Saturday, 5th October 2024

ಡಿಸೆಂಬರ್‌ಗೆ ವಿಕ್ರಾಂತ್ ರೋಣ

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಯಾವಾಗ ತೆರೆಗೆ ಬರಲಿದೆ ಎಂದು ಸಿನಿ ಪ್ರಿಯರು ಕಾಯುತ್ತಿದ್ದಾರೆ. ಚಿತ್ರೀಕರಣ ಪೂರ್ಣ ಗೊಳಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದೆ. ಆದರೆ ಚಿತ್ರ ರಿಲೀಸ್ ಯಾವಾಗ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ಹಾಗಾಗಿ ಚಿತ್ರತಂಡದಿಂದ ಹೊಸ ಅಪ್‌ಡೇಟ್ ಏನಾದರು ಸಿಗಬಹುದೇ ಎಂದು ಪ್ರೇಕ್ಷಕರು ಕಾದುಕುಳಿತ್ತಿದ್ದಾರೆ. ಈ ನಡುವೆಯೇ ಚಿತ್ರದ ರಿಲೀಸ್ ಕುರಿತು ನಿರ್ಮಾಪಕ ಜಾಕ್ ಮಂಜುನಾಥ್ ಸುಳಿವು ನೀಡಿದ್ದಾರೆ.

ಸದ್ಯ ಕೋವಿಡ್ ಮೂರನೆಯ ಅಲೆಯ ಆತಂಕವಿದ್ದು, ಚಿತ್ರಮಂದಿರದಲ್ಲಿ ಈಗಿರುವ ಮಾರ್ಗಸೂಚಿಗಳನ್ನೇ ಮುಂದುವರಿಸಲಾಗಿದೆ. ಹೀಗಿರುವಾಗ ಚಿತ್ರದ ಬಿಡುಗಡೆ ಕಷ್ಟಸಾಧ್ಯವಾಗಿದೆ. ಡಿಸೆಂಬರ್ ವೇಳೆಗೆ ಎಲ್ಲವೂ ಸರಿ ಹೋಗುವ ನಿರೀಕ್ಷೆಯಿದೆ. ಅಂತೆಯೇ ಪರಿಸ್ಥಿತಿ ಸುಧಾರಿಸಿದರೆ ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿ ಮಂಜು ಹೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್‌ನಲ್ಲಿ ವಿಕ್ರಾಂತ್ ರೋಣನ ದರ್ಶನ ಆಗಲಿದೆ. ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಸೇರಿದಂತೆ ಸುಮಾರು ಹದಿನಾರು ಭಾಷೆಗಳಲ್ಲಿ ತೆರೆಗೆ ಬರಲಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಿಂದಿಗೆ ಸುದೀಪ್ ಅವರೇ ಡಬ್ ಮಾಡಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದಲ್ಲಿ ವಿಕ್ರಾಂತ್ ರೋಣ ಮೂಡಿಬಂದಿದೆ. ಪೋಸ್ಟರ್ ಮೂಲಕವೇ ಗಮನಸೆಳೆದಿದ್ದ ವಿಕ್ರಾಂತ್ ರೋಣ, ಟೀಸರ್ ಮೂಲಕ ಸಖತ್ ಸದ್ಧು ಮಾಡಿದೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ವಿಶೇಷ ಪಾತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಸೇರಿದಂತೆ ಮತ್ತಿತರರು ಚಿತ್ರದಲ್ಲಿ ನಟಿಸಿ ದ್ದಾರೆ. ಅಜನೀಶ್ ಲೋಕನಾಥ ಅವರ ಸಂಗೀತ ಈ ಚಿತ್ರಕ್ಕಿದೆ.