Friday, 13th December 2024

ಅಸಂಖ್ಯ ಮಣ್ಣಿನ ಗೊಂಬೆಗಳು !

ಸಿ.ಜಿ.ವೆಂಕಟೇಶ್ವರ

ಇದೊಂದು ಜನಪದ ನಂಬಿಕೆಯಾಧಾರಿತ ಪದ್ಧತಿ. ಕಳೆದ ನೂರಾರು ವರ್ಷಗಳಿಂದ ಇಲ್ಲಿ ಪುಟ್ಟ ಪುಟ್ಟ ಮಣ್ಣಿನ ಗೊಂಬೆಗಳನ್ನು ಜನರು ಸಮರ್ಪಿಸಿದ್ದರಿಂದಾಗಿ, ಇಲ್ಲಿ ಈಗ ಮಣ್ಣಿನ ಗೊಂಬೆಗಳ ರಾಶಿಯೇ ಬೆಳೆದಿದೆ. ಇದಿರುವುದು ಸುರ್ಯ ಎಂಬ ಹಳ್ಳಿಯಲ್ಲಿರುವ ಸದಾಶಿವ ರುದ್ರ ದೇವಾಲಯದ ಹತ್ತಿರ.

ಕಾನನದ ನಡುವೆ ಅಲ್ಲಲ್ಲಿ ಕಾಣುವ ರಬ್ಬರ್ ತೋಟಗಳು, ದೂರದಲ್ಲಿ ಹಸಿರು ತುಂಬಿದ ಬೆಟ್ಟಗಳ ಸಾಲು, ಎದುರಿನಲ್ಲಿ ಅಡಿಕೆ ತೆಂಗಿನ ತೋಟ, ಮರಗಿಡಗಳ ದಟ್ಟಣೆ ಇವುಗಳ ಮಧ್ಯದಲ್ಲಿರುವ ಸುರ್ಯದ ಸದಾಶಿವ ರುದ್ರ ದೇವಾಲಯವು ಹಲವು ವೈಶಿಷ್ಟ್ಯ ಗಳ ಸಂಗಮ. ಸುರ್ಯ ಹಳ್ಳಿಯಲ್ಲಿರುವ ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಪೂಜೆಯ ಜತೆಗೆ, ಭಕ್ತರ ಹರಕೆ ತೀರಿಸುವ ಕ್ಷೇತ್ರ ಮತ್ತು ಮಣ್ಣಿನ ಹರಕೆ ಗೊಂಬೆಗಳನ್ನು ಸಮರ್ಪಿಸುವ ಸಂಪ್ರದಾಯವಿರುವ ಜಾಗ.

ಜನರು ತಮ್ಮ ಮನಸ್ಸಿನ ಆಸೆಯನ್ನು ಮನದಲ್ಲೇ ಹೇಳಿಕೊಂಡು, ಅದು ಸಾಧ್ಯವಾದಾಗ, ಸೂಕ್ತ ಎನಿಸುವ ಪುಟ್ಟ ಪುಟ್ಟ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಅರ್ಪಿಸು ವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ! ಈ ಸಂಪ್ರದಾಯ ಹೇಗೆ ಆರಂಭ ವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನ ಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದೆ ಎನ್ನಬಹುದು. ಇದಕ್ಕೆ ಸಾಕ್ಷಿಯಾಗಿ ಈ ದೇಗುಲದ ಆವರಣದಲ್ಲಿ ಶೇಖರಣೆಯಾದ ವಿವಿಧ ಸ್ವರೂಪದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.

ಬೃಹತ್ ರಾಶಿ
ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನ ಗೊಂಬೆಗಳನ್ನು ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಎಲ್ಲರಿಂದಲೂ ಸುಲಭ ಸಾಧ್ಯ. ಆದ್ದರಿಂದಲೇ ಈ ಸರಳ ಹರಕೆ ಪದ್ದತಿ ಸುತ್ತಲಿನ ಹಳ್ಳಿಯ ರೈತಾಪಿ ಜನರಿಂದ ಆರಂಭವಾಗಿರ ಬಹುದು. ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು. ಅದೆಷ್ಟೋ ನೂರು ವರ್ಷಗಳಿಂದಲೂ ಈ ಸಂಪ್ರದಾಯ, ಅಂದರೆ, ಪುಟ್ಟ ಮಣ್ಣಿನ ಗೊಂಬೆಗಳನ್ನು ಇಲ್ಲಿ ಹರಕೆಯ ರೂಪದಲ್ಲಿ ತಂದಿಡುವ ಪದ್ಧತಿ ಇದ್ದಿರಲೇಬೇಕು. ಹರಕೆ ಸಲ್ಲಿಸುವ ವನದಲ್ಲಿರುವ, ಮಣ್ಣಿನ ಗೊಂಬೆಗಳ ಬೃಹತ್ ರಾಶಿಯೇ ಈ ಹರಕೆಯ ಜನಪ್ರಿಯತೆಯನ್ನು ತೋರಿಸುತ್ತದೆ.

ಮಣ್ಣಿನ ಗೊಂಬೆ ಸಮರ್ಪಿಸುವುದು ಎಂದರೇನು? ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ಮನೆಯನ್ನು ಕಟ್ಟಿಸಬೇಕೆಂದು  ಬಯಸಿದಲ್ಲಿ ಅದು ನಿರ್ವಿಘ್ನವಾಗಿ ನೆರವೇರಿಸಿದರೆ ಸುರ್ಯ ಸದಾಶಿವರುದ್ರ ದೇವರಿಗೆ ಹರಕೆ ಒಪ್ಪಿಸುತ್ತೇನೆಂದು ಮನಸ್ಸಿನಲ್ಲಿ ಯೋಚಿಸಿಕೊಳ್ಳಬಹುದು. ಅದಾಗಿ ಕೆಲವು ಕಾಲದ ನಂತರ ಆತ ಸ್ವಂತ ಮನೆ ನಿರ್ಮಾಣ ಮಾಡಲು ಸಾಧ್ಯವಾಗಬಹುದು. ಆಗ ಖುಷಿಪಟ್ಟ ಆ ವ್ಯಕ್ತಿಯು, ಅಂಗೈ ಅಗಲದ ಮಣ್ಣಿ ಮನೆಯನ್ನು ತಯಾರಿಸಿ, ಇಲ್ಲಿಗೆ ತಂದು ಒಪ್ಪಿಸುವ ಸಂಪ್ರದಾಯ. ಮಣ್ಣಿನ ಆಕೃತಿಯನ್ನು ಒಂದು ಸೇರು ಅಕ್ಕಿ, ಒಂದು ತೆಂಗಿನ ಕಾಯಿ, ೫ ರೂ. ಕಾಣಿಕೆಯ ಜತೆ ಹರಕೆ ಒಪ್ಪಿಸಬಹುದು. ಇದೇ ರೀತಿ ಟಿವಿ ಖರೀದಿ, ಕಿಡ್ನಿ ಆರೋಗ್ಯ, ಕಂಪ್ಯೂಟರ್ ಖರೀದಿ, ಸಂತಾನಪ್ರಾಪ್ತಿಗಾಗಿ ತೊಟ್ಟಿಲು ಮಗು, ಮದುವೆ ಭಾಗ್ಯಕ್ಕಾಗಿ ಗಂಡು-ಹೆಣ್ಣಿನ
ಗೊಂಬೆ, ವಿದ್ಯಾಭ್ಯಾಸದ ಸ-ಲತೆ ಗಾಗಿ ಪುಸ್ತಕ – ಪೆನ್ನು, ದೇಹಾ  ರೋಗ್ಯಕ್ಕಾಗಿ ಮನುಷ್ಯಾಕೃತಿ ಅಥವಾ ಸಂಬಂಧಪಟ್ಟ
ಅಂಗಾಂಗಗಳು, ವಾಹನ ಖರೀದಿಸುವಂತಾಗಲು ವಾಹನಗಳು, ಒಳ್ಳೆಯ ಜಲಮೂಲಕ್ಕಾಗಿ ಬೋರ್ ವೆಲ್ ಬಾವಿ ಇತ್ಯಾದಿಯಾಗಿ ಹರಕೆ ಒಪ್ಪಿಸುವ ಪದ್ಧತಿ ಇಲ್ಲಿದೆ.

ಮನೆ, ಟಿವಿ, ಕಾರು, ಮನುಷ್ಯನ ಆಕೃತಿಗಳ ರಾಶಿಯೇ ಇಲ್ಲಿನ ಹರಕೆ ವನದಲ್ಲಿದೆ. ಇಲ್ಲಿನ ಗೊಂಬೆಗಳ ರಾಶಿಯನ್ನು ಕಂಡು, ಅದೆಷ್ಟು ಜನರ ಆಸೆ ನೆರವೇರಿದೆ ಎಂಬ ಭಾವ ಮೂಡುತ್ತದೆ!

ಕಾರು, ಬಸ್ಸು, ವಿಮಾನ, ದೋಣಿ, ಹೆಲಿಕಾಪ್ಟರ್, ಕಟ್ಟಡಗಳು, ಕೈ, ಕಾಲು, ಹೃದಯ, ಮೇಜು, ಕುರ್ಚಿ, ದನ, ಕರು, ನಾಯಿ, ಕೋಳಿ – ಇತ್ಯಾದಿ ನೂರಾರು ತರದ ಮಣ್ಣಿನ ಹರಕೆಗಳನ್ನು ದೇವರಿಗೆ ಅರ್ಪಿಸಿರುವುದನ್ನು ಇಲ್ಲಿ ನೋಡಬಹುದ್ಠು. ಒಬ್ಬನೇ ವ್ಯಕ್ತಿ ಎಷ್ಟು ಹರಕೆಗಳನ್ನೂ ಬೇಕಾದರೂ ಹೊರಬಹುದು! ಏಕೆಂದರೆ ಮಾನವನ ಆಸೆಗೆ ಮಿತಿಯಿಲ್ಲವಲ್ಲ.

ಆದರೆ ಆ ಎ ಆಸೆಗಳ ಈಡೇರುವುದು ಅವರವರ ಭಾಗ್ಯ, ಅದೃಷ್ಟ. ಎಲ್ಲರೂ ಮನೆಯಲ್ಲೇ ಮಣ್ಣಿನ ಗೊಂಬೆ ತಯಾರಿಸಲು ಕಷ್ಟವಾದೀತು. ಆದ್ದರಿಂದ, ಇಂತಹ ಮಣ್ಣಿನ ಗೊಂಬೆಗಳನ್ನು ಕುಶಲ ಕರ್ಮಿಗಳು ತಯಾರಿಸಿ, ಮಾರಾಟ ಮಾಡುವ ಅಂಗಡಿಯು ದೇವಾಲಯದ ಆವರಣದಲ್ಲಿದೆ. ದೇವಸ್ಥಾನದ ಬಲಭಾಗದ ಒಂದು ಅಂಗಡಿ ಎ ರೀತಿಯ ಗೊಂಬೆಗಳು ಇವೆ. ಅವುಗಳ ದರಪಟ್ಟಿಯನ್ನು ಸಹ ಅಲ್ಲಿ ಪ್ರದರ್ಶಿಸಲಾಗಿದೆ.

ಸುಂದರ ಹರಕೆ ವನ
ದೇವಾಲಯದಿಂದ ಸುಮಾರು ನೂರು ಮೀಟರ್ ದೂರದಲ್ಲಿ, ಒಂದು ದೊಡ್ಡ ಕಲ್ಯಾಣಿಯ ಪಕ್ಕದಲ್ಲಿ, ಹರಕೆಯ ಗೊಂಬೆಗಳನ್ನು ಸಮರ್ಪಿಸುವ ಜಾಗವಿದೆ. ಇದಕ್ಕೆ ಸನಿಹದಲ್ಲಿ, ಶಿವಲಿಂಗದ ಮೂಲ ಸ್ಥಾನವೂ ಇದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆ ಗಳು ಹಾಗೂ ಶಿಲಾಪಾದಗಳು ಇವೆ. ಸಮರ್ಪಿತವಾದ ಹರಕೆಗೊಂಬೆಗಳನ್ನು ಈ ಲಿಂಗಗಳ ಸುತ್ತಲೂ ಜೋಡಿಸಿಡಲಾಗುತ್ತದೆ. ಆದ್ದರಿಂದಲೇ, ಇಲ್ಲಿ ಇಂದು ಮಣ್ಣಿನ ಗೊಂಬೆಗಳ ಬೃಹತ್ ರಾಶಿಯಿದ್ದು, ಅದರ ಮೇಲೆ ಗಿಡ ಮರಗಳು ಬೆಳೆದಿವೆ! ಹಗಲು ವೇಳೆ ಈ ‘ಹರಕೆ ಬನ’ದ  ಸಂದರ್ಶನಕ್ಕೆ ಅವಕಾಶವಿರುತ್ತದೆ. ಹೊಸದಾಗಿ ನಿರ್ಮಾಣಗೊಂಡ ದೇಗುಲವು ತುಸು ದೂರದಲ್ಲಿದೆ. ಈ ದೇವಸ್ಥಾನದ ಪೌಳಿಯಲ್ಲಿ, ಬಲಭಾಗದಲ್ಲಿ ಕೊಡಮಣಿತ್ತಾಯಿ, ಪಿಲಿಚಾಮುಂಡಿ, ಇತ್ಯಾದಿ ದೈವಗಳ ಸಾನ್ನಿಧ್ಯ ಇದೆ. ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದಂತೆ.

ಮಣ್ಣಿನ ಗೊಂಬೆಗಳ ಕ್ಷೇತ್ರ
ನಮ್ಮ ದೇಶದಲ್ಲೇ ವಿಶೇಷ ಎನಿಸಿರುವ ಈ ಒಂದು ಪದ್ಧತಿಯಿಂದಾಗಿ ಸುರ್ಯ ಹಳ್ಳಿಯು ಗಮನ ಸೆಳೆಯುತ್ತದೆ. ಪುಟ್ಟ ಪುಟ್ಟ ಮಣ್ಣಿನ ಗೊಂಬೆಗಳನ್ನು ಭಕ್ತರು ಇಲ್ಲಿ ತಂದು ಸಮರ್ಪಿಸಿದ್ದರಿಂದಾಗಿ, ಇಲ್ಲಿ ಇಂದು ಲಕ್ಷಾಂತರ ಗೊಂಬೆಗಳು ರಾಶಿಯಾಗಿ ಕುಳಿತಿವೆ. ಮನಸ್ಸಿನಲ್ಲಿ ಯೋಚಿಸಿಕೊಂಡ ಆಸೆ ನೆರವೇರಿದರೆ, ಉದಾ ಕಾರು ಖರೀದಿ, ಅಂಗೈ ಅಗಲದ ಕಾರಿನ ಗೊಂಬೆಯನ್ನು ಇಲ್ಲಿ ತಂದು ಅರ್ಪಿಸುವ ಪದ್ಧತಿ! ಇದು ನಿಜಕ್ಕೂ ವಿಶೇಷ, ಅನನ್ಯ. ಇಡೀ ಜಗತ್ತಿನಲ್ಲೇ ಇಂತಹ ಮಣ್ಣಿನ ಗೊಂಬೆ ಸಮರ್ಪಿಸುವ ಪದ್ಧತಿ ಇದ್ದಂತಿಲ್ಲ. ಮನಸ್ಸಿನಲ್ಲಿ ಅಂತಹ ಆಸೆ ಇರಲಿ, ಇಲ್ಲದೇ ಇರಲಿ, ಇಂತಹ ಜನಪದ ಪದ್ಧತಿಯನ್ನು ನೋಡುವ ಕುತೂಹಲಕ್ಕಾದರೂ, ಸುರ್ಯ ಹಳ್ಳಿಯನ್ನು ಸಂದರ್ಶಿಸಲೇಬೇಕು. ಮುಂದಿನ ಬಾರಿ ಕರಾವಳಿಗೆ ಪ್ರವಾಸಕ್ಕೆ ಹೋದಾಗ, ಸುರ್ಯ ಹಳ್ಳಿಗೆ ಹೋಗಿ, ಅಲ್ಲಿ ಭಕ್ತಿಯಿಂದ ಸಮರ್ಪಣೆಗೊಂಡ ಸಾವಿರಾರು ಮಣ್ಣಿನ ಗೊಂಬೆಗಳನ್ನು ನೋಡಿ ಬನ್ನಿ!

ಎಲ್ಲಿದೆ?
ಉಜಿರೆಯಿಂದ ೧೦ ಕಿ.ಮೀ., ಧರ್ಮಸ್ಥಳದಿಂದ ೧೩ ಕಿ.ಮೀ. ಮತ್ತು ಮಂಗಳೂರಿನಿಂದ ೭೦ ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕ ಇದೆ.