Sunday, 13th October 2024

ಮಳೆಯ ಹಾಡು ಪಾಡು

ಗೊರೂರು ಶಿವೇಶ್

ಮಳೆ ಎಂದರೆ ಅದೊಂದು ಅಪೂರ್ವ ಅನುಭೂತಿ. ಭೂಮಿಗೆ ಮಳೆ ಸುರಿಯುವುದೇ ಒಂದು ಅಚ್ಚರಿ, ವಿಸ್ಮಯ. ಮಳೆಯೊಂದಿಗೆ ನಮ್ಮ ಜೀವನವನ್ನು ಹೊಂದಿಸಿ ಕೊಂಡು ಹೋಗುವ ಪರಿ ಇನ್ನೊಂದೇ ಅಚ್ಚರಿ. ಮಳೆಯು ಒಂದೊಂದು ಕಡೆ ಒಂದೊಂದು ರೀತಿ! ಒಬ್ಬೊಬ್ಬರಿಗೂ ವಿಭಿನ್ನ ಅನುಭವ. ಮಳೆಗಾಲ ಎಂದರೆ ಅದೊಂದು ಕನಸಿನ ಲೋಕ, ನಿಜ. ಆದರೆ, ಮಳೆಯಿಂದಾಗಿ ಸಾಕಷ್ಟು ರೇಜಿಗೆಯಾಗುವುದೂ ಉಂಟು. ಹಳ್ಳಿಗಳಲ್ಲಿ ಮಳೆ ಹಿಡಿಯಿತೆಂದರೆ, ಜ್ವರ, ಮೈಕೈ ನೋವುಗಳು ದಾಂಗುಡಿ ಇಡುತ್ತವೆ. ಆಗೆಲ್ಲಾ ಥಂಡಿ, ಜ್ವರ, ಶೀತವನ್ನು ಎದುರಿಸುವುದೇ ಒಂದು ಸಾಹಸ. ಅಂತಹ ದಿನಗಳಲ್ಲಿ ಹಳ್ಳಿಯ ಜನರಿಗೆ ಈ ಮಳೆ ಯಾವಾಗ ದೂರಾದೀತು ಎಂಬ ಆಶಯ. ಮಳೆಯ ಕುರಿತಾದ ಅನುಭವಗಳನ್ನು ಬರೆದು ಕಳಿಸಿ ಎಂದು ‘ವಿಶ್ವವಾಣಿ’ಯ ಓದುಗರಿಗೆ ಆಹ್ವಾನ ನೀಡಿದಾಗ, ಹಲವರು ಸ್ಪಂದಿಸಿದರು. ಅಂತಹ ಎರಡು ಬರೆಹಗಳು ಇಲ್ಲಿವೆ. ಇನ್ನಷ್ಟು ಮಳೆಸ್ಪಂದನೆಗಳು ಮುಂದಿನ ವಾರಗಳ ‘ವಿರಾಮ’ ಪುರವಣಿಯಲ್ಲಿ ಪ್ರಕಟಗೊಳ್ಳ ಲಿವೆ.

ನಮ್ಮೂರು ವರ್ಷದ ಉಳಿದೆ ತಿಂಗಳುಗಳು ಆಹ್ಲಾದಕರವಾಗಿದ್ದರೂ ಮಳೆಗಾಲವೆಂದರೆ ರೇಜಿಗೆ. ಜೂನ್ ನಿಂದ ಆರಂಭವಾಗಿ ಸೆಪ್ಟಂಬರ್ ವರಗೆ ಸಾಗುವ ಜಿಟಿಜಿಟಿ ಮಳೆ. ಯಗಚಿ, ಹೇಮಾವತಿ ನದಿಗಳ ಸಂಗಮವಾಗಿ ಮುಂದೆ ಹರಿಯುವಾಗ ಸಿಗುವ ಮೊದಲ ಊರೇ ನಮ್ಮೂರು.

ಅದಕ್ಕೆ ಅಣೆಕಟ್ಟು ಕಟ್ಟಿದ ನಂತರ ಅಣೆಕಟ್ಟಿನ ಬಾಗಿಲುಗಳಲ್ಲಿ ರಭಸದಿಂದ ನೀರು ಧುಮ್ಮುಕ್ಕುತ್ತಿದ್ದಾಗ ನೀರಿನ ತುಂತುರು ಅದರ ಜೊತೆಗೆ ಸೋನೆ ಮಳೆ ನಮ್ಮೂರನ್ನು ಸಂಪೂರ್ಣವಾಗಿ ತೊಯ್ಯುವಂತೆ ಮಾಡುತ್ತಿತ್ತು. ಅಣೆಕಟ್ಟಿಗೆ ಮೊದಲು ಎದುರಾಗುತ್ತಿದ್ದ ಗದ್ದೆಗಳು ನಮ್ಮದ್ದಾದರಿಂದ ಬತ್ತಕ್ಕೆ ಹಗೆ ಹಾಕುತ್ತಿದ್ದ ಸಮಯದಲ್ಲಿ ನೆನೆದು ತೊಪ್ಪೆಯಾಗಿ ಹೋದರೆ ಊರಿನ ಬೀದಿಗಳು ಅಕ್ಷರಶಃ ಕೆಸರುಗದ್ದೆಗಳಾಗುತ್ತಿದ್ದವು. ಆ ಕೆಸರನ್ನು ದಾಟಲು ಹಾಕಿರುತ್ತಿದ್ದ ಕಲ್ಲುಗಳು, ಇಟ್ಟಿಗೆಗಳು ಅವುಗಳ ಮೇಲೆ ಸರ್ಕಸ್ ತಂತಿಯ ಮೇಲಿನಂತಹ ನಮ್ಮ ನಡಿಗೆ. . ಮನೆಯ ಸುತ್ತ ಆವರಿಸಿರುತ್ತಿದ್ದ ಹಾವಸೆ ಯಿಂದಾಗಿ ಜಾರಿ ಬಿದ್ದ ಜಾಣರಾಗುತ್ತ ಎದ್ದು ಬಯ್ಯುತ್ತಲೋ, ಗೊಣಗುತ್ತಲೊ ಇಲ್ಲ ನಾಚಿಕೆಯಿಂದ ತಲೆ ತಗ್ಗಿಸುತ್ತಲೋ ಹೋಗುವುದು ರೂಢಿಯಾಗಿತ್ತು.

ಊರೊಳಗಿನ ಕೆಲವು ಮನೆಗಳಲ್ಲಿ ನೀರು ಜಿನುಗಿ ಸೊಳ್ಳೆಗಳ ಆವಾಸ ಸ್ಥಾನವಾಗಿರುತ್ತಿತ್ತು. ಗೂರಲು ರೋಗಿಗಳಂತೂ ಪ್ರಾಣಾಂತಕ ಸ್ಥಿತಿ ತಲುಪಿ ಈಗಲೋ ಆಗಲೋ ಎನ್ನುವಂತಾಗಿರುತ್ತಿದ್ದರು. ಅವರು ಬಿಡುತ್ತಿದ್ದ ಏದುಸಿರು ಹೊರಗಿನ ಮಳೆಯ ಸದ್ದಿಗೆ ಪೈಪೋಟಿ ಒಡ್ಡುವಂತಿರುತ್ತಿತ್ತು. ಪ್ರಕೃತಿ ಒಡ್ಡುತ್ತಿದ್ದ ಇಂತಹ ಸವಾಲುಗಳನ್ನು ನಮ್ಮೂರಿನವರು ಸಮರ್ಥವಾಗಿ ಎದುರಿಸಲು ಗೋಣಿ ಚೀಲ, ಗೊರಗುಗಳ ಮೊರೆ ಹೋಗುತ್ತಿದ್ದರು.

ಆದರೆ ಶೀತ, ಕೆಮ್ಮು, ಗೂರಲು, ಉಬ್ಬಸದ ಸಮಸ್ಯೆ ಕೆಲವರನ್ನು ಬಹುವಾಗಿ ಕಾಡುವುದು ಈ ಮಳೆಗಾಲದ ಕಷ್ಟ ಎಂದೆನ್ನಬಹುದು. ಮಳೆ ಮತ್ತು ಶೀತಗಾಳಿ ಯಿಂದಾಗಿ ಇದೇ ಸಮಯ ಕೆಲವರ ಸ್ಥಿತಿ ಗಂಭೀರವಾಗಿ ಹಟ್ಟಿಗಿಟ್ಟಿದ್ದವರು ಪರಂಧಾಮಗೈಯ್ಯುತ್ತಿದ್ದರು. ಈ ಮಳೆಗಾಲವು ಕೆಲವು ಕಡೆ ಅದೆಂತಹ ದುರ್ಬರ ಸ್ಥಿತಿಯನ್ನು ತಂದಿಡುತ್ತಿತ್ತು ಎಂದರೆ ಶವವನ್ನು ಹೊತ್ತೊಯ್ಯುವವರು ಹಳ್ಳದಿಣ್ಣೆಯ ಮೇಲೆ ಕಾಲು ಜಾರುತ್ತ, ಚಪ್ಪಲಿಗಳು ಕೆಸರಿನಲ್ಲಿ ಹೂತು ಹಾಗೂ ಹೀಗೂ ಮಸಣ ತಲುಪಿದರೆ ಶವ ಹೂಳಲು ಎಂದು ತೆಗೆದ ಗುಂಡಿಗಳು ನೀರು ತುಂಬಿ ಹೋಗಿರುತ್ತಿದ್ದವು. ಆ ನೀರನ್ನು ತೆಗೆದು ಶವಸಂಸ್ಕಾರ ಮುಗಿಸುವಷ್ಟರಲ್ಲಿ ಇದ್ದಬದ್ದವರ ಹೈರಾಣವಾಗಿರುತ್ತಿದ್ದರು.

ಜನಪದರು ಇಂತೆ ಸಂಕಷ್ಟಗಳನ್ನು ಎದುರಿಸಿದ್ದರಿಂದಲೇ. ‘ಕಾರೆಂಬ ಕvಲಲ್ಲಿ . . ಬೋರೆಂಬ ಮಳೆ ಸುರಿದು. . ಇಷ್ಟು ದಿನ ತನುವೊಳಗಿದ್ದು. . ಹೋಗುವಾಗ ಒಂದು ಮಾತು ಹೇಳದೆಲೆ ಹೋದಲೆ, ಎಲೆ ಹಂಸೆ’ ಎಂದು ಪ್ರಾಣಪಕ್ಷಿಯನ್ನು ಕುರಿತು ಹಾಡಿದ್ದು. ‘ಆಷಾಢದ ಮಳೆ ಅಟ್ಟಾಡಿಸಿಕೊಂಡು ಹೊಡೆಯುವಾಗ ಹಾಳಾದ್ ಜೀವ ಹೆಣ್ಣಾಗಾದ್ರು ಹುಟ್ಬಾರ್ದಿತ್ತಾ’ ಎನ್ನುವ ಗಾದೆ ಹೊಲ ಗದ್ದೆಗಳಲ್ಲಿ ಮಳೆಯನ್ನೆದುರಿಸಿ ಹೋರಾಟ ಮಾಡುತ್ತಿದ್ದವರ ಗಾಥೆಯನ್ನು ಹೇಳುತ್ತದೆ. ಗಡಗಡ ನಡುಗುವ ದೇಹಕ್ಕೆ ಕಾಫಿ ಕುಡಿಯುವ ಆಸೆ. ಆದರೆ ಈ ಮಳೆಗೆ ಮೇಯಲು ಹೊರ ಹೋಗಲಾರದೆ ಒಳಗಿನ ಕೊಟ್ಟಿಗೆಯಲ್ಲಿಯೇ ನಿಂತು ಶೀತಗಾಳಿಗೆ ಹಸುಗಳು ಸರಿಯಾಗಿ ಹಾಲು ನೀಡದ ಕಾರಣಕ್ಕಾಗಿ ಹಾಲಿನ ಕೊರತೆ ಎಲ್ಲರ ಮನೆಯಲ್ಲೂ.

ಆದರೆ ಅದಕ್ಕೂ ಜಗ್ಗದೆ ಬರಗಾಫಿಯನ್ನು ಕುಡಿದು ಹೆಂಗಸರ ಜೊತೆಗೆ ಗಂಡಸರು ಸಹ ಚಳಿ ನಿವಾರಿಸಿಕೊಂಡರೆ, ಕಾಫಿಯ ಬಿಸಿ ಸಾಕಾಗದೇ ಇದ್ದ ಕೆಲವರಿಗೆ ಹೆಂಡ, ಸರಾಯಿಯ ಗಡಂಗಿನಂಗಡಿಯ ಕಡೆ ಸೆಳೆತ. ಆಗಿನ ದಿನಗಳಲ್ಲಿ ನಮ್ಮೂರಿನ ಮನರಂಜನೆಯ ಏಕೈಕ ಮಾಧ್ಯಮವಾಗಿದ್ದ ಟೆಂಟು ಸಿನಿಮಾದವರಿಗೂ ಇದು ಸಂಕಷ್ಟ ಕಾಲ. ನಾಲ್ಕು ತಿಂಗಳ ಕಾಲ ನಡೆದಷ್ಟು ನಡೆಯಲಿ ಎಂಬಂತೆ ಬೆಂಗಳೂರು, ಹಾಸನಗಳಲ್ಲಿ ಒಂದು ವಾರ ಕೂಡಾ ನಡೆಯದ ಸೂಪರ್ -ಪಾದ
ಸಿನಿಮಾಗಳು ಸಾಲುಸಾಲಾಗಿ ಬರುತ್ತಿದ್ದವು. ಇದರ ಜೊತೆಗೆ ತಮಿಳು, ತೆಲುಗಿನ ಜೇಮ್ಸ ಬಾಂಡ್, ತಂದೆ ತಾಯಿ ಕೊಂದವರ ಮೇಲಿನ ಸೇಡು ತೀರಿಸಿಕೊಳ್ಳುವ ಭಯಂಕರ ಹೊಡೆದಾಟದ ಸಿನಿಮಾಗಳು ಇದೇ ಮಳೆಗಾಲದ ಸಮಯದಲ್ಲಿ ನಮ್ಮೂರಿಗೆ ಧಾವಿಸುತ್ತಿದ್ದವು.

ಹೊಡೆದಾಟ ಬಡಿದಾಟದ ಆಕರ್ಷಣೆಗೆ ಸಿಲುಕಿದ ನಾವೆಲ್ಲರೂ, ಸಿನಿಮಾ ಟೆಂಟ್ ಎಂಬ ಗುಡಾರದ ಅಡಿಯಲ್ಲಿ ನೀರು ಸೋರದ ಜಾಗವನ್ನು ಹುಡುಕಿ, ಅಲ್ಲಿ ಕುಳಿತು ಸಿನಿಮಾ ನೋಡಲು ಸಾಹಸ ಮಾಡುತ್ತಿzವು. ಕೆಲ ಸಿನಿ ಪ್ರೇಮಿಗಳು ಛತ್ರಿ ಹಿಡಿದು ಚಿತ್ರ ನೋಡುವ ಸಾಹಸಕ್ಕೆ ಬಿದ್ದು, ಹಿಂದೆ ಕುಳಿತವರು ಸಾಕಷ್ಟು ಗುರಾಯಿಸಿ ಅತ್ತ ಕಳುಹಿಸುತ್ತಿದ್ದರಿಂದ ಟವಲ್‌ಗಳನ್ನು ತಲೆಗೇರಿಸಿ ಸಿನಿಮಾ ನೋಡುವ ಸಾಹಸವನ್ನು ಮುಂದುವರಿಸುತ್ತಿದ್ದರು.

ಇನ್ನೂ ನಾಟಕದವರ ಪಾಡಂತೂ ನಾಯಿ ಪಾಡು. ಜನ ಬರದೆ ಕಲೆಕ್ಷನ್ ಆಗದೆ ಸೊರಗಿದ ಅವರು, ನಮ್ಮ ಶಾಲೆಗಳ ಬಳಿ ಬಂದು ಬೆನಿಫಿಟ್ ಶೋ ಮಾಡುವು ದಾಗಿ ತಿಳಿಸಿ, ನಮ್ಮಿಂದ ಐದು, ಹತ್ತು ರೂಗಳನ್ನು ಪಡೆದು ನಾಟಕದ ಒಂದೆರಡು ದೃಶ್ಯಗಳನ್ನು ಅಭಿನಯಿಸಿದ ಶಾಸ್ತ್ರ ಮಾಡಿ ಜೀವನ ಸಾಗಿಸಲು ಮುಂದಿ ನೂರಿಗೆ ಪಯಣಿಸುತ್ತಿದ್ದರು. ರಂಗನಾಯಕಿ ಸಿನಿಮಾದಲ್ಲಿ ನಾಯಕಿ ಇಂಥದ್ದೇ ಮಳೆಯನ್ನು ನೋಡುತ್ತಾ ನಾಟಕ ಕಂಪನಿಗಳ ಕುರಿತಾಗಿ ಹೇಳುತ್ತಿದ್ದ ಸ್ವಗತದ ಮಾತುಗಳು ತಟ್ಟನೆ ಈ ಕಂಪನಿಗಳನ್ನು ನೆನೆಯುವಂತೆ ಮಾಡುತ್ತಿತ್ತು.

ನಮ್ಮೂರಿನ ಅಮೆಚೂರಿನ ಕಲಾವಿದರು ಆಗಸ್ಟ್ 15ರ ಸಂದರ್ಭಕ್ಕೆಂದು ‘ಸುಳಿಯಲ್ಲಿ ಸಿಕ್ಕವರು’ ಎಂಬ ಸಸ್ಪೆನ್ಸ್ ಭರಿತ ನಾಟಕವನ್ನು ಇಂಥದ್ದೇ ಮಳೆಗಾಲದಲ್ಲಿ ಮಾಡಿ, ಸಿಡಿಲು ಗುಡುಗಿನ ಎಫೆಕ್ಟಿಗಾಗಿ ಆಗ ಚಾಲ್ತಿಯಲ್ಲಿದ್ದ ಟೇಪ್ ರೇಕಾರ್ಡರ್‌ಗಳಲ್ಲಿ ಭೀಕರ ಸದ್ದುಗಳನ್ನು ರೆಕಾರ್ಡ್ ಮಾಡಿ ಚಾಲನೆ ಮಾಡಿದ್ದಲ್ಲದೆ, ಬಿಳಿ
ಪರದೆಯ ಹಿಂದೆ ಕೈಕಾಲುಗಳನ್ನು ಜಾಡಿಸಿ ಉದ್ದನೆಯ ನೆರಳಿನ ಅನುಭವ ನೀಡಿದ್ದಲ್ಲದೆ, ಲೈಟುಗಳನ್ನು ಆನ್ ಆಫ್ ಮಾಡುವ ಸಂದರ್ಭ ಮಧ್ಯದಲ್ಲಿ ಕರೆಂಟು ಹೋಗಿ ನೋಡುಗರ ಎದೆನಡುಗಿಸಿದ್ದು ಉಂಟು.

ಮಲೆನಾಡನ್ನು ಮಲೆನಾಡು ಎಂದು ಕರೆಯಲು ಕಾರಣವೇನು? ಬ ಪ್ರಶ್ನೆಗೆ ಬೆಟ್ಟಕಾಡುಗಳ ನಾಡು ಎಂಬ ಉತ್ತರವನ್ನು ಒಪ್ಪದೆ ನಮ್ಮ ಮಾಸ್ತರರು ‘ಸರಿಯಾಗಿ ಹೇಳಬೇಕೆಂದರೆ ಅದು ಮಳೆನಾಡು. ಮಳೆ ಹೆಚ್ಚು ಬೀಳುವುದರಿಂದ ಆ ಹೆಸರು ಬಂದಿದೆ’ ಎಂದು ತಿಳಿಸಿ ಆಗ ಹಳೆಗನ್ನಡದ ಲಕ್ಷಣಗಳಲ್ಲಿ ವ-ಮ, ಹ-ಪ ಭೇದದ ಜೊತೆಗೆ ಲ-ಳ ಭೇದವನ್ನು ಬೆಸೆದಿದ್ದರು. ಇದರ ಜೊತೆಗೆ ಕುವೆಂಪುರವರ ‘ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ’ ಸಾಲುಗಳನ್ನು ಹೇಳಿದ್ದಲ್ಲದೆ, ನಮ್ಮ ಮನೆ ಕವಿತೆಯ ಮೊದಲ ಮಿಂಚು ಹೊಳೆದ ಮನೆ ಮೊದಲ ಗುಡುಗು ಕೇಳ್ದ ಮನೆ ಮೊದಲ ಮಳೆಯು ಕರೆದು ಕರೆದು ಹೆಂಚ ಮೇಲೆ ಸದ್ದು ಹರಿದು ಮಾಡಿನಿಂದ ನೀರು ಸುರಿದು ಬೆರಗನಿತ್ತ ನಮ್ಮ ಮನೆ ಸಾಲುಗಳನ್ನು ಅಭಿನಯ ಪೂರ್ವಕವಾಗಿ ಹಾಡಿ ತೋರಿಸಿದ್ದರು.

ಈಗ ಅಂತಹ ಮಳೆ ಕಾಣದಾಗಿದೆ. ಭೋರೆಂದು ಸುರಿಯುತ್ತಿದ್ದ ಮಳೆ ಈಗ ಕಡಿಮೆ. ಕೆಲವೆಡೆ ಮಾತ್ರ ಸೈಕ್ಲೋನ್ ಪ್ರಭಾವದಿಂದಾಗಿ ಮೂರ್ನಾಲ್ಕು ದಿನಗಳ ಕಾಲ ರಭಸವಾಗಿ ಹಿಡಿದು ಅತಿವೃಷ್ಟಿಯ ಪ್ರಭಾವ ತೋರಿ ಮತ್ತೆ ಮಾಯವಾಗುವುದು. ಉಳಿದಂತೆ ಆಗೊಮ್ಮೆ ಈಗೊಮ್ಮೆ ಒಂದೆರೆಡು ದಿನ ಹನಿಯುವ ಉರುಬಿನಂಥ, ನಮ್ಮೂರಿನವರು ಹೇಳುತ್ತಿದ್ದ ‘ಪಂಚೆ ನೆನೆಯುವ’ ಮಳೆಯನ್ನೇ ಅದ್ಭುತ ಮಳೆ ಎಂದು ಕರೆಯುತ್ತಾ ಹಳೆಯ ಮಳೆಯನ್ನು ನೆನೆಯಬೇಕಾಗಿದೆ.