Wednesday, 11th December 2024

ಮೊರೆಮರೆವ ಮಹಾಸಮುದ್ರ

ಸಂಡೆ ಸಮಯ

ಸೌರಭ ರಾವ್‌

ಹೇ ಮಹಾಸಿಂಧು,
ನಿನ್ನ ಅಲ್ಪಬಿಂದು ಹಿಗ್ಗಿ ಅಲೆಅಲೆಯಾಗಿ
ತೀರವ ತಲುಪುವಷ್ಟರಲ್ಲಿ ಅಡಿಗಡಿಗೆ ಕೆರಳಿ
ಅರಳರಳಿ ನರಳಿ ಮರಮರಳಿ
ಕರುಳ ಹಿಂಡುತಿದೆ
ಓ ಮೊರೆಮೊರೆವ ಮಹಾಸಮುದ್ರ
ಭೂರಂಗದ ಮೇಲೆ ನಿನ್ನ ಪಾತ್ರವ, ಅದರ ಗಾತ್ರವ
ನೋಡುತ್ತ ನೋಡುತ್ತ ಕೇಳುತ್ತ ಕೇಳುತ್ತ ಭಾವಶುದ್ಧಿ
ಭಾವಸಮಾಽ
ಆ ಅಂಬುಽಯ ಎದುರು ಮರುಳ ಮನಸ್ಸು
ಇರುಳ ಕತ್ತಲೊಂದರಲ್ಲಿ ಮನೆಯಂಗಳ ಬೆಳ್ದಿಂಗಳಿಗೆ
ಅಂಗಲಾಚುವಂತೆ ತೆರೆದುಕೊಂಡಾಗ
ಆ ಅಗ್ರಾಹ್ಯ ಆಳದಲ್ಲಿ, ಅದರ ಸಖ್ಯಯೋಗದ ಬೆಳಕಲ್ಲಿ ಎಲ್ಲರ
ಬವಣೆಗಳು ತಣಿವು ಕಾಣಲಿ
ಜೀವನಪ್ರೀತಿಯ ಬೆಳಕೇ, ಬಾ
ಬದುಕನಾಳು

ಆದರೂ, ಆದರೂ, ಸ್ಪಷ್ಟ ಗಮ್ಯ ಈ ಸಮುದ್ರ. ನದಿ ತೊರೆ ಝರಿಗಳ ಆವೇಶ, ಆವೇಗಗಳಿಗೆ, ಅಲ್ಲಲ್ಲಿ ಆವರಿಸುವ ಅವುಗಳ
ಮೌನಗಳಿಗೆಲ್ಲ ಖಚಿತ ಕೊನೆ ಈ ಸಮುದ್ರ. ಆದರೆ, ಆದರೆ, ಅಲೆ ಅಲೆ ಅಲೆ ಇಡೀ ಸಾಗರವನೆಲ್ಲ ಅಲೆಅಲೆದು ಉಕ್ಕಿ ಕುಗ್ಗಿ ಆಗಾಗ ತೀರವ ತೇವಗೊಳಿಸಿ ಆಗಾಗ ಮಧ್ಯೆಯ ಎಲ್ಲಾ ಮುಗ್ಗರಿಸಿ ಮತ್ತದೇ ಅಪಾರ ಅಗಾಧ ಸಾಗರದಲ್ಲಿ.

ಉಕ್ಕಿದ್ದೆಲ್ಲಿ? ಮರೆಯಾಗಿದ್ದೆಲ್ಲಿ? ಮೊದಲೆಲ್ಲಿ? ಕೊನೆಯೆಲ್ಲಿ? ಪಿಸುಗುನುಗುಗಳ ಪುಳಕಗಳಂತೂ ಇಲ್ಲ. ಮೊರೆಮೊರೆದು ಅಬ್ಬರಿಸಿದರೂ ಒಮ್ಮೊಮ್ಮೆ ಮನಸ್ಸಿನ ಮೌನವ ಸೀಳಿಹಾಕಲು ಸೋಲುತ್ತದೆ ಸಮುದ್ರ. ಎಲ್ಲರೊಳಗೂ ಕಾಣುವಂತೆಯೋ ಕಾಣದಂತೆಯೋ ಇರುವ ಪರಿಚಿತ ಹುಚ್ಚುಗಳ, ಅಮಾಯಕ ಅತಿರೇಕಗಳ ಅರ್ಥಮಾಡಿಕೊಳ್ಳುವ ಆದರೆ ತಾನೇ ಒಬ್ಬ ಅಸಹಾಯಕ ಸ್ನೇಹಿತೆಯಂತೆ ತನ್ನದೇ ಆಳದಲ್ಲಿ ಕಳೆದುಹೋದಂತೆ ಕಣ್ಣಮುಂದಿದ್ದರೂ ದೂರ ನಿಂತಂತಿದೆ.

ಸಮುದ್ರದ್ದೇನಿದು ಅನವರತ ಹಸಿವು? ಸಂಜೆಯಾಗುತ್ತಿದ್ದಂತೆ ಅಲ್ಲಿ ಸೂರ್ಯನನ್ನು ಇಡಿಯಾಗಿ ನುಂಗಿಬಿಡುತ್ತದೆ, ಇಲ್ಲಿ ತೀರ
ದೆಡೆಗೆ ಮುಗ್ಗರಿಸಿ, ಮೊರೆಮೊರೆದು ಓಡಿಬರುತ್ತದೆ. ಅ ಮೋಡದ ಗರ್ಭದಲ್ಲಿತ್ತು ಸಮುದ್ರ, ಇನ್ನೆ ರಾಶಿ ರಾಶಿ ಇಬ್ಬನಿಯಾಗಿತ್ತು. ನನ್ನಲ್ಲಿ ಹೆಪ್ಪುಗಟ್ಟಿ ಮತ್ತಾರದೋ ಕಂಬನಿಯಾಗಿತ್ತು. ನದಿಗಳೆಲ್ಲ ಕೂಡಿಕೊಂಡ ಜಲರಾಶಿ ತಾನಾಗಿ, ತಾನಾದರೂ ಏನೆಂದು ತಾನಾರೆಂದು ತನ್ನನ್ನೇ ಹುಡುಕುತ್ತಿದೆ ಸಮುದ್ರ.

ಸಮುದ್ರ ಒಮ್ಮೊಮ್ಮೆ ಹೋಲಿಕೆಯಾಗಿ ಮಿಲ್ಲುವುದಿಲ್ಲ, ನಿಲುಕುವುದಿಲ್ಲ, ಸಾಂತ್ವನ ತರುವುದಿಲ್ಲ, ಆದರೂ ನಮಗಿಂತ
ಬಹಳ ಬೇರೆಯಾಗಿಯೂ ಕಾಣುವುದಿಲ್ಲ. ತಾನೂ ಕೆರಳುತ್ತಾ, ನರಳುತ್ತಾ ನಮ್ಮೊಳಗಿನ ಅಪೂರ್ಣತೆಗಳೆಲ್ಲ ಅರಳುವ ಮುದ್ದು
ನೋವ ಸಹಿಸಲು ಅಷ್ಟರಮಟ್ಟಿಗೆ ನೆರವಾಗುತ್ತದೆ. ಈ ವಿಶಾಲ ಜಲನಿಧಿಗೆ ನಮ್ಮ ಮನಸ್ಸಿನ ದಾಹಗಳ ಅರಿವಿಲ್ಲನಮಗೇ
ಒಮ್ಮೊಮ್ಮೆ ಅವುಗಳ ಸ್ಪಷ್ಟತೆಯಿಲ್ಲ. ಸುತ್ತಮುತ್ತಲಿನ ಬಣ್ಣಗಳ ಹೊದ್ದು ಪ್ರತಿಫಲಿಸುತ್ತ ನಿಲ್ಲುತ್ತದೆ ಸಮುದ್ರ, ಸಮುದ್ರದ
ನಿರ್ವರ್ಣ ವೇದನೆಯೀಗ ನನ್ನಾಳದಲ್ಲೂ.

ಭಾಷೆಯ ಹಂಗಿಲ್ಲದ ಭಾವಕ್ಕೆ ಸಾಥಿಯಾಗುತ್ತದೆ ಸಮುದ್ರ, ಒಮ್ಮೊಮ್ಮೆ ಹೀಗೆ ಭಾಷೆಯೂ ಆಗಿಬಿಡುತ್ತಾ ತನ್ನ ನಿರಂತರತೆಯ ಸದಾ ಏಕಾಂತ ಜೀವಗಳ ಸಂಗಾತಿಯಾಗುತ್ತಾ. ಸಮುದ್ರ, ನಿನ್ನ ಯುಗಮಾನಗಳ ಮೂಕತಪಸ್ಸಿಗೆ, ಆ ಅದಮ್ಯ ಸಂಯಮಕ್ಕೆ ನಮಿಸುತ್ತಾ, ನಿನ್ನೊಡನೆ ಹೀಗೊಂದು ಸಣ್ಣ ಸಪ. ಕೆಲವು ರಾತ್ರಿ ಬೆಳದಿಂಗಳನ್ನು ತೊಟ್ಟು ನಿಲ್ಲುವ ನಿನ್ನ ಸೌಮ್ಯ ನಿಲುವು. ಕೆಲವು ಮುಂಜಾವು ಸೂರ್ಯರಶ್ಮಿಗಳ ಚುಂಬನಕ್ಕೆ ಹೊಳೆವ ಹಿಮದ ಹರಳುಗಳ ತೊಟ್ಟು ನಿಲ್ಲುವ ನಿನ್ನ ವೈಭವದ ನಿಲುವು. ಬಣ್ಣಗಳ ಬಹುತ್ವ, ವಿವಿಧತೆಯ ತೊಟ್ಟು ನಿಲ್ಲುವ ನಿನ್ನ ನಿಗರ್ವಿ ನಿಲುವು.

ನಿನ್ನ ನೋಡುನೋಡುತ್ತ ಇಮ್ಮಡಿ, ನೂರ್ಮಡಿಗೊಳ್ಳುವ ಸುಖಕ್ಕೂ ನಿನ್ನಂತೆಯೇ ಮೊರೆತಗಳ ನಡುವೆಯೂ ಎಂಥದೋ ಸ್ಥಿರತೆ ತಂದುಕೊಡುವ ನಿನ್ನ ನಿಲುವು. ಹೆಮ್ಮೆ-ಕುಗ್ಗುಗಳಿಲ್ಲದ ನಿಷ್ಕಲ್ಮಶ ಸುಖವದು, ನಿನ್ನ ಅಸ್ಥಿರ ಎಂದು ಮೇಲ್ನೋಟಕ್ಕ ನಿಸುವ ಚೇತನ ತರುವ ಸ್ಥಿರ ಸುಖವದು – ನಿನ್ನ ಭವ್ಯ ಪ್ರಚಂಡ ಅಲೆಗಳ ನೋಡುವುದು.

ನಿನ್ನ ವರ್ಣವೈವಿಧ್ಯ ನಮ್ಮವೇ ವಿವಿಧ ಮನೋವೃತ್ತಿಗಳಿಗೆ ಸ್ಪಂದಿಸಿದಂತೆ. ನಿನ್ನ ಮುಗಿಯದ ನೀಲಿ ಮೊರೆತದ ಮುಂದೆ ನಿನ್ನ ಜೊತೆ ಮಾತಿನ ಹಂಗೂ ಇರದ ಅಂತಃಕರಣ ಬೆಳೆದುಬಿಡುತ್ತದೆ. ಆ ತೆರವಿನಲ್ಲಿ ಮಾತು ಬೇಡವಾಗುತ್ತದೆ, ಭಾವ ಮತ್ತೂ
ಮಾರ್ದವವಾಗಿ ಮುಕ್ತವಾಗುತ್ತದೆ. ಕಡೆಗೆ ಎಲ್ಲ ಆಲೋಚನೆಗಳೂ ಒಂದೊಂದಾಗಿ ಕಣ್ಮರೆಯಾಗಿ ನಿನ್ನ ನೀಲಿ ಆಳದಲ್ಲಿ, ನಿನ್ನ
ಆಗಸದಂಥ ಅನಂತತೆಯಲ್ಲಿ ಮನಸ್ಸು ಮೌನಿಯಾಗುತ್ತದೆ. ನಿನ್ನ ಮೊರೆತಕ್ಕೆ, ಮಗ್ನರಾಗಿ ನಿನ್ನ ಆರಾಧಿಸುವವರ ಮೇಲೆ
ಎಂಥದೋ ಮರುಕವಿದ್ದಂತೆ.

ತರ್ಕವೂ-ಭಾವವೂ ಸಮತೂಕದ್ದಾಗಿ ಬೆರೆತು ಬೆಳೆಯುವ ಜೀವನಪ್ರೀತಿಗೆ ಪೂರಕವಾಗುವಂತೆ, ನಿನ್ನ ಮೊರೆತ. ಹಾಗೊಮ್ಮೆ ಭಾವಗಳು ತಮ್ಮ ನೆಲೆ ಸಡಿಲಗೊಂಡು ಹರಿದಾಡಿ ಅeತದ ಸಂಚರಿಸಿದರೂ, ಕಡೆಗೆ ತಂತಮ್ಮ ನೆಲೆಗೇ ಮರಳುವಂತೆ ಮಾಡುವ ನಿನ್ನ ಮೊರೆತ. ಲೌಕಿಕ ನೋಟದಿಂದಲೇ ಅಲೌಕಿಕ, ಸಾತ್ವಿಕ ಸುಖ ತಂದುಕೊಡುವ, ದಿಕ್ಕುಗಳೆಲ್ಲವೂ ಮರೆತುಹೋಗುವಂತೆ ಹರಡಿದ ನಿನ್ನ ಮಡಿಲಿಗೆ ಮತ್ತೊಮ್ಮೆ, ಮಗದೊಮ್ಮೆ ಮರಳುತ್ತಲೇ ಇರಬೇಕೆಂಬ ಭಾವುಕತನವದು.

ಸಮುದ್ರ, ನಿನ್ನೊಡನಿಂಥದ್ದೊಂದು ಮಾನಸಿಕ ಮೈತ್ರಿ. ಎಂಥಾ ಋಣ!