Wednesday, 11th December 2024

ಅಕ್ಕಾ ನಿನ್ನ ಗಂಡ ಹ್ಯಾಂಗಿರಬೇಕು !

ಸತಿ ಪತಿಯರ ನಡುವಿನ ಬಾಂಧವ್ಯ ಹೇಗಿರಬೇಕು? ಸತಿಗೆ ಸಲ್ಲಬೇಕಾದ ಗೌರವ ನೀಡುವುದು ಪತಿಯ ಕರ್ತವ್ಯ ತಾನೆ? ತನ್ನ ಗಂಡ ಹೇಗಿರಬೇಕು ಎಂದು ಕೇಳಿದರೆ ಹೆಣ್ಣೊಬ್ಬಳು ಏನೆಂದು ಉತ್ತರ ಕೊಡಬೇಕು?

ವಸುಂಧರಾ ಕದಲೂರು

ಲಕಾಲಕಾಂತ ಹೊಳಿತಿರಬೇಕು..’ ಇದು ಥಟ್ಟನೆ ನೆನಪಾಗುವ ಕನ್ನಡದ ಜನಪ್ರಿಯ ಸಿನೆಮಾದ ಹಾಡಿನ ಸಾಲುಗಳು. ಇಲ್ಲಿ
ಹೊಳೆಯುತ್ತಿರಬೇಕು ಎನ್ನುವುದಕ್ಕೆ ನಾನಾರ್ಥಗಳಿವೆ. ಗಂಡನಾಗಿ ಬರುವವನ ಮೈಕಾಂತಿಯೋ ಮುಖದಲ್ಲಿನ ಲಕ್ಷಣವೋ ಹೊಳೆದರೆ ಸಾಕಾಗದು.

ಆತನ ವ್ಯಕ್ತಿತ್ವವೂ ಹೊಳಪಿನಿಂದ ಕೂಡಿರಬೇಕು ಎನ್ನುವ ಆಶಯ ಇಡೀ ಹಾಡಿನಲ್ಲಿದೆ. ಆ ಹಾಡು ಮದುವೆ ಆಗ ಬಯಸುವ ಯಾವುದೇ ಹೆಣ್ಣುಮಗಳ ಅಂತರಾಳದ ಮಾತಿನಂತೆಯೇ ತೋರುತ್ತದೆ. ಇನ್ನು ನಮಗೆ ಅಕ್ಕನೆಂದರೆ ನೆನಪಾಗುವುದು ನಮ್ಮ ನಮ್ಮ ಒಡಹುಟ್ಟಿನ ಸಹೋದರಿಯರೇ. ಆದರೆ ಅದಕ್ಕೂ ಮೀರಿ ಅಪ್ಪಟ ಕನ್ನಡಿಗರಾದ ನಾವು ಜಗದ ಅಕ್ಕನಾಗಿ ಸ್ಥಾಯಿ ಯಾಗಿರುವ ಶರಣೆ ಮಹಾದೇವಿ ಅಕ್ಕನ ನೆನಪನ್ನು ಥಟ್ಟನೆ ನೆನೆದರೆ ಅದು ಅಸಹಜವೇನಲ್ಲ.

ನಮ್ಮ ಈ ಅಕ್ಕಮಹಾದೇವಿಗೂ ಲೌಕಿಕದ ಗಂಡ ಕೌಶಿಕ ರಾಜನಿದ್ದ. ಆದರೆ ಆಕೆಯ ಅಧ್ಯಾತ್ಮಿಕ ಮನಸ್ಸು ಬಯಸಿದ್ದು ಮಾತ್ರ ಅಲೌಕಿಕದ ಗಂಡ ಚನ್ನಮಲ್ಲಿಕಾರ್ಜುನನ್ನು. ‘ಶರಣ ಸತಿ ಲಿಂಗ ಪತಿ’ಯೆಂಬ ಶರಣರ ಒಲವು ತುಂಬಿದ ಭಕ್ತಿಭಾವವು ನಿಜದ ಸಾಕಾರ ಪಡೆಯುವುದನ್ನು ಅಕ್ಕನ ಉತ್ಕಟ ಪ್ರೇಮಾರ್ಚನೆಯ ವಚನಗಳಲ್ಲಿ ಕಾಣಬಹುದು.

ಹಾಗೆಯೇ ಈ ನಾಡಿನ ಜನಪದ ಹೆಣ್ಣುಮಗಳು ಬಯಸುವುದು ಒಲವನ್ನು ನೀಡುವ ಸರಳ ಗಂಡನನ್ನು..ಹಾಸೀಗೆ ಹಾಸೆಂದ ಮಲ್ಲೀಗಿ ಮುಡಿಯೆಂದ ಬ್ಯಾಸತ್ತರ ಮಡದಿ ಮಲಗೆಂದಾ/ ನನ ರಾಯಾ ನನ ನೋಡಿ ತವರ ಮರಿಯಂದಾ’ ಎಂದು ಗಂಡನ ಪ್ರೀತಿಯನ್ನು ಹಾಡಿಹೊಗಳುತ್ತಾಳೆ.

ತವರೂರ ದಾರಿ

ತವರೂರ ನೆನಪು ಮಾಡಿಕೊಳ್ಳದ ಹೆಣ್ಣುಂಟೆ? ಅದರಲ್ಲೂ ಮದುವೆಯ ಹೊಸತರಲ್ಲಿ ತಾಯಿ- ತಂದೆ, ಒಡಹುಟ್ಟಿದವರು,  ಗೆಳೆತಿಯರನ್ನು ಬಿಟ್ಟು ಬಂದು ‘ಮೊದಲ ದಿನ ಮೌನ’ ದಲಿದ್ದು, ಎರಡನೆಯ ದಿನಕ್ಕೆ ‘ನೀರೊಳಗೆ ವೀಣೆ ಮಿಡಿದಂತೆ ಮಾತು’ ಆಡುತ್ತಾ ಅಂಜುತ್ತಾ ಅಳುಕುತ್ತಾ ಹೊಸ ಜೀವನ ಶುರುಮಾಡುವ ನೆಚ್ಚಿನ ಮಡದಿಯನ್ನು ಸಂತೈಸಿ ಅವಳ ಒಲವನ್ನು ಗೆಲ್ಲಲು ಗಂಡನಾದವನು ತವರೂರ ಮರೆಸುವಷ್ಟು ಅವಳನ್ನು ಪ್ರೀತಿಸಲೇಬೇಕು.

ಕೆಲವೊಮ್ಮೆ ಹೆಣ್ಣುಮಕ್ಕಳ ಕನಸೇ ಬೇರೆ. ಗೌರಮ್ಮಾ ನಿನ್ನ ಗಂಡ ಯಾರಮ್ಮಾ..? ಎಂದರೆ, ಆ ಗೌರಿ, ಬಹುವಾಗಿ ಇಚ್ಚೆ ಪಟ್ಟು ಕಠಿಣತಮ ವ್ರತ ಹಿಡಿದು ವರಿಸುವುದು ಸ್ಮಶಾನವಾಸಿ, ನಿರಾಡಂಬರಿ, ಭಿಕ್ಷಾಂದೇಹಿ ಎನ್ನುವ ಭಕ್ತವತ್ಸಲನಾದ ಶಿವನನ್ನು!
ಸತಿಯನ್ನೂ ಗೌರವಿಸಬೇಕು ‘ಏಕಪತ್ನೀ ವ್ರತಸ್ಥ’ನೆಂಬ ಬಿರುದುಳ್ಳ ರಾಮಚಂದ್ರ ನಂತಹ ಧರ್ಮಭೀರುವಾದ ಗಂಡನನ್ನು ಪಡೆದ ಸೀತೆ ಅನುಭವಿಸಿದ ಸುಖದ ಬಗೆಗಳನ್ನು ಕಾಲಕಾಲಕ್ಕೂ ವಿಮರ್ಶೆಯ ನಿಕಷಕ್ಕೆೆ ಒಡ್ಡುತ್ತಾ ಬರಲಾಗಿದೆ.

ಕಷ್ಟಕಾರ್ಪಣ್ಯಗಳಿಗೆ ತುತ್ತಾಗುತ್ತಾ ಇರುವ ಸಂದರ್ಭಗಳಲ್ಲಿ ಏಕಪತ್ನೀವ್ರತಸ್ಥ ಎನಿಸುವುದೇ ಗಂಡನ ಹೆಗ್ಗಳಿಕೆಯಲ್ಲ, ಹೆಂಡತಿ
ಯನ್ನು ಗೌರವದಿಂದ ನಡೆಸಿಕೊಳ್ಳುವುದೂ ಸಹ ಮುಖ್ಯ. ನಂಬಿ ಕೈ ಹಿಡಿದ ಜೊತೆಗಾರ್ತಿಯನ್ನು ಶಂಕಿಸದೆ, ಪ್ರೀತಿಯಿಂದ ಕಾಣಬೇಕೆನ್ನುವ ಸ್ತ್ರೀಕುಲದ ಸ್ಪಷ್ಟ ಅಭಿಪ್ರಾಯ ಹಲವಾರು ಸಂದರ್ಭಗಳಲ್ಲಿ ಸಾಬೀತಾಗಿದೆ.

ಇನ್ನು ದ್ರೌಪದಿ ಎಂಬ ಮಹಾತ್ವಾಕಾಂಕ್ಷೆಯ ಹೆಣ್ಣಿನ ಬಾಯಲ್ಲಿ ಜಗದೇಕವೀರರಾದ ಪಂಚ ಪಾಂಡವರನ್ನು ‘ಗಂಡರೈವರು ನೀವು ಹೆಂಡಿರೊಬ್ಬಳ ಮಾನ ಕಾಯಲಾರಿರಿ ಗಂಡರೋ ನೀವು ಭಂಡರೋ’ ಎಂದು ಹೇಳಿಸಿ, ಸ್ತ್ರೀತ್ವದ ಆಶಯವನ್ನು ಸಾರಿದ ಕನ್ನಡದ ಕುಮಾರವ್ಯಾಸನನ್ನು ಮೆಚ್ಚದಿರಲಾಗದು. ಇಲ್ಲಿ ‘ಭಂಡ ’ ಎಂಬ ಕಡೆ ‘ಷಂಡ’ಎಂಬ ಪದ ಪ್ರಯೋಗ ಮಾಡಿದ
ನಿಷ್ಪತ್ತಿಗಳಿಗೇನೂ ಕೊರತೆಯಿಲ್ಲ. ಗಂಡನಾದವನು ಹೆಂಡತಿಗೆ ಆಗುವ ಅವಮಾನವನ್ನು ಸಹಿಸಬಾರದು, ಅಷ್ಟೇ ಅಲ್ಲ ಆಕೆ ಅಪಮಾನಕ್ಕೆ ತುತ್ತಾಗುವಂತಹ ಕೆಲಸವನ್ನೂ ತಾನು ಮಾಡಬಾರದು.

ಆಧುನಿಕ ಕಾಲಮಾನ ಕಂಡ ಮಹಾ ಅನುಭಾವಿ ಶರೀಫಜ್ಜ ಸಹ, ಅಲ್ಲಮ ಪ್ರಭುವಿನಿಂದ ತೀವ್ರ ಪ್ರಭಾವಕ್ಕೆ ಒಳಗಾದವರು, ಅಲ್ಲಮ ಮೊದಲಾದ ಶಿವಶರಣರ ಲಿಂಗಪತಿ ಭಾವದಲ್ಲಿಯೇ ಶರೀಫಜ್ಜರೂ ಸಹ ‘ಎಲ್ಲರಂತವನಲ್ಲ ನನ ಗಂಡ, ಬಲ್ಲಿದನು ಪುಂಡ, ಎಲ್ಲರಂತವನಲ್ಲ..’ ಎನ್ನುತ್ತಲೇ ‘ಎಲ್ಲೂ ಹೋಗದ ಹಾಗೆ ಮಾಡಿಟ್ಟ, ಕಾಲ್ಮುರಿದು ಬಿಟ್ಟ’ ಎನ್ನುತ್ತಾ ತನ್ನ ಚಂಚಲ
ಚಿತ್ತ ಪ್ರವೃತ್ತಿಗೆ ಕಡಿವಾಣ ಹಾಕಿದ ಖಾದರಲಿಂಗುವನ್ನೇ ಪತಿಭಾವದಲ್ಲಿ ಕಂಡು ಹಾಡಿದುದನ್ನು ಮರೆಯಲಾದೀತೇ?  ಕನ್ನಡದ ಪ್ರಮುಖ ನಾಟಕಕಾರರಾದ ‘ಸಂಸ’ರ ಒಂದು ನಾಟಕದ ಹೆಸರೇ ‘ಬಿರುದೆಂತೆಂಬರು ಗಂಡ’ ಎಂದು!

ನಿಜ ಗಂಡ ಎಂಬುದೇ ಒಂದು ಗೌರವ – ಬಿರುದು ಎಂದು ಎದೆಯುಬ್ಬಿಸಿ ಮೆರೆಯುವ, ದೌಲತ್ತು ತೋರುವವರು ನಮ್ಮ ನಡುವೆ ಕಡಿಮೆಯೇನಿಲ್ಲ. ‘ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು..?’ ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬ ಕೆಲವು
ಗಾದೆಗಳು ಸಾಂಸಾರಿಕ ಜೀವನದಲ್ಲಿ ಸಾರ್ಥಕ್ಯ ಕಾಣಬೇಕಾದರೆ, ಗಂಡ ಎನಿಸಿಕೊಂಡವನು ಜವಾಬ್ದಾರಿಯಿಂದ ನಿರ್ವಹಿಸ ಬೇಕಾದ ಪಾತ್ರದ ಬಗ್ಗೆೆ ಸೂಕ್ಷ್ಮವಾಗಿ ತಿಳಿಸುತ್ತವೆ. ಹಾಗೆಯೇ ‘ಗಂಡಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಸತ್ಯದ ಉಪದೇಶವನ್ನು ಕಿವಿಮಾತಾಗಿ ಹೇಳುವ ಜನಪದ ಮಾತುಗಳಲ್ಲಿ ಯಾವ ಕೊರತೆಯಿದೆ ಹೇಳಿ? ಮೊಲೆ ಮೂಡಿ ಬಂದರೆ ಹೆಣ್ಣೆೆಂಬರು ಗಡ್ಡ ಮೀಸೆ ಬಂದರೆ ಗಂಡೆಂಬರು ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ ಎನ್ನುವ ಅಕ್ಕನ ವಚನ ದಂತೆಯೇ ‘ಗಂಡು’ ಎಂದರೆ ಮೀಸೆ ಇರುವವನಲ್ಲ, ಇಲ್ಲದವನೂ ಅಲ್ಲ.

ಅಂತಃಕರಣ ಹೊಂದಿದ ಆತ್ಮಸಖನಾದ ಯಾವ ಗಂಡಾದರೂ ಯೋಗ್ಯನಾದ ಗಂಡ ಆದಾನು. ಯಾವ ಹೆಣ್ಣೇ ಆಗಲಿ ಜೊತೆಗಾರ ನನ್ನಾಗಿ ಬಯಸುವುದು ಹೀಗೆ ಅಂತಃಕರುಣೆಯುಳ್ಳ, ಪರಸ್ಪರ ಗೌರವಭಾವನೆ ತೋರುವ ಗಂಡನ್ನೇ. ಹಾಗಾದರೆ ಈಗ ಕೇಳೋಣವೇ , ‘ಅಕ್ಕಾ ನಿನ್ನ ಗಂಡ ಹ್ಯಾಂಗಿರಬೇಕು?’

ಸ್ತ್ರೀ ಕುಲದ ಧೈರ್ಯಲಕ್ಷ್ಮಿ ‘ಶಿವನು ಭಿಕ್ಷಕ್ಕೆ ಬಂದ ನೀಡು ಬಾರೇ ತಂಗಿ, ಅವನಂಥ ಚೆಲುವರಿಲ್ಲ ನೋಡು ಬಾರೇ… ’ ಎಂದು
ಜನಪದರು ಹಾಡಿ ಹೊಗಳಿದ ಶಿವನೇನು ಬೇರೆಯವನೇ? ಅಕ್ಕ ಮನಸಾರೆ ಒಲಿದು ಕೂಡಿದ ಚನ್ನಮಲ್ಲಿಕಾರ್ಜುನನನೇ ಆತ. ‘ಸಾವ ಕೆಡುವ ಗಂಡರ ಒಲೆಯೊಳಗಿಕ್ಕು’ ಎನ್ನುವ ಅಕ್ಕ ತಾನೊಲಿಯುವುದು ಮಾತ್ರ ‘ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವನನ್ನು’ ಆತನೋ ಅಪ್ರತಿಮ ಸುಂದರಾಂಗ ! ‘ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವ’. ಮಿಕ್ಕಿ ಮೀರಿ ಹೋಗುತ್ತಿದ್ದವನ  ಬಿಡದೆ ಬೆಂಬತ್ತಿ ಹೋಗಿ ಕೈ ಹಿಡಿದು ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳುವ ಅಕ್ಕ ಸ್ತ್ರೀ ಕುಲದ ಧೈರ್ಯಲಕ್ಷ್ಮಿ.

ಒಲಿದ ಗಂಡನನ್ನು ಅರಸುವುದು ಹೇಗೆಂದು ಅಕ್ಕಮಹಾದೇವಿಯವರ ವಚನಗಳನ್ನು ಓದಿಯೇ ಅರಿಯಬೇಕು. ಗಂಡ ಎಂದರೆ ಯಾರು? ಕನ್ನಡದ ಹಿರಿಯ ಬರಹಗಾರ್ತಿ ವೈದೇಹಿಯವರ ‘ಅಕ್ಕು’ವಿನ ಗಂಡನನ್ನು ಓದುಪ್ರಿಯರು ಮರೆಯಲುಂಟೇ..? ‘ಟುವಾಲು’ ಬೀಸುತ್ತಾ ಓಡಾಡುವ ಅಕ್ಕು ಜನರ ಕಣ್ಣಿಗೆ ‘ಮರ್ಲು’ ಎಂದು ಕಂಡರೂ ಅದಕ್ಕೆೆ ಕಾರಣ ಆದವನು ಆಕೆಯ ಉಢಾಳ
ಗಂಡನೇ ಎಂಬುದನ್ನು ಮರೆಯಲಾರರು.

ಸಾಂಸಾರಿಕ ಜೀವನದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಗಂಡಿಗೆ ಹೆಂಡತಿ ಮಕ್ಕಳಿಂದಲೂ ಗೌರವ ದೊರಕದು. ಗಂಡಾಗುವುದು ಸುಲಭ. ಆದರೆ ಗಂಡನಾಗಿ ಜವಾಬ್ದಾರಿ ನಿಭಾಯಿಸುವುದು ಬಲು ಕಷ್ಟ. ಅದಕ್ಕೆ ಸಿದ್ಧನಿಲ್ಲದ ಗಂಡು ಗಂಡ ನಾಗುವುದಾದರೂ ಏಕೆ? ಹಾಗೆಯೇ ಗಂಡ ಎಂಬುದು ವಿವಾಹಿತ ಪುರುಷನನ್ನು ಸೂಚಿಸುವ ವಾಚಕ ಪದವೇ ಹೊರತು ಅದೇನು ಗುಣವಿಶೇಷಣವಲ್ಲ ಎನ್ನುವುದನ್ನು ನೆನಪಿಡೋಣ.