Friday, 13th December 2024

ಪಾರಂಪರಿಕ ರಚನೆಗಳ ಸಿಡ್ನಿ

ಮಂಜುನಾಥ್ ಡಿ.ಎಸ್

ಡೌನ್ ಅಂಡರ್ ಎಂದು ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸುತ್ತಾಡುವ ಅನುಭವ ವಿಭಿನ್ನ. ನಾನಾ ರೀತಿಯ ವಿವಿಧ ಪ್ರವಾಸಿ ತಾಣಗಳು ಇಲ್ಲಿವೆ. ಇವುಗಳಲ್ಲಿ ನಾನು ಕಂಡ ಮೂರು ಸ್ಥಳಗಳ ನೆನಪು ಹಸಿರಾಗಿದೆ.

ಅಪೇರಾ ಹೌಸ್
ಆಸ್ಟ್ರೇಲಿಯ ಎಂದೊಡನೆ ಜಗತ್ರಪಸಿದ್ಧ ಅಪೇರಾ ಹೌಸ್‌ನ ಚಿತ್ರ ಕಣ್ಮುಂದೆ ಮೂಡುತ್ತದೆ. ಪ್ರವಾಸದ ಆರಂಭದಿಂದಲೂ ಈ ಅಪೂರ್ವ ಸೌಧದ ದರ್ಶನಕ್ಕಾಗಿ ಕಾಯುತ್ತಿದ್ದೆ. ಸಿಡ್ನಿಯ ಬೆನ್ನೆಲಾಂಗ್ ಪಾಯಿಂಟ್‌ನ ನಾಲ್ಕು ಎಕರೆಗೂ ಮೀರಿದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಎಕ್ಸ್ಪ್ರೆೆಷನಿಷ್ಟ್‌ ಶೈಲಿಯ ಭವ್ಯ ಭವನ ದೂರದಿಂದಲೇ ಆಹ್ವಾನಿಸುತ್ತಿತ್ತು. ವಿಶ್ವ ಪಾರಂಪರಿಕ ಸ್ಥಳ ವೆಂದು ಪ್ರಖ್ಯಾತಿ ಪಡೆದಿರುವ ಈ ಮಹಲಿನ ವಿಶಿಷ್ಟ ವಿನ್ಯಾಸ ಹಾಗು ವೈಶಾಲ್ಯತೆಗೆ ಮಾರು ಹೋದೆ.

ಇದರಲ್ಲಿರುವ ಅನೇಕ ಸಭಾಂಗಣಗಳು ಏಕ ಕಾಲದಲ್ಲಿ ಐದೂವರೆ ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಮನರಂಜಿಸುವ ಸಾಮರ್ಥ್ಯ ಹೊಂದಿದ್ದು, ಇಲ್ಲಿ ಪ್ರತಿ ದಿನ ಪ್ರದರ್ಶನ ಕಲೆಗಳ ನಲವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆಯೆಂಬ ಮಾಹಿತಿ ಬೆರಗುಗೊಳಿಸಿತು. ಸ್ಥಳೀಯ ಸಂಸ್ಥೆಗಳಾದ ಅಪೇರಾ ಆಸ್ಟ್ರೇಲಿಯ, ಸಿಡ್ನಿ ಥಿಯೇಟರ್ ಕಂಪನಿ, ಹಾಗು ಸಿಡ್ನಿ ಸಿಂಫೊನಿ
ಆರ್ಕೆಸ್ಟ್ರಾ ಸೇರಿದಂತೆ ಹಲವಾರು ಕಲಾ ಸಂಸ್ಥೆಗಳು ಇಲ್ಲಿ ಪ್ರದರ್ಶನಗಳನ್ನು ನೀಡುತ್ತವೆ. ರೆಕಾರ್ಡಿಂಗ್ ಸ್ಟುಡಿಯೊ, ಉಪಾಹಾರ ಗೃಹಗಳು, ಪಾನಗೃಹಗಳು ಸಹ ಇಲ್ಲಿವೆ. ಒಂದು ತಾಸಿನ ಗೈಡೆಡ್ ಟೂರ್ ಸೌಲಭ್ಯವೂ ಇದೆ.

ಅಪೇರಾ ಹೌಸ್‌ನ ವಾಸ್ತು ವಿನ್ಯಾಸ ಮಾಡಿದವರು. ಜೋರ್ನ್ ಅಟ್ಜನ್. ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಲ್ಲಿಸಲಾದ 233 ವಿನ್ಯಾಸ ಗಳಲ್ಲಿ ಆಯ್ಕೆಯಾದ ಈ ವಾಸ್ತುವಿನ ನಿರ್ಮಾಣಕ್ಕೆ ಭೂಮಿಪೂಜೆ ನಡೆದದ್ದು 1959ರ ಮಾರ್ಚ್ ಮೊದಲ ದಿನ. 600 ಅಡಿ ಉದ್ದ, 394 ಅಡಿ ಅಗಲ, 213 ಅಡಿ ಎತ್ತರದ ಬೃಹತ್ ಕಟ್ಟಡವನ್ನು ಎರಡನೆ ಎಲಿಜಬೆತ್ ರಾಣಿ 1973ರ ಅಕ್ಟೋಬರ್ 20ರಂದು ಲೋಕಾ ರ್ಪಣೆ ಮಾಡಿದರು. ಪ್ರತಿ ವರ್ಷ 12 ಲಕ್ಷ ಮಂದಿ ಪ್ರವಾಸಿಗರು ಈ ಅಪರೂಪದ ವಿನ್ಯಾಸದ ಭವನವನ್ನು ವೀಕ್ಷಿಸುತ್ತಾರೆ. ವಿಶ್ವ ದಲ್ಲಿಯೇ ಅತಿ ಹೆಚ್ಚು ಛಾಯಾ ಚಿತ್ರೀಕರಣಗೊಳ್ಳುವ ವಿನ್ಯಾಸ ಈ ರಚನೆಯಾದಾಗಿದೆ.

ಡಾರ್ಲಿಂಗ್ ಹಾರ್ಬರ್
ಸಿಡ್ನಿ ನಗರ ಕೇಂದ್ರದ ಬದಿಯಲ್ಲಿಯೇ ಇರುವ ‘ಡಾರ್ಲಿಂಗ್ ಹಾರ್ಬರ್’ ಅನೇಕ ಸಾರ್ವಜನಿಕ ಆಕರ್ಷಣೆಗಳ ಮತ್ತು ಮನರಂಜನಾ ತಾಣಗಳ ತವರಾಗಿದೆ. ಅಕ್ವೇರಿಯಂ, ಜೂ.ಪವರ್ ಹೌಸ್ ಮ್ಯೂಸಿಯಂ, ನ್ಯಾಷನಲ್ ಮಾರಿಟೈಮ್ ಮ್ಯೂಸಿಯಂ, ಮೇಡಂ ತುಸ್ಸಾಡ್ಸ್‌ ಮ್ಯೂಸಿಯಂ, ಕ್ಯಾಸಿನೋ, ಮಳಿಗೆಗಳು, ಮುಂತಾದುವುಗಳು ಇಲ್ಲಿವೆ.

ಇವುಗಳನ್ನೆಲ್ಲಾ ನೋಡಲು ಒಂದು ದಿನ ಸಾಲದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಲಾಂಗ್ ಕೋವ್ ಎಂಬ ಹೆಸರಿದ್ದರೂ ಕಾಕ್‌ಲ್‌ ಬೇ ಎಂದೇ ಜನಪ್ರಿಯವಾಗಿದ್ದ ಈ ಸಮುಚ್ಚಯಕ್ಕೆ, ನ್ಯೂ ಸೌತ್ ವೇಲ್ಸ್’‌‌ನ ಗೌರ್ನರ್ ಆಗಿದ್ದ ಲೆ.ಜ.ರಾಲ್ಫ್ ಡಾರ್ಲಿಂಗ್  ಅವರು 1826ರಲ್ಲಿ ತನ್ನ ಹೆಸರನ್ನಿಟ್ಟು ಮರು ನಾಮಕರಣ ಮಾಡಿದ. ಅಂದಿನಿಂದ ಆತನ ಹೆಸರಿನಿಂದ ಪ್ರಸಿದ್ಧಿಯಾಗಿರುವ ಈ ಸ್ಥಳ ಪ್ರವಾಸಿಗರ ಅಚ್ಚು ಮೆಚ್ಚು.

ಹಾರ್ಬರ್ ಬ್ರಿಜ್
ಸಿಡ್ನಿಯ ಪ್ರಮುಖ ವಹಿವಾಟು ಕೇಂದ್ರ ಮತ್ತು ಉತ್ತರದ ದಂಡೆಯ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯೇ ಹಾರ್ಬರ್ ಬ್ರಿಜ್. ರೈಲು, ಮೋಟರು ವಾಹನಗಳು, ಬೈಸಿಕಲ್‌ಗಳು, ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಈ ಉಕ್ಕಿನ
ಸೇತುವೆಯು 3770 ಅಡಿ ಉದ್ದ, 160 ಅಡಿ ಅಗಲ, ಹಾಗು 440 ಅಡಿ ಎತ್ತರ ಹೊಂದಿದೆ. 53000 ಟನ್ ಉಕ್ಕನ್ನು ಬಳಸಿ ನಿರ್ಮಿಲಾ ಗಿರುವ ಈ ಸೇತುವೆ 1932ರ ಮಾರ್ಚ್ 19ರಂದು ಸಂಚಾರಕ್ಕೆ ಮುಕ್ತವಾಯಿತು.

ಆಸ್ಟ್ರೇಲಿಯದ ಪಾರಂಪರಿಕ ತಾಣಗಳಲ್ಲಿ ಒಂದೆನಿಸಿರುವ ಇದು ವಿಶ್ವದಲ್ಲಿಯೇ ಅತಿ ದೊಡ್ಡಉಕ್ಕಿನ ಕಮಾನು ಸೇತುವೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಕ್ರೂಸ್ ವಿಹಾರ
ನಾವು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ, ಅಂದಿನ ಕಾರ್ಯಸೂಚಿಯಲ್ಲಿ ಸಂಜೆಯ ಕ್ರೂಸ್ ವಿಹಾರವೂ ಸೇರಿತ್ತು. ಈ ಉಲ್ಲಾಸಭರಿತ ಯಾನದಲ್ಲಿ ಪಾನೀಯ, ಭೋಜನ, ಮನರಂಜನೆಗಳಿಗೇ ಪ್ರಾಾಮುಖ್ಯತೆ. ಇಂದಿನ ಯುವ ತಲೆಮಾರಿನ ಜನರು ಈ ಕ್ರೂಸ್ಯಾನದ ಸವಿರುಚಿಗಳನ್ನು ಉಲ್ಲಾಸದಿಂದ ಅನುಭವಿಸುತ್ತಾರೆ. ಆದರೆ ನಾನು ಈ ಭೋಗಗಳನ್ನು ಬದಿಗಿರಿಸಿ, ವಿಹಾರದ ಬಹಳ ಸಮಯವನ್ನು ಅಪೇರಾ ಹೌಸ್, ಹಾರ್ಬರ್ ಬ್ರಿಜ್ ಹಾಗು ನಗರದ ದೃಶ್ಯಗಳ ವೀಕ್ಷಣೆಗೆಂದೇ ಮೀಸಲಿಟ್ಟು ಸಿಡ್ನಿಯ ಸೌಂದರ್ಯೋಪಾಸನೆಯಲ್ಲಿ ತೊಡಗಿದ್ದೆ.