ವಿಮಾನ ಹತ್ತಲು ಹೋಗುವಾಗ, ಆರಂಭದಲ್ಲೇ ಸಾಕಷ್ಟು ದೂರ ನಡೆಯಬೇಕಾಗುತ್ತದೆ! ಆ ದಾರಿ ಯುದ್ದಕ್ಕೂ ಝಗಮಗಿಸುವ ಅಂಗಡಿಗಳ ಸಾಲು. ತಿಂಡಿ ತಿನಿಸು, ವಿವಿಧ ಪಾನೀಯ, ಡ್ಯೂಟಿ ಫ್ರೀ ಗುಂಡು, ಉಡುಗೊರೆಗಳ ಅಂಗಡಿಗಳು ಇವೆಲ್ಲಕ್ಕೂ ಪ್ರಯಾಣಿಕರೇ ಗಿರಾಕಿಗಳು. ಆದ್ದರಿಂದ, ಪ್ರಯಾಣಿಕರು ಹೆಚ್ಚು ಹೊತ್ತು ವಿಮಾನ ನಿಲ್ದಾಣದಲ್ಲಿ ಕಾಲ ಕಳೆಯುವಂತೆ ನಾನಾ ತಂತ್ರಗಳನ್ನು ಹೂಡಲಾಗಿದೆ!
ವಿಕ್ರಮ್ ಜೋಶಿ
ವಿಮಾನಯಾನದ ಮೊದಲ ಅನುಭವ ಆಗಿದ್ದು ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ನನ್ನ ವಿಮಾನದ ಪಯಣವು ಶುರುವಾಗಿದ್ದೇ ಅಂತರಾಷ್ಟ್ರೀಯ ಪ್ರಯಾಣದ ಮೂಲಕ. ಅಲ್ಲಿಯವರೆಗೆ ನಾನು ವಿಮಾನದ ಕುರಿತು ಕೇಳಿದ್ದೆ, ನೋಡಿದ್ದೆ – ಆದರೆ ನನಗೆ ಸ್ವತಃ ಪ್ರವಾಸದ ಅನುಭವವು ಆಗಿರಲಿಲ್ಲ.
ನಿಜವಾಗಿಯೂ ಹೇಳಬೇಕು ಅಂದರೆ ವಿಮಾನಯಾನದ ಅನುಭವಕ್ಕೂ ಮಿಗಿಲಾಗಿ ನನ್ನನ್ನು ಚಕಿತಗೊಳಿಸಿದ್ದು
ವಿಮಾನ ನಿಲ್ದಾಣದ ಅನುಭವ. ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಧಾರಾವಿಯ ಹತ್ತಿರವೇ ಇದೆ. ಧಾರಾವಿ ಎನ್ನುವುದು ಏಷ್ಯಾದ ಅತೀ ದೊಡ್ಡ ಸ್ಲಮ್. ಕಾರಿನಲ್ಲಿ ಹೋಗುತ್ತಾ ನಿಮಗೆ ಒಂದು ಕಡೆ ಸ್ಲಮ್ ಕಂಡರೆ, ಇನ್ನೊಂದು ಕಡೆ ಅಮರಾವತಿಯಂತಹ ಈ ಏರ್ಪೋರ್ಟ್
ಕಾಣುತ್ತದೆ! ಗುರುತಿನ ಚೀಟಿ ಹಾಗೂ ಪ್ರಯಾಣದ ಟಿಕೇಟ್ ತೋರಿಸಿ ಪ್ರವೇಶ ಮಾಡಿದಾಗ ಅಲ್ಲಿ ಕಣ್ಣನ್ನು ಸ್ಪರ್ಶಿಸುವ ಬೆಳಕು ಬೆಳದಿಂಗಳನ್ನೂ ನಾಚಿಸುವಂತಿತ್ತು, ಅಲ್ಲಿ ಓಡಾಡುವ ಗಗನಸಖಿಯರು ಯಾವ ಅಪ್ಸರೆ ಯರಿಗೂ ಕಡಿಮೆಯಾಗಿರಲಿಲ್ಲ, ಮುಂಬಯಿಯ ಸಾಮಾನ್ಯ ಮನೆಗಳಿಗಿಂತಲೂ ದೊಡ್ಡದಾದ ಶೌಚಾಲಗಳು ಅಲ್ಲಿದ್ದವು! ಇವೆಲ್ಲವೂ ಕಣ್ಣೆದುರಿಗೆ ಹೋದಂತೆ ನನಗೆ ಇನ್ನೊಂದು ಲೋಕಕ್ಕೇ ಬಂದಂತಹ ಅನುಭವ.
ಎಲ್ಲದಕ್ಕೂ ವಿಶೇಷವಾಗಿ ಅಲ್ಲಿದ್ದ ಅಂಗಡಿಗಳ ಸಾಲು ನನ್ನ ಗಮನವನ್ನು ಸೆಳೆಯಿತು. ಒಂದಕ್ಕಿಂತಲೂ ಇನ್ನೊಂದು ಉತ್ತಮ ಬ್ರ್ಯಾಂಡಿನ ವಸ್ತುಗಳ ಅಂಗಡಿಗಳ ಸಮೂಹ. ಕೈ ತೊಳೆದು ಮುಟ್ಟಬೇಕು ಎನ್ನಿಸುವಂತಹ ಉತ್ಕೃಷ್ಟತೆಯ ಉತ್ಪನ್ನಗಳು. ಆಗಸಕ್ಕೆ ತಾಗಿ ನಿಂತಂತಿರುವ ಅವುಗಳ ಬೆಲೆಗಳು. ಹೊರಗಡೆ ಮಾಲ್‌ಗಳಲ್ಲಿ, ಜಗಮಗಿಸುವ ಶೋ ರೂಂಗಳಲ್ಲಿ ಸಿಗುವ ವಸ್ತುಗಳೇ ಆಗಿದ್ದರೂ ಇಲ್ಲಿ ಅವು ನಾಲ್ಕು ಪಟ್ಟು ದುಬಾರಿ! ಅಷ್ಟು
ದುಬಾರಿ ವಸ್ತುಗಳನ್ನೂ ಜನರು ಖರೀದಿಮಾಡುತ್ತಾರಲ್ಲ ಎನಿಸಿ ಆಶ್ಚರ್ಯಚಕಿತನಾದೆ! ಆ ದರಗಳನ್ನು ನೋಡಿದಾಗ ನನ್ನ ಮುಖದಲ್ಲಿ ರಕ್ತಹೀನತೆಯಾಗಿದ್ದನ್ನು ಬಹುಶಃ ಅಲ್ಲಿರುವ ಶಿಲಾಬಾಲಿಕೆಯರೂ ಗಮನಿಸಿರಬಹುದು. ಅದೊಂದು ‘ಕಿಸೆ’ ನವಿರೇಳುಸುವಂತಹ ಅನುಭವ.
ರಾತ್ರಿ ಪ್ರಯಾಣ
ಅಂತರಾಷ್ಟ್ರೀಯ ವಿಮಾನಗಳೆಲ್ಲವೂ ಹೆಚ್ಚಾಗಿ ನಡುರಾತ್ರಿಯೇ ಇರುತ್ತವೆ. ಮನೆಯಿಂದ ಊಟ ಮಾಡಿ ಬಂದಿ ದ್ದರೂ, ಭೂತಗಳು ಓಡಾಡುವ ಹೊತ್ತಿಗೆ ನಮ್ಮ ಹೊಟ್ಟೆಯಲ್ಲಿ ಇಲಿಗಳು ಓಡಾಡಲು ಶುರುಮಾಡುತ್ತವೆ. ಏನಾ ದರೂ ವಿಮಾನ ನಿಲ್ದಾಣದಲ್ಲಿ ಊಟಕ್ಕೆ ಅಂತ ಅಲ್ಲಿಯ ಹೋಟೆಲ್‌ಗಳಿಗೆ ಹೋದರೆ ಆ ದರವನ್ನು ನೋಡಿಯೇ ಹಸಿವು ಸತ್ತುಹೋಗುತ್ತದೆ. ಒಂದು ಕಾಫಿಗೆ ಐದು ರೂಪಾಯಿಯಿದ್ದ ಕಾಲವದು, ಏರ್‌ಪೋರ್ಟ್ ನಲ್ಲಿ ನೂರು ರೂಪಾಯಿ ಕೊಟ್ಟು ಕುಡಿದಿದ್ದೆ. ಬೇರೆ ತಿನಿಸುಗಳ ಬೆಲೆಯನ್ನು ನೆನಪಿಸಿಕೊಂಡರೆ ಈಗ ಹೃದಯಾಘಾತ ವಾಗುವ ಸಂಭವವಿದೆ.
ನಿಜ ಹೇಳಬೇಕೆಂದರೆ, ಮರಳಿ ಬಂದಮೇಲೆ, ಮನೆಯಲ್ಲಿ ನಾನು ಊಟಕ್ಕೆ ಇಷ್ಟು ಖರ್ಚು ಮಾಡಿದ್ದೆ ಎನ್ನಲೂ ಹೆದರಿದ್ದೆ. ಆ ದಿನ ಅಲ್ಲಿ ಊಟ ಮಾಡಿ ಹೊಟ್ಟೆ ತಣಿದದ್ದಕ್ಕಿಂತ ಉರಿದಿದ್ದೇ ಹೆಚ್ಚು. ಇಷ್ಟು ದುಬಾರಿ ವಸ್ತುಗಳು, ತಿಂಡಿ ತಿನಿಸುಗಳು ಇರುವಾಗಲೂ ಯಾವ ಅಂಗಡಿಯಾಗಲಿ, ಹೋಟೆಲ್‌ಗಳಾಗಲಿ ಖಾಲಿಯಂತೂ ಇರುವುದಿಲ್ಲ. ಯಾಕೆ ಜನ ಇಷ್ಟೊಂದು ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ, ಅಷ್ಟೊಂದು ತುಟ್ಟಿಯಾದರೂ ಅಲ್ಲಿಯ
ಹೋಟೆಲ್ ಗಳಲ್ಲಿ ತಾಸುಗಟ್ಟಲೆ ಕೂತು ಕುಡಿಯುತ್ತಿರುತ್ತಾರೆ, ತಿನ್ನುತ್ತಿರುತ್ತಾರೆ ಎಂದು ಅವತ್ತಿನಿಂದ ಇವತ್ತಿನ ತನಕ
ಯೋಚಿಸುತ್ತಿದ್ದೇನೆ!
ಡ್ಯೂಟಿ ಫ್ರೀ ಅಂಗಡಿಗಳಲ್ಲಿ ಸಿಗುವ ವಸ್ತುಗಳನ್ನು ಬಿಟ್ಟು ಮತ್ತೆ ಯಾವ ವಸ್ತುವನ್ನೂ ವಿಮಾನ ನಿಲ್ದಾಣದಲ್ಲಿ ಖರೀದಿಸಬೇಕೆಂದು ಜನರು ಬಯಸುವುದಿಲ್ಲ ಅಥವಾ ಅವರ ವಿಚಾರವೂ ಇರುವುದಿಲ್ಲ. ಆದರೆ ವಿಮಾನಗಳನ್ನು ಕಾಯುವ ವೇಳೆಯಲ್ಲಿ ಜನರು ಶಾಪಿಂಗ್ ಮಾಡುತ್ತಾರೆ. ಸುಮ್ಮನೆ ಕೂರುವ ಬದಲು ವಿಮಾನ ನಿಲ್ದಾಣದಲ್ಲಿ ಸುತ್ತಾಡುತ್ತಾ ಎಷ್ಟೇ ಬೆಲೆಯಿರಲಿ ಮನಸ್ಸಿಗೆ ಬಂದಿದ್ದನ್ನು ಖರೀದಿಮಾಡುತ್ತಾರೆ.
ಮನಶಾಸ್ತ್ರದ ಪ್ರಕಾರ ಹೀಗೆ ಮಾಡುವುದು ಮನುಷ್ಯನ ಸ್ವಭಾವ, ಇದನ್ನು ಅರ್ಥ ಮಾಡಿ ಕೊಂಡಿರುವ ವಿಮಾನ ನಿಲ್ದಾಣದ ನಿರ್ವಾಹಕ ಕಂಪನಿಗಳು ವಿಮಾನಗಳ ವೇಳಾಪಟ್ಟಿ, ಕನೆಕ್ಟಿಂಗ್ ಫ್ಲೈಟ್ ನಡುವಿನ ಸಮಯದ ಅಂತರ, ದೂರದ ಗೇಟ್, ಹೀಗೆ ಹಲವಾರು ರೀತಿಯ ಬಲೆಯನ್ನು ಬೀಸುತ್ತಾರೆ.
ಅಂತರಾಷ್ಟ್ರೀಯ, ಅದೂ ವಿಶೇಷವಾಗಿ ಭಾರತದಿಂದ ಯುರೋಪ್ ಅಥವಾ ಅಮೇರಿಕಾಕ್ಕೆ ಹೋದವರಿಗೆ ಗೊತ್ತು –
ನೇರವಾಗಿ ನಿಲುಗಡೆ ಇಲ್ಲದ ವಿಮಾನಕ್ಕಿಂತ ಕನೆಕ್ಟೆಡ್ ಫ್ಲೈಟ್‌ಗಳ ಟಿಕೀಟು ದರ ಕಡಿಮೆ. ಆದರೆ ಮಧ್ಯದಲ್ಲಿ ಹಲವಾರು ಗಂಟೆಗಳ ಕಾಯುವಿಕೆಯಿರುತ್ತದೆ. ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಲಂಡನ್ ಹೆಥ್ರೋವ್ ವಿಮಾನ ನಿಲ್ದಾಣ, ಹಾಟ್ ಫೀಲ್ಡ್ ಜಾಕ್ಸನ್ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ, ಸಿಂಗಾಪುರದ ಚೆಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹಾಂಗ್ ಕಾಂಗ್ ಏರ್ಪೋರ್ಟ್, ಭಾರತದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇವೆಲ್ಲವೂ ಅಂತರಾಷ್ಟ್ರೀಯ
ವಿಮಾನಗಳ ಗುಚ್ಛಗೃಹ (ಹಬ್). ಅಂದರೆ ಯುರೋಪ್, ಅಮೇರಿಕಾ, ಚೀನಾ, ಇತ್ಯಾದಿ ದೇಶಗಳಿಗೆ ಹೋಗಬೇಕು ಅಂದರೆ ಮೇಲಿನ ವಿಮಾನ ನಿಲ್ದಾಣಗಳಿಗೆ ಒಂದು ವಿಮಾನದಲ್ಲಿ ಹೋಗಿ ಅಲ್ಲಿಂದ ಇನ್ನೊಂದು ವಿಮಾನವನ್ನು ಹತ್ತಬೇಕು.
ನಮ್ಮ ಮೆಟ್ರೋದಲ್ಲಿ ಮೆಜೆಸ್ಟಿಕ್‌ಗೆ ಹೋಗಿ ನಂತರ ಲೈನ್ ಬದಲಾಯಿಸಿದಂತೆ ಇದೂ ಕೂಡ. ಒಂದು ವೇಳೆ ಒಂದು
ಮೆಟ್ರೋದಿಂದ ಇನ್ನೊಂದು ಮೆಟ್ರೋಕ್ಕೆ ಹೋಗಲು ಅರ್ಧ ಗಂಟೆಯ ಅಂತರ, ಎರಡು ಪ್ಲಾಟ್-ರ್ಮ್‌ಗಳು ತುಸು
ದೂರವಿಟ್ಟು ನಡುವೆ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿ ಬಿಟ್ಟರೆ ಏನಾಗುತ್ತದೆ ಹೇಳಿ? ತುಟ್ಟಿಯಾದರೂ, ಬೇಡವಾದರೂ ಜನರು ಖರೀದಿಗೆ ಮುಂದೆ ಹೋಗುತ್ತಾರೆ. ಊರಿನಿಂದ ಬೆಂಗಳೂರಿಗೆ ಬರುವಾಗ ದಾರಿ ಮಧ್ಯದಲ್ಲಿ ಬಸ್ ಊಟಕ್ಕೆ ನಿಲ್ಲುತ್ತದೆ ಅಲ್ಲವೆ? ಆ ಹೋಟೆಲ್ ನ ಪಕ್ಕದಲ್ಲೇ ಚಪ್ಪಲ್ಲಿ, ಸ್ವೀಟ್ಸ್, ಸೌಂದರ್ಯವರ್ಧಕ ವಸ್ತುಗಳು ಮಾರಾಟ ಕ್ಕಿಟ್ಟಿರುವುದನ್ನು ನೀವು ಗಮನಿಸಿರಬಹುದು.
ವಾಸ್ತವದಲ್ಲಿ ಆ ಹೋಟೆಲ್‌ನವರಿಗೆ ಅವರ ಉಪಹಾರ, ಊಟಕ್ಕಿಂತ ಹೊರಗಡೆ ಇಟ್ಟಿರುವ ಇತರೆ ವಸ್ತುಗಳಿಂದಲೇ ಹೆಚ್ಚು ಲಾಭವಾಗುತ್ತದೆಯಂತೆ. ಅದಕ್ಕಾಗಿಯೇ ಅವರು ಆ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್‌ಗಳಿಗೆ ಉಚಿತವಾದ ಊಟ ನೀಡಿ, ಕಮೀಷನ್ ಕೊಟ್ಟು ತಮ್ಮ ಹೋಟೆಲ್ ಮುಂದೆ ನಿಲ್ಲಿಸುವಂತೆ ಕೋರಿಕೊಳ್ಳುವುದು. ಊಟಕ್ಕೆ ಹೋಗಿ ರುವ ಡ್ರೈವರ್ ಮತ್ತು ಕ್ಲೀನರ್ ಮರಳಿ ಬಸ್ಸಿನತ್ತ ತಡವಾಗಿ ಬಂದಷ್ಟು, ಜನರು ಕಾದಷ್ಟು ಹೆಚ್ಚು ವ್ಯಾಪಾರ ವಾಗುತ್ತದೆ. ಯಾವುದೇ ಬಸ್ಸಿನವರಾಗಲಿ ‘ಅರ್ಧಗಂಟೆ ಊಟಕ್ಕೆ ನಿಲ್ಲುತ್ತದೆ’ ಎನ್ನುವುದಿದೆಯೇ? ಇಲ್ಲ. ಎಲ್ಲರೂ ಹೇಳುವುದು ‘ಐದು ನಿಮಿಷ ’ಮಾತ್ರ’ ಊಟ ಉಪಹಾರಕ್ಕೆ ನಿಲ್ಲುತ್ತದೆ’ ಎಂದು ಆದರೆ ನಿಲ್ಲುವುದು ಮಾತ್ರ ಅರ್ಧ ತಾಸು!
ನಮ್ಮ ಮನಸ್ಸು ಎಷ್ಟು ಗಟ್ಟಿಯೋ ಅಷ್ಟೇ ದುರ್ಬಲವೂ ಹೌದು. ಆ ದುರ್ಬಲತೆಯನ್ನು ಅರಿತ ವ್ಯಾಪಾರಿಗಳು ನಮಗೆ ಅರಿವಿಲ್ಲದಂತೆಯೇ ನಮ್ಮನ್ನು ಶೋಷಿಸುತ್ತಾರೆ. ವಿಮಾನ ನಿಲ್ದಾಣದಲ್ಲಿ ಖರೀದಿ ಮಾಡುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯವಲ್ಲ. ದುಡ್ಡಿದ್ದವರು ಹೀಗೆಯೇ ದುಡ್ಡನ್ನು ಖರ್ಚು ಮಾಡುವುದು. ಆದರೆ ಕೆಲವು ಮಧ್ಯಮವರ್ಗದ ಜನರೂ ಕೂಡ ಈ ಬಲೆಗೆ ಸಿಕ್ಕಿ ಬೀಳುವುತ್ತಿರುವುದು ಬೇಸರದ ಸಂಗತಿ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಇಂದು ಹೆಚ್ಚೆಚ್ಚು ಅಂತರಾಷ್ಟ್ರೀಯ ಕನೆಕ್ಟೆಡ್ ವಿಮಾನಗಳು ಆಕರ್ಷಿ ಸುತ್ತಿವೆ. ಉದಾಹರಣೆಗೆ, ಶ್ರೀಲಂಕಾದಿಂದ ದೆಹಲಿಗೆ ಬಂದು ಇಲ್ಲಿಂದ ಜರ್ಮನಿಗೆ ಅಥವಾ ಅಮೆರಿಕಕ್ಕೆ ಹೋಗು ವಂತಹ ವಿಮಾನಗಳು. ಇವುಗಳಲ್ಲಿ ವಿಮಾನ ನಿಲ್ದಾಣ ನಿರ್ವಾಹರಕ ವ್ಯಾಪಾರದ ಬುದ್ಧಿವಂತಿಕೆಯಿದೆ. ಆದಷ್ಟು ಜನರನ್ನು ಕಾಯಿಸುವುದು, ಕಾಯುತ್ತಾ ಕೂತ ಅವರಿಂದ ವಿಮಾನ ನಿಲ್ದಾಣದಲ್ಲಿ ವ್ಯಾಪಾರ ಮಾಡಿಸುವುದು. ಹೀಗೆ ತಮ್ಮ ವ್ಯಾಪಾರದ ಲಾಭವನ್ನು ಹೆಚ್ಚಿಸಿಕೊಳ್ಳವುದು. ಪ್ರವಾಸವು ಒಂದು ಉದ್ಯಮವಾದರೆ, ಪ್ರವಾಸದ ನಡುವೆ ಇದು ಇನ್ನೊಂದು ಉದ್ಯಮ! ನಾವು ಕಂಡಕಂಡಲ್ಲಿ ಲಾಭದ ಗುಂಡನ್ನು ಹುಡುಕುತ್ತಿದ್ದೇವೆ. ಅದೇನೆ ಇರಲಿ, ನಾನಂತೂ ನನ್ನ ಗೆಳೆಯ ಗುಂಡಾಧರನಿಗೋಸ್ಕರ ಡ್ಯೂಟಿ ಫ್ರೀ ಅಂಗಡಿಯಲ್ಲಿ ಶಾಪಿಂಗ್ ಮಾಡದೇ, ಏರ್ಪೋರ್ಟ್ ನಿಂದ ಹೊರಗೆ ಬರುವುದೇ ಇಲ್ಲ.
ಇದನ್ನೂ ಓದಿ: ಚುನಾವಣಾ ಆಯೋಗಕ್ಕೊಂದು ಕೋವಿಡ್ ಟೆಸ್ಟ್ !