ ಬಳಸಿ ಅಂತಹ ಕೀಟಾಣುಗಳನ್ನು ಸಾಯಿಸುತ್ತವೆ. ಪ್ರತಿನಿತ್ಯ ಶುದ್ಧ, ಪರಿಮಳ ಭರಿತ ನೀರನ್ನು ಕುಡಿಯಬಹುದು! ಮಾರುಕಟ್ಟೆಯಲ್ಲಿ ವಿವಿಧ ಆಕಾರದ ನೀರಿನ ಬಾಟಲಿಗಳು ಸಿಗುತ್ತವೆ. ಕೆಲವೊಂದರ ಆಕಾರಗಳು ಸಾಮಾನ್ಯ ಕಿಚನ್ ಸ್ಕ್ರಬರ‍್ಛ್ ನಿಂದ ಸ್ವಚ್ಛಗೊಳಿಸಲು ಕಷ್ಟವೆ ನಿಸುವ ವಿನ್ಯಾಸಗಳಲ್ಲಿ ಇರುತ್ತವೆ.
ಕೈಯನ್ನು ಒಳಗೆ ಹಾಕಿ ಅಥವಾ ಸ್ಪಂಜ್ ಹಾಕಿ ತೊಳೆಯಲೂ ಆಗದೇ, ಅದಕ್ಕಾಗಿ ವಿಶೇಷ ಬಾಟಲ್ ಬ್ರಶ್ ಖರೀದಿ ಮಾಡಬೇಕಾದ ಅನಿವಾರ್ಯತೆ. ಅದಕ್ಕೆ ಪರಿಹಾರ ಎಂಬಂತೆ ವಿಕಿರಣ ಆಧಾರಿತ ಸ್ವಯಂ ಸ್ವಚ್ಛವಾಗಬಲ್ಲ, ನೀರು ಹಾಗೂ ಬಾಟಲಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀ ರಿಯಾಗಳನ್ನು ಸಾಯಿಸುವ ಬಾಟಲಿಗಳು ಬಂದಿವೆ. ಸ್ವಯಂ-ಸ್ವಚ್ಛಗೊಳಿಸುವ ನೀರಿನ ಬಾಟಲಿಗಳು ಲಘು ವಿಕಿರಣದ ಬೆಳಕಿನ ಮೂಲಕ ಬ್ಯಾಕ್ಟೀರಿಯಾ, ವೈರಸ್, ಪ್ರೊಟೊಜೋವಾ ಮತ್ತು ಇತರ ಸೂಕ್ಷ್ಮಜೀವಿಗಳನ್ನು ಅವುಗಳ ಡಿಎನ್‌ಎ ನಾಶಪಡಿಸುವ ಮೂಲಕ ಕೊಲ್ಲುತ್ತವೆ.
ವಿಕಿರಣದ ಬೆಳಕು ಬಾಟಲಿಯಲ್ಲಿನ ನೀರು ಮತ್ತು ಒಳಭಾಗವನ್ನು ಸ್ಚಚ್ಛಗೊಳಿಸುತ್ತದೆ. ರಾಸಾಯನಿಕಗಳನ್ನು ಬಳಸದೇ, ಸಾಬೂನುಗಳ ಅಗತ್ಯವಿಲ್ಲದೆ, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಸ್ವಚ್ಛವಾಗಿಡಲು ವಿಕಿರಣ ಬೆಳಕು ಅನುಕೂಲಕರ. ಸ್ವಯಂ-ಸ್ವಚ್ಛಗೊಳಿ ಸುವ ಬಾಟಲಿಗಳನ್ನು ಹಲವು ಸಂಸ್ಥೆಗಳು ತಯಾರಿಸುತ್ತಿವೆ.
ಕ್ರೇಜಿ ಕ್ಯಾಪ್
ಕ್ರೇಜಿಕ್ಯಾಪ್ ಬಾಟಲಿಯಲ್ಲಿ ನೀರು ಶುದ್ಧೀಕರಿಸುವ ಎರಡು ವಿಧಾನಗಳಿವೆ: ನಾರ್ಮಲ್ ಮೋಡ್ (ನೀರಿನ ಕಾರಂಜಿಗಳು ಹಾಗೂ ನಲ್ಲಿಯಿಂದ ಬರುವ ನೀರನ್ನು ಶುದ್ಧೀಕರಿಸಬಲ್ಲ) ಹಾಗೂ ಕ್ರೇಜಿ ಮೋಡ್ (ನದಿ-ಸರೋವರಗಳ ನೀರುಗಳನ್ನು ಶುದ್ಧೀಕರಿಸುವ ಸಾಮರ್ಥ್ಯ ಉಳ್ಳವುಗಳು). ಕ್ರೇಜಿಕ್ಯಾಪ್ ಪ್ರಕಾರ, ನಾರ್ಮಲ್ ಮೋಡ್‌ನಲ್ಲಿ 60 ಸೆಕೆಂಡುಗಳಲ್ಲಿ ನೀರು ಹಾಗೂ ಬಾಟಲಿ ಸ್ವಚ್ಛಗೊಳ್ಳುತ್ತದೆ ಹಾಗೂ ಕ್ರೇಜಿ ಮೋಡ್‌ನಲ್ಲಿ ಶುದ್ಧೀಕರಣ ಪ್ರಕ್ರಿಯೆಯು ಎರಡೂವರೆ ನಿಮಿಷ ತೆಗೆದುಕೊಳ್ಳುತ್ತದೆ.
ಲಾರ್ಕ್ ಬಾಟಲಿಗಳು
ಇದರಲ್ಲೂ ಎರಡು ಶುದ್ಧೀಕರಣ ವಿಧಾನಗಳಿವೆ: ನಾರ್ಮಲ್ ಮತ್ತು ಅಡ್ವೆಂಚರ್. ನಾರ್ಮಲ್ ಮೋಡ್‌ನಲ್ಲಿ 60 ಸೆಕೆಂಡು ಗಳಲ್ಲಿ ಶೇ.99 ರೋಗಕಾರಕಗಳನ್ನು ಶುದ್ಧೀಕರಿಸಿದರೆ, ಅಡ್ವೆಂಚರ್ ಮೋಡ್‌ನಲ್ಲಿ 3 ನಿಮಿಷ ಬೇಕು. ಈ ಬಾಟಲಿಯಲ್ಲಿ ಮೇಲ್ಭಾಗದ ಬಟನ್ ಒತ್ತುವ ಮೂಲಕ ಬಯಸಿದಾಗಲೆ ಲಘು ವಿಕಿರಣ ಶುದ್ಧೀಕರಣದ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಅದೇ ರೀತಿ ಸ್ವಯಂಚಾಲಿತವಾಗಿ ಪ್ರತಿ 2 ಗಂಟೆಗಳಿಗೊಮ್ಮೆ, 10 ಸೆಕೆಂಡುಗಳ ಕಾಲ ಆಕ್ಟಿವ್ ಇರುತ್ತದೆ.
ನಾರ್ಮಲ್ ಮೋಡ್‌ನಲ್ಲಿ ದಿನದಲ್ಲಿ 2-3 ಬಾರಿ ಶುಚಿಗೊಳಿಸಿದರೆ, ಫುಲ್ ಚಾರ್ಜ್ ಆಗಿರುವ ಲಾರ್ಕ್ ಬಾಟಲಿಯೂ ಎರಡು ತಿಂಗಳು ಪೂರ್ಣ ಸಕ್ರಿಯವಿರುತ್ತದೆ. ಅದೇ ರೀತಿ, ಅಡ್ವೆಂಚರ್ ಮೋಡ್‌ನಲ್ಲಿ ಬಳಸಿದರೆ, ಫುಲ್ ಚಾರ್ಜ್ 12 ದಿನಗಳ ಕಾಲ ಬಾಳಿಕೆ ಬರುತ್ತದೆ.
ಮಹಾಟನ್
ಮಹಾಟನ್ ಸ್ವಯಂ ಸ್ವಚ್ಛಗೊಳಿಸುವ ನೀರಿನ ಬಾಟಲಿಗಳು 99.99% ರಷ್ಟು ರೋಗಕಾರಕಗಳನ್ನು ತೆಗೆದುಹಾಕುತ್ತವೆ. ಕ್ರೇಜಿ ಕ್ಯಾಪ್ ಹಾಗೂ ಲಾರ್ಕ್ ನಂತೆ ಇದರಲ್ಲಿ ಪ್ರತ್ಯೇಕ ನೀರಿಗೆ ಪ್ರತ್ಯೇಕ ಸೆಟ್ಟಿಂಗ್ ಇಲ್ಲ. ಮಹಾಟನ್ ಬಾಟಲಿಯು ಡಬಲ್ ವಾಲ್ ಸ್ಟೇನ್ಲೆಸ್ ಸ್ಟೀಲ್ ನಿಂದ ತಯಾರಗುತ್ತವೆ. ಆಕಾರವೂ ಸಣ್ಣದಾಗಿರುವುದರಿಂದ ತೆಗೆದುಕೊಂಡು ಹೋಗಲು ಸುಲಭ. ಆದರೆ ಗಾತ್ರ ಚಿಕ್ಕದು.
ಮಹಾಟನ್ ಬಾಟಲಿಯಲ್ಲಿ ಕೇವಲ 350 ಎಂಎಲ್ ನೀರು ಹಿಡಿಯುವುದು. ಹೆಚ್ಚಿನ ನೀರು ಬೇಕಾದಾಗ, ಪ್ರತಿನಿತ್ಯ 810 ಬಾರಿ ನೀರು ತುಂಬಿಸಬೇಕಾಗುತ್ತದೆ! ಒಮ್ಮೆ ಫುಲ್ ಚಾರ್ಜ್ ಆದ ಮಹಾಟನ್ ಬಾಟಲ್ ಗರಿಷ್ಠ ಮೂರು ವಾರಗಳವರೆಗೆ ಆಕ್ಟಿವ್ ಇರುತ್ತದೆ.
ವೇಕ್ಕಪ್
ವೇಕ್ಕಪ್ ಅಲ್ಟ್ರಾ ವೈಲೆಟ್ ಲೈಟ್ ನೀರಿನ ಬಾಟಲಿಯ ಮುಚ್ಚಳದಲ್ಲಿರುವ ಲಘು ವಿಕಿರಣ ತಂತ್ರಜ್ಞಾನವು ಬಾಟಲಿ ಒಳಗಿರುವ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ತೆಗೆದುಹಾಕುವ ಮೂಲಕ ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ. ಬಟನ್‌ಅನ್ನು ಕ್ಲಿಕ್ ಮಾಡುವು ದರ ಮೂಲಕ ಆಕ್ಟಿವ್ ಮಾಡಬಹುದು. ಮೂರು ನಿಮಿಷಗಳಲ್ಲಿ ಬಾಟಲಿಯು ಸ್ವಚ್ಛಗೊಳ್ಳುತ್ತದೆ. ಮ್ಯಾಟ್ ಬ್ಲ್ಯಾಕ್ ಸ್ಟೇನ್ಲೆಸ್ ಸ್ಟೀಲ್ ನಿರ್ಮಾಣದ ಈ ಬಾಟಲಿಯಲ್ಲಿ 550 ಮಿಲಿಲೀಟರ್ ನೀರು ತುಂಬಿಸಬಹುದು.
ಒಂದು ಬಾರಿ ಫುಲ್ ಚಾರ್ಜ್ ಆದರೆ ಒಂದು ತಿಂಗಳವರೆಗೆ ಸ್ವಯಂ ಶುದ್ಧೀಕರಣ ಪ್ರಕ್ರಿಯೆ ಮಾಡುತ್ತದೆ. ಈ ಕೋವಿಡ್ ಕಾಲದಲ್ಲಿ ಸ್ವಚ್ಛತೆಗೆ ಸಿಕ್ಕ ಮಹತ್ವ ಅಷ್ಟಿಷ್ಟಲ್ಲ. ಬಹುತೇಕ ಎಲ್ಲಾ ಪ್ರಾಡಕ್ಟ್‌ಗಳೂ ತಮ್ಮ ಜಾಹೀರಾತುಗಳಲ್ಲಿ, ವೈರಸ್ ವಿರುದ್ಧ ಹೋರಾ ಡುತ್ತಿವೆ ಎಂಬ ಸಂದೇಶ ಸಾರುತ್ತಿವೆ. ಏನೇ ಆಗಲಿ, ವೈರಸ್ ವಿರುದ್ಧ ಒಗ್ಗಟ್ಟಿನಲ್ಲಿ ಹೋರಾಡೋಣ. ಈ ಲೇಖನವು ಮಾಹಿತಿ ಒದಗಿಸುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ ಹೊರತು ವೈದ್ಯಕೀಯ ಸಲಹೆ ನೀಡುವ ಉದ್ದೇಶ ಇಲ್ಲಿಲ್ಲ.