ಕೀರ್ತನ ಶೆಟ್ಟಿ
ಅಂದು ನನಗೆ ಕಾಲೇಜಿನ ಮೊದಲ ದಿನವಾಗಿತ್ತು. ನಾನು ಅವನನ್ನು ಮೊದಲ ಬಾರಿ ನೋಡಿದ್ದು ಕಾಲೇಜಿನ ಕಾರಿಡಾರ್‌ನಲ್ಲಿ. ಕಾಲೇಜು ಹೊಸತಾಗಿದ್ದ ನನಗೆ ಎಲ್ಲರೂ ಅಪರಿಚಿತರಾಗಿದ್ದರು. ಆದರೆ ಅದ್ಯಾಕೋ ಗೊತ್ತಿಲ್ಲ ಇವನು ಮಾತ್ರ ಹೃದಯಕ್ಕೆ ಹತ್ತಿರವಾದವನು ಎಂಬ ಭಾವನೆ. ಅವನ ಬಗ್ಗೆೆ ಹೆಚ್ಚು ತಿಳಿಯಬೇಕು ಎನಿಸಿ ಹೊರಟಾಗ ಅವನು ನನ್ನ ಸೀನಿಯರ್ ಎಂದು
ಗೊತ್ತಾಯ್ತು.
ಇದಾದ ನಂತರ ನನಗೂ ಅವನಿಗೂ ಮುಖಾಮುಖಿಯಾಗುವ ಸಂದರ್ಭವೇ ಒದಗಿ ಬರಲಿಲ್ಲ. ಹೀಗೆ ಒಂದು ದಿನ ಕ್ಲಾಸಿನಲ್ಲಿ ನನ್ನ ಇರುವಿಕೆಯನ್ನು ಗಮನಿಸದೇ, ಕಾಲೇಜಿನ ಸಿಬ್ಬಂದಿ ಬಾಗಿಲು ಹಾಕಿ ಹೋಗಿದ್ದರು. ತುಂಬಾ ಹೊತ್ತು ಒಳಗಿದ್ದ ನಾನು ಹೊರ
ಹೋಗಬೇಕೆಂದು ಹೊರಟು ನಿಂತಾಗ ಹೊರಗಿನಿಂದ ಬೀಗ ಹಾಕಿರುವ ವಿಷಯ ತಿಳಿದುಬಂತು. ಎಷ್ಟೊತ್ತಾದರೂ ಯಾರ ಸುಳಿವೂ ಇರಲಿಲ್ಲ. ಏನು ಮಾಡುವುದು ಎಂದು ತಕ್ಷಣ ಹೊಳೆಯಲಿಲ್ಲ. ಕಿಟಿಕಿಯ ಬಳಿ ಸಾರಿ ಅತ್ತಿತ್ತ ನೋಡಿದೆ.
ಆಗ ವಿಧಿಲಿಖಿತ ಎಂಬಂತೆ ನನ್ನ ಕಣ್ಣಿಗೆ ಬಿದ್ದವನು ಅವನೇ. ಮೊದಲ ದಿನದ ಮೊದಲ ನೋಟದಲ್ಲೇ ಮನಗೆದ್ದವನು ಈಗ, ನಾನು ಒಳಗಿರುವುದನ್ನು ಗಮನಿಸಿದ. ಆತ ಸಿಬ್ಬಂದಿಯ ಬಳಿ ಹೋಗಿ, ವಿಷಯ ತಿಳಿಸಿ, ತರಗತಿಯ ಕೀ ತಂದು ನನಗೆ ಹೊರ ಬರಲು ಸಹಕರಿಸಿದ. ಆ ಕ್ಷಣ ಆತನಿಗೆ ಕೇವಲ ಸಾಂದರ್ಭಿಕವಾಗಿ ಇರಬಹುದು. ಕಷ್ಟದಲ್ಲಿರುವ ಒಬ್ಬರಿಗೆ ಸಹಾಯ ಮಾಡಿದ ರೀತಿ ಆತನಿಗೆ ಅನಿಸಿರಬಹುದು.
ಆದರೆ ನನಗೆ! ನನಗೆ ಮಾತ್ರ ಅದು ಎಂದೂ ಮರೆಯಲಾಗದಂತಹ ಕ್ಷಣ. ಮರುಭೂಮಿಯಲ್ಲಿ ದಣಿದು ನಿಂತವಳಿಗೆ ನೀರಿನ
ಒರತೆ ಸಿಕ್ಕಂತೆ ಅವನು ಪ್ರತ್ಯಕ್ಷನಾದ. ಹೊರಗಿನಿಂದ ಬೀಗ ಹಾಕಿದ ಕೊಠಡಿಯೊಳಗೆ ಸಿಕ್ಕಿಕೊಂಡಿದ್ದ ಆತ ಬಾಗಿಲಿನ ಬೀಗ ತೆಗೆದದ್ದು ಮಾತ್ರವಲ್ಲ, ಅವನಿಗೆ ಗೊತ್ತಿಲ್ಲದೇ ನನ್ನ ಹೃದಯದಲ್ಲಿ ಹುದುಗಿದ್ದ ಪ್ರೀತಿದ ಕದ ತೆರೆದ! ಆ ಒಂದು ಕ್ಷಣ ಹೃದಯದ ತಾಳತಪ್ಪಿದ ನನಗೆ, ನಂತರ ಕೇವಲ ಅವನದ್ದೇ ಜಪ.
ಆ ದಿನದಿಂದ ಅವನನ್ನು ತುಂಬಾ ಹೊತ್ತು ಮಾತನಾಡಿಸಬೇಕೆಂಬ ಹಂಬಲ ಮನದಲ್ಲಿ. ಆದರೆ ಧೈರ್ಯ ಏಕೋ ಸಾಲದೇ ಹೋಯಿತು. ಸಮುದ್ರ ಅಲೆಗಳ ತರಂಗದಂತಹ ಕಂಚಿನ ಸ್ವರದವನು. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕು ಎಂಬುವಂತಹ ಅವನ ಧ್ವನಿಗೆ ಕಾದಿದ್ದ ನನ್ನೀ ಕಿವಿಗಳು ಹೇಳಬೇಕೆಂದಿದ್ದ ಮಾತುಗಳು ತುಟಿಯಂಚಿನಲ್ಲಿ ಕುಳಿತು ಮೌನ ಗೀತೆಯಾಗಿತ್ತು. ಈ ಘಟನೆಯಾದ ನಂತರ ಅವನ ಮೇಲಿದ್ದ ಆ ಮಧುರ ಭಾವನೆ ಮತ್ತಷ್ಟು ಹೆಚ್ಚುತ್ತಾ ಹೋಯಿತು.
ಇನ್ನೆಷ್ಟು ದಿನ ಮನಸ್ಸಿನಲ್ಲಿಯೇ ಪ್ರೀತಿಸಲಿ ಎಂದು ಒಂದು ದಿನ ಗಟ್ಟಿ ನಿರ್ಧಾರ ಮಾಡಿದೆ. ನನ್ನ ಮನಸ್ಸಿನಲ್ಲಿದ್ದ ವನೆಗಳನ್ನು,
ಪ್ರೀತಿಯ ತರಂಗಗಳನ್ನು ಆತನಿಗೆ ತಿಳಿಸಿದರೆ ತಾನೆ, ಅವನೂ ನನ್ನನ್ನು ನೋಡಲು ಸಾಧ್ಯ? ಆಗ ತಾನೆ ನಾನು ಅವನ ಬಳಿ ಹೆಚ್ಚುಹೆಚ್ಚು ಮಾತನಾಡಲು ಸಾಧ್ಯ? ಇಷ್ಟೆಲ್ಲಾ ಯೋಚಿಸಿ, ಬಹಳಷ್ಟು ಧೈರ್ಯವನ್ನು ಒಗ್ಗೂಡಿಸಿಕೊಂಡು, ನನ್ನ ಪ್ರೀತಿಯ ವಿಷಯವನ್ನು ಅವನಿಗೆ ತಿಳಿಸಲು ಹೊರಟೇಬಿಟ್ಟೆ.
ಜಿಂಕೆಯಂತೆ ಹಾರುತ್ತಾ ಹೊರಟ ನನಗೆ ಬಾಣವೊಂದು ಬಂದು ಚುಚ್ಚುವಂತಹ ವಿಷಯ ತಿಳಿಯಿತು. ಅದೇನೆಂದರೆ ಈಗಾಗಲೇ ಅವನ ಹೃದಯದಲ್ಲಿ ಮತ್ತೊಬ್ಬರು ಹೆಜ್ಜೆ ಇಟ್ಟಿದ್ದಾರೆ ಎಂದು. ಕನಸಲ್ಲಿ ಹಕ್ಕಿಯಂತೆ ಹಾರುತ್ತಿದ್ದ ನನಗೆ ರೆಕ್ಕೆಯೇ ಮುರಿ ದಂತಾಯಿತು. ಆದರೆ ಏನು ಮಾಡುವುದು? ಎಂತಿದ್ದರೂ ನನಗೆ ಅವನೆಂದರೆ ಇಷ್ಟ; ಅವನ ಹೃದಯದಲ್ಲಿ ಇನ್ನೊಬ್ಬರು ಇರುವುದು ಅವನಿಗೆ ಇಷ್ಟ ಎನಿಸಿದರೆ, ಹಾಗೇ ಆಗಲಿ, ಅವನು ಎಲ್ಲಿದ್ದರೂ ಹೇಗಿದ್ದರೂ ಸುಖವಾಗಿರಲಿ.
ಹೀಗೇ ಸ್ವಲ್ಪದಿನಗಳ ಕಾಲ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದ ನನ್ನ ಮನಸ್ಸು ಕಾಲಕ್ರಮೇಣ ತಿಳಿಯಾಯಿತು.