Wednesday, 9th October 2024

ಒಪ್ಪಾರು ಕುಸಿವಂತಹ ಗಾಳಿ ಮಳೆ

ಶಾಂತಾ ನಾಗಮಂಗಲ

ನಾವಾಗ ತಮಿಳುನಾಡಿನ ಮೆಟ್ಟೂರು ಅಣೆಯ ಸಮೀಪದ ಒಂದು ಕೈಗಾರಿಕಾ ವಸತಿ ಸಮುಚ್ಚಯದಲ್ಲಿದ್ದೆವು. ನಮ್ಮ ಮನೆಗೆ ಬರುವ ಬಂಧು ಮಿತ್ರರೆಲ್ಲರನ್ನೂ ಮೆಟ್ಟೂರು ಜಲಾಶಯವನ್ನೂ, ಸಮೀಪದ ಇದ್ದ ಹೋಗೇನಕಲ್ ಜಲಪಾತವನ್ನೂ ತೋರಿಸಲು ಕರೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಈ ಎರಡು ಆಕರ್ಷಣೆಗಳನ್ನು ಬಿಟ್ಟರೆ ಅಲ್ಲಿ ಇನ್ನೇನೂ ತೋರಿಸಲು ಇರಲೂ ಇಲ್ಲ.

ಹೀಗೆ ಒಮ್ಮೆ ನಮ್ಮಲ್ಲಿಗೆ ಬಂದಿದ್ದ ನಮ್ಮ ಭಾವ, ಓರಗಿತ್ತಿ ಮಕ್ಕಳನ್ನು ಕರೆದು ಕೊಂಡು ಮೆಟ್ಟೂರು ಜಲಾಶಯಕ್ಕೆ ಹೋಗಿದ್ದೆ. ಆಗ ಕಾರು – ಬೋರು ಏನೂ ಇರದಿದ್ದ ಕಾಲ. ಟೌನ್ ಬಸ್ ಎಂದು ಕರೆಯುತ್ತಿದ್ದ ಸ್ಥಾನೀಯ ಪರಿವಹನದ ಹೋಗಿದ್ದೆವು. ಮಧ್ಯಾಹ್ನ ೧೨ ರ ಹೊತ್ತಿಗೆ ಊಟಮಾಡಿ ಹೊರಟು, ಜಲಾಶಯದ ಕೆಳಗಿರುವ ಪಾರ್ಕ್‌ನಲ್ಲಿ ಸುತ್ತಾಡಿದೆವು. ಹೂವು, ಮರಗಳು, ವಿತಾನಗಳು ಈ ಯಾವ ಆಕರ್ಷಣೆಯೂ ಆಗ ಅಲ್ಲಿರಲಿಲ್ಲ. ಆದರೆ ನಮ್ಮ ಮಕ್ಕಳಿಗೆ ಜಾರುಗುಪ್ಪೆ,
ಜೋಕಾಲಿ, ಟಕ್ಕಾ-ಟಿಕ್ಕಿ ಎಲ್ಲಾ ಇದ್ದವು. ಖುಶಿಯಾಗಿ ಮಕ್ಕಳು ಆಡ ತೊಡಗಿದರು.

ಮೆಟ್ಟೂರು ಜಲಾಶಯದ ಮೇಲೆ ಹೋಗುವ ವ್ಯವಸ್ಥೆ ಇರಲಿಲ್ಲ. ಅ ಇದ್ದ ಕಾಲುವೆ ಅಲ್ಲಿಂದ ಭೋರ್ಗರೆದು ಮೆಟ್ಟಲು ಮೆಟ್ಟಲುಗಳ ಮೇಲೆ ಕುಣಿ ಕುಣಿದು ಹರಿದು
ಹೋಗುತ್ತಿದ್ದ ಬೆಳ್ನೊರೆಯ ನೀರನ್ನು ನೋಡಿಯಾಯಿತು. ಆಗಲೇ ನಾಕು ಘಂಟೆಯಾಗ್ತಾ ಬಂತು. ಅದು ಮಾರ್ಚ್ ತಿಂಗಳ ಕೊನೆ ಬೇರೆ. ಮೆಟ್ಟೂರಿನಲ್ಲಿ ಆ ತಿಂಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ. ಸಂಜೆ ಮೇಲೆ ಮಳೆ ಹಿಡಿಯೋದು ವಾಡಿಕೆ. ಬೀಸುತ್ತಿದ್ದ ಗಾಳಿಯಿಂದಾಗಿ ಆಗಸದಲ್ಲಿ ಮೋಡವೂ ಕೂಡುತ್ತಿದ್ದವು. ಸರಿ ಬೇಗ ಮನೆ ಸೇರಿ ಬಿಡೋಣ ಎಂದು ಮಕ್ಕಳನ್ನು ಹೊರಡಿಸಿಕೊಂಡು ಹೊರಟೆವು.

ಉದ್ಯಾನವನದ ಮುಖ್ಯದ್ವಾರಕ್ಕೆ ಬರುವ ವೇಳೆಗೆ ಗಾಳಿಯ ವೇಗ ಜಾಸ್ತಿಯಾಗಿ ತೊಟ ತೊಟ ತೊಟ ಎಂದು ದಪ್ಪ ದಪ್ಪ ಮಳೆಹನಿಗಳು ಶುರೂನೇ ಆಗಿಬಿಡ್ತು. ಬಸ್ ನಿಲ್ದಾಣದ ವರೆಗೆ ನಮ್ಮ ಹತ್ತಿರ ಇದ್ದ ಒಂದು ಛತ್ರಿಯಲ್ಲಿ ಹೋಗಲು ಸಾಧ್ಯವಿರಲಿಲ್ಲ. ಗಾಳಿಯ ಹೊಡೆತ ಮಳೆಗಿಂತಲೂ ತೀವ್ರವಾಗಿತ್ತು. ವಿಧಿಯಿಲ್ಲದೇ ಅ
ಇದ್ದ ಒಂದು ಟೀ ಅಂಗಡಿಯ ಒಪ್ಪಾರಿನ ಕೆಳಗೆ ನಿಂತೆವು. ಗಾಳಿ ಮಳೆಯ ಬಿರುಸು ಎಷ್ಟಿತ್ತೆಂದರೆ ಆ ಮುಂದಿನ ಒಪ್ಪಾರಿಗೆ ಆಧಾರವಾಗಿದ್ದ ಬೊಂಬು, ಇನ್ನೇನು ಮೇಲಿದ್ದ ಸೋಗೆಗರಿ ಛಾವಣಿ ತಲೆಯ ಮೇಲೆ ಕುಸಿಯುವುದೋ ಎಂಬಂತೆ ಅಲುಗಾಡಲಾರಂಭಿಸಿತು.

ಅಂಗಡಿಯವ ಓಡಿ ಬಂದು ಆ ಬೊಂಬನ್ನು ಹಿಡಿದುಕೊಂಡು, ನಮ್ಮ ಭಾವನವರನ್ನೂ ಹಿಡಿದು ಕೊಳ್ಳಲು ಹೇಳಿದ. ನಮಗೆ ವಿಪರೀತ ಗಾಬರಿ ಆತಂಕ.
ಮಕ್ಕಳೂ ಛಳಿ-ಗಾಳಿಯ ಜತೆ ಭಯವೂ ಸೇರಿ ನಡುಗತೊಡಗಿದವು. ಮನಸ್ಸಿನಲ್ಲಿ ದೇವರನ್ನು ನೆನೆಯುತ್ತಾ, ಜೊತೆಗೆ ರಾಚುತ್ತಿದ್ದ ಇರಚಲಿನಲ್ಲಿ ನೆನೆಯುತ್ತಾ ನಿಂತೆವು. ಈ ಮಳೆಗಾಳಿಗಳ ರುದ್ರನರ್ತನ ಸುಮಾರು ಒಂದು ಘಂಟೆ ನಡೆದು ನಿಧಾನವಾಗಿ ನಿಂತಿತು. ಆ ಛಾವಣಿಗೆ ಆಧಾರವಾಗಿದ್ದ ಬೊಂಬೂ ಸದ್ಯ ನಿಂತೇ
ಇತ್ತು. ಕೆಲವೇ ನಿಮಿಷಗಳಲ್ಲಿ ಆಗಸವು ಏನೂ ನಡೆದೇ ಇಲ್ಲವೇನೋ ಎಂಬಂತೆ ಹೊಳವಾಯಿತು.

ಏನೂ ಆಗಬಾರದ್ದು ಆಗಲಿಲ್ಲವಲ್ಲ ಎಂಬ ನೆಮ್ಮದಿಯೊಂದಿಗೆ ಮನೆಗೆ ಮರಳಿzಯಿತು. ಈಗಲೂ ನಾವು ಓರಗಿತ್ತಿಯರು ಒಟ್ಟಿಗೆ ಸೇರಿದಾಗ ಈ ನಮ್ಮ ಮಳೆಯ
ಅನುಭವವನ್ನು ನೆನೆಯುತ್ತೇವೆ.