Wednesday, 11th December 2024

ಮೌನ ಮುರಿದು ಮಾತನಾಡು

ಶಾಂತಾ ಲಮಾಣಿ

ಹೇಮನಸೇ, ಅದೇಕೆ ಇಷ್ಟು ಮುದಗೊಂಡಿರುವೆ. ಮನಸಿನ ಈ ತುಡಿತಕ್ಕೆ ನೀನೇ ಕಾರಣ!

ಅಂದು ಮುಸ್ಸಂಜೆಯಲಿ ನೀ ಆಡಿದ ಮಾತು, ನಗು, ಆ ನಿನ್ನ ನೋಟಗಳು ನನ್ನ ಎದೆಯಲ್ಲಿ ನಿರಂತರವಾಗಿ ಮಧುರ ಕಂಪನ ಮೂಡುಸುತ್ತಿವೆ. ನಿನ್ನ ತುಂಟತನದ ಮಾತುಗಳು ನನ್ನ ಕಿವಿಗಳಲ್ಲಿ ಸದಾ ಕಾಲ ಗುಂಯ್‌ಗುಟ್ಟುತ್ತಿವೆ.

ನಿನ್ನ ಮಾತುಗಳ ರಿಂಗಣವು ಮಧುರವಾದ ಕವನದಂತೆ ಕಿವಿಯಾಳದಲ್ಲಿ ಪ್ರತಿಧ್ವನಿಸುತ್ತಾ, ಅದೇನೋ ಸಂತಸದ ಭಾವವನ್ನು ಮೂಡಿಸುತ್ತಿವೆ. ನಿನ್ನ ಧ್ವನಿಯ ತರಂಗಗಳು ಕಿವಿಯನ್ನು ತುಂಬಿ, ಮನಸನ್ನು ಪ್ರವೇಶಿಸಿ, ಇಡೀ ದೇಹವೇ ಉಲ್ಲಾಸದಲಿ ತೇಲಿ
ಹೋಗುತ್ತಾ, ಬೀಸುವ ಗಾಳಿಯಲ್ಲಿ ಕರಗಿ ಹೋಗುವಂತೆ ಅನಿಸುತ್ತದೆ. ಆ ಭಾವವೇ ಅತಿ ಮಧುರ. ಆ ಅನುರಾಗವೇ ಅನುಪಮ.

ಅದೆಲ್ಲಾ ನಿಜ, ಮನದಲ್ಲಿ ಮೂಡಿದ ಈ ಪ್ರಶ್ನೆಗೆ ಉತ್ತರ ಹೇಳುವೆಯಾ? ಅಂದು ದಿನವಿಡೀ ಗಂಟೆಗಟ್ಟಲೆ ಮಾತನಾಡುತ್ತಿದ್ದ
ನಮಗೆ ಹಗಲು -ರಾತ್ರಿಗಳ ನೆನಪೇ ಬರುತ್ತಯಿರಲಿಲ್ಲ ಏಕೆ? ಒಮ್ಮೆ ಆರಂಭಗೊಂಡ ಮಾತುಗಳು ನಿರಂತರ ಹರಿಯುವ ಜುಳು ಜುಳು ತೊರೆಯಂತೆ ಮುಂದುವರಿಯುತ್ತಲೇ ಇತ್ತು ಹೊರತು, ಅದಕ್ಕೊಂದು ಮುಕ್ತಾಯ ಎಂದೇ ಇರುತ್ತಿರಲಿಲ್ಲವಲ್ಲ ಏಕೆ? ಮಾತನಾಡಲು ಆರಂಭಿಸಿದರೆ, ಅದೆಷ್ಟೋ ಚಿಕ್ಕ ದೊಡ್ಡ ವಿಷಯಗಳು ಮಾತಿನ ಮಧ್ಯೆ ಬರುತ್ತಿದ್ದವೇ ಹೊರತು, ವಿಷಯಗಳ ಕೊರತೆ ಇರುತ್ತಿರಲೇ ಇಲ್ಲವಲ್ಲ ಏಕೆ? ಮಾತು ಮಾತು ಮಾತು.. ಎರಡು ಗಂಟೆ ಮಾತನಾಡಿದರೂ ನಾಲಗೆಗೆ ಸುಸ್ತಾಗುತ್ತಿರಲಿಲ್ಲ, ಮನಸ್ಸಿಗೆ ಸಾಕು ಅನಿಸುತ್ತಿರಲಿಲ್ಲ ಏಕೆ? ಕ್ಷಿಂಟೆಗಟ್ಟಲೆ ಮಾತನಾಡಿದ ನಂತರವೂ, ಮನಸ್ಸು ಇನ್ನಷ್ಟು ಮಾತನಾಡಬೇಕೆಂದು ಬಯಸುತ್ತಿದ್ದುದಾರೂ ಏಕೆ? ಇಂತಹ ಪ್ರಶ್ನೆಗೆ ನನಗಂತೂ ಉತ್ತರ ಸಿಕ್ಕಿಲ್ಲ. ನಿನಗೆ ಸಿಕ್ಕಿತೆ? ಇನ್ನೂ ಏನಾದರೂ ಮಾತನಾಡು ಎಂದು ಚಿಕ್ಕ ಮಗುವಿನಂತೆ ನೀನು ಹಠಮಾಡುತ್ತಿರುವಾಗ, ನಿನ್ನನ್ನು ಸಮಾಧಾನ ಪಡಿಸಲು ಅದೆಷ್ಟೋ ಕವಿತೆಗಳನ್ನು ಹೇಳಿದೆ
ನಾ….. ಕವಿತೆಗಳು ಖಾಲಿಯಾದಾಗ, ನಾನೇ ಅದೆಷ್ಟು ಕವಿತೆಗಳನ್ನು ಬರೆದೆ!

ನಿನ್ನ ಮಾತುಗಳನ್ನು ಕೇಳುತ್ತಿರುವಾಗ, ನಾನೂ ಕವಿಯಾದೆ! ನನ್ನ ಮನದಲ್ಲಿ ಮೂಡಿದ ಕಾವ್ಯದ ಅನುಪಮ ಅನುಭವಗಳ
ಮಧುರ ಭಾವಕ್ಕೆ ಸಾಟಿ ಎಲ್ಲಿದೆ! ಅದೆಷ್ಟೋ ಬಾರಿ ಜಗಳ, ಕೋಪ,ಮುನಿಸು ಇದ್ದರು ಕೂಡಾ ನಾವಿಬ್ಬರು ಬೇರೆಯಾಗಿರುವ ದಿನಗಳೇ ಇಲ್ಲಾ..! ನಿನಗೆ ಕೋಪ ಬರಸಲೆಂದೇ ಅದೆಷ್ಟೋ ಸರತಿ ಪಿಡಿಸಿರುವೆ. ಆದರೆ ಗೆಳತಿ, ಈ ಬಾರಿ ಒಂದೇ ಒಂದು ಕೋಪದ ಚಿಕ್ಕ ಸಂದೇಶಕ್ಕೆ ನನ್ನ ನಂಬರ್ ಒಂದನ್ನು ಬ್ಲಾಕ್‌ಮಾಡಿ ಮುನಿಸುಕೊಂಡಿರುವೇ ಏಕೆ? ನೀ ಈಗ ನನ್ನೊಂದಿಗೆ ಮಾತನಾಡದೇ ಇದ್ದುದರಿಂದ, ನನಗೆ ಸಮಯ, ಊಟ, ನಿದ್ದೆ ಮತ್ತು ದಿನಗಳು ಕೂಡ ಶೂನ್ಯ ವಾಗಿದೆ.

ನಿನ್ನ ಈ ಮೌನಕ್ಕೆ ಕಾರಣವಾದರೇನು? ಈ ನಿನ್ನ ಮೌನ ನನ್ನನ್ನು ಹಗಲು – ರಾತ್ರಿ ಚಡಪಡಿಸುವಂತೆ ಮಾಡಿದೆ. ಮೌನವಾಗಿ ಹೀಗೆ ಕೊಲ್ಲದಿರುನನ್ನ. ನೀನಿಲ್ಲದೆ ಒಂಟಿಯಾಗಿರುವೇ ಮನವೇ….ನಾ ಕಾಯುತಿರುವೆ ಎಲ್ಲಾ ಮರೆತು ನಿನ್ನ ಕರೆಗೆ. ……