Saturday, 23rd November 2024

ಹಾರುವ ಅವರನ್ನು ನೋಡುವ ಕಂಗಳಿರಲಿ

ಸಂಡೆ ಸಮಯ

ಸೌರಭ ರಾವ್

ಎತ್ತರೆತ್ತರದ ಪರ್ವತಗಳ ಮೇಲೆ ಸದ್ದಿಲ್ಲದೇ ಸುರಿದು ಅಲ್ಲಲ್ಲಿ ಬಿಳಿಮೌನ ಬಳಿದ ಹಿಮ, ಸೂರ್ಯನ ಮೊದಲ ಕಿರಣಗಳು ಸೋಕುತ್ತಿದ್ದಂತೆಯೇ ಹೊಳೆಯುತ್ತದೆ. ಒಂದಷ್ಟು ಕಲ್ಲುಗಳ ರಾಶಿಯ ಮಧ್ಯದಿಂದ ಮೌನದ ಎದೆಯೊಡೆಯುವಂತೆ ‘ಕೋಕ್ಲಾಸ್ ಫೆಸೆಂಟ್’ ಹಕ್ಕಿ ಕೂಗುತ್ತದೆ.

ನಮ್ಮ ದೇಶದಲ್ಲಿ ಹಿಮಾಲಯದ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುವ ಹಕ್ಕಿಗಳಲ್ಲಿ ಅದೂ ಒಂದು. ಅಂತಹ ಪಕ್ಷಿಗಳನ್ನು ನೋಡಲೆಂದೇ ಹಿಮಾಲಯಕ್ಕೆ ಹೋಗುವ ಪಕ್ಷಿಪ್ರೇಮಿಗಳಿರುತ್ತಾರೆ. ಮೂಳೆಯಾಳಕ್ಕಿಳಿವ ಚಳಿಯಲ್ಲೂ ಪರ್ವತಾರೋಹಣದ, ಪಕ್ಷಿವೀಕ್ಷಣೆಯ ಹುಚ್ಚು ಹಿಡಿಸಿಕೊಂಡವರ ಹುಚ್ಚು ಹುಚ್ಚಲ್ಲ ಎನಿಸುವುದು ಇಂಥ ಕ್ಷಣಗಳನ್ನು ಕಣ್ಣಾರೆ ಕಂಡಾಗ, ಕಿವಿಗೊಟ್ಟು ಆಲಿಸಿದಾಗ.

ಉತ್ತರಾಖಂಡದ ಗಡ್ವಾಲ್ ಪರ್ವತ ಶ್ರೇಣಿಯಲ್ಲಿ ಒಂದು ವಾರ ಕಳೆದ, ಬೆಂಗಳೂರಿಗೆ ಮರಳುವ ಮುನ್ನ 101 ಹಕ್ಕಿಗಳನ್ನು
ನೋಡಿದ ಅನುಭವವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಹೇಗೆ? ಹಿಮಾಲಯದ ಕೆಲವು ಪರ್ವತಗಳ ನೆತ್ತಿಯ ಮೇಲೆ ಸಿಗುವ ಅದಮ್ಯ ಮೌನ ಮಾತಿಗೆ ನಿಲುಕುವುದು ಹೇಗೆ? ಪರ್ವತಗಳ ನಿಶ್ಚಲ ನಿಲುವಿನ ಹಿನ್ನೆಲೆಯಲ್ಲಿ ಕೆಲವೊಮ್ಮೆ ನಮ್ಮ ಮುಷ್ಠಿ ಯೊಳಗೆ ಮುಚ್ಚಿಟ್ಟುಕೊಂಡು ಬಿಡುವಷ್ಟು ಪುಟ್ಟದಾದ ಹಕ್ಕಿಗಳ ಅವಿಶ್ರಾಂತ ಚಲನೆಯನ್ನು ವರ್ಣಿಸುವುದು ಹೇಗೆ? ಒಮ್ಮೊಮ್ಮೆ ಸುತ್ತಲಿನ ಪರಿಸರದ ಜೊತೆ ಲೀನವಾಗಿಬಿಡುವ, ಒಮ್ಮೊಮ್ಮೆ ಕಣ್ಕುಕ್ಕುವಂಥ ಉಜ್ವಲ ಬಣ್ಣಗಳನ್ನು ಹೊದ್ದು ಹಾರುತ್ತ ಕಣ್ಣ
ಮುಂದಿರುವ ಮರದ ಮೇಲೋ, ಕಲ್ಲಿನ ಮೇಲೋ ಬಂದು ಕೂರುವ ಹಕ್ಕಿಗಳ ವೈವಿಧ್ಯವನ್ನು, ಅಷ್ಟು ಗಮನವನ್ನು ಸೃಷ್ಟಿಯೇ
ಅವಕ್ಕೆ ಕೊಟ್ಟಿರುವ ವಿಸ್ಮಯದ ಸೋಜಿಗವನ್ನು ಹಂಚಿಕೊಳ್ಳುವುದಿರಲಿ, ಮೊದಲು ಅರ್ಥ ಮಾಡಿಕೊಂಡು ಅರಗಿಸಿಕೊಳ್ಳುವುದು
ಹೇಗೆ?

ಒಂದೊಂದು ಹಕ್ಕಿ ಪ್ರಭೇದದಲ್ಲೂ ಗಂಡು ಮತ್ತು ಹೆಣ್ಣಿನ ನಡುವೆ ಇರುವ ಅಜಗಜಾಂತರ ವ್ಯತ್ಯಾಸಗಳ ಹಿಂದಿನ
ಕಾರಣವೇನು? ಸಾವಿರ ಸಾವಿರ ವಿನ್ಯಾಸದ ಕೊಕ್ಕು, ರೆಕ್ಕೆ, ಪುಕ್ಕ, ಕಣ್ಣು, ಕಾಲು, ನೆತ್ತಿ… ಇವೆಲ್ಲ ವಿವರಗಳನ್ನು ಹೀಗೇ ಮಾಡಬೇಕೆಂದು ಜೀವ ವಿಕಸನದ ಅಂತರ್ಗತ ಧೀಶಕ್ತಿಗೆ ಅನಿಸಿದ್ದು ಹೇಗೆ? ಒಂದೊಂದು ಹಕ್ಕಿಯ ಕಂಠದಲ್ಲೂ ಒಂದೊಂದು ಬಗೆಯ ಹಾಡನ್ನು, ಕೂಗನ್ನು ಹೊಂದಿಸಿದ್ದು ಯಾಕೆ? ಕಣ್ಣಿಗೆ ಕಾಣದಿದ್ದರೂ, ಕಿವಿಗೆ ಅದರ ಧ್ವನಿ ಬಿದ್ದ ತಕ್ಷಣವೂ ನಮ್ಮೊಳಗೆ ಪುಳಕವೇಕೆ? ಈ ಹಕ್ಕಿಗಳು ಹಾರುವುದ ನೋಡುವಾಗ ನಾವೇ ಬಿಡುಗಡೆಯಾದಂತೆ ಖುಷಿಯಾಗುವುದು ಏಕೆ? ‘ದೇವರು ರುಜು ಮಾಡಿದನು’, ‘ನೀಲಮೇಘಮಂಡಲ ಸಮಬಣ್ಣ ಮುಗಿಲಿಗೆ ರೆಕ್ಕೆಗಳೊಡೆದವು ಅಣ್ಣ’ ಎಂದೆಲ್ಲಾ ಕವಿಗಳ ಕಂಠದಲ್ಲೂ ಹಾಡುಕ್ಕುವುದಕ್ಕೆ ಸ್ಫೂರ್ತಿಯಾಗುವ ಈ ಜೀವಿಗಳ ಜೊತೆ ನಮ್ಮ ಮುಗಿಯದ ನಂಟೇಕೆ?

ಇಷ್ಟಾದರೂ, ಒಮ್ಮೊಮ್ಮೆ ಅವುಗಳ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತೆ ನಡೆದುಕೊಳ್ಳುವ ನಮ್ಮ ಅಹಂಕಾರಕ್ಕೆ ಕೊನೆಯೆಂದು?
ಭೂಮಿಯ ಮೇಲೆ ನಮ್ಮಂತೆಯೇ ಅವುಗಳಿಗೂ ಸಮವಾದ ಹಕ್ಕಿದೆ ಎಂದು ಗುರುತಿಸಲೂ ಕುರುಡರಾಗಿಬಿಡುತ್ತೇವೇಕೆ?
ಒಂದೊಂದು ಹಕ್ಕಿಯೂ ಸೃಷ್ಟಿಯ ಬಲೆಯಲ್ಲಿ ಒಂದು ಸೂಕ್ಷ್ಮ ಎಳೆ, ಅದರಲ್ಲಿ ಒಂದು ನೂಲು ತನ್ನ ಜಾಗದಲ್ಲಿ ಸ್ಥಿರ ವಾಗಿಲ್ಲದಿದ್ದರೆ ಇಡೀ ಬಲೆಯೇ ನಲುಗಿಹೋಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ನಮ್ಮಲ್ಲಿ ನಾಪತ್ತೆಯಾಗಿ ಬಿಡುವುದೇಕೆ?
ಕಾಡುಗಳನ್ನು, ಹುಲ್ಲುಗಾವಲುಗಳನ್ನು, ಊರಿನ ಕೆರೆಗಳನ್ನು ನಮ್ಮ ಎಣೆಇಲ್ಲದ, ಅಸಹ್ಯ ದುರಾಸೆಗಳಿಗೆ ನಾಶ ಮಾಡುತ್ತಾ
ಹೋದರೆ ಹಕ್ಕಿಗಳು ಹೋಗುವುದಾದರೂ ಎಲ್ಲಿಗೆ? ಕೇವಲ ಅವುಗಳ ಸೌಂದರ್ಯವನ್ನು ನೋಡಿ ಮೋಡಿಗೊಂಡರೆ ಸಾಕಾ? ನಮ್ಮ ನಮ್ಮ ಪರಿಸರದಲ್ಲಿ ಎಂಥೆಂಥ ಹಕ್ಕಿಗಳಿವೆ, ಅವುಗಳ ಅಸ್ತಿತ್ವಕ್ಕೆ ಪೂರಕವಾಗುವಂತೆ ನಮ್ಮ ಜೀವನದ ಆಯ್ಕೆಗಳನ್ನು ಹೇಗೆ ಮಾಡಬಹುದು ಎಂದು ಯೋಚಿಸುವುದು ಯಾವಾಗ?

ಹಿಮಾಲಯದ ಅದ್ಭುತ ಪರ್ವತಗಳ ಮಡಿಲಿಗೆ ಹೋಗುವ ಅವಕಾಶ ಸಿಕ್ಕರೆ, ಅಲ್ಲಿ ಮಾತ್ರವೇ ಕಾಣಸಿಗುವ ಹಕ್ಕಿಗಳನ್ನು
ನೋಡಲು ಸ್ವಲ್ಪವಾದರೂ ಬಿಡುವು ಮಾಡಿಕೊಳ್ಳಿ. ಆದರೆ ನಮ್ಮ ನಮ್ಮ ಮನೆಗಳ ಸುತ್ತಲೇ ಕಾಣುವ ಹಕ್ಕಿಗಳ ಬಣ್ಣಗಳನ್ನು,
ಹಾಡುಗಳನ್ನು ನೋಡಲು, ಕೇಳಲು, ಅವುಗಳ ಅಸ್ತಿತ್ವ ನಮ್ಮದೇ ಅಸ್ತಿತ್ವಕ್ಕೆ ಹೇಗೆ ಸಹಾಯವಾಗುತ್ತದೆ ಎಂಬ ವಿವರಗಳ ಬಗ್ಗೆಯೂ ನಮ್ಮ ಚಿಂತನೆಯಲ್ಲಿ ಪಾಲು ಸಿಗಲಿ. ಕೇವಲ ನಾವು, ನಮ್ಮ ಸಂಸಾರ, ನಮ್ಮ ಮಕ್ಕಳು ಎಂಬ ಮಾನಸಿಕ ಗಡಿಗಳನ್ನು ಮೀರಿ ಎಲ್ಲ ಜೀವಿಗಳ ಬಗ್ಗೆ ನಮ್ಮಲ್ಲಿ ಸಮನಾದ ಅಕ್ಕರೆ, ಗೌರವ ಮೂಡಲಿ, ಹೆಚ್ಚಾಗುತಿರಲಿ.

ಚಿತ್ರಕೃಪೆ: ಸಂತೋಷ ಸಾಲಿಗ್ರಾಮ