ಸಂಡೆ ಸಮಯ
ಸೌರಭ ರಾವ್
ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳ ಈ ಕೆಳಗಿನ ಪಟ್ಟಿ ರ್ಯಾನ್ಡಿ ಪೌಶ್ ಅವರ ಬಾಲ್ಯದ ಕನಸುಗಳದ್ದು.
*ಶೂನ್ಯ ಗುರುತ್ವಾಕರ್ಷಣೆಯ ಅನುಭವ ಪಡೆಯುವುದು
*ನ್ಯಾಷನಲ್ ಫುಟ್ಬಾಲ್ ಲೀಗ್ನಲ್ಲಿ ಆಡುವುದು
*ವಲ್ಡರ್ ಬುಕ್ ವಿಶ್ವಕೋಶಕ್ಕೆ ಒಂದು ಲೇಖನ ಬರೆಯುವುದು
*ಕ್ಯಾಪ್ಟನ್ ಆಗುವುದು
*ದೊಡ್ಡ ಪ್ರಾಣಿಬೊಂಬೆಗಳನ್ನು ಗೆಲ್ಲುವುದು
*ಡಿಸ್ನಿಿ ಇಮೇಜಿನೀಯರ್ ಆಗುವುದು 2007ರಲ್ಲಿ ನಡೆದು ಪುಸ್ತಕವಾಗಿ ರೂಪುಗೊಂಡ ಕಥೆ.
ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿರುವ ಕಾರ್ನೆಗೀ ಮೆಲನ್ ಯೂನಿವರ್ಸಿಟಿ, ‘ದ ಲಾಸ್ಟ್ ಲೆಕ್ಚರ್’ ಎಂಬ ಭಾಷಣ ಸರಣಿ
ಶುರು ಮಾಡಿ ಕೆಲವು ಹೆಸರಾಂತ ಶಿಕ್ಷಣ ತಜ್ಞರನ್ನು ಆಹ್ವಾನಿಸಿತ್ತು. ಆ ಭಾಷಣ ಅವರ ಜೀವನದ ಕಡೆಯ ಭಾಷಣ ಎಂದು ಕಲ್ಪಿಸಿಕೊಂಡು, ತಮ್ಮ ಸುತ್ತಲಿನ ಜಗತ್ತಿಗೆ ಯಾವ ಮೌಲ್ಯಗಳನ್ನು, ತಾವು ಕಲಿತ ಯಾವ ಜೀವನಪಾಠಗಳನ್ನು ಹಂಚಿ ಹೋಗಬೇಕು ಎಂದು ಚಿಂತಿಸಿ ಕೊಡಬೇಕಿದ್ದ ಭಾಷಣವದು. ಕ್ರೂರ ಅಣಕವೆಂದರೆ, ಪ್ರೊಫೆಸರ್ ಪೌಶ್ ಪಾಲಿಗೆ ಆ ಆಹ್ವಾನ ಬಂದಾಗ, ಭಾಷಣದ ದಿನದ ಸುಮಾರು ಒಂದು ತಿಂಗಳ ಹಿಂದೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಇರುವ ಸುದ್ದಿ ಬರುತ್ತದೆ. ಹಾಗಾದರೆ ಸಾವಿಗೆ ಸಮೀಪವಿರುವುದರಿಂದ ಅವರ ಭಾಷಣ ತೀರಾ ಗಂಭೀರ, ಗಹನವಾಗಿರಬೇಕಿತ್ತಾ? ಪೌಶ್ ಅವರ ವಿಭಿನ್ನತೆ ಇರುವುದೇ ಅಲ್ಲಿ.
ಭಾಷಣದ ಶುರುವಿನಲ್ಲೇ ತಮಗೆ ಕ್ಯಾನ್ಸರ್ ಇದೆ ಮತ್ತುಆರೋಗ್ಯಕರವಾಗಿ ಬದುಕಲು ಕೇವಲ 3 ರಿಂದ 6 ತಿಂಗಳು ಕಾಲಾವಕಾಶ ಇರಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ಸ್ಪಷ್ಟ ಪಡಿಸಿ ಬಿಡುತ್ತಾರೆ. ‘ನಾನು ಸಪ್ಪೆ ಮುಖ ಹಾಕಿಕೊಂಡು ನಿಮ್ಮ ಮುಂದೆ ನಿಂತಿಲ್ಲವಲ್ಲಾ ಎಂದು ನಿಮಗೆ ನಿರಾಸೆಯಾಗಿದ್ದರೆ ನನ್ನನ್ನು ಕ್ಷಮಿಸಿ’ ಎನ್ನುತ್ತಾರೆ. ಆಗ ಅವರದ್ದೂ ಸೇರಿದಂತೆ ನೆರೆದಿದ್ದ ಎಲ್ಲರ ನಗುವಿನ ಅನುರಣನ. ನಂತರ ತಾನು ಕೇಳುಗರಲ್ಲಿರುವ ಎಷ್ಟೋ ಜನರಿಗಿಂತಲೂ ಫಿಟ್ ಆಗಿದ್ದೇನೆ ಎಂದು ಅಲ್ಲೇ ಪುಶ್ ಅಪ್ ಮಾಡಿಯೂ ತೋರಿಸಿಬಿಡುತ್ತಾರೆ.
ಮತ್ತೆ ನಗು, ಚಪ್ಪಾಳೆ. ‘ಆದರೆ ಕ್ಯಾನ್ಸರ್ ಬಗ್ಗೆ ನನಗೆ ನಿರಾಕರಣೆಯಂತೂ ಖಂಡಿತಾ ಇಲ್ಲ. ಹೆಂಡತಿ ಮತ್ತು ಮೂರು ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಏನೇನು ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಿದ್ದೇನೆ’ ಎಂದು ತಮ್ಮ ಹಾಸ್ಯದ ಹುರುಪಿನ ನಡುವೆಯೇ ಹೇಳುತ್ತಾರೆ. ನಂತರ ತಮಗೆ ಜೀವನದುದ್ದಕ್ಕೂ ಅತ್ಯಂತ ಪ್ರಿಯವಾದ, ಮೌಲ್ಯಯುತವಾದ ವಿಷಯ ಗಳಾವುವು ಎನ್ನುವುದರ ಬಗ್ಗೆೆ ಮಾತನಾಡಲು ಶುರುಮಾಡಿದಾಗ ಪ್ರೆಸೆಂಟೇಷನ್ ಪರದೆಯ ಮೇಲೆ ಕಾಣುವುದೇ ಅವರ
ಬಾಲ್ಯದ ಕನಸುಗಳ ಆ ಪಟ್ಟಿ.
ಬಾಲ್ಯದಲ್ಲಿ ತಮ್ಮ ತಂದೆ, ತಾಯಿ ತಮ್ಮ ಕ್ರಿಯಾಶೀಲತೆಗೆ ಕೊಟ್ಟ ಪ್ರೋತ್ಸಾಹದಿಂದ ತಮ್ಮ ಆತ್ಮವಿಶ್ವಾಸಕ್ಕೆ ಭದ್ರಬುನಾದಿ
ಸಿಕ್ಕಿತು ಎನ್ನುತ್ತಾ ಅವರಿಂದ ಕಲಿತ ಮಾನವೀಯ ಪಾಠಗಳನ್ನು ಸ್ಮರಿಸುತ್ತಾರೆ. ನಂತರ ಓದು, ಉಪನ್ಯಾಸಕ ವೃತ್ತಿ, ತಮ್ಮ
ಕ್ರೀಡೆಯ ಮೇಲಿನ ಅಪಾರ ಆಸಕ್ತಿ, ಜತೆಗೆ ಸದಾ ಕ್ರಿಯಾಶೀಲರಾಗಿ ಹೊಸ ಹೊಸ ಯೋಜನೆಗಳ ಮೇಲೆ ಕೆಲಸ ಮಾಡುವ ತುಡಿತ, ನಂತರ ಪ್ರೀತಿ, ಮಾಡುವೆ, ಮಕ್ಕಳು…ಹೀಗೆ ತಮ್ಮ ಜೀವನದ ವಿವಿಧ ಘಟ್ಟಗಳಲ್ಲಿ ಏಳುಬೀಳುಗಳನ್ನು ಸಮನಾಗಿ ಸ್ವೀಕರಿಸಲು
ಪ್ರೇರೇಪಿಸಿದ ಚಿಂತನೆಗಳ ಬಗ್ಗೆ ಮಾತನಾಡುತ್ತಾರೆ.
ವಸ್ತುಗಳಿಗಿಂತ ವಿಚಾರಗಳು ಮುಖ್ಯ, ಹಣ-ಆಸ್ತಿ ಇವೆಲ್ಲಕ್ಕಿಂತಲೂ ನಮ್ಮವರನ್ನು, ನಮ್ಮ ಸಂಪರ್ಕಕ್ಕೆ ಬರುವ ಮನುಷ್ಯರ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಮುಖ್ಯ. ಇವೆಲ್ಲಾ ಎಲ್ಲರಿಗೂ ತಿಳಿದಿದ್ದರೂ ನಾವು ಹಾಗೆ ಪ್ರತಿನಿತ್ಯ ಬದುಕುವುದು ಕಷ್ಟವೇ. ಮತ್ತು ಪ್ರತಿದಿನವನ್ನೂ ಅರ್ಥಪೂರ್ಣವಾಗಿ ಕಳೆಯಲು ಯಾವುದೋ ಭೀಕರ ಖಾಯಿಲೆ, ಪ್ರೀತಿಪಾತ್ರರ ಸಾವು
ಅಥವಾ ಅಗ್ಗಳಿಕೆಯೇ ಕಾರಣವಾಗಬೇಕಿಲ್ಲ.
ಪ್ರತಿದಿನವೂ ಚೆನ್ನಾಗಿ, ನಮ್ಮ ಮನಸ್ಸಿಗೆ ಸಂತೋಷ ಸಿಗುವಂತೆ, ಬೇರೆ ಯಾರಿಗೂ ತೊಂದರೆ ಕೊಡದೇ ಬದುಕುವ ಪ್ರಯತ್ನವೇ
ನಮ್ಮ ಜೀವನವನ್ನು ನಮ್ಮ ಮಟ್ಟಿಗೆ ಸುಂದರವಾಗಿಸಬಲ್ಲದು. ನಮ್ಮನ್ನು ಬೇಷರತ್ ಪ್ರೀತಿಸುವ ಜೀವಗಳ ಜತೆಗೇ, ತಪ್ಪುಗಳನ್ನು ಮಾಡಿದಾಗ ನಮ್ಮನ್ನು ಮುಲಾಜೇ ಇಲ್ಲದೇ ತಡೆದು ನಿಲ್ಲಿಸಿ ತಿದ್ದುವ ಜನರನ್ನು ಗೌರವಿಸಬೇಕು ಮತ್ತು ಕಲಿಯುವ ನಮ್ರತೆ
ಮಕ್ಕಳಂತೆ ಸದಾ ಉಳಿಸಿಕೊಳ್ಳಬೇಕು. ನಾವು ಕಾಣುವ ಎಲ್ಲ ಕನಸುಗಳೂ ನನಸಾಗುತ್ತವೆ ಎಂಬ ಖಾತ್ರಿ ಯಾವೊಬ್ಬ ಮನುಷ್ಯ ನಿಗೂ ಇರುವುದಿಲ್ಲ, ಆದರೆ ನನಸಾಗದ ಕನಸು ಕೂಡಾ ಒಂದಲ್ಲಾ ಒಂದು ಪಾಠ ಕಲಿಸಿಯೇ ಹೋಗುತ್ತದೆ, ನಮ್ಮ ಮನಸ್ಸನ್ನು ನಾವು ತೆರೆದಿಟ್ಟುಕೊಂಡಿರಬೇಕು ಅಷ್ಟೇ ಎನ್ನುತ್ತಾರೆ ಪೌಶ್.
ಹಾಗಂತ ಬರಿ ಉಪದೇಶವಲ್ಲ, ಹಾಸ್ಯ, ಗಹನ ಚಿಂತನೆ ಎರಡೂ ಹದವಾಗಿ ಬೆರೆತ ಭಾಷಣವದು. ತಮ್ಮ ಕಥೆಯನ್ನು ಓಪ್ರಾಹ್ ಷೋದಲ್ಲೂ ಹಂಚಿಕೊಳ್ಳುತ್ತಾರೆ ಪೌಶ್ ಮತ್ತು ಆ ಭಾಷಣ ಖ್ಯಾತಿ ಹರಡಿ ಕಡೆಗೆ ಅದರ ಆಧಾರದ ಮೇಲೆ ದ ಲಾಸ್ಟ್ ಲೆಕ್ಚರ್ ಹೆಸರಿನಲ್ಲೇ ಪುಸ್ತಕವನ್ನೂ ಬರೆದು ಪ್ರಕಟಿಸಿದ್ದಾರೆ. ಅದು 2008ರಲ್ಲಿ ದ ನ್ಯೂ ಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪುಸ್ತಕಗಳಲ್ಲಿ ಒಂದಾಗಿತ್ತು.
ಇದು ಕನ್ನಡಕ್ಕೂ ಅನುವಾದವಾಗಿದೆ. ಸಮಸ್ಯೆಗಳು ಎದುರಾದಾಗ ಧೃತಿಗೆಡುವುದು, ಖಿನ್ನತೆಗೆ ಒಳಗಾಗುವುದು ಅಥವಾ ಇರುವ ಇಷ್ಟು ಪುಟ್ಟ ಜೀವನದಲ್ಲಿ ಯಾವ ನಿರ್ಧಾರಗಳಿಗೆ, ಆಯ್ಕೆಗಳಿಗೆ ಆದ್ಯತೆ ಕೊಡಬೇಕು ಎಂದು ಗೊಂದಲಕ್ಕೊಳಗಾದಾಗ ನಮ್ಮ ಸಹಾಯಕ್ಕೆ ಬರುವುದು ನಮ್ಮಂತೆಯೇ ಅಥವಾ ನಮಗಿಂತಲೂ ಅಪಾರ ನೋವು ಅನುಭವಿಸಿರುವ ಇತರ ಜೀವಗಳ ಕಥೆಗಳು – ಅದು ಒಂದು ಯುಟ್ಯೂಬ್ ವಿಡಿಯೋ ಮೂಲಕ ನಿಮಗೆ ಸಿಗಬಹುದು ಅಥವಾ ಪುಸ್ತಕದ ರೂಪದಲ್ಲಿ ನಿಮ್ಮ ಕೈಗಳ ಮೇಲೆ ಬಂದು ಬೆಚ್ಚಗೆ ಕೂತು ನಿಮ್ಮ ಮನಸ್ಸನ್ನೂ ಸಾಂತ್ವನಗೊಳಿಸಬಹುದು. ದ ಲಾಸ್ಟ್ ಲೆಕ್ಚರ್ ಎರಡೂ ರೂಪಗಳಲ್ಲಿ ಲಭ್ಯವಿದೆ. ನೋಡಿ, ಓದಿ. ಪೌಶ್ ಅವರ ಭೌತಿಕ ಅಸ್ತಿತ್ವ ಮುಗಿದಿದ್ದರೂ ಹೀಗೆ ಅವರು ನಮ್ಮೊಡನೆ ಇದ್ದಾರೆ, ಇರುತ್ತಾರೆ…ನಮ್ಮ ಮನಸ್ಸುಗಳಲ್ಲಿ ಆರೋಗ್ಯಕರವಾಗಿ, ನಗುನಗುತ್ತಾ, ಸ್ಫೂರ್ತಿ ನೀಡುತ್ತಾ.