Saturday, 23rd November 2024

ಸುಯೇಜ್‌ನ ಜಲ ಜಗತ್ತು…

ಸಂತೋಷ ಕುಮಾರ ಮೆಹೆಂದಳೆ

ಸುಯೆಜ್ ಕಾಲುವೆಯಲ್ಲಿ ಪ್ರತಿ ವರ್ಷ ಸಂಚರಿಸುವ ಹಡಗುಗಳ ಸಂಖ್ಯೆ ಸುಮಾರು ಹತ್ತೊಂಬತ್ತು ಸಾವಿರ. ಕಳೆದ ವಾರ ಸುಯೆಜ್ ಕಾಲುವೆಯನ್ನು ಆ ದೈತ್ಯ ಹಡಗು ಬ್ಲಾಕ್ ಮಾಡಿದಾಗ, ಈಜಿಪ್ತ್ ದೇಶ ಅನುಭವಿಸಿದ ನಷ್ಟ ಸುಮಾರು ಹದಿನಾಲ್ಕು ಮಿಲಿಯನ್ ಡಾಲರ್. ಯುರೋಪ್ ಕಡೆಯಿಂದ ಏಷ್ಯಾ ಖಂಡಕ್ಕೆ ಹಡಗುಗಳು ಚಲಿಸಲು ಇರುವುದು ಇದೊಂದೇ ಕಾಲುವೆ ಮಾರ್ಗ. ಇಂತಹ ಪ್ರಮುಖ ಜಲಮಾರ್ಗವು ಕಳೆದ ವಾರ ಬಂದ್ ಆದಾಗ, ಜಗತ್ತಿನ ಹಲವು ದೇಶಗಳು ಅಕ್ಷರಶಃ ತಲ್ಲಣಕ್ಕೆ ಒಳಗಾದವು. ಇನ್ನೆಷ್ಟು ದಿನ ಆ ದೈತ್ಯ ಹಡಗು ಈ ದಾರಿಯನ್ನು ಬ್ಲಾಕ್ ಮಾಡುತ್ತದೋ ಎಂದು ಬೆದರಿದವು. ಬ್ಲಾಕ್ ಆಗಿದ್ದ ಸುಯೆಜ್ ಕಾಲುವೆಯು ಒಂದೇ ವಾರದಲ್ಲಿ ಭಾಗಶಃ ತೆರವಾದಾಗ, ಹಲವು ದೇಶಗಳು ನಿಟ್ಟುಸಿರು ಬಿಟ್ಟವು. ಇಂತಹ ಪ್ರಮುಖ ಜಲಮಾರ್ಗದ ವಿವರ ತಿಳಿಯುವುದೇ ಒಂದು ರೋಚಕ ಅನುಭವ.

ಆವತ್ತು ಮಾರ್ಚ್ 23. ಮಂಗಳವಾರ. ಬೆಳಿಗ್ಗೆ ಮಾಮೂಲಿನಂತೆ ಚಲಿಸುತ್ತಿದ್ದ ಹಡಗು ಇದ್ದಕ್ಕಿದ್ದಂತೆ ಯಾಕೋ ಪಿಕ್‌ಅಪ್ ತೆಗೆದುಕೊಳ್ಳುತ್ತಿಲ್ಲ ಎನ್ನಿಸಿ ಕ್ಯಾಪ್ಟನ್ ಬೋರ್ಡೊರಿಕ್ ತಾಂತ್ರಿಕ ತೊಂದರೆ ಎಂಬ ಮಾಹಿತಿ ಕೊಡುತ್ತಿದ್ದರೆ, ಅದೇ ಹೊತ್ತಿಗೆ ಸರಿಯಾಗಿ ಸುಯೇಜ್ ಕೆನಾಲ್ ಕಂಟ್ರೊಲ್ ಅಥಾರಿಟಿ ಒಂದೇ ಸಮನೆ ಈ ಹಡಗಿಗೆ ತನ್ನ ಲೋಕೇಶನ್ ದಾಟಿ ಬರುವಂತೆ ಸಂದೇಶ ಕೊಡತೊಡಗಿತ್ತು.

ಕಾರಣ ಅದು ತಲುಪುವ ಹೊತ್ತಿಗೆ ಎದುರಿನಿಂದ ನೀರಿಗಿಳಿಯುವ ಹಡಗಿಗೆ ಗ್ರೀನ್ ಸಿಗ್ನಲ್ ಕೊಟ್ಟಾಗಿತ್ತು. ಆದರೆ ಆ ಹಡಗು ಚಲಿಸದೆ ನಿಂತುಬಿಟ್ಟಿದ್ದು ಗೊತ್ತಾಗುವ ಹೊತ್ತಿಗೆ ಸರಿ ಸುಮಾರು ಮೊದಲ ಆರು ತಾಸು ಕಳೆದು ಹೋಗಿತ್ತು. ಕೆನಾಲ್ ಅಥಾರಿಟಿ ತನ್ನ ಸೀಮಿತ ವ್ಯಾಪ್ತಿಯ ದಾರಿ ನಿಯಂತ್ರಣ ಮೂಲಕ ಪ್ರಾಥಮಿಕ ವರದಿ ಕೈಗೆ ತರಿಸಿಕೊಳ್ಳುವ ಹೊತ್ತಿಗೆ ತಡವಾಗಿತ್ತು. ಆ ಹೊತ್ತಿಗಾ ಗಲೇ ಎರಡೂ ಕಡೆಯಲ್ಲಿ ಹಿಂದಿನಿಂದ ಮತ್ತು ಎದುರಿನಿಂದ ಬರುತ್ತಿದ್ದ ಹಡಗುಗಳು ಅಲ್ಲಲ್ಲೆ ಲಂಗರು ಹಾಕತೊಡಗಿ ಜಗತ್ತಿನ ಅತಿದೊಡ್ಡ ಜಲಮಾ ರ್ಗದ ಟ್ರಾಫಿಕ್ ಜಾಮ್ ಆಗತೊಡಗಿತ್ತು.

ಇಷ್ಟೆಲ್ಲ ಆಗುವ ಹೊತ್ತಿಗೆ ನಿಂತಲ್ಲೇ ನಿಂತ ಹಡಗು ಮತ್ತಿಷ್ಟು ಆಳಕ್ಕೆ ಕುಸಿಯ ತೊಡಗಿತ್ತು. ಜಾಗತಿಕವಾಗಿ ಅತ್ಯಂತ ಬ್ಯುಸಿ ಟ್ರಾಫಿಕ್ ಹೊಂದಿರುವ ಜಲಮಾರ್ಗ ಎಂದೇ ಖ್ಯಾತಿಗಳಿಸಿದ್ದ ಸುಯೇಜ್ ಕಾಲುವೆ ಜಗತ್ತಿಗೆ ಅಚ್ಚರಿಯ ಸುದ್ದಿಯನ್ನು ಕೊಟ್ಟಿತ್ತು. ಸದ್ಯಕ್ಕೆ ಕಾಲುವೆಯ ದಾರಿ ಸುಗಮವಾಗುವ ಲಕ್ಷಣಗಳಿಲ್ಲ ಎಂದು.

ಎವರ್‌ಗಿವನ್ ಎನ್ನುವ ಹಡಗು ಹಾಗೆ ಸುಯೇಜ್ ಕಾಲುವೆಯಲ್ಲಿ ಸಿಕ್ಕಿಬಿದ್ದು ಅಡ್ಡಾದಿಡ್ಡಿ ಚಲಿಸಲು ಆಗಿದ್ದಾದರೂ ಏನು ಎಂದು ನಿರ್ಧಾರಕ್ಕೆ ಬರಲು ಈಜಿಪ್ತ್ ಮತ್ತು ಇತರ ತಾಂತ್ರಿಕ ಅಧಿಕಾರಿಗಳ ಸಿಬ್ಬಂದಿ ವರದಿ ಖಚಿತಪಡಿಸಿಕೊಳ್ಳುವ ಹೊತ್ತಿಗೆ ಜಾರುವಿಕೆಗೆ ಸಿಕ್ಕಿದ್ದ ಎವೆರ್‌ಗಿವನ್ ಹಡಗು ಎತ್ತಲೂ ತಿರುಗದೆ ಕಾಲುವೆಯನ್ನು ಆಕ್ರಮಿಸಿ ಜಗತ್ತಿನ ಅಷ್ಟೂ ತಂತ್ರಜ್ಞಾನ ಮಂಡಿಯೂರು ವಂತೆ ಮಾಡಿತ್ತು.

ದೈತ್ಯ ಹಡಗು
ಅಷ್ಟಕ್ಕೂ ಹಿಂದಿನ ದಿನ ರಾತ್ರಿ ಎಂದಿನಂತೆ ಸುಯೇಜ್ ಕಾಲುವೆಗೆ ಇಳಿದಿದ್ದ ಹಡಗಿನಲ್ಲಿ ಅಗಾಧವಾದ 20 ಸಾವಿರ ಕಂಟೆನರ್ ‌ಗಳಿದ್ದವು. ಹಡಗಿನ ಉದ್ದವೇ 1320 ಅಡಿ. ಅಗಲ ಅನಾಮತ್ತು 195 ಅಡಿ ಅಗಲ. ಇಂತಹದ್ದೊಂದು ದೈತ್ಯ ಹಡಗು ಸುಯೇಜ್ ಕಾಲುವೆಗೆ ಇಳಿಯುತ್ತಿದ್ದಂತೆ ನೇರವಾಗಿ ಅತ್ಯಂತ ಮಧ್ಯದ ದಾರಿಯನ್ನು ಹಿಡಿದೇ ಚಲಿಸಬೇಕೆಂದು ಕೆನಾಲ್ ಅಥಾರಿಟಿ ಮಾರ್ಗ ದರ್ಶನ ಸೂಚಿ ಕೊಟ್ಟಿತ್ತು. ಅದಕ್ಕೆ ತಕ್ಕಂತೆ ಎಲ್ಲೆಲ್ಲಿ ಹೇಗೆಲ್ಲ ಚಲಿಸಬೇಕೆಂದು ಆಗಾಗ ಪಥ ನಿರ್ದೇಶನ ಮಾಡುತ್ತಲೇ ಇತ್ತು. ಆದರೂ ಎವೆರ್‌ಗಿವನ್ ಹಾಗೆ ಅಡ್ಡ ಚಲಿಸಲು ಹೋದದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ‘ಅಗಾಧ ಮರಳು ಮಾರುತದ ಬಿರುಗಾಳಿ’.

ಹಿಂದಿನ ದಿನ ರಾತ್ರಿಯ ಹೊತ್ತಿನಲ್ಲಿ ವಿಪರೀತ ವೇಗದ ಮರಳಿನ ಮಾರುತ ಸುಯೇಜ್ ಕಾಲುವೆಯ ಮೇಲಿನಿಂದ ಹಾಯ್ದು ಹೋಗುವಾಗ ಸರಿಯಾಗಿ ಇಷ್ಟು ಅಗಲದ ಹಡಗು ಅಡ್ಡ ಸಿಕ್ಕುಬಿಟ್ಟಿದೆ. ಬಿರುಗಾಳಿಗೆ ಸಿಲುಕಿದ ಹಡಗು ನಿಧಾನಕ್ಕೆ ಮುಖವನ್ನು ಒಂದೆಡೆ ತಿರುಗಿಸಿದ್ದು ಗೊತ್ತಾಗುವ ಹೊತ್ತಿಗಾಗಲೇ ಅದು ದಿಕ್ಕು ಬದಲಿಸಿಯಾಗಿತ್ತು. ಅತೀವ ಭಾರದ ಕಾರಣ ನಿಧಾನಗತಿಯಲ್ಲಿ ತನ್ನ ಕೋನವನ್ನು ಬದಲಾಯಿಸಿಕೊಂಡಿದ್ದು ತತ್‌ಕ್ಷಣಕ್ಕೆ ಸಿಬ್ಬಂದಿಯ ಅರಿವಿಗೆ ಬಂದಿರಲಿಕ್ಕಿಲ್ಲ. ಹಾಗಾಗಿ ಸಿಬ್ಬಂದಿ ವೇಗ ಕಡಿತಗೊಳಿಸಿ ಅದನ್ನು ಸರಿದಿಕ್ಕಿಗೆ ತಿರುಗಿಸಿ ಮುನ್ನುಗ್ಗಿಸಲು ಎಲ್ಲ ಪ್ರಯತ್ನ ಮಾಡುವಾಗಲೇ ಅವಘಡ ಸಂಭವಿಸಿದೆ.

ಸುಯೇಜ್ ಕಾಲುವೆ ಮಧ್ಯದ ಅಳ ಹೊರತುಪಡಿಸಿದರೆ, ಎರಡೂ ಕಡೆಯಲ್ಲಿ ಇಂಥಾ ಅಗಾಧ ಅಳತೆಯ ಹಡಗುಗಳು ಚಲಿಸಲು ಯೋಗ್ಯವಿಲ್ಲ. ಹಾಗಾಗಿ ಹಡಗಿನ ಅಳತೆ ತೂಕಕ್ಕೆ ತಕ್ಕಂತೆ ಕೆನಾಲ್ ಅಥಾರಿಟಿ ಪಥ ನಿರ್ದೇಶನ ಕೊಡುತ್ತದೆ. ಆದರೆ ಒಮ್ಮೆ ದಿಕ್ಕು ತಪ್ಪಿದ ಈ ದೈತ್ ಹಡಗಿನ ಬುಡ ದಂಡೆಗಳಲ್ಲಿದ್ದ ಮರಳಿನ ಹೂಳಿಗೆ ಸಿಕ್ಕಿ ಬಿದ್ದಿದೆ. ಕ್ರಮೇಣ ಮರಳಿನ ಮಾರುತಗಳಿಗೆ ಹಡಗು ಅಡ್ಡ ನಿಂತಿದ್ದರಿಂದ ಬಿರುಗಾಳಿ ತಂದು ಹಾಕುತ್ತಿದ್ದ ಮರಳು ಕೂಡಾ ಹೂಳಿಗೆ ಸೇರುತ್ತಲೇ ಸಾಗಿದೆ. ಮೊದಲ ದಿನವೊಂದರಲ್ಲೇ ಹತ್ತಾರು ಅಡಿ ಆಳಕ್ಕೆ ಹಡಗು ಹೂತು ಹೋಗಿದೆ. ಹಾಗೆ ಹಡಗನ್ನು ಮೊದಲ ಎರಡು ದಿನದಲ್ಲೆ ಆವರಿಸಿದ ಹೂಳು ಹತ್ತು ಸಾವಿರ ಕ್ಯೂ.ಯಾ. ನಷ್ಟು.

ಆರ್ಥಿಕ ಲೋಕದಲ್ಲಿ ತಲ್ಲಣ

ಮೇಲ್ನೋಟಕ್ಕೆ ಹಡಗು ತೇಲುವಂತಿದೆಯಾದರೂ ನೀರಿನ ಒಳಾವರಣದಲ್ಲಿ ಆಗಲೇ ಅದು ಭಧ್ರವಾಗಿ ಕೂತಾಗಿದೆ. ಹೀಗಾಗೆ ಜಗತ್ತಿನ ಪ್ರಮುಖ ರಾಜಮಾರ್ಗವಾದ ಸುಯೇಜ್ ಸುಳಿಯಲ್ಲಿ ಸಿಕ್ಕ ಹಡಗು ಈಗ ಜಾಗತಿಕವಾಗಿ ವ್ಯವಹಾರಗಳ ನಿದ್ರೆಗೆ ಕಲ್ಲು ಹಾಕಿತು. ಮೂರೇ ದಿನದಲ್ಲಿ ಎರಡೂ ಕಡೆಯಲ್ಲಿ ಚಲಿಸದೆ ನಿಂತಿರುವ ಹಡಗಿನ ಸಂಖ್ಯೆ ನಾನೂರು ದಾಟಿದವು. ಪರಿಣಿತರ ಪ್ರಕಾರ ಸುಯೇಜ್ ತೆರವಾಗಲು ಹಲವು ಕಾಲ ಬೇಕಾಗಬಹುದು ಎಂದಿತ್ತು. ಕಾರಣ ಹಡಗಿನ ಭಾರ ಮತ್ತು ಜಮೆಯಾಗಿರುವ ಕೃತ್ರಿಮ ಹೂಳು ತೆಗೆಯುವ ಕಾರ್ಯ ಸುಲಭವಲ್ಲ. ಎಂಟನೆ ದಿನದ ಹೊತ್ತಿಗೆ ಹಡಗು ಕನಿಷ್ಠ ನಾಲ್ವತ್ತು ಅಡಿ ಹೂತಿತ್ತು. ಹಡಗಿನ ಭಾರ 2 ಲಕ್ಷ ಸಾವಿರ ಟನ್. ಜಗತ್ತಿನ ಹಲವು ದೇಶಗಳ ಆರ್ಥಿಕ ಜಗತ್ತು ಸಣ್ಣ ತಲ್ಲಣ ಅನುಭವಿಸಲು ಆರಂಭಿಸಿತು!

ಹಡಗಿನ ಅಗಾಧತೆಗೆ ಹೋಲಿಸಿದರೆ ಅಲ್ಲಿನ ಕಾರ್ಯಚರಣೆಯ ಪರಿ, ನದಿಯಿಂದ ನೀರನ್ನು ಅಂಗೈಯ್ಯಲ್ಲಿ ತುಂಬಿ ಆಚೆಗೆ ಹಾಕಿ ಖಾಲಿ ಮಾಡಿದಂತೆ. ಅದಕ್ಕಾಗಿ ಜಗತ್ತಿನ ಇತರೆ ದೇಶಗಳೂ ಈಗ ಈಜಿಪ್ತ್‌ಗೆ ಬೇಕಾದ ಸಹಾಯ ಸಲ್ಲಿಸಲು ಮುಂದೆ ಬಂದವು. ಇಲ್ಲದಿದ್ದರೆ ಹಡಗುಗಳ ಮಾರ್ಗ ತಿಂಗಳುಗಟ್ಟಲೇ ಮುಂದೆ ಹೋದರೂ ಅಚ್ಚರಿ ಇರಲಿಲ್ಲ. ಜಗತ್ತಿನ ಶೇ.30 ರಷ್ಟು ಸಂಚಾರದ  ಭಾರ ಇದೊಂದೇ ಕಾಲುವೆ ಮೇಲಿದೆ.

2020ರಲ್ಲಿ ಸಂಚರಿಸಿದ ಹಡುಗಗಳ ಸಂಖ್ಯೆ ಹತ್ತೊಂಭತ್ತು ಸಾವಿರ. ಕಳವಳ ಕಾರಿ ಎಂದರೆ ಕಾಲುವೆಗೆ ಈಗಾಗಲೇ ಇಳಿದಿರುವ ಸರದಿಯಲ್ಲಿದ್ದ ನೂರೈವತ್ತಕ್ಕೂ ಹೆಚ್ಚು ಹಡಗುಗಳು ಅನಿವಾರ್ಯ ಲಂಗರಿನಲ್ಲಿವೆ. ಕಾರಣ ಏಕಮುಖ ಸಂಚಾರ ವ್ಯವಸ್ಥೆಯಲ್ಲಿ ಎಲ್ಲೆಂದರಲ್ಲಿ ತಿರುಗುವಂತಿಲ್ಲ. ಗಲ್ ಆಫ್ ಸುಯೇಜ್ ಮೂಲಕ ಅಥವಾ ಮೆಡೆಟೀರಿಯನ್ ಸಮುದ್ರ ಮೂಲಕ ಸುಯೇಜ್‌ಗೆ  ಇಳಿಯುವ ಹಡಗುಗಳು ಏಕಮುಖವಾಗಿ ಕೇನಾಲ್ ಅಥಾರಿಟಿ ಹೇಳಿದ ಸಮಯ ವೇಗದ ಮಿತಿಯಲ್ಲಿ ಚಲಿಸಿ ಇತ್ತ ಲಿಟ್ಲ್‌ಬಿಟ್ಟರ್ ಲೇಕ್ ನಲ್ಲಿ ಮೊದಲ ನಿಲುಗಡೆ ತಲುಪುತ್ತವೆ. ಮೆಡಿಟೀರಿಯನ್ ಸಮುದ್ರಕಡೆಯಿಂದ ಬಂದರೆ ಇಸ್ಮೈಲಿಯಾದಲ್ಲಿ ನಿಲುಗಡೆ.

ಆ ಹೊತ್ತಿಗೆ ಎದುರಿನಿಂದ ಬಂದು ನಿಂತ ಹಡಗುಗಳು ಇತ್ತ ದಾಟುತ್ತವೆ. ಹೀಗೆ ಅಲ್‌ಕಂತ್ರಾ, ಬಾರ್ ಫೌಡ್, ಇಸ್ಮೈಲಿಯಾ,
ಡೆವರ್ಸೋರ್, ಫಯಾಡ್, ಕಿಬ್ರೈಟ್, ಗ್ರೇಟ್‌ಬಿಟ್ಟರ್‌ಲೇಕ್, ಬರ್‌ತೌಫಿಕ್‌ಗಳ ಮಧ್ಯದಲ್ಲಿ ಅಲ್ಲಲ್ಲಿ ನಿಲುಗಡೆಯಾಗಿತ್ತಾ ಕಾಲುವೆ ಯಲ್ಲಿ ನೇರ ಮುಖಾಮುಖಿ ತಪ್ಪಿಸಲಾಗುತ್ತದೆ. ಪ್ರಸ್ತುತ ಈ ಕಾಲುವೆ ಒಡೆತನ ಹೊಂದಿರುವ ಈಜಿಪ್ತ್, ಆ ಒಂದುವಾರ ಪ್ರತಿದಿನ ಅನುಭವಿಸಿದ ನಷ್ಟ 14 ಮಿಲಿಯನ್ ಡಾಲರ್. ಹೀಗೆ ಮುಂದುವರೆದ ಕಠಿಣ ಪರಿಸ್ಥಿತಿ ತಿಳಿಯಾಗಿದ್ದು ಸರಿಯಾಗಿ ಒಂದು ವಾರದ ಮೇಲೆ. ನಿರಂತರ 13 ಟಗ್‌ಗಳು ದಿನವಿಡೀ ಕೆಲಸ ಮಾಡಿ, ಹೂತಿದ್ದ ಭಾಗದಲ್ಲಿ ಗುಂಡಿ ತೋಡುತ್ತಾ ಅದರ ಆಳ ಹೆಚ್ಚು ಮಾಡಿ, ನೀರಿನ ಒತ್ತಡ ಹಡಗಿನ ಅಗತ್ಯತೆಗೆ ತಕ್ಕಂತೆ ಹೆಚ್ಚಿಸುವ ಯೋಜನೆ ರೂಪಿಸಲಾಯಿತು.

ಅದರಂತೆ ಇಂಜಿನ್ ಭಾಗದಲ್ಲಿ ಒಮ್ಮೆ ಹಡಗಿನ ಆಳಕ್ಕೆ ಸಾಕಷ್ಟು ನೀರಿನ ಒತ್ತಡ ದೊರಕುತ್ತಿದ್ದಂತೆ ಹಡಗು ಆರಂಭವಾಗಿ
ಮುಂದಕ್ಕೆ ಚಲಿಸಲು ಒಮ್ಮೆಲೆ ನೂಕು ಬಲ ದೊರಕಿಸಿಕೊಳ್ಳುತ್ತಿದ್ದಂತೆ, ಹಿಂಭಾಗದ ಹೂಳಿನ ತುದಿಯಿಂದ ಹಡಗು ಕ್ರಮೇಣ
ಹೊರಬಂದಿತ್ತು. ಅದಕ್ಕೆ ಸರಿಯಾಗಿ ನೂಕಲು ಮತ್ತು ಏಳೆಯಲು ಇತರ ಹಡಗಿನ ಹೆಚ್ಚಿನ ಇಂಜಿನ್‌ಗಳು ಸಹಾಯ ಸಲ್ಲಿಸಿ
ದೀರ್ಘಾವಧಿಯಾಗಿ ಬದಲಾಗಬಹುದಾಗಿದ್ದ ಸಮಸ್ಯೆಯನ್ನು ನಿವಾರಿಸಲಾಗಿದೆ.

ಸುಯೇಜ್‌ನಲ್ಲಿ ಈಗ ಮತ್ತೆ ಹಡಗುಗಳು ತೇಲಲಾರಂಭಿಸಿವೆ. ಅಲ್ಲಿಗೆ ಜಗತ್ತಿನ ಅತಿ ದೊಡ್ಡ ಜಲಸಾರಿಗೆಯ ಹೆದ್ದಾರಿ ಸರಾಗ ವಾಗಿದೆ. ಆದರೂ ಇನ್ನೂ ಸಂಚಾರ ಸುಲಲಿತ ಎನಿಸಿಲ್ಲ. ಆ ದೈತ್ ಹಡಗು ಕಾಲುವೆಯಿಂದ ಹೊರಬಂದ ನಂತರವಷ್ಟೇ, ಎಲ್ಲಾ ಹಡಗುಗಳೂ ದ್ವಿಮುಖ ಸಂಚಾರವನ್ನು ಕೈಗೊಂಡು ಸುಲಲಿತವಾಗಿ ಸಾಗಬಹುದು. ಅಲ್ಲಿಯ ತನಕ ಸಣ್ಣ ಮಟ್ಟದ ತೊಡಕು ಇದ್ದದ್ದೇ. ಏನಿದ್ದರೂ, ತೈಲ ಸರಬರಾಜಿನ ತೊಡಕು ನಿವಾರಣೆಯಾಗಿ, ಬಿಕ್ಕಟ್ಟು ಕೊನೆಗೊಂಡಿದೆ. ಜಗತ್ತಿನ ಈ ಭಾಗದ ದೇಶಗಳು ನಿಟ್ಟುಸಿರು ಬಿಟ್ಟಿವೆ!

ಸುಯೇಜ್ ಕೇನಾಲ್ ಇತಿಹಾಸ
ನೂರೈವತ್ತು ವರ್ಷಗಳ ಹಿಂದೆ ಅಂದರೆ 1869 ನವಂಬರ್ 17 ರಂದು ಕಾರ್ಯಾಚರಣೆ ಆರಂಭಿಸಿರುವ ಸುಯೇಜ್ ಕಾಲುವೆ
ಎಂಬುವುದು ಜಗತ್ತಿನ ಜಲಸಾರಿಗೆಯ ರಾಜ. ಇದರ ಕಾರ್ಯ ಕೈಗೆತ್ತಿಕೊಂಡ ಸುಯೇಜ್ ಕೆನಾಲ್ ಅಥಾರಿಟಿ ಇದನ್ನು ನಿರ್ಮಿಸಲು ತೆಗೆದುಕೊಂಡ ಕಾಲಾವಧಿ 10 ವರ್ಷಗಳು. ಈ ಒಂದು ದಾರಿಯ ಪ್ರಾಮುಖ್ಯತೆಯನ್ನು ಮನಗಂಡ ಆಗಿನ ಈಜಿಪ್ತ್ ದೊರೆ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ಕೊಟ್ಟ. ಅದಕ್ಕೂ ಮೊದಲೇ ಇದಕ್ಕೆ ಜಾಗತಿಕ ಮಹತ್ವ ಇದ್ದಿದ್ದು ಇತಿಹಾಸ ಸಾಕ್ಷಿ. ಹಾಗಾಗಿ ಶತಮಾನಗಳ ಹಿಂದೆ ವ್ಯವಸ್ಥಿತವಾದ ಮತ್ತು ದೂರಾಲೋಚನೆಯ ಕಾಲುವೆ ಯೋಜನೆ ಶ್ರೇಯ ಆಗಿನ ಈಜಿಪ್ತ್ ದೊರೆಗೆ ಸಲ್ಲಬೇಕು. ಆದರೂ ಆರಂಭವಾದ ಮೇಲೆ ಹಡಗುಗಳ ಚಲನೆಯ ಯೋಜನೆ ಹಿಡಿತಕ್ಕೆ ಬರಲು ತೆಗೆದುಕೊಂಡ ಕಾಲಾವಧಿ ಎರಡು ವರ್ಷ. ಕಾರಣ ಏಕ ಮುಖ ಸಂಚಾರ ವ್ಯವಸ್ಥೆ ಮಾಡಿ, ಸೂಚನೆಗಳನ್ನು ಕಳಿಸಿ ತಹಬಂದಿಗೆ ತರುವುದೇ ಸಮಸ್ಯೆ ಯಾಗಿತ್ತು.

ಆರಂಭದಲ್ಲಿ ವಿಪರೀತ ಗೊಂದಲಗಳಿದ್ದವು. 25 ಎಪ್ರಿಲ್ 1859ರಲ್ಲಿ ಕೆಲಸ ಆರಂಭಿಸಿದ ಕಾಲುವೆಯ ಆಳ 225 ಅಡಿಗಳು. ಉದ್ದ 195 ಕಿ.ಮೀ. ಆದರೆ ಅಗಲ 225 ಅಡಿ. ಇದರ ಆಳದಲ್ಲಿ ಇಳಿಯುವ ಹಡಗುಗಳ ತಳವೇ ಸುಮಾರು 65 ಅಡಿ ಕೆಳಗೆ ಇಳಿದಿರುತ್ತವೆ. ಜಗತ್ತಿನಲ್ಲೆಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂತಹದ್ದೊಂದು ಕೃತಕ ಕಾಲುವೆ ನಿರ್ಮಾಣ ಮೊದಲು ಆಗಿರಲಿಲ್ಲ, ಮತ್ತೆ ಪ್ರಯತ್ನಿಸಿಲ್ಲ. ಮೆಡೆಟೇರಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಸಂಪರ್ಕಿಸುವ ಈ ಕಾಲುವೆಯ ನಿರ್ಮಾಣದಿಂದ, ಹಡಗುಗಳ ಸಂಚಾರದ ಅವಧಿ ಹಲವು ದಿನಗಳಷ್ಟು ಕಡಿಮೆಯಾಯಿತು.

ಯುರೋಪ ಮತ್ತು ಏಶಿಯಾ ಖಂಡಗಳ ಸಂಪರ್ಕಕ್ಕೆ ಇದು ಅತ್ಯಂತ ಹತ್ತಿರದ ಮಾರ್ಗ. ಇದನ್ನು ಹೊರತು ಪಡಿಸಿದರೆ ಹಡಗು ಗಳ ಪಯಣದ ಲೆಕ್ಕಾಚಾರ ಏನಿದ್ದರೂ ಹದಿನೈದು ದಿನ, ತಿಂಗಳ ಲೆಕ್ಕವೇ ಆಗುತ್ತದೆ. 2014 ರಲ್ಲಿ ಸುಮಾರು 35 ಕಿ.ಮೀ.ನಷ್ಟು ಸುಯೇಜ್ ಕೆನಾಲ್ 22 ಮೀ. ಅಗಲಕ್ಕೆ ಹೆಚ್ಚುವರಿ ವಿಸ್ತಾರ ಆಗುವುದರೊಂದಿಗೆ ಅಲ್ಲಿ ದ್ವಿಮುಖ ಸಂಚಾರ ಸಾಧ್ಯವಾಗಿ ದಿನವಹಿ 30ಕ್ಕಿದ್ದ ಸಂಚಾರ 52-55 ಹಡಗುಗಳಿಗೇರಿತ್ತು.

ನೀರಿನ ಉಬ್ಬರ ಇಳಿತದ ಗೊಡವೇ ಇಲ್ಲದೆ ಸಂಚಾರ ಸುಗಮವಾಗುವ ಕಾರಣ ದಟ್ಟಣೆ ನಿರೀಕ್ಷೆಗೆ ಮೀರಿದ್ದು. ಇಂತಹ ಕಾಲುವೆಗೆ ಅಕಸ್ಮಾತ್ ಏನಾದರೂ ಆಪತ್ತು ಒದಗಿಬಂದರೆ, ಸದ್ಯ ಪರ್ಯಾಯ ಮಾರ್ಗ ಎಂದರೆ ಗುಡ್ ಹೋಪ್‌ನ್ನು ಬಳಸಿ ಬರುವುದು. ಅದು ಅನಾಮತ್ತು 8-9 ಸಾವಿರ ಕಿ.ಮೀ. ಹೆಚ್ಚಿನ ದಾರಿ. ಹೀಗಾಗಿ ಸುಯೇಜ್ ವಹಿಸುವ ಮಹ್ತತ್ವದ ಪಾತ್ರ ಅರಿವಾದೀತು.

ಇಸ್ರೇಲ್ ರಂಗಪ್ರವೇಶ
ಸುಯೆಜ್ ನಿರ್ವಹಣೆಯ ಇತಿಹಾಸದಲ್ಲಿ ಅತಿ ದೊಡ್ಡ ಹೆಗ್ಗುರುತು ಇಸ್ರೆಲ್ ರಂಗಕ್ಕಿಳಿದಾಗ. ಕಾರಣ 1949 ರಿಂದ ಸುಯೇಜ್‌ಗೆ ಇಳಿಯಲು ಇಸ್ರೇಲ್‌ಗೆ ಅವಕಾಶವೇ ಇರಲಿಲ್ಲ. ಹಾಗಾಗಿ ಅದು ಅವಕಾಶಕ್ಕಾಗಿ 1967 ರವರೆಗೆ ಕಾಯಬೇಕಾಯಿತು. ಒಂದು ಸಂದರ್ಭದಲ್ಲಿ, ಇಸ್ರೇಲ್ ‘ಸಿನೈ ಪೆನಿನ್ಸುಲಾ’ವನ್ನು ಆಕ್ರಮಿಸಿ ಹಿಡಿತಕ್ಕೆ ತೆಗೆದುಕೊಳ್ಳುವುದರೊಂದಿಗೆ ಸುಯೇಜ್ ಈಗ ಅಕ್ಷರಶಃ ಎರಡೂ ಕಡೆಯಿಂದ ಅಲುಗಾಡದ ಸ್ಥಿತಿಗೆ ಬಂದು ಬಿಟ್ಟಿತ್ತು. ಆರು ದಿನದ ‘ಕಿಪ್ಪೋರ್ ವಾರ್’ನಲ್ಲಿ ಗೆಲವು ಸಾಧಿಸಿದ ಇಸ್ರೇಲ್ 1949 ರಿಂದ ತೆರವಾಗದಿದ್ದ ದಾರಿಯನ್ನು ಸುಗಮಗೊಳಿಸಿಕೊಂಡಿತ್ತು. ಇದು 1971 ರಲ್ಲಿ ಸುರುಳಿತವಾದರೂ 1981 ರಲ್ಲಿ ನಡೆದ ಅಮೆರಿಕ, ಇಸ್ರೇಲ್, ಈಜಿಪ್ತ್, ಸಿರಿಯಾ ಸೇರಿದಂತೆ ಇತರ ಭಾಗಿದಾರ ದೇಶಗಳು ಇದರಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ
ಸುಯೇಜ್ ನಿಜವಾದ ವೈಭವಕ್ಕೆ ಮರಳಿತು. ಇದೆಲ್ಲ ಆದ ಮೇಲೆ ಕಳೆದ ವಾರದ ಘಟನೆಯೇ ಸುಯೇಜ್‌ನಲ್ಲಿ ಎದುರಾದ ಅತಿ ದೊಡ್ಡ ತಾಂತ್ರಿಕ ತೊಂದರೆ. ಈ ಜಗತ್ತಿನ ಎರಡು ಪ್ರಮುಖ ಖಂಡಗಳ ಸಂಪರ್ಕ ಎಂದಿದ್ದರೆ ಅದು ಸುಯೇಜ್ ಮಾತ್ರ.

ಹಲವು ಜೀವಗಳ ಬಲಿದಾನ
ಸುಯೇಜ್ ಇತಿಹಾಸ, ನಿರ್ಮಾಣ, ಬಿಕ್ಕಟ್ಟು, ನೈಸರ್ಗಿಕ ಪ್ರಕೋಪ ಸೇರಿದಂತೆ ಇನ್ನಿತರ ವೈಷಮ್ಯ ಇತ್ಯಾದಿಗಳಿಂದಾಗಿ ಪ್ರಾಣ ಬಿಟ್ಟವರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ. ಹಾಗೆ ಸತ್ತವರ ಸಂಖ್ಯೆ ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ. ಆದರೂ ಸುಯೇಜ್
ಜಗತ್ತಿನ ಆಕರ್ಷಕ ಮತ್ತು ಸಂಪರ್ಕದ ಪ್ರಮುಖ ಕೊಂಡಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಜಕೀಯವಾಗಿ ಪ್ರಮುಖ ದಾರಿ 
ಸುಯೇಜ್ ಕಾಲುವೆ ಹಲವು ರಾಜಕೀಯ, ಯುದ್ಧ ಮತ್ತಿತರ ಕಾರಣಗಳಿಗೆ ಹಲವು ಬಾರಿ ಕಾರ್ಯಾಚರಿಸದೇ ನಿಂತದ್ದೂ ಇದೆ. ಎರಡನೆ ಜಾಗತಿಕ ಯುದ್ಧದಲ್ಲಿ ಇದು ಸ್ಟ್ರಾಟಜಿಕ್ ವೇ ಎಂದು ಗುರುತಿಸಿದ್ದರಿಂದ 1936 ರಿಂದ 1945 ರವರೆಗೂ ಅಧಿಕೃತವಾಗಿ ಎಲ್ಲ ಹಡಗುಗಳನ್ನು ನಿರ್ಬಂಧಿಸಲಾಗಿತ್ತು. ಯುದ್ಧ ಮುಗಿದ ನಂತರವೂ, ಅಲ್ಲಿ ನೀಯೋಜನೆಯಾಗಿದ್ದ ನೇವಿಯ ಹಡಗು ಗಳನ್ನು ಸಂಪೂರ್ಣವಾಗಿ ತೆರವು ಗೊಳಿಸಿ, ಸಾಮಾನ್ಯ ಮತ್ತು ಸಹಜ ಓಡಾಟಕ್ಕೆ ಲಭ್ಯವಾಗಿದ್ದು 1954 ರಲ್ಲಿ.