Friday, 13th December 2024

ಪ್ರೀತಿಯ ಅರಸಿ ಹೊರಟ ಶಂಭೋ ಶಿವ ಶಂಕರ

ತ್ರಿಕೋನ ಪ್ರೇಮಕಥೆಯ ಚಿತ್ರವೊಂದು ಸದ್ದಿಲ್ಲದೆ ಸೆಟ್ಟೇರಲು ರೆಡಿಯಾಗಿದೆ. ಜರ್ನಿಯಲ್ಲೇ ಸಾಗುವ ಕಥೆ ಇದಾಗಿದ್ದು, ಶಂಭೋ ಶಿವ ಶಂಕರ ಶೀರ್ಷಿಕೆಯಲ್ಲಿ ಮೂಡಿಬರಲಿದೆ. ಮೂವರು ಹುಡುಗರ ಸುತ್ತ ಸುತ್ತುವ ಈ ಚಿತ್ರ ಕಾಲ್ಪನಿಕ ಕಥೆ ಹೊಂದಿದ್ದರೂ, ನೈಜತೆಗೆ ಹತ್ತಿರವಾದಂತಿದೆ. ಮೂವರು ನಾಯಕರಿಗೂ ಒಬ್ಬಳೇ ನಾಯಕಿ. ಆ್ಯಕ್ಷನ್, ಸಸ್ಪೆನ್ಸ್‌ ಜತೆಗೆ ಒಂದೊಳ್ಳೆಯ ಪ್ರೇಮ ಕಥೆಯೂ ಚಿತ್ರದಲ್ಲಿ ಅಡಕವಾಗಿದೆ. ಇಷ್ಟು ದಿನ ಗ್ಲಾಮರ್ ಗೊಂಬೆಯಾಗಿ ಕಂಗೊಳಿಸಿದ್ದ ನಟಿ ಸೋನಾಲ್ ಮಂಥೆರೋ, ಶಂಭೋ ಶಿವ ಶಂಕರರ ಜತೆ ಸಿಂಪಲ್ ಹುಡುಗಿಯಾಗಿ ಕಂಗೊಳಿಸಲಿದ್ದಾರೆ.

ಈ ಹಿಂದೆ ಕಿರುತೆರೆಯ ಧಾರಾವಾಹಿಗಳ ನಿರ್ದೇಶನದಲ್ಲಿ ಫುಲ್ ಬ್ಯುಸಿಯಾಗಿದ್ದ ನಿರ್ದೇಶಕ ಮೂರ್ತಿಶಂಕರ್, ಈಗ ಸ್ಯಾಂಡಲ್ ವುಡ್‌ನತ್ತ ಹೊರಳಿದ್ದು, ಚಿತ್ರ ನಿರ್ದೇಶನಕ್ಕೆ ಧುಮುಕ್ಕಿ ದ್ದಾರೆ. ಶಂಭೋ ಶಿವ ಶಂಕರ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಚಿತ್ರದ ಕಥೆ ಸಿದ್ಧಪಡಿಸಿಕೊಂಡಿರುವ ಮೂರ್ತಿಶಂಕರ್ ಮುಹೂರ್ತ ನೆರವೇರಿಸಿ, ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಮೂರ್ತಿ ಶಂಕರ್ ತಮ್ಮ ಚೊಚ್ಚಲ ನಿರ್ದೇಶನಕ್ಕಾಗಿ ಒಳ್ಳೆಯ ಕಥೆಯನ್ನೇ ಹಿಡಿದು ಬಂದಿದ್ದಾರೆ. ಶಂಭೋ ಶಿವ ಶಂಕರ ಈ ಶೀರ್ಷಿಕೆಯಲ್ಲಿಯೇ ಚಿತ್ರ ಸೆಟ್ಟೇರಲಿದೆ. ಇದೊಂದು ಆಕ್ಷನ್, ಥ್ರಿಲ್ಲರ್, ಮಿಳಿತವಾಗಿರುವ ಚಿತ್ರ. ಅಷ್ಟೇ ಅಲ್ಲ, ನವಿರಾದ ಪ್ರೇಮ ಕಥೆಯೂ ಸಿನಿಮಾದಲ್ಲಿದೆ. ಜರ್ನಿಯಲ್ಲೇ ಸಾಗುವ ಪ್ರೀತಿಯ ಕಥೆ ಈ ಚಿತ್ರದ ಮುಖ್ಯ ಕಥಾವಸ್ತು. ಮೂವರು ನಾಯಕರು, ಒಬ್ಬ ನಾಯಕಿಯ ಸುತ್ತ ಚಿತ್ರದ ಕಥೆ ಸಾಗಲಿದೆ.

ನಿಗೂಢತೆಯ ಪಯಣ : ಈ ನಾಲ್ವರಿಗೂ ಎಲ್ಲಿಗೆ ಹೋಗುತ್ತಿದ್ದೇವೆ. ಯಾಕೆ ಹೋಗು ತ್ತಿದ್ದೇವೆ ಎಂಬ ಯಾವುದೇ ನಿಖರತೆ, ಗುರಿ ಇರುವುದಿಲ್ಲ. ಆದರೂ ಎಲ್ಲರೂ ಒಟ್ಟಾಗಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಈ ನಡುವೆಯೇ ಚಿತ್ರದ ಪಾತ್ರಧಾರಿಗಳ ಒಬ್ಬೊಬ್ಬರ ಹಿಂದಿನ ಕಥೆಯೂ ರಿವಿಲ್ ಆಗುತ್ತಾ ಸಾಗುತ್ತದೆ. ನಾಯಕಿ ತುಂಬು ಕುಟುಂಬದಿಂದ ಬಂದವಳು. ಆಕೆಗೆ ಅಪ್ಪ ಎಂದರೆ ಬಲು ಪ್ರೀತಿ. ಆದರೆ ಅವರ ಅಪ್ಪನಿಗೋ ಮಗಳು ಎಂದರೆ ಎಲ್ಲಿಲ್ಲದ ಕೋಪ. ಸದಾ ಸರಳವಾಗಿರುವ ಈ ಹುಡುಗಿಯನ್ನು ಮನೆಮಂದಿಯೆಲ್ಲಾ ದೂರ ತಳ್ಳಿರುತ್ತಾರೆ.

ಮುಗ್ಧತೆಯ ಪ್ರತಿರೂಪದಂತಿರುವ ಈಕೆಯನ್ನು ಮನೆಮಂದಿಯೆಲ್ಲಾ ದ್ವೇಷಿಸುವುದು ಏತಕ್ಕೆ, ಅದರ ಹಿಂದಿನ ಸ್ಟೋರಿ ಏನು
ಎಂಬುದೇ ಚಿತ್ರದ ಮುಖ್ಯ ಆಯಾಮ ಎನ್ನುತ್ತಾರೆ ನಿರ್ದೇಶಕರು. ಇನ್ನು ಆ ಮೂವರು ಹುಡುಗರು ಎಲ್ಲಿಂದ ಬಂದರು. ಅವರ ಪೂರ್ವ ವೃತ್ತಾಂತ ಏನು ಎಂಬುದನ್ನು ಸಸ್ಪೆೆನ್ಸ್‌, ಥ್ರಿಲ್ಲರ್ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ತೆರೆಯ ಮೇಲೆ ನೋಡಿದರೆ ಚೆಂದವಂತೆ. ಹಾಗಾದರೆ ನಾಯಕಿ, ಮನೆಯವರ ಕೋಪದಿಂದ ಮುಕ್ತಿ ಪಡೆದು, ಎಲ್ಲರ ಪ್ರೀತಿಗೆ ಪಾತ್ರ ಳಾಗುತ್ತಾಳೆ, ಈ ಮೂವರು ನಾಯಕರಲ್ಲಿ ನಾಯಕಿಯನ್ನು ಕೈ ಹಿಡಿಯುವ ಯುವಕ ಯಾರು ಎಂದುದೇ ಚಿತ್ರದ ಕ್ಯೂರಿಯಾಸಿಟಿ ಕೆರಳಿಸುವ ಅಂಶವಂತೆ.

ನಮ್ಮವರಿಗೆ ಮೊದಲ ಆದ್ಯತೆ 

ಶಂಭೋ ಶಿವ ಶಂಕರರಾಗಿ ಅಭಯ್ ಪುನೀತ್, ರಕ್ಷಕ್, ರೋಹಿತ್ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ನಟಿ ಸೋನಾಲ್ ಮಂಥೆರೋ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ಗ್ಲಾಮರ್ ಆಗಿ ಮಿಂಚಿದ್ದ, ಸೋನಾಲ್ ಈ ಚಿತ್ರದಲ್ಲಿ ಸಿಂಪಲ್ ಹುಡುಗಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಚಿತ್ರದಲ್ಲಿ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದೆ. ಇವರೊಂದಿಗೆ ಹಿರಿಯ ಕಲಾವಿದರೂ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕಥೆಗೆ ತಕ್ಕಂತೆ ಪೊಲೀಸ್ ಅಧಿಕಾರಿಯ ಮುಖ್ಯ ಪಾತ್ರವೊಂದಿದೆ. ಆ ಪಾತ್ರದಲ್ಲಿ ಕನ್ನಡದ ಸ್ಟಾರ್ ನಟರೊಬ್ಬರು ಅಭಿನಯಿಸ ಲಿದ್ದಾರಂತೆ. ಅವರು ಯಾರೂ ಎಂಬುದನ್ನು ಎಲ್ಲಯೂ ಬಿಟ್ಟು ಕೊಡದ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿದೆ. ನಮ್ಮದು ಅಪ್ಪಟ ಕನ್ನಡ ಚಿತ್ರ, ಹಾಗಾಗಿ ಕನ್ನಡಿಗರಿಗೆ ಮೊದಲ ಆದ್ಯತೆ ಎನ್ನುತ್ತಾರೆ ಮೂರ್ತಿಶಂಕರ್.

ನೈಜತೆಗೆ ಸನಿಹದ ಕಥೆ

ಮೊದಲು ನಿರ್ದೇಶಕರಿಗೆ ರಿಮೇಕ್ ಕಥೆಯೊಂದನ್ನು ಕನ್ನಡದಕ್ಕೆ ಯಥಾವತ್ತಾಗಿ ನಿರ್ದೇಶಿಸಲು ಅವಕಾಶ ಬಂತಂತೆ. ಆದರೆ
ರಿಮೇಕ್‌ಗಿಂತ ಸ್ವಮೇಕ್ ಚಿತ್ರವೇ ಉತ್ತಮ ಎಂಬುದನ್ನು ಮನಗಂಡ ನಿರ್ದೇಶಕರು ಸ್ವಮೇಕ್ ಚಿತ್ರ ಮಾಡುವುದಾಗಿ ಹಠ
ಹಿಡಿದಿದ್ದಾಾರೆ. ಅದರಂತೆ ಒಂದೊಳ್ಳೆಯ ಕಥೆಯನ್ನು ರಚಿಸಿ, ನಿರ್ಮಾಪಕರಿಗೆ ಹೇಳಿದರಂತೆ, ಕಥೆ ಕೇಳಿದ ನಿರ್ಮಾಪಕರು
ಸಂತೋಷದಿಂದಲೇ ನಿರ್ಮಾಣ ಮಾಡಲು ಒಪ್ಪಿದ್ದಾರೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದರೂ, ನೈಜತೆಗೆ ಹತ್ತಿರವಿರುವ ಕಥೆಯಂತೆ. ಹಾಗಾಗಿ ಚಿತ್ರ ಯಶಸ್ವಿಯಾಗುತ್ತದೆ ಎಂಬ ಆಶಾಭಾವ ನಿರ್ದೇಶಕ, ನಿರ್ಮಾಪಕರಲ್ಲಿದೆ. 2 ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

ತ್ರಿಕೋನ ಪ್ರೇಮಕಥೆ

ಶಂಭೋ, ಶಿವ ಹಾಗೂ ಶಂಕರ ಈ ಮೂವರು ಚಿತ್ರದ ನಾಯಕರು, ಈ ಮೂವರಿಗೂ ಒಬ್ಬಳೇ ನಾಯಕಿ. ಇದೊಂಥರ ತ್ರಿಕೋನಾ ಪ್ರೇಮಕಥೆಯ ಚಿತ್ರ. ಈ ಮೂವರು ಆತ್ಮೀಯ ಸ್ನೇಹಿತರು. ಇವರೆಲ್ಲ ಒಟ್ಟಾಗಿ, ಕಾರ್ಯ ನಿಮಿತ್ತ ಯಾವುದೋ ಒಂದು ಪ್ರದೇಶಕ್ಕೆ ತೆರಳುತ್ತಿರುತ್ತಾರೆ. ಈ ವೇಳೆಯಲ್ಲಿಯೇ ನಾಯಕಿ ಇವರ ಜತೆಯಾಗುತ್ತಾಳೆ. ಈಕೆಗೆ ಈ ಮೂವರು ಅಪರಿಚಿತರು. ಆದರೆ ಸಾಗುತ್ತಾ ಸಾಗುತ್ತಾ, ಎಲ್ಲರೂ ಪರಿಚಿತರಾಗುತ್ತಾರೆ. ಎಲ್ಲರಲ್ಲೂ, ಆತ್ಮೀಯತೆ ಬೆಸೆಯುತ್ತದೆ. ಮೂವರು ಗೆಳೆಯರಿಗೂ ನಾಯಕಿಯ ಮೇಲೆ
ಮನಸಾಗುತ್ತದೆ. ಆದರೆ ಯಾರೂ ಅದನ್ನು ಹೇಳಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಹಾಗಾದರೆ ನಾಯಕಿಗೆ ಈ ಮೂವರಲ್ಲಿ ಯಾರ ಮೇಲೆ ಮನಸಾಗುತ್ತದೆ. ಒಂದು ವೇಳೆ ಯಾರನ್ನಾದರೂ ಇಷ್ಟಪಟ್ಟಿದ್ದರೆ. ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳಾ? ಎಂಬುದೇ ಚಿತ್ರದ ಸಸ್ಪೆನ್ಸ್‌. ಇದರ ಜತೆಗೆ ಹುಡುಗರ ಹಣೆಬರಹ ಬರೆಯುವವರು ಯಾರು ಹುಡುಗಿ? ಬ್ರಹ್ಮ? ಎಂಬ ಪ್ರಶ್ನಾರ್ಥಕ ಅಡಿಬರಹ ಕೂತೂಹಲ ಮೂಡಿಸುತ್ತದೆ.