Friday, 13th December 2024

ರೊಟ್ಟಿ ಊಟ ನೀಡುವ ಬಾದಾಮಿಯ ತಾಯಂದಿರು !

ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ಉತ್ತರ ಕರ್ನಾಟಕದ ರೊಟ್ಟಿ ಊಟದ ರುಚಿಯನ್ನು ಸವಿಯಲು ಉತ್ತಮ ಸ್ಥಳವೆಂದರೆ ಬದಾಮಿಯ ಬನಶಂಕರಿ ದೇವಾಲಯದ ಆವರಣ. ಗ್ರಾಮೀಣ ಮಹಿಳೆಯರು ಕೈಯಾರೆ ತಯಾರಿಸಿ ನೀಡುವ ಈ ಊಟ ರುಚಿಕರ. ಲಾಕ್‌ಡೌನ್ ಕಾರಣದಿಂದಾಗಿ ಕೆಲಕಾಲ ಸ್ಥಗಿತಗೊಂಡಿದ್ದ ರೊಟ್ಟಿ, ಪಲ್ಲೇ, ಚಟ್ನಿ, ಮೊಸರು ಊಟ ಮತ್ತೆ ಆರಂಭವಾಗಿದೆ.

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಜಾನಪದ ಮಾತೊಂದಿದೆ. ಸಮಾಧಾನ ಚಿತ್ತದಿಂದ, ಸಂತೋಷದಿಂದ ನಿಧಾನವಾಗಿ ಊಟವನ್ನು ಸವಿಯುವುದು ಒಂದು ಕಲೆ. ಜಪಾನ್ ದೇಶದ ತಾಯಿಂದಿರು ಮಕ್ಕಳಿಗೆ ಮುಖ್ಯವಾಗಿ ಊಟ ಸವಿ ಯುವ, ಪೇಯ ಗಳನ್ನು ಆಸ್ವಾದಿಸುವ ಕಲೆಯನ್ನು ಹೇಳಿಕೊಡುತ್ತಾರೆ. ಇದ ರಿಂದ ಅವರ ಇಡೀ ಬದುಕು ಆರೋಗ್ಯಪೂರ್ಣವಾಗಿರುತ್ತದೆ.

ಊಟವನ್ನು ಪ್ರೀತಿಸುವ ಮನೋಭಾವ ಬಹಳ ಮುಖ್ಯವಾದದ್ದು. ಬಾದಾಮಿ ಪಟ್ಟಣದಿಂದ ಸುಮಾರು ನಾಲ್ಕು ಕೀಮಿ ಅಂತರ ದಲ್ಲಿ ಬನಶಂಕರಿ ಪ್ರಸಿದ್ಧ ದೇವಸ್ಥಾನವಿದೆ. ಬನಶಂಕರಿ ಚಾಲುಕ್ಯ ಸಾಮ್ರಾಜ್ಯದ ನಾಡದೇವಿ. ಚಾಲುಕ್ಯ ಅರಸರು ನಿತ್ಯ ಈ ದೇವಿಯ ದರ್ಶನ ಪಡೆದು ಆಡಳಿತ ನಡೆಸುತ್ತಿದ್ದರು. ಚಾಲುಕ್ಯ ಅರಸರ ಕುಟುಂಬ ಅನೇಕ ಹೆಣ್ಣುಮಕ್ಕಳಿಗೆ ಬನಶಂಕರಿ, ಬನಮ್ಮ, ಶಂಕ್ರೆಮ್ಮ, ಹೆಸರುಗಳನ್ನು ಇಡುತ್ತಿದ್ದರು. ಕರ್ನಾಟಕ, ಮಹಾರಾಷ್ಟ್ರ, ಗೋವಾ ಆಂಧ್ರಪ್ರದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಈ ದೇವಿಯ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ.

ಬಾಗಲಕೋಟ, ಬೆಳಗಾವಿ, ಧಾರವಾಡ ಜಿಲ್ಲೆಗಳ ಗ್ರಾಮೀಣ ಭಾಗದ ರೈತರು ಚಕ್ಕಡಿಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಆಗಮಿಸುತ್ತಾರೆ. ಮಂದಿರದ ಬಳಿ ಚಾಲುಕ್ಯ ಅರಸರ ಕಾಲದಲ್ಲಿ ಕಟ್ಟಿದ ವಿಶಾಲವಾದ ಹರಿದ್ರಾತೀರ್ಥ ಮಿನಿ ಸರೋವರವಿದೆ. ಸ್ವಲ್ಪ ದೂರದಲ್ಲಿಯೇ ಮಲಪ್ರಭಾ ನದಿ ಹರಿಯುತ್ತಿದೆ. ಹರಿದ್ರಾತೀರ್ಥ ಸರೋವರದ ಸುತ್ತಲಿನ ಕಲ್ಲು ಹಾಸಿಗೆಯೇ ಬಯಲು ಊಟದ ಸುಂದರ ತಾಣ.

ಬಾದಾಮಿಗೆ ಮತ್ತು ಬನಶಂಕರಿ ದೇಗುಲಕ್ಕೆ ಬರುವ ದೇಶೀಯ ಮತ್ತು ವಿದೇಶಿಯರಿಗೆ ರುಚಿ ಯಾದ ಉತ್ತರ ಕರ್ನಾಟಕ ಮಾದರಿ ಊಟ ನೀಡುವ ಕಾಯಕವನ್ನು ಸಮೀಪದ ಗ್ರಾಮಗಳ ಕೆಲವು ಕೃಷಿ ಮಹಿಳೆಯರು ಮಾಡುತ್ತಿದ್ದಾರೆ. ಅವರು ಬಡಿಸುವ ಊಟದಲ್ಲಿ ಗ್ರಾಮೀಣ ಸೊಗಡಿದೆ, ಹಳ್ಳಿಯ ಸುವಾಸನೆಯಿದೆ. ಸುಮಾರು 40-55 ವರ್ಷ ವಯಸ್ಸಿನ ಗಡಿಯಲ್ಲಿ ಇರುವ ಇವರಿಗೆ ಮೊದಲಿನಿಂದಲೂ ಇದೇ ವೃತ್ತಿ.

ಮೂರು ತಲೆ ಮಾರುಗಳಿಂದ ಈ ಕುಟುಂಬಗಳು ಪ್ರವಾಸಿಗರಿಗೆ ಊಣಬಡಿಸುವ ಕೆಲಸ ತುಂಬ ಶೃದ್ಧೆೆಯಿಂದ ಮಾಡುತ್ತಿವೆ. ಈ ಮಹಿಳೆಯರದು ಬಿಡುವಿಲ್ಲದ ನಿರಂತರ ಕೆಲಸ. ಮುಂಜಾನೆ ಎದ್ದು ಸ್ನಾನ, ಪೂಜೆ ಮುಗಿಸಿ ಅಡುಗೆ ಮಾಡಲು ಸಜ್ಜಾಗುತ್ತಾರೆ. ಸ್ಥಳೀಯವಾಗಿ ಬೆಳೆದ ಜೋಳ ಹಾಗೂ ಸಜ್ಜಿ ರೊಟ್ಟಿ, ಕಾಳುಪಲ್ಯ, ಗುರೆಳ್ಳು, ಶೇಂಗಾ ಚಟ್ನಿ, ಮೊಸರು ಬುತ್ತಿ ಮುಂತಾದ ಸ್ಥಳೀಯ ಆಹಾರ ಸಿದ್ಧ ಮಾಡಿಕೊಳ್ಳುತ್ತಾರೆ. ಇವರ ಕೆಲಸದಲ್ಲಿ ಮಕ್ಕಳು, ಕುಟುಂಬದ ಸದಸ್ಯರು ನೆರವಾಗುತ್ತಾರೆ.

ಹಿಂದಿನ ರಾತ್ರಿ ಹೆಪ್ಪು ಹಾಕಿದ ಮೊಸರನ್ನು ಒಂದು ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸುತ್ತಾರೆ. ತಾವು ತಯಾರಿಸಿದ ಅಡುಗೆ ಯನ್ನು ಒಂದು ದೊಡ್ಡ ಬುಟ್ಟಿಯಲ್ಲಿ ಸಂಗ್ರಹಿಸಿ ಇಟ್ಟು, ಬುಟ್ಟಿ ಮುಚ್ಚುವಂತೆ ಸ್ವಚ್ಛವಾದ ಬಟ್ಟೆ ಹೊದಿಸುತ್ತಾರೆ. ತಲೆಯ ಮೇಲೆ ಈ ಬುಟ್ಟಿ ಹೊತ್ತುಕೊಂಡು ಢಾನಕ ಶಿರೂರ ಗ್ರಾಮದಿಂದ ನಡೆದುಕೊಂಡು ಬನಶಂಕರಿ ದೇವಸ್ಥಾನಕ್ಕೆ ಬರುತ್ತಾರೆ. ಮುಂಜಾನೆ 10 ಗಂಟೆಯಿಂದ ಸಂಜೆಯ 4 ಗಂಟೆಯವರೆಗೆ ದೇವಿ ದರ್ಶನಕ್ಕೆ ಬರುವ ಪ್ರವಾಸಿಗರಿಗೆ, ಭಕ್ತರಿಗೆ ಊಟ ಬಡಿಸುತ್ತಾರೆ.

ಕೇವಲ 20 ರೂಪಾಯಿಗಳಲ್ಲಿ 3 ಸಜ್ಜಿ ರೊಟ್ಟಿ, ಪಲ್ಯಾ, ಮೊಸರು, ಚಟ್ನಿ ಸವಿಯಬಹುದು. ಈ ಪಕ್ಕಾ ಹಳ್ಳಿಯೂಟ ತುಂಬ ರುಚಿಕರ! ಮಾತ್ರವಲ್ಲ ಬಯಲಿನಲ್ಲಿ ಕುಳಿತು ಊಟ ಮಾಡುವದರಿಂದ ಹೊಸ ಅನುಭವ! ಪ್ರತಿ ದಿನ ಮನೆಯಲ್ಲೇ ರೊಟ್ಟಿ ತಯಾರಿಸಿ ತರುವ ಈ ಮಹಿಳೆಯರಿಗೆ ಲಾಭಕ್ಕಿಂತ, ತಮ್ಮ ಊರಿನ ರೊಟ್ಟಿ, ಚಟ್ನಿಯನ್ನು ಜನರಿಗೆ ನೀಡುವುದೇ ಮುಖ್ಯ ಉದ್ದೇಶ.
ಅತಿಥಿ ಸತ್ಕಾರ ರೂಪದಲ್ಲಿ ರೊಟ್ಟಿ ನೀಡುವ ಈ ಮಹಿಳೆಯರು ದಿನಕ್ಕೆ ಸುಮಾರು 400 ರೂಪಾಯಿ ವ್ಯಾಪಾರ ಮಾಡುತ್ತಾರೆ.

ಖರ್ಚು ತೆಗೆದು 200ರೂ ಉಳಿಯುತ್ತದೆ. ಇದು ಇವರ ಸೇವೆಗೆ ಸೂಕ್ತ ಪ್ರತಿಫಲವೇನಲ್ಲ. ಆದರೆ ತಲೆ ತಲಾಂತರದಿಂದ ಈ ಕೆಲಸ
ವನ್ನು ಇವರು ಮಾಡಿಕೊಂಡು ಬಂದಿದ್ದು, ಇದು ದೇವಿ ಸೇವೆ ಎನ್ನುವ ಭಾವ ಇವರಲ್ಲಿದೆ. ಯಾರಾದರೂ ಹೆಚ್ಚಿಗೆ ಹಣ ನೀಡಿ
ದರೆ ಅಥವಾ ಉಚಿತವಾಗಿ ಹಣ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ಆತ್ಮಗೌರವ ಕಾಯ್ದುಕೊಂಡು ಕೆಲಸ ಮಾಡುವುದು
ವಿಶೇಷ.

ಸುಮಾರು 30 ವರ್ಷಗಳಿಂದ ಊಟ ನೀಡುವ ಕೆಲಸ ಮಾಡುತ್ತಿರುವ ಹಿರಿಯಳಾದ ಬಸಮ್ಮ ಅವರು ಹೇಳುತ್ತಾರೆ – ‘ನಾನೇನೂ ದೊಡ್ಡ ಗಳಿಕೆ ಮಾಡುವುದಿಲ್ಲ. ನಮ್ಮ ಕುಟುಂಬ ಬದುಕುತ್ತಿದೆ ಅಷ್ಟೇ. ಮಕ್ಕಳು ಸ್ವಲ್ಪ ಶಿಕ್ಷಣ ಪಡೆದಿದ್ದಾರೆ. ನಮ್ಮ ಮುಂದಿನ ತಲೆಮಾರಿನವರು ನಮ್ಮ ಹಾಗೆ ಬುಟ್ಟಿ ಹೊತ್ತು ಊಟ ನೀಡುವ ಕೆಲಸ ಮಾಡಲು ಸಿದ್ಧರಿಲ್ಲ. ಅವರು ಮನೆಯಲ್ಲಿ ಮಾತ್ರ ನಮಗೆ ನೆರವು ನೀಡುತ್ತಾರೆ’. ಹನುಮವ್ವ ಅವರು ಕೂಡ ಕಳೆದ 25 ವರ್ಷಗಳಿಂದ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ.

‘ದೇವಿ ದರ್ಶನಕ್ಕೆ ಬಂದ ಪ್ರವಾಸಿಗರಿಗೆ ಊಟ ಮಾಡಿಸುವುದು ನಮಗೆ ಸಂತೋಷಕೊಡುತ್ತದೆ. ನಮ್ಮದೇನು ದೊಡ್ಡ ವ್ಯಾಪಾರ ಅಲ್ಲ. ಇದರಿಂದ ಬರುವ ಆದಾಯದಲ್ಲಿ ಮನೆ ನಡೆದಿದೆ. ಸ್ವಲ್ಪ ಭೂಮಿ ಇದೆ, ಗಂಡನೂ ದುಡಿಯುತ್ತಾನೆ. ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಒಬ್ಬಾಕೆ ಮಗಳು ಎಂ.ಎ. ಓದಿದ್ದಾಳೆ’ ಎನ್ನುವಾಗ ಅವರಲ್ಲಿ ಹೆಮ್ಮೆ, ಅಭಿಮಾನ.

‘ಜನರಿಗೆ ರೊಟ್ಟಿ, ಚಟ್ನಿ ನೀಡಿದಾಗ ನಮಗೇನೋ ತೃಪ್ತಿ. ಅವರು ನೀಡುವ ಹಣ ಸಣ್ಣ ಆದಾಯ ಅಷ್ಟೆ. ಬನಶಂಕರಿ ದೇವಿ
ಕೊಟ್ಟಷ್ಟರಲ್ಲಿ ಸಂತೋಷವಾಗಿದ್ದೇವೆ.’ ಎಂದು ಹನುಮ್ಮವ್ವ ಹೇಳುತ್ತಾರೆ. ಸಿದ್ದವ್ವ, ಗಂಗಮ್ಮ, ದಾನೇಶ್ವರಿ, ಬಸವ್ವ, ಬನಶಂಕ ರೆವ್ವ ಈ ಹೆಣ್ಣು ಮಕ್ಕಳು ಲವಲವಿಕೆಯಿಂದ ಊಟ ನೀಡುವ ಕೆಲಸ ಮಾಡುತ್ತಾರೆ. ಇವರ ಪ್ರಾಮಾಣಿಕತೆ, ಶ್ರದ್ಧೆ, ಭಕ್ತಿ ಇವರನ್ನು ಉತ್ಸಾಹದಿಂದ ಇರಿಸಿದೆ.

‘ಇವರು ಜಗತ್ತಿಗೆ ಊಟ ನೀಡುವ ತಾಯಂದಿರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ’ ಎಂದು ಹಿರಿಯ ಕವಿ ಚನ್ನವೀರ ಕಣವಿ ಅವರು ಹೇಳಿದ್ದು ಎಷ್ಟು ಅರ್ಥಪೂರ್ಣ!