Saturday, 14th December 2024

ಯುದ್ದ ಸ್ಮಾರಕಕ್ಕೆ ಚಾರಣ

ಸುಮಾ ಜಿ. ಕೃಷ್ಣ

ಸಾವಿರ ಮೆಟ್ಟಿಲುಗಳ ಈ ಯುದ್ಧ ಸ್ಮಾರಕವು ಚಾರಣಕ್ಕೂ ಒದಗಿ ಬರುತ್ತದೆ, ನಿಸರ್ಗ ಪ್ರಿಯರಿಗೂ ಇಷ್ಟವಾಗುತ್ತದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕೋಕಡ ಟ್ರಾಕ್ ಮೆಮೋರಿಯಲ್  ಒಂದು ಆಸಕ್ತಿ ಹುಟ್ಟಿಸುವ ತಾಣ. ಇಲ್ಲಿರುವ ಸಾವಿರ ಮೆಟ್ಟಿಲುಗಳು ನಿಸರ್ಗ ಪ್ರಿಯರಿಗೆ, ಚಾರಣ ಪ್ರಿಯರಿಗೆ, ಫಿಟ್ನೆಸ್ ಕಾಯ್ದು ಕೊಳ್ಳಲು ಬಯಸುವವರಿಗೆ ಹೇಳಿ ಮಾಡಿಸಿದ್ದು.

ಸುತ್ತಲೂ ಕಾಣುವ ಎತ್ತರದ ಫರ್ನ್ ಮರಗಳು. ತಂಪಾದ ಗಾಳಿ ಡ್ಯಾಂಡೆನಾಂಗ್ ಪರ್ವತ ಶ್ರೇಣಿಯ ಸೊಗಸಾದ ವಾತಾವರಣ. ನೋಡಿದಷ್ಟೂ ಸುಂದರವಾಗಿ ಕಾಣುವ ಪ್ರಕೃತಿ ಸೌಂದರ್ಯ. ಸಾವಿರ ಮೆಟ್ಟಿಲುಗಳ ಟ್ರಾಕ್ ಎರಡನೇ ಮಹಾಯುದ್ಧದಲ್ಲಿ ಜೀವ ತೆತ್ತ ಸೈನಿಕರ ನೆನಪಿನಲ್ಲಿ ಮಾಡಿರುವ ಸ್ಮಾರಕ. ಪಾಪುವಾ ನ್ಯೂಗಿನಿಯ ದಟ್ಟ ಕಾಡು ಪ್ರದೇಶದಲ್ಲಿ ಆಸ್ಟ್ರೇಲಿಯನ್ ಸೈನಿಕರು ನಡೆಸಿದ ಹೋರಾಟವನ್ನು ಈಗಿನ ತಲೆಮಾರಿಗೆ ನೆನಪಿಸಲೆಂದೇ ಈ ಸ್ಮಾರಕವನ್ನು 1996ರಲ್ಲಿ ಸ್ಥಾಪಿಸಲಾಯಿತು.

ಜಪಾನಿನ ವಿರುದ್ಧ ಅಂದು ನಡೆದ ಯುದ್ಧದಲ್ಲಿ ಸುಮಾರು 625 ಸೈನಿಕರು ಸಾವಿಗೀಡಾ ಗಿದ್ದರು, 5000ಕ್ಕೂ ಹೆಚ್ಚಿನ ಸೈನಿಕರು ಗಾಯಗೊಂಡಿದ್ದರು ಮತ್ತು ಘಾಸಿಗೆ ಒಳಗಾಗಿದ್ದರು. ನಾವು ಸಾಗುವ ದಾರಿಯಲ್ಲಿ ಸಿಗುವ 13 ಫಲಕಗಳಲ್ಲಿ, ಆ ಹೋರಾಟದ ವಿವರ ಕಾಣಬಹುದು. ಆಸ್ಟ್ರೇಲಿಯಾದ ಸೈನಿಕರ ಜತೆಯಲ್ಲೇ, ಪಾಪುವಾ ನ್ಯೂ ಗಿನಿಯ ಸ್ಥಳೀಯ ಬುಡಕಟ್ಟು ಜನರು ಸಹ ಜಪಾನಿನ ಸೈನ್ಯದ ವಿರುದ್ಧ ಹೋರಾಡಿದ್ದರು. ಅಂತಹವರ ಶಿಲ್ಪಗಳನ್ನು ನಿರ್ಮಿಸಿ, ಪ್ರದರ್ಶಿಸಲಾಗಿದೆ.

Just Read This

ಕೆಎಸ್‌ಬಿಎಲ್: ಅಕ್ರಮ ಹಣ ವರ್ಗಾವಣೆ, 110 ಕೋಟಿ ರೂ. ಮೌಲ್ಯದ ಸ್ಥಿರ, ಚರ ಆಸ್ತಿ ಜಪ್ತಿ

http://vishwavani.news/ksbl/

ಆಸ್ಟ್ರೇಲಿಯಾದಿಂದ ಸಾಕಷ್ಟು ದೂರದ ದ್ವೀಪ ಪ್ರದೇಶದಲ್ಲಿ ನಡೆದ ಈ ಯುದ್ಧವನ್ನು ನೆನಪಿಸಿಕೊಳ್ಳಲು, ಮೆಲ್ಬೋರ್ನ್ ಹತ್ತಿರ ಸ್ಮಾರಕ ನಿರ್ಮಿಸಿರುವುದು ವಿಶೇಷ ಎನಿಸುತ್ತದೆ. ಪ್ರತಿಯೊಂದು ಫಲಕದಲ್ಲೂ ಆಯಾ ಯುದ್ಧದ ಸಂಕ್ಷಿಪ್ತ ಮಾಹಿತಿ, ಯುದ್ಧದ
ಸ್ಥಳದ ನಕ್ಷೆಗಳನ್ನು ಕಾಣಬಹುದು. ಸೈನಿಕರ ತ್ಯಾಗ ಮತ್ತು ಬಲಿದಾನದ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಇದು. ಸಾವಿರ ಮೆಟ್ಟಿಲು ಹತ್ತಿ ಶಿಖರ ತಲುಪಿ ನೋಡಿದಷ್ಟೂ ಕಾಣುವ ಮರಗಿಡಗಳು.

ಮುಖ್ಯವಾಗಿ ಮೇಪಲ್ ಮರಗಳು, ಅದರ ಎಲೆಗಳು ಹಸಿರು ಬಣ್ಣದಿಂದ ಕ್ರಮೇಣವಾಗಿ ಹಳದಿ ಕೇಸರಿ ಮತ್ತು ಕೆಂಪು ಬಣ್ಣಕ್ಕೆ ತಿರುಗುವ ಪರಿ ಮನ ಸೆಳೆಯುತ್ತದೆ. ಇದನ್ನು ನೋಡಲೆಂದೇ ಹಲವರು ಇಲ್ಲಿಗೆ ಬರುತ್ತಾರೆ. ಪ್ರಕೃತಿಗೆ ಪ್ರಕೃತಿಯೇ ಸಾಟಿ!

ದೈನಂದಿನ ಕೆಲಸದ ಒತ್ತಡವನ್ನು ಮರೆಸಿ ಬೇರೆಯೇ ಲೋಕಕ್ಕೆ ಸ್ವಾಗತ ಕೋರುವ ಈ ಚಾರಣ ಮನದಲ್ಲಿ ಮುದ ನೀಡುವ ಅನುಭವ ಕೊಡುತ್ತದೆ. ಚಾರಣ ಮಾಡುವವರು ಸರಿಯಾದ ಶೂಸ್, ಜಾಕೆಟ್‌ಗಳನ್ನು ಧರಿಸಿ ಹೋದರೆ ಒಳ್ಳೆಯದು.