ಟೆಕ್ ಫ್ಯೂಚರ್
ವಸಂತ ಗ ಭಟ್
ಇಂದು ನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಕಟ್ಟಡದ ವಿನ್ಯಾಸದ ಭಾಗವಾಗಿ ದೊಡ್ಡ ಗಾತ್ರದ ಗಾಜಿನ ಫಲಕಗಳ ಉಪಯೋಗ ಜನಪ್ರಿಯಗೊಂಡಿದೆ. ಇಂತಹ ಪಾರದರ್ಶಕ ಗಾಜನ್ನು ಬಳಸಿಕೊಂಡು, ಅದರಿಂದ ಹೆಚ್ಚಿನ ಪ್ರಮಾಣ ದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಾದರೆ ಚೆನ್ನಾಗಿರಬಹುದು, ಅಲ್ಲವೆ!
ಕ್ರಿಸ್ತ ಪೂರ್ವ 2500 ರ ಸಮಯದಲ್ಲೇ ಕಂಡುಹಿಡಿಯಲಾದ ವಸ್ತು ಗಾಜು. ಮೆಸಪಟೋಮೀಯ ನಾಗರಿ ಕತೆಯ ಸಮಯದಲ್ಲಿ ಸಂಶೋಧನೆಗೊಂಡ ಗಾಜು, ನಂತರ ನಿಧಾನವಾಗಿ ವಿಶ್ವದಾದ್ಯಂತ ಹರಿಡಿಕೊಂಡು ಇಂದು ನಮ್ಮ ನಿತ್ಯ ಜೀವನದ ಬಹುಮುಖ್ಯ ಭಾಗವಾಗಿದೆ.
ಸುಮ್ಮನೆ ಗಮನಿಸಿ, ನಮ್ಮ ದಿನನಿತ್ಯದ ಬದುಕಿನಲ್ಲಿ ಮನೆಯ ಕಿಟಕಿ, ಮೊಬೈಲ್‌ನ ಪರದೆ, ಮನೆಯ ಮೇಲ್ಛಾವಣಿ, ಕಾರಿನ ಕಿಟಕಿ, ಕಟ್ಟಡಗಳ ಗೋಡೆಯ ಪರ್ಯಾಯವಾಗಿ ಹೀಗೆ, ನಾವು ಗಾಜನ್ನು ಎಡೆಯೂ ಬಳಸುತ್ತೇವೆ. ಮರಳಿನಿಂದ ಸುಲಭವಾಗಿ ಗಾಜನ್ನು ಉತ್ಪಾದಿಸಲು ಸಾಧ್ಯವಿರುವುದರಿಂದ ಗಾಜಿನ ಲಭ್ಯತೆ ಹೆಚ್ಚಿದೆ. ಹೀಗೆ ನಾವು ಬಳಸುವ ಗಾಜಿನ ಮುಖ್ಯ ಉದ್ದೇಶ ಬೆಳಕನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು.
ಇತ್ತೀಚಿನ ದಿನಗಳಲ್ಲಿ ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿರುವುದರಿಂದ ಮತ್ತು ಅಲ್ಲಿ ಕಲ್ಲಿನ ಗೋಡೆಗಳ ಬದಲಾಗಿ ಗಾಜನ್ನು ಬಳಸುವ ಕಾರಣದಿಂದ, ವಿಜ್ಞಾನಿಗಳಿಗೆ ಹೊಸದೊಂದು ಆಲೋಚನೆ ಬಂದಿದೆ. ಈ ರೀತಿ ಕಟ್ಟಡಗಳಲ್ಲಿ ಬಳಕೆಯಾಗುವ ಗಾಜನ್ನು ಕೇವಲ ಬೆಳಕು ಹರಿಯಲು ಮಾತ್ರ ಬಳಸದೆ ಸೋಲಾರ್ ಪ್ಯಾನಲ್‌ಗೆ ಪರ್ಯಾಯವಾಗಿ ಬಳಸಿದರೆ ಈ ಬಹುಮಹಡಿ ಕಟ್ಟಡಗಳು ತಮ್ಮ ವಿದ್ಯುತ್ ಅವಶ್ಯ ಕತೆಯ ಹೆಚ್ಚಿನ ಭಾಗವನ್ನು ಸ್ವಂತ ವಾಗಿ ಉತ್ಪಾದಿಸಿಕೊಳ್ಳಬಹುದಾಗಿದೆ.
ಹಾಗಾದರೆ ಬನ್ನಿ ನೋಡೋಣ ಹೇಗೆ ಪಾರದರ್ಶಕ ಗಾಜು ಸೋಲಾರ್ ಪ್ಯಾನಲ್ ಆಗಿ ಕಾರ್ಯನಿರ್ವಹಿಸಬಹುದೆಂದು. ಈಗ ಮಾರುಕಟ್ಟೆಯಲ್ಲಿ ದೊರೆಯುವ ಸೋಲಾರ್ ಪ್ಯಾನಲ್‌ಗಳು ಸೂರ್ಯನ ಕಿರಣವನ್ನು ಹೀರಿಕೊಂಡು ವಿಶೇಷವಾಗಿ ರೂಪಿಸಿದ ಸಿಲಿಕಾನ್ ಕೋಶಗಳ ಮೂಲಕ ಹಾದುಹೋಗಿ ವಿದ್ಯುತ್ ಅನ್ನು ಉತ್ಪಾದಿಸಿ, ಬ್ಯಾಟರಿಗೆ ವರ್ಗಾಯಿಸುತ್ತವೆ. ಈ ಪ್ಯಾನಲ್‌ಗಳನ್ನು ಹೆಚ್ಚು ಪ್ರಮಾಣದ ಸೂರ್ಯನ ಕಿರಣಗಳನ್ನು ಹೀರುವ ಉದ್ದೇಶದಿಂದ ವಿನ್ಯಾಸಗೊಳಿಸ ಲಾಗಿರುತ್ತದೆ. ಅಷ್ಟಾದರೂ ಅವು ತಮ್ಮ ಮೇಲೆ ಬೀಳುವ ಒಟ್ಟು ಸೂರ್ಯನ ಕಿರಣದ 20 ಪ್ರತಿಶತ ಶಕ್ತಿಯನ್ನು ಮಾತ್ರ ವಿದ್ಯುತ್ ಆಗಿ ರೂಪಾಂತರಿಸುತ್ತಿವೆ.
ನೇರಳಾತೀತ ಕಿರಣಗಳಿಂದ ವಿದ್ಯುತ್ ಪಾರದರ್ಶಕ ಗಾಜಿನಲ್ಲಿ ಈ ರೀತಿಯ ವಿಶೇಷ ಸಿಲಿಕಾನ್ ಕೋಶಗಳನ್ನು ಕೂರಿಸಲು ಸಾಧ್ಯವಾಗದ ಕಾರಣ ಕಣ್ಣಿಗೆ
ಕಾಣುವ ಸೂರ್ಯನ ಬೆಳಕಿನ ಮೂಲಕ ಇಲ್ಲಿ ವಿದ್ಯುತ್ ಉತ್ಪಾದಿಸುವುದು ಸಾಧ್ಯವಿಲ್ಲ. ಬದಲಿಗೆ ಕಣ್ಣಿಗೆ ಕಾಣದ ನೆರಳಾತೀತ ಕಿರಣಗಳು ಮತ್ತು ಇನ್ರಾ ರೆಡ್ ಕಿರಣಗಳನ್ನು ಇಲ್ಲಿ ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಟ್ರಾನ್ಸಪರೆಂಟ್ ಲ್ಯುಮೀನೆಂಟ್ ಸೋಲಾರ್ ಕಾನ್ಸನ್ ಟ್ರೇಟರ್ಸ್ ಎನ್ನುವ ಉಪ್ಪಿನ ಕಣಗಳ ರೀತಿಯ ವಸ್ತು ಈ ನೆರಳಾತೀತ ಮತ್ತು ಇನ್ರಾ ರೆಡ್ ಕಿರಣಗಳನ್ನು ಹೀರುವ ಸಾಮರ್ಥ್ಯವನ್ನು ಹೊಂದಿದ್ದು ಅವುಗಳನ್ನು ಈ ಪಾರದರ್ಶಕ ಗಾಜಿನ ಮೂಲೆಯಲ್ಲಿ ಇಡಲಾಗುತ್ತದೆ.
ಗಾಜಿನ ಮೂಲಕ ಕಣ್ಣಿಗೆ ಕಾಣುವ ಸೂರ್ಯನ ಕಿರಣ ಹಾದು ಕಟ್ಟಡದ ಒಳಗಡೆ ಬೆಳಕು ನೀಡಿದರೆ ಕಣ್ಣಿಗೆ ಕಾಣದ ಬೆಳಕನ್ನು ಗಾಜಿನ ತೂದಿಯಲ್ಲಿರುವ ಟ್ರಾನ್ಸ್ ಪರೆಂಟ್ ಲ್ಯುಮೀನೆಂಟ್ ಸೋಲಾರ್ ಕಾನ್ಸನ್ ಟ್ರೇಟರ್ಸ್‌ಗಳು ಹೀರಿಕೊಂಡು ವಿದ್ಯುತ್ ಅನ್ನು ಉತ್ಪಾದಿಸಿ ಬ್ಯಾಟರಿಗೆ ವರ್ಗಾಯಿಸುತ್ತವೆ. ಇವು ತಮ್ಮ ಮೇಲೆ ಬೀಳುವ ಒಟ್ಟಾರೆ ಸೌರ ಶಕ್ತಿಯ ಸುಮಾರು 10 ಪ್ರತಿಶತವನ್ನು ವಿದ್ಯುತ್ ಆಗಿ ಬದಲಾಯಿಸಬಹುದಾಗಿವೆ. ಸಿಲಿಕಾನ್‌ನಿಂದ ಮಾಡಲಾದ, ಈಗ ಬಳಕೆಯ ಲ್ಲಿರುವ ಸೋಲಾರ್ ಪ್ಯಾನಲ್ ಗಿಂತಲೂ ಇದರ ಪರಿವರ್ತನಾ ಶಕ್ತಿ ಕಡಿಮೆಯಾದರೂ, ಎಲ್ಲೆಡೆ ಬಳಕೆಯಲ್ಲಿರುವ ಸಾಮಾನ್ಯ ಗಾಜಿನಿಂದಲೇ ವಿದ್ಯುತ್ ಉತ್ಪಾದನೆಯಾಗುವುದರಿಂದ ಇದನ್ನು ಎಡೆ ಬಳಸಬಹುದಾಗಿದೆ. ಮೊದಲು ಈ ತಂತ್ರಜ್ಞಾನವನ್ನು ಕಂಡುಹಿಡಿದ ಯುಬಿಕ್ಯೂಟಸ್ ಎನರ್ಜೀ ಎನ್ನುವ
ಅಮೇರಿಕದ ಸಂಸ್ಥೆ ಸದ್ಯ ಕ್ಯಾಲಿಫೋರ್ನಿಯ ಎನರ್ಜೀ ಕಮಿಷನ್ ನಿಂದ ಮಿಲಿಯನ್ ಗಟ್ಟಲೆ ಹೂಡಿಕೆಯನ್ನು ಪಡೆದಿದೆ.
ಜಗತ್ತಿನ ಹೆಸರಾಂತ ಗಾಜು ತಯಾರಾಕ ಸಂಸ್ಥೆಯಾದ ಎನ್ ಎಸ್ ಜಿ ಯೊಡನೆ ಒಡಂಬಡಿಕೆ ಮಾಡಿಕೊಂಡಿರುವ ಯುಬಿಕ್ಯೂಟಸ್ ಎನರ್ಜೀ, ಭವಿಷ್ಯದಲ್ಲಿ ಬೆಳಕನ್ನು ಮಾತ್ರ ಹರಿಸಿ ಶಾಖವನ್ನು ತಡೆಹಿಡಿಯುವ ವಿಶೇಷ ಗಾಜನ್ನು ಸಿದ್ಧಪಡಿಸುವುದರಲ್ಲಿ ನಿರತವಾಗಿದೆ. ಇದರಿಂದಾಗಿ ಈ ವಿಶೇಷ ಗಾಜು ವಿದ್ಯುತ್ ಉತ್ಪಾದಿಸುವದರ ಜೊತೆಗೆ ಕಟ್ಟಡದ ಒಳಗಡೆ ಶಾಖವನ್ನು ಹರಿಯ ಬಿಡದೆ ಹವಾನಿಯಂತ್ರಕದ ವಿದ್ಯುತ್ ಅವಶ್ಯಕತೆಯನ್ನು ಸಹ ಕಡಿಮೆ ಮಾಡಲಿದೆ.
ಬಹು ಮಹಡಿ ಕಟ್ಟಡಗಳಲ್ಲಿ ಯುರೋಪಿನ ಸೋಲಾರ್ ಗ್ಯಾಪ್ಸ್ ಸಂಸ್ಥೆ ಹಳೆಯ ಮತ್ತು ಹೊಸ ತಂತ್ರಜ್ಞಾನದ ಮಿಲಿತವಾದ ಹೊಸ ರೀತಿಯ ಸೋಲಾರ್ ಪ್ಯಾನಲ್ ಅನ್ನು ರೂಪಿಸಿದೆ. ಇದನ್ನು ಕಟ್ಟಡ ಅಥವಾ ಮನೆಯಲ್ಲಿರುವ ಗಾಜಿನ ಮೇಲೆ ಜೋಡಿಸಬೇಕು ಮತ್ತು ಸೂರ್ಯನ ಚಲನೆಗನುಗುಣವಾಗಿ ನೀವು ಅದನ್ನು
ಬೇಕಾದ ದಿಕ್ಕಿಗೆ ತಿರುಗಿಸಬಹುದಾಗಿದೆ. ಇದರಿಂದಾಗಿ ಇದು ದಿನದ ಎಲ್ಲ ಸಮಯದಲ್ಲೂ ವಿದ್ಯುತ್ ಉತ್ಪಾದಿಸಲಿದ್ದು, ಒಂದು ಚದರ ಮೀಟರ್ ಗೆ ಸುಮಾರು ೧೦೦ ವಾಟ್ ನಷ್ಟು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದರಿಂದ 3 ಲ್ಯಾಪ್ಟಾಪ್ ಅನ್ನು ಒಂದು ದಿನದ ಮಟ್ಟಿಗೆ ಚಾರ್ಜ್ ಮಾಡಬಹು ದಾಗಿದೆ. ಅದಾಗಲೇ ಸೋಲಾರ್ ಗ್ಯಾಪ್ಸ್ ಈ ವಿಶೇಷ ಪ್ಯಾನಲ್‌ಗಳನ್ನು ಹಲವಾರು ಬಹುಮಹಡಿ ಕಟ್ಟಡಗಳಲ್ಲಿ ಅಳವಡಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ವಿಜರ್ಲ್ಯಾಂಡ್ ಯೋಜನೆ
ಈ ಎಲ್ಲ ಸಂಶೋಧನೆಗಳಿಂದ ಸ್ಪೂರ್ತಿ ಪಡೆದ ಸ್ವಿಜರ್ಲ್ಯಾಂಡ್ ಸರಕಾರ 4 ವರ್ಷಗಳ ಒಂದು ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಪ್ರಕಾರ ದೇಶದಲ್ಲಿರುವ ಎಲ್ಲ ಪಾಲಿ ಹೌಸ್‌ನ ಸುತ್ತಲೂ ಪ್ಲಾಸ್ಟಿಕ್ ಪರದೆಯ ಬದಲು ವಿಶೇಷ ಪಾರದರ್ಶಕ ಫೈಬರ್ ಗಾಜನ್ನು ಬಳಸುವುದು. ಇವು ವಿದ್ಯುತ್ ಉತ್ಪಾದನೆಯ ಜೊತೆಗೆ ಗಿಡಗಳಿಗೆ ಅವಶ್ಯಕವಾದಷ್ಟೇ ಶಾಖವನ್ನು ಬಿಡುಗಡೆ ಮಾಡಿ ಹೆಚ್ಚು ಇಳುವರಿ ಬರುವಂತೆ ನೋಡಿಕೊಳ್ಳಲಿದೆ.
ಕೇವಲ ಅಮೇರಿಕ ಒಂದರ ಸುಮಾರು ಏಳು ಬಿಲಿಯನ್ ಚದರ ಮೀಟರ್‌ನಷ್ಟು ಜಾಗವನ್ನು ಗಾಜು ಆವರಿಸಿಕೊಂಡಿದೆ. ಪ್ರತಿವರ್ಷ ಜಗತ್ತಿನಾದ್ಯಂತ ಸುಮಾರು 2.5 ಬಿಲಿಯನ್ ಚದರ ಮೀಟರ್‌ನಷ್ಟು ಹೊಸ ಗಾಜು ಕಟ್ಟಡದ ಹೊರಕವಚವಾಗಿ ಬಳಕೆಯಾಗುತ್ತಿದೆ. ಗಾಜಿನ ಬಳಕೆ ಭವಿಷ್ಯ ದಲ್ಲಿ ಇನ್ನಷ್ಟು ಹೆಚ್ಚಾಗುವ ನೀರೀಕ್ಷೆ ಯಿರುವ ಕಾರಣದಿಂದ ಅದನ್ನು ಕೇವಲ ಬೆಳಕನ್ನು ಹರಿಯ ಬಿಡುವ ವಸ್ತುವಾಗಿ ಬಳಸದೆ ಇತರ ಉದ್ದೇಶಗಳಿಗೆ ಬಳಸುವುದು ಅನಿವಾರ್ಯ.
ಮುಂಬರುವ ದಿನಗಳಲ್ಲಿ ಪಾರದರ್ಶಕ ಸೋಲಾರ್ ಪ್ಯಾನಲ್‌ಗಳು ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳಿವೆ, ಅವು ನಮ್ಮ ಇಂಧನದ ಅವಶ್ಯಕತೆಯನ್ನು ಕಡಿಮೆ ಮಾಡಬಹುದೇ? ಜತೆಗೆ ಮಾಲಿನ್ಯರಹಿತ ಇಂಧನ ಉತ್ಪಾದನೆಗೆ ತಮ್ಮ ಮಹತ್ವಬದ ಕೊಡುಗೆಯನ್ನು ನೀಡಲಿವೆಯೆ? ಕಾದು ನೋಡಬೇಕು.