Wednesday, 11th December 2024

ಹಿಮಪರ್ವತ ತಂದ ಕಣ್ಣೀರು

ಬಿ.ಕೆ.ಮೀನಾಕ್ಷಿ, ಮೈಸೂರು

ಕರೋನಾ ಕಡಿಮೆಯಾಗಿದೆ, ಪ್ರವಾಸಕ್ಕೆ ಹೋಗಬೇಕೆ ಬೇಡವೇ ಎಂಬ ಗೊಂದಲ. ಧೈರ್ಯಮಾಡಿ ಹೊರಟವರಿಗೆ ದಕ್ಕಿದ್ದು ಹಿಮ ತುಂಬಿದ ಪರ್ವತ ಸಾಲಿನ ದರ್ಶನ, ಯಮುನಾ ನದಿ ಉಗಮಸ್ಥಾನದಲ್ಲಿ ಸ್ನಾನ.

ಹಿಮಾಲಯ ನೋಡುವ ಹಂಬಲದಿಂದ ಚಾರ್ ಧಾಮ್ ಯಾತ್ರೆಯನ್ನು ಮಾಡಲೇಬೇಕೆಂಬ ಹಠ ತೊಟ್ಟು ಯಾತ್ರಾಸಿದ್ಧತೆ ಮಾಡಿಕೊಂಡೆ. ಹೊರಟೂ ಆಯಿತು. ಯಾತ್ರೆಗೆ ಹೊರಟಿದ್ದ ನನ್ನನ್ನು ಅನೇಕರು ತಡೆದರು. ‘ಈ ವರ್ಷ ಬೇಡ ಎಲ್ಲೆಡೆಯೂ
ಕರೋನಾ ಅವಾಂತರ, ಸಾಲದ್ದಕ್ಕೆ ಅಲ್ಲಿ ಸಿಕ್ಕಾಪಟ್ಟೆ ಮಳೆಯಂತೆ, ಪ್ರವಾಹ ಬಂದು ಬಿಟ್ಟರೆ ಕೊಚ್ಚಿಹೋಗುತ್ತೀಯಾ’ ಎಂದೆಲ್ಲ ಹೆದರಿಸಿ ನನ್ನ ಮನಸ್ಸನ್ನು ಡೋಲಾಯಮಾನ ವಾಗಿಸಿದರು. ನಾನೂ ಮನುಷ್ಯಳಲ್ಲವೇ? ಬದುಕಬೇಕೆಂಬ ಜೀವದ ಮೇಲಿನ ಆಸೆಗೆ ಜೋತುಬಿದ್ದು ಬೇಡವೆಂದು ತೀರ್ಮಾನಿಸಿದೆ.

ಈತನ್ಮಧ್ಯೆ ಸುರಹೊನ್ನೆಯ ಹೇಮಮಾಲಾ ಜತೆಗೆ ಮಾತನಾಡುವ ಸಂದರ್ಭ ಒದಗಿಬಂತು. ಅವರು ಕಾಶ್ಮೀರ ಹಾಗೂ ಸಿಂಧೂ ಕಣಿವೆಯ ಒಂದು ಪ್ರವಾಸದ ಸಿದ್ಧತೆಯಲ್ಲಿದ್ದರು. ಈ ಸಮಯದಲ್ಲಿ ಹೊರಡುತ್ತಿದ್ದೀರಾ? ಎಂದ ನನಗೆ, ‘ಯಾವುದಕ್ಕೂ ಹೆದರಬಾರದು ಮೇಡಂ, ಹೋಗಬೇಕು ಹೋಗಬೇಕು. ಅಷ್ಟೆ’ ಎಂದ ಅವರ ಮಾತು ಕೇಳಿ, ರದ್ದು ಪಡಿಸಿದ್ದ ನನ್ನ ಯಾತ್ರೆಯನ್ನು ಪುನರ್‌ನವೀಕರಣಗೊಳಿಸುವಂತೆ ನಮ್ಮ ಯಾತ್ರಾ ಏಜೆನ್ಸಿಗೆ -ನಾಯಿಸಿ ಮುಂಗಡ ಹಣ ತಲುಪಿಸಿಬಿಟ್ಟೆ.

ದೆಹಲಿಯಿಂದ ಹರಿದ್ವಾರಕ್ಕೆ ಬಸ್ಸಿನಲ್ಲಿ ಹೊರಟು, ಅಲ್ಲಿ ಮಾರನೇದಿನ ಗಂಗಾಸ್ನಾನ, ಆರತಿ ಅಷ್ಟೋತ್ತರ ಎಂದೆಲ್ಲ ನಮ್ಮ ಆಯೋಜಕರು ಮುಂದೆ ದೈವದರ್ಶನದ ಹಾದಿಯ ಹೊಸಿಲಿನಲ್ಲಿ ನಿಂತೆವು. ಹರಿದ್ವಾರದಿಂದ ಬಾಡ್‌ಕೋಟ್‌ಗೆ ಪ್ರಯಾಣ. ರಾತ್ರಿ ಅಲ್ಲಿ ತಂಗಿ, ಬೆಳಗ್ಗೆಯೇ ಜಾನಕಿಚೆಟ್ಟಿಗೆ ಎಲ್ಲ ತಯಾರಿಗಳೊಂದಿಗೆ ಪ್ರಯಾಣ ಏರ್ಪಾಟಾಯಿತು. ಜಾನಕಿಚೆಟ್ಟಿಯಲ್ಲಿ ಉಪಾಹಾರ ಸೇವಿಸಿ, ಅಲ್ಲಿಯ ಚಳಿಯನ್ನು ನಡುಗುತ್ತಾ ಭರಿಸಿಕೊಂಡು ಕುದುರೆ ಹತ್ತಿದೆವು. ಆರು ಕಿಲೋಮೀಟರ್ ನಡೆದೇ ತಲುಪಬಹುದಿತ್ತೇನೋ…… ಆದರೆ ಧೈರ್ಯ ಮಾಡುವಷ್ಟು ದೇಹ ಒಡಂಬಡದೇನೋ ಅನ್ನುವ ಅನುಮಾನ.

ಆಯಿತು, ಅವಸರದಲ್ಲಿ ತಿಂಡಿ ತಿಂದು, ಕುದುರೆಯವನ ಬಳಿ ರಾಶಿ ಚೌಕಾಸಿಗಿಳಿದು, ಅಂತೂ ಇಂತೂ ಕುದುರೆಯೇರಲು

ಸಿದ್ಧ ವಾದೆವು. ನಾನು ಕನ್ನಡದಲ್ಲಿ ‘ಜೋಪಾನವಾಗಿ ಕರೆದುಕೊಂಡು ಹೋಗಪ್ಪಾ. ಎಂದೆ ಸಲೀಸಾಗಿ. ಆತ ಹಿಂದಿಯಲ್ಲಿ ‘ಪ್ಯಾರ್ ಸೆ ಲೇಜಾಯೇಂಗೇ ಮಾತಾಜೀ. ಬೈಠಿಯೇ’ ಅಂದ. ನನಗೆ ಆತ ನಗುನಗುತ್ತಾ ಪ್ಯಾರ್ ಸೇ ಎಂದದ್ದಕ್ಕೆ ನಿಜಕ್ಕೂ ಅವನ ಮೇಲೆ ಮಮತೆಯುಂಟಾಯಿತು.

ಅ ಕುದುರೆಯೇ ಕತ್ತೆಯೇ? ನಾನು ನನ್ನ ಯಜಮಾನರಿಬ್ಬರೂ ನಮ್ಮ ನಮ್ಮ ಸುರಕ್ಷತೆಯನ್ನು ನೋಡಿಕೊಂಡದ್ದಷ್ಟೆ. ಈತ ಪ್ರೀತಿಯಿಂದ ಕರೆದುಕೊಂಡು ಹೋಗುತ್ತೇನೆ ಹೆದರಬೇಡಿ ಅನ್ನುತ್ತಾನಲ್ಲ ಎಂದು ಹೃದಯ ಆರ್ದ್ರವಾಯಿತು. ನನ್ನ ಯಜ ಮಾನರು ಕುಳಿತಿದ್ದ ಕುದುರೆ ಮುಂದಕ್ಕೆ ಹೋಗುವುದಿಲ್ಲ ಎಂದು ಹಠ ಹಿಡಿಯಿತು. ಮಧ್ಯ ಎಲ್ಲಾದರೂ ಈ ಕುದುರೆ ಕೈಕೊಟ್ಟರೆ ಎಂಬ ಭಯ ಆವರಿಸಿ, ಬೇರೆ ಕುದುರೆ ತಗೋ ಅಂತ ಹೇಳಿ ಹೇಳೀ ಸಾಕಾಗಿದ್ದಷ್ಟೆ.

ಅವನು ಅದೇ ಕುದುರೆಯನ್ನೇ ಅದರ ಬೆನ್ನು ನೀವಿ, ಗದರಿಸಿ, ನೀರು ಕುಡಿಸಿ ಅಂತೂ ಹೊರಡಿಸಿದ. ಒಂದು ವಿಷಯ ಮರೆತು ಬಿಟ್ಟೆ. ಅದೇ ಕುದುರೆಯ ವಿಷಯ. ಅವು ಕುದುರೆಗಳೋ ಕತ್ತೆಗಳೋ ತಿಳಿಯಲಿಲ್ಲ. ಮುಖ ಕತ್ತೆ ತರಹ, ಮೈ ಕುದುರೆ ತರಹ. ಕೆಲವು ಕತ್ತೆಯಷ್ಟೇ ಚಿಕ್ಕವು, ಇನ್ನೂ ಕೆಲವು ಕುದುರೆಗಿಂತ ಚಿಕ್ಕವು. ನಾನು ನಮ್ಮನೆಯವರಿಗೆ ಹೇಳೀ ಹೇಳೀ ಸಾಕಾದೆ. ‘ನೋಡೀ, ಇವು ಕತ್ತೆಗಳಿರಬೇಕು, ಕುದುರೆಗಳಲ್ಲ’ ಅಂತ. ನನ್ನ ಅನುಮಾನಗಳನ್ನು ನಾನೇ ಹೇಳಿಕೊಳ್ಳುವುದು, ನಾನೇ ಉತ್ತರಿಸಿಕೊಂಡು, ಅಂತೂ ಪ್ರಯಾಣ ಸಾಗಿತು.

ಮೊದಮೊದಲು ಭಯವೆನಿಸಿದರೂ, ನಂತರ ಗಟ್ಟಿಮನಸ್ಸಿನಿಂದ ಕುಳಿತುಕೊಂಡು ಸುತ್ತಲೂ ನೋಡುತ್ತಾ ಸಾಗಿದೆ. ನಾನು ಕುದುರೆಯ ಯಜಮಾನನನ್ನು ಗಮನಿಸಿದೆ. ಪಾಪ! ಚಿಕ್ಕ ಹುಡುಗ ಇಪ್ಪತ್ತೈದರಿಂದ ಇಪ್ಪತ್ತಾರಿರಬಹುದು ಅಷ್ಟೆ. ಜೀವನದ ರಥದ ಚಕ್ರವೇ ಈ ಕುದುರೆಗಳು. ಅದರಲ್ಲೂ ಆತ, ‘ಸುತ್ತಲೂ ನೋಡಿಕೊಂಡು ಬನ್ನಿ ಮಾತಾ ಜೀ, ಕ್ಯಾ ಸೀನ್ ಹೈ!’ ಎನ್ನುತ್ತಾ ನನ್ನನ್ನು ಭಯದಿಂದ ಆಚೆ ತರಲು ಪ್ರಯತ್ನಿಸುತ್ತಾ ಸಾಗುತ್ತಿದ್ದ. ನನಗೆ ಒಮ್ಮೆ ನಗು ಬಂತು.

ಚಿಕ್ಕದೊಂದು ಹುಡುಗಾಟದ ಕಲ್ಪನೆ ಅಷ್ಟೆ. ನನ್ನ ಯಜಮಾನರು ತಕ್ಷಣ ಕುದುರೆ ಯಿಂದಿಳಿದು, ಈ ಹುಡುಗನನ್ನು ಇಲ್ಲೇ ಕೂರಿಸಿ, ಈ ಕುದುರೆಯನ್ನು ಕಂಟ್ರೋಲ್ ಮಾಡಿಕೊಂಡು ನನ್ನನ್ನು ಕುದುರೆಯ ಮೇಲೆ ಯಮುನೋತ್ರಿಯನ್ನು ತಲುಪಿಸ ಬಹುದೇ? ಅದರ ಹಿಂದೆಯೇ ಎರಡು ಕುಂಬಳಕಾಯಿ ಹಾಕಿದರೆ ಆಗುವ ಒಂದು ಹೊಟ್ಟೆ ನೆನಪಾಗಿ ನಗು ಬಂತು. ಕಲ್ಪನೆಗೆ ಬ್ರೇಕ್ ಕೊಟ್ಟೆ.

ಕುದುರೆಗಳು ಮೆಟ್ಟಿಲು ಹತ್ತುತ್ತಿರುವ ಬಗೆಯಂತೂ ನಿಜಕ್ಕೂ ಆಶ್ಚರ್ಯವೆನಿಸಿತು. ಸಲೀಸಾಗಿ ಏರಿಹೋಗುವ ಅವುಗಳ ನಿರ್ಲಿಪ್ತತೆಯೋ, ಅನ್ಯಮನಸ್ಕತೆಯೋ, ಕರ್ತವ್ಯ ನಿರ್ವಹಿಸಲಿಕ್ಕಷ್ಟೇ ನಾವಿದ್ದೇವೆ ಎಂಬ ಮನಸ್ಥಿತಿಯೋ ಅದೇಕೋ ಈ ಕುದುರೆಗಳ ಬಗ್ಗೆ ಕರುಣೆಯುಕ್ಕಿ ಬಂತು. ಕುದುರೆಗಳ ಜತೆಗೇ ತಾವೂ ನಡೆದುಕೊಂಡು ಕುದುರೆ ಗಳನ್ನು ಸಾಂಭಾಳಿಸಿಕೊಂಡು ಸಾಗುವ ಆ ಹುಡುಗರ ನಿಷ್ಠೆಯನ್ನು ಕೇವಲ ಟಿಪ್ಸ್ ನೀಡುವುದರ ಮೂಲಕ ತೂಗಲಾದೀತೇ? ಎಷ್ಟು ಚೌಕಾಸಿ ಮಾಡಿದೆವಲ್ಲ, ಇವರಿಗೆಷ್ಟು ಕೊಟ್ಟರೂ ಕಡಿಮೆಯೇ ಅನಿಸಿತು. ಛೇ! ಇಳಿದು ನಡೆದುಬಿಡೋಣವೇ….. ಅನ್ನು ವವರೆಗೆ ಪಾಪಪ್ರಜ್ಞೆ ಕಾಡಿತು.

ಇನ್ನೂ ಎಷ್ಟು ದೂರ? ಎನ್ನುತ್ತಲೇ ನನ್ನ ಹಾದಿ ಸಾಗಿತು. ನನಗೆ ಕುದುರೆ ಮೇಲೆ ಕುಳಿತುಕೊಂಡ ಹೆದರಿಕೆಗಿಂತ ಅವುಗಳ ಮೇಲಿನ ಭಾರ ಇಳಿಸಿಬಿಡುವ ವ್ಯರ್ಥಪ್ರಯತ್ನ! ಅಂತೂ ಕುದುರೆ ಇಳಿದ ಮೇಲೆ ನಮ್ಮ ಯೋಗ್ಯತೆಗೆ ತಕ್ಕಷ್ಟು ಟಿಪ್ಸ್ ನೀಡಿ, ಅವರ ಮನಸ್ಸನ್ನೂ ಖುಷಿ ಪಡಿಸಿ, ನಮ್ಮ ಹಾದಿ ಹಿಡಿದೆವು. ‘ಕಾಯುತ್ತೇವೆ. ವಾಪಸು ಕುದುರೆಯ ಮೇಲೇ ಬರುವಿರಾ?’ ಎಂಬ ಅವರ ಪ್ರಶ್ನೆಗೆ ‘ನಾನಂತೂ ನಡೆದೇ ಇಳಿಯುತ್ತೇನೆ’ ಎಂದೆ.

ಅ ಕಣ್ತುಂಬಿದ ಎರಡು ಹನಿಯಮುನೋತ್ರಿ ತಲುಪಿದೆವು. ಸೂರ್ಯಕುಂಡದಲ್ಲಿ ನೀರಿನ ಪ್ರೋಕ್ಷಣೆ, ಪೂಜೆಗಳನ್ನು ಮುಗಿಸಿ ಕೊಂಡು, ಯಮುನಾ ದೇವಿಯ ದರ್ಶನ ಮಾಡಿಕೊಂಡು, ನದಿಯ ಬಳಿಗೆ ಬಂದೆವು. ಧುಮ್ಮಿಕ್ಕುತ್ತಾ ಹರಿಯುತ್ತಿರುವ ಯಮುನೆ ಯಲ್ಲಿ ಜನ ಮೀಯುತ್ತಿದ್ದಾರೆ. ನಮ್ಮ ಜತೆ ಬಂದವರೂ ಕೆಲವರು ಮಿಂದರು. ಯಮುನೋತ್ರಿಯ ಪರ್ವತಸಾಲನ್ನು ನಿಂತು ನೋಡಿದೆ. ಯಮುನೆಗೆ ಕಿರೀಟಪ್ರಾಯವಾಗಿ ತುದಿಯಲ್ಲೊಂದು ಬೆಳ್ಳಿಯ ಹಿಮದ ತುಣುಕು ಹೊದ್ದ ಬೆಟ್ಟ  ತ್ರಿಕೋನಾಕಾರದಲ್ಲಿ ಶೋಭಿಸುತ್ತಿತ್ತು. ಸುಮಾರು ಹೊತ್ತು ಅದನ್ನೇ ಕಣ್ತುಂಬಿಕೊಂಡೆ.

ಮನಸ್ಸಿಗೆ ಬಹಳ ಹಿತವೆನಿಸಿ, ಎರಡು ಹನಿ ಕಣ್ತುಂಬಿಕೊಂಡವು. ಬರುವಾಗ, ಉದ್ದಕ್ಕೂ ಕಣ್ತುಂಬಿಕೊಂಡ ರುದ್ರರಮಣೀಯ ದೃಶ್ಯಗಳು ಮನದಲ್ಲಿ ಮನೆ ಮಾಡಿದ್ದವು. ಹೇಗಿದ್ದರೂ ನಡೆದುಕೊಂಡು ಹೋಗುತ್ತೇವಲ್ಲಾ, ನಿಂತು ನೋಡಿಕೊಂಡು ಹೋಗೋಣ ಎಂದು ತೀರ್ಮಾನಿಸಿ ನಡಿಗೆಯನ್ನು ಪ್ರಾರಂಭಿಸಿದೆವು. ಮಧ್ಯೆ ಮಧ್ಯೆ ಚಹಾ ಸೇವನೆ ನಡೆಯುತ್ತಲೇ ಇದ್ದವು. ಎಷ್ಟು ನೋಡಿದರೂ ಸಾಲದೆನಿಸುವ, ನಿಜವಾಗಿಯೂ ಯಮುನೋತ್ರಿಗೆ ಬಂದಿದ್ದೇನೆಯೇ ಎಂಬ ಭಾವ. ಮತ್ತೆ ಮತ್ತೆ ಅಲ್ಲಲ್ಲಿ ನಿಂತು ನೋಡುತ್ತಾ ಸಾಗುವಾಗ ಹಿಮಾಲಯದ ಮುಂದೆ ಸಣ್ಣ ಮಣ್ಣಿನ ಕಣವೂ ಅಲ್ಲದ ನಮ್ಮ ಅಹಂಗೆ ಸವಾಲೆಸೆಯುವ ಬೆಟ್ಟದ ಸಾಲು, ಕಣಿವೆಗಳು,ಝರಿಗಳು, ತುಂಬಿ ಹರಿಯುತ್ತಿರುವ ಯಮುನೆ…..ಏನಿದು ಅದ್ಭುತ ಲೋಕ? ಇದು ನಿಜಕ್ಕೂ ಇದೆಯೇ? ಅನಿಸತೊಡಗಿ ಈ ನದಿಗಳ ಮೂಲವನ್ನು ಹುಡುಕಿ ಹೊರಟ ಮಹಾನುಭಾವನಿಗೆ ಮನಸ್ಸು ನಮಿಸಿತು.

ಒಮ್ಮೆ ರೌದ್ರವೆನ್ನಿಸುವ ಪ್ರಕೃತಿ, ಮತ್ತೊಂದು ಕ್ಷಣದಲ್ಲಿ ಸೌಮ್ಯವಾಗಿ ನಮ್ಮನ್ನು ಆಲಿಂಗಿಸುವ ಮಾತೆಯಂತೆ ತೋರುವ ಈ ಪರ್ವತಸಾಲುಗಳು ನನಗೆ ನಿಜಕ್ಕೂ ಅಮ್ಮನಂತೆಯೇ ಭಾಸವಾದವು. ದಾರಿ ನಿರ್ಜನವಾಗಿತ್ತು, ಸ್ವಲ್ಪ ದೂರ ಸಾಗಿದ್ದೆವಷ್ಟೆ. ‘ಮಾತಾಜೀ..ಮಾತಾಜೀ.. ಎಂದು ನಗುತ್ತಾ ಕೂಗುತ್ತಿರುವ ಮನುಷ್ಯ ಎದುರಿಗೆ ಕಂಡು ಬಂದ. ಅವರು ನಮ್ಮನ್ನು ಯಮುನೋ ತ್ರಿಗೆ ಕರೆತಂದವರು. ಮತ್ತಿಬ್ಬರನ್ನು ಕೂರಿಸಿಕೊಂಡು ಈಗ ಮತ್ತೆ ಬರುತ್ತಿದ್ದರು. ಮಾತಾಡಿಸಿ ಕೈಬೀಸಿ ಹೋದರು. ಸಾಲದ್ದಕ್ಕೆ ತಿರುಗಿ ತಿರುಗಿ ನೋಡುತ್ತಾ ಹೋದರು. ಇದಂತೂ ನನಗೆ ಬಹಳ ಆಪ್ತವೆನಿಸಿತು.

ಮನೆಯಿಂದ ಯಾರಾದರೂ ಹೊರಟರೆ ನಾವೆಲ್ಲ ಹೊರಗೆ ಬಂದು ಅವರು ಕಣ್ಮರೆಯಾಗುವವರೆಗೂ ನೋಡುತ್ತಾ ನಿಲ್ಲುವುದು, ಹೊರಟವರೊಮ್ಮೆ ತಿರುಗಿನೋಡಲೆಂಬ ಅಭಿಲಾಷೆಯಿಂದ ಕಾಯುವುದು ಸಹಜ. ಆದರೆ ಇವರು? ಅವರು ನಕ್ಕ ನಗೆ ಅದೆಷ್ಟು ಆಪ್ತವಾಗಿತ್ತೆಂದರೆ, ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ. ಪ್ರೀತಿ ವಾತ್ಸಲ್ಯ ಎಲ್ಲೆಲ್ಲಿಯೂ ಸಿಗಬಹುದು, ನಮ್ಮ ಹೃದಯಕ್ಕೆ ಅದು ವೇದ್ಯವಾಗುವಷ್ಟು ನಾವೂ ಪ್ರೀತಿ ತುಂಬಿಕೊಂಡಿರಬೇಕು. ಯಮುನೋತ್ರಿಯು ಆಹ್ಲಾದಮಯ ಅನುಭವ ನೀಡಿದ್ದಲ್ಲದೆ, ಕಷ್ಟದಲ್ಲಿಯೂ ಸುಖವನ್ನು ಮೊಗೆದು ಕುಡಿವ ಜನರ ದರ್ಶನವಾದಂತಾಯಿತು.

ನಾಳೆಗೆ ಗಂಗೋತ್ರಿಗೆ ಹೋಗುತ್ತೇವೆ. ಅದರ ಅನುಭವ ಹೇಗೋ ನೋಡಬೇಕು. ಉಲ್ಲಾಸದಾಯಕವಾದ ಯಮುನೋತ್ರಿ ಯಾತ್ರೆಯಲ್ಲಿ ಒಂದು ಲೋಪವಾಯಿತು. ವಾಪಸ್ಸು ಜಾನಕಿ ಚೆಟ್ಟಿಗೆ ಬಂದಾಗಿತ್ತು. ಆದರೆ ನಮ್ಮ ಹೋಟೆಲನ್ನು ಬಿಟ್ಟು ಎರಡು ಕಿ.ಮೀ. ದೂರ ನಡೆದಿದ್ದೆವು. ಹಸಿವಿಗೂ, ವಿನಾಕಾರಣ ನಡೆಸಿದ್ದಕ್ಕೂ, ನಮ್ಮನೆಯವರಿಗೆ ಒಂದು ‘ಪೂಜೆ’ಯಂತೂ ಆಯಿತು.