Saturday, 23rd November 2024

ನನ್ನ ಐಡಿ ಕಾರ್ಡ್‌ ಮತ್ತು ಗೋರ್ಖಾ ಸೈನಿಕ

ಸೇನಾದಿನಚರಿಯ ಪುಟಗಳಿಂದ

ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು

ಕೆರಟಿಂಗ್ ಎಂಬ ಅರುಣಾಚಲ ಪ್ರದೇಶದ ತೀರಾ ಮುಂಚೂಣಿಯಲ್ಲಿರುವ ಗಡಿಭಾಗದಲ್ಲಿ ಗೋರ್ಖಾ ರೆಜಿಮೆಂಟಿನವರೊಂದಿಗೆ ನಾನು ವೈದ್ಯನಾಗಿ ಕೆಲವು ತಿಂಗಳ ಮಟ್ಟಿಗಿದ್ದೆ. ಹವಾಮಾನ ಎಷ್ಟೇ ಕೆಟ್ಟದಿರಲಿ ನಮ್ಮ ರೆಜಿಮೆಂಟಿನಲ್ಲಿ ಮುಂಜಾವಿನ ವಾಕಿಂಗ್ ಕಡ್ಡಾಯವಾಗಿತ್ತು. ಹಿಮಪಾತ ಮಿಶ್ರಿ ಮಳೆ ಬರುತ್ತಿದ್ದಾಗಲೂ ರೈನ್ ಕೋಟು ಹಾಕಿಕೊಂಡು ವಾಕಿಂಗ್ ಮಾಡಿದ್ದೆವು.

ದೈಹಿಕ ಕ್ಷಮತೆಯ ಬಗ್ಗೆೆ ಗೋರ್ಖಾ ರೆಜಿಮೆಂಟಿನವರು ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ರು. ಅವರನ್ನು ನಾವು ಹರಕು ಮುರುಕು ನೇಪಾಲಿಯಲ್ಲಿ ಮಾತನಾಡಿಸಿದಾಗ ಈ ಮುದ್ದಾದ ಕುಳ್ಳರು ಎರಡು ವಿಶ್ವಯುದ್ಧಗಳಲ್ಲಿ ಪ್ರಪಂಚದಲ್ಲಿ ಬೇರೆ ಬೇರೆ ಭಾಗಗಳಲ್ಲಿ ತಮ್ಮ ಶೌರ್ಯದ ಛಾಪು ಮೂಡಿಸಿದ ಬಗೆ ವಿಸ್ಮಯವನ್ನು ಮೂಡಿಸುತ್ತಿತ್ತು. ಮದ್ದುಗುಂಡುಗಳು ಖಾಲಿಯಾದಾಗ ಅವರ ಸಾಂಪ್ರದಾಯಿಕ ಆಯುಧವಾದ ಕುಕ್ರಿಯಿಂದ ವೈರಿಗಳ ರುಂಡವನ್ನು ಚಂಡಾಡುವ ವೀರರೆಂಬ ಖ್ಯಾತಿಯೂ
ಅವರಿಗಿತ್ತು.

ಗೋರ್ಖಾ ರೆಜಿಮೆಂಟಿನ ಒಬ್ಬ ಸೈನಿಕನನ್ನು ಸಾಮಾನ್ಯವಾಗಿ ಮಾತನಾಡಿಸುವಾಗ ಪ್ರತಿಯೊಬ್ಬರಿಗೂ ಆತನಷ್ಟು ಸಾಧು ಮತ್ತು ಸ್ನೇಹಜೀವಿ ಯಾರು ಇರಲಿಕ್ಕಿಲ್ಲವೆಂಬ ಭಾವನೆ ಬರುತ್ತದೆ. ಆದರೆ ರಣರಂಗದಲ್ಲಿ ಅವರು ಮೈಮೇಲೆ ಮಹಾಕಾಳಿ ಬಂದಂತೆ
ಸೆಣಸಾಡುವ ವೀರರ ಹವಾ ಅವರಿಗಿತ್ತು. ಸೇನೆಯಲ್ಲಿ ನಿಮ್ಮ ಗುರುತಿನ ಚೀಟಿ ಬಹಳ ಮುಖ್ಯ. ಪ್ರಪಂಚ ಮೇಲೆ ಕೆಳಗೆಯಾದರೂ ಸೈನಿಕರು ತಮ್ಮ ಐಡಿ ಕಾರ್ಡನ್ನು ಕಳೆದುಕೊಳ್ಳಬಾರದು. ಐಡಿ ಕಾರ್ಡ್ ಕಳೆದುಕೊಂಡವರನ್ನು ತೀರಾ ಹೊಣೆಗೇಡಿಗಳೆಂದು ಪರಿಗಣಿಸಿ ಅವರಿಗೆ ಮುಂದೆ ಸೇನೆಯಲ್ಲಿ ಯಾವುದೇ ಪ್ರಮುಖ ಜವಾಬ್ದಾಾರಿಯನ್ನು ಕೊಡಲಾಗುವುದಿಲ್ಲ. ಸೇನೆಯ ಅಧಿಕಾರಿ ಯಾರಾದರೂ ಗುರುತಿನ ಚೀಟಿ ಕಳೆದುಕೊಂಡರೆ ಅವರಿಗೆ ಆರು ತಿಂಗಳ ಸೇವೆಯ ಹಿಂಬಡ್ತಿಯನ್ನು ನೀಡಲಾಗುತ್ತದೆ.

ಸೇನೆಯ ಗುರುತಿನ ಚೀಟಿ ದುಷ್ಟರ ಕೈಗೆ ಸಿಕ್ಕಿ ಅದರ ದುರ್ಬಳಕೆಯಾಗುವುದನ್ನು ತಡೆಯುವ ಸಲುವಾಗಿ ಇಷ್ಟು ಕಟ್ಟನಿಟ್ಟಿನ ನಿಯಮಗಳನ್ನು ಮಾಡಲಾಗಿದೆ. ಹಾಗಾಗಿ ಯಾರಾದರು ನಿಮ್ಮ ತಲೆಯ ಮೇಲೆ ರಿವಾಲ್ವರ್ ಇಟ್ಟು ಜೀವ ಅಥವಾ ಐಡಿ ಕಾರ್ಡ್ ಎರಡರಲ್ಲಿ ಒಂದನ್ನು ಕಿತ್ತುಕೊಳ್ಳಲು ಯತ್ನಿಸಿದರೆ ಜೀವ ಬೇಕಾದರೆ ಕಳೆದುಕೊಳ್ಳಿ ಅದರೆ ಐಡಿ ಕಾರ್ಡನ್ನು ಯಾವುದೇ  ರಣಕ್ಕೂ  ಳೆದುಕೊಳ್ಳುಬಾರದೆಂದು ತರಬೇತಿಯ ಸಮಯದಿಂದಲೂ ಹೇಳಲಾಗುತ್ತಿತ್ತು.

ಇಷ್ಟು ಗಂಭೀರವಾದ ಉಪದೇಶವನ್ನು ಸೇನೆಗೆ ಸೇರಿದ ಮೊದಲ ದಿನದಿಂದಲೇ ಪಡೆದ ನಾವು ಬಹಳ ಜಾಗರೂಕರಾಗಿರುತ್ತಿದ್ದೆವು. ಐಡಿ ಕಾರ್ಡನ್ನು ಹೆಚ್ಚಿನವರು ಅತ್ಯಂತ ಜೋಪಾನವಾಗಿ ತಮ್ಮ ಅಂಗಿಯ ಎಡಗಡೆಯ ಜೇಬಿನಲ್ಲಿಡುತ್ತಿದ್ದೆವು. ಐಡಿ ಕಾರ್ಡಿಗೆ ಚಿಕ್ಕ ಸ್ಟೀಲಿನ ಸರಪಳಿಲ್ಲಿ ಬಂಧಿಸಿ ನಮ್ಮ ಕುತ್ತಿಗೆಗೆ ತೂಗುಹಾಕುತ್ತಿದ್ದೆವು. ಆತಂಕವಾದಾಗಲೆಲ್ಲ ನಮ್ಮ ಎಡಗಡೆಯ ಜೇಬನ್ನು ಮುಟ್ಟುತ್ತಾ ನಿಟ್ಟುಸಿರು ಬಿಡುತ್ತಿದ್ದೆವು. ಯಾವುದೇ ಕಾರಣಕ್ಕೂ ಐಡಿ ಕಾರ್ಡನ್ನು ನಮ್ಮ ಪ್ಯಾಂಟಿನ ಹಿಂಬದಿಯ ಜೇಬಿನಲ್ಲಿಡುತ್ತಿರಲಿಲ್ಲ. ಒಂದು ವೇಳೆ ಜೇಬಿಗೆ ಕತ್ತರಿ ಬಿದ್ದು ಹಣವನ್ನು ಕಳೆದುಕೊಂಡರೂ ನಮ್ಮ ಐಡಿ ಕಾರ್ಡ್ ಸುರಕ್ಷಿತವಾಗಿರ ಬೇಕೆಂಬುದು ನಮ್ಮ ಸ್ಪಷ್ಟವಾದ ನಿಲುವಾಗಿತ್ತು.

ಅಪಾಯಕಾರಿ ಕಾರ್ಯಾಚರಣೆ ಅಥವಾ ಶತ್ರು ದೇಶದೊಳಗೆ ಹೋಗಬೇಕಾಗಿ ಬಂದಾಗ ಸೈನಿಕರು ತಮ್ಮ ಐಡಿ ಕಾರ್ಡನ್ನು ರೆಜಿಮೆಂಟಿನ ಹಿರಿಯ ಅಧಿಕಾರಿಗೆ ಸುರಕ್ಷಿತವಾಗಿ ಒಪ್ಪಿಸಿ ಹೋಗುತ್ತಿದ್ದರು. ನಾನು ಗೋರ್ಖಾ ರೆಜಿಮೆಂಟಿನಲ್ಲಿದ್ದಾಗ ಒಂದು ಸಂಜೆ, ಪುಟ್ಬಾಲ್ ಆಡಿ ಕೊಠಡಿಗೆ ಬಂದ ನಂತರ ಅಭ್ಯಾಸ ಬಲದಂತೆ ನನ್ನ ಕೈ ಗೋಡೆಯಲ್ಲಿ ತೂಗು ಹಾಕಿದ್ದ ನನ್ನ ಸಮವಸ್ತ್ರದ ಎಡಗಡೆಯ ಜೇಬಿಗೆ ಹೋಯಿತು.

ಐಡಿ ಕಾರ್ಡನ್ನು ಮುಟ್ಟಿ ಎಲ್ಲವೂ ಸರಿಯಾಗಿದೆಯೆಂದು ಖಾತರಿ ಪಡಿಸಿಕೊಳ್ಳುವುದು ನಮ್ಮ ನಿತ್ಯ ಜೀವನದ ಭಾಗವಾಗಿತ್ತು. ಜೇಬು ಖಾಲಿಯಾಗಿರುವುದು ನನ್ನ ಗಮನಕ್ಕೆ ಬಂದಾಗ ನಾನು ಹೌಹಾರಿದೆ. ನೆನಪಿನಾಕ್ಕೆೆ ಹೋಗಿ ನಾನು ಎಚ್ಚರ ತಪ್ಪಿ ಐಡಿ
ಕಾರ್ಡನ್ನು ಬೇರೆಲ್ಲಾದರೂ ಇಟ್ಟಿರಬಹುದೆಂದು ದೀರ್ಘವಾಗಿ ಆಲೋಚಿಸಿದೆ. ಏನೂ ಹೊಳೆಯದಾಗ ನನ್ನ ಕೊಠಡಿಯ ಇಂಚಿಂಚನ್ನೂ ಐಡಿ ಕಾರ್ಡಿಗಾಗಿ ತಡಕಾಡಿದೆ. ಹೊರಗಡೆ ಚಳಿ ಬಹಳವಿದ್ದ ಕಾರಣ ಕೊಠಡಿಯೊಳಗೆ ನಾವು ಸೀಮೆಣ್ಣೆಯ ಹೀಟರ್ ಬಳಸುತ್ತಿದ್ದೆವು.

ಆದರೂ ಕೊಠಡಿಯೊಳಗಿನ ತಾಪಮಾನ ಹತ್ತು ಡಿಗ್ರಿಗಿಂತ ಜಾಸ್ತಿಯಾಗುತ್ತಿರಲಿಲ್ಲ. ಐಡಿ ಕಾರ್ಡ್ ಕಾಣೆಯಾಗಿದೆಯೆಂಬ ಆತಂಕದಿಂದ ಆ ಶೀತವಲಯದಲ್ಲೂ ನನ್ನ ಹಣೆಯ ಮೇಲೆ ಬೆವರಿನ ಹನಿಗಳಿದ್ದವು. ಮುಂದೆ ಆಗಬಹುದಾದ ಪರಿಣಾಮಗಳ ಚಿತ್ರಣ ನನ್ನ ಕಣ್ಣ ಮುಂದೆ ಮೂಡಿ ಆತಂಕ ಹೆಚ್ಚಾಯಿತು. ಅಷ್ಟರಲ್ಲಿ ನನ್ನ ಕೊಠಡಿಯನ್ನು ಅಚ್ಚುಕಟ್ಟಾಗಿಡುವ ಜವಾಬ್ದಾರಿಯನ್ನು ಹೊತ್ತಿದ್ದ ನನ್ನ ಸಹಾಯಕನಾಗಿದ್ದ ಗೋರ್ಖಾ ಸೈನಿಕ ಸಂಜೆಯ ಕಾಫಿಯೊಂದಿಗೆ ನನ್ನ ಕೊಠಡಿಗೆ ಬಂದ.
ತಾನು ಸ್ವಚ್ಚವಾಗಿ ಅಣಿಗೊಳಿಸಿದ್ದ ಕೊಠಡಿಯ ಹೊಸಾ ರೂಪವನ್ನು ನೋಡಿ ಆತ ಚಕಿತನಾದ.

ನಾನು ಐಡಿ ಕಾರ್ಡನ್ನು ಹುಡುಕುತ್ತಾ ಕಂಗೆಟ್ಟಿರುವ ವಿಷಯವನ್ನು ತಿಳಿಸಿದಾಗ ಅವರ ಮುಖದಲ್ಲಿ ಯಾವುದೇ ಚಿಂತೆ ಯಿರಲಿಲ್ಲ. ನನ್ನ ಕೊಠಡಿಯನ್ನು ಅಣಿಗೊಳಿಸುವಾಗ ಐಡಿ ಕಾರ್ಡನ್ನು ಗಮನಿಸಿದ ಅವನು ಅದನ್ನು ಸುರಕ್ಷಿತವಾಗಿ ಬೇರೊಂದು ಕಡೆ ಬಚ್ಚಿಟ್ಟಿದ್ದ. ಐಡಿ ಕಾರ್ಡನ್ನು ಆ ಅಜ್ಞಾತ ಸ್ಥಳದಿಂದ ನನ್ನ ಕಣ್ಣ ಮುಂದೆ ಪ್ರತ್ಯಕ್ಷಗೊಳಿಸಿದ ಆತ ನಾನು ಬಹಳ ಸಂತೋಷ ಪಡಬಹುದೆಂದು ಹೆಮ್ಮೆಯಿಂದ ಎದೆಯುಬ್ಬಿಸಿ ನಿಂತ್ತಿದ್ದ. ನನಗೋ ಗಾಬರಿ ಮಿಶ್ರಿತ ಕೋಪ ಕುದಿಯುತ್ತಿತ್ತು.
ಆದರೆ ಅವನ ಆ ಮುಗ್ಧತೆಯನ್ನು ಕಂಡು ನನ್ನ ಸಿಟ್ಟು ಕರಗಿಹೋಯಿತು.