Saturday, 14th December 2024

ಆಯ್ಕೆಯಲ್ಲಿ ಬೇಕು ವಿವೇಚನೆ

ಬೆಲೆ ಬಾಳುವ ವಸ್ತುವಿನತ್ತ ತಾತ್ಕಾಲಿಕ ಆಕರ್ಷಣೆಯಿಂದಾಗಿ ನಮ್ಮ ಗಮನ ಅವುಗಳತ್ತ ಸರಿಯುವುದು ಜಾಸ್ತಿ. ಆದರೆ,
ನಮ್ಮ ಗಮನ, ಗುರಿ ಇರಬೇಕಾದುದು ತೋರಿಕೆಯ ಮೌಲ್ಯದ ಮೇಲಲ್ಲ, ಬದುಕಿನ ನಿಜವಾದ ಉದ್ದೇಶಗಳನ್ನು ಸಾಧಿಸುವುದರತ್ತ.

ಮಹಾದೇವ ಬಸರಕೋಡ ಅಮೀನಗಡ

ಜೀವನದ ಹಾದಿಯಲ್ಲಿ ಬೇಸರದ ಕ್ಷಣಗಳನ್ನು ನಾವು ಆಗಾಗ ಎದುರುಗೊಳ್ಳುತ್ತಲೇ ಇರಬೇಕಾಗುತ್ತದೆ. ಬೇಡ ಬೇಡವೆಂದರೂ ಅವುಗಳು ಮತ್ತೆ ಮತ್ತೆ ನಮ್ಮನ್ನು ಬೆನ್ನು ಬಿಡದೆ ಬೇತಾಳದಂತೆ ಬರುತ್ತಲೇ ಇರುತ್ತೇವೆ. ಇದಕ್ಕೆ ಬಹುಮುಖ್ಯ ಕಾರಣ ನಮಗೆ ಅಗತ್ಯವಿರುವುದರ ಕಡೆ ನಾವು ಗಮನಿಸದೇ, ಅಗತ್ಯವಿಲ್ಲದ ಸಂಗತಿಗಳತ್ತ ಬಹು ಬೇಗ ಆಕರ್ಷಿತರಾಗುತ್ತೇವೆ. ಇದು ನಮ್ಮ ವಿವೇಚನಾರಹಿತ ನಡೆಯಲ್ಲದೇ ಬೇರೆನೂ ಅಲ್ಲ.

ನಮ್ಮ ತಪ್ಪಿನ ಅರಿವಾದ ನಂತರ ಪರಿಸ್ಥಿತಿಯನ್ನೋ ಅಥವಾ ನಮ್ಮ ದೌರ್ಬಲ್ಯವನ್ನೋ, ಇಲ್ಲವೇ ಇತರರನ್ನೋ ಸುಖಾಸುಮ್ಮನೆ ದೂಷಿಸುತ್ತ ಆ ಕ್ಷಣದ ತಲ್ಲಣಗಳಿಂದ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನಕ್ಕೆ ಮತ್ತೆ ಮುಂದಾಗುತ್ತೇವೆ. ಇದು ನಿರಾಸೆಯನ್ನು
ಸಂಕಟಗಳನ್ನು ಇನ್ನಷ್ಟು ಹೆಚ್ಚಿಸುತ್ತಲೇ ಹೋಗುತ್ತದೆ.

ನಮ್ಮದೇ ತಪ್ಪಿನಿಂದ, ಇಲ್ಲವೇ ನಮ್ಮದೇ ದುರ್ಬಲತೆಯಿಂದ ಇಂತಹ ಪರಿಸ್ಥಿತಿಯುಂಟಾಗಿದೆ ಎಂಬ ಹಳಿಹಳಿಕೆಯಲ್ಲಿ
ವ್ಯರ್ಥ ಕಾಲಹರಣ ಮಾಡುತ್ತೇವೆ. ನಮಗೆ ಬೇಕಾಗಿರುವುದನ್ನು ಬಿಟ್ಟು ಬೇರೆಯದನ್ನೇ ಹುಡುಕುವ ನಮ್ಮ ಅತಾರ್ಕಿಕ ನಡೆಯಿಂದಾಗಿ ಅವುಗಳ ಮಿತಿ ದಾಟಲು ಬಹಳಷ್ಟು ಬಾರಿ ಸಾಧ್ಯವಾಗುವುದೇ ಇಲ್ಲ.

ಒಂದು ಬಾರಿ ವ್ಯಕ್ತಿತ್ವ ತರಬೇತುದಾರೊಬ್ಬರು ತಮ್ಮ ತರಬೇತಿಯ ಅವಧಿ ಮುಕ್ತಾಯದ ನಂತರ, ಶಿಬಿರಾರ್ಥಿಗಳನ್ನು ಬೀಳ್ಕೋಡುವ ಮುನ್ನ ಚಿಕ್ಕ ಚಹಾಕೂಟವನ್ನು ಹಮ್ಮಿಕೊಂಡಿದ್ದರು. ಅತ್ಯಂತ ವಿಭಿನ್ನ ರೀತಿಯ ಕಪ್ಪುಗಳಲ್ಲಿ ಚಹಾ ಹಾಕಿ ವಿತರಿಸುವ ಕಾರ್ಯ ಪ್ರಾರಂಭವಾಯಿತು. ದೊಡ್ಡದಾದ ಟೇಬಲ್ ಮೇಲೊಂದರಲ್ಲಿ ಗಾಜಿನಿಂದ, ಬೆಳ್ಳಿಯಿಂದ, ಸ್ಟೀಲ್‌ನಿಂದ, ತಯಾರಿಸಿದ ಕಪ್ಪುಗಳಿದ್ದವು. ಮತ್ತೆ ಕೆಲವು ಕಪ್ಪುಗಳ ಮೇಲೆ ಸುಂದರವಾದ ಚಿತ್ತಾರಗಳನ್ನು ಬಿಡಿಸಲಾಗಿತ್ತು. ಅವುಗಳಲ್ಲಿ ಕೆಲವು ತುಂಬ ಬೆಲೆಬಾಳುವ ಕಪ್ಪುಗಳಾಗಿದ್ದರೇ ಕೆಲವೇ ಕೆಲವು ತೀರ ಕಡಿಮೆ ಬೆಲೆಯ ಮಣ್ಣಿನ ಕಪ್ಪುಗಳಾಗಿದ್ದವು. ಅವೆಲ್ಲವುಗಳಲ್ಲಿ ಬಿಸಿ ಬಿಸಿಯಾದ ಚಹಾ ತುಂಬಲಾಗಿತ್ತು.

ಎಲ್ಲರಿಗೂ ಚಹಾದ ಕಪ್ಪುಗಳನ್ನು ತಗೆದುಕೊಂಡು ಚಹಾ ಕುಡಿಯಲು ಹೇಳಲಾಯಿತು. ಎಲ್ಲರೂ ಸಾಧ್ಯವಾದಷ್ಟು ಬೆಲೆ ಬಾಳುವ ಕಪ್ಪುಗಳನ್ನೇ ಆಯ್ಕೆ ಮಾಡಿಕೊಂಡರು. ಒಬ್ಬಿಬ್ಬರು ಮಾತ್ರ ಮಣ್ಣಿನ ಕಪ್ಪುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅವರನ್ನು ನೋಡಿ ಇತರರು ಒಂದಷ್ಟು ಅಪಹಾಸ್ಯ ಮಾಡಿದರು. ಆಗ ತರಬೇತುದಾರರು ಹೇಳಿದರು ‘ನೀವು ಅವರನ್ನು
ಅಪಹಾಸ್ಯ ಮಾಡುವ ಅಗತ್ಯವಿಲ್ಲ. ನಿಜಕ್ಕೂ ಅವರು ನಿಮ್ಮನ್ನು ಅಪಹಾಸ್ಯ ಮಾಡಬೇಕು’ ಎಂದರು ನಗುತ್ತ. ಏನೊಂದು ಅರ್ಥವಾಗದ ಅವರೆಲ್ಲರೂ ತರಬೇತುದಾರರತ್ತ ಪ್ರಶ್ನಾರ್ಥಕ ನೋಟ ಬೀರಿದರು.

ಆಗ ಅವರು ‘ನಿಮಗೆಲ್ಲ ತಿಳಿದಿಲ್ಲ. ಅಗ್ಗದ ಕಪ್ಪುಗಳಲ್ಲಿಯೇ ಉತ್ಕೃಷ್ಟವಾದ ಚಹಾ ಹಾಕಲಾಗಿದೆ’ ಎಂದರು. ಹೆಚ್ಚು ಬೆಲೆಯ ಕಪ್ಪು ಆಯ್ಕೆ ಮಾಡಿದವರಿಗೆ ತಮ್ಮ ಪೆಚ್ಚುತನದ ನಡೆಯ ಅರಿವಾಗಿತ್ತು. ಬದುಕಿನ ಬಹುತೇಕ ಸಂದರ್ಭದಲ್ಲಿ ನಾವು ಕೂಡ ಇಂತಹುದೇ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಅಗತ್ಯವಿದೆಯೋ, ಇಲ್ಲವೋ ಎಂಬುದನ್ನು ಗಣನೆಗೆ ತಗೆದುಕೊಳ್ಳದೇ,
ಹೆಚ್ಚು ಬೆಲೆಯ ವಸ್ತುಗಳ ಹೊಳಪಿಗೆ ಮಾರುಹೋಗುತ್ತೇವೆ.

ವ್ಯಾವಹಾರಿಕ ಜಗತ್ತಿನ ಆರ್ಥಿಕ ಮಾನದಂಡದಲ್ಲಿ ಬೆಲೆಬಾಳುವ ವಸ್ತುಗಳ ಮೇಲಿನ ತಾತ್ಕಾಲಿಕ ಆಕರ್ಷಣೆಗೆ ಒಳಗಾಗುವ ಭ್ರಮೆಯಿಂದ ನಾವು ಹೊರಬರಬೇಕು. ನಮಗೆ ಹೆಚ್ಚು ಅಗತ್ಯವಿರುವ, ನಮ್ಮ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಸಂಗತಿ ಗಳತ್ತ ಹೆಚ್ಚು ಗಮನಹರಿಸಬೇಕು. ಕ್ಷುಲ್ಲಕವಾದ ಸಂತೋಷದ ಮಡುವಿನಲ್ಲಿ ಮುಳುಗಿ ಹೋಗದೆ ಅರ್ಥಪೂರ್ಣತೆ ಮತ್ತು ಸಾರ್ಥಕತೆಯನ್ನು ತಂದು ಕೊಡುವ ಸಂಗತಿಗಳನ್ನು ಪ್ರತ್ಯೇಕಿಸಿ ನೋಡುವ ಜಾಣತನವನ್ನು ನಮ್ಮದಾಗಿಸಿಕೊಳ್ಳಬೇಕು.  ನಿಜ ವಾದ ಉದ್ದೇಶಗಳು ವ್ಯರ್ಥವಾಗಿ ಕೊಚ್ಚಿಕೊಂಡು ಹೋಗದಂತೆ ನೋಡಿಕೊಳ್ಳಬೇಕು.

ಒಂದಷ್ಟು ಹೊತ್ತನ್ನು ನಮ್ಮ ವಿವೇಚನೆಯ ತೆಕ್ಕೆಯಲ್ಲಿ ತಗೆದುಕೊಂಡು ಅವುಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಅದು ನಮಗೆ ಸಂತಸವನ್ನು ನೀಡಲ್ಲದು. ಬದುಕಿನ ಗತಿಯನ್ನು ಸಕಾರಾತ್ಮಕವಾಗಿ ಬದಲಾಯಿಸಬಲ್ಲದು.