Friday, 13th December 2024

ಸ್ಫೂರ್ತಿ ತುಂಬುವ ತ್ರಿಪದಿಗಳು

ಸರಳ ತ್ರಿಪದಿಗಳ ಮೂಲಕ ನಮ್ಮ ದಿನಚರಿಯ ನಾನಾ ವಿದ್ಯಮಾನಗಳನ್ನು ವಿಶ್ಲೇಷಿಸುವ ಈ ವಚನಗಳು ಓದುಗರಿಗೆ ಸ್ಫೂರ್ತಿ ತುಂಬುವ ಪರಿ ಅನನ್ಯ. ಗಹನ ವಿಷಯವನ್ನು ಸರಳ ಶಬ್ದಗಳಲ್ಲಿ ನಿಕೃಷ್ಟಕ್ಕೆ ಒಡ್ಡಲು ಪ್ರಯತ್ನಿಸುವ ಈ ತ್ರಿಪದಿಗಳನ್ನು ರಚಿಸಿದವರು ರತ್ನಾಮೂರ್ತಿ. ಪ್ರಧಾನವಾಗಿ ಸರಳತೆಯನ್ನೇ ಮೈಗೂಡಿಸಿಕೊಂಡಿರುವ ಈ ವಚನಗಳು ಅಧ್ಯಾತ್ಮದ ಹೊಳಹುಗಳನ್ನು ಬಿಂಬಿಸುವ ಪರಿ ಅನನ್ಯ.

ಶಶಿಧರ ಹಾಲಾಡಿ

ಕನ್ನಡದ ಆಧ್ಯಾತ್ಮಿಕ ಮತ್ತು ಅನುಭಾವ ಸಾಹಿತ್ಯದಲ್ಲಿ ವಚನಗಳಿಗೆ ವಿಶಿಷ್ಟ ಸ್ಥಾನ. ಶರಣರು ರಚಿಸಿದ ಮುಕ್ತ ಛಂದಸ್ಸಿನ ವಚನಗಳು ಒಂದು ಹಂತವಾದರೆ, ಸರ್ವಜ್ಞನಂತಹ ಕವಿಗಳು ಇನ್ನೊಂದೇ ಮಾರ್ಗದಲ್ಲಿ ವಚನಗಳನ್ನು ರಚಿಸಿದರು. ಸರ್ವಜ್ಞನ ವಚನಗಳಲ್ಲಿ ಒಂದು ಮಟ್ಟದ ಛಂದಸ್ಸು, ಆಕರ್ಷಕ ಪ್ರಾಸ ಅಡಕಗೊಂಡಿದ್ದು, ದಿನನಿತ್ಯದ ಹಲವು ವಿದ್ಯಮಾನಗಳನ್ನು ಆ ಮೂರು ಸಾಲಿನ ಕವನಗಳಲ್ಲಿ ಕಟ್ಟಿ ಕೊಡುವ ಕಲೆ ಆ ಆಶುಕವಿಗೆ ಕರಗತವಾಗಿತ್ತು. ಇಂತಹ ವಚನಗಳಲ್ಲಿ ದಿನನಿತ್ಯದ ಅನುಭ ವಗಳ ಹಿನ್ನೆಲೆಯ ಜೀವನದರ್ಶನವಿದ್ದುದು ಇನ್ನೊಂದು ವಿಶೇಷ.

ಒಂದು ಸಾವಿರಕ್ಕೂ ಹೆಚ್ಚಿನ ತ್ರಿಪದಿಗಳನ್ನು ಒಳಗೊಂಡ ‘ಗೌರಮ್ಮನ ವಚನಗಳು’ ಪುಸ್ತಕವನ್ನು ಕಂಡಾಗ ನಮ್ಮ ಕನ್ನಡದ ವಚನ ಪರಂಪರೆ ನೆನಪಾಯಿತು. ರತ್ನಾ ಮೂರ್ತಿ (ಎಂ.ಎಸ್.ನಾಗರತ್ನ) ಅವರು ಕಳೆದ ನಾಲ್ಕು ವರ್ಷಗಳಲ್ಲಿ ರಚಿಸಿದ ಸಾವಿ ರಾರು ವಚನಗಳೇ ಈ ‘ಗೌರಮ್ಮನ ವಚನ’ಗಳು. ಇವು ತ್ರಿಪದಿಗಳು. ಎಲ್ಲಾ ತ್ರಿಪದಿಗಳ ಕೊನೆಯಲ್ಲಿ ಅಂಕಿತ ನಾಮವಾಗಿ ಗೌರಮ್ಮ ಎಂಬ ಹೆಸರು ಬರುವುದು ವಿಶೇಷ. ಈ ಜಗತ್ತನ್ನು ಗೌರಮ್ಮ ಎಂಬ ಮಹಿಳಾ ಅನುಭಾವಿಯ ಕಣ್ಣಿನಲ್ಲಿ ನೋಡುವ ಈ ಪ್ರಯತ್ನ ದಲ್ಲಿ ಜೀವನ ಶೋಧನೆಯನ್ನು ಮಾಡುತ್ತಾ, ಜನರ ದಿನಚರಿಯನ್ನು ನಿಕಷಕ್ಕೆ ಒಡ್ಡುವ ಪ್ರಯತ್ನ ನಡೆದಿದೆ.

ಮಹಿಳೆಯ ಕಣ್ಣಲ್ಲಿ ಜೀವನಾನುಭವ ಅಧ್ಯಾತ್ಮವನ್ನು ಮಹಿಳಾ ದೃಷ್ಟಿಕೋನದಲ್ಲಿ ನೋಡುವ ಅನುಭವವೇ ವಿಶೇಷ. ಅಕ್ಕ ಮಹಾದೇವಿ, ಸಂಚಿ ಹೊನ್ನಮ್ಮ ಮತ್ತಿತರ ಮಹಿಳಾ ಅನುಭಾವಿಗಳು ಆಗಿನ ಸಮಕಾಲೀನ ಪ್ರಪಂಚವನ್ನು ತಮ್ಮದೇ ಅನುಭವದ ಮೂಸೆಯಲ್ಲಿ ವೀಕ್ಷಿಸಿ, ರಚಿಸಿದ ವಚನಗಳು ವಿಶಿಷ್ಟವೆನಿಸುವುದು ಇದೇ ಕಾರಣಕ್ಕಾಗಿ. ಪುರುಷ ಪ್ರಪಂಚದಿಂದ ಹೊರಗೆ ನಿಂತು ಜೀವನವನ್ನು ಗಮನಿಸಿದಾಗ ಕಾಣುವ ವಿಷಯಗಳಿಗೆ ವಿಶೇಷ ಅರ್ಥ ಇರುವುದಂತೂ ಸತ್ಯ. ಆ ನಿಟ್ಟಿನಲ್ಲಿ ನೋಡಿದಾಗ, ರತ್ನಾ ಮೂರ್ತಿಯವರು ‘ಗೌರಮ್ಮ’ ಅಂಕಿತ ನಾಮದಲ್ಲಿ ರಚಿಸಿದ ಇಲ್ಲಿನ ವಚನಗಳು ಸಾಕಷ್ಟು ಕುತೂಹಲ ಕೆರಳಿಸುತ್ತವೆ.

ಜೀವನ ಮೌಲ್ಯಗಳ ಮುಖ್ಯ ಸೂತ್ರವನ್ನು ಅನುಸರಿಸಿದ ರಚನೆಗೊಂಡ ಈ ತ್ರಿಪದಿಗಳು ನಮ್ಮ ಈಗಿನ ಕಾಲಮಾನದ ಎಲ್ಲಾ
ವಿದ್ಯಮಾನಗಳನ್ನು ತನ್ನದೇ ರೀತಿಯಲ್ಲಿ ಪರೀಕ್ಷೆಗೆ ಒಳಪಡಿಸಿ, ಅಲ್ಲೊಂದು ಜೀವನ ಧರ್ಮವನ್ನು ಕಾಣಲು ಪ್ರಯತ್ನಿಸುತ್ತವೆ. ಇಲ್ಲಿ ಅಧ್ಯಾತ್ಮ, ಹಳೆಯ ಮೌಲ್ಯಗಳು, ನೀತಿಯ ಎಳೆಗಳು ಪ್ರಧಾನವಾಗಿ ಬಂದರೂ, ಈ ವಚನಗಳು ನಮ್ಮ ದಿನಚರಿಯ ಎಲ್ಲಾ ಘಟನೆಗಳನ್ನು ಸರಳವಾಗಿ ವಿಶ್ಲೇಷಿಸುವ ಪರಿ ವಿಶಿಷ್ಟವಾಗಿದೆ. ಇಂದಿನ ರಾಜಕೀಯ, ಮೂಢ ನಂಬಿಕೆ, ಶೋಷಣೆ, ವಿವಾಹ ಸಂಬಂಧ, ಮನುಷ್ಯ ಮನುಷ್ಯನ ಸಂಬಂಧಗಳು ಎಲ್ಲವೂ ಇಲ್ಲಿನ ತ್ರಿಪದಿಗಳ ವಿಷಯಗಳಾಗಿ ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲ, ಅಂತಹ ವಿದ್ಯಮಾನವನ್ನು ಹಿಡಿದಿಡುವ ತ್ರಿಪದಿಯೊಂದು, ಕೇವಲ ಮೂರೇ ಸಾಲುಗಳಲ್ಲಿ, ತನ್ನದೇ ರೀತಿಯಲ್ಲಿ ಅದಕ್ಕೊಂದು ಭಾಷ್ಯ ಬರೆಯಲು ಪ್ರಯತ್ನಿಸುತ್ತದೆ. ಈ ಪ್ರಯತ್ನವೇ ಗೌರಮ್ಮನ ವಚನಗಳ ವಿಶೇಷತೆ ಎನ್ನಬಹುದು.

ಬರದ ಬೆದರಿಕೆ ಇಲ್ಲ, ನೆರೆಯ ಬೆದರಿಕೆ ಇಲ್ಲ ನೀರ ಕ್ಷಾಮಕೂ ಕೂಡ ಬೆದರರಿವರು ಹೇಗೆಂತೋ ಸಿರಿ ಮಹಲಲಿರುವವರು ಗೌರಮ್ಮ. ಸರಳ ಸತ್ಯವಿದು. ಮಹಲಿನಲಿರುವ ಸಿರಿವಂತರಿಗೆ ಬರದ ಬೆದರಿಕೆಯೂ ಇಲ್ಲ, ನೆರೆಯ ಹೆದರಿಕೆಯೂ ಇಲ್ಲ. ಅಂತಹ ಸಂಕಷ್ಟಗಳನ್ನು ಎದುರಿಸಬೇಕಾಗಿರುವವವರು ಬಡವರು, ಶೋಷಿತರು! ಮೂರು ಸಾಲುಗಳಲ್ಲಿ ಬಡಜನರ ದುರಿತವನ್ನು ಈ ವಚನ ಹೊರಡಿಸುವ ಪರಿ ಅರ್ಥಪೂರ್ಣ. ಸಂಬಳಕೆ ದುಡಿಯುತ್ತ ಗಿಂಬಳಕೆ ಬಾಯ್ಬಿಡುತ ಕಂಬಗಳ ಸುತ್ತಿಸುತ ಉಸಿರೆಳೆಸುವ ಹೀನ ಚಾಳಿಗೆ ಇಂಬುಳವೂ ಹೇಸದೇ ಗೌರಮ್ಮ.

ಪ್ರಚಲಿತ ಭ್ರಷ್ಟಾಚಾರದ ಚಿತ್ರಣವನ್ನು ಸರಳ ಶಬ್ದಗಳಲ್ಲಿ ವಿವರಿಸುವ ಈ ತ್ರಿಪದಿಯು, ಮೂರನೆಯ ಸಾಲಿನಲ್ಲಿ ‘ಇಂಬುಳ’ದ ಪರಿಕಲ್ಪನೆಯನ್ನು ಬಳಸಿಕೊಳ್ಳುವ ಮೂಲಕ, ಆ ಅಸಹ್ಯ ಚಕ್ರವ್ಯೂಹವನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ. ಇಂಬುಳ ಎಂದಾಗ ಸಿಂಬುಳದ ನೆನಪೂ ಆಗುವುದರ ಮೂಲಕ, ವ್ಯಂಗ್ಯದ ಮೊನಚು ಇನ್ನಷ್ಟು ಹರಿತವಾಗಿದೆ. ಇಂತಹ ಹೀನ ಕೆಲಸ
ಮಾಡದಂತೆ ಜನರನ್ನು ಎಚ್ಚರಿಸುವ ಕೆಲಸವೂ ಇಲ್ಲಿ ನಡೆದಿದೆ.

ಧರೆಯ ಬೆರಗೇನಿಹುದು ಕಾನು ಮೃಗ ಜಲದಿಂದ ಮರಳುಗಾಡಾಗದೇ ನರನ ಆರ್ಭಟಕೆ ಮತಿಯರದೆ ತಿರೆಯಳಿಸಿ ಅಳಿಯುವನೇ ಗೌರಮ್ಮ. ಕೆಲವೇ ಕೆಲವು ಶಬ್ದ ಬಳಸಿ, ಹಿರಿದಾದ ವಿದ್ಯಮಾನವೊಂದನ್ನು ಹಿಡಿದಿಡಲು ಪ್ರಯತ್ನವನ್ನು ಈ ತ್ರಿಪದಿ ಮಾಡಿದೆ. ರುಚಿಕರ ಜಲ, ಸುಂದರ ಕಾಡು, ವಿಭಿನ್ನ ಜೀವರಾಶಿಯಿಂದ ತುಂಬಿರುವ ನಮ್ಮ ಭೂಮಿಯನ್ನು, ಈಗಿನ ಮನುಷ್ಯನು ತನ್ನ
ವಿವೇಚನಾ ರಹಿತ ಚಟುವಟಿಕೆಗಳಿಂದ ಮರಳುಗಾಡಾಗಿಸುತ್ತಾ ಸಾಗುತ್ತಿರುವ ಹಾದಿಯಲ್ಲಿ, ತಾನೂ ಅಳಿದು, ಭೂಮಿಯನ್ನೂ ಹಾಳುಗೆಡಹುತ್ತಿದ್ದಾನೆಯೆ ಎಂಬ ಉನ್ನತ ಕಾಳಜಿ ಇಲ್ಲಿದೆ.

ಕಾವ್ಯವೊಂದು ಕನಿಷ್ಠ ಶಬ್ದ ಬಳಸಿ, ಗರಿಷ್ಠ ಅರ್ಥ ನೀಡಬೇಕನ್ನುವ ಆಶಯ ಇಲ್ಲಿ ಸಾಕಾರಗೊಂಡಿದೆ. ಪ್ರಕೃತಿಯಲ್ಲಿ, ಪರಿಸರ ರಕ್ಷಣೆರಯಲ್ಲಿ ಅಧ್ಯಾತ್ಮವನ್ನು ಅರಸುವುದೆಂದರೆ ಇದೇ ಅಲ್ಲವೆ!

ಇನ್ನೊಂದು ತ್ರಿಪದಿಯಲ್ಲಿ ಖಗದ ಕಲರವಕಿಂತ ಸುಪ್ರಭಾತವು ಬೇಕೇ ನಗೆ ಹೂವ ಕಂಡು ಮೊಗವರಳದೇ ಇವುಗಳ ಸೊಗವಳಿ ಯದುಳಿದಿರಲಿ – ಗೌರಮ್ಮ ಎನ್ನುವ ಮೂಲಕ, ಸಕಾರಾತ್ಮಕ ಭಾವನೆಯನ್ನು ವ್ಯಕ್ತಪಡಿಸುವ ಪರಿ ಮೆಚ್ಚುಗೆ ಗಳಿಸುತ್ತದೆ. ಇಂತಹ ಸಕಾರಾತ್ಮಕ ಧೋರಣೆಯೇ ನಮ್ಮ ಇಂದಿನ ಬದುಕನ್ನು ಸಹನೀಯವನ್ನಾಗಿಸುವುದಲ್ಲವೆ! ಅದೇ ನಮಗೆ ಇನ್ನಷ್ಟು ಕೆಲಸ ಮಾಡಲು ಸ್ಫೂರ್ತಿ ನೀಡುವ ಚೇತನ. ರತ್ನಾಮೂರ್ತಿಯವರ ಈ ತ್ರಿಪದಿಗಳಲ್ಲಿ ಪ್ರಾಸವಿದೆ, ಲಯವಿದೆ, ಮಿಗಿಲಾಗಿ ಈ ಜೀವನ ವನ್ನು ನೋಡುವ ದೃಷ್ಟಿಕೋನದಲ್ಲಿ ಭರವಸೆಯ ಬೆಳಕಿದೆ. ಸಾಂತ್ವನ ಬಯಸುವವರಿಗೆ ಮಾರ್ಗ ದರ್ಶನವಿದೆ, ಜೀವನದಲ್ಲಿ ಮುಂದೆ ಬರಬೇಕೆನ್ನುವವರಿಗೆ ಸ್ಫೂರ್ತಿಯ ಸೆಲೆಯಿದೆ.

ಇಲ್ಲಿನ ಸಾವಿರಾರು ವಚನಗಳನ್ನು ಒಮ್ಮೆಗೇ ಓದಬೇಕೆಂದಿಲ್ಲ. ಈ ಪುಸ್ತಕವನ್ನು ಹತ್ತಿರದಲ್ಲಿಟ್ಟುಕೊಂಡು, ನೆನಪಾದಾಗಲೆಲ್ಲ ಅಥವಾ ಮನಕ್ಕೆ ಹೊಸತನ ಬೇಕೆನಿಸಿದಾಗೆಲ್ಲಾ ಕೆಲವು ವಚನಗಳನ್ನು ಓದಬಹುದು. ಸ್ಫೂರ್ತಿಯನ್ನು ತುಂಬುತ್ತಾ, ಅಧ್ಯಾತ್ಮದ ಹೊಳಹನ್ನು ಸೂಚಿಸುತ್ತಾ ಸಾಗುವ ಈ ವಚನ ಮಾಲೆಯು, ಕನ್ನಡ ಅಧ್ಯಾತ್ಮ ಸಾಹಿತ್ಯಕ್ಕೆ ಅಪರೂಪದ ಕೊಡುಗೆಯಾಗಿ ರೂಪು ಗೊಂಡಿದೆ.