Saturday, 23rd November 2024

ಭಕ್ತಿಯೆಂಬ ಭಾವಕ್ಕೆ ಶರಣು

ಸಂಡೆ ಸಮಯ

ಸೌರಭ ರಾವ್‌

ಸೃಷ್ಟಿ ಸೌಂದರ್ಯದ ಯಾವುದೇ ಆಯಾಮವನ್ನು, ಭೌತಿಕವಾಗಿಯಾಗಲೀ, ಆಧ್ಯಾತ್ಮಿಕವಾಗಿಯಾಗಲೀ, ಭಾವನಾತ್ಮಕವಾಗಿ ಯಾಗಲೀ, ಕಡೆಗೆ ವಸ್ತುನಿಷ್ಠವಾಗಿಯಾಗಲೀ, ಅನುಭವ-ಅನು ಭೂತಿಗಳ ಆಳಕ್ಕೆ ಹೊಕ್ಕು ಸ್ವಚ್ಛಂದವಾಗಿ, ನಿರಾಳವಾಗಿ ವಿಹರಿಸುವುದು ಕೆಲವು ಸ್ಥಳಗಳು ನಮಗೆ ಕೊಡುವ ವರ.

ಹಿಮಾಲಯದ ಪರ್ವತಗಳು ಇಂಥಾ ಅನುಭೂತಿ ನೀಡುವ ಎತ್ತರಗಳು. ಬೆಳಕಿನಷ್ಟೇ ಪ್ರಖರವಾಗಿ ತಾನೂ ಸ್ಪಷ್ಟವಾಗಿ, ತಿಳಿತಿಳಿ ಯಾಗಿ ಎಂದಿನಂತೆ ಸಮಚಿತ್ತವಾಗಿರುವ ಹಿಮ – ಗೊಂದಲದ ಗೂಡಾದ ಮನಸ್ಸುಗಳಿಗೆ ಚಿಕಿತ್ಸಕ ನೋಟವದು – ಸಾಂತ್ವನ ತರುವ ಪರ್ವತಗಳ ನಿಲುವು. ಮೇಲೆ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಹರಡಿ ಕೊಂಡ ನಿರಾಸಕ್ತ ಗಗನ.

ದೇವರು ಎಂಬ ಕಲ್ಪನೆಯ ಮೇಲೆ ನಂಬಿಕೆ ಇರುತ್ತದೋ ಇಲ್ಲವೋ, ಆದರೆ ಸೃಷ್ಟಿಯಲ್ಲಿ ನಮ್ಮನ್ನು ನಮ್ರಗೊಳಿಸುವ ಶಕ್ತಿ ಪರ್ವತಗಳಿಗಿಂತ ಹೆಚ್ಚಾಗಿ ಮತ್ಯಾವುದಕ್ಕಿದೆ? ಮನುಷ್ಯ ಪ್ರಪಂಚದ ವಿವರಗಳಲ್ಲೇ ಕಳೆದುಹೋಗುವ ನಮಗೆ, ಭೂಮಿಯ ಮೇಲೆ ನಾವು, ನಮ್ಮವರು, ನಮ್ಮ ಗೋಳು, ನಮ್ಮ ಖುಷಿಗಳನ್ನು ಬಿಟ್ಟು ಮತ್ತೇನೂ ಇಲ್ಲ ಎನ್ನುವಂತೆ ಬದುಕುವ ನಮಗೆ ಜಗತ್ತಿನಲ್ಲಿ ನಮ್ಮ ಜಾಗ ಎಷ್ಟು ಚಿಕ್ಕದು ಎಂಬ ಸತ್ಯಕ್ಕೆ ಕಣ್ತೆರೆಸುವ ಶಕ್ತಿ ಪರ್ವತಗಳಿಗಿಂತ ಹೆಚ್ಚಾಗಿ ಮತ್ಯಾವುದಕ್ಕಿದೆ? ಆ ಎತ್ತರದ ಮುಂದೆ ಕುಬ್ಜರಾಗಿ ನಿಲ್ಲುವುದರಲ್ಲಿರುವ ಆನಂದ ನಮ್ಮ ಎಷ್ಟೋ ಭ್ರಮೆಗಳನ್ನು ಎಷ್ಟು ಮಮತೆಯಿಂದ ಅಳಿಸಿ ಹಾಕಿಬಿಡುತ್ತದೆ.

ಕಣ್ಣು ಹಾಯಿಸಿದಲ್ಲೆಲ್ಲಾ ಸೃಷ್ಟಿ ಸೌಂದರ್ಯ ತುಂಬಿ ತುಳುಕುವಾಗ ಒಂದು ವಿಗ್ರಹದ ಮುಂದೆ ಮಾತ್ರವೇ ಭಕ್ತಿ ಹುಟ್ಟುವುದಾ? ಈ ಪರ್ವತಗಳ ಮೇಲೆ, ಆ ಕೊರೆವ ಛಳಿಯಲ್ಲೂ, ಅಷ್ಟು ಎತ್ತರದಲ್ಲಿ ಏಕೆ ದೇವಸ್ಥಾನಗಳಿರಬೇಕು? ಪರ್ವತಗಳ ಮಡಿಲಲ್ಲಿ ನಡೆದಾಡುತ್ತಾ, ಆ ಅಗಾಧತೆಯ ಮುಂದೆ ವಿನೀತರಾಗಿ ಬಿಡುವುದೇ ಬಾಳ್ವೆಯ ಮೇಲಿನ ಅನುರಕ್ತಿಯಾಗಬಹುದಾದರೆ ಈ ದೇವಸ್ಥಾನಗಳ ಇರುವಿಕೆ ಅಂತಹ ಭಕ್ತಿಗೆ symbolic ಎನ್ನಬಹುದೇನೋ. ತುಂಗನಾಥ್ ದೇವಸ್ಥಾನಕ್ಕೆ, ಅಲ್ಲಿಂದ ಮತ್ತೂ
ಮೇಲೇರಿದರೆ ಸಿಗುವ ಚಂದ್ರಶಿಲಾಕ್ಕೆ ಟ್ರೆಕ್ ಮಾಡುವಾಗ ಕಾಡಿದ ಪ್ರಶ್ನೆಗಳಿವು.

ದಾರಿಯುದ್ದಕ್ಕೂ ಆ ಭಾಗದ ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ಸುಂದರ ಹಕ್ಕಿಗಳನ್ನು ನೋಡಿಕೊಂಡು, ಪೈನ್ ಮರಗಳ ಪರಿಮಳವನ್ನು ಆದಷ್ಟೂ ಶ್ವಾಸಕೋಶದಲ್ಲಿ ತುಂಬಿಸಿಕೊಂಡು, ಗಡ್ವಾಲ್ ಪರ್ವತ ಶ್ರೇಣಿಯಲ್ಲಿ ಅತ್ಯಂತ ದಿಟ್ಟವಾಗಿ ನಿಂತು ಕಾಡುವ ಚೌಖಂಬ ಪರ್ವತದ ಮೇಲೆ ಸೂರ್ಯನ ಮೊದಲ ರಶ್ಮಿಗಳು ಬಿದ್ದು ಹಿಮ ಹೊಳೆಯುವಾಗ, ಆ ಸ್ವರ್ಣವರ್ಣ ಲೇಪನ ದಲ್ಲಿ ಜಗತ್ತೇ ತೊಯ್ದನಂತೆ ಭಾಸವಾಗುವಾಗ ಮನದಲ್ಲಿ ಉಂಟಾಗುವ ಆನಂದಕ್ಕೆ ಹೆಸರುಗಳ ಹಂಗಿಲ್ಲದ ದೈವೀಕತೆಯ ಸ್ಪರ್ಶ ವಾದಂತಿತ್ತು.

ವಿಗ್ರಹಗಳ ಮುಂದೆ ಕೈಮುಗಿದು ನಿಲ್ಲುವ ಅಭ್ಯಾಸವಿಲ್ಲದವರಿಗೆ ಇದಕ್ಕಿಂತಲೂ ತೀವ್ರವಾದ ಆಧ್ಯಾತ್ಮಿಕ ಅನುಭೂತಿ ಮತ್ತೇ ನಿರಲು ಸಾಧ್ಯ ಎನಿಸಿತ್ತು. ದೇವರು ಎಂಬ ಕಲ್ಪನೆ ಒಬ್ಬೊಬ್ಬ ವ್ಯಕ್ತಿಗೂ ಒಂದೊಂದು ರೀತಿಯಲ್ಲಿ ದಕ್ಕುವುದೇನೋ. ಯಾರ ಕಲ್ಪನೆಯೂ ಹೆಚ್ಚಲ್ಲ, ಯಾರದ್ದೂ ಕಡಿಮೆಯಲ್ಲ. ಹಾಗೆ ನೋಡಿದರೆ, ಸೃಷ್ಟಿ ಸೌಂದರ್ಯದ ಮೂಲಕ ಬಾಳ್ವೆಯ ಮೇಲೆ ಉಕ್ಕುವ ಭಕ್ತಿಯೇ ಪ್ರಾಮಾಣಿಕ ಎನ್ನಬಹುದು. ಒಬ್ಬರು ಮತ್ತೊಬ್ಬರಿಗೆ ಧರ್ಮದ ಹೆಸರಿನಲ್ಲಿ ಮಾಡುವ ನೋವು, ಹಿಂಸೆ ಗಳಾವುವೂ ಇಂತಹ ಭಕ್ತಿಯಿಂದ ಹುಟ್ಟುವುದಿಲ್ಲ.

ಯಾರೂ ಯಾರ ಮುಂದೆಯೂ ಏನನ್ನೂ ಸಾಧಿಸಬೇಕಿಲ್ಲ. ಭಕ್ತಿ ಉಕ್ಕುವುದು ಅಲ್ಲೆಲ್ಲೋ ಭಸ್ಮ ಬಳಿದುಕೊಂಡು ಕೂತವ ನೊಬ್ಬನಿದ್ದಾನೆ ಎಂದಲ್ಲ. ಭಯದ ಕಂಪನವಾಗುವುದು ಅವನ ಕೋಪಕ್ಕೆ ತೆರೆದುಕೊಂಡುಬಿಡುವ ಹಣೆಯ ಮೇಲಿನ ಕಣ್ಣಿ ನಿಂದಲ್ಲ. ಒಡಲಲ್ಲಿ ಮಾರ್ದನಿಸುವುದು ತಾಂಡವವಾಡುವಾಗ ಬಡಿಬಡಿದು ಅನುರಣಿಸುವ ಡಮರೂ ಅಲ್ಲ. ಪ್ರೇಮವುಕ್ಕು ವುದು ಗಂಗೆ-ಗೌರಿಯಿಬ್ಬರಿಗೂ ಎದೆಯಲ್ಲಿ ತೆರವು ನೀಡಿದ್ದಕ್ಕೂ ಅಲ್ಲ.

ಭಕ್ತಿ ಉಕ್ಕುವುದು ಇಂಥ ಕಲ್ಪನೆಗಳನ್ನು ಹುಟ್ಟಿಸುವ ಅಮೂರ್ತ ಶಕ್ತಿಗೆ. ಭಯದ ಕಂಪನವಾಗುವುದು ರೂಪವೊಂದಕ್ಕೆೆ ಸೀಮಿತವಾಗಿಸಿ ದೇವರೆಂಬ ಆಲೋಚನೆ ದಕ್ಕಿಬಿಟ್ಟಿದೆ ಎಂಬ ಭ್ರಮೆಗೆ. ಒಡಲಲ್ಲಿ ಮಾರ್ದನಿಸುವುದು ಆಗಾಗ ಜೀವದಾಳದ ಮೌನಕ್ಕೆ ಹೆದರಿ ಹೊರಗೆಲ್ಲೋ ಸದ್ದುಗಳ ಮೊರೆಹೋಗಿ ಬಿಡುವ ದೈನ್ಯತೆ. ಪ್ರೇಮವುಕ್ಕುವುದು ಇದನ್ನೆಲ್ಲಾ ಸಹಿಸಿಯೂ
ಮತ್ತೊಂದು ಹಗಲಿಗೆ, ಅದರೊಟ್ಟಿಗೆ ಬರುವ ನಮ್ಮವೇ ಕಥೆಗಳಿಗೆ ಹೆಗಲಾಗುವ ನಮ್ಮದೇ ತ್ರಾಣಕ್ಕೆ. ಭಕ್ತಿಯೆಂಬ ಭಾವಕ್ಕೆ ಶರಣು.