Friday, 13th December 2024

ಯುನೆಸ್ಕೋ ಚಿತ್ರೋತ್ಸವದಲ್ಲಿ ನಮ್ಮ ಮಗು

ಕನ್ನಡ ಚಲನಚಿತ್ರಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಈಗ ಕೆ.ಗಣೇಶನ್ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ‘ನಮ್ಮ ಮಗು’ ಚಿತ್ರ ಯುನೆಸ್ಕೋ ಅಂಗ ಸಂಸ್ಥೆಯಾದ ಇಂಟರ್‌ನ್ಯಾಷನಲ್ ಆರ್ಗನೈ ಸೇಷನ್ ಫಾರ್ ಮೈಗ್ರೇಷನ್ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿದೆ.

ಅಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಚಿಕ್ಕ ಮಕ್ಕಳ ಅಪಹರಣ ಜಾಲ, ಮಕ್ಕಳ ಮೇಲಿನ ದೌರ್ಜನ್ಯ ದಂತಹ ಸಮಾಜದ ಗಂಭೀರ ಸಮಸ್ಯೆಗಳನ್ನೇ ಆಧಾರವಾಗಿಟ್ಟುಕೊಂಡು ನಿರ್ದೇಶಕ ಕೆ.ಗಣೇಶನ್ ಈ ಚಿತ್ರವನ್ನು ತೆರೆಗೆ ತಂದಿ ದ್ದಾರೆ. ಈಗಾಗಲೇ ತಮಿಳು, ಹಿಂದಿ, ಕನ್ನಡ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಗಣೇಶನ್, ‘ನಮ್ಮ ಮಗು’ ಸಿನಿಮಾದ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಹೊಸಬರ ಹೊಸ ಪ್ರಯತ್ನವಾಗಿ ಮೂಡಿಬಂದಿರುವ ಈ ಚಿತ್ರ, ವಿವಿಧ ದೇಶಗಳ 13 ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ. ನ್ಯಾಷನಲ್ ಸ್ಲೇವರಿ ಅಂಡ್ ಹ್ಯೂಮನ್ ಟ್ರಾಫಿಕಿಂಗ್ ಪ್ರಿವೆನ್ಷನ್ ತಿಂಗಳು ಎಂಬ ಕಾರ್ಯಕ್ರಮ ಇದೇ ತಿಂಗಳಲ್ಲಿ ನಡೆಯುತ್ತಿದ್ದು, ಭಾರತದಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ಭಾಗವಾಗಿ ‘ನಮ್ಮ ಮಗು’ ಚಿತ್ರವನ್ನು ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳ ಲಾಗಿದೆ.

‘ನಮ್ಮ ಮಗು’ ಚಿತ್ರ ದಾಖಲೆಗೆ ಕಾರಣವಾಗಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಬೇರೆ ಬೇರೆ ದೇಶಗಳಲ್ಲಿ ನಮ್ಮ ಚಿತ್ರವು
ಪ್ರದರ್ಶನಗೊಂಡಿದೆ. ಆದರೆ ನಮ್ಮ ನೆಲದಲ್ಲೇ ಇನ್ನೂ ಚಿತ್ರವನ್ನು ಪ್ರದರ್ಶನ ಮಾಡಲು ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೇ ‘ನಮ್ಮ ಮಗು’ ಚಿತ್ರದ ಟ್ರೇಲರನ್ನು ರಿಲೀಸ್ ಮಾಡಲಾಗಿದೆ. ಬಾಲ ನಟಿ ಬೇಬಿಶ್ರೀ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಶ್ರಮಪಟ್ಟು ಚಿತ್ರ ನಿರ್ಮಾಣ ಮಾಡಿದ್ದೇವೆ. ಚಿತ್ರವನ್ನು ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಸಿನಿಮಾ
ತುಂಬಾ ನೈಜವಾಗಿ ಮೂಡಿಬಂದಿದೆ ಎಂದು ಹೇಳುತ್ತಾರೆ ನಿರ್ದೇಶಕ ಗಣೇಶನ್.