ಸೌರಭ ರಾವ್
ಪರಿಸರ ರಕ್ಷಣೆಗೆ ಇಂಬುಕೊಡುವ ‘ಸೇಕ್ರೆಡ್ ನೇಚರ್’ ಪುಸ್ತಕ ಕೊಳ್ಳುವುದರ ಮೂಲಕ ನಾವೂ ಈ ಅಭಿಯಾನಕ್ಕೆ ಅಳಿಲು ಸೇವೆ ಸಲ್ಲಿಸೋಣ!
ಅವೆಷ್ಟು ಪ್ರಪಂಚಗಳನ್ನು ಕುಳಿತ ಜಾಗದಿಂದಲೇ ಅನ್ವೇಷಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಪುಸ್ತಕಗಳು ತಂದುಕೊಡುತ್ತವೆ. ನಾವು ಮನುಷ್ಯರು ನಮ್ಮ ಲೋಕದಲ್ಲೇ ಮುಳುಗಿಹೋಗುವ; ನಮ್ಮ ಮಾನಸಿಕ, ಬೌದ್ಧಿಕ, ಭಾವನಾತ್ಮಕ ತೆರವುಗಳನ್ನು ಆದಷ್ಟೂ ವಿವೇಕದಿಂದ, ಪ್ರಾಜ್ಞರಾಗಿ ಸಂಚರಿಸಲು, ಒಳ್ಳೆಯ ಜೀವನ ನಡೆಸಲು ಸಹಾಯ ಮಾಡಬಲ್ಲ ಪುಸ್ತಕಗಳೊಂದು ಕಡೆ.
ಮತ್ತೊಂದೆಡೆ, ನಮ್ಮ ಅಸ್ತಿತ್ವವನ್ನೂ ಮೀರಿದ, ನಮ್ಮನ್ನು ಹೊರತಾಗಿಯೂ ಬಹುಷಃ ಇನ್ನಷ್ಟು ಚಂದವಾಗಿ ಬದುಕಬಲ್ಲ ಜೀವಜಾಲದ ಬೇರೆ ಪ್ರಾಣಿಗಳ ಬಗ್ಗೆ, ಈ ಭೂಮಿಯ ಮೇಲೆ ಬದುಕಿರುವ ಎಲ್ಲ ಜೀವಸಂಕುಲದ ಬಗ್ಗೆ ಬೆರಗು ಮೂಡಿಸಿ, ಅದರ ಮೂಲಕ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಸತ್ವಯುತ, ಸುಂದರ ಮಾಡಿಕೊಳ್ಳುವ ಅವಕಾಶಗಳನ್ನು ತೆರೆದು ಬಿಡುವ ಪುಸ್ತಕ ಗಳಿನ್ನೊಂದು ಕಡೆ. ಈ ಎರಡನೇ ರೀತಿಯ ಪುಸ್ತಕಗಳಲ್ಲಿ ಇಂದು ಪರಿಚಯ ಮಾಡಿಕೊಡುತ್ತಿರುವುದು ‘ಸೇಕ್ರೆಡ್ ನೇಚರ್ – ಭಾಗ 2’ರ ಬಗ್ಗೆ.
ಒಂದೆರಡು ತಿಂಗಳುಗಳ ಹಿಂದೆ ‘ವಿರಾಮ’ಕ್ಕೆ ಸಂದರ್ಶನ ಕೊಟ್ಟಿದ್ದ ‘ದ ಬಿಗ್ ಕ್ಯಾಟ್ ಪೀಪಲ್’, ‘ಬಿಗ್ ಕ್ಯಾಟ್ ಡಯರಿ’
ಖ್ಯಾತಿ ಯ ಜಾನಥನ್ ಸ್ಕಾಟ್, ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಮತ್ತು ಸಂರಕ್ಷಣಾವಾದಿ. ಬಿಬಿಸಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್ ಮೊದಲಾದ ಟೀವಿ ವಾಹಿನಿಗಳಲ್ಲಿ ದಶಕಗಳ ಹಿಂದೆಯೇ ಪ್ರಸಾರವಾದ ಅನೇಕ ಆಫ್ರಿಕಾ ವನ್ಯಜೀವಿ ಕಾರ್ಯಕ್ರಮಗಳ ಸಹನಿರೂಪಕ.
ಇಂದಿಗೂ ವನ್ಯಜೀವಿಗಳ ಸಂರಕ್ಷಣೆಗೆ ಅವಿರತ ದುಡಿಯುತ್ತಿರುವ ಸರ್ ಡೇವಿಡ್ ಆಟನ್ಬರೋ, ಡಾ ಜಾರ್ಜ್ ಶ್ಯಾಲರ್ ಅವರಂತಹ ದಿಗ್ಗಜರೂ ಜಾನಥನ್ ಸ್ಕಾಟ್ ಮತ್ತು ಅಷ್ಟೇ ಹೆಸರಾಂತ ವನ್ಯಜೇವಿ ಛಾಯಾಗ್ರಾಹಕರಾದ ಅವರ ಪತ್ನಿ, ಆಂಜೆಲಾ ಸ್ಕಾಟ್ ಅವರ ಕೆಲಸದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಈ ಸ್ಕಾಟ್ ದಂಪತಿ ಈ ಫೆಬ್ರವರಿ ತಿಂಗಳು ಪೂರ್ತಿ ಕಿಕ್ ಸ್ಟಾರ್ಟರ್ ಮೂಲಕ ತಮ್ಮ ’ಸೇಕ್ರೆಡ್ ನೇಚರ್’ ಪುಸ್ತಕದ ಎರಡನೇ ಭಾಗಕ್ಕೆ ಒಂದು ಅಭಿಯಾನ ನಡೆಸುತ್ತಿದ್ದಾರೆ.
‘ಸೇಕ್ರೆಡ್ ನೇಚರ್’ ಹಿಂದೆ ಇರುವ ಚಿಂತನೆ ವನ್ಯಜೀವಿ ಸಂರಕ್ಷಣೆ. ವನ್ಯಜೀವಿಗಳಲ್ಲಿ ಅಪಾರ ಆಸಕ್ತಿ ಇರುವವರಿಗೆ ಅವುಗಳ ಸಂರಕ್ಷಣೆಗೆ ಹೇಗೆ ನಮ್ಮ ಅಳಿಲುಸೇವೆ ಸಲ್ಲಿಸಬಹುದು ಎಂಬ ಹುಡುಕಾಟದಲ್ಲಿದ್ದವರಿಗೆ ಹೀಗೊಂದು ಅವಕಾಶ. ವನ್ಯಜೀವಿ ಸಂರಕ್ಷಣೆಯ ಬಗ್ಗೆ ಕೇವಲ ಭಾಷಣಗಳನ್ನು ಮಾಡಿಬಿಟ್ಟರೆ ಅಥವಾ ಪುಟಗಟ್ಟಲೆ ಬರೆದುಬಿಟ್ಟರೆ ಮಾತ್ರ ಜನರಲ್ಲಿ ಅದರ ಮಹತ್ವದ ಬಗ್ಗೆೆ ಅರಿವು ಮೂಡಿಸುವುದು ಕಷ್ಟ ಎಂಬ ಅರಿವುಳ್ಳ ‘ಸೇಕ್ರೆಡ್ ನೇಚರ್. ಆಲೋಚನೆಯ ಹಿಂದಿರುವ ತತ್ವ: ಇನ್‌ಸ್ಪೈರ್, ಎಜುಕೇಟ್ ಅಂಡ್ ಕನ್ಸರ್ವ್.
ಸ್ಫೂರ್ತಿಯಿಲ್ಲದೇ ಯಾವ ಕೆಲಸವೂ ಅಚ್ಚುಕಟ್ಟಾಗಿ ನಡೆಯುವುದಿಲ್ಲ. ಒಮ್ಮೆ ಸಂರಕ್ಷಣೆಯ ಬಗ್ಗೆ ಒಬ್ಬರಲ್ಲಿ ಸ್ಫೂರ್ತಿ ಹುಟ್ಟಿದ್ದೇ
ಆದಲ್ಲಿ ನಂತರ ಬೇಕಿರುವುದು ಅದರ ಬಗೆಗಿನ ಜ್ಞಾನ, ಅರಿವು. ನಂತರ ಸಂರಕ್ಷಣೆ. ಅಂತರ್ಜಾಲದ ಮೂಲಕ ಇಂದು ಪ್ರಪಂಚ ಪುಟ್ಟದಾಗಿದೆ. ಯಾರೋ ಎಲ್ಲೋ ಒಂದು ಮೂಲೆಯಲ್ಲಿ ಒಂದು ಉದಾತ್ತ ಚಿಂತನೆ ಮಾಡಿದರೆ ಅದು ಎಲ್ಲ ಕಡೆಗೆ ನಿಮಿಷ ಮಾತ್ರದಲ್ಲಿ ಹರಡಿಬಿಡಬಲ್ಲ ಸಾಧ್ಯತೆಯಿದೆ.
ಎಲ್ಲೇ ಒಳ್ಳೆಯ ಕೆಲಸ ನಡೆಯುತ್ತಿದ್ದರೂ ಕುಳಿತಲ್ಲಿಂದಲೇ ನಮ್ಮ ಕೈಲಾದ ಸಹಾಯ, ಬೆಂಬಲ ನೀಡುವ ಅವಕಾಶಗಳು ಬೆರಳ ತುದಿಗಳಿಗೆ ಸಿಗುತ್ತವೆ. ಹಾಗೆಯೇ, ವನ್ಯಜೀವಿ ಪ್ರೇಮಿಗಳಿಗೆ, ಒಂದು ಪುಸ್ತಕ ಕೊಳ್ಳುವುದರ ಮೂಲಕ, ಪುಸ್ತಕ ಅಚ್ಚುಮಾಡಿ ಅಂಚೆ ಮೂಲಕ ತಲುಪಿಸುವ ವೆಚ್ಚ ಬಿಟ್ಟು ಮಿಕ್ಕ ಹಣವೆಲ್ಲಾ ವನ್ಯಜೀವಿ ಸಂರಕ್ಷಣೆಗೆ ಮೀಸಲಿಡುವ ಅವಕಾಶ ಈ ‘ಸೇಕ್ರೆಡ್ ನೇಚರ್’ ಎಂದರೆ ಅತಿಶಯೋಕ್ತಿಯಿಲ್ಲ.
ಯಾವುದೇ ವಿಷಯದ ಬಗ್ಗೆ ಸ್ಫೂರ್ತಿ ನೀಡಬೇಕಾದರೆ ಕಲೆಗಿಂತಲೂ ಹೆಚ್ಚು ಪ್ರಭಾವಿ ಮಾಧ್ಯಮ ಮತ್ಯಾವುದಿದೆ? ಒಂದು ಒಳ್ಳೆಯ ಛಾಯಾಚಿತ್ರ ಅಥವಾ ಲೇಖನ ಅಥವಾ ಕವನ ಅಥವಾ ವರ್ಣಚಿತ್ರ ಅಥವಾ ಹಾಡು… ಹೀಗೆ ಯಾವುದೇ ಕಲೆಯ ರೂಪವಾದರೂ ಅರೂಪ ವಿಷಯಗಳನ್ನು ನಮ್ಮ ಗ್ರಹಿಕೆಗೆ ನಿಲುಕಿಸಲು ಸಹಾಯ ಮಾಡುತ್ತದೆ. ಇದೇ ಪ್ರಯತ್ನ ಈ ಪುಸ್ತಕದಲ್ಲಿ ನಡೆಯುತ್ತಿದೆ. ಜೀವವೈವಿಧ್ಯತೆ ಮೆರೆವ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ವನ್ಯಜೀವಿಗಳ ಛಾಯಾಗ್ರಹಣ ಮಾಡಿರುವ ಸ್ಕಾಟ್ ದಂಪತಿಯ ಕಳೆದ ಹಲವಾರು ದಶಕಗಳ ಅತ್ಯುತ್ತಮ ವನ್ಯಜೀವಿ
ಛಾಯಾಚಿತ್ರಗಳು ಸೇಕ್ರೆಡ್ ನೇಚರ್ ಪುಸ್ತಕದಲ್ಲಿವೆ. ಈ ಪುಸ್ತಕದ ಮುಖಪುಟದಲ್ಲಿ ಇರುವುದೇ ಭಾರತದ ರಾಷ್ಟ್ರೀಯ ಪ್ರಾಣಿ, ಹುಲಿ! ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಅದಕ್ಕಾಗಿ ಬದ್ಧವಾಗಿರುವ ಸಂಸ್ಥೆಗಳ ಜೊತೆಯೇ ಪ್ರತಿದಿನ ಕೆಲಸ ಮಾಡಬೇಕಿಲ್ಲ.
ಇಂತಹ ಅವಕಾಶಗಳು ಬಂದಾಗ ಒಂದು ಪುಸ್ತಕ ಕೊಳ್ಳುವುದರಿಂದಲೋ, ಯಾವುದಾದರೂ ಒಂದು ಅಭಿಯಾನದ ಉದ್ದೇಶ
ನಿಮ್ಮ ಮನಸ್ಸಿಗೂ ಹತ್ತಿರವಾಗಿದ್ದರೋ ಅಥವಾ ಕೈಲಾದಾಗ ದೇಣಿಗೆಯ ರೂಪದಲ್ಲೋ ನಾವೂ ಸಂರಕ್ಷಣಾ ಕೆಲಸಗಳಲ್ಲಿ
ಪಾಲ್ಗೊಳ್ಳಬಹುದು.
ಸೇಕ್ರೆಡ್ ನೇಚರ್ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದ್ದರೆ ಮತ್ತು ನಿಮ್ಮ ಕಾಫೀ-ಟೇಬಲ್ ಪುಸ್ತಕಗಳ ಸಂಗ್ರಹಕ್ಕೆ ಮತ್ತೊಂದು ಸುಂದರ ಸೇರ್ಪಡೆಯ ಹುಡುಕಾಟದಲ್ಲಿದ್ದರೆ, ಈ ಜಾಲತಾಣಕ್ಕೆ ಭೇಟಿ ನೀಡಿ: https://bit.ly/3aXZ89z