ಗೊರೂರು ಶಿವೇಶ್
ಮತ್ತೆ ಬಂದಿದೆ ಯುಗಾದಿ. ಆ ಹಬ್ಬದ ಹೆಸರನ್ನು ಕೇಳಿದಾಕ್ಷಣ ಮನದಲ್ಲೇನೋ ಉಲ್ಲಾಸ, ಸಂತಸ. ಹೊಸ ವರ್ಷವನ್ನು ಸ್ವಾಗತಿಸುವ ಸಡಗರ. ಹೊಸದಾಗಿ ಚಿಗುರಿದ ಮಾವಿನ ಎಲೆಗಳಿಂದ ಮನೆಯನ್ನೆಲ್ಲಾ ಸಿಂಗರಿಸಿದಾಗ, ಮನದಲ್ಲೂ ಮೂಡುತ್ತದೆ ಹೊಸತನದ ಚೇತನ. ಎಣ್ಣೆ ಹಚ್ಚಿ ಸ್ನಾನ, ಬೇಸಾಯದ ಕೆಲಸಕ್ಕೆ ಓಂಕಾರ, ಜೋಕಾಲಿಯಾಟ, ಒಬ್ಬಟ್ಟಿನ ಊಟ ಎಲ್ಲವೂ ಸೇರಿ ಯುಗಾದಿಯನ್ನು ನಮ್ಮ ನಾಡಿನ ಮಹೋನ್ನತ ಹಬ್ಬವನ್ನಾಗಿ ಮಾಡಿದೆ. ಕರೋನಾ ಸೋಂಕಿನ ತೊಡಕಿನ ನಡುವೆಯೂ, ಪ್ಲವ ನಾಮ ಸಂವತ್ಸರದ ಹೊಸವರ್ಷಾಚರಣೆಯು ಎಲ್ಲೆಡೆ ಮೂಡಿಸುತ್ತಿದೆ ಸಂತೋಷದ ವಾತಾವರಣ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.
ಹೊಸ ವರುಷ ಕಾಲಿರಿಸುತ್ತಿದೆ. ಗಿಡ ಮರಗಳು ಹೊಸ ಚಿಗುರು, ಹೊಸ ಹೂವಿ ನಿಂದ ಸಿಂಗರಿಸಿಕೊಂಡಿವೆ. ಹಕ್ಕಿಗಳು ಗೂಡುಕಟ್ಟಿ ಸಂತಾನಾಭಿವೃದ್ಧಿ ಆರಂಭಿಸಿವೆ. ಭೂತಾಯಿಯ ಮಡಿಲಲ್ಲಿ ಹೊಸತನದ ಚೇತನ ತುಂಬಿದೆ. ಬಡವ- ಬಲ್ಲಿದರೆನ್ನದೆ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬ ಈ ಯುಗಾದಿ. ಕೃತ ಯುಗದ ಚೈತ್ರ ಶುದ್ಧ ಪಾಡ್ಯಮಿಯೇ ಸೃಷ್ಟಿಯ ಪ್ರಾರಂಭದ ದಿನ ಎಂದು ಪುರಾಣಗಳು ಹೇಳುತ್ತವೆ.
ಚತುರ್ವೇದಗಳನ್ನು ಕಳ್ಳತನಮಾಡಿದ ಸೋಮಕಾಸುರನನ್ನು ಸಂಹರಿಸಲು ಶ್ರೀ ಮಹಾವಿಷ್ಣು ದಶಾವತಾರಗಳಲ್ಲಿ ಮೊದಲನೆ ಯಾದದ ಮತ್ಸ್ಯಾವ ತಾರ ಧರಿಸಿದ ದಿನ ಎಂದೂ ಹೇಳಲಾಗುತ್ತದೆ. ಶ್ರೀ ರಾಮಪಟ್ಟಾಭಿಷೇಕ ನಡೆದ ದಿನವೂ ಹೌದು. ಋತುಗಳ ರಾಜ ವಸಂತ ಕಾಲಿರಿಸುವ ದಿನವೂ ಹೌದು. ಹತ್ತು ಹಲವು ವೈಶಿಷ್ಟ್ಯಗಳಿಂದಾಗಿ ಈ ಹಬ್ಬ ಸಂಭ್ರಮದ ದ್ಯೋತಕ.
ಯುಗಾದಿ ಎಂದೊಡನೆ ಮನ ಬಾಲ್ಯಕ್ಕೆ ಹೊರಳುತ್ತದೆ. ಅಪ್ಪ ಅಮ್ಮನ ಬಲವಂತಕ್ಕೆ ಬೆಳಿಗ್ಗೆೆ ಬೇಗನೆ ಎದ್ದು ಹೊಳೆ, ಕಾಲುವೆಯ
ದಂಡೆಯ ಪಕ್ಕದಲ್ಲಿದ್ದ ಮಾವು -ಬೇವಿನ ಸೊಪ್ಪಿಗಾಗಿ ಅಲೆದಾಟ ನಡೆಸುತ್ತಿದ್ದದ್ದು ನೆನಪಿಗೆ ಬರುತ್ತದೆ.
ಹಬ್ಬದ ದಿನ ಹನ್ನೆರಡು ಗಂಟೆಯಾದರೂ ಪೂಜೆಯಾಗದೆ, ಹಸಿವಿನಿಂದ ಹೊಟ್ಟೆ ತಳಮಳಿಸಿದಾಗ ಈ ಹಬ್ಬಗಳು ಯಾಕಾದರೂ ಬರುತ್ತವೆಯೋ? ಎಂದೆನಿಸಿದರೂ, ಹಬ್ಬದ ಊಟದ ಜತೆಗೆ, ಕಾಯಿ ಒಬ್ಬಟ್ಟು ಮತ್ತು ತುಪ್ಪ ಬೆರೆಸಿ ತಿನ್ನುವಾಗ ಅ ಅನಿಸಿಕೆಗಳೆಲ್ಲ ಮಾಯ. ಯುಗಾದಿ ಎಂದರೆ ಒಬ್ಬಟ್ಟು ಎಂಬ ನೆನಪಾಗುತ್ತಾ, ಮನಸ್ಸಿನಲ್ಲೂ ಸಿಹಿ ಸಿಹಿ ಅನುಭವ. ವರ್ಷವಿಡೀ ಒಂದಲ್ಲಾ ಒಂದು ಕೃಷಿಚಟುವಟಿಕೆಗಳಲ್ಲಿ ತೊಡಗಿರುವ ರೈತಾಪಿ ಜನರಿಗೆ, ಸುಗ್ಗಿಯ ನಂತರದ ದಿನಗಳು ಕಳೆದು ನೇಗಿಲಿಗೆ ಪೂಜೆ ಮಾಡಿ ಹೊಲ ಉಳಲು ಹೊರಡುವ ದಿನ.
ವರ್ಷದ ಒಡಕು
ಯುಗಾದಿಯ ಮಾರನೇ ದಿನ ವರ್ಷದ ಒಡಕು. ಈ ದಿನವಂತೂ ಯಾವುದೇ ಶುಭ ಕಾರ್ಯಗಳಿಲ್ಲ. ಹೆಚ್ಚುಗಟ್ಟೆ ಕಡ್ಡಾಯ. ಯುಗಾದಿಯ ದಿನ ಸಿಹಿಯನ್ನು ಊಟ ಮಾಡಿದರೆ, ಈ ದಿನ ಕಾರವನ್ನು ತುಂಬಾ ಖಾರವಾಗಿ ತಿನ್ನುವ ಪದ್ಧತಿ. ಕಳೆದ ವರ್ಷ ಕರೋನದ ಲಾಕ್ ಡೌನ್ ಬಿಸಿಯ ನಡುವೆಯೂ ಕಿಲೋಮೀಟರ್ ಉದ್ದದ ಕ್ಯೂ ನಲ್ಲಿ ನಿಂತು ಮಾಂಸ ಖರೀದಿ ಮಾಡಿದ್ದನ್ನು ನೋಡಿದ್ದೇವೆ.
ಈ ದಿನದ ಇನ್ನೊಂದು ವಿಶೇಷ ಎಂದರೆ ಮನರಂಜನೆಗಾಗಿ ನಾನಾ ರೀತಿಯ ಆಟಗಳು. ಜಗುಲಿಗಳ ಮೇಲೆ ಚೌಕಾಭಾರ ಆಡುವ ಸಂಭ್ರಮವೇನು! ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ವಿವಿಧ ರೀತಿಯ ಆಟಗಳು, ಜೂಜಾಟಗಳು! ಕೆಲವು ಊರುಗಳಲ್ಲಂತೂ ಎಲ್ಲರೂ ಸೇರಿ, ಶಾಮಿಯಾನಾ ಹಾಕಿ ಇಸ್ಪೀಟು ಆಡುವ ಸಂಭ್ರಮವನ್ನು ನೋಡಿಯೇ ಅನುಭವಿಸಬೇಕು.
ಒಟ್ಟಿನಲ್ಲಿ ಎಲ್ಲೆಡೆ ಸಂಭ್ರಮ, ಸಡಗರ, ಹೊಸ ವರ್ಷದ ಉಲ್ಲಾಸ, ಉತ್ಸಾಹ, ಆನಂದ. ಈ ಹಬ್ಬಗಳನ್ನು ಜನಪದರು ಕಾವ್ಯದಲ್ಲಿ ಹಿಡಿದಿಟ್ಟಿದ್ದಾರೆ. ಹಳ್ಳಿಯ ಕವಿ, ಹಬ್ಬದ ಸಂಭ್ರಮ-ಸಡಗರಗಳನ್ನು ಶಬ್ದಗಳಲ್ಲಿ ಬಿಡಿಸಿದರೆ, ಜನಪದರು ಅದನ್ನು ಆಚರಣೆ ಗಳಲ್ಲಿ ಅಳವಡಿಸಿದ್ದಾರೆ. ಕವಿ ಉಪಮೆ, ರೂಪಕ ಪ್ರತಿಮೆಗಳ ಪರಿಕರಗಳನ್ನು ಬಳಸಿ ಕಾವ್ಯ ಹೆಣೆಯುತ್ತಾನೆ. ಜನಪದರು ಹಬ್ಬಗಳ ಆಚರಣೆಯಲ್ಲಿಯೇ ಅವುಗಳನ್ನು ಬಳಸಿದ್ದಾರೆ.
ಯುಗಾದಿಯು ಬೇವು-ಬೆಲ್ಲ ನೋವು-ನಲಿವುಗಳ ದ್ಯೋತಕವಾದರೆ, ಸಂಕ್ರಾಂತಿಯ ಎಳ್ಳು-ಬೆಲ್ಲ, ಸಮೃದ್ಧಿ ಸಂತಸದ ಸಂಕೇತ.
ನವೋದಯದ ಕವಿಗಳಂತೂ, ಯುಗಾದಿಯನ್ನು ಹಾಡಿ ಹೊಗಳಿ ಹಿಗ್ಗಿ, ಸಂಭ್ರಮಿಸಿದ್ದಾರೆ. ಯುಗಾದಿಯ ಸಂದರ್ಭದಲ್ಲಿ ಯಾವುದೇ ರೇಡಿಯೋ, ಛಾನಲ್ ಹಾಕಿದರೂ ದ.ರಾ. ಬೇಂದ್ರೆಯವರ ’ಯುಗಯುಗಾದಿ ಕಳೆದರೂ’ ಕವಿತೆ ಕಡ್ಡಾಯ. ಅದೊಂದು ಹಾಡಿನ ಮೂಲಕ ಬೇಂದ್ರೆ ಸಮಸ್ತ ಕನ್ನಡಿಗರ ಮನದಲ್ಲಿ ಯುಗಾದಿಯ ಸಂಭ್ರಮವನ್ನು ತುಂಬಿದ್ದಂತೂ ನಿಜ. ಆ ಮಹಾನ್ ಕವಿಯ ಹೆಸರನ್ನು ಕೇಳಿರದ ಕೆಲವು ಅಮಾಯಕ ಜನರು ಸಹ ಆ ಹಾಡನ್ನಂತೂ ಕೇಳಿರುತ್ತಾರೆ!
ಅದರಲ್ಲಿ ನನಗೆ ಇಷ್ಟವಾದ ಸಾಲುಗಳು: ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ, ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೆ ಏತಕೆ? ಸಸ್ಯ ಸಂಕುಲವು ಪ್ರತಿ ವರ್ಷ ಬಾಲ್ಯ, ಹರೆಯ, ಮುಪ್ಪನ್ನು ಅನುಭವಿಸಿದರೆ, ಪ್ರಾಣಿಸಂಕುಲಕ್ಕೆ ಹೊಸ ನೆಲೆಯನ್ನು ಅರಸುವ ಸಂಭ್ರಮ. ಆದರೆ ಮಾನವನಿಗೆ ಮಾತ್ರಇಂದು ಒಂದೆಡೆ ನೆಲೆನಿಂತ ಬದುಕು. ಅವನು ಬಾಲ್ಯಕ್ಕೆ, ಯೌವನಕ್ಕೆ ಮರಳಲಾರ. ಆದರೆ ಮಗುವಿನ ಮುಗ್ಧತೆಯನ್ನು ಜೀವನದ ಚೈತನ್ಯ ಭಾವವನ್ನು ರೂಢಿಸಿಕೊಂಡು ಜೀವನದ ಸಿಹಿ ಕಹಿಗಳನ್ನು ಸಮನಾಗಿ ಸ್ವೀಕರಿಸುವ ಭಾವ ನಮ್ಮಲ್ಲಿದ್ದರೆ,
ನಿದ್ದೆಗೊಮ್ಮೆೆ ನಿತ್ಯ ಮರಣ ಎದ್ದ ಕ್ಷಣ ನವೀನ ಜನನ ಎಂದು ಭಾವಿಸಿದರೆ ಈ ಜೀವನವೂ ಹರ್ಷದಾಯಕವೇ.
ಯುಗಾದಿಯ ಅರ್ಥವೂ ಅದೇ ಅಲ್ಲವೇ? ಹೊಸದು… ಹೊಸದು… ಹೊಸದು… ಬಡವ ಬಲ್ಲಿದರಾಗಿ ಸರ್ವರು ಸಮಾನ ಸಂಭ್ರಮದಿಂದ ಆಚರಿಸುವ, ಈ ಸಂದರ್ಭದಲ್ಲಿ ನಡೆಯುವ ಜಾತ್ರೆ, ಉತ್ಸವಗಳಲ್ಲಿ ಸಡಗರದಿಂದ ಪಾಲ್ಗೊಳ್ಳುವ, ಚೇತನ ಮೂಡಿಸುವಲ್ಲಿಯೇ ಯುಗಾದಿಯ ಹೆಗ್ಗಳಿಕೆ ಇದೆ ಅಲ್ಲವೇ?