Wednesday, 11th December 2024

ಕಾಲ್ನಡಿಗೆಯಲ್ಲಿ ಬೋಸ್ಟನ್‌ ವೀಕ್ಷಣೆ

ಜಿ.ನಾಗೇಂದ್ರ ಕಾವೂರು

ಅಮೆರಿಕದಲ್ಲಿ ಬ್ರಿಟಿಷರ ವಿರುದ್ಧ ನಾಗರಿಕರು ತಿರುಗಿಬಿದ್ದು, ಬೋಸ್ಟನ್ ಟೀ ಪಾರ್ಟಿ ಎಂಬ ಹೋರಾಟವನ್ನು ಆರಂಭಿಸಿದ್ದು ಇದೇ ನಗರದಲ್ಲಿ!

ಬೋಸ್ಟನ್ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದ ರಾಜಧಾನಿ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ. ಅಮೆರಿಕನ್ ಕ್ರಾಂತಿಯ ಹಲವಾರು ಪ್ರಮುಖ ಘಟನೆಗಳಾದ ಬೋಸ್ಟನ್ ಹತ್ಯಾಕಾಂಡ, ಬೋಸ್ಟನ್ ಟೀ ಪಾರ್ಟಿ, ಬಂಕರ್ ಹಿಲ್ ಕದನ ಹಾಗೂ ಬೋಸ್ಟನ್ ಮುತ್ತಿಗೆ ಮೊದಲಾದವುಗಳ ಕೇಂದ್ರ ಬಿಂದು.

ಅನೇಕ ಮಹಾವಿದ್ಯಾಲಗಳು, ವಿಶ್ವವಿದ್ಯಾಲಯಗಳು, ಕಾನೂನು, ವೈದ್ಯಕೀಯ, ಇಂಜಿನಿಯರಿಂಗ, ವಿಜ್ಞಾನ ಕ್ಷೇತ್ರಗಳ ಉನ್ನತ ಶಿಕ್ಷಣದಲ್ಲಿ ವಿಶ್ವ ನಾಯಕನಾಗಿ ಗುರುತಿಸಿಕೊಂಡಿದೆ. ಪ್ರಮುಖ ಬಂದರು ಮತ್ತು ಉತ್ಪಾದನಾ ಕೇಂದ್ರವಾಗಿರುವ ಬೋಸ್ಟನ್ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ಮುಂದುವರೆದಿದೆ.

ಯುನೈಟೆಡ್ ಸ್ಟೇಟ್ಸ್ ನ ಹಲವು ಪ್ರಥಮಗಳ ನಗರವೆಂಬ ಹೆಗ್ಗಳಿಕೆಗೆ ಬೋಸ್ಟನ್ ಪಾತ್ರವಾಗಿದೆ. 20ಹೆಕ್ಟೇರ್ ವಿಸ್ತೀರ್ಣವುಳ್ಳ ಪ್ರಥಮ ಸಾರ್ವಜನಿಕ ಉದ್ಯಾನವನ ‘ಬೋಸ್ಟನ್ ಕಾಮನ್’ನ್ನು 1634 ರಲ್ಲಿ ತೆರೆಯಲಾಯಿತು. 1635 ರಲ್ಲಿ ತೆರೆಯಲಾದ ಬೋಸ್ಟನ್ ಲ್ಯಾಟಿನ್ ಶಾಲೆ ಪ್ರಥಮ ರಾಜ್ಯ ಶಾಲೆಯಾಗಿದೆ. ಪ್ರಥಮ ಸಬ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟ್ರಿಮೊಂಟ್ ಸ್ಟ್ರೀಟ್ ಸುರಂಗ ಮಾರ್ಗವನ್ನು 1897 ರಲ್ಲಿ ರಚಿಸಲಾಯಿತು.

ಡಕ್ ಟೂರ್!
ಬೋಸ್ಟನ್ ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳು, ಪ್ರವಾಸಿ ತಾಣಗಳು ಹಾಗೂ ನಗರದ ಸೌಂದರ್ಯವನ್ನು ವೀಕ್ಷಿಸಲೆಂದೇ ‘ಉಭಯಚರಿ!’ ವಾಹನ ಗಳು ‘ಸ್ಪ್ಲಾಶ್ ಟೂರ್ಸ್’ ಹಾಗೂ ಹಡಗಿನ ಆಕಾರದ ವಾಹನ ‘ಬೋಸ್ಟನ್ ಡಕ್ ಟೂರ್ಸ್’ ಲಭ್ಯವಿವೆ. ಇವುಗಳಲ್ಲಿ ಪ್ರಯಾಣಿಸಿ ನಗರದ ಪ್ರೇಕ್ಷಣೀಯ ಸ್ಥಳ ಗಳನ್ನು ಹಾಗೂ ಸಮುದ್ರಯಾನದ ಮೂಲಕ ದಡದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿ ಆನಂದಿಸಬಹುದಾಗಿದೆ.

ಹಾಪ್ ಆನ್- ಹಾಪ್ ಆ- ಬಸ್ಸುಗಳು ನಿರ್ದಿಷ್ಟ ನಿಲುಗಡೆಯಲ್ಲಿ ಪ್ರವಾಸಿಗರನ್ನು ಹತ್ತಿಸಿಕೊಳ್ಳುತ್ತವೆ ಹಾಗೂ ಇಳಿಸುತ್ತವೆ. ಸಾಮಾನ್ಯವಾಗಿ ಹದಿನೈದು ನಿಮಿಷಕ್ಕೊಂದು ಬಸ್ ಬರುತ್ತದೆ. ಟಿಕೆಟ್ ಒಮ್ಮೆ ಖರೀದಿಸಿದರೆ ಸಾಕು ಬೆಳಿಗ್ಗೆಯಿಂದ ಸಂಜೆವರೆಗೂ ಓಡಾಡಬಹುದು. ಜತೆಗೆ ನಡಿಗೆಯ ಪ್ರವಾಸವೂ ಇದೆ.

ಐತಿಹಾಸಿಕ ಬೋಸ್ಟನ್ ನಗರದ ಮಧ್ಯಭಾಗದಿಂದ ಪ್ರಾರಂಭವಾಗುವ ‘ಸ್ವಾತಂತ್ರ್ಯ ಹಾದಿ’ಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಯುನೈಟೆಡ್ ಸ್ಟೇಟ್ಸ ಇತಿಹಾಸಕ್ಕೆ ಸಂಬಂಧಿಸಿದ ೧೬ ಐತಿಹಾಸಿಕ ತಾಣಗಳನ್ನು ವೀಕ್ಷಿಸಬಹುದಾಗಿದೆ. ಸ್ವಯಂಸೇವಕ ಉಚಿತ ಗೈಡ್‌ ಗಳ ಸಹಾಯವನ್ನು ಸಹ ಪಡೆದುಕೊಂಡು ವೀಕ್ಷಿಸಬಹುದು.

ಕ್ರಾಂತಿಗೆ ಮುನ್ನುಡಿ
ಅಮೆರಿಕನ್ ಕ್ರಾಂತಿಯ ಮುನ್ನಾದಿನದಿಂದು ದೇಶಪ್ರೇಮಿಗಳು ಸಭೆ ನಡೆಸಿದ ಸ್ಥಳ ‘-ನ್ಯುಯಲ್ ಹಾಲ’. ಸ್ಟ್ಯಾಂಪ್ ಆಕ್ಟ್, ಬೋಸ್ಟನ್ ಹತ್ಯಾಕಾಂಡ, ಟೀ ಬಿಕ್ಕಟ್ಟು ಹಾಗೂ ಬ್ರಿಟನ್ ನೊಂದಿಗಿನ ಕುಂದುಕೊರತೆಗಳ ಬಗ್ಗೆ ಚರ್ಚಿಸಿದ ಸಭೆಗಳೂ ಸಹ ಇದೇ ಕಟ್ಟಡ ದಲ್ಲಿ ನಡೆದವು. ಬಂಕರ್ ಹಿಲ್ ಪ್ರದೇಶದಲ್ಲಿ 67 ಮೀಟರ್ ಎತ್ತರದ ಸ್ಮಾರಕ ವಿದ್ದು, ಬೆಟ್ಟವನ್ನು ಹತ್ತಲು ಮೆಟ್ಟಿಲು ಗಳಿವೆ. ಬೆಟ್ಟದ ಮೇಲಿಂದ ಬೋಸ್ಟನ್ ನಗರದ ಸೌಂದರ್ಯವನ್ನು ವೀಕ್ಷಿಸ ಬಹುದು. ಯುದ್ಧದಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳು ಹಾಗೂ ಇತರೆ ಗಮನಾರ್ಹ ವಸ್ತುಗಳನ್ನು ಬಂಕರ್ ಹಿಲ್ ಮ್ಯೂಸಿಯಂನಲ್ಲಿ ವೀಕ್ಷಿಸಬಹುದು.

ಬೋಸ್ಟನ್ ಟೀ ಪಾರ್ಟಿ!
ಟೌನ್ ಶೆಂಡ್ ಕಾಯ್ದೆ ವಿಽಸಿದ ತೆರಿಗೆಗಳನ್ನು ಹೊರತುಪಡಿಸಿ ತೆರಿಗೆ ಪಾವತಿಸದೆ ಚೀನಾದಿಂದ ತರಿಸಿದ ಚಹಾವನ್ನು ಅಮೆರಿಕದ ವಸಾಹತುಗಳಲ್ಲಿ ಮಾರಾಟ ಮಾಡಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಅವಕಾಶ ಮಾಡಿಕೊಟ್ಟ 1773ರ ಚಹಾ ಕಾಯ್ದೆ ಯನ್ನು ಗುರಿಯಾಗಿರಿಸಿಕೊಂಡು ಮಾಡಿದ ಪ್ರತಿಭಟನೆಯಲ್ಲಿ, ಈಸ್ಟ್ ಇಂಡಿಯಾ ಕಂಪೆನಿ ಕಳುಹಿಸಿದ ಚಹಾ ಪೆಟ್ಟಿಗೆ ಗಳನ್ನು ನಾಶಪಡಿಸಲಾಯಿತು. ಈ ಘಟನೆಗೆ ಸಂಬಂಧಿಸಿದ ಎರಡು ಹಡಗುಗಳ ಪ್ರತಿಕೃತಿಗಳು, ಪ್ರದರ್ಶನಗಳನ್ನು ಹಾಗೂ ವಸ್ತು ಸಂಗ್ರಹಾಲಯ ವನ್ನು ‘ಬೋಸ್ಟನ್ ಟೀ ಪಾರ್ಟಿ’ ಕಟ್ಟಡದಲ್ಲಿ ನೋಡಬಹುದು. ಬೋಸ್ಟನ್ ಕಾಮನ್ ಉದ್ಯಾನವನ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ಸಮೀಪದ ಇರುವ ’ಮಾಸಚೂಸೆಟ್ಸ ಸ್ಟೇಟ್ ಹೌಸ್’ನಲ್ಲಿ ಬೋಸ್ಟನ್ ನಗರದ ಇತಿಹಾಸವನ್ನು ಹಾಗೂ ಸ್ಟೇಟ್ ಕ್ಯಾಪಿಟಲ್ ವಾಸ್ತು ಶೈಲಿಯ ಬಗ್ಗೆ ವಿವರಗಳಿವೆ.

ಎಂಐಟಿ
ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ‘ಹಾರ್ವಡ್ ಯೂನಿವರ್ಸಿಟಿ’ ಹಾಗೂ ‘ಮ್ಯಾಸಾಚೂಸೆಟ್ಸ ಇನ್ಸ್ಟಿಟ್ಯೂಟ್ ಆಫ್  ಟೆಕ್ನಾಲಜಿ’(ಎಂಐಟಿ) ಗಳನ್ನು ವೀಕ್ಷಿಸದೆ ಬೋಸ್ಟನ್ ಪ್ರವಾಸ ಪೂರ್ಣವಾಗಲಾರದು. 1636 ರಲ್ಲಿ ಸ್ಥಾಪನೆಯಾದ ಹಾರ್ವರ್ಡ್
ವಿಶ್ವವಿದ್ಯಾಲಯವನ್ನು ಹಳೆ ವಿದ್ಯಾರ್ಥಿಗಳ ಮಾರ್ಗದರ್ಶನದಲ್ಲಿ ವೀಕ್ಷಿಸಬಹುದು. ಮಾರ್ಗದರ್ಶಕರು ತಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ವಿವರಣೆ ನೀಡುತ್ತಾರೆ.

ಹಾರ್ವರ್ಡ್ ಯೂನಿವರ್ಸಿಟಿ ಯುನೈಟೆಡ್ ಸ್ಟೇಟ್ಸ ನಲ್ಲಿ ಉನ್ನತ ಶಿಕ್ಷಣದ ಅತ್ಯಂತ ಹಳೆಯ ಹಾಗೂ ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮ್ಯಾಸಾಚೂಸೆಟ್ಸ್  ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) 1861 ರಲ್ಲಿ ಸ್ಥಾಪನೆಯಾಗಿದ್ದು, ವಿಶ್ವದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾ ಗಿದೆ. ಇಲ್ಲಿ ಹಲವು ಮ್ಯೂಸಿಯಂಗಳಿವೆ.

ಗಗನಚುಂಬಿ ಕಟ್ಟಡಗಳು
ಬೋಸ್ಟನ್ ನಗರದ ಕೇಂದ್ರಭಾಗದಲ್ಲಿರುವ ಹಲವಾರು ಗಗನ ಚುಂಬಿ ಕಟ್ಟಡಗಳು ವಿಶಿಷ್ಟ ವಾಸ್ತು ಶೈಲಿಯಿಂದಾಗಿ ಪ್ರವಾಸಿಗರ ಗಮನ ಸೆಳೆಯುತ್ತವೆ. 187 ಮೀ ಎತ್ತರದ 32 ಅಂತಸ್ತುಗಳ ವಿಶಿಷ್ಟ ವಿನ್ಯಾಸದ ‘ಫೆಡರಲ್ ರಿಸರ್ವ್ ಬ್ಯಾಂಕ್’ ಕಟ್ಟಡದಲ್ಲಿ ಬ್ಯಾಂಕಿನ ಪ್ರಧಾನ ಕಛೇರಿಯಿದೆ. ಇಲ್ಲಿಂದ ಬಿಡುಗಡೆಯಾಗುವ ಅಮೆರಿಕನ್ ಡಾಲರ್‌ಗಗಳು ‘ಎ’ ಅಕ್ಷರವನ್ನು ಹೊಂದಿರುತ್ತವೆ.
228 ಮೀ. ಎತ್ತರ, 52 ಅಂತಸ್ತುಗಳ ‘ಪ್ರೂಡೆನ್ಶಿಯಲ್ ಟವರ್’ ಯುನೈಟೆಡ್ ಸ್ಟೇಟ್ಸ ನ 114 ನೇ ಅತಿ ಎತ್ತರದ ಕಟ್ಟಡ ವಾಗಿದ್ದು, 50 ನೇ ಅಂತಸ್ತಿನಲ್ಲಿರುವ ವೀಕ್ಷಣಾ ವೇದಿಕೆಯಿದ್ದು, ಪ್ರವಾಸಿಗರು ಇಲ್ಲಿಂದ ಬೋಸ್ಟನ್ ನಗರವನ್ನು ವೀಕ್ಷಿಸ ಬಹುದಾಗಿದೆ.

ಕಾಲ್ನಡಿಗೆ ಮೂಲಕ ಐತಿಹಾಸಿಕ ತಾಣಗಳನ್ನು ನೋಡಲು ಸುಮಾರು 4 ಕಿ.ಮೀ ದೂರ ನಡೆಯಬೇಕಾಗುತ್ತದೆ. ಕಾಲ್ನಡಿಗೆ
ಮೂಲಕ ಈ ನಗರವನ್ನು ವೀಕ್ಷಿಸಿದಾಗ ಇಲ್ಲಿನ ತಾಣಗಳ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆದುಕೊಳ್ಳುವುದು ಸಾಧ್ಯ.