ಮೇಜರ್ ಡಾ.ಕುಶ್ವಂತ್ ಕೋಳಿಬೈಲು
ಸೇನಾ ದಿನಚರಿಯ ಪುಟಗಳಿಂದ…
ಎಲ್ಲರಂತೆಯೂ ಆ ಹವಾಲ್ದಾರ್ ಸಹ ಎತ್ತರದ ಸ್ಥಳದಲ್ಲಿ ಕಾರ್ಯ ನಿರ್ವಹಿಸಲಿ ಎಂದು ಅವರನ್ನು ಆ ದುರ್ಗಮ ಪೋಸ್ಟ್’ಗೆ ಎರಡು ತಿಂಗಳ ಮಟ್ಟಿಗೆ ಕಳಿಸಿದ್ದೇ ಅವರ ಪಾಲಿನ ಮೃತ್ಯುವಾಯಿತೆ?
ತವಾಂಗ್ ಪಟ್ಟಣದಲ್ಲಿ ನಮ್ಮ ಒಂದು ಬ್ರಿಗೇಡ್ ಇತ್ತು. ಅಲ್ಲಿರುವ ಸೈನಿಕರಿಗಾಗಿ ಒಂದು ಮಿಲಿಟರಿ ಮೆಡಿಕಲ್ ವ್ಯವಸ್ಥೆ ಸಹ ಇತ್ತು. ಅದೊಂದು ಸುಂದರ ಊರು. ಸಮುದ್ರದ ಮಟ್ಟದಿಂದ ಒಂಬತ್ತು ಸಾವಿರ ಅಡಿ ಎತ್ತರದಲ್ಲಿರುವ ಪಟ್ಟಣ. ಅಲ್ಲಿಯ ಮಿಲಿಟರಿ ವೈದ್ಯರಾಗಿ ಹೆಚ್ಚಿನ ಬಾರಿ ಮಹಿಳೆಯರಿರುತ್ತಿದ್ದರು. ನಮ್ಮ ನಿಯೋಜನೆಯನ್ನು ಗಡಿಯ ಅಂಚಿನಲ್ಲಿದ್ದ ಪದಾತಿ ದಳದವರ ಜೊತೆ ಅವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಕೊಡುವುದಕ್ಕಾಗಿ ಮಾಡುತ್ತಿದ್ದರು.
ಸೇನೆ ತಾವಿರುವ ಗಡಿರಾಜ್ಯಗಳಲ್ಲಿ ನಾಗರಿಕರ ಮನ ಗೆಲ್ಲಲು ಹಲವು ಕ್ರೀಡಾಕೂಟವನ್ನು ಹಮ್ಮಿಕೊಳ್ಳುತ್ತದೆ. ತವಾಂಗಿನಲ್ಲಿ
ಭಾರತೀಯ ಸೇನೆ ಮತ್ತು ವಿವಿಧ ಜಿಲ್ಲೆಗಳ ತಂಡದ ನಡುವೆ ಕ್ರಿಕೆಟ್ ಟೂರ್ನಿಯನ್ನು ನಿಯೋಜಿಸಿದ್ದ ಕಾರಣ ನಮ್ಮ ಹಿರಿಯ
ಸೇನಾಧಿಕಾರಿಯೊಬ್ಬರು ನನ್ನನ್ನು ಕ್ರಿಕೆಟ್ ಆಡುವ ಉದ್ದೇಶಕ್ಕಾಗಿ ಗಡಿಭಾಗದಿಂದ ತವಾಂಗಿಗೆ ಕರೆದುಕೊಂಡರು. ಇದರಿಂದಾಗಿ
ನಾನು ನನ್ನ ಕೆಲವು ಸಹೋದ್ಯೋಗಿಗಳ ಕೆಂಗಣ್ಣಿಗೆ ತುತ್ತಾದರೂ ತವಾಂಗಿನಲ್ಲಿ ಒಂದು ತಿಂಗಳು ಕಳೆಯುವ ಅವಕಾಶ ಒದಗಿದ್ದಕ್ಕೆ ಬಹಳ ಸಂತೋಷವಾಯಿತು. ಅಲ್ಲಿ ಮೊಬೈಲ್ ನೆಟ್ವರ್ಕ್ ಇತ್ತು.
ಚಿಕ್ಕ ಪುಟ್ಟ ಅಂಗಡಿಗಳು, ಒಂದೆರಡು ರೆಸ್ಟೋರೆಂಟ್‌ಗಳು ಸಹ ಇದ್ದವು. ಬೇಸಿಗೆಯ ಕಾಲವಾಗಿದ್ದುದರಿಂದ ಕೆಲವು ಪ್ರವಾಸಿಗರೂ ನಮ್ಮ ಕಣ್ಣಿಗೆ ಬೀಳುತ್ತಿದ್ದರು. ಒಮ್ಮೊಮ್ಮೆ ನಾವು ನಮ್ಮ ಕೈಕೆಳಗೆ ಕೆಲಸಮಾಡುವವರ ಜೊತೆ ಅಗತ್ಯಕ್ಕಿಂತ ಕಟ್ಟು ನಿಟ್ಟಾಗಿ ವರ್ತಿಸುತ್ತೇವೆ. ಅವರ ತಪ್ಪುಗಳನ್ನು ಹೆಕ್ಕಿ ತೆಗೆಯುತ್ತೇವೆ. ಅಸಲಿಗೆ ನೂನ್ಯತೆಗಳು ನಮ್ಮೆಲ್ಲರಲ್ಲಿ ಇರುತ್ತದೆ. ಬ್ರಿಗೇಡ್ ಮೆಡಿಕಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಕೈಕೆಳಗೆ ಒಬ್ಬ ಹವಾಲ್ದಾರ್ ನರ್ಸಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆಗ ಸೇನೆಯಲ್ಲಿ ನಾವು ದೈಹಿಕ ಕ್ಷಮತೆಯ ಬಗ್ಗೆ ಬಹಳ ನಿಗಾ ವಹಿಸುತ್ತಿದ್ದೆವು. ಆದರೆ ಆ ಹವಾಲ್ದಾಲ್ ಮಾತ್ರ ದೈಹಿಕ ವ್ಯಾಯಮ ಮತ್ತಿತರ ಚಟುವಟಿಕೆಗಳಿಂದ ದೂರ ಇರುತ್ತಿದ್ದರು. ಇನ್ನೂ ಎತ್ತರದ ಪೋಸ್ಟುಗಳಿಗೆ ಹೋಗಬೇಕಾದ ಸೈನಿಕರು ನಮ್ಮಲ್ಲಿ ತಪಾಸಣೆಗೊಳಗಾದ ನಂತರ ಮುಂದುವರಿಯುತ್ತಿದ್ದರು.
ಹವಾಲ್ದಾರ್ ತನ್ನ ಅನಾರೋಗ್ಯದ ನೆಪ ಹೇಳಿ ಎತ್ತರದ ಪ್ರದೇಶಗಳಲ್ಲಿದ್ದ ಪೋಸ್ಟುಗಳಿಗೆ ಹೋಗಿರಲಿಲ್ಲ. ಎರಡು ವರ್ಷಗಳಿಂದ ಅವರು ತವಾಂಗಿನಲ್ಲೆ ಇದ್ದದ್ದು, ಅಲ್ಲಿದ್ದ ಅನೇಕ ನರ್ಸಿಂಗ್ ಅಸಿಸ್ಟೆಂಟ್ ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆ ಹವಾಲ್ದಾರ್ ಯಾವುದೇ ಆಟೋಟಗಳಲ್ಲಿ ಭಾಗವಹಿಸದಿದ್ದರೂ ಆಡುವವರನ್ನು ಹುರಿದುಂಬಿಸುತ್ತಿದ್ದರು. ಅವರ ಸರ್ವಿಸ್ ಇನ್ನೇನು ಮುಗಿಯುವುದರಲ್ಲಿತ್ತು.
ನಮ್ಮ ಕಮಾಂಡಿಗ್ ಆಫೀಸರ್ ಬಳಿ ಯಾವದೋ ವಿಷಯದ ಚರ್ಚೆಯಾಗುತ್ತಿದ್ದಾಗ ನಾನು ನನಗೆ ಸಂಬಂಧವಿಲ್ಲದ ಒಂದು
ವಿಷಯವನ್ನು ಪ್ರಸ್ತಾಪಿಸಿದೆ. ಆ ಹವಾಲ್ದಾರ್ ಕೂಡ ಬೇರೆಲ್ಲಾ ನರ್ಸಿಂಗ್ ಅಸಿಸ್ಟೆಂಟ್‌ಗಳಂತೆ ಎತ್ತರದ ಪ್ರದೇಶದಲ್ಲಿ ಎರಡು
ತಿಂಗಳು ಕೆಲಸ ಮಾಡಿ ಬರಲಿ, ನಾವು ತಾರತಮ್ಯ ಮಾಡಬಾರದೆಂದು ವಾದಿಸಿದೆ.
ನಮ್ಮ ಹಿರಿಯ ಅಧಿಕಾರಿಗಳು ಎಲ್ಲಾ ನರ್ಸಿಂಗ್ ಅಸಿಸ್ಟೆೆಂಟ್ ಗಳು ಸಮಾನವಾಗಿ ಎರಡೆರಡು ತಿಂಗಳು ಕ್ಲಿಷ್ಟಕರವಾದ ಪೋಸ್ಟಿ ನಲ್ಲಿ ಕೆಲಸ ಮಾಡಬೇಕೆಂಬ ಆದೇಶ ಮಾಡಿಬಿಟ್ಟರು. ಕ್ರಿಕೆಟ್ ಟೂರ್ನಿ ಮುಗಿದ ನಂತರ ನಾನು ಎತ್ತರದ ಪೋಸ್ಟ್ ಒಂದಕ್ಕೆ ಕಾರ್ಯನಿರ್ವಹಿಸಲು ಹೋದೆ. ತದನಂತರ ದೀರ್ಘ ರಜೆ ಮುಗಿಸಿ ಬಂದೆ. ನಮ್ಮ ಆ ಹವಾಲ್ದಾರ್ ವಿಷಯ ನನಗೆ ಮರತೇ ಹೋಗಿತ್ತು.
ನಾನು ರಜೆ ಮುಗಿಸಿ ಬಂದ ನಂತರ ನಮ್ಮ ಮಿಲಿಟರಿ ಅಸ್ಪತ್ರೆಯಲ್ಲಿ ರೋಗಿಗಳ ಅರೈಕೆಯ ಜೊತೆಗೆ ಆಡಳಿತಾತ್ಮಕ ಕೆಲಸ ಗಳನ್ನೂ ಮಾಡುತ್ತಿದ್ದೆ. ಒಮ್ಮೆ ಫೈಲನ್ನು ತಿರುವಿ ಹಾಕುತ್ತಿದ್ದಾಗ ಫೀಲ್ಡ್ ಏರಿಯಾದಲ್ಲಿ ಮರಣಹೊಂದಿದವರಿಗೆ ಆರ್ಮಿ ಇನ್ಸುರಮನ್ಸ್ ದೊರಕಿಸುವ ಫೈಲಿನಲ್ಲಿ ಆ ಹವಾಲ್ದಾರ್ ಫೋಟೋ ನೋಡಿ ನನಗೆ ನಿಜಕ್ಕೂ ಆಘಾತವಾಯಿತು.
ಆತನಿಗೇಕೆ ಈ ಸ್ಥಿತಿ ಒದಗಿತು ಎಂದು ನನಗೆ ನಿಜಕ್ಕೂ ಖೇದ ಎನಿಸಿತು. ನನ್ನ ಸಹೋದ್ಯೋಗಿಗಳಿಗೆ ಮತ್ತು ಆಪ್ತರಿಗರ ತಕ್ಷಣವೇ ಫೋನಾಯಿಸಿದೆ. ನನ್ನ ಅಸಿಸ್ಟೆಂಟ್ ಆಗಿದ್ದ ಆ ಹವಾಲ್ದಾರ್ ಇನ್ನಿಲ್ಲವಾದ ವಿಷಯ ತಿಳಿಯಿತು. ನನ್ನ ಜೊತೆಗೆ ಕ್ರಿಕೆಟ್ ತಂಡದ ಲ್ಲಿದ್ದ ಸಿಪಾಯಿ ಪಾಂಡ ನನಗೆ ನಡೆದ ವಿಷಯವನ್ನು ವಿವರವಾಗಿ ತಿಳಿಸಿದ. ನಾನು ರಜೆಯಲ್ಲಿದ್ದಾಗ ಆ ಹವಾಲ್ದಾರ್, ಅತೀ ಎತ್ತರ ಪ್ರದೇಶದಲ್ಲಿದ್ದ ಪೋಸ್ಟ್ ಒಂದಕ್ಕೆ ಎರಡು ತಿಂಗಳ ಮಟ್ಟಿಗೆ ಕೆಲಸ ಮಾಡಲು ಹೋಗಿದ್ದರು. ಮೊದಮೊದಲು ಯಾವುದೇ ಸಮಸ್ಯೆಯಿರಲಿಲ್ಲ.
ಆನಂತರ ಅವರಿಗೆ ಹೊಟ್ಟೆೆನೋವು ಕಾಣಿಸಿಕೊಂಡಿತ್ತು. ಎಸಿಡಿಟಿಯೆಂದು ನಿರ್ಲಕ್ಷ್ಯ ಮಾಡಿ ತಾವೇ ಔಷಧಿಗಳನ್ನು ತಗೆದು ಕೊಂಡರು. ಹೊಟ್ಟೆನೋವು ಉಲ್ಬಣಿಸಿದಾಗ ಅವರು ನಡೆಯುವ ಸ್ಥಿತಿಯಲ್ಲಿರಲಿಲ್ಲ. ಅವರನ್ನು ಸ್ಟ್ರೆೆಚರ್ ಮೂಲಕ ಹೊತ್ತು ಕೆಳಗೆ ತರಲಾಯಿತು. ಆ ದುರ್ಗಮ ಪೋಸ್ಟಿನಿಂದ ಕಾಲ್ನಡಿಗೆಯಲ್ಲಿ ನಡೆದು ಬರಲು ಸುಮಾರು ನಾಲ್ಕು ಗಂಟೆ ಬೇಕಾದ ಕಾರಣ, ಅವರನ್ನು ಹೊತ್ತು ತರುವಷ್ಟರಲ್ಲಿ ತಡವಾಗಿ ಹೋಗಿತ್ತು.
ವೈದ್ಯಕೀಯ ತಪಾಸಣೆ ಮಾಡಿದಾಗ ಅವರ ಹೊಟ್ಟೆಯೊಳಗೆ ಎಪೆನ್ಡಿಕ್ ಹುಣ್ಣಾಗಿದ್ದು ಕಂಡು ಬಂತು. ಅದರಿಂದಾಗಿ ದೇಹದಲ್ಲಿ ಸೋಂಕು ತೀವ್ರವಾಗಿ ಅಸುನೀಗಿದರು. ಪಾಪ ಇನ್ನು ಕೆಲವೇ ತಿಂಗಳು ಅವರ ಸರ್ವಿಸ್ ಬಾಕಿಯಿತ್ತು. ಅವರ ಮೃತ ದೇಹವನ್ನು ಅವರ ಹಳ್ಳಿಗೆ ಕೊಡಲು ನಮ್ಮ ರೆಜಿಮೆಂಟಿನಿಂದ ಕೆಲವು ಜನರು ಹೋಗಿದ್ದರು. ಆ ಹವಾಲ್ದಾರ್‌ಗೆ ಚಿಕ್ಕ ಚಿಕ್ಕ ಮಕ್ಕಳು ಸಹ ಇದ್ದರಂತೆ. ಸಿಪಾಯಿ ಪಾಂಡ ಇಷ್ಟು ವಿವರಗಳನ್ನು ಹೇಳಿ ಮುಗಿಸುವಷ್ಟರಲ್ಲಿ ನಾನು ಒಳಗೊಳಗೇ ಕುಸಿದು ಹೋಗಿದ್ದೆ. ಆತನ ನೆನಪಿನಲ್ಲಿ ಒಂದೆರಡು ವಾರಗಳ ಕಾಲ ರಾತ್ರಿ ನನಗೆ ನಿದ್ದೆ ಬರಲಿಲ್ಲ.