Saturday, 23rd November 2024

ಅಪಾರ್ಟಮೆಂಟ್ ವೃಕ್ಷದಲ್ಲಿ ಸ್ನೇಹದ ಗೂಡು

ಮಾಲತಿ ಪಟ್ಟಣಶೆಟ್ಟಿ

ನಗರದ ಮಧ್ಯಮವರ್ಗದ ಅಚ್ಚು ಮೆಚ್ಚು ಎನಿಸಿರುವ ಅಪಾರ್ಟ್‌ಮೆಂಟ್ ಬದುಕಿನಲ್ಲಿ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳು ವುದು ಹೇಗೆ? ಓದಿ ನೋಡಿ, ಲೇಖಕಿಯ ಸ್ವಾನುಭವ.

ಸಾವಿರಾರು ವರ್ಷಗಳಿಂದ ನಾಗರಿಕತೆಯತ್ತ ಓಡುತ್ತಿರುವ ಮನುಷ್ಯನು ಕಾಡಿನಲ್ಲಿಯ ಸಹಜವಾದ ಜೀವನವನ್ನು ತ್ಯಜಿಸಿ,
ಭ್ರಾಮಕ ಸುಖಸೌಕರ್ಯಗಳ ನಗರ ಜೀವನದ ಯಾಂತ್ರಿಕ ಬದುಕನ್ನು ‘ಆಧುನಿಕ’ ಎಂದು ತಿಳಿಯುತ್ತ ಗ್ರಾಮೀಣ ಪರಿಸರವನ್ನು ಬಿಟ್ಟುಕೊಟ್ಟು ಆಶ್ರಯಕ್ಕಾಗಿ ಹಪಹಪಿಸುತ್ತಲೇ ಇದ್ದಾನೆ.

ಭಾರತದಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಬಹುಶಃ ಅರ್ಧದಷ್ಟು ಜನರು ನಗರ ಜೀವನವನ್ನು ನೆಚ್ಚಿಕೊಂಡಿದ್ದಾರೆ. ನಾಯಿಕೊಡೆ ಗಳಂತೆ ಅಲ್ಲಿ ಇಲ್ಲಿ ಎಲ್ಲೆಲ್ಲೂ ಎತ್ತರೆತ್ತರ ಬೆಳೆದು ನಿಂತ ಅಪಾರ್ಟಮೆಂಟ್‌ಗಳ ಮೊರೆ ಹೊಗುವುದೇ ಪ್ರಗತಿಯ ಹೆಜ್ಜೆ ಎಂದು ತಿಳಿಯುತ್ತಿರುವುದು ದುರದೃಷ್ಟಕರ!

ನಗರಗಳನ್ನು ಆಕ್ರಮಿಸಿ ನಿಂತ ಉದ್ಯಮ, ಉದ್ಯೋಗಗಳು, ಗ್ರಾಮೀಣ ಪರಿಸರದಲ್ಲಿನ ಕೃಷಿ, ಕುಂಬಾರಿಕೆ, ಕಮ್ಮಾರಿಕೆ, ಬಡಿಗತನ,
ನೇಕಾರಿಕೆ ಇತ್ಯಾದಿ ಗ್ರಾಮೀಣ ಕುಲಕಸುಬುಗಳನ್ನು ಮೂಲೆಗುಂಪು ಮಾಡಿದ್ದು ಇಂದಿನ ಕಟು ಸತ್ಯ! ರಸ್ತೆ, ನೀರು, ವಿದ್ಯುತ್
ಸಂಪರ್ಕ ಹಾಗೂ ದಿನಬಳಕೆಯ ಸಾಮಾನುಗಳಿಲ್ಲದಿದ್ದರೂ ಅರ್ಬುದ ರೋಗದಂತೆ ಹಬ್ಬಿಕೊಳ್ಳುತ್ತಿರುವ ಬಡಾವಣೆಗಳಲ್ಲಿರಲು
ಭೂಮಿ ಆಕಾಶ ಒಂದು ಮಾಡಿ ಬಂದು ನೆಲೆಸುತ್ತಾರೆ. ಇದಕ್ಕೆ ಯಾವ ಮೋಹವೆನ್ನಬೇಕು ತಿಳಿಯದು.

ಅಪಾರ್ಟಮೆಂಟಗಳು ಅನಿವಾರ್ಯವಾಗಲು ಕಾರಣಗಳಿಲ್ಲದಿಲ್ಲ. ನಗರ ಪ್ರದೇಶದ ನೆಲದ ಬೆಲೆ ಏನು? ಮನೆ ಕಟ್ಟಲು, ಕೊಳ್ಳಲು ಬೇಕಾಗುವ ಹಣವನ್ನು ಮಧ್ಯಮ ವರ್ಗದವರು ಭರಿಸಲು ಸಾಧ್ಯವೇ? ಪಟ್ಟಣಗಳಲ್ಲಿ ಕೊಲೆ, ಸುಲಿಗೆ, ಕಳ್ಳತನ, ಮೋಸ, ಅನ್ಯಾಯ, ಅತ್ಯಾಚಾರಗಳು ಹೆಚ್ಚುತ್ತಿವೆ. ಈ ಅಪಾಯಗಳಿಂದ ಬಚಾವಾಗಲು ಅಪಾರ್ಟಮೆಂಟ ಮನೆ ಖರೀದಿಸಲು ಸಾಲಸೂಲ ಮಾಡಿ, ಹಳ್ಳಿಯ ಹೊಲಮನೆ ಮಾರಿ, ಎರಡು ಬೆಡ್‌ರೂಮ್‌ನ ವಾಸಸ್ಥಾನವನ್ನು ಕೊಂಡು ಜೀವನ ಸಾರ್ಥಕವಾಯ್ತು ಎಂದು ನಿಟ್ಟುಸಿರು ಬಿಡುತ್ತಾರೆ ಬಹುತೇಕ ಜನ!

ಪಾಪಿ ಸಮುದ್ರ ಹೊಕ್ಕರೂ ಮೊಳಕಾಲಷ್ಟು ನೀರಿನಲ್ಲಿರುವಂತೆ ಇಲ್ಲಿಯ ಸಮಸ್ಯೆಗಳೇನೂ ಕಡಿಮೆ ಇಲ್ಲ. ನನ್ನವರು, ನನ್ನವರೆಂದು ಹುಡುಕುತ್ತ ಹುಚ್ಚರಾಗುತ್ತಾರೆ. ಹಳ್ಳಿಯಲ್ಲಿ ಒಂದು ಕಣ್ಣೀರು ಕಂಡರೂ ಗುಬುಗುಬು ಸೇರುವ ಜನ! ಇಲ್ಲಿ ರಸ್ತೆಯಲ್ಲಿ ಹೆಣವಾದರೂ ನಿಂತು ನೋಡುವವರೂ ಸಿಗುವುದಿಲ್ಲ!

ಸಿನೆಮಾ ನಟ ರಾಜಕಪೂರರ ಒಂದು ಚಿತ್ರದಲ್ಲಿಯ ಹಾಡು ನೆನಪಾಗುತ್ತದೆ. ‘ಉಸಗಾಂವಮೇ ದರ್ದಕಿ ಛಾವೊಮೆ ಪ್ಯಾರ ಕೆ ನಾಮ ಪರ ಹೀ ಧಡಕತೆ ಹೈ ದಿಲ್’. ಪ್ರೀತಿ, ಪ್ರೇಮ, ವಿಶ್ವಾಸಗಳು ಪಟ್ಟಣಗಳಲ್ಲಿ ಸಿಗಲಾರವು. ಅದಕ್ಕೆಂದೇ ಅವನ್ನು ಪಡೆಯಲು ಅಪಾರ್ಟಮೆಂಟ್ ಗಳಲ್ಲಿಯ ಜೀವನವು ಅನಿವಾರ್ಯವಾಗುತ್ತದೆ; ಹೀಗಿರುವಾಗ ಸಿಕ್ಕ ಬದುಕಲ್ಲೇ ಒಂದು ಸ್ನೇಹದ ಗೂಡನ್ನು
ಕಟ್ಟಿಕೊಳ್ಳಬೇಕಾಗುತ್ತದೆ.

ಕಣ್ಮರೆಯಾದ ಕೂಡು ಕುಟುಂಬಗಳು
ಈ ಹಿಂದಿನ ದಿನಮಾನಗಳಲ್ಲಿ ಕೂಡು ಕುಟುಂಬಗಳಿದ್ದವು. ಅವು ಛಿದ್ರಗೊಂಡು ನಾಲ್ಕು, ಮೂರು, ಎರಡು ಕೊನೆಗೆ ಒಬ್ಬರೇ
ಸದಸ್ಯರಿರುವ ಕುಟುಂಬಗಳಾಗಿವೆ. ಒಂಟಿ ಮಹಿಳೆ, ವೃದ್ಧ ತಾಯಿ, ತಂದೆ, ಮದುವೆಯಾಗದ ಹುಡುಗ ಅವನ ನೆರವಿಗಾಗಿ
ಬರುವ ತಾಯಿ ಅಥವಾ ತಂದೆ….. ಹೀಗೆ ಪರಿಸ್ಥಿತಿಗೆ ಬಾಗಿ ಇಲ್ಲಿ ಜನರು ಬಂದು ವಾಸಿಸುತ್ತಾರೆ.

ಮೊದಲೇ ಅಪರಿಚಿತ ವಾತಾವರಣ, ಗೊತ್ತಿಲ್ಲದ ನೆರೆಹೊರೆಯಿರುವಾಗ ಯಾವುದೋ ಅಗೋಚರದ ಅವಘಡಗಳು ಆಕ್ರಮಿಸುವು ದುಂಟು. ಸಾವು, ನೋವು, ತೀವ್ರ ಅಸ್ವಸ್ಥತೆ ತಲೆದೋರುವಾಗ ಮಕ್ಕಳು, ಸೋದರ ಸಂಬಂಧಿಗಳಲ್ಲೆಲ್ಲೋ ದೂರದೂರದಲ್ಲಿ ದ್ದಾಗ ಸಮಯಕ್ಕೆ ಒದಗುವವರು ನೆರೆಹೊರೆಯ ಆಪದ್ಬಾಂಧವರೇ! ಆದ್ದರಿಂದ ಅಕ್ಕಪಕ್ಕದ ಕುಟುಂಬದೊಂದಿಗೆ ಸ್ನೇಹ ಸಂಬಂಧಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಅಪಾರ್ಟಮೆಂಟ್ ಬದುಕಿನಲ್ಲಿ ಬರುವ ಸಮಸ್ಯೆಗಳು ಹಲವು. ಅದು ಹಣದ ಸಮಸ್ಯೆಗಳಲ್ಲ. ನೋಡಿಕೊಳ್ಳುವ ಹಾಗೂ ಸುರಕ್ಷತತೆಯನ್ನು ಕಾಯ್ದುಕೊಳ್ಳುವ ಸಮಸ್ಯೆ. ಕುಟುಂಬದಲ್ಲಿ ಹೆಚ್ಚಿನ ಸದಸ್ಯರಿಲ್ಲದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲ
ಉದಾಹರಣೆಗಳನ್ನಿಲ್ಲಿ ಕೊಡಬಹುದು. ಈ ಉದಾಹರಣೆಗಳು ಸ್ವಾನುಭವದವು. ವೃದ್ಧ ತಾಯಿಯನ್ನು 5-6 ವರ್ಷದ ಶಾಲೆಗೆ
ಹೋಗುವ ಮಗಳನ್ನು ಬಿಟ್ಟು ಕೆಲಸಕ್ಕೆ ಹೋಗುವ ತಾಯಿ, ತಂದೆಯ ಕುಟುಂಬ ಪಕ್ಕದಲ್ಲಿದೆ.

ಮಗು ನಾಲ್ಕು ಗಂಟೆಗೆ ಅಪಾರ್ಟಮೆಂಟ್ ಗೇಟಿಗೆ ಬಂದಾಗ, ಬೇಗನೆ ಮೆಟ್ಟಿಲು ಇಳಿದು ಹೋಗುವದು ವೃದ್ಧೆಗೆ ಸಾಧ್ಯವಿಲ್ಲದಾಗ ನಾನೇ ದಿನವೂ ಆ ಮಗುವನ್ನು ಕರೆತರುತ್ತೇನೆ. ಇನ್ನೊಂದು ಮನೆಯಲ್ಲಿ ತುಂಬಿದ ಬಸುರಿ, ಡೆಲಿವರಿ ಡೇಟು ಹತ್ತಿರ ಇದ್ದಾಗ ನಮ್ಮ ಮಹಡಿಯ ಯುವಕ ಬಂದು ‘ಅಮ್ಮ, ಸ್ವಲ್ಪ ತೊಂದರೆ ಕೊಡುತ್ತೇನೆ. ಹಾಗೇ ನಾದರೂ ನನ್ನ ಹೆಂಡತಿಗೆ ಡೆಲಿವರಿ ನೋವು ಕಾಣಿಸಿಕೊಂಡರೆ ಫೋನ ಮಾಡುತ್ತೀರ?’ ಎಂದು ಕೇಳಿದಾಗ ‘ಚಿಂತೆ ಬೇಡ ಮಗಾ, ನಾನೂ ಆಸ್ಪತ್ರೆಗೆ ಜೊತೆಗೆ ಬರುತ್ತೇನೆ’ ಎಂದಾಗ ಆ ತರುಣನ ಕಣ್ಣಲ್ಲಿಯ ಕೃತಜ್ಞತಾಭಾವವನ್ನು ಕಂಡು ಸಂತಸಪಟ್ಟಿದ್ದೇನೆ.

ಈಚೆ ಮನೆಯಲ್ಲಿ ಏಳೆಂಟು ವರ್ಷದ ಹುಡುಗನಿಗೆ ಟೈಯ್‌ಫೈಡ್. ಅವನ ತಂದೆ ತಾಯಿ ನನ್ನ ಹತ್ತಿರ ಬರುವುದಕ್ಕೂ ಮೊದಲೇ ನಾನೇ ಅವರನ್ನು ಕಂಡು ನೋಡಿಕೊಳ್ಳುವುದಾಗಿ ಮಾತು ಕೊಟ್ಟಿದ್ದೇನೆ. ಇಂಥ ಹತ್ತು ಹಲವು ಅಸಹಾಯಕ ಪರಿಸ್ಥಿತಿ ಒದಗಿದಾಗ ನನ್ನ ಮಹಡಿಯಲ್ಲಿ ನಾನು ಆಪದ್ಭಾಂಧವಳಾಗಿದ್ದೇನೆ ಎಂದು ಈಗ ಹೇಳಿಕೊಳ್ಳುವಾಗ ಹೆಮ್ಮೆ ಎನ್ನಿಸುತ್ತದೆ.

ಇಲ್ಲೂ ಬೆಳೆಸಬಹುದು ಸ್ನೇಹ
ಅಪಾರ್ಟಮೆಂಟ್ ವಾಸ ಬಿಟ್ಟು ಸ್ವತಂತ್ರ ಮನೆಯಲ್ಲಿದ್ದು ಬಾಗಿಲ ಮುಚ್ಚಿ ಜಗತ್ತಿನ ಸಂಬಂಧ ಕಳೆದುಕೊಳ್ಳಲು ನಾನು ಎಂದೂ
ಬಯಸಿಲ್ಲ, ಬಯಸಲಾರೆ ಕೂಡಾ. ಹಾಗೆ ನನ್ನ ಧ್ಯೇಯ ಜೀವನಕ್ಕೆ, ನನ್ನ ಜ್ಞಾನ ಸಾಧನೆಗೆ, ಓದು ಬರಹಕ್ಕೆ ಮತ್ತು ಬೇಕಾಗುವ ಏಕಾಂತವಾಸದ ಸಮಯಬಿಟ್ಟು ದಿನದ ಅರ್ಧ ಗಂಟೆಯನ್ನಾದರೂ ನೆರೆಹೊರೆಯವರ ಸ್ನೇಹ ಸಂಬಂಧಕ್ಕೆ ಮೀಸಲಿಡುತ್ತೇನೆ.

ನನ್ನ ಜೀವನ ಶೈಲಿಯಲ್ಲಿ ಪ್ರಸ್ತುತ ಸಮಯದಲ್ಲಿ ನನ್ನ ಮೊಟ್ಟ ಮೊದಲ ಪ್ರಾಮುಖ್ಯತೆ ವೈಯಕ್ತಿಕ ಆರೋಗ್ಯ. ವಾಕಿಂಗ್, ಯೋಗ, ಪ್ರಾಣಾಯಾಮಗಳು ಪ್ರತಿ ದಿನದ ಕಾರ್ಯಕ್ರಮಗಳು. ನನ್ನ ಮಹಡಿಯಲ್ಲಿರುವ ಮೂರು ಪರಿವಾರದವರಿಗೆ ನನ್ನ ಪರಿಚಯದ ಒಂದೊಂದು ಪುಟ್ಟ ಪುಸ್ತಕ ಕೊಟ್ಟಿದ್ದೇನೆ. ಅದರಲ್ಲಿ ನನ್ನ ಲ್ಯಾಂಡ್‌ಲೈನ್, ಮೊಬೈಲ್, ಈಮೇಲುಗಳ ಮಾಹಿತಿ ಗಳಲ್ಲದೆ, ದೂರದಲ್ಲಿರುವ ಮಗಳ, ಅಳಿಯನ, ಮಗನ, ಸೊಸೆಯ ಮೊಬೈಲುಗಳ ನಂಬರಗಳನ್ನು ದಾಖಲಿಸಿ ಕೊಟ್ಟಿದ್ದೇನೆ.

ನನಗಾಗಿ ಅಟೋ ಹೊಡೆಯುವ ವ್ಯಕ್ತಿಯ ಮೊಬೈಲ್ ಫೋನ್ ಮತ್ತು ಒಬ್ಬಿಬ್ಬ ಹಿತಚಿಂತಕರ ಹೆಸರು, ಮೊಬೈಲ್ ಫೋನ್ ನಂಬರಗಳನ್ನೂ ಸಹ ಕೊಟ್ಟಿದ್ಧೇನೆ. ನನ್ನ ಮುಂಬಾಗಿಲಿನ ಕೀಲಿ ಕೈನ ಡೂಪ್ಲಿಕೇಟಗಳನ್ನು ಸಹ ಇವರೆಲ್ಲರ ಹತ್ತಿರ ಕೊಟ್ಟು ಇಟ್ಟಿದ್ದೇನೆ. ಊರು ಕೇರಿಗೆ ಹೋಗುವಾಗ ಎಲ್ಲಿ ಹೋಗುವೆ ಎಂದು ಬರುವೆ ಎಂದೂ ಹೇಳಿಟ್ಟು ಹೋಗುತ್ತೇನೆ. ಇದಿಷ್ಟು ಕೆಲವು ಮುಂಜಾಗ್ರತಾ ಕ್ರಮಗಳ ಬಗೆಗೆ ಹೇಳಿಯಾಯ್ತು.

ನೆರೆಹೊರೆಯಲ್ಲಿಯವರ ಯಾವುದೇ ಬಗೆಯ ಸೇವೆಗೆ ನಾನು ಸಿದ್ಧಳೆಂದು ಮೊದಲೇ ಹೇಳಿಟ್ಟಿದ್ದೇನೆ. ಇವರೆಲ್ಲರ ಜನ್ಮದಿನ,
ವೆಡ್ಡಿಂಗ್ ಅನಿವರ್ಸರಿಗಳ ದಿನಗಳನ್ನು ನೋಟ್ ಮಾಡಿಟ್ಟಿದ್ದುದರಿಂದ ಆ ದಿನ ಅವರಿಗಿಷ್ಟವಾದ ಒಂದು ತಿಂಡಿಯನ್ನೋ,
ಸ್ವಿಟನ್ನೋ ಹೂ ಗುಚ್ಛದೊಂದಿಗೆ ಕೊಡುತ್ತೇನೆ. ಶುಭಾಶಯ ಹೇಳುತ್ತೇನೆ. ಯಾರಾದರೂ ಪಕ್ಕದ ಮನೆಗಳಿಗೆ ದಿಢೀರ್ ಅತಿಥಿ
ಗಳು ಬಂದರೆ ಒಂದೆರಡು ಐಟಮ್ ತಯಾರಿಸಿ ಕೊಡುತ್ತೇನೆ.

ನಾನು ತರಿಸುವ ಕನ್ನಡದ ಎಲ್ಲ ನಿಯತಕಾಲಿಕೆಗಳನ್ನು ಎರಡು ದಿನ ಓದಿ ಅವರಿಗೆ ಸಾಗಿಸಿ ಬಿಡುವೆ. ಮಾರ್ಕೆಟ್ಟಿಗೆ ಅಕಸ್ಮಾತ್
ಹೋದರೆ ಬೇಕೆಂದೇ ಸ್ವಲ್ಪ ತರಕಾರಿ ಜಾಸ್ತಿ ತಂದಿರುತ್ತೇನೆ. ಅದನ್ನು ಹಂಚಿಬಿಡುತ್ತೇನೆ. ಪಕ್ಕದ ಮನೆಯಗಳಲ್ಲಿಯ ಮಕ್ಕಳಿಗೆ
ಅಭ್ಯಾಸದಲ್ಲಿಯ ಸಮಸ್ಯೆಗಳು ನನಗೆ ಗೊತ್ತಿದ್ದರೆ ತಿಳಿಸಲು ಪ್ರಯತ್ನ ಪಡುವೆ. ಅಕಸ್ಮಾತ್ ಊರಲ್ಲಿ ಒಳ್ಳೆಯ ನಾಟಕ,
ಸಂಗೀತದ ಕಾರ್ಯಕ್ರಮಗಳಿದ್ದರೆ ಬರುತ್ತೀರಾ? ಅಂತ ಕೇಳಿ ಅಷ್ಟು ಜನರಿಗೆ ಟಿಕೆಟ್ಟು ಕೊಳ್ಳುತ್ತೇನೆ. ಇಲ್ಲಿಯ ಯಾವುದೇ
ಪರಿವಾರದರು ಊರಿಗೆ ಹೋಗಿ ಬರುವ ದಿನ, ಟೈಂ ತಿಳಿಸಿದ್ದಾಗ, ಉಪ್ಪಿಟ್ಟು ಅಥವಾ ಇಡ್ಲಿ ಚಟ್ನಿಯನ್ನು ಕೊಟ್ಟು ಸಂತಸಪಡುವೆ.

ಇಂಥ ಚಿಕ್ಕ ಚಿಕ್ಕ ಸೇವೆಗಳನ್ನು ಸಂತೋಷದಿಂದ ಮಾಡುವಾಗ ನನಗೆ ಬಹಳ ಖುಷಿ ಇರುತ್ತದೆ. ಈ ಸ್ನೇಹ ಸಂಬಂಧಗಳ ಎಳೆಗಳು ಸೂಕ್ಷ್ಮವೂ ಆಗಿರುತ್ತವೆ. ಅದರ ಬಗೆಗೆ ನನ್ನಲ್ಲಿ ಸಾಕಷ್ಟು ಎಚ್ಚರವನ್ನು ಕಾಪಾಡಿಟ್ಟುಕೊಂಡಿದ್ದೇನೆ. ಮೊಟ್ಟ ಮೊದಲು ಅತಿ ಮಾತು, ಅತಿ ಹರಟೆಗಳನ್ನು ದೂರಕ್ಕಿಟ್ಟು ಪ್ರತಿ ಕುಟುಂಬದ ಜನ ಯಾವಾಗ ಫ್ರೀ ಆಗುತ್ತಾರೆ ಎಂದು ತಿಳಿದೇ ಒಂದರ್ಧ ಗಂಟೆ ಸಮಯವನ್ನು ಒಂದು ಪರಿವಾರದೊಂದಿಗೆ ವಾರದಲ್ಲಿ ಒಮ್ಮೆ ಕಳೆಯ ಬಯಸುತ್ತೇನೆ.

ಅವರವರ ಪರಿವಾರದ ರಹಸ್ಯದ ವಿಷಯಗಳನ್ನು ಕೆದಕಲು ಹೋಗುವುದೇ ಇಲ್ಲ. ಪ್ರತಿಯೊಬ್ಬರಿಗೆ ಒಂದೊಂದು ಬಗೆಯ
ಸ್ವಭಾವ. ಇದನ್ನು ಪೂರ್ವಭಾವಿಯಾಗಿ ತಿಳಿದುಕೊಂಡು ಅವರ ಒಳ್ಳೆಯತನದ ಪ್ರಶಂಸೆಯನ್ನೂ, ಅವರ ಕುಟುಂಬದವರ
ಯಶಸ್ಸನ್ನು ಕುರಿತೇ ಮಾತಾಡುತ್ತೇನೆ. ಎಲ್ಲರೊಂದಿಗೂ ಗೌರವದ ಅಂತರ ಇಟ್ಟುಕೊಂಡೇ ವ್ಯವಹರಿಸುವ ಮುನ್ನೆಚ್ಚರಿಕೆ ಸದಾ
ನನ್ನಲ್ಲಿದೆ. ಸರಳ, ಸಭ್ಯ, ಹಿತಮಿತ ಸಂಬಂಧಗಳು ಅಪಾರ್ಟಮೆಂಟ ಜೀವನದಲ್ಲಿ ಅಗತ್ಯ. ಇಂಥ ಸೂಕ್ಷ್ಮತೆಗಳೊಂದಿಗೆ ವ್ಯವ ಹರಿಸುತ್ತ ಅವರನ್ನೂ ಸಂತಸದಲ್ಲಿಟ್ಟು ನಾನೂ ಸಂತೋಷದಿಂದಿರಲು ಸದಾ ಪ್ರಯತ್ನಿಸುತ್ತಲೇ ಇರುವುದರಿಂದ ಆತಂಕಗಳು ಬಯಲಾಗಿ ನೆಮ್ಮದಿಯು ನನ್ನ ಪಾಲಿಗಿದೆ.