Friday, 13th December 2024

ಕುದುರೆಗೊಂದು ಸ್ಮಾರಕ

ಮಂಜುನಾಥ್ ಡಿ.ಎಸ್‌

ತನ್ನ ಒಡೆಯನ ಪ್ರಾಣ ರಕ್ಷಿಸಿದ ಚೇತಕ್ ಎಂಬ ಕುದುರೆಗೆ ಗೌರವ ಸಲ್ಲಿಸುವ, ಅಪರೂಪದ ತಾಣ ಇದು.

ವಾಡ ಪ್ರಾಂತ್ಯ ಅನೇಕ ದಕ್ಷ ರಾಜರುಗಳನ್ನು ಕಂಡಿದೆ. ಇವರಲ್ಲಿ  ಅಗ್ರಸ್ಥಾನದಲ್ಲಿರುವುದು ಮೇವಾಡದ ೧೩ನೆಯ ಅರಸ ಮಹಾರಾಣಾ ಪ್ರತಾಪ್ ಸಿಂಗ್.
ಚಿತ್ತೋರ್‌ಗಡವನ್ನು ಅಕ್ಬರನಿಂದ ಗೆದ್ದೇ ಗೆಲ್ಲುತ್ತೇನೆಂದು ಪ್ರತಿಜ್ಞೆಗೈದ ದೇಶಪ್ರೇಮಿ ಹಾಗು ಶತ್ರುವಿಗೆ ಶರಣಾಗದ ಸ್ವಾಭಿಮಾನಿ ಪ್ರತಾಪ್. ಅಕ್ಬರನಿಗೆ ಸೆಡ್ಡು ಹೊಡೆದು ತನ್ನ ರಾಜ್ಯದ ರಕ್ಷಣೆಗಾಗಿ ಪಣತೊಟ್ಟು ದಿಟ್ಟತನದಿಂದ ಹೋರಾಡಿ ಚರಿತ್ರೆಯ ಪುಟಗಳಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯಾಗಿಸಿದ ಅಪ್ರತಿಮ ಶೂರ ಮಹಾರಾಣಾ ಪ್ರತಾಪ್.

ಇಂತಹ ಕೆಚ್ಚೆದೆಯ ಧೀರನ ನಿಷ್ಠಾವಂತ ಸಂಗಾತಿಯಾಗಿದ್ದದ್ದು ಚೇತಕ್ ಹೆಸರಿನ ಮೇವಾಡದ ಕುದುರೆ. ಹಳದಿಘಾಟಿ ಯುದ್ಧದಲ್ಲಿ ಮಾರಣಾಂತಿಕವಾಗಿ ಗಾಯ ಗೊಂಡರೂ ಪ್ರತಾಪರ ಜೀವವನ್ನು ರಕ್ಷಿಸಿ ಸ್ವಾಮಿಭಕ್ತಿ ಮೆರೆದ ಜೀವಿ ಈ ಚೇತಕ್. ೧೫೭೬ರ ಜೂನ್ ೧೮ರಂದು ಹಳದಿಘಾಟಿಯಲ್ಲಿ ಮಾನ್ ಸಿಂಗ್ ನೇತೃತ್ವದ ಮೊಗಲ ಸಾಮ್ರಾಟ ಅಕ್ಬರ್ ಸೇನೆ ಹಾಗು ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಸೇನೆಗಳ ನಡುವೆ ಸಮರ ಸಂಭವಿಸಿತು. ಮೊಗಲರ ಬಹು ದೊಡ್ಡ ಸೈನ್ಯಪಡೆ ಮುನ್ನುಗ್ಗಿ ಬಂದಿತ್ತು. ಆನೆಯ ಮುಖವಾಡ ಧರಿಸಿದ್ದ ಚೇತಕ್ ತನ್ನ ಮುಂಗಾಲುಗಳನ್ನೆತ್ತಿ ವೈರಿ ಮಾನ್ ಸಿಂಗ್‌ನನ್ನು ಹೊತ್ತಿದ್ದ ಆನೆಯ ನೆತ್ತಿಯ ಮೇಲೆ ಬಲವಾಗಿ ಗುದ್ದಿತು. ಮುಂಗಾಲುಗಳನ್ನು ಕೆಳಗಿಳಿಸುವಷ್ಟರಲ್ಲಿ ಆ ಆನೆ ಮುನ್ನುಗ್ಗಿತು. ಅದರ ದಂತಗಳಿಗೆ ಕಟ್ಟಿದ್ದ ಖಡ್ಗ ಕುದುರೆಯ ಹಿಂಗಾಲನ್ನು ಸೀಳಿತು.

ಎಲುಬು ಮುರಿದ ಯಮಯಾತನೆಯ ನಡುವೆಯೂ ತನ್ನ ಬೆನ್ನಮೇಲಿದ್ದ ಒಡೆಯನನ್ನು ರಕ್ಷಿಸಬೇಕೆಂಬ ಕರ್ತವ್ಯಪ್ರಜ್ಞೆ ಜಾಗೃತವಾಯಿತು. ಚೇತಕ್ ಹಿಂತಿರುಗಿ ಓಡಲಾರಂಭಿಸಿತು. ಹಾದಿಯಲ್ಲಿ ಸುಮಾರು ೨೧ ಅಡಿ ಅಗಲದ ಡೊಡ್ಡ ಹಳ್ಳ ಇದಿರಾಯಿತು. ತನ್ನಲ್ಲಿದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಹೊಳೆಯನ್ನು ಹಾರಿದ ತುರಗ ಆಚೆಯ ದಡದ ಮೇಲೆ ಮುಗ್ಗರಿಸಿ ಬಿದ್ದಿತು. ಅದರ ರಕ್ತ ಸೋರಿ ಹೋಗಿತ್ತು. ದೇಹ ಕ್ಷೀಣಿಸುತ್ತಿತ್ತು. ಮಹಾರಾಣ ನೆಲದ ಮೇಲೆ ಕುಳಿತು ತನ್ನ ತೊಡೆಯ ಮೇಲೆ ಚೇತಕ್‌ನ ತಲೆಯನ್ನಿರಿಸಿಕೊಂಡು ನೇವರಿಸಿದ. ಅವನ ಕಣ್ಣುಗಳಿಂದ ಕಂಬನಿಯ ಧಾರೆ ಹರಿಯುತ್ತಿತ್ತು. ತನ್ನ ಸ್ವಾಮಿ ಯನ್ನು ರಕ್ಷಿಸಿದ ಕೃತಾರ್ಥ ಭಾವದಿಂದ ಚೇತಕ್ ಕಣ್ಮುಚ್ಚಿತು.

ಅ ಕಂಚಿನ ಪ್ರತಿಮೆ
ಮೇವಾರದ ಚರಿತ್ರೆಯಲ್ಲಿ ಪ್ರತಾಪ್ ಸಿಂಗ್ ಹಾಗು ಅವನ ನೆಚ್ಚಿನ ತುರಗ ಚೇತಕ್ ನಡುವಿನ ಅವಿನಾಭಾವ ಬಂಧ ಅಮರವಾಗಿದೆ. ಈ ಪರಾಕ್ರಮೀ ಜೋಡಿಯ ಗೌರವಾರ್ಥ ಮೋತಿ ಮಗರಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಮಹಾರಾಣಾ ಭಗವತ್ ಸಿಂಗ್ ೧೯೪೮ರಲ್ಲಿ ಇದನ್ನು ಸ್ಥಾಪಿಸಿದರು. ಕಾರಂಜಿಗಳಿಂದ ಕೂಡಿದ ಕೊಳದ ನಡುವಿನ ಪೀಠದ ಮೇಲೆ ಅಶ್ವಾರೂಢ ಪ್ರತಾಪರ ಪುತ್ತಳಿಯಿದೆ. ಹನ್ನೊಂದು ಅಡಿ ಎತ್ತರದ ಈ ಕಂಚಿನ ಪ್ರತಿಮೆಯ ತೂಕ ಸುಮಾರು ಏಳು ಟನ್‌ಗಳಂತೆ. ಉಡುಗೆ, ತೊಡುಗೆ, ಭಾವ, ಇತ್ಯಾದಿ ಸೂಕ್ಷ್ಮ ವಿವರಗಳನ್ನು ಶಿಲ್ಪಿ ಈ ಮೂರ್ತಿಯಲ್ಲಿ ಕಲಾತ್ಮಕವಾಗಿ ಮೂಡಿಸಿದ್ದಾರೆ.

ಪೀಠದ ಮುಂಭಾಗದಲ್ಲಿ ಮೇವಾಡದ ಲಾಂಛನವಿದೆ. ಒಂದು ಬದಿಯಲ್ಲಿ ಹಳದಿಘಾಟಿ ಕದನದ ಉಬ್ಬುಶಿಲ್ಪ ಹಾಗು ಮತ್ತೊಂದು ಪಾರ್ಶ್ವದಲ್ಲಿ ಚೇತಕ್‌ನ ಮರಣ ಕ್ಷಣದ ಚಿತ್ರಣ ಇವೆ. ಹಿಂಬದಿಯಲ್ಲಿ ರಾಣಾ ಪ್ರತಾಪರ ಜೀವನದ ನಾಲ್ಕು ಪ್ರಮುಖ ಘಟ್ಟಗಳ ದಿನಾಂಕಗಳನ್ನು ನಮೂದಿಸಲಾಗಿದೆ. ಇವುಗಳು ಕ್ರಮವಾಗಿ ಜನನ, ಪಟ್ಟಾಭಿಷೇಕ, ಹಳದಿಘಾಟಿ ಕದನ, ಹಾಗು ಮರಣ ದಿನಾಂಕಗಳಾಗಿವೆ. ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರು ರಣಭೂಮಿಯಲ್ಲಿ ಪ್ರತಾಪ ಪ್ರದರ್ಶಿಸಿದ ಪರಾಕ್ರಮಿ ಜೋಡಿಗೆ ಭಾವಪೂರ್ಣ ಪ್ರಣಾಮಗಳನ್ನು ಸಲ್ಲಿಸುತ್ತಾರೆ.

ಮೋತಿ ಮಗರಿಯಿಂದ ಸುತ್ತಲಿನ ಅರಾವಳಿ ಪರ್ವತಗಳು, ಉದಯಪುರ ನಗರ, ಮತ್ತು ಫತೇಸಾಗರ್ ಸರೋವರದ ಸುಂದರ ದೃಶ್ಯಗಳನ್ನು ಕಾಣಬಹುದು. ಈ ಸ್ಮಾರಕದ ಸನಿಹದಲ್ಲಿರುವ ಚಿಕ್ಕ ಸಂಗ್ರಹಾಲಯದಲ್ಲಿ ಕುಂಭಲ್‌ಗಡ್ ಹಾಗು ಚಿತ್ತೋರ್‌ಗಡ್ ಚರಿತ್ರೆ ಮತ್ತು ಹಳದಿಘಾಟಿ ಸಮರಕ್ಕೆ ಸಂಬಂಧಿಸಿದ ವರ್ಣಚಿತ್ರ ಗಳನ್ನು ಪ್ರದರ್ಶಿಸಲಾಗಿದೆ. ಜಪಾನೀ ಶಿಲ್ಪ ಉದ್ಯಾನವೂ ಇಲ್ಲಿದೆ. ಸಂಜೆಯ ಸಮಯದಲ್ಲಿ ಲೈಟ್ ಅಂಡ್ ಸೌಂಡ್ ಕಾರ್ಯಕ್ರಮವಿರುತ್ತದೆ.

ಮೋತಿ ಮಗರಿ ಹೆಸರೇಕೆ ಬಂತು?
ಸುಮಾರು ಐದು ಶತಮಾನಗಳ ಹಿಂದೆ ಈ ಪ್ರದೇಶ ಅರಣ್ಯಗಳಿಂದ ಕೂಡಿತ್ತು. ರಾಣಾ ಉದಯ್ ಸಿಂಗ್ ಬೇಟೆಯಾಡಲು ಅರಣ್ಯಕ್ಕೆ ಬರುತ್ತಿದ್ದರು. ಸುತ್ತಲೂ
ಅರಾವಳಿ ಪರ್ವತಶ್ರೇಣಿ ಹಾಗು ನಡುವೆ ವಿಶಾಲವಾದ ಭೂಮಿ ಇರುವುದನ್ನು ಗಮನಿಸಿದರು. ಈ ಸ್ಥಳದಲ್ಲಿ ನಗರವೊಂದನ್ನು ನಿರ್ಮಿಸಲು ನಿಶ್ಚಯಿಸಿದರು.
ನಿರ್ಮಾಣಪೂರ್ವದಲ್ಲಿ ಸಾಧು ಸಂತರಿಂದ ಹವನ ಹೋಮಗಳನ್ನು ನೆರವೇರಿಸಿದರು. ಅವರಿಗೆ ಮುತ್ತುಗಳನ್ನು ಉಡುಗೊರೆಯಾಗಿ ನೀಡಿದರು. ಹಾಗಾಗಿ ಈ ಬೆಟ್ಟಕ್ಕೆ ಮೋತಿ ಮಗರಿ ಎಂಬ ಹೆಸರು.