Wednesday, 11th December 2024

ಭಾರತಕ್ಕೆ ಬರಲಿದೆ ಟೆಸ್ಲಾ

ಹಾಹಾಕಾರ್‌

ಬಡೆಕ್ಕಿಲ ಪ್ರದೀಪ

ವಿದ್ಯುತ್ ಚಾಲಿತ ಕಾರುಗಳು ಭವಿಷ್ಯದ ವಾಹನಗಳು ಎಂಬುದು ಸ್ಪಷ್ಟ. ವಾಯುಮಾಲಿನ್ಯ, ತೈಲ ಬೆಲೆಯ ಅಸ್ಥಿರತೆ, ಕಡಿಮೆ ಯಾಗುತ್ತಿರುವ ತೈಲ ಸಂಗ್ರಹ ಇವೆಲ್ಲವೂ ತೋರಿಸುತ್ತಿರುವುದು ಒಂದೇ – ವಿದ್ಯುತ್ ಶಕ್ತಿಯನ್ನು ಬಳಸಿ ಚಲಿಸುವ ವಾಹನಗಳನ್ನು ಇನ್ನಷ್ಟು ತಯಾರಿಸಬೇಕು, ಇನ್ನಷ್ಟು ಜನಪ್ರಿಯಗೊಳಿಸಬೇಕು. ಅಮೆರಿಕ ಮತ್ತು ಕೆಲವು ಮುಂದುವರಿದ ದೇಶಗಳಲ್ಲಿ ಅದಾಗಲೇ ವಿದ್ಯುತ್ ಚಾಲಿತ ವಾಹನಗಳು ಸಾಕಷ್ಟು ಮುಂದೆ ಚಲಿಸಿವೆ, ಜನರ ಪ್ರೀತಿ ಗಳಿಸಿವೆ. ಭಾರತದಲ್ಲಿ ಈ ವರ್ಷ ವಿದ್ಯುತ್ ಚಾಲಿತ ಟೆಸ್ಲಾ ಕಾರುಗಳು ರಸ್ತೆಗೆ ಇಳಿಯಲಿವೆ ಎಂದು ಸರಕಾರವೂ ಹೇಳಿದೆ, ಇಲಾನ್ ಮಸ್ಕ್ ಸಹ ಹೇಳಿದ್ದಾರೆ. ಅವುಗಳನ್ನು ತ್ವರಿತವಾಗಿ ಚಾರ್ಜ್ ಮಾಡುವ ವ್ಯವಸ್ಥೆಯು ಇಲ್ಲಿ ಇನ್ನಷ್ಟು ವ್ಯಾಪಕವಾಗಿ ದೊರೆಯಬೇಕು ಎಂಬುದೇ ಈಗಿನ ಸದ್ಯದ ಆದ್ಯತೆ.

ಅಮೆರಿಕಾದ ಬಹುಬೇಡಿಕೆಯ ಕಾರ್ ತಯಾರಕ ಹಾಗೂ ತನ್ನ ಇಲೆಕ್ಟ್ರಿಕ್ ಮತ್ತು ಸ್ವಯಂಚಾಲಿತ ಕಾರುಗಳಿಗೆ ಹೆಸರುವಾಸಿ ಯಾದ ಟೆಸ್ಲಾ ಇದೀಗ ಭಾರತಕ್ಕೆ ಬಂದೇ ಬಿಡಲಿದೆ ಎನ್ನುವ ಸುದ್ದಿಗೆ ಒಂದೆಡೆ ಕಳೆದ ವರ್ಷ ಕಂಪೆನಿಯ ಮಾಲೀಕ ಇಲಾನ್ ಮಸ್ಕ್ ಅವರ ಟ್ವೀಟ್ ಒಂದು ಪುಷ್ಟಿ ನೀಡಿದ್ದರೆ, ಅದಕ್ಕೆ ಸ್ಪಷ್ಟ ಹಸಿರು ನಿಶಾನೆಯಂತೆ ಭಾರತೀಯ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೂ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ.

2021ರ ಮೊದಲಾರ್ಧದಲ್ಲೇ ಭಾರತಕ್ಕೆ ಟೆಸ್ಲಾದ ಕಾರು ಎಂಟ್ರಿ ಕೊಡಲಿದೆ ಅನ್ನುವ ಮಾತನ್ನು ಅವರು ಹೇಳಿರುವಂತೆಯೇ ಕಂಪೆನಿಯ ಮಾಡೆಲ್ 3 ಅನ್ನುವ ಕಾರು ಭಾರೀ ಬೇಡಿಕೆಯದು ಹಾಗೂ ಅದನ್ನೇ ಟೆಸ್ಲಾ ಭಾರತಕ್ಕೆ ತರಲಿದೆ ಅನ್ನಲಾಗುತ್ತಿದೆ.
ಗಡ್ಕರಿ ಈ ಕುರಿತು ಮಾತನಾಡುತ್ತಾ, ಭಾರತಕ್ಕೆ ಇಲೆಕ್ಟ್ರಿಕ್ ಕಾರುಗಳ ಅನಿವಾರ್ಯತೆಯಿದ್ದು, ತೈಲದ ಮೇಲಿನ ಅವಲಂಬನೆ ಯಿಂದ ಹಿಂದೆ ಸರಿಯಬೇಕಿದೆ ಎನ್ನುವ ನಿರ್ಧಾರಕ್ಕೆ ಕಟಿಬದ್ಧರಾಗಿದ್ದೇವೆ ಎಂದಿದ್ದಾರೆ.

ಮುಖ್ಯವಾಗಿ ಇದಕ್ಕೆ ಕಾರಣ ಮಹಾ ನಗರಗಳಲ್ಲಿ ದಿನೇ ದಿನೇ ಏರುತ್ತಿರುವ ವಾಯು ಮಾಲಿನ್ಯ, ಅಲ್ಲದೇ ತೈಲಕ್ಕಾಗಿ ಬೇರೆ ದೇಶಗಳಿಗೇ ಅವಲಂಬಿಸಬೇಕಿರುವುದು. ಇದರೊಂದಿಗೆ ಟಾಟಾ, ಓಲಾದಂತಹ ಕಂಪೆನಿಗಳೂ ಮುಂದಿನ ದಿನಗಳಲ್ಲಿ ಟೆಸ್ಲಾದ ಗುಣಮಟ್ಟದ್ದೇ ಇಲೆಕ್ಟ್ರಿಕ್ ಕಾರುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದು, ಇವುಗಳು ಬೆಲೆಯಲ್ಲಿ ಇನ್ನಷ್ಟು ಗ್ರಾಹಕ ಸ್ನೇಹಿಯಾಗಿರಲಿವೆ ಎಂದಿದ್ದಾರೆ.

ಅಮೆರಿಕದಲ್ಲಿ ಸದ್ಯ 28 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿರುವ ಟೆಸ್ಲಾದ ಈ ಮಾಡೆಲ್ ಭಾರತಕ್ಕೆ ಅದರ ಸುಮಾರು ಎರಡರಷ್ಟು ಬೆಲೆ, ಅಂದರೆ 55 ಲಕ್ಷದಷ್ಟಕ್ಕೆ ಮಾರಾಟವಾಗುವ ಸಾಧ್ಯತೆ ಇದ್ದು, ಇದಕ್ಕೆ ಹೋಲಿಸಿದರೆ ಬೇರೆ ಇಲೆಕ್ಟ್ರಿಕ್ ಕಾರುಗಳ ಬೆಲೆ ಕಡಿಮೆ ಇರುವ ಸಾಧ್ಯತೆ ಇರುವುದು ಒಂದೆಡೆಯಾದರೆ, ಇಲ್ಲೇ ತಯಾರಾಗುವ ಕಾರುಗಳು ಸಹಜವಾಗಿಯೇ ಕಡಿಮೆ ಟ್ಯಾಕ್ಸ್‌ ನೀಡುವುದರಿಂದ ಅವುಗಳ ಬೆಲೆಯಲ್ಲಿ ವ್ಯತ್ಯಾಸ ಒಂದೆಡೆ ಅನ್ನುವುದೂ, ಜೊತೆಗೆ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುವ
ವ್ಯವಸ್ಥೆಗಳೂ ಬೆಂಬಲವಾಗುವುದೂ, ಹೆಚ್ಚು ಮಂದಿ ಇಲೆಕ್ಟ್ರಿಕ್ ಕಾರಿನತ್ತ ಹೊರಳುವುದಕ್ಕೆ ಅವಕಾಶವಾಗುವುದೂ ಇದರ
ಅನಿವಾರ್ಯತೆಯ ಕಾರಣಗಳು.

2016ರಲ್ಲೆ 1000 ಡಾಲರ್ ನೀಡಿ ಟೆಸ್ಲಾದ ಕಾರು ಬರಲಿ ಎಂದು ಕಾದ ಅನೇಕ ಭಾರತೀಯರಿಗೆ ಇಷ್ಟರವರೆಗೆ ಸಿಕ್ಕಿದ್ದು ತಣ್ಣೀರ ಬಟ್ಟೆಯೇ ಅನ್ನೋಣ. ಆದರೂ ಕೊನೆಗೂ ಕಾರ್ ಈ ವರ್ಷದ ಮೊದಲಾರ್ಧ ಅಲ್ಲದಿದ್ದರೂ, ಎರಡನೇ ಭಾಗದಲ್ಲಾದರೂ ಬರಬಹುದು ಎನ್ನುತ್ತವೆ ವಿವಿಧ ವರದಿಗಳು. ಭಾರತದಲ್ಲಿ ಇಲೆಕ್ಟ್ರಿಕ್ ಕಾರುಗಳು ನಿಧಾನವಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದರೂ, ಕಾರು ಬಂದರೆ ಸಾಲದು, ಅದಕ್ಕೆ ತಕ್ಕ ಮೂಲಭೂತ ಸೌಲಭ್ಯಗಳು ಬೇಕಿರುವುದು ಅನಿವಾರ್ಯ. ಅಂದರೆ ಚಾರ್ಜಿಂಗ್ ಸೇಲ್ಸ್, ರಿಪೇರಿ ಇತ್ಯಾದಿ, ಈ ಹಿಂದಿನ ವ್ಯವಸ್ಥೆಯನ್ನು ಹೊಂದಿ ಬಾಳುವುದು ಕಷ್ಟ.

ಹಾಗಾಗಿ ಇಲೆಕ್ಟ್ರಿಕ್ ಕಾರುಗಳು ಭಾರತದ ಮೂಲೆ ಮೂಲೆಗೂ ತಲುಪುವಂತೆ ಅಲ್ಲಲ್ಲಿ ಚಾರ್ಜಿಂಗ್ ಸ್ಟೇಶನ್‌ಗಳನ್ನು ತಯಾರಿಸುವ ವ್ಯವಸ್ಥೆಗೆ ಸರಕಾರವೂ ಮುಂದಡಿಯಿಟ್ಟಿದೆ. ಮುಂದಿನ 5 ವರ್ಷಗಳಲ್ಲಿ ಭಾರತವನ್ನು ಕಾರ್ ತಯಾರಿಕಾ ಹಬ್ ಆಗಿ ಪರಿವರ್ತನೆ ಗೊಳಿಸುವತ್ತ ಪ್ರಯತ್ನ ಜಾರಿಯಿಂದೆ ಎನ್ನುತ್ತಾರೆ ನಿತಿನ್ ಗಡ್ಕರಿ.

ಇನ್ನು ಟೆಸ್ಲಾ ಇದೀಗ ಪೂರ್ತಿ ತಯಾರಾದ ಕಾರನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿರುವುದರಿಂದ ಅದರ ಬೆಲೆ ಅಷ್ಟೊಂದು ಹೆಚ್ಚಾಗುವುದಕ್ಕೆ ಕಾರಣ. ಜೊತೆಗೆ ತನ್ನ ಹೊಸ ಕಾರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಮುಂದಿನ ದಿನಗಳಲ್ಲಿ ಭಾರತವನ್ನೇ ತಯಾರಿ ಹಾಗೂ ಅಸೆಂಬ್ಲಿ ಹಬ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ.

2024ರಲ್ಲಿ ಆ್ಯಪಲ್ ಸಂಸ್ಥೆಯ ಇಲೆಕ್ಟ್ರಿಕ್ ಕಾರ್

ಒಂದೆಡೆ ಆ್ಯಪಲ್ ಹಾಗೂ ಟೆಸ್ಲಾದ ಸುದ್ದಿಯಾದರೆ, ಇನ್ನೊಂದು ಸುದ್ದಿ ಎಂದರೆ ಆ್ಯಪಲ್ ತನ್ನ ಇಲೆಕ್ಟ್ರಿಕ್ ಕಾರನ್ನು ತಯಾರಿಸು ವತ್ತ ನಡೆಸುತ್ತಿರುವ ತಯಾರಿಗೆ ಇನ್ನೊಂದಿಷ್ಟು ಪುಷ್ಟಿದಾಯಕ ಸುದ್ದಿಗಳು ಸಿಕ್ಕಿದ್ದು, ಆ್ಯಪಲ್ ಇಲೆಕ್ಟ್ರಿಕ್ ಕಾರು ಇನ್ನೇನು 2024ರಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗುತ್ತಿದೆ.

ಪ್ರಾಜೆಕ್ಟ್‌ ಟೈಟನ್ ಎನ್ನುವ ಹೆಸರಿನಲ್ಲಿ ಸ್ವಯಂಚಾಲಿತ ಇಲೆಕ್ಟ್ರಿಕ್ ಕಾರನ್ನು ತಯಾರಿಸುತ್ತಿರುವ ಆ್ಯಪಲ್ ಇದಕ್ಕಾಗಿ ಹಲವಾರು ಪೇಟೆಂಟುಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಇದುವರೆಗೂ ಕಾರ್ ಲಾಂಚ್ ಯಾವಾಗ ಅನ್ನುವ ಬಗೆಗೆ ಕೇವಲ ಗುಲ್ಲೇ ಹರಿದಾಡುತ್ತಿದೆ. ಅಡ್ವಾನ್ಸ್‌ಡ್‌ ಹೆಡ್ ಲೈಟುಗಳು, ಆಟೋಮ್ಯಾಟಿಕ್ ಸಿಸ್ಟಮ್, ಡಿಸ್ಲ್ಪೇ ಇನ್ ವಿಂಡೋಸ್ ಅನ್ನುವ ಪೇಟೆಂಟು ಗಳು ಆ್ಯಪಲ್ ಪಡೆದಿರುವ ಹಲವು ಪೇಟೆಂಟುಗಳಲ್ಲಿ ಸೇರಿದೆ.

2014ರಲ್ಲಿ ವಿದ್ಯುತ ಚಾಲಿತ ಕಾರುಗಳ ತಯಾರಿಯನ್ನು ಆರಂಭಿಸಿದ್ದ ಆ್ಯಪಲ್ ಅದನ್ನು ಮಧ್ಯದಲ್ಲಿ ಕೈಬಿಟ್ಟಿತ್ತು ಅನ್ನುವ ಸುದ್ದಿಯೂ ಇತ್ತು. ಆದರೆ ಇದೀಗ 2024ರ ಲಾಂಚ್ ನ ಮಾಹಿತಿ ಬಂದಿದೆ. ಇದರ ಕೆಲವು ಫೀಚರ್‌ಗಳನ್ನು ನೋಡೋಣ. ಈ ತಥಾಕಥಿತ ಫೀಚರ್‌ಗಳಲ್ಲಿ ಒಂದು ಬೇಗನೆ ಚಾರ್ಜ್ ಆಗುವ, ಕಡಿಮೆ ಬೆಲೆಯ ಬ್ಯಾಟರಿ ಸಿಸ್ಟಂ, ಕಾರಿನ ರೇಂಜ್ (ಫುಲ್ ಚಾರ್ಜ್ನಲ್ಲಿ ಹೋಗುವ ಒಟ್ಟೂ ದೂರ) ಈ ಮೂಲಕ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೂ ಈ ಕುರಿತು ಕೇವಲ ಗಾಳಿಸುದ್ದಿಯಷ್ಟೇ ಬರುತ್ತಿದ್ದು ಈಗ ಬಂದಿರುವ ಸುದ್ದಿಯೇ ಸತ್ಯವೆಂದಾದರೆ ಕೊನೆಗೂ ಆ್ಯಪಲ್ ಸಂಸ್ಥೆಯ ಕಾರೊಂದು ರೋಡಿಗಿಳಿಯುವ ದಿನ ದೂರವಿಲ್ಲ ಅನ್ನಬಹುದು. ಹಾಗಾದಾಗ, ಆ್ಯಪಲ್ ಸಂಸ್ಥೆಯ ಎಲ್ಲಾ ಉತ್ಪನ್ನಗಳನ್ನು ಅತಿ ಪ್ರೀತಿಯಿಂದ ಖರೀದಿಸುವ ಮಂದಿ, ಈ ಇಲೆಕ್ಟ್ರಿಕ್ ಕಾರನ್ನೂ ಖರೀದಿಸುವುದರಲ್ಲಿ ಅನುಮಾನವಿಲ್ಲ.

ಮಾರಾಟಕ್ಕಿದ್ದ ಟೆಸ್ಲಾ
ಇದೀಗ ಇಲೆಕ್ಟ್ರಿಕ್ ಕಾರುಗಳ ರಾಜನಂತೆ ಬಿಂಬಿತವಾಗುತ್ತಿರುವ ಟೆಸ್ಲಾವನ್ನೇ ಒಂದು ಕಾಲದಲ್ಲಿ ಮಾರುವ ಸ್ಥಿತಿಗೆ ಬಂದಿದ್ದ ಇಲಾನ್ ಮಸ್ಕ್‌ ಕಂಪೆನಿಯನ್ನು ಇಂದಿನ ಬೆಲೆಯ 10 ಶೇಕಡಾ ಬೆಲೆಗೆ ಆಪಲ್ಗೆ ಮಾರುವುದಕ್ಕೆ ತಯಾರಾಗಿದ್ದರು. ಆ ಕುರಿತು ಆ್ಯಪಲ್ ಸಂಸ್ಥೆ ಖರೀದಿಸಬಹುದು ಎಂಬ ಮಾತುಕತೆಗಳು ಆರಂಭಗೊಂಡಿದ್ದವು. ಆದರೆ ಆ್ಯಪಲ್ ಮುಖ್ಯಸ್ಥ ಟಿಮ್
ಕುಕ್ ಅದೇಕೋ ಇದರಲ್ಲಿ ಆಸಕ್ತಿ ತೋರಲಿಲ್ಲ.

ಅಷ್ಟೇ ಅಲ್ಲ, ಮಸ್ಕ್‌ ಅವರನ್ನು ಭೇಟಿ ಮಾಡುವುದಕ್ಕೇ ಸಿದ್ಧವಿರಲಿಲ್ಲ ಅನ್ನುವ ಸುದ್ದಿಯೊಂದು ಬಂದಿದೆ. ಇದನ್ನು ಸ್ವತಃ ಇಲಾನ್ ಮಸ್ಕ್‌ ಅವರೇ ಟ್ವೀಟೊಂದರಲ್ಲಿ ಉಲ್ಲೇಖಿಸಿದ್ದು, ಕಂಪೆನಿ ತನ್ನ ಮಾಡೆಲ್ 3ಯ ತಯಾರಿಯ ಕಷ್ಟದ ದಿನಗಳಲ್ಲಿದ್ದಾಗ ತಾನು ಈಗಿರುವ ಕಂಪೆನಿಯ ಬೆಲೆಯ ಕೇವಲ 10 ಶೇಕಡಾ ಬೆಲೆಗೆ ಪೂರ್ತಿ ಮಾರುವುದಕ್ಕೆ ತಯಾರಾಗಿದ್ದು, ಆ್ಯಪಲ್ ಕಂಪೆನಿಯ
ಮುಖ್ಯಸ್ಥರನ್ನು ಸಂಪರ್ಕಿಸಿದ್ದಾಗ ಸಿಕ್ಕ ನೀರಸ ಪ್ರತಿಕ್ರಿಯೆಯನ್ನು ಅನ್ನು ಉಲ್ಲೇಖಿಸಿದ್ದಾರೆ. ಅಕಸ್ಮಾತ್ ಆ ವ್ಯವಹಾರ ಕುದುರಿ ದ್ದರೆ, ಟೆಸ್ಲಾ ಇಂದು ಪ್ರಖ್ಯಾತ ಎನಿಸಿರುವ ಇಲೆಕ್ಟ್ರಿಕ್ ಕಾರುಗಳ ಕತೆ ಏನಾಗುತ್ತಿತ್ತೆಂದು ಹೇಳುವಂತಿಲ್ಲ