Tuesday, 10th September 2024

k n venkatasubbarao column: ರಕ್ತ ಹರಿಸಿದ ಬ್ರಿಟಿಷರು

ಕೆ.ಎನ್.ವೆಂಕಟಸುಬ್ಬರಾವ್

ವಿಲ್ ಡ್ಯುರಾಂಟ್ ಅವರ ‘ದಿ ಕೇಸ್ ಫಾರ್ ಬ್ರಿಟಿಷರು ಇಂಡಿಯಾ’ ಪುಸ್ತಕವು ಈಗ ಕನ್ನಡಕ್ಕೆ ಅನುವಾದಗೊಂಡಿದೆ. ಕೆ.ಎನ್. ವೆಂಕಟಸುಬ್ಬರಾವ್ ಅವರು ಆ ಪ್ರಮುಖ ಪುಸ್ತಕವನ್ನು ‘ಇಂಡಿಯಾ ಅಂದು’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ.

ಅಮೃತಸರದಲ್ಲಿ ನಡೆದಿದ್ದ ಹತ್ಯಾಕಾಂಡದ ಬಗೆಗಿನ ಎಲ್ಲ ಮಾಹಿತಿಗಳನ್ನೂ ಹಲವಾರು ತಿಂಗಳ ಕಾಲ ಇಂಗ್ಲೆಂಡಿನ ಸಂಸತ್ತನ್ನೂ ಸೇರಿದಂತೆ ಪ್ರಪಂಚದೆಲ್ಲೆಡೆ ಮರೆಮಾಚಲಾಗಿತ್ತು. ಆದರೆ ಇದೇ ಹತ್ಯಾಕಾಂಡ
೧೯೨೧ರ ಕ್ರಾಂತಿಗೆ ರೂವಾರಿಯಾಗಿತ್ತು. ಪಂಜಾಬಿನ ಪ್ರಖ್ಯಾತ ನಗರವಾದ ಅಮೃತಸರದಲ್ಲಿ ರೌಲೆತ್ ಕಾಯ್ದೆಗಳ ವಿರುದ್ಧ ೧೯೧೯ರ ಮಾರ್ಚ್ ೩೦ ಮತ್ತು ಏಪ್ರಿಲ್ ೬ರಂದು ಹರತಾಳವನ್ನು ಯಶಸ್ವಿಯಗಿ ಆಚರಿಸ ಲಾಗಿತ್ತು. ಇಂಡಿಯಾದ ನಿವಾಸಿಯಾಗಿದ್ದ ಇಂಗ್ಲಿಷ್ ಪಾದ್ರಿಯೊಬ್ಬರ ಪ್ರಕಾರ: ‘ಎಲ್ಲವೂ ವ್ಯವಸ್ಥಿತವಾಗಿತ್ತು. ಗುಂಪುಗಳ ನಡುವೆಯೇ ಯೂರೋಪಿಯನ್ನರು ಯಾವುದೇ ಅಡೆತಡೆ ಅಪಾಯಗಳಿಲ್ಲದೆ ಹಾದು ಹೋಗ ಬಹುದಿತ್ತು. ಅಹಿಂಸೆ ಮತ್ತು ಅಸಹಕಾರಕ್ಕೆ ಅದೊಂದು ಅತ್ಯುತ್ತಮ ಉದಾಹರಣೆಯಾಗಿತ್ತು.’

ಈ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸೈ-ದ್ದೀನ್ ಕಿಚ್ಲು ಮತ್ತು ಡಾ. ಸತ್ಯಪಾಲ್ ಅವರನ್ನು ಸರ್ಕಾರ ಏಪ್ರಿಲ್ ೯ರಂದು ಬಂಧಿಸಿತ್ತು. ಈ ಈರ್ವರ ಬಂಧನದ ಸುದ್ದಿ ಹರಡಿದಂತೆ ಜನ ಗುಂಪುಗುಂಪಾಗಿ ರಸ್ತೆಗೆ ಇಳಿದಿದ್ದರು. ಗುಂಪು ತಮ್ಮ ನಾಯಕರ ಬಂಧನದ ಬಗ್ಗೆ ವಿರೋಧ ವ್ಯಕ್ತಪಡಿಸಲು ನೇರವಾಗಿ ಪೊಲೀಸ್ ಡೆಪ್ಯುಟಿ ಕಮೀಷನ ಕಚೇರಿಯತ್ತ ತೆರಳುತ್ತಿತ್ತು. ಹಾಗೆ ತೆರಳುವಾಗ ಗುಂಪಿನಲ್ಲಿ ಇದ್ದ ಕೆಲವರು ಪೊಲೀಸರತ್ತ ಕಲ್ಲುಗಳನ್ನು ಎಸೆದಿದ್ದರು. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿ ಹತ್ತು ಜನರ ಜೀವ ಪಡೆದಿದ್ದರು. ಶವವಾಗಿ ಬಿದ್ದಿದ್ದ ತಮ್ಮವರನ್ನು ಕಂಡಂತೆ ಕೋಪೋದ್ರಿಕ್ತ ಗುಂಪು ಹಿಂಸಾಚಾರಕ್ಕೆ ತಿರುಗಿತ್ತು. ಗಲಭೆ-ಹಿಂಸೆ ಸರ್ಕಾರದ ಆಸ್ತಿಯನ್ನು ನಾಶಮಾಡಿದ್ದಲ್ಲದೆ ಐವರು ಇಂಗ್ಲಿಷರ ಪ್ರಾಣ ಕಸಿದಿತ್ತು. ತೀವ್ರವಾಗಿ ಗಾಯಗೊಂಡ ಮತಪ್ರಚಾರಕಿಯೊಬ್ಬಳನ್ನು ಹಿಂದೂಗಳು ಸುರಕ್ಷಿತ ಜಾಗಕ್ಕೆ
ಒಯ್ದಿದ್ದರು. ಉದ್ರಿಕ್ತ ಗುಂಪನ್ನು ಸಮಾಧಾನಪಡಿಸಲು ಯತ್ನಿಸಿದ ಸುಶಿಕ್ಷಿತ ಇಂಡಿಯನ್ನರು ವಿಫಲರಾಗಿದ್ದರು. ಇಂಡಿಯಾದ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಸರ್ಕಾರದ ನೆರವಿಗೆ ನಿಂತಿದ್ದರು.

ಏಪ್ರಿಲ್ ೧೦ ಮತ್ತು ೧೧ರಂದು ಒಟ್ಟು ೬೦೦ ಸೈನಿಕರ ತುಕಡಿಗಳು ಅಮೃತಸರಕ್ಕೆ ಧಾವಿಸಿದ್ದವು. ಏಪ್ರಿಲ್ ೧೨ರಂದು ಧಾವಿಸಿದ್ದ ಬ್ರಿಗೇಡಿಯರ್ ಜನರಲ್ ಡೈಯರ್ ತುಕಡಿಗಳ ಮುಂದಾಳತ್ವ ವಹಿಸಿದ್ದನು. ಅಂದಿನಿಂದ ಕಾನೂನು ಮತ್ತು ಶಿಸ್ತು ಪಾಲನೆಗೆ ಕ್ರಮ ಕೈಗೊಂಡು ಗುಂಪುಗಳನ್ನು ಚದುರಿಸಿ ಶಾಂತ ವಾತಾವರಣ ಸೃಷ್ಟಿಸಲಾಗಿತ್ತು. ಹಲವಾರು ಜನರನ್ನು ಬಂಽಸಿದ್ದ ಡೈಯರ್, ಏಪ್ರಿಲ್ ೧೩ರಂದು ಅಮೃತಸರ ನಗರದ ಹಾದಿಬೀದಿಗಳಲ್ಲಿ ಡಂಗುರ ಹೊಡೆಸಿ ಜನರ ಸಭೆ ಕರೆದಿದ್ದನು. ಪರವಾನಗಿ ಇಲ್ಲದೆ ನಗರದ ಹೊರಗೆ ಹೋಗಬಾರದು, ಸಭೆಗಳನ್ನು, ಮೆರವಣಿಗೆಗಳನ್ನು ನಡೆಸಬಾರದು, ಮೂವರಿಗಿಂತ ಹೆಚ್ಚು ಮಂದಿ ಗುಂಪು
ಸೇರಬಾರದು ಎಂದು ಸಭೆಯಲ್ಲಿ ಘೋಷಿಸಿದ್ದನು. ಈ ಮಧ್ಯೆ ಡೈಯರ್ ಮಾಡಿದ್ದ ಘೋಷಣೆಗಳ ಬಗ್ಗೆ ತಿಳಿಯದ ನೆರೆಯ ಜಿಲ್ಲೆಗಳ ೧೦,೦೦೦ ಮಂದಿ ಹಿಂದೂಗಳು ಧಾರ್ಮಿಕ ಉತ್ಸವವನ್ನು ಆಚರಿಸಲು ಜಲಿಯನ್‌ವಾಲಾ ಬಾಗ್ ನಲ್ಲಿ ಸಮಾವೇಶಗೊಂಡಿದ್ದರು. ಜಲಿಯನ್‌ವಾಲಾ ಬಾಗ್ ನಾಲ್ಕೂ ದಿಕ್ಕಿನಲ್ಲಿ ಎತ್ತರದ ಗೋಡೆಗಳಿಂದ ಸುತ್ತುವರೆದಿದ್ದ, ಆಗಮನ-ನಿರ್ಗಮನಕ್ಕೆ ಕಿರಿದಾದ ಒಂದೆರಡು ಓಣಿಗಳಿದ್ದ ಪಾಳುಬಿದ್ದ ಉದ್ಯಾನವನವಾಗಿತ್ತು.

ಇಂಥ ಉದ್ಯಾನವನದಲ್ಲಿ ಸೇರಿರುವುದನ್ನು ತಿಳಿದಂತೆಯೇ ಮೆಷಿನ್ ಗನ್ನುಗಳಿಂದ ಸಜ್ಜಿತವಾಗಿದ್ದ ಸೇನಾ ತುಕಡಿ ಮತ್ತು ಶಸಸಜ್ಜಿತ ಮೋಟಾರ್ ಕಾರುಗಳ ಸಹಿತ ಡೈಯರ್ ಸ್ಥಳಕ್ಕೆ ಧಾವಿಸಿದ್ದ. ಅಲ್ಲಿ ಬೃಹತ್ ಗುಂಪನ್ನು ನೋಡಿದಂತೆ ಜನ ತನ್ನ ಆeಯನ್ನು ಉಲ್ಲಂಸಿ ಸಭೆ ಸೇರಿದ್ದಾರೆ ಎಂದು ನಿರ್ಧರಿಸಿದ್ದ. ಕಿಂಚಿತ್ ಮುನ್ಸೂಚನೆ ನೀಡದೆ ಅಥವಾ ಜನರಿಗೆ ತಾವು ಸೇರಿರುವ ಉದ್ದೇಶವನ್ನು ತಿಳಿಸಲು ಆವಕಾಶ ನೀಡದೆ ಜನಸಮೂಹದತ್ತ ಗುಂಡು ಹಾರಿಸುವಂತೆ ತುಕಡಿಗೆ ಆದೇಶ ನಿಡಿದ್ದ, ಪ್ರತಿರೋಧ ತೋರಲಾಗದ ಸ್ಥಿತಿಯಲ್ಲಿದ್ದ ಜನ ಭಯದಿಂದ ಚೀರುತ್ತಾ ಉದ್ಯಾನವನವನ್ನು ತೊರೆಯಲು ಓಣಿಗಳತ್ತ ನುಗ್ಗತೊಡಗಿದ್ದರು. ತಂದಿರುವ ಮದ್ದುಗುಂಡುಗಳು ಖಾಲಿಯಾಗುವವರೆಗೂ ನೂಕುನುಗ್ಗಲಾಗಿದ್ದ ಓಣಿಯತ್ತಲೇ ಗುಂಡು ಹಾರಿಸುವಂತೆ ಡೈಯರ್ ಖುದ್ದಾಗೇ ಸೂಚಿಸಿದ್ದ.

ಹತ್ತು ನಿಮಿಷಗಳಲ್ಲಿ ಕಗ್ಗೋಲೆಯ ಕಾರ್ಯ ಅಂತ್ಯವಾಗಿತ್ತು. ‘ಗುರಿ ಚೆನ್ನಾಗಿತ್ತು’ ಎಂದು ಡೈಯರ್ ಘೋಷಿಸಿದ್ದ. ೧೫೦೦ ಹಿಂದೂಗಳು ನೆಲಕ್ಕೆ ಒರಗಿದ್ದರು. ಆ ಪೈಕಿ ೪೦೦ ಮಂದಿ ಮೃತಪಟ್ಟಿದ್ದರು. ಗಾಯಗೊಂಡವ ರಿಗೆ ನೆರವು ನೀಡದಂತೆ ಸೈನಿಕರಿಗೆ ಸೂಚಿಸಿದ್ದ ಡೈಯರ್ ಇಪ್ಪತ್ನಾಲ್ಕು ಗಂಟೆಗಳ ಕಾಲ ಹಿಂದೂಗಳು ರಸ್ತೆಗೆ ಇಳಿಯಕೂಡದು ಎಂದೂ ಆಜ್ಞೆ ಹೊರಡಿಸಿದ್ದ. ಆ ಮೂಲಕ ಗಾಯಗೊಂಡು ಬಿದ್ದಿದ್ದವರಿಗೆ ಅವರ ಬಂಧುಬಾಂಧವರು ಒಂದು ಲೋಟ ನೀರು ನೀಡುವುದಕ್ಕೂ ತಡೆಹಾಕಿದ್ದ. ತರುವಾಯ, ಅಧಿಕೃತ ಭಯೋತ್ಪಾದನೆ ಆರಂಭವಾಗಿತ್ತು. ಯಾವ ರಸ್ತೆಯಲ್ಲಿ ಮತಪ್ರಚಾರಕಿ ಘಾಸಿಗೊಂಡಿದ್ದಳೋ ಆ ರಸ್ತೆಯನ್ನು ಬಳಸುತ್ತಿದ್ದ ಹಿಂದೂಗಳು ಹೊಟ್ಟೆಯ ಮೇಲೆ ತೆವಳುವ ಶಿಕ್ಷೆ ವಿಽಸಿದ್ದ. ಶಿಕ್ಷೆಗೆ ಒಳಗಾಗಿ ತೆವಳುತ್ತಿದ್ದವರು ತಲೆ ಎತ್ತಿ ಏಳಲು ಯತ್ನಿಸಿದರೆ ಸೈನಿಕರು ಬಂದೂಕಿನ ಹಿಂಬದಿಯಿಂದ ತಲೆಯ ಮೇಲೆ ಮೊಟಕುತ್ತಿದ್ದರು.

ಡೈಯರ್ ೫೦೦ ಪ್ರೊಫೆಸರ್‌ಗಳನ್ನು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿ ಅವರೆಲ್ಲರೂ ಪ್ರತಿದಿನ ಪೊಲೀಸ್ ಠಾಣೆಯಲ್ಲಿ ಹಾಜರಿಗೆ ಬರಬೇಕು ಎಂದು ಕಟ್ಟಳೆ ವಿಽಸಿದ್ದ. ಅವರಲ್ಲಿ ಬಹಳಷ್ಟು ಮಂದಿ ಠಾಣೆಗೆ ಬರಲು ಪ್ರತಿ ದಿನ ನಡಿಗೆಯಲ್ಲೇ ಹದಿನಾರು ಮೈಲಿ ಕ್ರಮಿಸಬೇಕಿತ್ತು. ಯಾವುದೇ ತಪ್ಪು ಮಾಡದ ಶಾಲಾ ಬಾಲಕರನ್ನೂ ಸೇರಿದಂತೆ ನೂರಾರು ನಾಗರಿಕರನ್ನು ಸಾರ್ವಜನಿಕವಾಗೇ ಛಡಿಯಿಂದ ಥಳಿಸುತ್ತಿದ್ದ. ಬೃಹತ್ ಬೋನುಗಳನ್ನು ತಯಾರಿಸಿ ಒಳಗೆ ಬಂದಿಗಳನ್ನು ಕೂಡಿಹಾಕಿ ಅವರನ್ನು ರಣ ಬಿಸಿಲಿನಲ್ಲಿ ಇರಿಸುತ್ತಿದ್ದ. ಕೆಲವು ಬಂದಿಗಳನ್ನು ಹಗ್ಗದಿಂದ ಬಂಽಸಿ ಅವರನ್ನು ಹದಿನೈದು ಗಂಟೆಗಳ ಕಾಲ ತೆರೆದ ಲಾರಿಗಳ ಮೇಲೆ ನಿಲ್ಲಿಸುತ್ತಿದ್ದ. ಸಾಧುಸಂತರನ್ನು ನಗ್ನಗೊಳಿಸಿ ಅವರ ದೇಹಕ್ಕೆ ಸುಣ್ಣ ಬಳಿಸಿ ಅವರನ್ನು ಬಿಸಿಲಿನಲ್ಲಿ ನಿಲ್ಲಿಸುತ್ತಿದ್ದ. ಸೂರ್ಯನ ಶಾಖದಿಂದ ಸುಣ್ಣ ಒಣಗಿ ಚರ್ಮ ಬಿರಿದಾಗ ಈ ಸಾಧುಸಂತರನ್ನು ಯಾತನೆಗೆ
ಒಳಪಡಿಸುವುದು ಡೈಯರ್ ಶಿಕ್ಷೆಯ ಉದ್ದೇಶವಾಗಿತ್ತು.

ಇಂಡಿಯನ್ನರ ಮನೆಗಳ ನೀರು ಮತ್ತು ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿ, ಹಿಂದೂಗಳು ತಾವು ಹೊಂದಿರುವ ವಿದ್ಯುತ್ ಪಂಖಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಿದ್ದ. ಹಾಗೆ ಒಪ್ಪಿಸಲಾಗಿದ್ದ
ಪಂಖಗಳನ್ನು ಬ್ರಿಟಿಷರಿಗೆ ಪುಕ್ಕಟ್ಟೆಯಾಗಿ ನೀಡಿದ್ದ. ಕಡೆಯದಾಗಿ ಬಯಲುಗಳಲ್ಲಿ ದುಡಿಯುತ್ತಿದ್ದ ಮಹಿಳೆಯರು ಮತ್ತು ಪುರುಷರ ಮೇಲೆ ವಿಮಾನಗಳಿಂದ ಬಾಂಬುಗಳ ದಾಳಿ ನಡೆಸಿದ್ದ. ಸೇನೆಯ ವಿಘ್ನಸಂತೋಷದ ಪ್ರತೀಕವಾಗಿದ್ದ ಈ ರಾಕ್ಷಸೀ ಸ್ವೇಚ್ಛಾಚಾರ ಸುಮಾರು ಆರು ತಿಂಗಳ ಕಾಲ ಪ್ರಪಂಚಕ್ಕೆ ತಿಳಿಯದಾಗಿತ್ತು. ಸರ್ಕಾರ ತಡವಾಗಿ ನೇಮಿಸಿದ್ದ ವಿಚಾರಣಾ ಆಯೋಗವೊಂದು ದ್ವಂದ್ವಾರ್ಥದ ವರದಿ ನೀಡಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೇಮಿಸಿದ್ದ ಸಮಿತಿಯೊಂದು ಪಕ್ಕಾ ವಿಚಾರಣೆ ನಡೆಸಿ ಇಡೀ ಘಟನೆಗಳ ಸಂದರ್ಭದಲ್ಲಿ ೧,೨೦೦ ಮಂದಿ ಮೃತಪಟ್ಟಿದ್ದಾರೆ ಮತ್ತು ೩೬೦೦ ಮಂದಿ ಗಾಯಗೊಂಡಿದ್ದಾರೆ ಎಂದು ವರದಿ
ನೀಡಿತ್ತು. ಕೆಳ ಮನೆಯು (ಹೌಸ್ ಆಫ್ ಕಾಮನ್ಸ್) ಡೈಯರ್‌ನನ್ನು ಖಂಡಿಸಿತ್ತು. ಆದರೆ ಇಂಗ್ಲೆಂಡಿನ ಮೇಲ್ಮನೆ‌ (ಹೌಸ್ ಆಫ್ ಲಾರ್ಡ್ಸ್) ಅವನನ್ನು ನಿರ್ದೋಷಗೊಳಿಸಿ, ಪಿಂಚಣಿ‌ ನೀಡಿ ನಿವೃತ್ತಿಗೊಳಿಸಿತ್ತು.

ನೀಡಲಾಗಿದ್ದ ಬಳುವಳಿ ಸಾಲದ್ದು ಎಂಬಂತೆ ಅವನ ಗೌರವಾರ್ಥ ಸಂಗ್ರಹಿಸಲಾದ ಸಾಮ್ರಾಜ್ಯದ ಸೇನಾನಾಯಕರು ೧೫೦,೦೦೦ ಡಾಲರ್ ನಿಧಿ ಹಾಗೂ ಆಭರಣ ಖಚಿತ ಖಡ್ಗವೊಂದನ್ನು ಅವನಿಗೆ ಅರ್ಪಿಸಿದ್ದರು.
೧೯೨೧ರ ಕ್ರಾಂತಿ ಅಮೃತಸರದಲ್ಲಿ ನಡೆದಿದ್ದ ಘಟನಾವಳಿಗಳ ಹಿನ್ನೆಲೆಯಲ್ಲಿ ಟ್ಯಾಗೂರರು ವೈಸ್ರಾಯ್‌ಗೆ ಪತ್ರ ಬರೆದಿದ್ದರು. ಪತ್ರದೊಡನೆ ಬ್ರಿಟಿಷ್ ಸರ್ಕಾರ ಅವರಿಗೆ ನೀಡಿದ್ದ ನೈಟ್‌ಹುಡ್ ಬಿರುದಿನ ಪ್ರಶಂಸಾ ಪತ್ರವನ್ನೂ ಲಗತ್ತಿಸಿದ್ದರು. ಅವರ ಪತ್ರ: ‘ಕೆಲವು ಸ್ಥಳೀಯ ಗಲಭೆಗಳನ್ನು ನಿಗ್ರಹಿಸಲು ಪಂಜಾಬಿನಲ್ಲಿ ಸರ್ಕಾರ ಕೈಗೊಂಡ ಅಗಾಧ ಪ್ರಮಾಣದ ಕ್ರಮಗಳು ತೀವ್ರ ಆಘಾತ ನೀಡುವುದಾಗಿದೆ. ಇದು ಇಂಡಿಯಾದಲ್ಲಿ ಬ್ರಿಟಿಷ್ ಪ್ರಜೆಗಳಾಗಿರುವ ನಮ್ಮ ಅಸಹಾಯಕತೆಯನ್ನು ಎಲ್ಲರಿಗೂ ತಿಳಿಸುವುದೂ ಆಗಿದೆ. ದುರ್ದೈವಿ ಜನರ ಮೇಲೆ ಎಸಗಿರುವ ಅಳತೆ ಮೀರಿದ ಕ್ರೌರ್ಯ ಮತ್ತು ಬಳಸಿದ ವಿಧಾನಗಳು ನಾಗರಿಕ ಸರ್ಕಾರಗಳು
ಎಸಗಿರುವ ಕ್ರೌರ್ಯದ ಇತಿಹಾಸದಲ್ಲೇ ಅಪರೂಪದ್ದಾಗಿದೆ. ನಿಶ್ಶಸ್ತ್ರರು ಮತ್ತು ನಿರ್ಗತಿಕರೂ ಆದ ಜನಸಮೂಹದ ಮೇಲೆ ಮನುಷ್ಯ ಜೀವಗಳನ್ನು ಅತ್ಯಂತ ಕ್ರೂರವಾಗಿ ನಾಶಮಾಡಬಲ್ಲ ದಕ್ಷ ಅಧಿಕಾರಕ್ಕೆ ತನ್ನನ್ನು ಶ್ರುತಪಡಿಸಿಕೊಳ್ಳುವ ರಾಜಕೀಯ ಔಚಿತ್ಯ, ನೈತಿಕ ಸಮರ್ಥನೆ ಇಲ್ಲ ಎಂದು ನಾವು ಘಂಟಾಘೋಷದಿಂದ ಧೃಡಪಡಿಸಬಹುದಾಗಿದೆ. … ‘ನಮ್ಮ ಸಹೋದರರು ಅನುಭವಿಸಿದ ಅಪಮಾನ ಮತ್ತು ಯಾತನೆಗಳು. .
.ಬಲವಂತದ ಮೌನದ ನಡುವೆಯೂ ಹನಿ ಹನಿಯಾಗಿ ಇಂಡಿಯಾದ ಮೂಲೆಮೂಲೆಗಳನ್ನು ತಲಪುತ್ತಿದೆ. ಆಳುವವರು ನಮ್ಮ ಜನರ ಎದೆಯಲ್ಲಿ ಭುಗಿಲೆದ್ದಿರುವ ರೋಷಾವೇಶವನ್ನು ಅಲಕ್ಷಿಸಿದ್ದಾರೆ- ನಮಗೆ
ಪರಿಣಾಮಕಾರಿಯಾದ ಪಾಠ ಕಲಿಸಿದ್ದೇವೆ ಎಂದು ಅವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರಬಹುದು.

‘ಮಾಡಲಾದ ಸನ್ಮಾನ, ನೀಡಲಾದ ಗೌರವ ಪದಕಗಳು ನಮ್ಮ ಅಪಮಾನಕ್ಕೆ ದರ್ಪಣ ಹಿಡಿಯುತ್ತಿರುವ ಈ ಸಂದರ್ಭದಲ್ಲಿ ಅಸಮಂಜಸವೆನಿಸುತ್ತಿದೆ. ನಾನು ನನ್ನೆಲ್ಲ ಬಿರುದುಬಾವಲಿಗಳನ್ನು ಕಳಚಿ, ಅನಾಮಿಕರು ಎನಿಸಿಕೊಂಡು ಮನುಷ್ಯ ಕುಲಕ್ಕೇ ಸಲ್ಲದಂತಹ ಕೀಳುಸ್ಥಿತಿ ಮತ್ತು ಯಾತನೆಗಳನ್ನು ಅನುಭವಿಸುತ್ತಿರುವ ನನ್ನ ದೇಶ ಬಾಂಧವರ ಜೊತೆ ನಿಲ್ಲುತ್ತೇನೆ.’ ಇದೇ ಸಮಯದಲ್ಲಿ ಗಾಂಧಿ ಕೂಡ ಅವರು ಆಫ್ರಿಕಾದಲ್ಲಿ ಮತ್ತು ಯುದ್ಧದ ಸಮಯದಲ್ಲಿ ಸಲ್ಲಿಸಿದ ಸೇವೆಗಳ ಕುರುಹಾಗಿ ಬ್ರಿಟಿಷ್ ಸಾಮ್ರಾಜ್ಯ ನೀಡಿದ್ದ ಬಿರುದುಬಾವಲಿಗಳನ್ನು ಹಿಂತಿರುಗಿಸಿ, ಅಂತಹದ್ದೇ ಪತ್ರವನ್ನು ವೈಸ್ರಾಯ್‌ಗೆ ಕಳುಹಿಸಿದ್ದರು. ನವೆಂಬರ್ ನಾಲ್ಕರಂದು ನ್ಯಾಷನಲ್ ಕಾಂಗ್ರೆಸ್ ಸಾಮೂಹಿಕ ಶಾಂತಿಯುತ ಪೌರ ಅಸಹಕಾರಕ್ಕೆ ದೆಹಲಿಯಿಂದ ಕರೆನೀಡಿತ್ತು. ಬ್ರಿಟಿಷ್ ವಸ್ತುಗಳ ಬಹಿಷ್ಕಾರ, ಎಲ್ಲ ರೀತಿಯ ತೆರಿಗೆಗಳ ಪಾವತಿ ನಿರಾಕರಣೆ, ಹಿಂದೂಗಳು ಮತ್ತು ಸರ್ಕಾರದ ನಡುವಿನ ಎಲ್ಲ ರೀತಿಯ ಸಹಯೋಗ ಅಥವಾ ಸಹಕಾರಗಳ ನಿಷೇಧ ಅಸಹಕಾರ ಕಾರ್ಯಕ್ರಮದ ಭಾಗವಾಗಿತ್ತು. ವೇಲ್ಸಿನ ರಾಜಕುಮಾರ (ಪ್ರಿನ್ಸ್ ಆಫ್ ವೇಲ್ಸ್) ಇಂಡಿಯಾಕ್ಕೆ ಆಗಮಿಸುತ್ತಿರುವ ನಿಮಿತ್ತ ಸರ್ಕಾರ
ಸೌಮ್ಯವಾಗಿ ವರ್ತಿಸುವ ಯೋಚನೆಗೆ ಒಳಗಾಗಿತ್ತು.‌ ನವೆಂಬರ್ ೧೭ರಂದು ರಾಜಕುಮಾರರು ಬೊಂಬಾಯಿಗೆ ಆಗಮಿಸಿದ್ದರು.

ಅಂದೇ ಹರತಾಳ ಘೋಷಿಸಲಾಗಿತ್ತು. ಅಂಗಡಿಮುಂಗಟ್ಟುಗಳು ಬಾಗಿಲು ಹಾಕಿದ್ದವು. ಸಾಮ್ರಾಜ್ಯದ ಹಾಗೂ ೩೨ ಕೋಟಿ ಹಿಂದೂಗಳ ಉತ್ತರಾಧಿಕಾರಿ ರಾಜಕುಮಾರರು ಬರಿದಾದ ಬೀದಿಗಳನ್ನು ಮುಚ್ಚಿದ ಕಿಟಕಿ ಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂಗ್ಲಿಷರು ಮತ್ತು ಕೆಲವು ಪಾರ್ಸಿ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ತೆರೆದಿದ್ದರು. ಇದನ್ನು ತಿಳಿದ ಜನ ತಮ್ಮ ಗುಡಿಸಲು ಜೋಪಡಿಗಳಿಂದ ಗುಂಪು ಗುಂಪಾಗಿ ಧಾವಿಸಿ ತೆರೆದಿದ್ದ ಮಳಿಗೆಗಳ ಮೇಲೆ ದಾಳಿ ಮಾಡಿ ವ್ಯಾಪಾರಿಗಳ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಐವತ್ಮೂರು ಮಂದಿ ಮೃತಪಟ್ಟಿದ್ದರು.

ಸುದ್ದಿ ಕೇಳಿ ಹತಾಶರಾಗಿದ್ದ ಗಾಂಽ ಆ ಕೂಡಲೇ ಅಹಮದಾಬಾದಿನಿಂದ ಬೊಂಬಾಯಿಗೆ ತೆರಳಿದ್ದರು. ಅವರನ್ನು ಉನ್ಮತ್ತವಾಗೇ ಸ್ವಾಗತಿಸಿದ್ದ ಜನಸಮೂಹಕ್ಕೆ ‘ನೀವು ಎಸಗಿರುವ ಹಿಂಸಾಚಾರ ಡೈಯರ್ ಎಸಗಿದ್ದ ಕ್ಕಿಂತ ಕೀಳಾಗಿದೆ’ ಎಂದು ಹೇಳಿದ್ದರು. ಜನ ಶಾಂತಿಯುತ ಕ್ರಾಂತಿಗೆ ಸಿದ್ಧರಿರಲಿಲ್ಲ. ಭ್ರಮನಿರಸನರಾಗಿದ್ದ ಗಾಂಽ ಆಶ್ರಮಕ್ಕೆ ಮರಳಿ ಉಪವಾಸ ಮತ್ತು ಪ್ರಾರ್ಥನೆಗಳಲ್ಲಿ ತೊಡಗಿದ್ದರು. ರಾಜಕುಮಾರರ ಪಾಲಿಗೆ ಕಲ್ಕತ್ತ ನಿರ್ಜೀವ ನಗರವಾಗಿತ್ತು. ಅಲ್ಲಿ ಹರತಾಳವನ್ನು ಒಮ್ಮತದಿಂದ ಮತ್ತು ಅಹಿಂಸಾತ್ಮಕವಾಗೇ ಆಚರಿಸಲಾಯಿತು ಎಂಬುದನ್ನು ತಿಳಿದು ಗಾಂಽ ಉತ್ತೇಜಿತರಾಗಿದ್ದರು. ಆದರೆ ದಕ್ಷಿಣದ ಮೋಪ್ಲಾ ಮತ್ತು ಉತ್ತರದ ಚೌರಿ ಚೌರಗಳಲ್ಲಿನ ಘಟನೆಗಳು ಮೊದಲ ಕ್ರಾಂತಿಯ ಕರಾಳ ಘಟನೆಗಳಾಗಿದ್ದವು.

(ಮೂಲ : ವಿಲ್ ಡ್ಯುರಾಂಟ್. ಕನ್ನಡಕ್ಕೆ : ಕೆ.ಎನ್.ವೆಂಕಟಸುಬ್ಬರಾವ್)

Leave a Reply

Your email address will not be published. Required fields are marked *