Thursday, 3rd October 2024

Book Excerpt: ಬಾಬಾ ನನ್ನೆದುರು ಪ್ರತ್ಯಕ್ಷರಾದಾಗ ಏನೊಂದೂ ತೋಚದೇ ಮೌನವಾಗಿಬಿಟ್ಟೆ!

ಬಾಬಾ (ಸ್ವಾಮಿ ರಾಮ) ಅವರು ದೇಹದಲ್ಲಿ ಇದ್ದಾಗ, ದೇಹ ತೊರೆದಾದ ಬಳಿಕ ಅನೇಕ ಬಾರಿ ಸೂಕ್ಷ್ಮ ಶರೀರದ ಮೂಲಕ ನನ್ನೆದುರು ಕಾಣಿಸಿಕೊಂಡಿದ್ದಾರೆ. ಹಾಗೆ ಕಾಣಿಸಿದ ಒಂದು ಘಟನೆ ನಡೆದದ್ದು ಶಿವರಾತ್ರಿಯ ದಿನ! ಆಗ ನಾವು ಪ್ರತೀ ಶಿವರಾತ್ರಿ ಹಬ್ಬವನ್ನು ಜಾಗರಣೆ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದ್ದೆವು. ಶಿವರಾತ್ರಿ ಹಬ್ಬದ ರಾತ್ರಿ ಪಟ್ಟಾಭಿ ಅವರು ಧ್ಯಾನದ ಮಾರ್ಗದರ್ಶನ ನೀಡುತ್ತಿದ್ದರು. ಆ ರಾತ್ರಿ ಮಹಾದೇವನಿಗೆ ತ್ರಿಕಾಲ ಪೂಜೆಗಳು ನಡೆಯುತ್ತಿದ್ದವು. ಹಲವು ಮಂದಿ ನಮ್ಮ ಸಂಸ್ಥೆಗೆ ಬಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಅಂಥಾ ಒಂದು ದಿನ ನಮ್ಮ ಮನೆಯಲ್ಲಿ ಶಿವರಾತ್ರಿ ಆಚರಣೆ ಭರದಿಂದ ನಡೆಯುತ್ತಿತ್ತು. ನಮ್ಮ ಮಗಳು ಸಾಧನಾ ಆಗಿನ್ನೂ ಎರಡು ವರ್ಷದ ಮಗು. ನಾನು ಅವಳನ್ನು ಮಲಗಿಸುತ್ತಾ, ನಡು ನಡುವೆ ಪೂಜೆ, ಭಜನೆಗಳಲ್ಲಿ ಭಾಗಿಯಾಗುತ್ತಿದ್ದೆ.

ರಾತ್ರಿ ಸುಮಾರು ಹನ್ನೆರಡೂವರೆಯ ಹೊತ್ತು. ಅದು ಮಹಾಪೂಜೆಯ ಸಮಯವಾದ ಕಾರಣ ಮಗಳು ಗಾಢ ನಿದ್ದೆಗೆ ಜಾರಿರುವುದನ್ನು ಖಚಿತಪಡಿಸಿಕೊಂಡು ಜಾಗರಣೆ ನಡೆಯುತ್ತಿದ್ದ ಜಾಗಕ್ಕೆ ಬಂದೆ. ಅಲ್ಲೆಲ್ಲೂ ಪಟ್ಟಾಭಿರಾಮರು ಕಾಣಿಸಲಿಲ್ಲ. ಅಲ್ಲಿದ್ದವರನ್ನು ವಿಚಾರಿಸಿದರೆ ಭಜನೆ ನಡೆಯುವಾಗ ಯಾರೋ ಬಂದು ಅವರ ಬಳಿ ಏನೋ ಹೇಳಿ ಹೋದರು. ಒಂದರ್ಧ ಗಂಟೆಯಲ್ಲಿ ಬರುತ್ತೀನಿ ಅಂತ ಹೇಳಿ ಗುರೂಜಿ ಹೊರಟರು ಎಂಬ ಮಾಹಿತಿ ಸಿಕ್ಕಿತು. ಇಷ್ಟೊತ್ತಿಗೆ ಇವರು ಎಲ್ಲಿ ಹೋಗಿರಬಹುದು ಎಂದು ಗೊತ್ತಾಗಲಿಲ್ಲ. ವಿಚಾರಿಸೋಣ ಎಂದರೆ ಈಗಿನಂತೆ ಮೊಬೈಲ್ ಇರುವ ಕಾಲ ಅಲ್ಲವಲ್ಲ ಅದು.. ಅವರ ದಾರಿ ಕಾಯುವುದು ಬಿಟ್ಟು ಬೇರೆ ದಾರಿ ಇರಲಿಲ್ಲ. ಕೆಲಹೊತ್ತಿನ ನಂತರ ಬಂದ ಪರಿಚಯದವರೊಬ್ಬರು ವಿಷಯ ತಿಳಿಸಿದರು. ನಮ್ಮ ಶಿವರಾತ್ರಿ ಜಾಗರಣೆಗೆ ಪ್ರಸಾದಕ್ಕೆ ತಯಾರಿ ಮಾಡಿ ತೆಗೆದುಕೊಂಡು ಬರುತ್ತಿದ್ದ ಸರಸ್ವತಿ ಅವರಿಗೆ ಅಪಘಾತವಾಗಿದೆ. ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಕೋಮಾಕ್ಕೆ ಜಾರಿದ್ದಾರೆ ಅನ್ನುವ ಸುದ್ದಿ. ಕೇಳಿ ನಮಗೆಲ್ಲ ಆಘಾತ!

ಸರಸ್ವತಿ ನಮ್ಮ ಸಂಸ್ಥೆಯಲ್ಲಿ ಯೋಗ ಕಲಿಸಿಕೊಡುತ್ತಿದ್ದ ಟೀಚರ್‌. ಸ್ತ್ರೀಯರ‌ ಯೋಗ ತರಗತಿ ತೆಗೆದುಕೊಳ್ಳುತ್ತಿದ್ದರು. ಅವರ ತರಗತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಲವಲವಿಕೆಯ ಹೆಣ್ಣುಮಗಳು. ನಮ್ಮ ಮಗಳು ಸಾಧನಾ ಅಂದರೆ ಅವರಿಗೆ ಬಹಳ ಪ್ರೀತಿ. ಹಿಂದಿನ ದಿನವೇ ಅವಳ ಇಷ್ಟದ ತಿಂಡಿ ಏನು ಎಂದು ಕೇಳಿ, ಮರುದಿನ ಅದನ್ನೇ ಮಾಡಿಕೊಂಡು ಬಂದು ಅವಳನ್ನು ಹುಡುಕಿಕೊಂಡು ಹೋಗಿ ಮಡಿಲಲ್ಲಿ ಕೂರಿಸಿ ತಿನ್ನಿಸಿದರೇ ಸಮಾಧಾನ. ನಾನಾಗ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದೆ. ಇಂಥಾ ಕೆಲಸಗಳಿಗೆ ಸಮಯ ಹೊಂದಿಸುವುದು ಸಾಧ್ಯವಾಗುತ್ತಿರಲಿಲ್ಲ. ಇಂಥಾ ಸರಸ್ವತಿ ನನ್ನ ಪ್ರೀತಿಯ ಸ್ನೇಹಿತೆಯೂ ಆಗಿದ್ದರು.
ಅವತ್ತು ಶಿವರಾತ್ರಿಗೆ ತಾನೇ ಪ್ರಸಾದ ತಯಾರಿಸಿಕೊಂಡು ತರುವುದಾಗಿ ಹೇಳಿದ್ದರು. ಮನೆಯಲ್ಲಿ ಪ್ರಸಾದ ತಯಾರಿಸಿ ಕ್ಯಾರಿಯರ್‌ ಹಿಡಿದುಕೊಂಡು ಗಂಡನ ಜೊತೆಗೆ ತಮ್ಮ ಟೂ ವೀಲರ್‌ನಲ್ಲಿ ಹೊರಟಿದ್ದಾರೆ. ಒಂದು ಕ್ಯಾರಿಯರ್ ಅವರ ಕೈಯಲ್ಲಿದೆ. ಇನ್ನೊಂದನ್ನು ಎದುರು ಇಟ್ಟುಕೊಂಡು ಅವರ ಗಂಡ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಶಿವರಾತ್ರಿಯ ಗಾಢಾಂಧಕಾರ. ಈಗಿನಂತೆ ಆಗ ಪ್ರಖರ ಬೀದಿ ದೀಪಗಳಿರಲಿಲ್ಲ. ಇವರಿಗೆ ಕತ್ತಲಲ್ಲಿ ರಸ್ತೆಯಲ್ಲಿ ಹಂಪ್ ಇರುವುದು ಗೊತ್ತಾಗದೇ ಅದಕ್ಕೆ ಢಿಕ್ಕಿ ಹೊಡೆದಿದ್ದಾರೆ. ಬ್ಯಾಲೆನ್ಸ್ ತಪ್ಪಿದೆ. ಹಿಂದುಗಡೆ ಕುಳಿತಿದ್ದ ಸರಸ್ವತಿ ಬಿದ್ದು ಬಿಟ್ಟಿದ್ದಾರೆ. ಸ್ಥಳದಲ್ಲೇ ಪ್ರಜ್ಞೆ ತಪ್ಪಿದೆ. ಅವರ ಪತಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಕೆಲ ಹೊತ್ತಿನ ನಂತರ ಯಾರೋ ಬಂದು ಪಟ್ಟಾಭಿ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಇವರು ಕೂಡಲೇ ಹೊರಟಿದ್ದಾರೆ. ಅಲ್ಲಿ ಹೋದ ಮೇಲೆ ಆಪ್ತರ ಬಳಿ ನನಗೆ ವಿಷಯ ತಿಳಿಸಲು ಹೇಳಿದ್ದಾರೆ. ತಾವು ಸರಸ್ವತಿ ಅವರ ಚೇತರಿಕೆಗೆ ಪ್ರಾರ್ಥಿಸಿ ಅಲ್ಲೇ ಕೂತು ಧ್ಯಾನಸ್ಥರಾಗಿದ್ದಾರೆ.

ಮಾಹಿತಿ ನೀಡಲು ಬಂದವರಿಂದ ಆ ನರ್ಸಿಂಗ್ ಹೋಮ್ ನಂಬರ್‌ ತಗೆದುಕೊಂಡೆ. ಅಲ್ಲಿಗೆ ಕರೆ ಮಾಡಿದರೆ ಆ ಅಪರಾತ್ರಿಯಲ್ಲಿ ಯಾರೂ ಸ್ವೀಕರಿಸುತ್ತಿಲ್ಲ. ಸರಸ್ವತಿ ಅವರ ಸ್ಥಿತಿ ನೆನೆದು ಬೇಸರವಾಯಿತು. ಅದೇ ಹೊತ್ತಿಗೆ ‘ಯಾವುದೇ ಕಷ್ಟ ಬಂದಾಗ ನನ್ನನ್ನು ನೆನೆಸಿಕೋ. ನಾನು ನಿನ್ನನ್ನು ಕಾಪಾಡುತ್ತೇನೆ!’ ಎಂದ ಬಾಬಾರ ಮಾತು ನೆನಪಾಯಿತು. ಹೊರ ಬಾಗಿಲ ಬಳಿ ಕುಳಿತು ಬಾಬಾ ನನಗೆ ನೀಡಿದ್ದ ಮಂತ್ರ ಜಪ ಮಾಡತೊಡಗಿದೆ, ‘ಸರಸ್ವತಿ ಅವರಿಗೆ ಹೀಗಾಗಿದೆ. ಅವರನ್ನು ಮೊದಲಿನ ಸ್ಥಿತಿಗೆ ತರುತ್ತೀರಾ ಬಾಬಾ..’ ಎಂದು ವಿನಮ್ರವಾಗಿ ಪ್ರಾರ್ಥಿಸಿದೆ.

ನನ್ನ ಪ್ರಾರ್ಥನೆ ಪೂರ್ತಿ ಆಗುವ ಮೊದಲೇ ಬಾಬಾ ನನ್ನೆದುರು ನಿಂತಿದ್ದಾರೆ! ಈ ಅನುಭವ ಫಿಸಿಕಲ್ ರಿಯಾಲಿಟಿಗೆ ಬಹಳ ಹತ್ತಿರದಲ್ಲಿರುತ್ತದೆ. ನಾವು ಕಣ್ಣು ಮುಚ್ಚಿಕೊಂಡಾಗ ನಮ್ಮೆದುರು ಯಾರಾದರೂ ನಿಂತರೆ ಒಂದು ಬಗೆಯ ಅನುಭವವಾಗುತ್ತದೆ ಅಲ್ಲವೇ, ಅದೇ ತರಹ. ತೆರೆದ ಗೇಟಿನಿಂದ ಅವರು ಒಳಬಂದು ನನ್ನೆದುರು ನಿಂತ ಹೆಜ್ಜೆ ಶಬ್ದ, ನಡೆಯುವಾಗ ಸರಪರ ಅವರ ಬಟ್ಟೆ ಅಲುಗಾಟದ ಸೂಕ್ಷ್ಮ ಸದ್ದು ಎಲ್ಲವೂ ಅರಿವಿಗೆ ಬಂದಿತು!

ನನ್ನೆದುರು ನಿಂತ ಬಾಬಾ ಅವರ ಮುಖ ಕಡು ಕೋಪದಲ್ಲಿ ಕೆಂಪಾಗಿದೆ. ದೊಡ್ಡದಾಗಿ ಕಣ್ಣು ಬಿಟ್ಟಿದ್ದಾರೆ! ಸಿಟ್ಟು ಬಂದರೆ ಬಾಬಾ ಸಾಕ್ಷಾತ್ ರುದ್ರನೇ! ‘ why did you call me in such an unearthly hour?! ‘ ಅಂತ ಏರು ದನಿಯಲ್ಲಿ ಅಬ್ಬರಿಸುತ್ತಿದ್ದರೆ ನಾನು ಗರಬಡಿದವಳಂತೆ ಕುಳಿತಿದ್ದೆ! ಭಯದಲ್ಲಿ ಮೈ ನಡುಗುತ್ತಿತ್ತು!

ಅವರು ಕರೆದ ಕೂಡಲೇ ಈ ರೀತಿ ಬರುತ್ತಾರೆ ಎಂಬ ಸಣ್ಣ ನಿರೀಕ್ಷೆಯೂ ನನಗಿರಲಿಲ್ಲ. ಬಾಬಾ ಅವರನ್ನು ಪ್ರಾರ್ಥಿಸಿ ನನ್ನ ಸಂದೇಶವನ್ನು ತಲುಪಿಸುವುದು ಮಾತ್ರ ನನ್ನ ಕೆಲಸ ಎಂದು ತಿಳಿದಿದ್ದೆ. ಆದರೆ ಈ ರೌದ್ರವತಾರದಲ್ಲಿ ಬಾಬಾ ನನ್ನೆದುರು ಪ್ರತ್ಯಕ್ಷರಾದಾಗ ಏನೊಂದೂ ತೋಚದೇ ಮೌನವಾಗಿ ಇದ್ದುಬಿಟ್ಟೆ. ಸ್ವಲ್ಪ ಹೊತ್ತಲ್ಲಿ ನನ್ನ ಭಯದ ಸ್ಥಿತಿ ಹಾಗೂ ಮೌನವನ್ನು ಗಮನಿಸಿ ಅವರ ಕೋಪ ಇಳಿಯಿತು. ಬಿಗಿದುಕೊಂಡಿದ್ದ ಮುಖ ಸಡಿಲವಾಯಿತು.
ಆದರೂ ಗಂಭೀರವಾಗಿ ಹೇಳಿದರು, ‘ಬೇರೆಯವರ ಕರ್ಮದಲ್ಲಿ ಮಧ್ಯ ಪ್ರವೇಶಿಸಬಾರದು ಅನ್ನುವುದು ನಿನಗೆ ಗೊತ್ತಿಲ್ಲವೇ?’

ನಾನೇನು ಹೇಳಲಿ? ಮೌನವೇ ಮುಂದುವರಿಯಿತು.

ಅವರು ಕರುಣಾಮೂರ್ತಿ! ಭಯಗೊಂಡ ಶಿಷ್ಯೆಯ ಬಗ್ಗೆ ಕರುಣೆ ಮೂಡಿರಬೇಕು, ‘ಓಕೆ. ನಾನು ಏನೋ ಒಂದು ಮಾಡ್ತೀನಿ’ ಎಂದು ಹೇಳಿ ಅಲ್ಲಿಂದ ಹೊರಟರು.
ಅದಾಗಿ 10 ನಿಮಿಷದಲ್ಲಿ ಟೆಲಿಫೋನ್ ರಿಂಗ್ ಆಯಿತು. ಸರಸ್ವತಿ ಅವರು ಕೋಮಾದಿಂದ ಹೊರಬಂದಿದ್ದರು. ಪಟ್ಟಾಭಿ ಅವರು ಫೋನ್‌ನಲ್ಲಿ ಮಾತನಾಡುತ್ತಾ, ‘ಬಾಬಾ ಇಲ್ಲಿದ್ದ ಅನುಭವವಾಯಿತು’ ಎಂದರು!


ಈ ಕೃತಿ ಯಾವುದರ ಬಗ್ಗೆ?

ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ. ಇದನ್ನು ಬರೆದವರು ಯೋಗಿ ಸ್ವಾಮಿ ರಾಮ ಅವರ ಶಿಷ್ಯೆ- ಗುರು ಸಕಲಮಾ (ಜ್ಯೋತಿ ಪಟ್ಟಾಬಿರಾಮ್). ಹಲವು ಆಧ್ಯಾತ್ಮಿಕ, ಅಲೌಕಿಕ ಅನುಭವಗಳು ಈ ಕೃತಿಯನ್ನು ಶ್ರೀಮಂತಗೊಳಿಸಿವೆ. ಈ ಕೃತಿ ಗುರು ಸಕಲಮಾ ಅವರ ದಿವ್ಯ ಅಧ್ಯಾತ್ಮಿಕ ಅನುಭೂತಿಗಳನ್ನು ಓದುಗರ ಮುಂದೆ ಸಾಕ್ಷಾತ್ಕರಿಸುತ್ತದೆ. ಜಾತಿ ಮತ ಧರ್ಮ ಎಲ್ಲವನ್ನೂ ಮೀರಿ, ಆಧ್ಯಾತ್ಮಿಕ ಹಸಿವನ್ನು ಹೊಂದಿರುವ ಎಲ್ಲರ ದಾಹವನ್ನು ಇಂಗಿಸುವ ಅಪೂರ್ವ ಒಳನೋಟಗಳು ಇಲ್ಲಿವೆ.

ಯಾರು ಓದಬಹುದು?

ಹಿಮಾಲಯದ ಸಾಧು ಸಂತರ ಬಗ್ಗೆ ಆಸಕ್ತಿ ಹೊಂದಿರುವವರು, ಆಧ್ಯಾತ್ಮಿಕ ಜೀವನದ ಬಗ್ಗೆ ಪ್ರೀತಿ ಹೊಂದಿರುವವರು, ಲೌಕಿಕ ಜೀವನದಲ್ಲಿದ್ದುಕೊಂಡೇ ನೆಮ್ಮದಿಯನ್ನು ಅರಸುತ್ತಿರುವವರು, ವಿದ್ಯಾರ್ಥಿಗಳು, ಗಂಭೀರ ಆಧ್ಯಾತ್ಮಿಕ ಸಾಧಕರು- ಹೀಗೆ ಎಲ್ಲರೂ ಓದಬಹುದಾದ ಕೃತಿಯಿದು.

ಯಾವಾಗ, ಎಲ್ಲಿ ಬಿಡುಗಡೆ?

ʼಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗಾಯನ ಸಮಾಜದಲ್ಲಿ ಸೆ.22ರಂದು (ಭಾನುವಾರ) ಬೆಳಗ್ಗೆ 10.30ಕ್ಕೆ ಬಿಡುಗಡೆಯಾಗಲಿದೆ. ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಅಹಲ್ಯಾ ಶರ್ಮ, ಜನಪ್ರಿಯ ಚಿತ್ರನಟಿ ಪ್ರಿಯಾಂಕ ಉಪೇಂದ್ರ ಕಾರ್ಯಕ್ರಮದ ಅತಿಥಿಗಳಾಗಿರುತ್ತಾರೆ. ಗುರು ಸಕಲಮಾ ಸಾನಿಧ್ಯ‌ ವಹಿಸಲಿದ್ದಾರೆ.

ಇದನ್ನೂ ಓದಿ: Book release: ವೆಂಕಟೇಶ್ವರಸ್ವಾಮಿ ದೇವಸ್ಥಾನ ಪುಸ್ತಕ ಬಿಡುಗಡೆ