Wednesday, 11th December 2024

ವಾಙ್ಮಯ ತಪಸ್ವಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ

ಡಾ.ಬಿ.ಜನಾರ್ಧನ ಭಟ್‌

ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ವಿದ್ವತ್ ಪರಂಪರೆಯ ಆಧುನಿಕ ಕಾಲದ ಬೆರಗು. ಅವರು ಸಂಸ್ಕೃತ  ವಿದ್ವಾಂಸ,  ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯಬಲ್ಲ ಲೇಖಕ, ಚಿಂತಕ, ವಾಗ್ಮಿ, ಸಂಸ್ಕೃತದಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಬಲ್ಲ ಅನುವಾದಕ, ಅಪ್ರಕಟಿತ ಸಂಸ್ಕೃತ ಗ್ರಂಥಗಳನ್ನು ಸಂಪಾದಿಸಿ, ಟಿಪ್ಪಣಿ ಸಹಿತ ವಿಶ್ಲೇಷಿಸಬಲ್ಲ ಪಂಡಿತ, ಪತ್ರಿಕೆಯೊಂದರ ಸಾಪ್ತಾಹಿಕ ವಿಭಾಗದ ಸಂಪಾದಕ ಎಲ್ಲವೂ ಆಗಿದ್ದರು. ಸಂಸ್ಕೃತ ಪರೀಕ್ಷೆಯಲ್ಲಿ ಕನಿಷ್ಟ ಅಂಕಗಳು ದೊರೆಯದೇ ನಪಾಸಾದರೂ, ತಾನೇ ಅಧ್ಯಯನ ನಡೆಸಿ ಅಪಾರ ಪಾಂಡಿತ್ಯವನ್ನು ಗಳಿಸಿದ ಅಪರೂಪದ ಸಾಧಕ. ಇತ್ತೀಚೆಗೆ ನಮ್ಮನ್ನು ಅಗಲಿದ ಬನ್ನಂಜೆಯವರಿಗಿದೋ ನಮ್ಮ ನುಡಿ ನಮನ.

ಕಳೆದ ಭಾನುವಾರ (13.12.2020) ತಮ್ಮ 84 ವರ್ಷ ವಯಸ್ಸಿನಲ್ಲಿ ದೇಹತೊರೆದ ವಿದ್ಯಾವಾಚ ಸ್ಪತಿ ಬನ್ನಂಜೆ ಗೋವಿಂದಾ ಚಾರ್ಯರು ಉಡುಪಿಯ ವಿದ್ವತ್ ಪರಂಪರೆಯ ಆಧುನಿಕ ಕಾಲದ ಬೆರಗು. ಆಧುನಿಕ ಸಮಾಜದಲ್ಲಿ ಸನಾತನ ಸಂಸ್ಕೃತಿಯ ಬಗ್ಗೆ, ಅದರ ಸತ್ವ ಸಾಧನೆಗಳ ಬಗ್ಗೆ ಪ್ರೀತಿಯೂ, ಗೌರವವೂ, ಆಸಕ್ತಿಯೂ ಹುಟ್ಟುವಂತೆ ಮಾಡಿದ ಬಹಳ ದೊಡ್ಡ ಸಂಸ್ಕೃತ
ವಿದ್ವಾಂಸ, ಚಿಂತಕ ಮತ್ತು ವಾಗ್ಮಿ ಅವರು. ಅಷ್ಟು ಮಾತ್ರವಲ್ಲದೆ ಆಧುನಿಕ ಕನ್ನಡ ಸಾಹಿತ್ಯ ವನ್ನು ತಮ್ಮ ಅನುವಾದ, ಕಾವ್ಯ ಹಾಗೂ ಚಿಂತನೆಗಳಿಂದ, ಶ್ರೀಮಂತಗೊಳಿಸಿದ ಕನ್ನಡ ಸಾಹಿತಿ.

ಪತ್ರಿಕೆಯೊಂದರ ಸಾಪ್ತಾಹಿಕ ವಿಭಾಗದ ಸಂಪಾದಕರಾಗಿ ಪ್ರತಿಭಾಪೋಷಣೆಯನ್ನೂ ಮಾಡಿ ದವರು. ಅವರದು ವಿಶಾಲ ಬುದ್ಧಿ ಮತ್ತು ವಿಶಾಲ ದೃಷ್ಟಿ. ಅವರು ಮಧ್ವ ಸಿದ್ಧಾಂತದ ಅತಿದೊಡ್ಡ ವಿದ್ವಾಂಸ, ಪ್ರತಿನಿಧಿಯಾಗಿದ್ದರು; ಆದರೆ ಆ ಮಾತುಗಳಲ್ಲಿ ಸೂಚಿತವಾಗ ಬಹುದಾದ ಬೌದ್ಧಿಕ ಮಿತಿ ಅವರಿಗಿರಲಿಲ್ಲ. ಜಿ. ವಿ. ಅಯ್ಯರ್ ಅವರ ‘ಶ್ರೀ ಮಧ್ವಾಚಾರ್ಯ’ ಚಲನಚಿತ್ರಕ್ಕೆ ಮಾತ್ರ ವಲ್ಲ ‘ಶ್ರೀ ಶಂಕರಾಚಾರ್ಯ’ ಮತ್ತು ‘ಶ್ರೀ ರಾಮಾನುಜಾಚಾರ್ಯ’ ಸಂಸ್ಕೃತ ಚಲನಚಿತ್ರಗಳಿಗೆ ಕೂಡ ಸಂಭಾಷಣೆ ಬರೆದವರು ಬನ್ನಂಜೆ ಗೋವಿಂದಾಚಾರ್ಯರು. ಶಿವಳ್ಳಿ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ, ಅದೂ ಮಠದ ಸ್ವಾಮಿಗಳಿಗೇ ಪಾಠ ಹೇಳುತ್ತಿದ್ದ ವಿದ್ವಾಂಸರೊಬ್ಬರ ಪುತ್ರರಾಗಿ ಹುಟ್ಟಿದ ಅವರು ಮಧ್ವಾಚಾರ್ಯರ ಗ್ರಂಥಗಳನ್ನೆಲ್ಲ ವ್ಯವಸ್ಥಿತವಾಗಿ ಸಂಪಾದಿಸಿ ಅವರ ಅಪ್ರತಿಮ ಬೌದ್ಧಿಕ ಕೊಡುಗೆಯನ್ನು, ಗ್ರಂಥ ಸಂಪಾದನೆ, ಶುದ್ಧ ಪಾಠ ನಿರ್ಣಯ ಮುಂತಾದ ಕ್ಷೇತ್ರಗಳಲ್ಲಿ ಮಧ್ವಾ ಚಾರ್ಯರು ಅನುಸರಿಸಿದ ವೈಜ್ಞಾನಿಕ ಮಾದರಿ ಗಳನ್ನು ತೋರಿಸಿಕೊಟ್ಟವರು.

ಹಲವು ಗ್ರಂಥಗಳನ್ನು ಕನ್ನಡದಲ್ಲಿಯೂ ಓದಬಹುದಾದ ಹಾಗೆ ಕನ್ನಡಕ್ಕೆ ತಂದವರು. ದ್ವೈತ ಸಿದ್ಧಾಂತವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಮಹತ್ವವನ್ನು ಅರಿತುಕೊಂಡ ಬನ್ನಂಜೆ, ಮಧ್ವ ಸಿದ್ಧಾಂತದ ಬಹುದೊಡ್ಡ ಚಿಂತಕರಾಗಿ ಪ್ರಸಿದ್ಧ ರಾದದ್ದು ವಿಶೇಷವೇನೂ ಅಲ್ಲ. ಸಂಸ್ಕೃತ ವಾಙ್ಮಯದ ಬಹುಪಾಲು ಕೃತಿಗಳನ್ನೆಲ್ಲ ಅವರು ಅಧ್ಯಯನ ಮಾಡಿದ್ದರು. ಸಂಸ್ಕೃತ ಸಾಹಿತ್ಯದಲ್ಲಿ ಯಾವ ಮಾಹಿತಿಯನ್ನು ಕೇಳಿದರೂ ಕೊಡುತ್ತಿದ್ದರು. ನಾನು ಒಮ್ಮೆ ವೇದ ಉಪನಿಷತ್ ಇತ್ಯಾದಿ ವಿವಿಧ ಗ್ರಂಥ  ಗಳಿಂದ ಉಲ್ಲೇಖಿಸಿದ್ದ ಶ್ಲೋಕ ಗಳನ್ನು ಇಂಗ್ಲಿಷಿಗೆ ಅನುವಾದಿಸುವಾಗ ಮೂಲ ಉಲ್ಲೇಖ ಇರಲಿ ಎಂದು ನಿರ್ಧರಿಸಿ ಅವರ ಮನೆಗೆ ಹೋಗಿದ್ದೆ. ಎಲ್ಲ ಶ್ಲೋಕಗಳ ಹಿಂದು ಮುಂದಿನ ಶ್ಲೋಕಗಳನ್ನೂ ಸನ್ನಿವೇಶಗಳನ್ನೂ ಹೇಳಿದ್ದಲ್ಲದೆ ಆಯಾಯ ಗ್ರಂಥಗಳನ್ನು ತೆರೆದು ಪ್ರಕರಣ, ಶ್ಲೋಕಗಳ ಸಂಖ್ಯೆಗಳನ್ನೂ ಬರೆದುಕೊಟ್ಟರು.

ಬನ್ನಂಜೆಯವರ ಹನುಮದ್ವಿಕಾಸ

ತರ್ಕಕೇಸರಿ ಪಡುಮುನ್ನೂರು ನಾರಾಯಣ ಆಚಾರ್ಯರು ಮತ್ತು ಸತ್ಯ ಭಾಮಾ ದಂಪತಿಗಳ ಎರಡನೆಯ ಮಗನಾಗಿ ಗೋವಿಂದಾಚಾರ್ಯರು 3.8.1936 ರಂದು ಜನಿಸಿದರು.

ನಾರಾಯಣ ಆಚಾರ್ಯರು ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ತರ್ಕಶಾಸ್ತ್ರ ಪ್ರಾಧ್ಯಾಪಕರಾಗಿದ್ದರು, ತತ್ವಶಾಸ್ತ್ರದ ತವನಿಧಿ
ಯಾಗಿದ್ದರು, ಅಪೂರ್ವ ಗ್ರಂಥಗಳ ಕರ್ತರಾಗಿದ್ದರು, ಜತೆಗೆ ಉಡುಪಿಯ ಸ್ವಾಮಿಗಳಿಗೆ ಪಾಠ ಹೇಳುತ್ತಿದ್ದ ಘನ ವಿದ್ವಾಂಸ ರಾಗಿದ್ದರು. ನಾರಾಯಣಾಚಾರ್ಯರ ಬಗ್ಗೆ ‘ಕರ್ಮವೀರ’ ದಲ್ಲಿ ಬಂದ ಒಂದು ಲೇಖನವನ್ನು ಓದಿ ಉಡುಪಿಯ ವಿದ್ವತ್
ಪರಂಪರೆಯ ಬಗ್ಗೆ ತಿಳಿದು, ಸಂಭ್ರಮಪಟ್ಟ ವಿಜಯನಾಥ ಶೆಣೈ ಅವರ ಸಂಚಾಲಕತ್ವದಲ್ಲಿ ಆಚಾರ್ಯರಿಗೆ 1967 ರಲ್ಲಿ ಉಡುಪಿ ಯಲ್ಲಿ ಸಾರ್ವಜನಿಕ ಸನ್ಮಾನ ಆಗಿತ್ತು.

ತಮ್ಮ ನಾಲ್ಕನೆಯ ವರ್ಷದಲ್ಲಿಯೇ ಸಂಸ್ಕೃತ ಅಭ್ಯಾಸವನ್ನು ಪ್ರಾರಂಭಿಸಿದ್ದ ಗೋವಿಂದಾಚಾರ್ಯರು ತಂದೆಯಂತೆ ಸಂಸ್ಕೃತ ವಿದ್ವಾಂಸನಾಗಬೇಕೆಂದು ‘ತರ್ಕ ಶಿರೋಮಣಿ’ ಪದವಿ ಪಡೆಯಲು ಪ್ರವೇಶ ಪರೀಕ್ಷೆಗೆ ಹಾಜರಾದರು. ಅವರು ಗಳಿಸಿದ್ದು ಕೇವಲ 35 ಅಂಕಗಳನ್ನು ಮಾತ್ರ! ಪ್ರವೇಶ ಸಿಗಬೇಕಾದರೆ 40 ಅಂಕಗಳು ಬರಬೇಕಿತ್ತು. ಬನ್ನಂಜೆಯವರೇ ಪಾಠ ಹೇಳಿದ ಗೆಳೆಯರಿಗೆ ಪ್ರವೇಶ ಸಿಕ್ಕಿತ್ತು!

ಆಗಲೇ ಬನ್ನಂಜೆ ತಾನು ಇನ್ನು ಶಾಲೆ ಕಾಲೇಜುಗಳಿಗೆ ಕಾಲಿಡುವುದಾದರೆ ಉಪಾಧ್ಯಾಯರಿಗೂ ಪಾಠಹೇಳುವುದಕ್ಕಾಗಿ ಮಾತ್ರ, ಕಲಿಯಲಿಕ್ಕಲ್ಲ ಎಂದು ನಿರ್ಧರಿಸಿದರು. ಗ್ರಂಥಾಲಯದಲ್ಲಿ ಕುಳಿತು ತೀವ್ರವಾದ ಸ್ವಾಧ್ಯಾಯದಲ್ಲಿ ತೊಡಗಿದರು. ಮೂರು ವರ್ಷಗಳ ಕಾಲ ಅವರು ದಿನಕ್ಕೆ ಇಪ್ಪತ್ತು ಗಂಟೆಗಳ ಕಾಲ ಅಧ್ಯಯನ ಮಾಡಿದರು. ಯಾವ ವಿಷಯ ವನ್ನು ಕೇಳಿದರೂ ಉಲ್ಲೇಖ ಸಹಿತವಾಗಿ ಹೇಳಬಲ್ಲ ಸ್ಮರಣಶಕ್ತಿ ಅವರಿಗಿತ್ತು. ಹೀಗೆ ಆರ್ಜಿಸಿದ ಅವರ ಜ್ಞಾನಸಂಪತ್ತನ್ನು ನೋಡಿ ಬೆರಗಾದ ಉಡುಪಿಯ ವಿದ್ವತ್ ವಲಯ ಈ ಯುವಕನನ್ನು ವಿಶೇಷವಾದ ಆದರದಿಂದ ಕಂಡಿತು. ಆಮೇಲೆ ಅವರು ನಿರ್ದಿಷ್ಟ ಜ್ಞಾನಶಾಖೆಗಳಲ್ಲಿ ಗುರುಮುಖೇನ ಅಧ್ಯಯನ ನಡೆಸಿದರು.

ಹಲವು ಗುರುಗಳು
ಅಭಿನವ ಗುಪ್ತಾಚಾರ್ಯರಂತೆ ಗೋವಿಂದ ಪಂಡಿತಾಚಾರ್ಯರಿಗೂ ಹಲವು ಗುರುಗಳು. ದೊಡ್ಡಪ್ಪ ಶ್ರೀನಿವಾಸಾಚಾರ್ಯರು ಮೊದಲ ಗುರು. ಕಾಣಿಯೂರು ಮಠದ ಶ್ರೀ ವಿದ್ಯಾಸಮುದ್ರ ತೀರ್ಥ ಶ್ರೀಪಾದರು ಬನ್ನಂಜೆಯವರಿಗೆ ಮಾರ್ಗದರ್ಶನ ನೀಡಿ ಅವರ ಅಧ್ಯಯನಕ್ಕೆ ಒಂದು ಗುರಿಯನ್ನು ತೋರಿಸಿಕೊಟ್ಟರು. ಆಮೇಲೆ ಬನ್ನಂಜೆಯವರು ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರ ಶಿಷ್ಯರಾಗಿ ಪಲಿಮಾರಿನಲ್ಲಿ ಮಠದಲ್ಲಿ ವಾಸವಾಗಿದ್ದುಕೊಂಡು ಗುರುಕುಲದ ರೀತಿಯಲ್ಲಿ ಪಾಠ ಕಲಿಯತೊಡಗಿದರು.

ಬಿಡುವಿನ ವೇಳೆಯಲ್ಲಿ ಬನ್ನಂಜೆಯವರು ಅಲ್ಲಿ ಅಧ್ಯಾಪಕರಾಗಿದ್ದ ಕವಿ ಕುರಾಡಿ ಸೀತಾರಾಮ ಅಡಿಗ ಮತ್ತು ಕಿರಿಯ ಪಟ್ಟದ ಸ್ವಾಮೀಜಿಯಾಗಿದ್ದ ಕುಮುದಾತನಯ (ಇದು ಅವರ ಕಾವ್ಯನಾಮ) ಇವರೊಂದಿಗೆ ಆಧುನಿಕ ಹಿತ್ಯಾಭ್ಯಾಸವನ್ನೂ, ಚರ್ಚೆಯನ್ನೂ ಮಾಡು ತ್ತಿದ್ದರು. ನವ್ಯ ಮಾದರಿಯಲ್ಲಿ ಕವಿತೆಗಳನ್ನು ಬರೆಯಲಾರಂಭಿಸಿದ ಮೂವರೂ ಸೇರಿ ಮುಕ್ಕಣ್ಣ ದರ್ಶನ (1961) ಎಂಬ ಸಂಕಲನವನ್ನೂ ಪ್ರಕಟಿಸಿ ದರು!

ಇದಕ್ಕೆ ಬನ್ನಂಜೆಯವರು ಬರೆದ ಮುನ್ನುಡಿ ಬಹಳ ವಿಶಿಷ್ಟವಾಗಿದೆ. ಬನ್ನಂಜೆ ಯವರು ಸಂಸ್ಕೃತ ಪಂಡಿತರಾಗಿ, ನವ್ಯ ಕಾವ್ಯ ಮಾರ್ಗವನ್ನು ಒಪ್ಪಿದ್ದು, ಅದರ ಸಾಧ್ಯತೆಗಳನ್ನು ದುಡಿಸಿಕೊಂಡದ್ದು ಅಧ್ಯಯನಯೋಗ್ಯ ವಾಗಿದೆ. ಹಾಗೆಯೇ ಅವರು ಛಂದಸ್ಸುಳ್ಳ ಕವಿತೆಗಳನ್ನು ಬರೆಯುವಾಗಿನ ಹಾಸ್ಯಪ್ರಜ್ಞೆ, ಅದರಿಂದ ಅವರು ಹುಟ್ಟಿಸುವ ಧ್ವನಿ ಇವು ಕೂಡಾ ವಿಶಿಷ್ಟವಾಗಿವೆ. ಅವರ ಕವಿತೆಗಳು ಈಗ ಎರಡು ಸಂಕಲನಗಳಲ್ಲಿ ಲಭ್ಯವಿವೆ.

ಆಮೇಲೆ ಬನ್ನಂಜೆಯವರಿಗೆ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು, ಅದಮಾರು ಮಠದ ವಿಬುಧೇಶತೀರ್ಥರು ಮತ್ತು ಅಲೆವೂರು ಅನಂತರಾಮ ಆಚಾರ್ಯರು ಕೂಡ ವಿವಿಧ ವಿಷಯಗಳನ್ನು ಪಾಠ ಮಾಡಿದರು. ತಂದೆ ನಾರಾಯಣಾಚಾರ್ಯರು ಶ್ರೀಮನ್ ನ್ಯಾಯಸುಧಾ ಪಾಠಹೇಳಿದರು. ಹೀಗೆ ಕಾವ್ಯ ಹಾಗೂ ಶಾಸ್ತ್ರಾಧ್ಯಯನವನ್ನು ಮಾಡಿಕೊಂಡು ಸರ್ವಸನ್ನದ್ಧರಾಗಿ ‘ವಿದ್ಯಾ ವಾಚಸ್ಪತಿ’ ಎಂಬ ಬಿರುದಾಂಕಿತರಾಗಿ ಪ್ರಪಂಚಕ್ಕೆ ಪರಿಚಯಿಸಲ್ಪಟ್ಟ ಬನ್ನಂಜೆ ಗೋವಿಂದಾಚಾರ್ಯರು ಮಠದ ಸೀಮಿತ ವಲಯದಿಂದ ಹೊರಬಂದು ಜನಸಾಮಾನ್ಯರಿಗೂ ಸಂಸ್ಕೃತ ಕಾವ್ಯ, ಶಾಸ್ತ್ರಗಳ ಸವಿಯನ್ನು ಉಣಿಸತೊಡಗಿದರು. ಇದು ಕೂಡ ಬನ್ನಂಜೆಯವರ ಹೊಸ ಉಪಕ್ರಮ.

ಅವರ ಮಾತು ಕೇಳಿದವರಿಗೆ ರೋಮಾಂಚನ ಹುಟ್ಟಿಸುವಂತೆ ಅಪೂರ್ವ ಹೊಸತನದಿಂದಲೂ, ಅಪಾರ ಜ್ಞಾನದಿಂದಲೂ ಕೂಡಿ ಸ್ಫಟಿಕದ ಶಲಾಕೆ ಯಂತೆ – ಮುತ್ತಿನ ಹಾರದಂತೆ ಇರುತ್ತಿತ್ತು. ಅವರ ಮಾತುಗಳಲ್ಲಿ ನಿರರ್ಗಳ ವಾಗಿ ಹರಿದು ಬರುತ್ತಿದ್ದ ಮೂಲ ಪಠ್ಯದ ಸಾಲುಗಳು, ಅದಕ್ಕೆ ವಿವರಣೆ ನೀಡುವಾಗ ಉದಾಹರಣೆಯಾಗಿ ಒದಗಿ ಬರುತ್ತಿದ್ದ ಆಧುನಿಕ ಮತ್ತು ಆರ್ಷೇಯ ವಿಚಾರಗಳು, ಹಾಸ್ಯಮಯವಾಗಿ ರಸವತ್ತಾಗಿರುತ್ತಿದ್ದ ಅವರ ಸಮಾಜ ವಿಮರ್ಶೆ, ಸಂಪ್ರದಾಯ ಜಡತ್ವದ ಟೀಕೆ ಇವುಗಳಿಂದಾಗಿ ಅವರ ಮಾತು ಗಳನ್ನು ಕೇಳಲು ಜನ ಹಾತೊರೆಯತೊಡಗಿದರು. ಅವರ ಪ್ರವಚನಗಳಿಗೆ ಬೇಡಿಕೆ ಬರತೊಡಗಿತು. ಅವರ ಉಪನ್ಯಾಸಗಳಿಗೆ ಟಿಕೆಟ್ ಇಟ್ಟಿದ್ದರೂ ಜನ ಕಿಕ್ಕಿರಿದು ನೆರೆಯುತ್ತಿದ್ದುದರಲ್ಲಿ ಸಂಶಯವಿಲ್ಲ.

ಅದ್ಭುತ ವಾಗ್ಝರಿ
ಬನ್ನಂಜೆಯವರು ಕಲಿತದ್ದನ್ನೆಲ್ಲ ಚಿಂತನೆಯ ಮೂಸೆಯಲ್ಲಿ ಕರಗಿಸಿ ಹೊಸಬೆಳಕಿನಲ್ಲಿ ಕಂಡು ಜೀರ್ಣಿಸಿಕೊಂಡವರು. ತಮ್ಮ ಅದ್ಭುತವಾದ ವಾಗ್ಝರಿಯ ಮೂಲಕ, ಕೇಳಿದ ಆಬಾಲವೃದ್ಧರು, ಪಂಡಿತ ಪಾಮರರು ಎಲ್ಲರಿಗೂ ಹೊಸ ಅರಿವು ಹುಟ್ಟಿಸುವ ಹಾಗೆ ಅಥವಾ ಅರಿವನ್ನು ಪೊಸಯಿಸುವ ಹಾಗೆ ಭಾರತದ ಪಾರಂಪರಿಕ ಚಿಂತನೆಯನ್ನು ಮತ್ತು ಕಾವ್ಯ ಪುರಾಣಗಳನ್ನು ಪರಿಚಯಿಸುತ್ತಾ ಜನಶಿಕ್ಷಣ ಕೊಡುತ್ತಾ ಹೋದರು. ನಮ್ಮ ಪುಣ್ಯದಿಂದ ನಮ್ಮ ಕಾಲದಲ್ಲಿ ಮುದ್ರಣ ಮತ್ತು ಆಧುನಿಕ ತಂತ್ರಜ್ಞಾನ ಎರಡೂ ಇರುವುದರಿಂದ ಅವರ ಮಹತ್ವದ ಪುಸ್ತಕಗಳನ್ನು ನಾವು ಇನ್ನೂ ಓದಬಹುದು ಮತ್ತು ದಾಖಲಾಗಿರುವ ಸುಮಾರು 30,000 ಗಂಟೆಗಳ ಮಾತುಗಳನ್ನು ಮತ್ತೆ ಮತ್ತೆ ಕೇಳಬಹುದು.

ಹಾಗಾಗಿ ಬನ್ನಂಜೆ ಗೋವಿಂದಾಚಾರ್ಯರೆಂಬ ಈ ವಾಙ್ಮಯ ತಪಸ್ವಿ- ಪುರುಷ ಸರಸ್ವತಿ ತಮ್ಮ ಕೊಡುಗೆಯನ್ನು ಶಾಶ್ವತವಾಗಿ ದಾಖಲಿಸಿದ್ದಾರೆ. ಬನ್ನಂಜೆ ಯವರ ಮಾತುಗಳಲ್ಲಿ ಆಧುನಿಕತೆಯ ಸ್ಪರ್ಶ ಇತ್ತು. ಎಲ್ಲವನ್ನೂ ತಮ್ಮ ಪ್ರಖರ ವೈಚಾರಿಕತೆಯಿಂದ ಪರೀಕ್ಷಿಸುತ್ತಿದ್ದ ಅವರ ಟೀಕೆಗಳಿಗೆ ಮಠಗಳ ವಿದ್ವಾಂಸರೂ ಒಮ್ಮೊಮ್ಮೆ ಗುರಿಯಾಗುತ್ತಿದ್ದರು. ಆದರೆ ಬನ್ನಂಜೆಯವರು
ಸತ್ಯವನ್ನೇ ಹೇಳುತ್ತಿದ್ದರಲ್ಲದೆ ಕೇಳುವವರಿಗೆ ಸಂತೋಷವಾಗ ಬೇಕೆಂದು ತಮ್ಮ ಅಧ್ಯಯನದಿಂದ ಮತ್ತು ಚಿಂತನೆಯಿಂದ ಕಂಡುಕೊಂಡ ಸತ್ಯಗಳಿಗೆ ವ್ಯತಿರಿಕ್ತವಾದುದನ್ನು ಒಪ್ಪುತ್ತಲೂ ಇರಲಿಲ್ಲ, ಹೇಳುತ್ತಲೂ ಇರಲಿಲ್ಲ. ಅವರು ಕೆಲವೊಮ್ಮೆ ಇದ ರಿಂದಾಗಿ ವಿವಾದಕ್ಕೆ ಸಿಕ್ಕಿದ್ದೂ, ಅಪ್ರಿಯರಾದದ್ದೂ ಉಂಟು. ಉದಾಹರಣೆಗೆ ಕನಕನ ಕಿಂಡಿಯತ್ತ ಒಳಗಿನ ಕೃಷ್ಣನ ವಿಗ್ರಹ ತಿರುಗಿರುವುದು ಅಸಂಭವ ಎಂದು ಅವರು ಆಧಾರ ಗಳೊಂದಿಗೆ ಹೇಳುತ್ತಿದ್ದರು. ಅದು ಹಲವರಿಗೆ ಇಷ್ಟವಾಗಿರಲಿಲ್ಲ.

ಪತ್ರಕರ್ತರಾಗಿ ಬನ್ನಂಜೆ
ಪತ್ರಿಕೋದ್ಯಮದಲ್ಲಿ ಅವರಿಗೆ ಅಣ್ಣ ಬನ್ನಂಜೆ ರಾಮಾಚಾರ್ಯರೇ ಗುರು. ತಂದೆ ನಾರಾಯಣಾಚಾರ್ಯರು ಮನೆಗೆ ಆ ಕಾಲದ ಪ್ರಮುಖ ಕನ್ನಡ ಪತ್ರಿಕೆಗಳನ್ನು ತರಿಸುತ್ತಿದ್ದರು. ಮಕ್ಕಳಿಗೆ ತನ್ನಂತೆ ಸಂಸ್ಕೃತವನ್ನೇ ಕಲಿಯಬೇಕೆಂದು ಒತ್ತಾಯಿಸದೆ ಅವರ ಇಷ್ಟಕ್ಕೆ ಬಿಟ್ಟಿದ್ದರು. ಬನ್ನಂಜೆಯವರ ಅಣ್ಣ ಬನ್ನಂಜೆ ರಾಮಾಚಾರ್ಯರು ಪತ್ರಿಕೋದ್ಯಮವನ್ನು ಆರಿಸಿಕೊಂಡಿದ್ದರು. ಅವರು ‘ಸುದರ್ಶನ’ ಪತ್ರಿಕೆಯ ಸಂಪಾದಕರಾಗಿದ್ದಾಗ ತಮ್ಮ ಗೋವಿಂದರನ್ನು ಒತ್ತಾಯಿಸಿ ತಮ್ಮ ಪತ್ರಿಕೆಗೆ ಲೇಖನಗಳನ್ನು ಬರೆಸು ತ್ತಿದ್ದರು. ಆಮೇಲೆ ಮಣಿಪಾಲದಲ್ಲಿ ‘ಉದಯವಾಣಿ’ ಪತ್ರಿಕೆ ಪ್ರಾರಂಭವಾದಾಗ ಬನ್ನಂಜೆ ರಾಮಾಚಾರ್ಯರು ಸುದ್ದಿ ಸಂಪಾದಕ ರಾಗಿಯೂ, ಗೋವಿಂದಾಚಾರ್ಯರು ಸಾಪ್ತಾಹಿಕದ ಸಂಪಾದಕರಾಗಿಯೂ ನೇಮಕಗೊಂಡರು.

ಸುಮಾರು ಮೂವತ್ತು ವರ್ಷಗಳ ಕಾಲ ಬನ್ನಂಜೆಯವರು ಆ ಪತ್ರಿಕೆಯ ಉದ್ಯೋಗಿಯಾಗಿದ್ದರು. ಆಗ ಅವರು ಬರೆದ ಪುಸ್ತಕ ಸಮೀಕ್ಷೆಗಳು, ‘ಕಿಷ್ಕಿನ್ಧಾ ಕಾಂಡ’ ಅಂಕಣದ ಬರಹಗಳು ಈಗ ಉಪಲಬ್ಧವಿಲ್ಲ. ಅವುಗಳು ಆಗ ಅಪಾರ ಜನಪ್ರಿಯತೆ ಗಳಿಸಿದ್ದವು.
ಹದಿಹರೆಯದ ಬನ್ನಂಜೆಯವರ ಮಹತ್ವವನ್ನು ಅಂದಿನ ವಿದ್ವತ್ ವಲಯ ಗುರುತಿಸಿದ್ದ ಹಾಗೆ ಸಾಹಿತ್ಯದಲ್ಲಿಯೂ ಅವರ ವಿದ್ವತ್ತು ಮತ್ತು ಪ್ರತಿಭೆಯನ್ನು ಆ ಪತ್ರಿಕೆಯವರು ಗುರುತಿಸಿದ್ದರೆನ್ನುವುದು ವಿಶೇಷ. 

ಯಾವ ಅಕಾಡೆಮಿಕ್ ಸರ್ಟಿಫಿಕೇಟುಗಳೂ ಇರದ ಬನ್ನಂಜೆಯವರನ್ನು ಆ ಪತ್ರಿಕೆ ಎಷ್ಟು ಗೌರವಯುತವಾಗಿ  ನಡೆಸಿಕೊಂಡಿ ತ್ತೆಂದರೆ ಇಂತಹ ಪ್ರತಿಭಾ ಪುರಸ್ಕಾರ ವಿದೇಶಗಳಲ್ಲಿ ಮಾತ್ರ ಸಾಧ್ಯ ಅನಿಸುತ್ತದೆ. ಅವರಿಗೆ ಹಾಜರಾತಿ ಕಡ್ಡಾಯವಾಗಿರಲಿಲ್ಲ, ಅವರು ಯಾವಾಗ ಎಷ್ಟು ದಿನ ಕಛೇರಿಗೆ ಬಂದರು ಎನ್ನುವುದನ್ನು ಆಡಳಿತವರ್ಗ ಕೇಳುತ್ತಲೇ ಇರಲಿಲ್ಲ.

ಬನ್ನಂಜೆ ಆಗಲೇ ಪ್ರವಚನಕಾರರಾಗಿ ಪ್ರಸಿದ್ಧರಾಗಿದ್ದರು. ಉಡುಪಿಯ ರಾಜಾಂಗಣದಲ್ಲಿ ಮಾತ್ರವಲ್ಲ, ಕರ್ನಾಟಕದಾದ್ಯಂತ ಮತ್ತು ಮುಂಬಯಿ ಯಲ್ಲಿಯೂ ಅವರ ಪ್ರವಚನ ಮಾಲೆಗಳು ನಡೆಯುತ್ತಿದ್ದವು. ಬನ್ನಂಜೆಯವರು ಕೆಲವು ದಿನಗಳ ಕಾಲ ಊರಲ್ಲಿಲ್ಲದಿದ್ದರೂ ಪತ್ರಿಕೆ ಅವರ ವೇತನವನ್ನು ಯಾವತ್ತೂ ಕಡಿತಗೊಳಿಸಿರಲಿಲ್ಲ. ಪತ್ರಿಕೆಯ ಸಾಪ್ತಾಹಿಕ ವಿಭಾಗ ಬನ್ನಂಜೆ ಯವರ ಛಾಪು ಹೊತ್ತು ಅದ್ಭುತವಾಗಿ ಬರುತ್ತಿತ್ತು.

ಅವರ ಕರ್ತವ್ಯನಿಷ್ಠೆಯೂ ಹಾಗೆಯೆ ಇತ್ತು. ಸಂಸ್ಕೃತ ವಿದ್ವತ್ ವಲಯದ ಬನ್ನಂಜೆ ಕನ್ನಡ ಸಾಹಿತಿಯಾಗಿ ಇನ್ನೊಂದು ಸ್ನೇಹವಲಯವನ್ನೂ ಹೊಂದಿದ್ದರು. ಬೇಂದ್ರೆಯರಂತಹ ಅನುಭಾವಿ ಕವಿಯನ್ನು ಬನ್ನಂಜೆಯವರಷ್ಟು ಚೆನ್ನಾಗಿ ಯಾರೂ ಅರ್ಥಮಾಡಿಕೊಂಡಿರಲಿಲ್ಲ. ಬೇಂದ್ರೆಯವರು ತಮ್ಮ ನಾಕು ತಂತಿ ಕವಿತೆಯ ಅರ್ಥವೇನು ಎಂದು ಯಾರೋ ಕೇಳಿದ್ದಕ್ಕೆ, ಬರೆಯುವಾಗ ಅಂಬಿಕಾತನಯನಿಗೆ ಗೊತ್ತಿತ್ತು; ಈಗ ಈ ಬೇಂದ್ರೆಗಿಂತ ಚೆನ್ನಾಗಿ ಬನ್ನಂಜೆಯವರು ಹೇಳುತ್ತಾರೆ, ಅವರನ್ನು ಕೇಳಿ ಎಂದು ಉತ್ತರಿಸಿದ್ದರಂತೆ!

ಬನ್ನಂಜೆಯವರು ಸಂಪಾದಕರಾಗಿ ತಮ್ಮ ಪತ್ರಿಕೆ ಜನರಿಗೆ ಏನನ್ನು ಕೊಡಬೇಕೆಂದು ಚಿಂತಿಸುತ್ತಾ, ಲೇಖಕರನ್ನು ಬೆಳೆಸಲು
ಸಾಕಷ್ಟು ಶ್ರಮವಹಿಸುತ್ತಿದ್ದರು. ನನ್ನದೇ ಉದಾಹರಣೆ ಕೊಡುವುದಾದರೆ, ನಾನು ಇಂಗ್ಲಿಷ್ ಎಂ.ಎ. ಮಾಡಿ ಬಂದ ಹೊಸದರಲ್ಲಿ ‘ಕಾವ್ಯದ ಮಿತಿ’ ಎಂಬ ಲೇಖನವನ್ನು ಬರೆದು ಉದಯವಾಣಿಗೆ ಕಳುಹಿಸಿದೆ. ಅವರು ಅದನ್ನು ಸಾಪ್ತಾಹಿಕ ಪುಟದ ಮುಖಪುಟ ಲೇಖನವಾಗಿ ಪ್ರಕಟಿಸಿದ್ದಲ್ಲದೆ ಒಂದು ಪತ್ರ ಬರೆದರು. ತಮ್ಮನ್ನು ಪತ್ರಿಕಾ ಕಛೇರಿಯಲ್ಲಿ ಭೇಟಿ ಮಾಡಲು ಆಹ್ವಾನಿಸಿದ್ದ ಪತ್ರ ಅದು. ಅಲ್ಲಿಗೆ ಹೋದಾಗ ಅವರು, ನನ್ನ ವಿದ್ಯಾಭ್ಯಾಸ ಮತ್ತು ಉದ್ಯೋಗದ ಬಗ್ಗೆೆ ವಿಚಾರಿಸಿದರು. ‘ನಿಮ್ಮ ಲೇಖನ ಓದಿದಾಗ ನೀವು ಇಂಗ್ಲಿಷ್ ಎಂ.ಎ. ಓದಿರಬಹುದು ಎಂದು ಅಂದಾಜು ಮಾಡಿದೆ. ಕನ್ನಡ ಸಾಹಿತ್ಯವನ್ನೂ ಓದಿಕೊಂಡಿದ್ದೀರಿ. ನೀವು ಸಾಪ್ತಾಹಿಕಕ್ಕೆ ನಿಯಮಿತವಾಗಿ ಪುಸ್ತಕ ವಿಮರ್ಶೆ ಮಾಡುತ್ತೀರಾ?’ ಎಂದು ಕೇಳಿದರು.

ಸಂತೋಷದಿಂದ ಒಪ್ಪಿಕೊಂಡು ಅವರು ನಿವೃತ್ತರಾಗುವವರೆಗೂ ಸಾವಿರಾರು ಪುಸ್ತಕಗಳಿಗೆ ಸಮೀಕ್ಷೆ ಬರೆದಿದ್ದೆ. ನನ್ನನ್ನು ವಿಮರ್ಶಕ ಎಂದು ಗುರುತಿಸುವಂತೆ ಮಾಡಿದ್ದು ಬನ್ನಂಜೆ ಗೋವಿಂದಾಚಾರ್ಯರೇ. ನನಗೆ ವಿಮರ್ಶಕನಾಗಬೇಕೆಂಬ ಯಾವ ಆಸೆಯೂ ಇರಲಿಲ್ಲ! ಹೀಗೆ ಹಲವು ಯುವಕರನ್ನು ಅವರು ಪ್ರೇರೇಪಿಸಿ ಕನ್ನಡ ಸಾಹಿತ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು.

ಸಂಸಾರ
ಬನ್ನಂಜೆಯವರು 1960 ರಲ್ಲಿ ಅಹಲ್ಯಾ ಅವರನ್ನು ಮದುವೆಯಾದರು. ಈ ದಂಪತಿಗಳಿಗೆ ವಿಜಯಭೂಷಣ, ವಿದ್ಯಾ,
ವಿಜಯಭೂಷಣ, ಶುಭಲತಾ, ವೀಣಾಲತಾ, ಕವಿತಾಲತಾ ಎಂಬ ಆರು ಜನ ಮಕ್ಕಳು. ಅವರ ಪುತ್ರಿ ಡಾ. ವೀಣಾ ಬನ್ನಂಜೆ
ಖ್ಯಾತ ಕವಯತ್ರಿ, ಚಿಂತಕಿ ಮತ್ತು ವಾಗ್ಮಿ. ಅವರ ಪುತ್ರ ವಿನಯ ಭೂಷಣ ಅವರ ಪುಸ್ತಕಗಳನ್ನು ಪ್ರಕಟಿಸುವ, ಅವರ
ಉಪನ್ಯಾಸಗಳನ್ನು ದಾಖಲಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಈಗಲೇ ಹೇಳಿದಂತೆ ಬನ್ನಂಜೆಯವರ ಸುಮಾರು 30,000 ಗಂಟೆಗಳ ಉಪನ್ಯಾಸ ದಾಖಲೀಕರಣವಾಗಿದೆ. ಇದು ಗಿನ್ನೆಸ್ ದಾಖಲೆಗೆ ಸೇರಬೇಕಾದ ದಾಖಲೆ ಎಂದು ಹೇಳಲಾಗಿದೆ. ಬನ್ನಂಜೆಯವರು ನಿಧನರಾಗುವ ಕೆಲವೇ ದಿನಗಳ ಹಿಂದೆ ಅವರ ಕಿರಿಯ ಪುತ್ರ ಅಸೌಖ್ಯದಿಂದ ನಿಧನರಾಗಿದ್ದುದು ಬನ್ನಂಜೆಯವರ ಮನಸ್ಸಿಗೆ ತೀವ್ರ ಆಘಾತವನ್ನುಂಟುಮಾಡಿತ್ತು.

ಶಾಸ್ತ್ರ ಗ್ರಂಥಗಳ ಅನುವಾದ – ಸಂಪಾದನೆ
ಬನ್ನಂಜೆಯವರು ತಮ್ಮ ಇಪ್ಪತ್ತರ ಹರೆಯದಲ್ಲಿಯೇ ಮಧ್ವಾಚಾರ್ಯರ ‘ತಂತ್ರ ಸಾರ’ ಸಂಗ್ರಹವನ್ನು ಅನುವಾದಿಸಿ ಅದಕ್ಕೆೆ ವಿಸ್ತಾರವಾದ ಪ್ರಸ್ತಾವನೆ ಬರೆದಿದ್ದರು. ಅದರ ಟಿಪ್ಪಣಿಗಳಲ್ಲಿ ಅವರು ತೌಲನಿಕವಾಗಿ ಉಲ್ಲೇಖಿಸುವ ವಿಷಯಗಳ ವ್ಯಾಪ್ತಿ ಬೆರಗು ಹುಟ್ಟಿಸುತ್ತದೆ. ಅವರು ರಚಿಸಿದ ಶಂಕರಾಚಾರ್ಯರ ಪ್ರಪಂಚ ಸಾರ, ಸರ್ ಜಾನ್ ವುಡ್ರೋಫ್, ಶಾಕ್ತ ಪಂಥ ಮುಂತಾದ ಉಲ್ಲೇಖಗಳನ್ನು ನೋಡಿದರೆ ಅವರ ಅಧ್ಯಯನದ ವ್ಯಾಪ್ತಿ ಆಗಲೇ ಎಷ್ಟು ಅಗಾಧವಾಗಿತ್ತು ಎಂದು ಅರಿವಾಗುತ್ತದೆ. ನಮ್ಮ

ಕಾಲದಲ್ಲಿ ಉಪನಿಷತ್ತು, ಷಡ್ದರ್ಶನಗಳು ಮತ್ತು ವೇದಗಳನ್ನು ಕುರಿತು ಖಚಿತವಾದ ಅರ್ಥಾನುಸಂಧಾನ ಮಾಡಬಲ್ಲ  ಅವರಂತಹ ಬೇರೊಬ್ಬ ವಿದ್ವಾಂಸರು ಇರಲಿಲ್ಲ. 1979 ರಲ್ಲಿ ಅವರು ಅಮೇರಿಕಾದ ಪ್ರಿನ್ಸ್‌‌ಟನ್‌ನಲ್ಲಿ ನಡೆದ ವಿಶ್ವ ಧಾರ್ಮಿಕ ಮತ್ತು ಶಾಂತಿ ಸಮ್ಮೇಳನದಲ್ಲಿ ಭಾರತದ ರಾಯಭಾರಿಯಾಗಿದ್ದರು. ಜಗತ್ತಿನಾದ್ಯಂತ ಅವರು ಭಾರತೀಯ ದರ್ಶನಗಳು, ವೇದ, ಕಾವ್ಯಗಳನ್ನು ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ.

ಅವರು ಸಂಸ್ಕೃತ ಮತ್ತು ಕನ್ನಡಗಳಷ್ಟೇ ಇಂಗ್ಲಿಷಿನಲ್ಲೂ ಕೂಡ ನಿರರ್ಗಳವಾಗಿ ಮಾತಾಡುತ್ತಿದ್ದರು. ರಾಬರ್ಟ್ ಜೆಯ್ದೆನ್ ‌ಬೋಸ್ ಅವರಂತಹ ಪಾಶ್ಚಾತ್ಯ ವಿದ್ವಾಂಸರು ಭಾರತೀಯ ತತ್ವಶಾಸ್ತ್ರ ಮತ್ತು ಚಿಂತನಗ್ರಂಥಗಳ ಅಧ್ಯಯನಕ್ಕೆ ಬನ್ನಂಜೆಯವರಲ್ಲಿ ಶಿಷ್ಯವೃತ್ತಿ ಮಾಡಿದ್ದೂ ಇದೆ.

ಬನ್ನಂಜೆಯವರು ದ್ವೈತ ಸಿದ್ಧಾಂತದ ಸ್ಥಾಪಕ ಮಧ್ವಾಚಾರ್ಯರ ಮತ್ತು ಆ ಪರಂಪರೆಯ ವಿದ್ವಾಂಸರೆಲ್ಲರ ಸಮಗ್ರ ಸಾಹಿತ್ಯ ವನ್ನು ಕರತಲಾಮಲಕ ಮಾಡಿಕೊಂಡು, ಹಲವು ಮುಖ್ಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸುವ ಕೆಲಸವನ್ನು ಮಾಡಿದ್ದಾರೆ. ಪಲಿಮಾರು ಮಠದ ಹಿಂದಿನ ಯತಿಗಳಲ್ಲೊೊಬ್ಬರಾದ ಹೃಷೀಕೇಶ ತೀರ್ಥರ ಕೈಬರಹದಲ್ಲಿದ್ದ ‘ಸರ್ವಮೂಲ’ ಗ್ರಂಥಗಳನ್ನು ಟೀಕೆ ಟಿಪ್ಪಣಿಗಳ ಜತೆಗೆ ಸಂಪಾದಿಸಿ ಪ್ರಕಟಿಸಿದ್ದು ಅವರ ದೊಡ್ಡ ಕೊಡುಗೆ ಎಂದು ತಿಳಿಯಲಾಗಿದೆ.

ಸಂಸ್ಕೃತ ಕಾವ್ಯಗಳ ಅನುವಾದ
ಬನ್ನಂಜೆಯವರು ನನ್ನಂತಹ ಸಾಮಾನ್ಯ ಓದುಗರ ಅಭಿಮಾನಕ್ಕೆ ಪಾತ್ರವಾದದ್ದು ಅವರ ಸಂಸ್ಕೃತ ಕಾವ್ಯಗಳ ಕನ್ನಡ ಅನುವಾದದಿಂದಾಗಿ. ಅವರು ಅನುವಾದಿಸಿದ ‘ಬಾಣ ಭಟ್ಟನ ಕಾದಂಬರಿ’ಯನ್ನು ಓದಿ ಬೇಂದ್ರೆೆಯಂತಹವರೇ ಬೆರಗಾದರೆಂದರೆ ಅದರ ಹೊಸತನವನ್ನು ಊಹಿಸಬಹುದು.

ಸಣ್ಣಸಣ್ಣ ವಾಕ್ಯಗಳಲ್ಲಿ ಅವರು ಕಾದಂಬರಿಯನ್ನು ನಮ್ಮ ಮನಸ್ಸಿನಲ್ಲಿ ಸ್ಥಾಯಿಯಾಗಿಸುವ ಪರಿ ಅನನ್ಯ. ಅವರು ಬಳಸುವ ಕನ್ನಡ ಶಬ್ದಗಳನ್ನು ಹಿಂದೆ ಯಾರಾದರೂ ಬಳಸಿರುತ್ತಾರೆ; ಆದರೂ ಅವರು ಅವುಗಳನ್ನು ಬಳಸಿರುವ ರೀತಿಯಲ್ಲಿ ಹಿಂದೆ ಯಾರೂ ಬಳಸಿಲ್ಲ ಅನಿಸಿಬಿಡುತ್ತದೆ.

ಕೃಷ್ಣನೆಂಬ ಸೊದೆಯ ಕಡಲು, ದೇವರ ಸಾವಿರ ಹೆಸರಿನ ಹಾಡು, ಪರಾಶರ ಕಂಡ ಪರತತ್ವ ಇಂತಹ ಸಂಸ್ಕೃತ ಕೃತಿಗಳ ಕನ್ನಡ ಅನುವಾದಗಳ ಇಂತಹ ಶೀರ್ಷಿಕೆಗಳನ್ನು ಕಂಡಾಗಲೇ ಅವರ ಸುಂದರ ಭಾಷೆಯ ಸೊಗಸು ಅರ್ಥವಾಗಬಹುದು. ಒಂದು ಸಂಸ್ಕೃತ ಸ್ತೋತ್ರದ ಕನ್ನಡ ಅನುವಾದದ ಒಂದೆರಡು ಸಾಲುಗಳು ಹೀಗಿದೆ: – ‘ಆನಂದತೀರ್ಥರಿಗೆ ತುಂಬು ಸಂತಸವೆಂಬ ವರವಿತ್ತ ದೈವತವೆ ನಿನಗೆ ನಮನಂ…..’;

‘ಜಗದ ಇರವು – ಮೇಣಳಿವು – ಹುಟ್ಟು – ಐಸಿರಿಯ ಹಿರಿಯ ಯೋಗ ಬಾಳು ತಿಳಿವು – ನಿಯಮನವು ಅಂತೆ ಅಜ್ಞಾನ –  ಬಂಧ – ಮೋಕ್ಷಯಾವ ರಮೆಯ ಕಡೆಗಣ್ಣ ನೋಟಕೀಯೆಲ್ಲ ನಡೆಯುತಿಹುದೋ ಅಂಥವಳನೂ ತನ್ನ ಮೆಲುನೋಟದಿಂದ ಕಾಪಿಡುವ
ಹರಿಗೆ ನಮನಂ ॥1॥

(ಆನಂದತೀರ್ಥರ ಭಕ್ತಿಗೀತೆಗಳು)
ಅವರ ಅನುವಾದವನ್ನು ಓದುವಾಗ ಸಂಸ್ಕೃತ ಎಂತಹ ಅದ್ಭುತ ಭಾಷೆ, ಇದನ್ನು ಕಲಿಯದೆ ತಪ್ಪು ಮಾಡಿದೆವಲ್ಲ ಅನಿಸುತ್ತದೆ!
ಬನ್ನಂಜೆಯವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅವರ ಮಕ್ಕಳು ಈಶಾವಾಸ್ಯ ಪ್ರತಿಷ್ಠಾನವನ್ನು ಮಾಡಿಕೊಂಡಿ ದ್ದಾರೆ.

ಬನ್ನಂಜೆಯವರು ಬೇರೆ ಪ್ರಕಾಶಕರಿಗೂ ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಕೊಡುತ್ತಿದ್ದರು. ಶಾಸ್ತ್ರ ಗ್ರಂಥಗಳನ್ನು ಮಠಗಳಿ ಗಾಗಿಯೇ ಅನುವಾದಿಸಿ, ಸಂಪಾದಿಸಿಕೊಟ್ಟಿರುವ ಕಾರಣ ಅವುಗಳ ಪ್ರಕಾಶನ ಪ್ರತ್ಯೇಕವಾಗಿ ಆಗಿದೆ. ಬನ್ನಂಜೆಯವರನ್ನು ನಾನು ಕಂಡಷ್ಟನ್ನು ಕೂಡ ದಾಖಲಿಸಲು ಈ ಬರಹದಲ್ಲಿ ಸಾಧ್ಯವಾಗಿಲ್ಲ. ಅವರ ಉಪನ್ಯಾಸಮಾಲೆಗಳ ಚರಿತ್ರೆ, ಅವರ ವ್ಯಕ್ತಿತ್ವದ ಇತರ ಮುಖಗಳು, ಅವರ ಆಧ್ಯಾತ್ಮಿಕ ಸಾಧನೆ ಇವುಗಳನ್ನು ಪರಿಚಯಿಸಲು ಇಲ್ಲಿ ಸಾಧ್ಯವಾಗಿಲ್ಲ. ಅಷ್ಟು ದೊಡ್ಡ ವಿದ್ವಾಂಸ ನಮ್ಮ ಕಾಲದಲ್ಲಿ ಬದುಕಿ, ಬಹಳ ದೊಡ್ಡ ಸಾಂಸ್ಕತಿಕ ಜವಾಬ್ದಾರಿಯನ್ನು ನಿರ್ವಹಿಸಿ ಕಣ್ಮರೆ ಯಾದರೆನ್ನುವುದನ್ನು ದಾಖಲಿಸುವು ದಷ್ಟೇ ಇಲ್ಲಿ ಮುಖ್ಯವಾಗಿದೆ.

ಲೇಖಕರನ್ನು ಬೆಳೆಸಿದ ಬನ್ನಂಜೆ

ಬನ್ನಂಜೆಯವರು ಸಾಪ್ತಾಹಿಕ ವಿಭಾಗದ ಸಂಪಾದಕರಾಗಿದ್ದಾಗ ನೀಡಿದ ಪ್ರೋತ್ಸಾಹವನ್ನು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುವ ಹತ್ತೈವತ್ತು ಲೇಖಕರು ಕನ್ನಡದಲ್ಲಿ ಇದ್ದಾರೆ. ಅವರ ಪೈಕಿ ಆಮೇಲೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರೂ ಇದ್ದಾರೆ. ಸಾಕಷ್ಟು ಲೇಖಕರನ್ನು ಅವರು ಬೆಳೆಸಿದ್ದಾರೆ.  ಅವರು ಯುವ ಬರಹಗಾರರಿಗೆ ಅವರ ಬರಹಗಳನ್ನು ಹೇಗೆ ಉತ್ತಮ ಗೊಳಿಸಬಹುದು ಎಂದು ಸಲಹೆ ನೀಡುತ್ತಿದ್ದರು. ದೊಡ್ಡವರು ಸಣ್ಣವರೆನ್ನದೆ ಎಲ್ಲಾ ಬರಹಗಾರರನ್ನು ಬಹಳ ಅಕ್ಕರೆಯಿಂದ ಕಾಣುತ್ತಿದ್ದರು.

ಗೌರವಗಳು
ಬನ್ನಂಜೆ ಗೋವಿಂದಾಚಾರ್ಯರು ಮಾಡಿದ ಶೂದ್ರಕನ ‘ಮೃಚ್ಛಕಟಿಕ’ (ಮೃತ್ – ಶಕಟಿಕ)ದ ಅನುವಾದ ‘ಆವೆಯ ಮಣ್ಣಿನ ಆಟದ ಬಂಡಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ ಬಂದಿದೆ. ಕೇಂದ್ರ ಸರಕಾರವು ಅವರಿಗೆ ಪದ್ಮಶ್ರೀ
ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದೆ. ಉಡುಪಿ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದುಂಟು. ಆದರೆ ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಅವರನ್ನು
ಪರಿಗಣಿಸಲೇ ಇಲ್ಲ ಎನ್ನುವುದು ಬೇಸರದ ವಿಷಯ. ಇದರಿಂದ ಅವರಿಗೇನೂ ನಷ್ಟವಾಗಲಿಲ್ಲ. ಆಯ್ಕೆ ಮಾಡುವ ಹೊಣೆಹೊತ್ತ ವರು ಯೋಗ್ಯತೆಗೆ ಬೆಲೆಕೊಡಲಿಲ್ಲ ಎಂದಷ್ಟೇ ಅರ್ಥವಾಗುತ್ತದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಅವರಿಗೆ ಯಾವ ದೊಡ್ಡ ಪ್ರಶಸ್ತಿ ಯನ್ನೂ ಕೊಡಲಿಲ್ಲ.