ಮುಂಬಾಪುರಿ
ಕಲಾ ಭಾಗ್ವತ್
ಮುಂಬಯಿಯಲ್ಲಿರುವ ವಿಸ್ಮಯ ಎನಿಸಿರುವ ಲೋಕಲ್ ರೈಲುಗಳ ಜತೆಯಲ್ಲೇ, ರೈಲು ಹಳಿಗಳ ಪಕ್ಕದಲ್ಲೇ ಬೆಳೆಯುವ ಹಸಿರುವಾಣಿಯೂ ಇನ್ನೊಂದು ವಿಸ್ಮಯ!
ದೇಶದಲ್ಲಿ ಜನಸಂಖ್ಯೆಯೆಂಬ ಸಿಡಿಮದ್ದು ಅಲ್ಲಲ್ಲಿ ಸ್ಪೋಟಗೊಂಡು ಢಾಂ ಢೂಂ ಎನ್ನುತ್ತಿರುವಾಗಲೇ ವಾಣಿಜ್ಯ ರಾಜಧಾನಿಯಲ್ಲೀಗ ಉದ್ಯೋಗ, ಶಿಕ್ಷಣ, ಗಳಿಕೆ ಹಾಗೂ ಉತ್ತಮ ಸೌಲಭ್ಯದ ಸಲುವಾಗಿ ಸದ್ದಿಲ್ಲದೆ ನೆಲಸಿಗರು ಬಂದು ನೆಲಗುಮ್ಮ ಸಿಡಿಸುತ್ತಿದ್ದಾರೆ. ಒಗ್ಗಟ್ಟಿಲ್ಲದ ಊರಿಗಿಂತ ಇಕ್ಕಟ್ಟಾದ ಜಾಗವೇ ಲೇಸೆಂದು ಬಂದು ಊರುಕೇರಿಯನ್ನು ಇಲ್ಲೇ ಸೃಷ್ಟಿಸಿಕೊಳ್ಳುವವರಿಗೇನೂ ಇಲ್ಲಿ ಕಡಿಮೆಯಿಲ್ಲ. ‘ಈ ನಗರದಲಿ ನಿತ್ಯ ಮಹಾಭಾರತ ಯುದ್ಧ, ಸೋತವನೂ ಸಿಡಿದೆದ್ದು ಮತ್ತೆ ಸಮರಕೆ ಸಿದ್ಧ’ ಎಂಬ ಸನದಿಯವರ ನುಡಿಯು ಇಲ್ಲಿನ ವಾಸ್ತವ. ನಿಬಿಡವಾದ ವಲಸೆ ವೈವಿಧ್ಯತೆಯಿಂದಾಗಿ ಮುಂಬಾಪುರಿಯು ವಿಘಟಿತ ಹೊರವಲಯಕ್ಕೂ ಚಾಚಿಕೊಂಡಿರುವುದರಿಂದ ಇಲ್ಲೀಗ ನಗರ ಮತ್ತು ಗ್ರಾಮೀಣ ಸಂಸ್ಕೃತಿಗಳ ಸಂಕರವೇರ್ಪಟ್ಟಿದೆ.
ನಿತ್ಯದ ಕರ್ತವ್ಯ, ಕಾಯಕ, ಕಿಲಿಕಿಲಿಗಳಿಂದ ಹೊರತಾದ ಹಸುರಿನಲ್ಲಿ ವಿಹರಿಸಬೇಕೆಂಬ ಹಂಬಲದಲ್ಲಿ ಮುಂಬೈ ಜನರು ಮಣ್ಣಿಗೂ ಹಣ ಕೊಟ್ಟು ಮಡಿಕೆಗಳೊಳಗಿಟ್ಟು ಮನೆಯ ಬಾಲ್ಕನಿಯಲ್ಲಿ ಬೆಳೆಯನ್ನು ಬೆಳೆದು
ಸುಖಿಸುತ್ತಾರೆ. ಮನೆಯ ಕೆಳಗಿಳಿದರೆ ಕೊಳ್ಳಿರೆಂದು ಕರೆಯುವ ತರಕಾರಿ, ಹೂವುಗಳ ಅಂಗಡಿಗಳಿದ್ದರೂ ಹೊಟ್ಟೆಗೆ ಹಿಟ್ಟು, ಜುಟ್ಟಿಗೆ ಮಲ್ಲಿಗೆ, ಬೆಟ್ಟದಷ್ಟು ಖುಷಿ ಎಲ್ಲವನ್ನೂ ಈ ಪುಟ್ಟ ಕೃಷಿಯಲ್ಲೇ ಕಾಣುವ ಹೆಚ್ಚಿನ
ಮಹಾಜನಗಳನ್ನು ಹುಟ್ಟೂರಿನ ಹಸುರಿನ ಮಾಯೆಯು ಬಿಡುವುದೇ ಇಲ್ಲ. ಬಾಲ್ಕನಿಯ ಲ್ಲಿಯೇ ಬೀಟ್ರೂಟ್, ಮೂಲಂಗಿ ಹಾಗಲಕಾಯಿ, ಪಾಲಕ್, ಮೆಂತೆ, ಹರಿವೆ ಇತ್ಯಾದಿಗಳನ್ನು ಬೆಳೆದು ಅನೇಕರು ಬೇಸರ ಕಳೆಯು
ತ್ತಾರೆ. ಜನಾರಣ್ಯದಲ್ಲಿ ಕಟ್ಟಡಗಳಷ್ಟೇ ಅಲ್ಲದೆ ಬೆಟ್ಟ ಮರಮಟ್ಟುಗಳು ಸಾಕಷ್ಟಿವೆ. ಇವುಗಳ ನಡುವೆ ಹೊಲಗಳನ್ನೂ ಹುಟ್ಟಿಸಿಕೊಂಡು ಸಾಗುವಳಿ ಮಾಡಲು ಆ ಮೂಲಕ ಬಡವರಿಗೆ ಕೃಷಿ ಉದ್ಯೋಗ, ಹೆಚ್ಚುವರಿ
ಆಹಾರ ಮತ್ತು ಗಳಿಕೆಗೆ ಅನುಕೂಲ ಮಾಡಿಕೊಡಬೇ ಕೆಂದು ಭಾರತೀಯ ರೈಲ್ವೆ ಇಲಾಖೆಯು ಯೋಜನೆಯನ್ನು ಕಾರ್ಯರೂಪಕ್ಕೆ ತಂದಿರುವುದು ಇಲ್ಲಿ ಗಮನ ಸೆಳೆಯುವ ಸಂಗತಿ. ಮುಂಬೈ ನಿದ್ರಿಸದ ನಗರಿ. ಇಲ್ಲಿನ
ಕಡಲ ಕಿನಾರೆಯುದ್ದಕ್ಕೂ ಅಂಗಾತ ಮಲಗಿರುವ ರೈಲು ಹಳಿಗಳ ಎದೆ ಸೀಳಿಕೊಂಡು ಮುಂಬೈ ಲೋಕಲ್ ಓಡಾಡುತ್ತಲೇ ಇರುತ್ತದೆ. ಮುಂಬಯಿಯ ದಾವಂತದ ಬದುಕಿಗೆ ಇಲ್ಲಿನ ರೈಲು ಪ್ರಯಾಣದ ಉಪ್ಪು
ಖಾರದನುಭವವು ಸೇರಿ ಅದು ಇನ್ನಷ್ಟು ಚುರುಕುಗೊಂಡಿದೆ. ದಿನವಹಿ ಸುಮಾರು ಎಂಬತ್ತು ಲಕ್ಷ ಜನರು ಇಲ್ಲಿ ರೈಲು ಸವಾರಿ ಮಾಡುವುದು ಅಚ್ಚರಿಯೆನಿಸುವ ವಾಸ್ತವ.
ಮುಂಬಾಪುರಿಯ ಜೀವನಾಡಿಯಾದ ರೈಲಿನ ಓಡಾಟವು ಒಂದು ದಿನ ಸ್ತಬ್ದವಾದರೂ ಇಲ್ಲಿನ ಬದುಕು ಅಲ್ಲೋಲಕಲ್ಲೋಲವಾಗುತ್ತದೆ. ಗಾಲಿಗಳ ಸದ್ದಿನಲ್ಲಿ ವಾಣಿಜ್ಯ ನಗರಿಯ ಹೃದಯ ಬಡಿತದ ಲಬ್ ಡಬ್ ಸದ್ದು
ಕೇಳಿಬರುತ್ತದೆ. ಮಳೆಗಾಲದಲ್ಲಂತೂ ಕುವೆಂಪು ಅವರ “ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್” ಎನ್ನುವ ಸಾಲನ್ನು ನೆನಪಿಸುವಷ್ಟು ಹಸುರಿನಿಂದ ಈ ಜನಾರಣ್ಯವು ಮೈದುಂಬಿರುತ್ತದೆ. ಲೋಕಲ್ ರೈಲಿನಿಂದ ಹೊರಗೆ ಇಣುಕಿದಾಕ್ಷಣ ಇನ್ನೊಂದು ಲೋಕ! ಹಳಿಗಳುದ್ದಕ್ಕೂ ಕಾಣುವ ಕೆಸರ ಕೌದಿಯ ಹೊದ್ದ ನೆಲದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಕಟ್ಟಿ ನಿಲ್ಲಿಸುವ ಅದೆಷ್ಟೋ ಬಿಡಾರಗಳ ತ್ಯಾಜ್ಯ ಸಂಗ್ರಹವು ಹೊಸದಾಗಿ ಲೋಕಲ್ ರೈಲು ಪ್ರಯಾಣ ಮಾಡುವವರನ್ನು ಒಮ್ಮೆ ಬೆಚ್ಚಿ ಬೀಳಿಸುತ್ತದೆ. ತೆರೆದ ಗಟಾರ, ಕಸದ ರಾಶಿ, ಹಂದಿ, ಇಲಿ, ಜಿರಳೆಗಳೇ ತುಂಬಿರುವ ಈ ಜಾಗಗಳಲ್ಲಿ ಮುಂಬೈಯ ಇನ್ನೊಂದು ಮುಖದ ನಿಜ ದರ್ಶನವಾಗುತ್ತದೆ.
ರೈಲಿನ ಪಕ್ಕದಲ್ಲಿ ತರಕಾರಿ ಕೃಷಿ
ಸುರಕ್ಷತೆಗೋಸ್ಕರವಾಗಿ ರೈಲು ಹಳಿಯ ಪಕ್ಕದಲ್ಲಿ ಇರುವ ಎಕರೆಗಟ್ಟಲೆ ಜಾಗವು ಸ್ಲಮ್ ನಿವಾಸಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕಿಕೊಂಡಿದೆ. ಇಲ್ಲೆಲ್ಲ ಶತಮಾನಗಳಿಂದ ಹಸುರುವಾಣಿ ಯನ್ನು ಪಟ್ಟಾಗಿ ಬೆಳೆಸಲಾಗುತ್ತಿದೆ. ಮುಂಬಾಪುರಿಯ ಸಂಪೂರ್ಣ ವ್ಯವಸ್ಥೆಯನ್ನೇ ಹೊತ್ತು ಈ ನಗರದ ಉದ್ದಗಲಕ್ಕೂ ಮೈಚಾಚಿಕೊಂಡು ಗಾವುದ ದೂರ ಹಬ್ಬಿ ಲಕ್ಷೋಪಲಕ್ಷ ಜನರನ್ನು ದಿನನಿತ್ಯ ಅತ್ತಿಂದಿತ್ತ ಓಡಾಡಿಸುವ ರೈಲು ಮಾರ್ಗಕ್ಕೆ ಗಟ್ಟಿತನವು ಬಹುಶಃ ಈ ಹಸುರು ಹೊನ್ನಿನಿಂದಲೇ ಬಂದಿರಬೇಕು. ಅನೇಕ ವರ್ಷಗಳಿಂದ ಬಂದುಳಿದ ನಿವಾಸಿಗಳು ರೈಲ್ವೆ ಇಲಾಖೆಯಿಂದ ಗುತ್ತಿಗೆ ಪಡೆದ ಭೂಮಿಯಲ್ಲಿ ಕಾಯಿ ಪಲ್ಯಗಳ ಕೃಷಿ ಮಾಡುತ್ತಾರೆ. ಮುಂಬೈಯ ದೊಡ್ಡ ದೊಡ್ಡ ತರಕಾರಿ ಮಂಡಿಗಳಿಗೆ ನಾಸಿಕ್, ಗುಜರಾತ್ ಪಂಜಾಬ್ ಹಾಗೂ ಮಹಾರಾಷ್ಟ್ರದ ಇತರ ಹಳ್ಳಿಗಳಿಂದ ಬೆಳಿಗ್ಗೆ ಎರಡು ಗಂಟೆಯ ಆಸು ಪಾಸು ಮುನ್ನೂರಕ್ಕೂ ಹೆಚ್ಚು ಲಾರಿಗಳಲ್ಲಿ ತರಕಾರಿಗಳು ಬಂದಿಳಿಯುತ್ತವೆ.
ಇದಕ್ಕೆ ಹೊರತಾಗಿ ಹಾಗೇ ಬಂದು ಕೂತು ಪ್ಲಾಸ್ಟಿಕ್ ಮೇಲೆ ತರಕಾರಿಗಳನ್ನು ಹರಡಿ ಅಗ್ಗದ ಬೆಲೆಯಲ್ಲಿ ಮಾರಿ ಎದ್ದು ಹೋಗುವ ಸಣ್ಣಪುಟ್ಟ ಸ್ಥಳೀಯ ಮಾರಾಟಗಾರರಿಗೆ ರೈಲ್ವೆ ಜಾಗದ ಬೆಳೆಯೇ ಮುಖ್ಯ ಸರಕು. ಕೊಳಗೇರಿಗೆ ಹತ್ತಿರವಿರುವ ಗದ್ದೆಗಳಿಗೆಲ್ಲ ಕೊಳಚೆ ನೀರಿನಿಂದಲೇ ತಂಪು.
ಇತ್ತೀಚೆಗೆ ಹೆಚ್ಚುವರಿ ಆಹಾರ ಯೋಜನೆಯ ಅಡಿಯಲ್ಲಿ ಬೆಳೆಯುತ್ತಿರುವ ಈ ತರಕಾರಿಗಳಿಗೆ ತ್ಯಾಜ್ಯ ನೀರನ್ನುಣಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲವೆಂಬ ಆರೋಗ್ಯ ಸಂಸ್ಥೆಗಳ ಪುಕಾರಿನ ಹಿನ್ನೆಲೆಯಲ್ಲಿ ರೈತರು ಸಲ್ಲಿಸಿದ ಕೋರಿಕೆ ಅರ್ಜಿಗೆ ಸ್ಪಂದಿಸಿ ರೈಲ್ವೆ ಇಲಾಖೆಯು ಬಾವಿಗಳಿರುವಲ್ಲಿ ಮಾತ್ರ ತರಕಾರಿಗಳನ್ನು ಬೆಳೆಯಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಬಹಳ ಜಾಗವಿರುವಲ್ಲಿ ಹೈನುಗಾರಿಕೆಯನ್ನು ಮಾಡಲು, ದನ ಕರುಗಳಿಗೆ ಬೇಕಾಗುವ ಮೇವನ್ನು ಬೆಳೆಸುವ ವ್ಯವಸ್ಥೆಯೂ ಇದೆ.
ಸುತ್ತಲಿನ ಗದ್ದೆಯಲ್ಲಿ ಅಷ್ಟೇ ಅಲ್ಲ ಹಳಿಗಳ ಆಜು ಬಾಜು ಖಾಲಿ ಜಾಗಗಳಲ್ಲಿ ಹೂಬನ, ಗೃಹಾಲಂಕಾರ ಮತ್ತು ಔಷಧಿ ಗಿಡಗಳನ್ನು ಬೆಳೆಸುವ ಯೋಜನೆಯನ್ನೂ ಮುಂದಿಟ್ಟಿದೆ. ಇದನ್ನು ಕೈಗೆತ್ತಿಕೊಳ್ಳಲು ನುರಿತ
ಗುತ್ತಿಗೆದಾರರನ್ನು ಆಕರ್ಷಿಸುವ ಸವಾಲು ರೈಲ್ವೆ ಇಲಾಖೆಯ ಮುಂದಿದೆ. ಮೆಟ್ರೋಪಾಲಿಟನ್ ನಗರವಾದ ಮುಂಬೈಯಲ್ಲಿ ಜನರ ಜೀವನೋಪಾಯ ವನ್ನು ಬೆಂಬಲಿಸಲು ಹತ್ತು ಹಲವು ಗ್ರಾಮೀಣ ಯೋಜನೆಗಳು ಒಳಗೊಳಗೇ ರೂಪುಗೊಂಡಿವೆ. ಹಾಗೇನಾದರೂ ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ‘ಯಾರೂ ತುಳಿಯದ ಹಾದಿಯ ಬದಿಯಲಿ ಮೌನದೊಳಿರುವಳು ಈ ಚಲುವೆ’ ಎಂಬ ಜಿ ಎಸ್ ಎಸ್ ವಾಣಿಯಂತೆ ಹಳಿಗಳ ಇಕ್ಕೆಲಗಳಲ್ಲಿ ತಮ್ಮ ಪಾಡಿಗೆ ಬೆಳೆದು ನಿಂತ ಹಸುರು ಮುಂಬಾಪುರಿಯ ಜೀವಸೆಲೆ. ಅರಳಿ ಹೊರಳಿ ಬಳಕಿ ಬಾಗಿ ಬೀಗುವ ರಂಗಬಿರಂಗಿ ಸುಮರಾಶಿಗಳ ಸೌಂದರ್ಯದಿಂದ ಜನ ನಿಬಿಡವಾದ ರೈಲಿನಲ್ಲಿ ಒಂಟಿ ಕಾಲಲ್ಲಿ ನಿಂತು ಗಂಟೆಗಟ್ಟಲೆ ಪ್ರಯಾಣ ಮಾಡಿ ತಪಸ್ಸಿನಂತೆ ನಿತ್ಯ ಕಾಯಕಗೈವ ಮುಂಬೈಕರ್ಸ್ ಕಣ್ಮನಗಳು ತುಸುವಾದರೂ ತಣಿದೀತೇ? ಕಾದು ನೋಡಬೇಕು.