Saturday, 14th December 2024

ಸಮುದ್ರಕ್ಕೆ ನಮ್ಮ ಸ್ವಾರ್ಥಗಳ ಬಗ್ಗೆ ಚಿಂತೆಯಿಲ್ಲ ಇರಬೇಕಾಗೂ ಇಲ್ಲ

ಸಂಡೆ ಸಮಯ

ಸೌರಭ ರಾವ್‌

ಖ್ಯಾತ ಲೆಬನೀಸ್-ಅಮೆರಿಕನ್ ಕವಿ ಖಲೀಲ್ ಗಿಬ್ರಾನ್ ಅವರ The River Cannot Go Back ಕವನದ ಕೆಲವು ಸಾಲುಗಳಿವು:
It is said that before entering the sea a river trembles with fear. She looks back at the path she has traveled, from the peaks of the mountains, the long winding road crossing forests and villages. And in front of her, she sees an ocean so vast, that to enter there seems nothing more than to disappear forever..

ಆದರೆ ಇಂದು ದೇಶದಲ್ಲಿ cannot go back ಎನ್ನುವ ಪರಿಸ್ಥಿತಿ ಇರುವುದು ಕಡಲತೀರ (ಬೀಚ್)ಗಳಿಗೆ. ಉಪಗ್ರಹಗಳಿಂದ ಕಲೆ ಹಾಕಿರುವ ಮಾಹಿತಿಯ ಆಧಾರದ ಮೇಲೆ ಸಮುದ್ರಮಟ್ಟದಲ್ಲಿ ಹೆಚ್ಚಳ ಮತ್ತು ಭಾರತದ ಕಡಲತೀರದ ಇಳಿಜಾರಿನಲ್ಲಿ ಬದಲಾ ವಣೆಗಳ ಬಗ್ಗೆ ಸಂಶೋಧನೆ ನಡೆಸಿರುವ ಇಂಡಿಯನ್ ನ್ಯಾಷನಲ್ ಸೆಂರ್ಟ ರ್ಫಾ ಓಷನ್ ಇನ್ಫರ್ಮೇಷನ್‌ನ ಪ್ರಕಾಶ್ ಮೊಹಾಂತಿ, ಟಿ.ಶ್ರೀನಿವಾಸ ಕುಮಾರ್ ಮತ್ತು ಮಹೇಂದ್ರ ಆರ್. ಎಸ್. ಮತ್ತು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ಆರ್‌. ಕೆ. ನಾಯಕ್ ಅವರ ಅಧ್ಯಯನವೊಂದರ ಪ್ರಕಾರ, ಭೂಸವೆತ ಪಶ್ಚಿಮ ಬಂಗಾಳದಲ್ಲಿ ಅತೀ ಹೆಚ್ಚು ಕಂಡುಬಂದಿದ್ದು (70%),
ಎರಡನೇ ಸ್ಥಾನದಲ್ಲಿ ಕೇರಳ ರಾಜ್ಯವಿದೆ (65%).

ಕಡಲತೀರದ ಭೂಸವೆತದಿಂದ ಮನುಷ್ಯರ ಮೇಲಾಗುವ ನೇರ ದುಷ್ಪರಿಣಾಮವನ್ನು ಮೊದಲು ಎದುರಿಸುವುದು ಮೀನುಗಾರಿಕೆ ಸಮುದಾಯಗಳು. ಭೂಸವೆತದಿಂದ ಎಷ್ಟೋ ಜನ ತಮ್ಮ ಮನೆ, ಆಸ್ತಿ ಕಳೆದುಕೊಂಡು ವಲಸೆ ಹೋಗಬೇಕಾದ ಸಂದರ್ಭ ಗಳನ್ನೂ ನೋಡಿದ್ದೇವೆ. 2017ರ ಡಿಸೆಂಬರಿನಲ್ಲಿ KU ಚಂಡಮಾರುತ ಕೇರಳವನ್ನು ಕಂಗೆಡಿಸಿದಾಗ ಕಡಲತೀರದ ಸಾವಿರಾರು ಜನ ಬೇರೆ ಬೇರೆ ನಗರಗಳ ಕಡೆಗೆ ವಲಸೆ ಹೋಗಬೇಕಾಯಿತು.

2,450 ಕೋಟಿ ರೂಪಾಯಿ ವೆಚ್ಚದಲ್ಲಿ ‘ಪುನರ್ಗೇಹಮ್ ಯೋಜನೆ’ಯನ್ನು ಕೇರಳ ಸರ್ಕಾರ 2019ರ ಡಿಸೆಂಬರಿನಲ್ಲಿ ಜಾರಿಗೆ ತಂದು ಕಡಲತೀರದಿಂದ 50 ಮೀಟರ್ ಒಳಗೆ ವಾಸಿಸುವ 18,685 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿತು. ಆದರೆ ಪ್ರತಿ  ವರ್ಷವೂ, ಭೂಸವೆತದ ಕಾರಣದಿಂದ ಕೇರಳದ ಕಡಲತೀರದ ಜಿಲ್ಲಾಡಳಿತಗಳು ಹೆಚ್ಚು ಹೆಚ್ಚು ಪುನರ್ವಸತಿ ಕೇಂದ್ರಗಳನ್ನು ತೆರೆಯುವ ಪರಿಸ್ಥಿತಿಯಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಕೋವಿಡ್ ಪರಿಸ್ಥಿತಿಯ ನಡುವೆಯೂ ಇಂತಹ ವಲಸೆಗಳು ನಡೆದಿವೆ. ಕಡಲತೀರದ ಭೂಸವೆತ ಅನೇಕ ನೈಸರ್ಗಿಕ ಕಾರಣಗಳಿಗೆ ಉಂಟಾಗುವುದಾದರೂ, ಮರಳು ಗಣಿಗಾರಿಕೆ, ಬಂದರುಗಳ ನಿರ್ಮಾಣ, ಅರಣ್ಯನಾಶದಂತಹ
ಅನೇಕ ಮನುಷ್ಯರ ಚಟುವಟಿಕೆಗಳಿಂದ ಇನ್ನೂ ಬಿಗಡಾಯಿಸುತ್ತದೆ. ಕಡಲತೀರದ ಭೂಸವೆತದಿಂದ ಮನುಷ್ಯರ ಮೇಲಾಗುವ ದುಷ್ಪರಿಣಾಮಗಳಂತೆಯೇ ನಮ್ಮನ್ನೊಳಗೊಂಡ ಪರಿಸರಕ್ಕೂ ಹಾನಿಯಾಗುತ್ತದೆ.

ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿ-ಇಂಡಿಯಾದ ಮರೀನ್ ಪ್ರೋಗ್ರಾಮ್ ತಂಡದ ಮುಖ್ಯಸ್ಥರಾದ ವರ್ಧನ್ ಪಾಟಂಕರ್ ಅವರ ಪ್ರಕಾರ, ಕಡಲತೀರದ ಭೂಸವೆತವನ್ನು ತಡೆಗಟ್ಟುವುದಕ್ಕೆ ಮೂರು ಮುಖ್ಯ ದಾರಿಗಳಿವೆ. ಮೊದಲನೆಯದಾಗಿ ‘ಬೀಚ್ ಪ್ರೊಫೈಲಿಂಗ್’ – ಕಡಲತೀರದ ಏರಿಳಿತಗಳ ಮೇಲೆ ಆಗಾಗ್ಗೆ ಸಮೀಕ್ಷೆ, ಅಧ್ಯಯನಗಳ ಮೂಲಕ ಗಮನವಿಟ್ಟು ಸಮುದ್ರ ಮಟ್ಟ ದಲ್ಲಿನ ಹೆಚ್ಚಳವನ್ನು ಕಂಡುಕೊಳ್ಳುವುದು. ಎರಡನೆಯದಾಗಿ, ಕಳೆದ ಕೆಲವು ವರ್ಷಗಳಲ್ಲಿ ಅನೇಕ ಬಾರಿ ತಿದ್ದುಪಡಿ ತಂದಿರ ಲಾಗಿರುವ ಕೋಸ್ಟಲ್ ರೇಗುಲೇಷನ್ ಜೋನ್‌ಗೆ ಸಂಬಂಧಪಟ್ಟ ಕಾಯ್ದೆಗಳನ್ನು ಮತ್ತಷ್ಟು ಬಲಗೊಳಿಸುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು.

ಕಡೆಯದಾಗಿ, ಕಡಲತೀರದಲ್ಲಿ ಏನನ್ನೇ ನಿರ್ಮಾಣ ಮಾಡುವುದಾದರೂ ಅದರ ಬಗ್ಗೆ ಅನೇಕ ಬಾರಿ ಚಿಂತಿಸಬೇಕಿದೆ. ವರ್ಧನ್ ಅವರ ಮಾತಿನಲ್ಲೇ ಹೇಳುವುದಾದರೆ, ಸಮುದ್ರತೀರದಿಂದ ಭೂಮಿಯ ಒಂದು ಭಾಗವನ್ನು ನಾವು ತೆಗೆದುಕೊಂಡರೆ, ಅದರ ಲೆಕ್ಕ ಸಮನಾಗಿಸುವುದಕ್ಕೆ ಬೇರೆ ದಾರಿಯಿಲ್ಲದೇ ಸಮುದ್ರ ಅದನ್ನು ತೀರದಲ್ಲಿ ಮತ್ತೆಲ್ಲಾದರೂ ಹಿಂತೆಗೆದುಕೊಳ್ಳುತ್ತದೆ.

ಕೇವಲ ಕಡಲತೀರದ ಭೂಸವೆತದ ತೊಂದರೆಯಲ್ಲ, ಪರಿಸರವನ್ನು ಹೊರತುಪಡಿಸಿ ನಾವಿಲ್ಲ. ಅದಕ್ಕೆ ಯಾವುದೇ ರೀತಿ ಧಕ್ಕೆೆ ಉಂಟಾದರೂ ಅದರ ಪರಿಣಾಮವನ್ನು ಸಮುದ್ರದ ಮತ್ತು ಭೂಮಿಯ ಮೇಲಿನ ಇತರ ಜೀವಿಗಳೂ ಸೇರಿದಂತೆ ನಾವೂ ಅನು ಭವಿಸಬೇಕಾಗುತ್ತದೆ. ಕೇವಲ ಆರ್ಥಿಕ ಹಿನ್ನೆಲೆಯಲ್ಲಿ, ಸಾಮಾಜಿಕ ಹಿನ್ನೆಲೆಯಲ್ಲಿ ಮನುಷ್ಯರಿಗೆ ಮಾತ್ರ ಪರಿಸರ ನಾಶದಿಂದ ಏನಾಗುತ್ತಿದೆ ಎಂಬ ಚಿಂತನೆಯನ್ನು ಮೀರಿ ಪರಿಸರ ಸಂರಕ್ಷಣೆಯಾದರೆ ಮಾತ್ರ ನಮ್ಮ ಭವಿಷ್ಯವೂ ಭದ್ರ ಎನ್ನುವ ಸತ್ಯ ನಮ್ಮ ಕಣ್ತೆರೆಸಲಿ.