Saturday, 14th December 2024

ಕಾರಣ ಹೇಳದೆ ಹೋದೆ ಏಕೆ ?

ರವಿ ಶಿವರಾಯಗೊಳ

ಒಮ್ಮಿಂದೊಮ್ಮೆಗೇ ನೀನು ನನ್ನ ಬಳಿ ಬಂದು ಲೆಟ್ ಅಸ್ ಬ್ರೇಕ್ ಅಪ್ ಎಂದೆ. ನೀಲಾಗಸದಲ್ಲಿ ಸಿಡಿದ ಸಿಡಿಲಿನ ಸಲಾಕೆಯೊಂದು ನನ್ನ ಎದೆಯನ್ನೇ ಭೇದಿಸಿದಂತಾಯಿತು. ಈ ನಿರ್ಧಾರ ನೀನೇಕೆ ತೆಗೆದುಕೊಂಡೆ?

ಹೇ ಹುಡುಗಿ, ಯಾಕೆ ನನ್ನ ತೊರೆದು ಹೋದೆನೆಂದೂ ಈಗಲಾದರೂ ಹೇಳಿ ಬಿಡು? ನನಗೆ ಈಗಲೂ ನೆನಪಿದೆ ಕಣೆ.  ಅದ್ಯಾರದೋ
ಮದುವೆ ಸಂಭ್ರಮ ನಡೆದಿತ್ತು ಎಂದೆಂದಿಗೂ ಮದುವೆ ಸಂಭ್ರಮಗಳಿಗೆ ನಾನು ಹೋದವನಲ್ಲ. ಆದರೆ ಅವತ್ಯಾಕ್ಕೋ ಬಂದಿದ್ದೆ.
ಹತ್ತಾರು ಹುಡುಗಿಯರ ಮಧ್ಯದಲ್ಲಿ ನಿನ್ನನ್ನು ಕಂಡು ಬೆರಗಾಗಿದ್ದು ನಾನೊಬ್ಬನೇ ಎಂದು ನನಗೂ ತಿಳಿಯದು. ನೀನು ತೊಟ್ಟು ಲಂಗವನ್ನೇ ಎಷ್ಟೋ ಸಮಯ ಕಣ್ಣರಳಿಸಿ ನೋಡಿದವನು ನಾನು.

ಮದುವೆ ಮಂಟಪದ ಕೊನೆಯ ಕುರ್ಚಿಯ ಮೇಲೆ ಕುಳಿತು ನಿನ್ನ ಗೆಳತಿಯರ ಜೋಕಿಗೆ ಪಳ್ಳೆಂದು ಮುಖವರಳಿಸಿ ನಕಿದ್ದೆ ನೋಡು,
ಆಗಲೇ ನಾನು ಸೋತಿದ್ದು. ನಿನ್ನ ಎಡಕೆನ್ನೆಯ ಮೇಲೆ ನೀನು ನಕ್ಕಾಗ ಬೀಳುವ ಗುಳಿ ಅದೆಷ್ಟು ಚಂದ ಇತ್ತು ಕಣೆ! ಅದ್ಯಾವುದೋ
ಮೂಲೆಯಲ್ಲಿ ಕುಳಿತವನನ್ನು ಕಣ್ಣಸನ್ನೆಯಲ್ಲಿಯೇ ಕರೆದಿದ್ದೆ. ಅವತ್ತಿನ ತನಕ ಯಾವ ಹುಡಗಿಯನ್ನು ಕಣ್ಣೆತ್ತಿ ನೋಡದ ನನಗೆ
ನಿನ್ನ ಮೇಲೊಂದು ಪ್ರೀತಿ ಚಿಗುರಿತ್ತು. ಅನಾಮತ್ತಾಗಿ ನೀನು ಎದುರಿಗೆ ಬಂದವಳೇ ಸಣ್ಣ ಕಾಗದ ಚೀಟಿಯೊಂದನ್ನು ನನ್ನ ಕೈಗಿಟ್ಟು ಕ್ಷಣಾರ್ಧದಲ್ಲಿ ಮರೆಯಾಗಿ ಹೋಗಿದ್ದ.

ಚೀಟಿ ತಂದ ಪ್ರೀತಿ
‘ಏ ಹುಡುಗ, ಅದ್ಯಾಕೋ ನಿನ್ನ ನೋಡಿದ ಮರುಕ್ಷಣವೇ ನಿನ್ನ ಪ್ರೀತಿಸಬೇಕು ಅನಸ್ತಿದೆ. ನೀನು ನನ್ನ ಆಕರ್ಷಣೆಯಾ? ಮತ್ತೊಂದಾ? ನಾನರಿಯೆ. ಪ್ರೀತಿಯೆಂಬುದು ಹೀಗೆ ಅಚಾನಕ್ಕಾಗಿ ಹುಟ್ಟುತ್ತದೆಂದು ನಾನು ಊಹಿಸಿರಲಿಲ್ಲ. ನೀನ್ಯಾರ ಮನೆಯ
ಹುಡುಗ? ನಿನ್ನ ಹೆಸರೇನು, ನಿನ್ನ ವಿದ್ಯಾಭ್ಯಾಸವೇನು, ನನಗೊಂದು ತಿಳಿಯದು. ಆದರೂ ನನನ್ನೂ ನೀನು ಪ್ರೀತಿಸುತ್ತೀಯೋ
ಇಲ್ಲವೋ ನಾ ಕಾಣೆ! ಒಂದು ವೇಳೆ ಪ್ರೀತಿಸುವೆ ಎಂದಾದರೆ, ನಾನು ಕೊಟ್ಟ ಜಂಗಮವಾಣಿಗೆ ಒಂದು ಪುಟ್ಟ ಸಂದೇಶ ರವಾನಿಸು.
ಅಲ್ಲಿಯವರೆಗೆ ಕಾಯುತ್ತೇನೆ. ಇಂತಿ ನಿನ್ನ ಪ್ರೀತಿಯ ಹುಡುಗಿ.’

ನೀ ಕೊಟ್ಟ ಆ ಪುಟ್ಟ ಚೀಟಿಯನ್ನು ಮನೆಗೆ ತೆರಳುವ ಮುಂಚೆ ಇಪ್ಪತ್ತು ಬಾರಿ ಓದಿಕೊಂಡಿದ್ದೆ. ಅದಾದ ನಂತರವೇ ಅಲ್ಲವೇ
ಸತತವಾಗಿ ಎರಡು ವರ್ಷ ನಾವಿಬ್ಬರೂ ಮಾತಾಡಿದ್ದು, ನಕ್ಕಿದ್ದು, ಹರಟಿದ್ದು, ಮುನಿಸಿಕೊಂಡು ಕುಳಿತಾಗ ಸಮಾಧಾನ ಮಾಡಿದ್ದು, ಗಾರ್ಡನ್‌ನ ಖಾಲಿ ಬೆಂಚಿನಲ್ಲಿ ಕುಳಿತು ಸಾವಿರ ಸಾವಿರ ಕನಸು ಕಂಡದ್ದು!

ಹೋಗಲಿ, ಆ ಸಮಯದಲ್ಲಿ ಗಂಟೆ ಗಟ್ಟಲೆ ಮಾತನಾಡುತ್ತಿದ್ದವೆಲ್ಲಾ, ಯಾಕೆ ಸಮಯದ ಪರಿವೆಯೇ ಇರುತ್ತಿರಲಿಲ್ಲ! ಮೊಬೈಲ್ ‌ನಲ್ಲಿ ಸಂದೇಶಗಳನ್ನು ಕಳಿಸಲು ಆರಂಭಿಸಿದರೆ, ನೂರು ಸಂದೇಶವಾದರೂ ಸರಿ, ನಮ್ಮ ಸರಸ ಸಲ್ಲಪಾ ಮುಗಿಯುತ್ತಲೇ ಇರಲಿ ಲ್ಲ! ಗಾರ್ಡನ್‌ನ ಮೂಲೆಯ ಬೆಂಚಿನಲ್ಲಿ ಕುಳಿತು ಹಗಲಿಡೀ ಮಾತನಾಡುತ್ತಾ, ನಸು ನಗುತ್ತಾ ಕಾಲ ಕಳೆದದ್ದಕ್ಕೆ ಲೆಕ್ಕ ವುಂಟೆ! ಆದರೂ ನಿನಗೆ ನೆನಪಿದೆ ಅಲ್ಲವೇ, ಎಂದಾದರೂ ಆ ಎರಡು ವರ್ಷಗಳ ಅವಧಿಯಲ್ಲಿ ನಾನು ಅಪ್ಪಿ ತಪ್ಪಿಯೂ ನಿನ್ನನ್ನು ಸ್ಪರ್ಶ ಮಾಡಲಿಲ್ಲ. ಅದು ನನ್ನಲ್ಲಿರುವ ಪರಿಶುದ್ಧ ಪ್ರೀತಿ.

ಯಾವ ಪ್ರೀತಿಯು ಆಕರ್ಷಣೆಯ ಮೇಲೆ ಹುಟ್ಟಬಾರದು. ಯಾವ ಪ್ರೀತಿಯು ದೈಹಿಕ ಸೌಂದರ್ಯದ ಆರಾಧನೆ ಆಗಬಾರದು. ಪ್ರೀತಿಯೆಂದರೆ ಶುದ್ಧ ಹಾಲಿನಂತದ್ದು. ಒಂದೇ ಒಂದು ಹನಿ ಹುಳಿ ಅದರಲ್ಲಿ ಬೆರೆಯಕೂಡದು. ಪ್ರತಿ ಬಾರಿ ನೀನು ಭೇಟಿಯಾ ದಾಗಲೂ ಹೇಳುತ್ತಿದ್ದದ್ದು ಒಂದೇ ಅಲ್ಲವೇ – ನೀನೇ ನನಗೆಲ್ಲ, ನಿನ್ನ ಹೊರತು ಮತ್ತೇನೂ ಇಲ್ಲ. ನನಗೆ ಜೀವನಪೂರ್ತಿ ನಿನ್ನೊಂದಿಗೆ ಇರಬೇಕು ಅಂತ ಹೇಳಿದ್ದು. ಈಗೇನಾಗಿದೆ? ಎಲ್ಲಿ ಹೋಯ್ತು ಆ ನಿನ್ನ ಅಪಾರ ಪ್ರೀತಿ ? ಈಗ ನೀನು ಎಲ್ಲಿದೀಯಾ! ಯಾರ ಜತೆ ಇದೀಯಾ? ಅವನನ್ನಾದರೂ ಕಡೆಯ ತನಕ ಉಳಿಸಿಕೊಳ್ಳಲು ಶಕ್ತಳ ನೀನು? ಯಾಕೆ ಈ ಬ್ರೇಕ್ ಅಪ್ ಅಷ್ಟಕ್ಕೂ ಅದೊಂದು ದಿನ ಕಾರಣವೇ ಹೇಳದೆ ‘ಲೆಟ್ ಅಸ್ ಬ್ರೇಕ್ ಅಪ್’ ಅಂದಿಯಲ್ಲ , ಆ ಮಾತು ಹೇಗಿತ್ತು ಗೊತ್ತೇನು? ಹಗಲಿನ
ಹೊತ್ತಿನಲ್ಲಿ ನೀಲ ಆಗಸದಿಂದ ಕೊಲ್ಮಿಂಚು ಹೊಡೆದು, ಸಿಡಿಲಿನ ಸಲಾಕೆ ನನ್ನ ಎದೆಗೆ ನಾಟಿದಂತೆ.

ಒಮ್ಮೆಗೇ ನನ್ನ ಎದೆಯಲ್ಲಿ ವಿಲವಿಲ ಒದ್ದಾಡುವ ನೋವಿನ ಸಾಗರ ಧುಮ್ಮಿಕ್ಕಿತು. ಹಾಗಾದರೆ, ಆ ಎರಡು ವರ್ಷದ ಪ್ರೀತಿ ಬರಿ ನಾಟಕವಾ? ಅವತ್ತು ಮದುವೆ ಸಂಭ್ರಮದಲ್ಲಿ ನಮ್ಮಿಿಬ್ಬರ ನಡುವೆ ಹುಟ್ಟಿದ್ದಾದರೂ ಏನು ನಿಜವಾದ ಪ್ರೀತಿಯೇ? ಅಥವಾ ಬರಿ ಆಕರ್ಷಣೆ ನಮ್ಮನ್ನು ಎರಡು ವರ್ಷ ಆಳಿತೇ? ಆದರೂ ಕೊನೆಗೆ ನನ್ನನ್ನು ಬಿಡಲು ಕಾರಣವನ್ನು ಹೇಳಬೇಕಿತ್ತು ನೀನು. ಪ್ರೀತಿಯ ಹುಡುಗಿ, ಈಗ ಹೇಗಿದ್ದೀಯ? ಚೆನ್ನಾಗಿರುತ್ತಿ ನೀನು ಅದು ನನಗೆ ಗೊತ್ತು. ಮತ್ಯಾರನ್ನೋ ನೀನು ಪ್ರೀತಿಸುತ್ತಿರುವೇ ಎಂದು ನನಗೆ ತಿಳಿದಿದೆ.

ಅದೆಲ್ಲವೂ ಸರಿ. ನನ್ನನ್ನು ತೊರೆದು ಹೋದದ್ದು ಯಾಕೆಂದು ಹೀಗೆ ಒಂದು ಪುಟ್ಟ ಪತ್ರವಾದರೂ ಬರೆದು ತಿಳಿಸು ಎಂದಿದ್ದೆ. ಆದರೆ ನೀನು ಮಾಡಿದ್ದೇನು! ಮರುದಿವಸ ನಿನ್ನ ಪತ್ರ ನನ್ನ ಪ್ರಶ್ನೆಗೆ ಉತ್ತರವಾಗಿರಲಿಲ್ಲ ಅದು ನನ್ನ ಬದುಕಿಗೆ ಉತ್ತಮವಾಗಿತ್ತು. ಪೋಸ್ಟ್‌ ಮ್ಯಾನ್ ರಂಗಪ್ಪ ತಂದುಕೊಟ್ಟ ಕಾಗದ ಬಿಚ್ಚಿ ನೋಡಿದರೆ ನಿನ್ನ ಲಗ್ನ ಪತ್ರಿಕೆ! ತಲೆಯೊಮ್ಮೆ ಗಿರ‌್ರನೆ ತಿರುಗಿದಂತಾ ಯ್ತು. ಅಂದೇ ಗೊತ್ತಾಯಿತು, ನೀನು ಇನ್ನು ನನ್ನವಳಲ್ಲ ಎಂದು. ಆದರೂ ಕಾರಣ ಹೇಳಿ ಹೋಗಬೇಕಿತ್ತು.