ವಿನಯ್ ವಿ.
ಹನಿ ಮಳೆ ಸಣ್ಣಗೆ ಬೀಳುತಿದೆ, ಹೃದಯದಿ ಮೂಡಿದೆ ಪ್ರೀತಿಯ ಬೆಚ್ಚನೆಯ ಭಾವ.
ಮಳೆಗಾಲದ ಆರಂಭದ ದಿನಗಳು ಅವು. ನಮ್ಮೂರಿನಲ್ಲಿ ಮಳೆ ಬರುವುದೇ ಬಹಳ ಕಡಿಮೆ. ಅದೇಕೋ ಆ ದಿನ ಮಳೆ ಬಂದಿತ್ತು. ಒಂದೆಡೆ ಮಳೆ ಮತ್ತು ತಂಗಾಳಿ ತಂದ ಮಧುರ ಭಾವನೆಗಳು ಹೃದಯವನ್ನು ಹಕ್ಕಿಯಂತೆ ಮಾಡಿದ್ದವು. ಇನ್ನೊಂದೆಡೆ ನೀನು ನನ್ನನ್ನು ಭೇಟಿ ಮಾಡಲು ಬರುತ್ತಿದ್ದೀಯಾ ಎಂಬ ಖುಷಿ, ಉಲ್ಲಾಸ.
ಹಾಗೆ ನೋಡಿದರೆ, ನೀನು ಅದೇ ಮೊದಲ ಬಾರಿ ನನ್ನನ್ನು ಭೇಟಿ ಮಾಡುತ್ತಿರುವುದಂತೂ ಅಲ್ಲವೇ ಅಲ್ಲ. ಹಲವು ಬಾರಿ ಹತ್ತಿರ ದಿಂದ, ದೂರದಿಂದ ಭೇಟಿ ಮಾಡಿದ್ದು ಇದ್ದೇ ಇದೆ. ನಿನಗೆ ನೆನಪಿದೆಯೆ, ನೀನು ನನ್ನನ್ನು ಮೊದಲು ನೋಡಿದ್ದು ಬೇಲೂರಿನ ದೇವಾಲಯದಲ್ಲಿ. ಹಾಗೆಂದು ನೀನೇ ಹೇಳಿದ್ದು ಹೊರತು, ನನಗೆ ಆ ದಿನ ನೆನಪಿಲ್ಲ.
ನೀನೇ ಒಮ್ಮೆ ಹೇಳಿದಂತೆ, ‘ಬೇಲೂರಿನಲ್ಲಿ ನಿನ್ನನ್ನು ಕಂಡಾಗಲೇ ನಾನು ಫಿದಾ ಆಗಿ ಹೋದೆ ಮಾರಾಯ’ ಎಂದು. ಆದರೆ ನೀನು ನನ್ನನ್ನು ಮೊದಲ ಬಾರಿ ನೋಡಿದ್ದೀ ಎಂದು ಹೇಳಿದ ಆ ಘಳಿಗೆ ನನ್ನ ಅರಿವಿನ ವ್ಯಾಪ್ತಿಗೆ ಬಂದಿರಲಿಲ್ಲ. ಏಕೆಂದರೆ, ಅದೊಂದು ಸಾಮಾನ್ಯ ಸನ್ನಿವೇಶ. ಒಂದೇ ಕಾಲೇಜು, ನಿಜ, ಆದರೆ ನಾವಿಬ್ಬರೂ ಬೇರೆ ಬೇರೆ ಸೆಕ್ಷನ್. ಪರಿಚಯ ಇರಲಿಲ್ಲ. ಅದ್ಯಾಕೋ,
ಆ ದಿನ ಆಕಸ್ಮಿಕವಾಗಿ ನಾವು ಬೇಲೂರಿನಲ್ಲಿ ಸೇರಿದ್ದೆವು. ಕಾಲೇಜು ಪ್ರವಾಸಕ್ಕೆ ಹೊರಟಿದ್ದು ಎರಡು ಬಸ್ಸುಗಳು.
ನಾವಿಬ್ಬರೂ ಬೇರೆ ಬೇರೆ ಸೆಕ್ಷನ್ ಆಗಿದ್ದರಿಂದ, ಹೊರಡುವಾಗ ಬೇರೆ ಬೇರೆ ಬಸ್ಸುಗಳಲ್ಲಿ ಕುಳಿತಿದ್ದೆವು. ಮಧ್ಯದಲ್ಲಿ ಕಾಫಿಗೆ ನಿಲ್ಲಿಸಿದಾಗ, ಮೊದಲಿನ ಬಸ್ ನಿನ್ನನ್ನು ಬಿಟ್ಟು ಮುಂದೆ ಚಲಿಸಿದ್ದರಿಂದ ನೀನು ಗಾಬರಿಯಾಗಿದ್ದೆ. ನಿನ್ನ ಸಹ ಪಾಠಿಗಳೆಲ್ಲಾ ಆ ಬಸ್ನಲ್ಲಿ ಹೋಗಿಬಿಟ್ಟಿದ್ದು. ಎರಡನೆಯ ಬಸ್ನಲ್ಲಿ ನಾವೆಲ್ಲಾ ಇದ್ದವು. ಇನ್ನೇನು ಮಾಡುವುದು ಎಂದು ನೀನು ನಮ್ಮ ಬಸ್ ಹತ್ತಿದ್ದೆ.
ಹಳೆ ಪೇಪರ್ ಹಾಡು ಬೇಡವಂತೆ
ಆದರೆ ನನ್ನ ಗಮನಕ್ಕೆ ಅದು ಬಂದಿರಲಿಲ್ಲ. ನನ್ನ ಪಾಡಿಗೆ ನಾನು ಹಾಡು ಹೇಳುತ್ತಿದ್ದೆ. ನಮ್ಮ ಬಸ್ನಲ್ಲಿ ಹಾಡುವ ಸ್ಪರ್ಧೆ. ಎಲ್ಲರೂ ಹಾಡಬೇಕಾಯಿತು. ನನ್ನ ಪಾಳಿ ಬಂದಾಗ, ನಾನು ಹೇಳಿದ ಹಾಡು ‘ಹಳೆ ಪೇಪರ್, ಹಳೆ ಕಬ್ಬಿಣ, ಹಳೆ ಪಾತ್ರೆ. . . ’ ಎಂಬ ವಿಚಿತ್ರ ಸಾಹಿತ್ಯದ, ಏರು ದನಿಯ ಹಾಡು.
ನನ್ನ ಹಾಡನ್ನು ಕೇಳಿ ನಮ್ಮ ಬಸ್ಸಿನಲ್ಲಿದ್ದ ಹುಡುಗಿಯರೆಲ್ಲಾ ಗೊಳ್ ಎಂದು ನಕ್ಕಿದ್ದರು. ಆಗ ನೀನೂ ಅವರ ನಡುವೆ ಕುಳಿತು, ಕಿಸಕ್ ಎಂದು ನಕ್ಕಿದ್ದೆಯಂತೆ. ಹುಡುಗಿಯರೆಲ್ಲಾ ನಕ್ಕಿದ್ದು ಕಂಡು, ‘ಲೋ, ಆ ಹಾಡು ಬೇಡ ಕಣೋ, ಬೇರೆ ಹಾಡೋ’ ಎಂದು ನನ್ನ ಸಹಪಾಠಿಗಳೆಲ್ಲಾ ಗಲಾಟೆ ಮಾಡಿದರು. ಯಾವುದಾದರೂ ಹಾಡು ಎಂದರು. ಹುಡುಗಿಯರಲ್ಲಿ ಒಬ್ಬರು ಮಾತ್ರ ‘ಹಳೆ ಹಾಡು ಹಾಡಿ’ ಎಂದು ಸಣ್ಣ ದನಿಯಲ್ಲಿ ಹೇಳಿದ್ದು ನನಗೆ ಕೇಳಿಸಿತು. ಆದರೆ ಅದನ್ನು ನೀನು ಹೇಳಿದ್ದು ಎಂದು ನನ್ನ ಗಮನಕ್ಕೆ ಬಂದಿರಲಿಲ್ಲ.
ಆದರೂ ಆ ಸಣ್ಣ ದನಿಗೆ ಬೆಲೆ ಕೊಟ್ಟು, ‘ನೋಡಿ, ಹಳೆ ಹಾಡು ಹೇಳುತ್ತೇನೆ, ಆದರೆ ಅದನ್ನು ಮತ್ತೆ ಬೇಡ ಎನ್ನಬಾರದು’ ಎಂದು ಬೆದರಿಸಿದೆ. ಎಲ್ಲರೂ ಓಕೆ ಎಂದರು. ‘ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೆ, ಆರಾಮವಾಗಿ ದೆಯೆ’ ಎಂಬ ಅತಿ ಪುರಾತನ ಸಿನಿಮಾ ಹಾಡು ಹಾಡಿದಾಗ, ಮತ್ತೆ ಎಲ್ಲರೂ ಗೊಳ್ ಎಂದರು. ನೀನೂ ನಕ್ಕಿರಲೇಬೇಕು. ಆದರೆ, ಅದು ಬೇಡ ಎನ್ನುವಂತಿರಲಿಲ್ಲ ಎಂಬ ಕಂಡಿಷನ್ ಇತ್ತಲ್ಲ, ಆದ್ದರಿಂದ ಎಲ್ಲರೂ ಸುಮ್ಮನಾದರು.
ಕಳ್ಳಿ ನೀನು
ನೀನು ಕಳ್ಳಿ, ಏಕೆಂದರೆ, ಉಪಾಯವಾಗಿ ನಮ್ಮ ಬಸ್ ಸೇರಿಕೊಂಡು, ನಾನು ಯಾವ ಹಾಡನ್ನು ಹಾಡಬೇಕು ಎಂದು ಗೊತ್ತಿಲ್ಲದಂತೆಯೇ ಸೂಚಿಸಿದ್ದೆ. ಆದರೂ ನನಗೊಂದೂ ಅರಿವಾಗಿಲ್ಲ. ನಂತರ, ಬೇಲೂರು ದೇವಾಲಯ ನೋಡುವಾಗಲೂ ಅಷ್ಟೆ, ನಮ್ಮ ಪಾಡಿಗೆ ಅಲ್ಲಿನ ಶಿಲಾಬಾಲಿಕೆಯನ್ನು ನೋಡುತ್ತಾ ಸಾಗಿ ದೆವೇ ಹೊರತು, ನಿನ್ನಂತಹ ಶಿಲಾಬಾಲಿಕೆ ನಮ್ಮ ನಡುವೆ ನನ್ನನ್ನೇ ನೋಡುತ್ತಾ ಇದ್ದೆ ಎಂದೇ ನನ್ನ ಅರಿವೆಗೆ ಬಂದಿರಲಿಲ್ಲ.
ನೀನು ಕಳ್ಳಿ, ಏಕೆಂದರೆ, ನನಗೆ ಗೊತ್ತಿಲ್ಲದಂತೆ ನನ್ನನ್ನು ನೋಡುತ್ತಾ, ಅನುಸರಿಸುತ್ತಿದ್ದೆ! ಇದನ್ನು ನೀನೇ ನನ್ನ ಬಳಿ ನಂತರ ಹೇಳಿದ್ದು. ಬೇಲೂರು ಶಿಲಾಬಾಲಿಕೆಯನ್ನು ನೋಡಿಕೊಂಡು, ಹಳೆಬೀಡಿಗೆ ಹೋದೆವು. ಅಲ್ಲಿಂದ ಸೋಮನಾಥಪುರಕ್ಕೆ
ಹೋದೆವು. ಅಲ್ಲೆಲ್ಲೂ ನಿನ್ನ ನನ್ನ ಮುಖಾಮುಖಿ ಆಗಲೇ ಇಲ್ಲ. ನೀನು ಸಂಕೋಚದ ಮುದ್ದೆ, ನಿನ್ನ ಬಸ್ಗೆ ಹೋಗಿ ಸೇರಿ ಕೊಂಡು ಬಿಟ್ಟಿದ್ದೆ. ನಮ್ಮ ಬಸ್, ನಿಮ್ಮ ಬಸ್ ಬೇರೆ ಇತ್ತಲ್ಲ!
ಮೈಸೂರಿನ ಬೃಂದಾವನಕ್ಕೆ ಅದೇನೋ ಒಂದು ಶಕ್ತಿ ಇದೆ. ಅಲ್ಲಿನ ತೋಟ, ನೀರಿನ ಕಾರಂಜಿ, ಬಣ್ಣದ ಬಣ್ಣದ ಬೆಳಕುಗಳು, ಇವೆಲ್ಲವುಗಳಿಗೂ ನಮ್ಮ ಹೃದಯದಲ್ಲಿ ಬಣ್ಣ ಬಣ್ಣದ ದೀಪಗಳನ್ನು ಬೆಳಗುವ ಶಕ್ತಿ ಇರಬೇಕು. ನಾನು ನನ್ನ ಪಾಡಿಗೆ ಆ ನಸುಗತ್ತಲಲ್ಲಿ ಸೆಲಿ ತೆಗೆದುಕೊಳ್ಳುತ್ತಿರಬೇಕಾದರೆ, ಅದ್ಯಾಕೆ ನೀನು ನನ್ನ ಹತ್ತಿರ ಬಂದೆ? ನಿನ್ನ ಗೆಳತಿಯರ ಗುಂಪನ್ನು ದೂರ ವಿಟ್ಟು, ನನ್ನ ಹಿಂದೆ ಮುಂದೆ ಸುತ್ತುತ್ತಿದ್ದೆ? ಆಗಲೇ ನನಗೇಕೋ ಅನುಮಾನ ಬಂತು.
ಕೇಳಿದೆ ‘ಏನ್ರಿ, ನೀವು ಒಬ್ಬರೇ ಇಲ್ಲಿ, ಬೇರೆ ಗೆಳತಿಯರು ಎಲ್ಲಿಗೆ ಹೋದರು?’ ನನ್ನ ಪ್ರಶ್ನೆಗೆ ನಿನ್ನ ಉತ್ತರ ಎಂದರೆ, ಸುಂದರವಾದ ಆದರೆ ಮೌನವೇ ತುಂಬಿದ ಒಂದು ನಗು! ನಾಲ್ಕಾರು ಕ್ಷಣಗಳ ತನಕ ನಗುತ್ತಲೇ ನಿಂತ ನೀನು, ನಿನ್ನ ಶೈಲಿಯಲ್ಲಿ ತಲೆ ಬಾಗಿಸಿಕೊಂಡು ಸರಸರನೆ ನಿನ್ನ ಗೆಳತಿಯರ ಬಳಿಗೆ ಹೋದೆ. ನಿನಗೆ ಮೌನವೇ ಆಭರಣವೆ? ಆ ನಂತರ, ಆ ಪ್ರವಾಸದಲ್ಲಿ ನಿನ್ನ ಸಂಪರ್ಕವೇ ಆಗಲಿಲ್ಲ! ಪ್ರವಾಸ ಮುಗಿಸಿದ ಎರಡು ದಿನಗಳ ನಂತರವಷ್ಟೇ ನಿನ್ನನ್ನು ಮತ್ತೆ ನೋಡಿದ್ದು. ಆ ಕ್ಷಣದಲ್ಲಿ ಗೊತ್ತಾ ಯಿತು, ನೀನು ನನ್ನ ಮನಸ್ಸಿಗೆ ಹತ್ತಿರ ಆಗಿದ್ದೀಯಾ ಅಂತ. ದಿನಾ ಮಾತನಾಡುವುದಾಯಿತು.
ಆಗಲೇ ನೀನು ಹೇಳಿದ್ದು, ‘ಬೇಲೂರಿನಲ್ಲಿ ನಿನ್ನನ್ನು ಕಂಡಾಗಲೇ ನಿನ್ನ ಸ್ಮಾರ್ಟ್ ನಿಲುವಿಗೆ ಫಿದಾ ಆಗಿದ್ದೀನಿ’ ಅಂತ. ಈಗ ಮತ್ತೆ ಸಣ್ಣಗೆ ಮಳೆಯಾಗುತ್ತಿದೆ, ನಿನ್ನ ಬರವನ್ನು ಕಾಯುತ್ತಿದ್ದೇನೆ. ಹನಿ ಮಳೆಯಲ್ಲಿ ಬಣ್ಣದ ಕೊಡೆ ಹಿಡಿದು ನೀನು ಇನ್ನೇನು ಬರುತ್ತೀಯಾ ಎಂಬ ನಿರೀಕ್ಷೆ. ಇಂದು ನನ್ನ ಮನದಾಳದ ಎಲ್ಲಾ ಪ್ರೀತಿಯನ್ನೂ ನಿನ್ನೆದರು ತೋಡಿಕೊಳ್ಳಲಿದ್ದೇನೆ.. ರಭಸದ
ಮಳೆ ಸುರಿದಂತೆ ಆ ಪ್ರಿತಿಯ ಹೊಳೆ ಹರಿಯಲಿದೆ ಎಂದು ಕಾತರದಿಂದ ಕಾಯುತ್ತಿದ್ದೇನೆ. ಬೇಗ ಬಾ, ನನ್ನ ಗೆಳತಿ.