Saturday, 23rd November 2024

ತುಳುವ ಅಧ್ಯಯನಕ್ಕೆ ಹೊಸ ದಿಕ್ಕು

ಪುಸ್ತಕ ಪರಿಚಯ

ಡಾ.ಕಬ್ಬಿನಾಲೆ ವಸಂತ ಭಾರದ್ವಾಜ

ಅಮೆರಿಕಾದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ಹೇವರ್ಡ್ ನಲ್ಲಿ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಪೀಟರ್ ಜೆ ಕ್ಲಾಸ್ ಅಂತಾರಾಷ್ಟ್ರೀಯ ಮಟ್ಟದ ಜಾನಪದ ವಿದ್ವಾಂಸರಲ್ಲಿ ಗಣ್ಯರು.

ಅವರು 1967ರಿಂದ ತೊಡಗಿ ಸುಮಾರು ಮೂರು ದಶಕಗಳ ಕಾಲ ತುಳುನಾಡಿನಲ್ಲಿ ಜಾನಪದ ಅಧ್ಯಯನವನ್ನು ಕೈಗೊಂಡವರು. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಮೂಲಕ ಹೊರಬರುತ್ತಿದ್ದ ‘ಜರ್ನಲ್ ಆಫ್ ಫೋಕ್‌ಲೋರಿಸ್ಟಿಕ್ಸ್‌’ ಎಂಬ ವಿದ್ವತ್ ಪತ್ರಿಕೆ, ಉಡುಪಿಯ ಆರ್‌ಆರ್‌ಸಿಗಾಗಿ ವಿವಿಧ ದಾಖಲಾತಿ ಯೋಜನೆ, ತರುಣ ಜಾನಪದ ವಿದ್ವಾಂಸರಿಗೆ ಕಮ್ಮಟ ಮುಂತಾಗಿ ಹಲವು ರೀತಿಯಲ್ಲಿ ಜಾನಪದ ಅಧ್ಯಯನಕ್ಕೆ ಹೊಸ ದಿಕ್ಕುದೆಸೆಯನ್ನು ಅವರು ತೋರಿದರು.

ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಅವರು ಜಾನಪದಕ್ಕೆ ಸಂಬಂಧಿಸಿ ಐವತ್ತಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವುಗಳಲ್ಲಿ ತುಳುವ ಜಗತ್ತಿಗೆ ಸಂಬಂಧಿಸಿದ 14 ಲೇಖನಗಳು ಇಲ್ಲಿ ಕನ್ನಡಕ್ಕೆ ಅನುವಾದಗೊಂಡು ಸಂಕಲನ ರೂಪ ತಾಳಿದೆ. ಈ ಸಂಪುಟದಲ್ಲಿ ಎರಡು ಭಾಗಗಳಿದ್ದು ಮೊದಲನೆಯ ಭಾಗದಲ್ಲಿ 8 ಲೇಖನಗಳೂ, ಎರಡನೆಯ ಭಾಗದಲ್ಲಿ 6 ಲೇಖನಗಳೂ ಇವೆ.

ಇವುಗಳಲ್ಲಿ ಮೊದಲನೆಯ ಭಾಗವನ್ನು ಪ್ರೊ.ಎ.ವಿ.ನಾವಡ ಮತ್ತು ಪ್ರೊ.ಸುಭಾಶ್ಚಂದ್ರ ಅವರು ಅನುವಾದಿಸಿದ್ದು 1987 ರಲ್ಲಿ ಪ್ರಕಟವಾಗಿತ್ತು. ಇದೀಗ ಪ್ರೊ.ಎ.ವಿ.ನಾವಡ ಅವರ ಆಸ್ಥೆಯಿಂದ ಮತ್ತೆ ಆರು ಲೇಖನಗಳು ಹೊಸದಾಗಿ ಅದಕ್ಕೆ ಸೇರಿಕೊಂಡು ತುಳುವ ದರ್ಶನ ನಮ್ಮ ಮುಂದಿದೆ.

ಇಲ್ಲಿ ತುಳು ಮೌಖಿಕ ಸಂಪ್ರದಾಯಗಳ ದೃಷ್ಟಿಯಲ್ಲಿ ದೈವಾವೇಶ ಹಾಗೂ ದೈವಪಾತ್ರಿತ್ವ, ಮೈಂದಲ ದೈವದ ಐತಿಹ್ಯ, ಸಿರಿ ಐತಿಹ್ಯ, ತುಳು ಸಂಸ್ಕೃತಿಯ ಚೌಕಟ್ಟಿನಲ್ಲಿ ವೀರರು ಮತ್ತು ವೀರ ರಮಣಿಯರು, ತುಳುವ ಪುರಾಣ ಮತ್ತು ಆರಾಧನಾ ಸಂಪ್ರ ದಾಯಗಳಲ್ಲಿ ಚೆನ್ನೆ ಆಟ, ತುಳು ಬಂಧುತ್ವದ ಪಾರಿಭಾಷಿಕಾಂಶಗಳು, ತುಳು ಸಂಶೋಧನೆ ಸಾಗಬೇಕಾದ ದಾರಿ, ಪಠ್ಯಭಿನ್ನತೆ ಮತ್ತು ಸಿರಿಪಂಥದ ಅಧಿಕೃತತೆ, ಪರ್ಮಲೆ ಬಲ್ಲಾಳ ಪಾಡ್ದನ, ಬಂಧುತ್ವದ ಹಾಡುಗಳು ಮುಂತಾದ ಹಲವು ವಿಚಾರಗಳ ಕುರಿತಾದ ವಿವೇಚನೆಯಿದೆ.

ದಕ್ಷಿಣ ಭಾರತದ ವ್ಯಾಪಕ ಆರಾಧನಾ ಪದ್ಧತಿಗಳಲ್ಲಿ ಒಂದಾದ ಸಿರಿ ಆರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ಐತಿಹ್ಯ, ಕಥಾಸಾರ,
ಮತಾಚರಣೆ, ಆರಾಧನೆಯ ಅನನ್ಯತೆಗಳನ್ನು ವಿವರಿಸುತ್ತಾ ‘ಮಾತೃವಂಶೀಯ ಕುಟುಂಬ ವ್ಯವಸ್ಥೆಯ ಸಮಸ್ಯೆಗಳಿಗೆ ಒಳಗಾದ ಅಪಾರ ಸಂಖ್ಯೆಯ ಮಹಿಳೆಯರನ್ನು ಕಲೆಹಾಕಿ ಒಂದು ವ್ಯವಸ್ಥಿತ ನಿರಂತರಕೂಟವನ್ನಾಗಿಸುವ ಸಾಮರ್ಥ್ಯವು ಸಿರಿಪಾಡ್ದನದ ಹೆಚ್ಚುಗಾರಿಕೆಯಾಗಿದೆ’ (ಪುಟ-104) ಎಂಬ ನಿಲುವಿಗೆ ಲೇಖಕರು ಬಂದಿರುವುದು ವಿಶೇಷವಾಗಿದೆ.

ಸಿರಿ ಐತಿಹ್ಯದೊಂದಿಗೆ ಸೇರಿದ ಬ್ರಹ್ಮೆೆರ್ ಶಬ್ದಾರ್ಥ, ಮೂಲಸ್ಥಾನ, ವಿಗ್ರಹರೂಪ ಇತ್ಯಾದಿ ವಿವರಣೆಗಳು ಕೂಡ ಗಮನಾರ್ಹ ವಾಗಿದೆ. ‘ತುಳು ಪಾಡ್ದನದ ವೀರನು ವೀರನಾಗಲು ಕಾರಣ ಆತನು ದೈವದ ಅವತಾರವಾಗಿರುವುದು ಅಥವಾ ಪೂರ್ವಜನ್ಮದ ಪುಣ್ಯವಿಶೇಷಗಳಲ್ಲ. ಬದಲಾಗಿ ಆತನು ಈ ಜನ್ಮದಲ್ಲಿ ನಡೆಸಿದ ಮಹತ್ಕಾರ್ಯಗಳೇ ಆತನನ್ನು ವೀರನನ್ನಾಗಿಸಿದೆ. ಆತನ
ಸಾಮಾಜಿಕ ಸ್ಥಾನಮಾನಗಳು (ಉದಾ: ಅರಸುಕುಮಾರ ಇತ್ಯಾದಿ) ಆತನ ಕಲಿತನವನ್ನು ನಿರ್ಧರಿಸುವುದಿಲ್ಲ.

ಪ್ರತಿಯಾಗಿ ಆತನು ಜೀವನವನ್ನು ಎದುರಿಸುವ ಸಂದರ್ಭಗಳಲ್ಲಿ ತೋರುವ ಕ್ರಿಯಾತ್ಮಕತೆ ಆತನನ್ನು ವೀರನನ್ನಾಗಿಸುತ್ತದೆ’ (ಪುಟ-148), ‘ಉತ್ತಮ ಗುಣಮಟ್ಟದ ಪಠ್ಯಗಳು ಮಾತ್ರ ಮುಖ್ಯವಲ್ಲ, ಬದಲಾಗಿ ಸಾಮಾನ್ಯ ಜನಪದಪಠ್ಯವೂ ಮುಖ್ಯವಾಗಬೇಕು’
(ಪುಟ-330), ‘ಕಬಿತಗಳ ಭಾವ ಮತ್ತು ವಸ್ತು, ಪಾಡ್ದನದ ಭಾವ ಮತ್ತು ವಸ್ತುವಿಗಿಂತ ಬೇರೆಯೇ ಆಗಿರುತ್ತದೆ’ (ಪುಟ-363), ‘‘ತುಳು ಪಾಡ್ದನಗಳನ್ನು ಅವುಗಳ ಸಾಹಿತ್ಯದ ಹಿನ್ನೆಲೆಯಿಂದಷ್ಟೇ ಪರಿಭಾವಿಸಿದ ತುಳುಪಂಡಿತರು ಅದನ್ನು ಸಾಂದರ್ಭಿಕ ಹಿನ್ನೆಲೆ ಯಿಂದ ರೂಪುಗೊಳ್ಳುವ ಬಹುರೂಪತೆಗಳನ್ನು ಗ್ರಹಿಸದೆ ಹೋದರು’ (ಪುಟ-379) ಮುಂತಾದ ಹತ್ತುಹಲವು ಹೇಳಿಕೆಗಳು ತುಳುವ
ದರ್ಶನದ ನಿಜವಾದ ಅಂತರಂಗದರ್ಶನದ ಮಾತೃಕೆಗಳು ಎನ್ನಬಹುದು.

ಭೂತಗಳ ಸಂರಕ್ಷಕ ಹಾಗೂ ದಂಡನಕಾರಿ ಪ್ರವೃತ್ತಿಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಸಮಾಜದಲ್ಲಿ ಕಾಣಿಸಿಕೊಂಡ ಕ್ರಿಯಾತ್ಮಕ ಸ್ವರೂಪದ ಒಂದು ಸಮಸ್ಯೆಯನ್ನು ಉದಾಹರಣೆಯಾಗಿ ವಿಶ್ಲೇಷಿಸಿರುವುದೂ ಮಾನವಶಾಸ್ತ್ರ ಮತ್ತು ಜಾನಪದ ಶಾಸ್ತ್ರಗಳ ಸಂದರ್ಭದಲ್ಲಿ ಬಹುಮುಖ್ಯವಾದ ಸಂಗತಿ. ಬಡಕುಟುಂಬವೊಂದು ದೈವದ ಮಾತನ್ನು ನಂಬಿ ಲೌಕಿಕ ವ್ಯವಹಾರ ದಲ್ಲಿ ಅಪಜಯ ಹೊಂದಿ ಗ್ರಾಮ ಸಮಾಜದ ನೈತಿಕ ವ್ಯವಸ್ಥೆಯಿಂದ ವಂಚಿತವಾಗುವುದು ದೈವಗಳ ವೈರುಧ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ.

‘ತುಳುವ ಪುರಾಣ ಮತ್ತು ಆರಾಧನಾ ಸಂಪ್ರದಾಯಗಳಲ್ಲಿ ಚೆನ್ನೆ’ ಎಂಬ ಲೇಖನವು ದೈವಾವೇಶ ಸಂಪ್ರದಾಯದಲ್ಲಿ ಚೆನ್ನೆಮಣೆ ಯಾಟವು ಹೇಗೆ ಒಂದು ಮಹತ್ವದ ಪ್ರತಿಮೆಯಾಗಿ ಬಳಕೆಯಾಗಿದೆ ಎಂಬುದನ್ನು ವೈದುಷ್ಯಪೂರ್ಣವಾಗಿ ವಿವರಿಸುತ್ತದೆ.
ಆಫ್ರಿಕಾದಿಂದ ಫಿಲಿಫೈನ್ಸ್ ‌‌ವರೆಗೆ ವ್ಯಾಪಿಸಿರುವ ಈ ಆಟವು ಮಾನವಶಾಸ್ತ್ರಜ್ಞರಲ್ಲಿ ಮಂಕಲವೆಂದು ಪರಿಗಣಿತವಾಗಿದೆ.
ಈ ಆಟದ ಪ್ರತಿಮಾಶಿಲ್ಪ ಅನೇಕ ತುಳು ಐತಿಹ್ಯಗಳಲ್ಲಿದ್ದು, ಸಿರಿ ಮತಾಚರಣೆಯಲ್ಲಿ ಮಾನವಭಕ್ತರು ದೈವಮಾಧ್ಯಮದವರಾಗಿ ಪರಿವರ್ತನೆಗೊಳ್ಳಲು ಸಹಾಯಕವಾಗುತ್ತದೆ.

ಈ ಆಟದ ವಿಧಾನ, ಪ್ರಭೇದಗಳು, ವಿಧಿ-ನಿಷೇಧಗಳು, ಕೃಷಿ ಚಟುವಟಿಕೆಗಳೊಂದಿಗಿನ ಅಂತರ್ ಸಂಬಂಧ, ತುಳು ಪಾಡ್ದನಗಳಲ್ಲಿ ಚೆನ್ನೆಯಾಟ ಮುಂತಾದವುಗಳನ್ನು ವಿಶ್ಲೇಷಿಸುತ್ತಾ ಲೇಖಕರು ಮಂಕಲ ಆಟದ ಪ್ರಾಚೀನತೆಯನ್ನು ಒಂದರಿಂದ ಮೂರು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಾರೆ. ಪೂರ್ವ ಇಂಡೋನೇಷ್ಯಾದ ಕೆದಾಂಗ್ ಎಂಬಲ್ಲಿರುವ ಮಂಕಲ, ಶ್ರೀಲಂಕಾ ಮತ್ತು ತಮಿಳುನಾಡಿನ ಪನ್ನಾಂಗುರಿ, ಕೇರಳದಲ್ಲಿರುವ ನಿಕ್ಕಿಕ್ಕಳಿಗಳನ್ನು ಗಮನಿಸಿ ಇದು ಅಜ್ಞಾತ ಸಂಸ್ಕೃತಿಯಿಂದ ಎರವಲು ಪಡೆದ ಆಟವೆಂದು ನಿರ್ಧರಿಸುತ್ತಾರೆ (ಪುಟ-227).

ಆಂಗ್ಲಭಾಷೆಯ ಲೇಖನಗಳನ್ನು ಕನ್ನಡಕ್ಕೆ ಒಗ್ಗುವಂತೆ ಅನುವಾದಿಸಿರುವುದು ಈ ಕೃತಿಯ ಇನ್ನೊಂದು ವಿಶೇಷತೆ.
ಪಾರಿಭಾಷಿಕ ನಿಬಿಡವಾಗಿದ್ದರೂ ಸರಳ ಸಂವಹನಕ್ಕೆ ಅಡ್ಡಿಯಾಗದಂತೆ ಇಲ್ಲಿಯ ಶೈಲಿಯಿದೆ. ಎಷ್ಟೋ ಕಡೆ ಮೂಲ ಪಠ್ಯಕ್ಕೆ ಪ್ರತಿಕ್ರಿಯಾ ರೂಪದಲ್ಲಿ ನೀಡಿದ ಅಡಿಟಿಪ್ಪಣಿಗಳು ಅಧ್ಯಯನಕಾರರಿಗೆ ಸಹಕಾರಿಯಾಗಿದೆ.

ಸಂಶೋಧನೆಗಳು ಪೇಲವಗೊಳ್ಳುತ್ತಿರುವ ಸಮಕಾಲೀನ ಸಂದರ್ಭದಲ್ಲಿ ತುಳು ಜಾನಪದ ಸಂಶೋಧನೆಯ ಬಗೆಗೆ ಪೀಟರ್ ಜೆ ಕ್ಲಾಸ್ ಅವರು ಹೇಳಿದ ಮಾತುಗಳು ತರುಣ ಸಂಶೋಧಕರಿಗೆ ಒಂದು ಎಚ್ಚರಿಕೆಯೂ ಹೌದು, ಪಥದರ್ಶಕವೂ ಹೌದು. ಜಾನಪದ ಅಧ್ಯಯನದ ಜಾಗತಿಕ ದೃಷ್ಟಿಧೋರಣೆಗಳ ಹಿನ್ನೆಲೆಯಲ್ಲಿ ‘ತುಳುವ ದರ್ಶನ ’ ಒಂದು ಮಹತ್ವದ ಆಕರ ಗ್ರಂಥವಾಗಿದೆ ಎಂದು ಹೇಳಬಹುದು.