Friday, 13th December 2024

ಕನ್ಯಾಕುಮಾರಿಯಲ್ಲಿ ಸೂರ್ಯೋದಯ

ಅಕ್ಷಯ್ ಕುಮಾರ್ ಪಲ್ಲಮಜಲು

ಕನ್ಯಾಕುಮಾರಿ ಯಾತ್ರೆಯನ್ನು ಕೈಗೊಳ್ಳಲು ಒಂದು ವಾರದಿಂದಲೇ ನಮ್ಮ ತಯಾರಿ ನಡೆದಿತ್ತು. ಪ್ರಾಂಶುಪಾಲರ ನಿರ್ದೇಶನ ದಂತೆ ಎಲ್ಲವನ್ನು ತಯಾರು ಮಾಡಿಕೊಂಡು ಮಂಗಳೂರು ರೈಲು ನಿಲ್ದಾಣಕ್ಕೆ ಬಂದು ತಲುಪಿ, ರೈಲೇರಿ ಹೊರಟಾಗ ಕನ್ಯಾ ಕುಮಾರಿಯದ್ದೇ ಕನಸು. ಸಂಜೆ ಹೊತ್ತಿಗೆ ಕನ್ಯಾಕುಮಾರಿಗೆ ತಲುಪಿದ್ದೆವು. ಮೊದಲು ಅಲ್ಲಿಯೇ ಇರುವ ಒಂದು ದೇವಾಲಯ ದರ್ಶನ ಮಾಡಿಕೊಂಡು ರೂಮ್‌ಗೆ ಬಂದೆವು. ಕನ್ಯಾಕುಮಾರಿಯಲ್ಲಿ ಪ್ರಮುಖವಾಗಿ ನೋಡಬೇಕಾದದ್ದು ಸೂರ್ಯೋದಯ.
ಮೂರು ಸಮುದ್ರಗಳು ಕೂಡಿಕೊಳ್ಳುವ ಆ ಅಪರೂಪದ ಸ್ಥಳದಲ್ಲಿ ಸೂರ್ಯೋದಯವನ್ನು ನೋಡಬೇಕೆಂದು, ಮರುದಿನ ಬೆಳಿಗ್ಗೆ 5.30ಕ್ಕೆ ಎಲ್ಲರೂ ಎದ್ದೆವು.

ಸಮುದ್ರ ತೀರಕ್ಕೆ ಹೋದಾಗ ನಮ್ಮನ್ನು ಸ್ವಾಗತಿಸಿದ್ದು ಒಂದು ಅದ್ಭುತ ದೃಶ್ಯ! ಮೂಡಣ ದಿಗಂತದ ಅಂಚಿನಿಂದ ಸೂರ್ಯನು ನಿಧಾನವಾಗಿ, ತನ್ನ ಕಿರಣ ಗಳನ್ನು ಬೀರುತ್ತಾ ಮೇಲಕ್ಕೆ ಬಂದಂತೆ, ಸುತ್ತಲಿನ ಜಗದಲ್ಲಿ ಅದೇನೋ ಅಪೂರ್ವ ಸಂಚಲನ. ಹೊಂಬಣ್ಣದ ಕಿರಣವು ನೀಲಾಗಸವನ್ನು ಬೆಳಗುತ್ತಾ, ಅಲ್ಲಲ್ಲಿ ಹರಡಿದ್ದ ತೆಳು ಮೋಡದೊಡನೆ ಲಾಸ್ಯವಾಡುತ್ತಾ, ಆಗಸದಲ್ಲಿ ಅಕ್ಷರಶಃ ಒಂದು ಬಣ್ಣದ ಚಿತ್ತಾರವನ್ನೇ ಮೂಡಿಸಿತ್ತು.

ಸಮುದ್ರದ ಅಲೆಗಳ ಗಾನದ ಹಿಮ್ಮೇಳದಲ್ಲಿ, ಆಗಸದ ಆ ಅದ್ಭುತ ದೃಶ್ಯಕಾವ್ಯ ವನ್ನು ಕಣ್ತುಂಬಿಕೊಂಡೆವು. ನನ್ನ ಸಹಪಾಠಿಗಳಲ್ಲಿ ಕೆಲವರು ಮಂತ್ರಮುಗ್ಧ ರಾದರು; ಅವರಲ್ಲಿ ಹುದುಗಿದ್ದ ಕವಿತ್ವ ಹೊರಬಂದು, ಆಶುಕವಿಗಳಾಗಿ, ಅಲ್ಲೇ ಕವನ ಹೊಸದರು! ನಮ್ಮೆಲ್ಲರಲ್ಲೂ ಅಂತಹ ಸ್ಫೂರ್ತಿ ತುಂಬಿತ್ತು ಕನ್ಯಾಕುಮಾರಿಯ ಆ ಸೂರ್ಯೋದಯ!

ಸಮುದ್ರದ ಮಧ್ಯೆೆ ಅಪೂರ್ವ ಅನುಭವ
133 ಅಡಿ ಎತ್ತರದ ಕವಿ ತಿರುವಳ್ಳುರ್ ಪ್ರತಿಮೆ ಮತ್ತು ವಿವೇಕಾನಂದ ರಾಕ್ ಮೆಮೋರಿಯಲ್ ಇರುವ ಸ್ಥಳಕ್ಕೆ ಹೋಗಲು ದೋಣಿ ಯಾನ ಮಾಡಬೇಕು. ಬೋಟಿನ ಬಳಿ ತಲುಪಿ ಎಲ್ಲರೂ ಸುರಕ್ಷಿತವಾಗಿ ಎಂಬ ನಮ್ಮ ಉಪನ್ಯಾಸಕರ ಕಾಳಜಿಯ ಕೂಗು. ಕೆಲವೇ
ನಿಮಿಷಗಳ ದೋಣಿಯಾನ ಮಾಡಿ, ಆ ಶಿಲಾ ದ್ವೀಪದಲ್ಲಿರುವ ಕವಿ ಪ್ರತಿಮೆ ಕಂಡೆವು.

ವಿಶೇಷವೆಂದರೆ ಒಟ್ಟು 133 ಅಡಿ ಎತ್ತರವಿರುವ ಆ ಶಿಲಾಪ್ರತಿಮೆಯು ಲೋಕಾರ್ಪಣೆಗೊಂಡದ್ದು 1.1.2000ದಂದು! ಸ್ವಾಮಿ ವಿವೇಕಾನಂದರು ಜ್ಞಾನೋದಯ ಪಡೆದದ್ದೂ ಇದೇ ಕಲ್ಲಿನ ಮೇಲೆ. ಅಲ್ಲೊಂದು ಧ್ಯಾನ ಮಂದಿರವೂ ಇದೆ. ಕೊನೆಗೂ ನಾವು ಕಂಡ ಕನಸು ನನಸಾಗಿ, ಅದ್ಭುತ ಅನುಭವ ದೊರಕಿತು. ಸಮುದ್ರದ ಮಧ್ಯೆ ಆ ದೇವಾಲಯ, ನೀಲಿ ಅಲೆಗಳು ಪ್ರಶಾಂತವಾದ ಗಾಳಿ, ಸೂರ್ಯನ ಬೆಳಕು, ಸುಂದರ ಪ್ರಕೃತಿ! ಎಂತಹ ಆನಂದ!

ನಮ್ಮ ದೇಶದಲ್ಲಿ ಇಂತಹ ಅಪರೂಪದ ತಾಣ ಇರುವುದೇ ನಮ್ಮ ಅದೃಷ್ಟ, ಅದನ್ನು ಕಾಣ್ಮನ ತುಂಬಿಕೊಳ್ಳುವುದು ನಮ್ಮ ಪುಣ್ಯ. ಅಲ್ಲಿನ ವಿವೇಕಾನಂದರ ವಿಗ್ರಹ, ಮಾತುಗಳ ಫಲಕವನ್ನು ನೋಡಿ ಕಣ್‌ತುಂಬಿಕೊಂಡೆವು. ಸಂಜೆಯವರೆಗೆ ಅಲ್ಲಿಯೇ ಇದ್ದು ಕೆಲವೊಂದನ್ನು ವಸ್ತುಗಳನ್ನು ಖರೀದಿಸಲು ಮುಂದಾದೆವು.

ಸಮುದ್ರದಲ್ಲಿ ಸಿಗುವ ಕವಡೆ, ಶಂಖ ಮೊದಲಾದ ವಸ್ತುಗಳು ಅತಿ ಕಡಿಮೆ ಬೆಲೆಯಲ್ಲಿ ಅಲ್ಲಿ ಮಾರಾಟಕ್ಕಿದ್ದವು. ನಾನು ಒಂದು ಶಂಖವನ್ನು ತೆಗೆದುಕೊಂಡೆ. ಅಲ್ಲಿಂದ ಅದೇ ರಾತ್ರಿ ರೈಲು ಹತ್ತಿಕೊಂಡು ತಿರುವನಂತಪುರಕ್ಕೆ ಪಯಣಿಸಿದೆವು. ಮರುದಿನ ತಿರುವ ನಂತಪುರ ಅನಂತಪದ್ಮನಾಭ ದೇವಾಲಯಕ್ಕೆೆ ಭೇಟಿ ನೀಡಿ, ಅಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿ, ಮತ್ತೆ ನಮ್ಮ ಊರಿನ ರೈಲು ಹತ್ತಿದೆವು.

ರೈಲಿನಲ್ಲಿ ಬಿದ್ದ ಕನಸಿನಲ್ಲಿ ಕನ್ಯಾಕುಮಾರಿಯ ಸಮುದ್ರದ ಅಲೆಗಳ ಹೊಡೆತ, ಅಲ್ಲಿಂದ ಕಂಡ ಸೂರ್ಯೋದಯ ಅಲೆ ಅಲೆಯಾಗಿ ಮೂಡಿಬಂದು ಮಧುರ ಅನುಭವ ನೀಡಿತು.