Friday, 13th December 2024

ಪುಸ್ತಕಗಳೊಂದಿಗೆ ಗೃಹಪ್ರವೇಶ

ಜಯರಾಂ ಪಣಿಯಾಡಿ

ಕಳೆದ ಫೆಬ್ರವರಿ ತಿಂಗಳ ಇಪ್ಪತ್ತೆರಡರಂದು ಉಡುಪಿಯ ಬಳಿ ಇರುವ ಚಿಟ್ಪಾಡಿ, ಬೀಡಿನಗುಡ್ಡೆ ಬಳಿ ಕವಿ ಶಾಂತಾರಾಂ ಶೆಟ್ಟಿ ಎಂಬವರು ಗೃಹಪ್ರವೇಶ ಸಮಾರಂಭದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆ ಬೇರೆಲ್ಲಾ ಆಹ್ವಾನ ಪತ್ರಿಕೆಯಂತಿರದೆ ಗ್ರಂಥದ ಗುಡಿಯಲ್ಲಿ ‘ಅಕ್ಷರ ಗೃಹಪ್ರವೇಶ’ ಎಂಬ ತಲೆ ಬರಹದೊಂದಿಗೆ
ಕಾರ್ಯಕ್ರಮದ ಪಟ್ಟಿಯಲ್ಲಿ ಕಾವ್ಯ ಸಂವಾದ, ಮನ ಮನೆಯಲ್ಲಿ ನಗು, ಗುರುವಂದನಾ, ಹರಟೆ,ಸಂಗೀತ ರಸ ಸಂಜೆ ಎಂಬ
ಕಾರ್ಯಕ್ರಮಗಳೊಂದಿಗೆ ಹಲವು ಕವಿಗಳ, ವಾಗ್ಮಿಗಳ, ಪತ್ರಕರ್ತರ, ರಂಗಕರ್ಮಿಗಳ, ರಂಗನಟರ ಚಿತ್ರ ಹಾಗೂ ಹೆಸರು
ಅಚ್ಚಾಗಿತ್ತು.

ಸಮಾರಂಭದ ಆಹ್ವಾನ ಪತ್ರಿಕೆಯ ಕೊನೆಯಲ್ಲಿ ‘ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು’ ಎಂಬ ಸಾಲು! ಆಹ್ವಾನ ಪತ್ರಿಕೆ ತೆಗೆದುಕೊಂಡವರಿಗೆಲ್ಲಾ ಇದೇನಿದು? ಗೃಹಪ್ರವೇಶವೋ ಅಥವಾ ಯಾವುದಾದರೂ ಪುಸ್ತಕ ಬಿಡುಗಡೆಯ ಸಮಾರಂಭದ ಆಹ್ವಾನ ಪತ್ರಿಕೆಯೋ ಎಂಬ ಸಂದೇಹ ಬರುವಂತಿತ್ತು.

ಆಹ್ವಾನ ಪತ್ರಿಕೆಯಲ್ಲಿನ ಮನವಿಯಂತೆ ಒಬ್ಬೊಬ್ಬರೂ ಒಂದೆರಡು ಪುಸ್ತಕಗಳನ್ನು ಗೃಹ ಪ್ರವೇಶದ ಮನೆಗೆ ಹಿಡಿದುಕೊಂಡು ಬಂದಿದ್ದರು. ಪುಸ್ತಕ ತರಲಾಗದಿದ್ದವರಿಗೆ ‘ಟೋಟಲ್ ಕನ್ನಡ’ದವರ ಪುಸ್ತಕ ಮಳಿಗೆಯೂ ಅಲ್ಲಿತ್ತು. ಅತಿಥಿಗಳು ಕೊಟ್ಟ
ಪುಸ್ತಕಗಳನ್ನು ಚೆನ್ನಾಗಿ ಜೋಡಿಸಿ ಒಂದೆರಡು ಬೆತ್ತದ ಬುಟ್ಟಿಯಲ್ಲಿ ಜೋಡಿಸಲಾಗಿತ್ತು. ಇಲ್ಲಿಂದಲೇ ಹೊಸ ರೀತಿಯ ಗೃಹ ಪ್ರವೇಶದ ಕಾರ್ಯಕ್ರಮವನ್ನು ಕಂಡೆವು. ಹೊಸ ಮನೆಯನ್ನು ಪ್ರವೇಶ ಮಾಡುವಾಗ ಲಕ್ಷ್ಮಿಯ ಜತೆ, ಬುಟ್ಟಿಯಲ್ಲಿ ಜೋಡಿಸಿಟ್ಟಿದ್ದ ಸರಸ್ವತಿಯನ್ನೂ ತಲೆಯ ಮೇಲೆ ಹೊತ್ತುಕೊಂಡು ಮನೆಯೊಳಗೆ ಮಂಗಳ ವಾದ್ಯ, ಚಂಡೆಯ ಸದ್ದಿನೊಂದಿಗೆ ಒಳ ತರಲಾಯಿತು.

ಸರಸ್ವತಿಯ ದಿಬ್ಬಣದ ಹಿಂದೆ ಬಂದಿದ್ದ ಎಲ್ಲಾ ಕವಿ, ಕವಯಿತ್ರಿಯರೂ ಹಿಂಬಾಲಿಸಿ ಮನೆಯವರನ್ನು ಹರಸಿದರು. ಗೃಹ ಪ್ರವೇಶದ ದಿನ ಸರಸ್ವತಿಯನ್ನು ಪೂಜಿಸಿ ಕರೆತರುವ ಹೊಸ ಪದ್ದತಿ ಇಲ್ಲಿ ಪ್ರಾರಂಭವಾಗಿದ್ದು ಕವಿ ಶಾಂತಾರಾಂ ಶೆಟ್ಟರ
ಸಾಹಿತ್ಯಾಭಿಮಾನದಿಂದ. ಗೃಹಪ್ರವೇಶದಲ್ಲಿ ಸಿಹಿ ಊಟದ ಜತೆ ಸಾಹಿತ್ಯದೂಟವನ್ನೂ ಏಕೆ ಮಾಡಬಾರದು? ಎಂಬ ಆಲೋಚನೆ
ಕಾರ್ಯರೂಪಕ್ಕೆ ಬಂದಿತ್ತು. ಮನೆಯೊಳಗಿನ ಕಾರ್ಯಕ್ರಮ ಮುಗಿದ ಮೇಲೆ ಹೊರಗೆ ಹಾಕಿದ್ದ ವೇದಿಕೆಯಲ್ಲಿ ಗಣ್ಯರನ್ನು
ಗೀತೆಗಳನ್ನು ಹಾಡುವುದರೊಂದಿಗೆ ಸ್ವಾಗತಿಸಲಾಯಿತು.

ವೇದಿಕೆಯಲ್ಲಿ ಹರಟೆ ಖ್ಯಾತಿಯ ವೈ.ವಿ.ಗುಂಡೂರಾವ್, ಕವಿ ಸುಬ್ರಾಯ ಚೊಕ್ಕಾಡಿ, ಸಂಗೀತ ಲೋಕದ ಪ್ರಮೋದ್ ಸಪ್ರೆ,
ಕೃಷ್ಣ ಕಾರಂತ್, ಕಲಾವತಿ ದಯಾನಂದ್, ಲಕ್ಷ್ಮೀ ಸತೀಶ್ ಶೆಟ್ಟಿ, ಜ್ಯೋತಿ ಸತೀಶ್, ತಾರಾ ಉಮೇಶ್, ಸೂರಿ ಮಾರ್ನಾಡ್,
ಸುರೇಂದ್ರ ಮಾರ್ನಾಡ್, ಗಾಯಕ ರಮೇಶ್ಚಂದ್ರ ಇವರೆಲ್ಲರ ಸಮ್ಮುಖದಲ್ಲಿ ಮುಂಬೈ ಹಾಗೂ ದುಬೈ ಮತಿತ್ತರ ದೇಶಗಳಿಂದ
ಬಂದ ಅತಿಥಿಗಳೊಂದಿಗೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಸಾಹಿತ್ಯ ಸಂವಾದ, ಸಂಗೀತ, ಹರಟೆ ಇವುಗಳೊಂದಿಗೆ ಎಲ್ಲರೂ ಭಾವುಕರಾದಂತಹ ಕಾರ್ಯಕ್ರಮವೂ ಇಲ್ಲಿ ನಡೆಯಿತು. ಶಾಂತಾರಾಂ ಶೆಟ್ಟರಿಗೆ ಶಾಲೆಯಲ್ಲಿ ಪಾಠ ಹೇಳಿದ ಒಳಕಾಡು ಶಾಲೆಯ ನಿವೃತ್ತ ಟೀಚರ್ ಶ್ರೀಮತಿ ಭಾಗೀರಥಿಯವರನ್ನೂ  ವೇದಿಕೆಗೆ ಕರೆದು ಗುರುವಂದನಾ ಕಾರ್ಯಕ್ರಮವನ್ನು ಮಾಡಿದ್ದು ಕಾರ್ಯಕ್ರಮದಲ್ಲೇ ವಿಶೇಷ.