Wednesday, 11th December 2024

ಸುಬೇದಾರ್‌ ಎಂಬ ಸಮನ್ವಯ ಅಧಿಕಾರಿ

ಮೇಜರ್ ಡಾ ಕುಶ್ವಂತ್ ಕೋಳಿಬೈಲು

(ಸೇನಾ ದಿನಚರಿಯ ಪುಟಗಳಿಂದ 05)

ಭಾರತೀಯ ಸೇನೆಯಲ್ಲಿ ಅಧಿಕಾರಿಗಳು ಮತ್ತು ಸೈನಿಕರ ನಡುವೆ ಬಾಂಧವ್ಯದ ಕೊಂಡಿಯಾಗಿ ಕೆಲಸಮಾಡುವ ವಿಶಿಷ್ಟವಾದ ವರ್ಗವೊಂದಿದೆ. ಇದು ಬ್ರಿಟಿಷರು ಭಾರತದಲ್ಲಿ ಸೇನಾಧಿಕಾರಿಗಳಾಗಿದ್ದ ಕಾಲಘಟ್ಟ ದಲ್ಲಿ ಶುರುವಾದ ಪರಂಪರೆ. ಬ್ರಿಟಿಷರು ಅಧಿಕಾರಿಗಳಾಗಿದ್ದಾಗಲೂ, ಸೈನಿಕರು ಮಾತ್ರ ನಮ್ಮ ದೇಶದವರೇ ಆಗಿದ್ದರು. ಭಾಷೆ ಮತ್ತು ಆಚಾರ ವಿಚಾರಗಳು ತೀರಾ ವಿಭಿನ್ನ ವಾಗಿದ್ದ ಕಾರಣ ಅಧಿಕಾರಿಗಳ ಮತ್ತು ಸೈನಿಕರ ನಡುವೆ ಸಾಮರಸ್ಯ ಸಾಧಿಸಲು ಜೆಸಿಓಗಳನ್ನು (ಜೂನಿಯರ್ ಕಮಿಷನ್ಡ್ ಆಫೀಸರ್ಸ್) ನೇಮಿಸಲಾಯಿತು. ಇವರನ್ನೇ ನಾವು ಸುಬೇದಾರರೆಂದು ಕರೆಯುತ್ತೇವೆ.

ಸೇನೆಯಲ್ಲಿ ಸಿಪಾಯಿಯಾಗಿ ಬರ್ತಿಯಾದವರಲ್ಲಿ ಕೆಲವು ಜನ ಹಂತ ಹಂತವಾಗಿ ಮೇಲೇರಿ ಈ ಜೆಸಿಓ ಹುದ್ದೆಗೆ ತೇರ್ಗಡೆಯಾಗು ತ್ತಾರೆ. ಪ್ರತಿ ರೆಜಿಮೆಂಟಿನಲ್ಲಿರುವ ಸುಬೇದಾರ ಪೈಕಿ ಅತ್ಯಂತ ಹಿರಿಯ ಸುಬೆದಾರರನ್ನು ಸುಬೇದಾರ್ ಮೇಜರ್ ಎಂದು ಕರೆಯು ತ್ತೇವೆ. ರೆಜಿಮೆಂಟಿನ ಎಂಟುನೂರು ಸೈನಿಕರಿಗೆ ಆತನೇ ಹಿರಿಯಣ್ಣ. ಕಮಾಂಡಿಗ್ ಆಫೀಸರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ರೆಜಿಮೆಂಟಿನ ರೀತಿ ರಿವಾಜುಳನ್ನು ಉಳಿಸಿ ಬೆಳಸುವಲ್ಲಿ ಆತನ ಪಾತ್ರ ದೊಡ್ಡದು.

ಸಿಪಾಯಿಯಾಗಿ ಕೆಲಸ ಮಾಡಿ ಅನುಭವವಿರುವ ಕಾರಣ ಸುಬೇದಾರ್ ಮೇಜರ್ ಅವರಿಗೆ ತಮ್ಮ ರೆಜಿಮೆಂಟಿನೊಳಗೆ ನಡೆಯು ತ್ತಿರುವ ಪ್ರತಿಯೊಂದು ವಿಷಯಗಳ ಬಗ್ಗೆ ಸೂಕ್ಷ್ಮ ವಾದ ಅರಿವಿರುತ್ತದೆ. ಕೆಳ ಹಂತದ ಕೆಲಸಗಳನ್ನು ಸ್ವತಃ ಮಾಡಿ ಅನುಭವ ವಿರುವ ಸುಬೇದಾರರ ಸಲಹೆಗಳನ್ನು ಅಧಿಕಾರಿಗಳು ತಳ್ಳಿಹಾಕುವುದಿಲ್ಲ. ಹೊಸ ತಂತ್ರಜ್ಞಾನ ಯಾವುದೇ ಬರಲಿ, ಆಯುಧಗಳು ಮತ್ತು ವಿಮಾನಗಳು ಎಷ್ಟೇ ಶಕ್ತಿಿಶಾಲಿಯಾಗಿರಲಿ, ಅಂತಿಮವಾಗಿ ಶತ್ರು ದೇಶದ ನೆಲದ ಮೇಲೆ ವಿಜಯ ಪತಾಕೆಯನ್ನು ನೆಡು ವುದು ನಮ್ಮ ಪದಾತಿದಳದ ಹುಡುಗರೇ. ಹಾಗಾಗಿ ಸಿಪಾಯಿಯಿಂದ ಹಿಡಿದು ರೆಜಿಮೆಂಟಿನ ಕಮಾಂಡಿಂಗ್ ಅಧಿಕಾರಿಯ ನಡುವೆ ಪರಸ್ಪರ ವಿಶ್ವಾಸ ಮತ್ತು ಸಮನ್ವಯವಿರುವುದು ಅತೀ ಅಗತ್ಯ.

ಬ್ರಿಟಿಷರು ತೆರಳಿದ ನಂತರವೂ ಭಾರತೀಯ ಸೇನೆಯಲ್ಲಿ ಸುಬೇದಾರರಿಗಿರುವ ಮಹತ್ವ ಕಡಿಮೆಯಾಗಿಲ್ಲ. ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಈ ವಿಭಿನ್ನವಾದ ಜೆಸಿಓ ಕೇಡರ್ ಇಂದಿಗೂ ಭಾರತ ಮತ್ತು ಪಾಕಿಸ್ತಾನದ ಸೇನೆಯಲ್ಲಿ ಮಾತ್ರ ಉಳಿದುಕೊಂಡಿದೆ. ಈ ಎರಡೂ ದೇಶದ ಸೇನಾ ಪರಂಪರೆಯ ಮೇಲೆ ಬ್ರಿಟಿಷ್ ಪ್ರಭಾವ ಸಾಕಷ್ಟಿದೆ. ದೇಶ ವಿಭಜನೆಯಾದಾಗ ಸಮ್ಮ ಸೇನೆಯನ್ನೂ ಹಂಚಿಕೊಳ್ಳಲಾಯಿತು.

ಪಾಕಿಸ್ತಾನಕ್ಕೆ ಸೇರಿದ ಪ್ರದೇಶಗಳಾದ ಬಲೋಚ್ ಸೈನಿಕರಿದ್ದ ಬಲೋಚ್ ರೆಜಿಮೆಂಟ್ ಸಂಪೂರ್ಣವಾಗಿ ಪಾಕಿಸ್ತಾನದ ಪಾಲಾ ಯಿತು. ಪಂಜಾಬ್ ಹಂಚಿಹೋದಂತೆ ಪ್ರಸಿದ್ಧ ಪಂಜಾಬ್ ರೆಜಿಮೆಂಟಿನ ಬೆಟಾಲಿಯನ್ನುಗಳನ್ನು ಎರಡೂ ದೇಶಗಳು ಹಂಚಿ ಕೊಂಡವು. ಪಂಜಾಬ್ ರೆಜಿಮೆಂಟಿನ ಒಂದನೇ, ಎಂಟನೇ ಬಟಾಲಿಯನ್ ಪಾಕಿಸ್ತಾನಕ್ಕೆ ಹೋದರೆ ಎರಡನೇ ರೆಜಿಮೆಂಟ್ ಭಾರತದ ಸೇನೆಯ ಭಾಗವಾಯಿತು. ಹಾಗಾಗಿ ಎರಡೂ ದೇಶದಲ್ಲಿ ಇಂದಿಗೂ ಪಂಜಾಬ್ ರೆಜಿಮೆಂಟಿದೆ.

ಇಂಗ್ಲೆಂಡಿನಲ್ಲಿ ನೇಪಾಲಿ ಸೈನಿಕರು ನೇಪಾಲಿ ಸೈನಿಕರಿದ್ದ ಗೋರ್ಖಾ ರೆಜಿಮೆಂಟ್, ಮೊದಲ ಹಾಗು ಎರಡನೆಯ ವಿಶ್ವಯುದ್ಧ ದಲ್ಲಿ ತೋರಿದ ಶೌರ್ಯಕ್ಕೆ ವಿಶ್ವವೇ ತಲೆಬಾಗಿತ್ತು. ದೇಶ ವಿಭಜನೆಯಾದಾಗ ಈ ನೇಪಾಲಿಯರಿದ್ದ ಗೋರ್ಖಾ ರೆಜಿಮೆಂಟು ಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ಬಿಟ್ಟು ತೆರಳಲು ಬ್ರಿಟಿಷರಿಗೆ ಮನಸ್ಸಿರಲಿಲ್ಲ. ಕೆಲವು ಗೋರ್ಖಾ ರೆಜಿಮೆಂಟಗಳನ್ನು ಅವರು ಇಂಗ್ಲೆೆಂಡಿಗೆ ಕೊಂಡೊಯ್ದರು.

ಹಾಗಾಗಿ ಇಂದು ಗೋರ್ಖಾ ರೆಜಿಮೆಂಟ್ ನಮ್ಮಲ್ಲೂ ಇದೆ, ಇಂಗ್ಲೆಂಡಿನಲ್ಲೂ ಇದೆ. 15 ಆಗಸ್ಟ್‌ 1947ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನ ಕಾಲಘಟ್ಟದಲ್ಲಿ ನಮ್ಮ ಸೇನೆಯಲ್ಲಿ ನಡೆದ ವಿದ್ಯಮಾನಗಳು ಕುತೂಹಲಕಾರಿ. ಅಂದು ನಮ್ಮ ಅನೇಕ ರೆಜಿಮೆಂಟುಗಳಲ್ಲಿ ಭಾರತೀಯ ಅಧಿಕಾರಿಗಳ ಜತೆ ಬ್ರಿಟಿಷ್ ಅಧಿಕಾರಿಗಳೂ ಕೆಲಸ ಮಾಡುತ್ತಿದ್ದರು. ಅದೇ ಕಾರಣಕ್ಕಾಗಿ ಆ ದಿನದ ಸಂಭ್ರಮವನ್ನು ಭಾರತೀಯ ಮೂಲದ ಅಧಿಕಾರಿಗಳು ತಮ್ಮ ರೆಜಿಮೆಂಟಿನ ಆಫೀಸರ್ ಮೆಸ್ಸಿನಲ್ಲಿ ಆಚರಿಸುವಂತಿರಲಿಲ್ಲ. ಆ ಸೂಕ್ಷ್ಮ ವಿಷಯವನ್ನು ಅರಿತ ನಮ್ಮ ಸುಬೇದಾರರು ಭಾರತೀಯ ಅಧಿಕಾರಿ ಗಳನ್ನು ತಮ್ಮ ರೆಜಿಮೆಂಟಿನ ಜೆಸಿಓ ಮೆಸ್ಸಿಗೆ ಆಹ್ವಾ ನಿಸಿ, ಜತೆಯಾಗಿ ದೇಶದ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಿದರು.

ಪ್ರತಿವರ್ಷ ಆಗಸ್ಟ್‌ ಹದಿನೈದರಂದು ಈ ಪದ್ಧತಿಯನ್ನು ಮುಂದುವರಿಸಿದರು. ಕೆಲವು ವರ್ಷಗಳಲ್ಲಿ ದೇಶ ಗಣತಂತ್ರವಾದಾಗ ಭಾರತೀಯ ಸೇನೆಯ ಅಧಿಕಾರಿಗಳಿಗೆ ಸುಬೇದಾರರನ್ನು ತಮ್ಮ ಆಫೀಸರ್ ಮೆಸ್ಸಿಗೆ ಔತಣಕ್ಕೆ ಆಹ್ವಾನಿಸುವ ಅವಕಾಶ ಸಿಕ್ಕಿತು. ಅದೇ ಪರಂಪರೆ ಇಂದಿಗೂ ನಮ್ಮ ಸೇನೆಯಲ್ಲಿ ಜಾರಿಯಲ್ಲಿದೆ. ಆಗಸ್ಟ್‌ ಹದಿನೈದರಂದು ಭಾರತೀಯ ಸೇನೆಯ ಅಧಿಕಾರಿಗಳಿಗೆ ಜೆಸಿಓ ಮೆಸ್ಸಿನಿಂದ ಅಹ್ವಾನ ಬಂದರೆ, ಜನವರಿ ಇಪ್ಪತ್ತಾರರಂದು ಜೆಸಿಓಗಳಿಗೆ ಆಫೀಸರ್ ಮೆಸ್ಸಿನಿಂದ ಅಹ್ವಾನ ಬರುತ್ತದೆ. ಈ ರೀತಿಯ ಹಲವು ಕುತೂಹಲಕಾರಿ ರಿವಾಜುಗಳು ನಮ್ಮ ಸೇನೆಯಲ್ಲಿವೆ.