ನೆನಪು ನೂರೆಂಟು
ಮಣ್ಣೆಮೋಹನ್
ಶಾಲೆಗೂ ಹೋಗಲಾಗದೆ, ಹೊರಗೂ ಹೋಗಲಾಗದೆ ಮಕ್ಕಳೆಲ್ಲ ಮನೆಯಲ್ಲಿ ಬಂಧಿಗಳಾಗಿದ್ದಾರೆ. ಆಟ-ಪಾಠ ಗಳಿಲ್ಲದೆ, ನೃತ್ಯ-ನಾಟಕಗಳಿಲ್ಲದೆ, ಸಹಪಾಠಿಗಳ ಸಹವಾಸವಿಲ್ಲದೆ, ಮೊಬೈಲು ದೂರದರ್ಶನಗಳ ಹಾವಳಿಯಲ್ಲಿ ಅವರ ಬಾಲ್ಯವೇ ಮುರುಟಿ ಹೋಗುತ್ತಿದೆ. ಈ ಸಂದರ್ಭದಲ್ಲಿ 40 – 50 ವರ್ಷಗಳ ಹಿಂದಿನ ನಮ್ಮ ಬಾಲ್ಯದ ಬದುಕಿನ ನೆನಪಾಗುತ್ತಿದೆ. ಭಯ, ಅಚ್ಚರಿ, ಅರಿವು, ಕೌತುಕ, ಮನೋರಂಜನೆ- ಇವುಗಳನ್ನೆಲ್ಲಾ ನಮ್ಮೂರಿಗೆ ಅತಿಥಿಗಳಂತೆ ಬರುತ್ತಿದ್ದ ವಿವಿಧ ವೇಷ ಭೂಷಣಗಳ ಆಗಂತುಕರಿಂದ ನಾವುಗಳು ಪಡೆಯುತ್ತಿದ್ದಾಗಿನ ಒಂದು ಹೊರಳು ನೋಟ.
ಹಾಲಕ್ಕಿ ನುಡಿತೈತೆ…..ಹಾಲಕ್ಕಿ ನುಡಿತೈತೆ.. ಅಮಾವಾಸ್ಯೆಯಿಂದ ಮೂರು ದಿವಸಕ್ಕೆ ಕೆಳಗಿನ ಕೇರಿಯಲ್ಲಿ ಒಂದೆಣ ಬೀಳುತೈತೆ….ಇನ್ನೆರಡು ತಿಂಗಳಲಿ ಊರಿಗೊಂದು ಮಾರಿ ಮುತ್ತುತೈತೆ…’ ಬೆಳಗಿನ ಮೂರು ಗಂಟೆಯ ಸಮಯ. ಇಡೀ ಊರು ನಿದ್ದಯಲ್ಲಿದೆ.
ಬುಡುಬುಡುಕೆಯ ಸದ್ದು ನಿಶ್ಯಬ್ದ ರಾತ್ರಿಯ ನೀರವತೆಯನ್ನು ಭೇದಿಸಿ ಮಾರ್ದನಿಸುತ್ತದೆ. ನಾಯಿಗಳು ಒಂದೇ ಸಮನೆ ಚೀರತೊಡಗುತ್ತವೆ. ನಿದ್ದೆಯಿಂದ ಗಡಬಡಿಸಿ ಎದ್ದ ಜನ ಮನೆ ಯೊಳಗಿಂದಲೇ ಕಿಟಕಿಯ ಸಂದಿಯಲ್ಲಿ ಕಿವಿಯಾನಿಸಿ ಅವನಾಡುವ ಮಾತುಗಳನ್ನು ಕೇಳಿಸಿ ಕೊಳ್ಳುತ್ತಾರೆ. ಕಿವಿಗಳ ತುಂಬೆಲ್ಲಾ ಬುಡುಬುಡುಕೆ ಸದ್ದೇ ತುಂಬಿ, ಅದರ ಮಧ್ಯದಿಂದ ಎದ್ದು ಬಂದ ಅಲ್ಲೊಂದು ಇಲ್ಲೊಂದು ಪದಗಳನ್ನು ಪೋಣಿಸಿಕೊಂಡು ಜನರು ಆ ಬಗ್ಗೆ ಯೋಚಿಸ ತೊಗುತ್ತಾರೆ.
ಮಾರನೆಯ ದಿನದಿಂದ ಕೆಳಗಿನ ಬೀದಿಯಲ್ಲಿ ಯಾರು ಸಾಯಬಹುದು ಎಂಬ ಲೆಕ್ಕಾಚಾರ ಅಮಾವಾಸ್ಯೆ ಕಳೆದು ಮೂರು ದಿನದವರೆಗೂ ನಡೆಯುತ್ತಲೇ ಇರುತ್ತದೆ, ಹಾಗೆಯೇ ಮತ್ತೆ ಪ್ಲೇಗಮ್ಮ ಬರುತ್ತಾಳಾ? ಬೇರೆ ಇನ್ಯಾರು ಬರುತ್ತಾರೆಂಬ ಬಿಸಿಬಿಸಿ ಚರ್ಚೆ ಕೂಡಾ ಎರಡು ತಿಂಗಳವರೆಗೂ ಮುಂದುವರೆಯುತ್ತದೆ.
ಬುಡುಬುಡುಕಣ್ಣ ಬುಡದಲಿ ಸಣ್ಣ
ಕೋಳಿಮರಿ ಕೊಡಬೇಕಣ್ಣ
ಹಳೇದು ಪಳೇದು ಮುಟ್ಟಲ್ಲಣ್ಣ
ಹೊಸದು ಬಂದರೆ ಬಿಡಲ್ಲಣ್ಣ
ಎಂದು ಜನಗಳು ಬುಡುಬುಡುಕೆ ಹಾಡನ್ನು ಹಾಸ್ಯ ಮಾಡುತ್ತಾರೆ. ಆದರೂ ಬುಡುಬುಡುಕೆಯವನು ಹೇಳಿದ್ದ ಅನೇಕ ವಿಚಾರ ಗಳು ನಿಜವಾಗಿರುವುದರಿಂದ ಜನಕ್ಕೆಲ್ಲ ಅವನ ಬಗ್ಗೆ ಭಯ, ಭಕ್ತಿ, ಗೌರವ. ಆದ್ದರಿಂದಲೇ ಬೆಳಗ್ಗೆ ಆದಮೇಲೆ ಅವನು ಭಿಕ್ಷೆ ಸಂಗ್ರಹಿಸಲು ಬಂದಾಗ ಯಾರೂ ಇಲ್ಲವೆಂಬಂತೆ ಎಲ್ಲರೂ ಕೊಡುತ್ತಾರೆ. ಮುಂದೇನು ಆಗುತ್ತೋ? ನಾಳೆಯೇನು ನಡೆಯುತ್ತೋ? ಎಂಬ ಮನುಷ್ಯನ ಭವಿಷ್ಯತ್ತಿನ ಬಗೆಗಿನ ಅತೀವ ಕುತೂಹಲ ಬುಡು ಬುಡುಕೆಯವನನ್ನು ನಮ್ಮೂರಿನ ಮುಖ್ಯ ಅತಿಥಿಯನ್ನಾ ಗಿಸಿದೆ.
ಗೊರವಯ್ಯ
ಕರಡಿ ಕೂದಲಿನಿಂದ ಮಾಡಿದ ಟೋಪಿ ಧರಿಸಿ, ಕರಿ ನಿಲುವಂಗಿ ಕೆಳಗೊಂದು ಕಚ್ಚೆ ಪಂಚೆ ಹೆಗಲ ಮೇಲೊಂದು ವಸ್ತ್ರ ತೊಟ್ಟು,
ಕತ್ತಿನಲ್ಲಿ ಕವಡೆಯ ಸರಗಳೊಂದಿಗೆ, ಒಂದು ಕೈಯ್ಯಲ್ಲಿ ಜೀವಂತ ಕರಡಿಯ ಹಿಡಿದು ಮತ್ತೊಂದು ಕೈಯಲ್ಲಿ ಡಮರುಗ ಹಿಡಿದು,
ಮೈಲಾರಲಿಂಗನ ಹಾಡನ್ನು ಹಾಡುತ್ತಾ ಬರುತ್ತಿದ್ದ ಗೊರವಯ್ಯ ಊರಿನ ಮಕ್ಕಳಿಗೆಲ್ಲ ಅಚ್ಚುಮೆಚ್ಚು.
ಒಂದಾಣೆ ಕಾಸು ಕೊಟ್ಟು ಕರಡಿಯ ಮೇಲೊಂದು ಸವಾರಿ ಮಾಡುವುದು ನಮಗಾಗ ವಿಮಾನ ಸವಾರಿ ಮಾಡಿದಷ್ಟು ಖುಷಿ. ಊರಿನ ಪ್ರತಿ ಬೀದಿಯಲ್ಲೂ ಸುತ್ತಾಡಿ, ಮನೆ ಮನೆಯಿಂದಲೂ ದವಸ-ಧಾನ್ಯ ಸಂಗ್ರಹಿಸುತ್ತಿದ್ದ ಗೊರವಯ್ಯನನ್ನ ಹಿಂಬಾಲಿಸಿ, ಅವನ ಡಮರುಗದ ಶಬ್ದಕ್ಕೆ ಹೊಂದುವಂತೆ ಱಞಮರ ಬಗ್ಗು ಗಿಡ ಬೀಳು’, ’ಮರ ಬಗ್ಗು ಗಿಡ ಬೀಳು’ ಎಂದು ಹಾಡುಕಟ್ಟಿ
ಹಾಡುತ್ತಾ, ಕರಡಿಯನ್ನು ನೋಡುತ್ತಾ, ಅವನು ಊರಿಂದ ನಿರ್ಗಮಿಸುವವರೆಗೂ ಅವನ ಹಿಂದೆಯೇ ಸುತ್ತುವುದು ನಮ್ಮ ಅಂದಿನ ದಿನಚರಿ. ನಂತರ ವನ್ಯಜೀವಿಗಳ ಸಂರಕ್ಷಣೆ ಕಾನೂನು ಜಾರಿಗೆ ಬಂದು, ಕರಡಿ ಇಲ್ಲದೆ ಬರಿಗೈಲಿ ಬಂದರೂ ಅವನೆಡೆಗಿನ ನಮ್ಮ ಆಕರ್ಷಣೆಯೇನೂ ಕಡಿಮೆಯಾಗಲಿಲ್ಲ- ಕರಡಿ ಪುಕ್ಕದ ಟೋಪಿ, ಡಮರುಗ, ಕವಡೆಸರ, ವಿಚಿತ್ರ ವೇಷಭೂಷಣ ಗಳಿಂದ. ದಾಸಯ್ಯನ ಉಪಾದಾನ ಶನಿವಾರ ಬಂತೆಂದರೆ ನಮಗೊಂಥರ ಸಂಕಟ, ಇನ್ನೊಂಥರ ಸಂಭ್ರಮ.
ಸಂಕಟ ಏಕೆಂದರೆ ಅಂದು ಸ್ನಾನದ ದಿನವಾದ್ದರಿಂದ. ನಮಗಾಗ ವಾರಕ್ಕೊಮ್ಮೆ ಮಾತ್ರ ಸ್ನಾನ. ಬಚ್ಚಲುಮನೆಯ ಕಟ್ಟೆ ಮೇಲೆ ಕೂರಿಸಿ ಕಲ್ಲಿನಿಂದ ಪರಪರ ಎಂದು ವಾರದ ಕೊಳೆಯನ್ನೆಲ್ಲ ಉಜ್ಜಿ ತೆಗೆಯುತ್ತಿದ್ದರು, ನಮಗದು ರೇಜಿಗೆಯ ವಿಷಯ. ಸಂಭ್ರಮ ವೇನೆಂದರೆ ಅಂದು ದಾಸಯ್ಯ ಉಪಾದಾನಕ್ಕೆ ಬರುತ್ತಾನೆಂದು. ಬಿಳಿ ಅಂಗಿ, ಬಿಳಿ ಕಚ್ಚೆ, ಬಿಳಿ ರುಮಾಲು ಸುತ್ತಿ, ಹೆಗಲಲ್ಲಿ ಬನವಾಸಿ ನೇತುಹಾಕಿಕೊಂಡು ಒಂದು ಕೈಯಲ್ಲಿ ಗರುಡಗಂಬ ಮತ್ತೊಂದರಲ್ಲಿ ಶಂಖ ಹಿಡಿದು ‘ಶಿವನಾರಾಯಣ ಗೋವಿಂದ….. ಗೋವಿಂದಾ………’ ಎನ್ನುತ್ತಾ ಬಂದನೆಂದರೆ ನಮಗೆಲ್ಲ ಬೆಚ್ಚನೆಯ ಅನುಭವ.
ಶಂಖ ಊದಿದ ಶಬ್ದ, ಬನವಾಸಿ ಬಾರಿಸಿದ ಸದ್ದುಗಳ ವಿಸ್ಮಯದ ಮಧ್ಯೆ ನಮಗರಿವಿಲ್ಲದೆ ಗೋವಿಂದನನ್ನು ಕೂಗುತ್ತಾ, ಗರುಡ ಗಂಬದ ದೀಪ ಗಾಳಿಗೆ ಆರುವುದಿಲ್ಲವೆ? ಎಂದು ಸೋಜಿಗ ಪಡುತ್ತಿದ್ದೆವು. ರಾಗಿಹಿಟ್ಟನ್ನೊ ಅಕ್ಕಿಯನ್ನೊ ಹೆಗಲಲ್ಲಿದ್ದ ಜೋಳಿಗೆಗೆ ಹಾಕಿಸಿಕೊಂಡು ಹೋಗುವವರೆಗೂ ಬಿಟ್ಟ ಕಣ್ಣಿನಿಂದಲೇ ನೋಡುತ್ತಿದ್ದೆವು.
ಇದೇ ದಾಸಯ್ಯನ ಇನ್ನೊಂದು ಆಕರ್ಷಣೆ ಕರಿಯಣ್ಣ, ಕೆಂಚಣ್ಣ. ತಿರುಪತಿಗೆ ಹೋಗಿ ಬಂದ ವೆಂಕಟರಮಣನ ಒಕ್ಕಲಿನವರು ಕುರಿ ಕಡಿದು ಊರಿಗೆಲ್ಲ ಊಟಕ್ಕೆ ಹೇಳುತ್ತಿದ್ದರು. ಊಟಕ್ಕೂ ಮೊದಲು ಸ್ವಾಮಿ ಸೇವೆ ಎಂಬ ಆಚರಣೆ ಇತ್ತು. ಮನೆಮುಂದೆ ಸಾರಿಸಿ ರಂಗೋಲಿ ಹಾಕಿ ಅದರ ಮೇಲೊಂದು ಬಿಳಿ ವಸ್ತ್ರವನ್ನು ಹರಡಿ ಅದರಲ್ಲಿ ಮಣೇವು ಹಾಕೋರು. ಮಣೇವು ಎಂದರೆ ಹಲಸಿನ ಹಣ್ಣು, ಬಾಳೆಹಣ್ಣು, ಕೊಬ್ಬರಿ, ಬೆಲ್ಲದ ರಸಾಯನದ ಗುಡ್ಡೆಗಳು. ಇಬ್ಬರು ದಾಸಯ್ಯಗಳು ಕಂಕುಳಲ್ಲಿ ಕರಿಯಣ್ಣ ಕೆಂಚಣ್ಣನನ್ನು ಕಟ್ಟಿಕೊಂಡು ಹರಿಗೆ ಆಡಿಸುತ್ತಾ ‘ಪರಾಕ್ ಪರಾಕ್,ಹೋಲಿ ಪರಾಕ್, ಪರಾಕ್ ಪರಾಕ್ ಬಹುಪರಾಕ್’ ಎಂದು ಕೂಗುತ್ತಾ ಮೂರು ಸುತ್ತು ಸುತ್ತಿ ‘ಓಹೋಹೋ’ ಎನ್ನುತ್ತಿದ್ದರು.
ಅದಕ್ಕೆಂದೇ ಕಾಯುತ್ತಿದ್ದ ಮಕ್ಕಳಾದ ನಾವುಗಳು ದಬ್ಬನೇ ಮಣೇವು ಮೇಲೆ ಮುಗಿಬಿದ್ದು ಆ ಗುಡ್ಡೆಗಳನ್ನು ಬಾಚಿಕೊಳ್ಳುತ್ತಿದ್ದೆವು. ಮೈಯೆಲ್ಲಾ ರಸಾಯನದ ಅಂಟು ಮೆತ್ತಿಕೊಂಡರೂ, ಸಿಕ್ಕ ರಸಾಯನವನ್ನು ಚಪ್ಪರಿಸಿ ತಿನ್ನುತ್ತಾ ಕೈಗಳನ್ನು ನೆಕ್ಕುವುದೇ ಒಂದು ಸೊಗಸು.
ಮಂಡರುಗಳ ಭಯಾನಕ ನೋಟ
ನಮಗೆಲ್ಲಾ ಭಯವಾಗುತ್ತಿದ್ದದ್ದು ನಮ್ಮೂರಿಗೆ ಮಂಡರುಗಳು ಬಂದಾಗ. ಕತ್ತಲ್ಲಿ ಎರಡು ಮನುಷ್ಯರ ತಲೆಬುರುಡೆ ನೇತು ಹಾಕಿಕೊಂಡು, ಒಂದು ಕೈಯಲ್ಲಿದ್ದ ಎರಡು ಕಬ್ಬಿಣದ ಬಳೆಗಳಿಗೆ ಇನ್ನೊಂದು ಕೈಯಲ್ಲಿನ ಮಂಡುಗತ್ತಿಯಿಂದ ಒಡೆದುಕೊಂಡು
ಠಣ್ ಎಂದು ಸದ್ದುಮಾಡುತ್ತಾ, ಮುಂಗೈ ಮೇಲಿನ ಚರ್ಮಕ್ಕೆ ಚಾಕುವಿನಿಂದ ಕೊಯ್ದು ರಕ್ತ ಬರಿಸಿಕೊಂಡು, ಚಾಟಿಯಿಂದ
ಬೆನ್ನಿಗೆ ಹೊಡೆದುಕೊಳ್ಳುತ್ತಾ, ರಕ್ತ ಸುರಿಸಿಕೊಳ್ಳುತ್ತಾ, ಮನೆ ಮುಂದೆಯೆಲ್ಲ ರಕ್ತ ಬೀಳಿಸಿ….. ವಿಚಿತ್ರವೋ ವಿಚಿತ್ರ, ಭಯಾನಕ.
ಮಕ್ಕಳಾದ ನಾವೆಲ್ಲಾ ನೋಡಲಾರದೆ ಕಣ್ಣು ಮುಚ್ಚಿಕೊಳ್ಳುತ್ತಿದ್ದೆವು. ಹಿರಿಯರು ಬೇಗನೆ ಭಿಕ್ಷೆ ಕೊಟ್ಟು ಮನೆ ಮುಂದಿನಿಂದ ಸಾಗುಹಾಕುತ್ತಿದ್ದರು. ನಮ್ಮಲ್ಲಿ ಭಯ ಹುಟ್ಟಿಸುತ್ತಿದ್ದವರ ಸಾಲಲ್ಲಿ ಮತ್ತೊಬ್ಬರು ಹಾವಾಡಿಗರು. ಕತ್ತಿಗೊಂದು, ಕೈಯಲ್ಲೊಂದು ಹಾವು ಸುತ್ತಿಕೊಂಡು ಬರುತ್ತಿದ್ದ ಇವರ ಕಂಡೊಡನೆ ನಾವೆಲ್ಲ ಮನೆಯೊಳಗಿನ ಮೇಗಲ ಕೋಣೆಯನ್ನು ಒಕ್ಕಿ ಕುಳಿತು ಕೊಳ್ಳುತ್ತಿದ್ದೆವು.
ಭಿಕ್ಷೆ ಕೊಡಲು ಕೈ ಮುಂದೆ ಮಾಡಿದರೆ, ನಾಗರಹಾವು ತನ್ನ ಹೆಡೆಯನ್ನು ಮುಂದು ಮಾಡುತ್ತಿತ್ತು. ಮುಂದೆ ಕೆಲ ವರ್ಷಗಳ ನಂತರ ನಮ್ಮ ವಯಸ್ಸಿನ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಅವರ ಕೈಯಲ್ಲೂ ಹಾವು ಕಂಡಾಗ ಚಕಿತಗೊಂಡು ‘ಹಾವು ಕಚ್ಚುವುದಿಲ್ಲವೆ?’ ಎಂಬ ವಿಚಾರ ತಲೆ ಹೊಕ್ಕು ಬಗೆಹರಿಯದ ವಿಷಯವಾಗಿತ್ತು. ಹೀಗೆ ಹಾವಾಡಿಸಲೆಂದು ನಮ್ಮೂರಿಗೆ ಅತಿಥಿಯಾಗಿ ಬಂದ ರಾಮಯ್ಯ ಎಂಬುವವನು ಕುಟುಂಬದೊಂದಿಗೆ, ಇಂಥವರಿಗೆಂದೇ ಊರಾಚೆ ಕಟ್ಟಿಸಿದ್ದ ಮಂಟಪವೊಂದರಲ್ಲಿ ಹಲವು ವರ್ಷ ಟಿಕಾಣಿ ಹೂಡಿದ್ದ.
ಯಾರ ಮನೆಯಲ್ಲೊ ಬೀದಿಯಲ್ಲೊ ಹೊಲದಲ್ಲೊ ಹಾವು ಕಂಡರೆ ಕೂಡಲೇ ಅವನನ್ನು ಕರೆತರುತ್ತಿದ್ದರು. ಕ್ಷಣದಲ್ಲಿಯೇ ಅದು ಎಲ್ಲಿಯೇ ಇದ್ದರೂ ಕೈಯಾಕಿ ಹಿಡಿಯುತ್ತಿದ್ದ ಅವನ ಚಾಣಾಕ್ಷತನಕ್ಕೆ ಬೆರಗಾಗಿ ಊರಿನವರೆಲ್ಲ ಅವನಿಗೆ ಆಪ್ತರಾಗಿದ್ದರು. ರಾಮಯ್ಯ ಎಂದರೆ ಹಾವು, ಹಾವು ಎಂದರೆ ರಾಮಯ್ಯ ಎಂಬಂತಾಗಿತ್ತು. ‘ಇಲ್ಲಿಯವರೆಗೂ 83 ಹಾವು ಹಿಡಿದಿದ್ದೇನೆ, ನೂರನೆಯದು ನನ್ನ ಕೊನೆಯದು.
ನೂರ ಒಂದನೆಯದು ನನ್ನ ಸಾವಿಗೆ ಕಾರಣವಾಗುತ್ತೆ’ ಎಂದು ಯಾವಾಗಲೂ ಹೇಳಿಕೊಳ್ಳುತ್ತಿದ್ದ. ಅವನು ಇರುವವರೆಗೂ
ಸುತ್ತಮುತ್ತಲಿನ ಅನೇಕ ಹಳ್ಳಿಗಳು ಹಾವಿನ ಭಯದಿಂದ ಮುಕ್ತಗೊಂಡು ನೆಮ್ಮದಿಯಾಗಿದ್ದವು. ಹಾವು ಹಿಡಿಯುವ ಮೊದಲು ಯಾವುದೋ ನಾರು-ಬೇರಿನ ಮದ್ದು ತಿನ್ನುತ್ತಾನೆಂದು, ಆದ್ದರಿಂದಲೇ ಹಾವು ಕಚ್ಚಿದರೂ ಅವನಿಗೆ ಏನೂ ಆಗಲ್ಲವೆಂದು
ಜನರು ಮಾತನಾಡಿಕೊಳ್ಳುತ್ತಿದ್ದರು.
ನೂರು ಹಾವಿಗೆ ಮರಣ
ಕೊನೆಗೂ 100 ಹಾವುಗಳನ್ನು ಹಿಡಿದು ‘ಇಂದಿಗೆ ನನ್ನ ಭೂಲೋಕದ ಋಣ ತೀರಿತು, ಯಾವ ಕ್ಷಣದಲ್ಲಾದರೂ ನಾನು ಸಾಯು ತ್ತೇನೆ’ ಎಂದು ಊರಿನವರೆಲ್ಲರ ಕಣ್ಣಲ್ಲಿ ನೀರು ತರಿಸಿದ್ದ. ಅತ್ತೆರಡು ದಿನಕ್ಕೆ ಸೌದೆಗೆಂದು ಗೋಮಾಳಕ್ಕೆ ಹೋದವನು ಬಂದದ್ದು ಹೆಣವಾಗಿ. ಊರಿನ ಜನರೆಲ್ಲಾ ಸೇರಿ ದುಡ್ಡಾಕಿ ಊರಿನ ಸ್ಮಶಾನದಲ್ಲೆ ಮಣ್ಣು ಮಾಡಿ, ಅವನ ಹೆಂಡತಿ ಒಂದು ಗಂಡು ಒಂದು ಹೆಣ್ಣು ಮಗುವನ್ನು ಸಾಕಿದರು. ಅವನ ಹೆಂಡತಿಯು ಹಾವು ಹಿಡಿಯುವ ಕೆಲಸ ಮಾಡುತ್ತಿದ್ದಳು. ಮಗಳು ಬೆಳೆದು ದೊಡ್ಡವ ಳಾದಾಗ, ಮದುವೆಯನ್ನು ಊರವರೇ ಮಾಡಿದರು. ನಂತರ ಮಗನೊಡನೆ ಊರಿಗೆ ಹೋಗುತ್ತೇನೆಂದು ಹೋದವಳು ಮತ್ತೆ ಬರಲೇ ಇಲ್ಲ.